ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w97 4/15 ಪು. 23-26
  • ಯೆಹೋವನಿಗೆ ಘನತೆ ತರುವ ವಿವಾಹಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನಿಗೆ ಘನತೆ ತರುವ ವಿವಾಹಗಳು
  • ಕಾವಲಿನಬುರುಜು—1997
  • ಅನುರೂಪ ಮಾಹಿತಿ
  • ನಿಮ್ಮ ವಿವಾಹದಿನದ ಹರ್ಷ ಮತ್ತು ಘನತೆಯನ್ನು ಹೆಚ್ಚಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಯೆಹೋವನನ್ನು ಘನಪಡಿಸುವ ಸಂತೋಷದ ವಿವಾಹಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ನಿಮ್ಮ ಮದುವೆ ಯೆಹೋವನಿಗೆ ಗೌರವ ತರಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ನಿಮ್ಮ ನಂಬಿಕೆಯನ್ನು ನಿಮ್ಮ ಜೀವನರೀತಿಯ ಮೂಲಕ ರುಜುಪಡಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
ಇನ್ನಷ್ಟು
ಕಾವಲಿನಬುರುಜು—1997
w97 4/15 ಪು. 23-26

ಯೆಹೋವನಿಗೆ ಘನತೆ ತರುವ ವಿವಾಹಗಳು

ಕ್ರೈಸ್ತ ವಿವಾಹಗಳ ಕುರಿತಾದ ಈ ಕೆಳಗಿನ ಲೇಖನವು, ಮೂಲತಃ ಇಥಿಯೋಪಿಯದಲ್ಲಿ ತಯಾರಿಸಲ್ಪಟ್ಟಿತು—ಆ ದೇಶದಲ್ಲಿ ಇತ್ತೀಚೆಗೆ ಯೆಹೋವನ ಸಾಕ್ಷಿಗಳಾಗಿರುವ ಅನೇಕರಿಗೆ, ಆ್ಯಮ್‌ಹ್ಯಾರಿಕ್‌ ಭಾಷೆಯಲ್ಲಿ ಸಹಾಯಕರವಾದ ಮಾರ್ಗದರ್ಶನವನ್ನು ಒದಗಿಸಲಿಕ್ಕಾಗಿಯೇ. ಇದು ಕೆಲವು ಸ್ಥಳಿಕ ಪದ್ಧತಿಗಳು ಹಾಗೂ ರೂಢಿಗಳ ಕುರಿತಾಗಿದ್ದು, ನೀವು ಜೀವಿಸುತ್ತಿರುವ ಸ್ಥಳದಲ್ಲಿರುವ ಪದ್ಧತಿಗಳಿಗಿಂತ ಭಿನ್ನವಾಗಿರಬಹುದು. ಇಲ್ಲಿರುವ ವ್ಯತಿರಿಕ್ತತೆಯನ್ನು ನೀವು ತುಂಬ ಆಸಕ್ತಿಕರವಾದದ್ದಾಗಿ ಕಂಡುಕೊಳ್ಳಬಹುದು. ಅದೇ ಸಮಯದಲ್ಲಿ, ನಿಮ್ಮ ಸ್ಥಳದಲ್ಲಿನ ವಿವಾಹದ ಸಂಸ್ಕಾರಗಳು ಭಿನ್ನವಾಗಿರುವುದಾದರೂ, ಅನ್ವಯಯೋಗ್ಯವೆಂದು ನೀವು ನೋಡುವಂತಹ ಸಮತೂಕದ ಬೈಬಲ್‌ಸಂಬಂಧಿತ ಸಲಹೆಯನ್ನು ಈ ಲೇಖನವು ಒದಗಿಸುತ್ತದೆ.

ಜನವರಿ 1, 1985ರ ಕಾವಲಿನಬುರುಜು ಪತ್ರಿಕೆಯ, ಅತ್ಯುತ್ತಮವಾದ ಅಭ್ಯಾಸ ಲೇಖನವೊಂದರ ಮೇಲ್ಬರಹವು, “ಸಂತೋಷವನ್ನು ತರುವ ಕ್ರಿಸ್ತೀಯ ಮದುವೆಗಳು” ಎಂದಾಗಿತ್ತು. ಆ ಸಂಚಿಕೆಯಲ್ಲಿದ್ದ ಮುಂದಿನ ಲೇಖನದ ಶಿರೋನಾಮವು, “ಮದುವೆಯ ಔತಣಗಳಲ್ಲಿ ಸಮತೂಕದ ಆನಂದವನ್ನು ಕಂಡುಕೊಳ್ಳಿರಿ” ಎಂದಾಗಿತ್ತು. (ವಿವಾಹಕ್ಕಾಗಿ ಯೋಜಿಸುತ್ತಿರುವ ಯಾರಿಗೇ ಆಗಲಿ, ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಎಂಬ ಪುಸ್ತಕದ 2ನೆಯ ಅಧ್ಯಾಯದಲ್ಲಿ, ಮತ್ತು ನಿಮ್ಮ ಯೌವನ—ಅದರಿಂದ ಅತ್ಯುತ್ತಮವಾದುದನ್ನು ಪಡೆದುಕೊಳ್ಳುವುದು (ಇಂಗ್ಲಿಷ್‌) ಎಂಬ ಪುಸ್ತಕದ 19 ಹಾಗೂ 20ನೆಯ ಅಧ್ಯಾಯಗಳಲ್ಲಿ ವಿವೇಕಯುತವಾದ ಹೆಚ್ಚಿನ ಸಲಹೆಯು ಇದೆ.)a ಆ ಲೇಖನಗಳು ಬಂದಿರುವ ಸಮಯದಂದಿನಿಂದ, ಅನೇಕರು ಯೆಹೋವನ ಸಾಕ್ಷಿಗಳಾಗಿದ್ದಾರೆ; ಆದುದರಿಂದ ವಿಶೇಷವಾಗಿ ನಮ್ಮ ಕ್ಷೇತ್ರಕ್ಕೆ ಅನ್ವಯವಾಗುವ ಕೆಲವು ಅಂಶಗಳನ್ನು, ಹಾಗೂ ವಿವಾಹಗಳನ್ನು ವಿವಾಹದ ಮೂಲಕರ್ತನಾದ ಯೆಹೋವನಿಗೆ ಘನತೆ ತರುವ ಸಂದರ್ಭಗಳನ್ನಾಗಿ ಮಾಡಲು ನಮಗೆ ಸಹಾಯ ಮಾಡುವ ಇನ್ನಿತರ ಯುಕ್ತಾಯುಕ್ತ ಅಂಶಗಳನ್ನು, ನಾವು ಪುನರ್ವಿಮರ್ಶಿಸಲು ಬಯಸುತ್ತೇವೆ.

