403 ವರ್ಷಗಳ ಸಾಂಗತ್ಯವೊಂದು ಸಂಕಷ್ಟದಲ್ಲಿದೆ
ಸ್ವೀಡನಿನಲ್ಲಿ, 400 ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ, ಚರ್ಚು ಹಾಗೂ ಸರಕಾರವು ಒಂದು ಆಪ್ತ ಸಂಬಂಧದಲ್ಲಿ ಆನಂದಿಸಿದೆ. ಈಗ ಧರ್ಮ ಹಾಗೂ ಸರಕಾರದ ನಡುವಿನ ಸಾಂಗತ್ಯವು ದುರ್ಬಲವಾಗುತ್ತಿದೆ.
ಇಸವಿ 1593ರಲ್ಲಿ, ಲ್ಯೂತರ್ಮತವು ರಾಷ್ಟ್ರ ಧರ್ಮವಾಗಿ ಸ್ಥಾಪಿತವಾಯಿತು, ಮತ್ತು ಸ್ವೀಡನಿನವರೆಲ್ಲರೂ ಅದರ ದೀಕ್ಷಾಸ್ನಾನಿತ ಸದಸ್ಯರಾಗಿರಬೇಕಿತ್ತು. ವರ್ಷಗಳಾನಂತರ, 1850ಗಳಲ್ಲಿ ಒಂದು ಹೊಂದಾಣಿಕೆಯು ಮಾಡಲ್ಪಟ್ಟಿತು. ಅದೇನಂದರೆ, ಸ್ವೀಡನಿನವರು ಇನ್ನುಮುಂದೆ ದೀಕ್ಷಾಸ್ನಾನಿತರಾಗಿರುವ ಅಗತ್ಯವಿರಲಿಲ್ಲ; ಆದರೂ ಅವರು ಇನ್ನೂ ಲ್ಯೂತರನ್ ಚರ್ಚಿನ ಸದಸ್ಯರಾಗಿ ಪರಿಗಣಿಸಲ್ಪಟ್ಟಿದ್ದರು. ಇದರಿಂದಾಗಿಯೇ, ಅವರು ಚರ್ಚಿನ ಬೆಂಬಲಕ್ಕಾಗಿಯೂ ಚರ್ಚಿನಿಂದ ನೀಡಲ್ಪಟ್ಟ ಕೆಲವು ಪೌರ ಸೇವೆಗಳಿಗಾಗಿ ಹಣ ಪಾವತಿಮಾಡುವುದಕ್ಕಾಗಿಯೂ ತಮ್ಮ ವಾರ್ಷಿಕ ತೆರಿಗೆಯ 1 ಪ್ರತಿಶತವನ್ನು ಸಲ್ಲಿಸುವ ಅಗತ್ಯವಿತ್ತು. ಇತ್ತೀಚೆಗಷ್ಟೇ ಇನ್ನೊಂದು ಬದಲಾವಣೆಯು ಸಂಭವಿಸಿತು. 1952ರಿಂದ ಆರಂಭಿಸಿ, ಸ್ವೀಡನಿನವರು ಕಾನೂನುರೀತ್ಯ ಚರ್ಚನ್ನು ಬಿಟ್ಟುಹೋಗಲು ಸಾಧ್ಯವಾಯಿತು. ಹೀಗೆ ಅವರು ಚರ್ಚ್ ತೆರಿಗೆಯ ಅಧಿಕಾಂಶ ಭಾಗವನ್ನು ತೆರುವುದರಿಂದ ವಿಮುಕ್ತರಾಗಸಾಧ್ಯವಾಯಿತು.