ಮೊದಲಾಗಿ ಪರಿಗಣಿಸಬಹುದಾದ ಒಂದು ಪ್ರಶ್ನೆಯೇನೆಂದರೆ, ಒಂದು ವಿವಾಹವು ಯಾವಾಗ ನಡೆಯಬೇಕು? ಅದರ ತಾರೀಖು, ಸ್ಥಳಿಕ ಸಾಂಪ್ರದಾಯಿಕ ವಿವಾಹ ಕಾಲದ ತಾರೀಖುಗಳಿಂದ ನಿಯಂತ್ರಿಸಲ್ಪಡಬೇಕೊ? ವರ್ಷದ ಇನ್ನಿತರ ಸಮಯದಲ್ಲಿ ನಡೆಯುವ ಯಾವುದೇ ವಿವಾಹವು ಯಶಸ್ವಿಕರವಾಗಿರಲಾರದೆಂಬುದು ಸ್ಥಳೀಯರ ನಂಬಿಕೆಯಾಗಿದೆ. ಇದು ಆಧಾರವಿಲ್ಲದ ಒಂದು ಮೂಢನಂಬಿಕೆಯಾಗಿದೆ. ಏಕೆಂದರೆ ಯೆಹೋವನನ್ನು ಸಂತೋಷದಿಂದಲೂ ಒಮ್ಮತದಿಂದಲೂ ಸೇವಿಸುತ್ತಿರುವ ಅನೇಕ ವಿವಾಹಿತ ದಂಪತಿಗಳು, ಸಾಂಪ್ರದಾಯಿಕ ಕಾಲದಲ್ಲೇನೂ ವಿವಾಹವಾಗಲಿಲ್ಲ. ನಾವು ಅದೃಷ್ಟ ಅಥವಾ ದುರದೃಷ್ಟಗಳಲ್ಲಿ ನಂಬುವುದಿಲ್ಲ. (ಯೆಶಾಯ 65:11; ಕೊಲೊಸ್ಸೆ 2:8) ನಾವು ಅವಿಶ್ವಾಸಿ ಸಂಬಂಧಿಕರ ಮೂಢನಂಬಿಕೆಗಳಿಗನುಸಾರ ವಿವಾಹದ ತಾರೀಖನ್ನು ನಿಗದಿಸುವಲ್ಲಿ, ಅವರು ಸತ್ಯ ಹಾಗೂ ಅಸತ್ಯತೆಗಳ ನಡುವಿನ ವ್ಯತ್ಯಾಸವನ್ನು ಅವಲೋಕಿಸುವಂತೆ ನಾವು ಅವರಿಗೆ ಸಹಾಯ ಮಾಡುವವರಾಗಿರುವುದಿಲ್ಲ. ನಿಜಾಂಶವೇನೆಂದರೆ, ಕ್ರೈಸ್ತರು ಯಾವುದೇ ತಿಂಗಳಿನಲ್ಲಿ ವಿವಾಹ ಮಾಡಿಕೊಳ್ಳಸಾಧ್ಯವಿದೆ.

ಪೌರ ನಿಯಮಾಚರಣೆಯ ಬಳಿಕ, ವಿವಾಹದ ಭಾಷಣವು ಏರ್ಪಡಿಸಲ್ಪಟ್ಟಾಗ, ಈ ಎರಡು ಘಟನೆಗಳ ಮಧ್ಯೆ ಅನೇಕ ದಿವಸಗಳ ಕಾಲಾಂತರವಿಲ್ಲದಿರುವುದು ವಿವೇಕಯುತವಾದದ್ದಾಗಿರುವುದು. ಆ ವಿವಾಹ ಜೋಡಿಯು ರಾಜ್ಯ ಸಭಾಗೃಹದಲ್ಲಿ ವಿವಾಹದ ಭಾಷಣವನ್ನು ನಡೆಸಲು ಇಷ್ಟಪಡುವಲ್ಲಿ, ಸಭಾಗೃಹವನ್ನು ಉಪಯೋಗಿಸುವ ಅನುಮತಿಗಾಗಿ ಅವರು ಮುಂದಾಗಿಯೇ ಸಭಾ ಹಿರಿಯರನ್ನು ಸಂಪರ್ಕಿಸಬೇಕು. ಆ ಸಮಾರಂಭಕ್ಕಾಗಿರುವ ಏರ್ಪಾಡುಗಳು, ತಮಗೆ ಒಳ್ಳೆಯ ಮನಸ್ಸಾಕ್ಷಿಯಿಂದಿರಲು ಸಾಧ್ಯಮಾಡುವುವು ಎಂಬುದನ್ನು ಸ್ಥಳಿಕ ಹಿರಿಯರು ದೃಢೀಕರಿಸುವರು. ಯಾವುದೇ ಸಭಾ ಚಟುವಟಿಕೆಯೊಂದಿಗೆ ಯಾವ ಸಂಘರ್ಷಣೆಯೂ ಉಂಟಾಗದಂತಹ ಸಮಯದಲ್ಲಿ ವಿವಾಹದ ಭಾಷಣವು ಏರ್ಪಡಿಸಲ್ಪಡಬೇಕು. ವಿವಾಹದ ಭಾಷಣವನ್ನು ಕೊಡಲಿಕ್ಕಾಗಿ ಆರಿಸಲ್ಪಟ್ಟಿರುವ ಸಹೋದರನು, ಸಹಾಯಕರವಾದ ಸಲಹೆಯನ್ನು ಕೊಡಲಿಕ್ಕಾಗಿ ಮತ್ತು ವಿವಾಹಕ್ಕೆ ಯಾವುದೇ ರೀತಿಯ ನೈತಿಕ ಅಥವಾ ಕಾನೂನುಬದ್ಧ ಅಡ್ಡಿತಡೆಗಳು ಇಲ್ಲ, ಹಾಗೂ ಅದರ ನಂತರ ನಡೆಯಲಿರುವ ಯಾವುದೇ ಸಾಮಾಜಿಕ ಒಟ್ಟುಗೂಡುವಿಕೆಗಾಗಿರುವ ಯೋಜನೆಗಳೊಂದಿಗೆ ತಾನು ಸಹಮತದಲ್ಲಿದ್ದೇನೆಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ, ಭಾವಿ ವಧೂವರರನ್ನು ಮುಂದಾಗಿಯೇ ಭೇಟಿಮಾಡುತ್ತಾನೆ. ವಿವಾಹದ ಭಾಷಣವು ಸುಮಾರು ಅರ್ಧ ತಾಸಿನಷ್ಟು ದೀರ್ಘವಾಗಿದ್ದು, ಆತ್ಮಿಕ ಅಂಶವನ್ನು ಒತ್ತಿಹೇಳುತ್ತಾ, ಗೌರವಾನಿತ್ವವಾದ ವಿಧದಲ್ಲಿ ಕೊಡಲ್ಪಡತಕ್ಕದ್ದು. ಭಾಷಣದ ನಂತರ ನಡೆಯಬಹುದಾದ ಯಾವುದೇ ರಿಸೆಪ್ಷನ್‌ಗಿಂತಲೂ, ವಿವಾಹದ ಭಾಷಣವು ಖಂಡಿತವಾಗಿಯೂ ಹೆಚ್ಚು ಪ್ರಮುಖವಾದ ವಿಷಯವಾಗಿದೆ.

ನಾವು “ಲೋಕದ ಭಾಗವಾಗಿಲ್ಲ” (NW) ಎಂಬುದನ್ನು ತೋರಿಸಲು, ಕ್ರೈಸ್ತ ವಿವಾಹವು ಒಂದು ಸದವಕಾಶವಾಗಿದೆ. (ಯೋಹಾನ 17:14; ಯಾಕೋಬ 1:27) ನಮ್ಮ ಸುವ್ಯವಸ್ಥಿತ ರೀತಿಯು ಎದ್ದುಕಾಣುವಂತಹದ್ದಾಗಿರಬೇಕು. ಜನರನ್ನು ಕಾಯುವಂತೆ ಮಾಡುವ ಬದಲಿಗೆ, ನಾವು ಸಮಯಕ್ಕೆ ಸರಿಯಾಗಿ ಉಪಸ್ಥಿತರಿರುವೆವು ಎಂಬುದನ್ನು ಇದು ಅರ್ಥೈಸುತ್ತದೆ. ಇಲ್ಲದಿದ್ದರೆ ಇದರಿಂದಾಗಿ ಸಭಾ ಚಟುವಟಿಕೆಗಳಿಗೆ ಅಡ್ಡಿಯುಂಟಾಗಬಹುದು. ಇದು ವಿಶೇಷವಾಗಿ ವಧುವು ಅರಿತಿರಬೇಕಾದ ವಿಷಯವಾಗಿದೆ. ಏಕೆಂದರೆ ಅವಳ ಪ್ರಮುಖತೆಯನ್ನು ಅತಿಶಯಿಸಲೋ ಎಂಬಂತೆ, ಅವಳ ಲೌಕಿಕ ಸಂಬಂಧಿಕರು ಅವಳನ್ನು ತಡವಾಗಿ ಬರುವಂತೆ ಪ್ರಚೋದಿಸಬಹುದು. ಕಾಲನಿಷ್ಠೆಯುಳ್ಳವಳಾಗಿರುವ ಮೂಲಕ ಒಬ್ಬ ಪ್ರೌಢ ಕ್ರೈಸ್ತ ಸಹೋದರಿಯು, ದೈನ್ಯಭಾವ ಹಾಗೂ ಪರಿಗಣನೆಗಳಂತಹ ಆತ್ಮಿಕ ಗುಣಗಳು ತನಗೆ ಪ್ರಾಮುಖ್ಯವಾದವುಗಳಾಗಿವೆ ಎಂಬುದನ್ನು ತೋರಿಸಬಲ್ಲಳು! ಅಲ್ಲದೆ ಆ ಸಂದರ್ಭವನ್ನು ರೆಕಾರ್ಡ್‌ ಮಾಡಲಿಕ್ಕಾಗಿ ಒಬ್ಬ ಫೊಟೊಗ್ರಾಫರನು ಆಮಂತ್ರಿಸಲ್ಪಡುವಾಗ, ಸುವ್ಯವಸ್ಥೆಯು ಪ್ರಮುಖವಾಗಿದೆ. ಒಬ್ಬ ಫೊಟೊಗ್ರಾಫರನು, ಜ್ಯಾಕೆಟ್‌, ಕೋಟ್‌, ಟೈ, ಹಾಗೂ ಸಭ್ಯ ಉಡುಪಿನಲ್ಲಿ ಬರುವಂತೆ ಹಾಗೂ ಅವನು ಛಾಯಾಚಿತ್ರಗಳನ್ನು ತೆಗೆಯುವಾಗ, ಭಾಷಣಕ್ಕೆ ಅಡ್ಡಬರದಿರುವಂತೆ ಅಗತ್ಯಪಡಿಸುವುದಾದರೆ ಒಳ್ಳೇದು. ಪ್ರಾರ್ಥನೆಯ ಸಮಯದಲ್ಲಿ ಛಾಯಾಚಿತ್ರಗಳನ್ನು ತೆಗೆಯಬಾರದು. ನಮ್ಮ ಸುವ್ಯವಸ್ಥಿತ ರೀತಿಯು, ಯೆಹೋವನಿಗೆ ಘನತೆ ತರುವುದು ಹಾಗೂ ಒಂದು ಒಳ್ಳೆಯ ಸಾಕ್ಷಿಯನ್ನು ಕೊಡುವುದು. ಆ ಘಟನೆಯ ನೈಜ ಅರ್ಥವನ್ನು ಕಳೆಗುಂದಿಸಬಹುದಾದ ಸಾಮಾಜಿಕ ಬಾಹ್ಯಾಡಂಬರಗಳಿಗೆ ಅನುಸಾರವಾಗಿ ಕಾರ್ಯನಡಿಸಲು ಪ್ರಯತ್ನಿಸುವ ಅಗತ್ಯವಿಲ್ಲ.