ಇತ್ತೀಚಿನ ವರ್ಷಗಳಲ್ಲಿ ಲ್ಯೂತರನ್ ಚರ್ಚು, ಸ್ವೀಡನಿನಲ್ಲಿ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಾ ಹೋಗುತ್ತಿದೆ. ಇದು ಅನಿವಾರ್ಯವಾಗಿತ್ತು; ಏಕೆಂದರೆ ಸ್ವೀಡನಿನ ನಿವಾಸಿಗಳಲ್ಲಿ 10 ಪ್ರತಿಶತ ಮಂದಿ, ಲ್ಯೂತರ್ಮತದವರಲ್ಲದ ವಲಸೆಗಾರರಾಗಿದ್ದಾರೆ; ಇವರಲ್ಲಿ ಯೆಹೂದ್ಯರು, ಕ್ಯಾಥೊಲಿಕರು, ಹಾಗೂ ಮುಸ್ಲಿಮರು ಸೇರಿದ್ದಾರೆ. ಹೀಗೆ, 1996ರ ಆರಂಭದಲ್ಲಿ, ಸ್ವೀಡನಿನವರಲ್ಲಿ 86 ಪ್ರತಿಶತ ಮಂದಿ ಮಾತ್ರವೇ ಲ್ಯೂತರನ್ ಚರ್ಚಿಗೆ ಸೇರಿದ್ದವರಾಗಿದ್ದರು. ಮತ್ತು ಆ ಸಂಖ್ಯೆಯು ಕ್ಷೀಣಿಸುತ್ತಾ ಹೋಗುತ್ತಿದೆ.
ವೃದ್ಧಿಯಾಗುತ್ತಿರುವ ಔದಾಸೀನ್ಯವು, ಚರ್ಚು ಹಾಗೂ ಸರಕಾರದ ನಡುವೆ ಬಲವಾದ ಬಿರುಕನ್ನು ಉಂಟುಮಾಡುತ್ತಿದೆ. ಈಗಾಗಲೇ, ಅರಸನು ಲ್ಯೂತರ್ಮತದವನಾಗಿರುವ ಅಗತ್ಯವಿಲ್ಲ, ಹಾಗೂ ಲ್ಯೂತರ್ಮತದ ಹೆತ್ತವರಿಗೆ ಹುಟ್ಟುವ ಮಕ್ಕಳು, ಸ್ವಭಾವತಃ ಲ್ಯೂತರನ್ ಸರಕಾರದ ಚರ್ಚಿನ ಸದಸ್ಯರಾಗಿ ಪರಿಗಣಿಸಲ್ಪಡುವುದಿಲ್ಲ ಎಂದು ಪ್ರಕಟಿಸಲ್ಪಟ್ಟಿದೆ. ಇದಲ್ಲದೆ, ದ ಡ್ಯಾಲಸ್ ಮಾರ್ನಿಂಗ್ ನ್ಯೂಸ್ಗನುಸಾರ, 2000 ವರ್ಷದಷ್ಟಕ್ಕೆ, “ಸ್ಥಳಿಕ ಪಾದ್ರಿಯಾಡಳಿತದ ಪ್ರಾಂತಗಳು ಹಾಗೂ ಸರಕಾರವು, ಈಗ ಚರ್ಚಿಗೆ ಸೇರಿದ್ದಾಗಿರುವ ಅಪಾರ ಮೊತ್ತಗಳ ಸೊತ್ತಿನ ಬೆಲೆಯನ್ನು ಅಂದಾಜುಮಾಡಿ, ಅದನ್ನು ವಿಭಾಗಿಸಬೇಕು. ಚರ್ಚು ತನ್ನ 168 ಕೋಟಿ ವಾರ್ಷಿಕ ಆಯವ್ಯಯದ ಅಂದಾಜುಪಟ್ಟಿಯನ್ನು—ಬಹುತೇಕ ಹಣವನ್ನು ತೆರಿಗೆಗಳ ಮೂಲಕ ಪಡೆಯಲಾಗುತ್ತದೆ—ಕಡಿಮೆಮಾಡಬೇಕು.” ಈ ಶತಮಾನವು ಮುಗಿದುಹೋದ ಬಳಿಕ, ಚರ್ಚು ತನ್ನ ಸ್ವಂತ ಬಿಷಪರನ್ನು ನೇಮಿಸುವುದು.