ಸಫಲದಾಯಕವಾದ ಒಂದು ವಿವಾಹಕ್ಕೆ, ರಿಸೆಪ್ಷನ್‌ ಒಂದು ಆವಶ್ಯಕತೆಯಾಗಿಲ್ಲದಿರುವುದಾದರೂ, ಅಂತಹ ಸಂತೋಷಭರಿತ ಸಂದರ್ಭಕ್ಕೆ ಯಾವುದೇ ಶಾಸ್ತ್ರೀಯ ಆಕ್ಷೇಪವಿರುವುದಿಲ್ಲ. ಹಾಗಿದ್ದರೂ, ಸತ್ಕ್ರೈಸ್ತರಿಗೆ ಅಂತಹ ಒಂದು ಒಟ್ಟುಗೂಡುವಿಕೆಯು, ದುಂದುವೆಚ್ಚ, ವಿಪರೀತ ಕುಡಿತ, ಮಿತಿಮೀರಿದ ತಿನ್ನುವಿಕೆ, ಉನ್ಮತ್ತ ಸಂಗೀತ, ಅಶ್ಲೀಲ ಸೂಚನೆಯುಳ್ಳ ನರ್ತನ, ಮತ್ತು ಕಾದಾಟಗಳಿಂದಲೂ ಗುರುತಿಸಲ್ಪಟ್ಟ ಲೌಕಿಕ ರಿಸೆಪ್ಷನ್‌ಗಳಿಗಿಂತ ಭಿನ್ನವಾಗಿರಬೇಕು. ಬೈಬಲು “ಸುಖವಿಲಾಸಗಳನ್ನು” (NW), ಶರೀರಭಾವದ ಕರ್ಮಗಳೊಂದಿಗೆ ವರ್ಗೀಕರಿಸುತ್ತದೆ. (ಗಲಾತ್ಯ 5:21) ಅದು ತುಂಬ ದೊಡ್ಡದಾದ ಒಂದು ಒಟ್ಟುಗೂಡುವಿಕೆಯಾಗಿಲ್ಲದೆ ಇರುವಾಗ, ಅದನ್ನು ಸರಿಯಾಗಿ ನಿಯಂತ್ರಿಸುವುದು ಹೆಚ್ಚು ಸುಲಭ. ಜನಪ್ರಿಯ ಸಂಪ್ರದಾಯಗಳನ್ನು ತೃಪ್ತಿಪಡಿಸಲಿಕ್ಕಾಗಿ ಒಂದು ಶಾಮಿಯಾನವನ್ನು ಹಾಕುವ ಅಗತ್ಯವಿಲ್ಲ. ಸ್ಥಳಾವಕಾಶಕ್ಕಾಗಿ ಅಥವಾ ವಾತಾವರಣದ ಕಾರಣಗಳಿಗಾಗಿ ಒಂದು ಶಾಮಿಯಾನವನ್ನು ಉಪಯೋಗಿಸಲು ಯಾರಾದರೂ ನಿರ್ಧರಿಸುವಲ್ಲಿ, ಅದು ಒಂದು ವೈಯಕ್ತಿಕ ವಿಷಯವಾಗಿದೆ.

ಅತಿಥಿಗಳ ಸಂಖ್ಯೆಯನ್ನು ಪರಿಮಿತಗೊಳಿಸಲಿಕ್ಕಾಗಿರುವ ಪರಿಣಾಮಕಾರಿಯಾದ ವಿಧವು, ನಿರ್ದಿಷ್ಟ ಆಮಂತ್ರಣಗಳನ್ನು ಬರಹದಲ್ಲಿ ಉಪಯೋಗಿಸುವುದೇ ಆಗಿದೆಯೆಂದು ಅನುಭವವು ತೋರಿಸಿಕೊಟ್ಟಿದೆ. ಇಡೀ ಸಭೆಗಳಿಗೆ ಬದಲಾಗಿ ಕೆಲವು ವ್ಯಕ್ತಿಗಳನ್ನು ಆಮಂತ್ರಿಸುವುದು ಹೆಚ್ಚು ವಿವೇಕಯುತವಾದದ್ದಾಗಿದೆ. ಮತ್ತು ಸುವ್ಯವಸ್ಥಿತ ಕ್ರೈಸ್ತರೋಪಾದಿ ನಾವು ಅಂತಹ ಪರಿಮಿತಿಗಳನ್ನು ಗೌರವಿಸಬೇಕು. ಲಿಖಿತ ಆಮಂತ್ರಣಗಳು ನಮಗೆ, ರಿಸೆಪ್ಷನಿನಲ್ಲಿ ಬಹಿಷ್ಕೃತ ವ್ಯಕ್ತಿಯೊಬ್ಬನು ಕಾಣಿಸಿಕೊಳ್ಳುವಾಗ ಆಗುವ ಪೇಚಾಟವನ್ನು ತಪ್ಪಿಸಲು ಸಹ ಸಹಾಯ ಮಾಡುತ್ತವೆ. ಏಕೆಂದರೆ ಬಹಿಷ್ಕೃತ ವ್ಯಕ್ತಿಯು ಬರುವಲ್ಲಿ, ಅನೇಕ ಸಹೋದರಸಹೋದರಿಯರು ಅಲ್ಲಿಂದ ಹೊರಡುವ ಮನಸ್ಸುಮಾಡಬಹುದು. (1 ಕೊರಿಂಥ 5:9-11) ವಿವಾಹ ಜೋಡಿಯೊಂದು, ಅವಿಶ್ವಾಸಿ ಸಂಬಂಧಿಕರನ್ನು ಅಥವಾ ಪರಿಚಯಸ್ಥರನ್ನು ಆಮಂತ್ರಿಸುವಲ್ಲಿ, ನಿಸ್ಸಂದೇಹವಾಗಿ ಅವರು ಮಿತ ಸಂಖ್ಯೆಯಲ್ಲಿರುವರು. ಮತ್ತು “ಕ್ರಿಸ್ತನಂಬಿಕೆಯುಳ್ಳವರಿಗೆ” ಹೆಚ್ಚು ಆದ್ಯತೆ ನೀಡಲ್ಪಡುವುದು. (ಗಲಾತ್ಯ 6:10) ಕೆಲವರು ಲೌಕಿಕ ಪರಿಚಯಸ್ಥರನ್ನು ಅಥವಾ ಅವಿಶ್ವಾಸಿ ಸಂಬಂಧಿಕರನ್ನು ರಿಸೆಪ್ಷನಿಗೆ ಬದಲಾಗಿ ವಿವಾಹದ ಭಾಷಣಕ್ಕೆ ಆಮಂತ್ರಿಸುವ ಆಯ್ಕೆ ಮಾಡಿದ್ದಾರೆ. ಏಕೆ? ಏಕೆಂದರೆ, ವಿವಾಹದ ರಿಸೆಪ್ಷನಿನಲ್ಲಿ ಲೌಕಿಕ ಸಂಬಂಧಿಕರು ಎಂತಹ ಒಂದು ಪೇಚಾಟದ ಸನ್ನಿವೇಶವನ್ನು ಉಂಟುಮಾಡಿದ್ದಾರೆಂದರೆ, ಅನೇಕ ಸಹೋದರಸಹೋದರಿಯರಿಗೆ ತಾವು ಅಲ್ಲಿ ಉಳಿಯಸಾಧ್ಯವಿಲ್ಲ ಎಂಬ ಅನಿಸಿಕೆಯಾಗಿರುವ ಕೆಲವು ವಿದ್ಯಮಾನಗಳಿವೆ. ಕೆಲವು ವಿವಾಹ ಜೋಡಿಗಳು, ಕೇವಲ ಆಪ್ತ ಕುಟುಂಬ ಸದಸ್ಯರೊಂದಿಗೆ ಮತ್ತು ಕ್ರೈಸ್ತ ಮಿತ್ರರೊಂದಿಗೆ ಒಂದು ಚಿಕ್ಕ ಊಟವನ್ನು ಸವಿಯುವ ಏರ್ಪಾಡನ್ನು ಮಾಡಿದ್ದಾರೆ.

ಯೋಹಾನ 2:8, 9ಕ್ಕೆ ಹೊಂದಿಕೆಯಲ್ಲಿ, “ಔತಣದ ಪಾರುಪತ್ಯಗಾರ”ನನ್ನು ಆರಿಸಿಕೊಳ್ಳುವುದು ಪ್ರಾಯೋಗಿಕವಾದದ್ದಾಗಿದೆ. ವರನು, ವಿವಾಹದ ಸುವ್ಯವಸ್ಥಿತತೆ ಹಾಗೂ ಉಚ್ಚ ಮಟ್ಟಗಳನ್ನು ಕಾಪಾಡುವಂತಹ ರೀತಿಯಲ್ಲಿ ಮೇಲ್ವಿಚಾರಣೆಮಾಡುವ ಒಬ್ಬ ಭರವಸಯೋಗ್ಯ ಕ್ರೈಸ್ತನನ್ನು ಆರಿಸಿಕೊಳ್ಳಲು ಬಯಸುವನು. ಅತಿಥಿಗಳು ಉಡುಗೊರೆಗಳನ್ನು ತರುವಾಗ, ಅದು “ಆಡಂಬರದ ಪ್ರದರ್ಶನ”ವಿಲ್ಲದೆ (NW) ಮಾಡಲ್ಪಡಬೇಕು. (1 ಯೋಹಾನ 2:16) ಸಂಶಯಾಸ್ಪದವಾದ ಭಾವಗೀತೆಗಳು, ವಿಪರೀತ ಗದ್ದಲ, ಅಥವಾ ಉನ್ಮತ್ತ ತಾಳಗತಿಯಿಂದ ಕಳಂಕಿತವಾಗಿರದ ಸಂಗೀತವು ಸಂತೋಷದಾಯಕವಾಗಿರಬಲ್ಲದು. ನುಡಿಸಲ್ಪಡಲಿರುವ ಸಂಗೀತವನ್ನು, ಮುಂದಾಗಿಯೇ ಒಬ್ಬ ಹಿರಿಯನು ಆಲಿಸುವುದನ್ನು ಅನೇಕರು ಅತ್ಯುತ್ತಮವಾದ ವಿಧಾನವಾಗಿ ಕಂಡುಕೊಂಡಿದ್ದಾರೆ. ಬಹಳಷ್ಟು ಸಾಂಪ್ರದಾಯಿಕ ನರ್ತನಗಳು, ಗರ್ಭಮೂಡಿಸುವಿಕೆಯ ನರ್ತನದಿಂದ ಬಂದವುಗಳಾಗಿದ್ದು, ಅನುಪಯುಕ್ತ ವಿಷಯಲಂಪಟತ್ವವನ್ನು ಅರ್ಥೈಸುವುದರಿಂದ, ನರ್ತನವು ಪಾಶಗಳನ್ನು ತರಬಹುದು. “ಕೇಕ್‌ ಮತ್ತು ಷ್ಯಾಂಪೇನು ಸಮಯ”ವು, ಕೆಲವೊಮ್ಮೆ ಲೌಕಿಕ ಜನರಿಗೆ ಅನಿರ್ಬಂಧಿತ ರೀತಿಯಲ್ಲಿ ವರ್ತಿಸಲು ಒಂದು ಸೂಚನೆಯಾಗಿದೆ. ವಾಸ್ತವದಲ್ಲಿ, ಅನೇಕ ಕ್ರೈಸ್ತ ವಿವಾಹ ಜೋಡಿಗಳು, ಸಮಸ್ಯೆಗಳನ್ನು ದೂರಮಾಡುತ್ತಾ, ವಿವಾಹದ ರಿಸೆಪ್ಷನಿನಲ್ಲಿ ಯಾವುದೇ ಮದ್ಯಸಾರವನ್ನು ನೀಡಬಾರದೆಂದು ನಿರ್ಧರಿಸಿದ್ದಾರೆ.