ಔದಾಸೀನ್ಯ ಹಾಗೂ ಕಡಿಮೆಯಾಗುತ್ತಿರುವ ಸದಸ್ಯತನವು ಕ್ರೈಸ್ತಪ್ರಪಂಚವನ್ನು ಬಾಧಿಸುತ್ತಿರುವಾಗ, ಸ್ವೀಡನಿನಲ್ಲಿರುವ ಯೆಹೋವನ ಸಾಕ್ಷಿಗಳು ವೃದ್ಧಿಯಾಗುತ್ತಾ ಹೋಗುತ್ತಿದ್ದಾರೆ. 1997 ಯೆಹೋವನ ಸಾಕ್ಷಿಗಳ ವರ್ಷಪುಸ್ತಕ (ಇಂಗ್ಲಿಷ್)ವು ವರದಿಸುವುದೇನೆಂದರೆ, ಆ ದೇಶದಲ್ಲಿ 24,487 ಮಂದಿ ದೇವರ ರಾಜ್ಯದ ಪ್ರಚಾರಕರಿದ್ದಾರೆ, ಮತ್ತು ಬಹುಮಟ್ಟಿಗೆ 10 ಪ್ರತಿಶತ ಮಂದಿ ಪೂರ್ಣ ಸಮಯದ ಪಯನೀಯರ್ ಶುಶ್ರೂಷಕರಾಗಿ ಸಾರುತ್ತಿದ್ದಾರೆ. ಇವರಲ್ಲಿ ಅನೇಕರು ಹೆಚ್ಚು ಮಹತ್ವದ ಸೇವಾ ಸುಯೋಗಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಉದಾಹರಣೆಗಾಗಿ, ಯೆಹೋವನ ಸಾಕ್ಷಿಗಳ 1995ರ ಜಿಲ್ಲಾ ಅಧಿವೇಶನಗಳಲ್ಲಿ, 20 ಮಂದಿ ವಿವಾಹಿತ ದಂಪತಿಗಳು, ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನಲ್ಲಿ ಮಿಷನೆರಿ ತರಬೇತನ್ನು ಪಡೆದುಕೊಳ್ಳಲಿಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದರು. ಆ ಸಮಯದಲ್ಲಿ, ಗತ ತರಗತಿಗಳಿಂದ ಪದವೀಧರರಾದ ಸುಮಾರು 75 ಸ್ವೀಡಿಷ್ ಪದವೀಧರರು, ಲೋಕದ ವಿವಿಧ ಭಾಗಗಳಲ್ಲಿ, ಮಿಷನೆರಿ ಸೇವೆಯಲ್ಲಿ ಸೇವೆಸಲ್ಲಿಸುತ್ತಿದ್ದರು. ನಿಸ್ಸಂದೇಹವಾಗಿಯೂ, ಅವರ ಅತ್ಯುತ್ತಮ ಮಾದರಿ ಹಾಗೂ ಉತ್ತೇಜನದಾಯಕವಾದ ಪತ್ರಗಳು ಮತ್ತು ಭೇಟಿಗಳು, ಈ ಮಹಾ ಸುಯೋಗದ ಕುರಿತು ಈಗ ಪರ್ಯಾಲೋಚಿಸುತ್ತಿರುವವರ ಮೇಲೆ ಪ್ರಚೋದನಾತ್ಮಕ ಪರಿಣಾಮವನ್ನು ಬೀರುತ್ತಿವೆ.
ಹೀಗೆ, ಕ್ರೈಸ್ತಪ್ರಪಂಚದ ಲಕ್ಷಾಂತರ ಮಂದಿಯ ನೈತಿಕ ಸ್ಥೈರ್ಯವು ದುರ್ಬಲಗೊಳ್ಳುತ್ತಿರುವಾಗ, ಯೆಹೋವನ ಸಾಕ್ಷಿಗಳು “ಹೃದಯಾನಂದದಿಂದ ಹರ್ಷಧ್ವನಿಗೈಯು”ತ್ತಾರೆ.—ಯೆಶಾಯ 65:13, 14.
[ಪುಟ 30ರಲ್ಲಿರುವಚಿತ್ರ]
ಸ್ವೀಡನ್