ನಾವು ಯೆಹೋವನಿಗೆ ಘನತೆ ತರಲು ಬಯಸುವುದರಿಂದ, ಸ್ವತಃ ನಮ್ಮ ಕಡೆಗೆ ವಿಪರೀತ ಗಮನವನ್ನು ಆಕರ್ಷಿಸುವ ಆಡಂಬರದ ಪ್ರದರ್ಶನವನ್ನು ನಾವು ತೊರೆಯುವೆವು. ವಿಪರೀತ ದುಂದುವೆಚ್ಚಮಾಡುವ ಜನಪ್ರಿಯ ಪ್ರವೃತ್ತಿಯ ವಿರುದ್ಧವಾಗಿ ಐಹಿಕ ಪ್ರಕಾಶನಗಳು ಸಹ ಪ್ರಸ್ತಾಪಮಾಡಿವೆ. ಆಡಂಬರದ ವಿವಾಹದ ಕಾರಣದಿಂದ ಸಾಲದಲ್ಲಿ ಬಿದ್ದು, ತದನಂತರ ಆ ಒಂದು ದಿನದ ವೆಚ್ಚಗಳನ್ನು ಪಾವತಿಮಾಡಲಿಕ್ಕಾಗಿ ಅನೇಕ ವರ್ಷಗಳ ವರೆಗೆ ಅಭಾವಗಳನ್ನು ಅನುಭವಿಸುವುದು, ಒಂದು ವಿವಾಹ ಜೋಡಿಗೆ ಎಷ್ಟು ಅವಿವೇಕವಾದದ್ದಾಗಿದೆ! ನಿಶ್ಚಯವಾಗಿಯೂ, ಆ ಸಂದರ್ಭದಲ್ಲಿ ಧರಿಸಲ್ಪಡುವ ಯಾವುದೇ ಉಡುಪು, ಮರ್ಯಾದೆಗೆ ತಕ್ಕದ್ದೂ, ಸುಯೋಜಿತವೂ, ದೇವರಿಗೆ ಪೂಜ್ಯಭಾವನೆಯನ್ನು ತೋರಿಸುವವನೆಂದು ಹೇಳಿಕೊಳ್ಳುವ ಒಬ್ಬ ವ್ಯಕ್ತಿಗೆ ಯೋಗ್ಯವಾಗಿ ಹೊಂದತಕ್ಕದ್ದೂ ಆಗಿರಬೇಕು. (1 ತಿಮೊಥೆಯ 2:9, 10) “ಕ್ರೈಸ್ತ ವಿವಾಹಗಳು ಯುಕ್ತಾಯುಕ್ತ ಪರಿಜ್ಞಾನವನ್ನು ಪ್ರತಿಫಲಿಸಬೇಕು” (ಜನವರಿ 15, 1969ರ ದ ವಾಚ್‌ಟವರ್‌) ಎಂಬ ಲೇಖನವು, ಉಡುಗೆತೊಡುಗೆಯ ವಿಷಯದಲ್ಲಿ ಈ ಆಸಕ್ತಿಕರವಾದ ಹೇಳಿಕೆಗಳನ್ನು ಮಾಡಿತು:

“ಒಬ್ಬನ ವಿವಾಹವು ಒಂದು ವಿಶೇಷ ಸಂದರ್ಭವಾಗಿದೆ. ಆದುದರಿಂದ ಸರ್ವಸಾಮಾನ್ಯವಾಗಿ ಹರ್ಷಭರಿತರಾಗಿಯೂ ಆಕರ್ಷಕವಾಗಿಯೂ ಕಾಣುವುದಕ್ಕೆ ಗಮನವು ಕೊಡಲ್ಪಡುತ್ತದೆ. ಆದರೂ ಒಬ್ಬರು ನಿರ್ದಿಷ್ಟ ರೀತಿಯ ಗೌನನ್ನು ಅಥವಾ ಸೂಟನ್ನೇ ಧರಿಸಬೇಕು ಎಂಬುದನ್ನು ಇದು ಅರ್ಥೈಸುವುದಿಲ್ಲ. ಒಬ್ಬನು ಸ್ಥಳಿಕ ಶೈಲಿಗಳನ್ನು, ವೆಚ್ಚವನ್ನು ಹಾಗೂ ವೈಯಕ್ತಿಕ ಅಭಿರುಚಿಯನ್ನು ಪರಿಗಣಿಸುವುದು ಒಳ್ಳೇದು. . . . ಆದರೂ, ತಮಗೆ ಅಥವಾ ಇತರರಿಗೆ ಹಣಕಾಸಿನ ಹೊರೆಯನ್ನು ಉಂಟುಮಾಡುವಂತಹ ದುಬಾರಿ ವೆಚ್ಚದ ಪೋಷಾಕನ್ನು ಕೊಂಡುಕೊಳ್ಳುವುದು ಸಮಂಜಸವಾದದ್ದಾಗಿರುವುದೊ? . . . ಕೆಲವು ವಧುಗಳು, ಒಬ್ಬ ಆತ್ಮೀಯ ಸ್ನೇಹಿತೆಯ ಅಥವಾ ಸಂಬಂಧಿಕಳ ಗೌನನ್ನು ಉಪಯೋಗಿಸಿ ಆನಂದಿಸಿದ್ದಾರೆ. ಇನ್ನಿತರರು ತಮ್ಮ ಸ್ವಂತ ವಧುವಿನ ಉಡುಪನ್ನು ಹೊಲಿದುಕೊಳ್ಳುವುದರಿಂದ ಬಹಳ ಸಂತೃಪ್ತಿಯನ್ನು ಪಡೆದುಕೊಂಡಿದ್ದಾರೆ; ಈ ರೀತಿಯಲ್ಲಿ ಭವಿಷ್ಯತ್ತಿನಲ್ಲಿ ಇನ್ನಿತರ ಸಂದರ್ಭಗಳಲ್ಲಿ ಉಪಯೋಗಿಸಸಾಧ್ಯವಾಗುವಂತೆ ಒಂದು ಉಡುಪನ್ನು ಹೊಂದಿರಲು ಶಕ್ತರಾಗಬಹುದು. ಮತ್ತು ವಿವಾಹವಾಗುವ ಜೋಡಿಯು ತಮ್ಮ ಅತ್ಯಂತ ಆಕರ್ಷಣೀಯ ವಸ್ತ್ರಗಳಲ್ಲಿ ವಿವಾಹವಾಗುವುದು ಅವರಿಗೆ ಸಂಪೂರ್ಣವಾಗಿ ಸೂಕ್ತವಾದದ್ದಾಗಿದೆ . . . ವೈಭವಯುಕ್ತ ವಿವಾಹವನ್ನು ನಡೆಸಲು ಶಕ್ತರಾಗಿರಬಹುದಾದ ಇನ್ನಿತರರು, ಸಮಯಗಳ ಸಂದಿಗ್ಧತೆಯ ಕಾರಣದಿಂದ ‘ಸರಳ ವಿವಾಹ’ವನ್ನು ಮಾಡಿಕೊಳ್ಳಲು ವೈಯಕ್ತಿಕವಾಗಿ ಬಯಸಬಹುದು.”

ತದ್ರೀತಿಯಲ್ಲಿ, ವಿವಾಹದಲ್ಲಿ ಭಾಗವಹಿಸುವವರ (ವರನ ಮಿತ್ರರು ಹಾಗೂ ವಧುವಿನ ಜೊತೆಗಾರ್ತಿಯರು) ಗುಂಪು ದೊಡ್ಡದಾಗಿರುವ ಅಗತ್ಯವಿಲ್ಲ. ಅವರು ಸಹ ತಮ್ಮ ಉಡುಪು ಹಾಗೂ ಕ್ರಿಯೆಗಳ ಮೂಲಕ ತಮ್ಮ ಕಡೆಗೆ ಅನುಚಿತ ಗಮನವನ್ನು ಸೆಳೆಯಲು ಬಯಸಲಾರರು. ರಾಜ್ಯ ಸಭಾಗೃಹದಲ್ಲಿನ ಭಾಷಣಕ್ಕೆ ಬರಲು ಒಬ್ಬ ಬಹಿಷ್ಕೃತ ವ್ಯಕ್ತಿಯನ್ನು ಅನುಮತಿಸಸಾಧ್ಯವಿರುವಾಗ, ಜನವರಿ 1, 1985ರ ಕಾವಲಿನಬುರುಜು ಪತ್ರಿಕೆಯು ಹೇಳಿದ್ದು: “ಮದುವೆಯ ಪಾರ್ಟಿಯಲ್ಲಿ ಬಹಿಷ್ಕೃತರು ಇರುವದು ಅಥವಾ ಬೈಬಲಿನ ತತ್ವಗಳಿಗೆ ತೀರಾ ವಿರುದ್ಧವಾದ ಕಳಂಕ ತರುವ ನಡವಳಿಕೆಯ ಜನರಿರುವದು ಅಯುಕ್ತವಾಗಿದೆ.”

ಯೇಸು ಕ್ರಿಸ್ತನು ಒಂದು ವಿವಾಹಕ್ಕೆ ಹಾಜರಾದನಾದರೂ, ವಿಪರೀತ ಗದ್ದಲಮಾಡುತ್ತಾ ಪಟ್ಟಣದ ಆದ್ಯಂತವಾಗಿ ಪರಿಚಲಿಸುವ ಕಾರುಗಳ ಮೆರವಣಿಗೆಯಿರುವ ಜನಪ್ರಿಯ ಪದ್ಧತಿಗೆ ಅವನು ಮನ್ನಣೆ ನೀಡಬಹುದೆಂಬುದನ್ನು ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. (ಮತ್ತಾಯ 22:21ನ್ನು ನೋಡಿರಿ.) ಸಾರಾಂಶವಾಗಿ ಹೇಳುವುದಾದರೆ, ರಾಷ್ಟ್ರಗಳ ಜನರ ಆಡಂಬರದ ಪ್ರದರ್ಶನ ಅಥವಾ ಪ್ರಾತಿನಿಧಿಕ ಕೃತ್ಯಗಳನ್ನು ನಕಲುಮಾಡುವುದಕ್ಕೆ ಬದಲಾಗಿ, ಸಭ್ಯರಿಗಿರುವ ವಿವೇಕವನ್ನು ಕ್ರೈಸ್ತರು ಪ್ರದರ್ಶಿಸತಕ್ಕದ್ದು.—ಜ್ಞಾನೋಕ್ತಿ 11:2.

ಆದರೆ ನೆರೆಯವರ, ಲೌಕಿಕ ಸಹಕರ್ಮಿಗಳ, ಅಥವಾ ದೂರದ ಸಂಬಂಧಿಕರ ಹಾಗೂ ಪರಿಚಯಸ್ಥರ ವಿವಾಹಗಳಿಗೆ ಹಾಜರಾಗುವುದರ ಕುರಿತಾಗಿ ಏನು? ಪ್ರತಿಯೊಬ್ಬ ಕ್ರೈಸ್ತನು ವೈಯಕ್ತಿಕವಾಗಿ ಈ ವಿಷಯದಲ್ಲಿ ನಿರ್ಣಯವನ್ನು ಮಾಡಬೇಕು. ನಮ್ಮ ಶುಶ್ರೂಷೆ, ವೈಯಕ್ತಿಕ ಅಭ್ಯಾಸ, ಹಾಗೂ ಇನ್ನಿತರ ಕೌಟುಂಬಿಕ ಹಾಗೂ ಸಭಾ ಕೆಲಸಗಳಿಗಾಗಿ ನಮಗೆ ಸಮಯವು ಬೇಕಾಗಿರುವುದರಿಂದ, ನಮ್ಮ ಸಮಯವು ಬಹುಮೂಲ್ಯವಾದದ್ದಾಗಿದೆ ಎಂಬುದನ್ನು ಮನಸ್ಸಿನಲ್ಲಿಡುವುದು ಒಳ್ಳೇದು. (ಎಫೆಸ 5:15, 16) ವಾರಾಂತ್ಯಗಳಲ್ಲಿ, ನಮಗೆ ಕೂಟಗಳು ಹಾಗೂ ಕ್ಷೇತ್ರ ಸೇವೆಯಿದೆ; ನಾವು ಅದನ್ನು ತಪ್ಪಿಸಬಯಸುವುದಿಲ್ಲ. (ಇಬ್ರಿಯ 10:24, 25) ಅನೇಕ ವಿವಾಹಗಳ ಸಮಯಾವಧಿಯು, ಸಮ್ಮೇಳನಗಳು ಅಥವಾ ಕರ್ತನ ಸಂಧ್ಯಾ ಭೋಜನದೊಂದಿಗೆ ಸಂಬಂಧಿಸಿದ ವಿಶೇಷ ಸೇವಾ ಪ್ರಯತ್ನಗಳೊಂದಿಗೆ ಸಂಘರ್ಷಿಸುತ್ತದೆ. ಲೋಕದಾದ್ಯಂತವಿರುವ ನಮ್ಮ ಸಹೋದರರು ಕರ್ತನ ಸಂಧ್ಯಾ ಭೋಜನಕ್ಕೆ ಹಾಜರಾಗಲಿಕ್ಕಾಗಿ ಮಾಡುತ್ತಿರುವ ವಿಶೇಷ ಪ್ರಯತ್ನಗಳಿಂದ ಅಪಕರ್ಷಿತರಾಗುವಂತೆ ನಾವು ನಮ್ಮನ್ನು ಬಿಟ್ಟುಕೊಡಬಾರದು. ಸತ್ಯದ ಜ್ಞಾನಕ್ಕೆ ಬರುವ ಮೊದಲು, ನಾವು ಲೌಕಿಕ ಜನರೊಂದಿಗೆ, ಬಹುಶಃ ದೇವರ ಘನತೆಯನ್ನು ತಗ್ಗಿಸಿದಂತಹ ಸನ್ನಿವೇಶಗಳಲ್ಲಿ ಹೆಚ್ಚಿನ ಸಮಯವನ್ನು ಕಳೆದೆವು. (1 ಪೇತ್ರ 4:3, 4) ಈಗ ನಮ್ಮ ಆದ್ಯತೆಗಳು ಭಿನ್ನವಾಗಿವೆ. ಒಂದು ಗ್ರೀಟಿಂಗ್‌ ಕಾರ್ಡನ್ನು ಕಳುಹಿಸುವ ಮೂಲಕ ಅಥವಾ ಇನ್ನೊಂದು ದಿನದಂದು ಸಂಕ್ಷಿಪ್ತ ಭೇಟಿಯನ್ನು ಮಾಡುವ ಮೂಲಕ, ಒಬ್ಬ ಲೌಕಿಕ ವಿವಾಹ ಜೋಡಿಗೆ ಯಾವಾಗಲೂ ಶುಭಹಾರೈಸಸಾಧ್ಯವಿದೆ. ಕೆಲವರು ಅಂತಹ ಸಂದರ್ಭಗಳನ್ನು ಸಾಕ್ಷಿನೀಡಲಿಕ್ಕಾಗಿ ಉಪಯೋಗಿಸಿದ್ದಾರೆ; ನವದಂಪತಿಗಳಿಗೆ ಸರಿಹೊಂದುವ ಕೆಲವು ಶಾಸ್ತ್ರವಚನಗಳನ್ನು ಹಂಚಿಕೊಂಡಿದ್ದಾರೆ.

ಲೌಕಿಕ ರೀತಿನೀತಿಗಳಿಗಿಂತಲೂ, ಆತ್ಮಿಕ ಅಂಶಗಳೇ ಪ್ರಮುಖವಾಗಿರುವ ಒಂದು ವಿವಾಹವು, ನಿಜವಾಗಿಯೂ ಯೆಹೋವನಿಗೆ ಘನತೆ ತರುವುದು. ತಾವು ಲೋಕದಿಂದಲೂ ಅದರ ಮೂಢನಂಬಿಕೆಗಳು ಹಾಗೂ ವೈಪರೀತ್ಯಗಳಿಂದಲೂ ಪ್ರತ್ಯೇಕರಾಗಿದ್ದೇವೆಂಬುದನ್ನು ಖಚಿತಪಡಿಸಿಕೊಳ್ಳುವ ಮೂಲಕ, ಅದು ಕ್ರಮವಾದ ದೇವಪ್ರಭುತ್ವ ಚಟುವಟಿಕೆಗಳಿಗೆ ಅಡ್ಡಬರುವಂತೆ ಅನುಮತಿಸದಿರುವ ಮೂಲಕ, ಹಾಗೂ ಆಡಂಬರದ ಪ್ರದರ್ಶನಕ್ಕೆ ಬದಲಾಗಿ ಆಡಂಬರಮಿತಿಯನ್ನು ತೋರಿಸುವ ಮೂಲಕ, ಕ್ರೈಸ್ತರು ಆ ಸಂದರ್ಭದಲ್ಲಿ ಆನಂದಿಸುವರು. ಇದಲ್ಲದೆ, ಅವರು ಆ ಘಟನೆಯ ಕಡೆಗೆ ಒಳ್ಳೆಯ ಮನಸ್ಸಾಕ್ಷಿ ಹಾಗೂ ಅಚ್ಚುಮೆಚ್ಚಿನ ಸ್ಮರಣೆಗಳಿಂದ ಹಿನ್ನೋಟ ಬೀರಲು ಶಕ್ತರಾಗಿರುವರು. ವಿವೇಕ ಹಾಗೂ ಯುಕ್ತಾಯುಕ್ತ ಪರಿಜ್ಞಾನವನ್ನು ತೋರಿಸುವ ಮೂಲಕ, ನಮ್ಮ ಎಲ್ಲ ಕ್ರೈಸ್ತ ವಿವಾಹಗಳು, ಪ್ರಾಮಾಣಿಕಹೃದಯದ ಪ್ರೇಕ್ಷಕರಿಗೆ ಒಂದು ಸಾಕ್ಷಿಯನ್ನು ಕೊಡುವಂತಾಗಲಿ.

[ಅಧ್ಯಯನ ಪ್ರಶ್ನೆಗಳು]

a ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿದೆ.

[ಪುಟ 24,25 ರಲ್ಲಿರುವಚಿತ್ರಗಳು]

ಕ್ರೈಸ್ತರು ಪ್ರತಿಯೊಂದು ಸ್ಥಳಿಕ ವಿವಾಹ ಸಂಪ್ರದಾಯವನ್ನು ಅಂಧಾನುಕರಣದಿಂದ ಅನುಸರಿಸುವುದಿಲ್ಲ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