ದೇವರಲ್ಲಿ ನಂಬಿಕೆ ಅದಕ್ಕಾಗಿ ಒಂದು ಅದ್ಭುತಕಾರ್ಯವು ಅವಶ್ಯವೊ?
ದೇವರನ್ನು ಹುಡುಕಲು ಆರಂಭಿಸಿದಾಗ, ಆಲ್ಬರ್ಟ್ ತನ್ನ 20ಗಳ ಆದಿ ಭಾಗದಲ್ಲಿದ್ದನು. ಅವನು ಅನೇಕ ಧರ್ಮಗಳನ್ನು ಪರೀಕ್ಷಿಸಿ ನೋಡಿದರೂ ಅತೃಪ್ತನಾಗಿಯೇ ಉಳಿದನು. ಬೈಬಲಿನ ಭಾಗಗಳನ್ನು ಓದುತ್ತಾ, ಅವನು ನೋಹ, ಅಬ್ರಹಾಮ, ಸಾರ, ಮತ್ತು ಮೋಶೆಯರಂತಹ ವ್ಯಕ್ತಿಗಳೊಂದಿಗೆ ದೇವರು ವ್ಯವಹರಿಸಿದ ರೀತಿಯನ್ನು ಅರಿತುಕೊಂಡನು. ಬೈಬಲಿನ ದೇವರೆಡೆಗೆ ಆಲ್ಬರ್ಟ್ ಆಕರ್ಷಿತನಾದನು. ಆದಾಗಲೂ, ದೇವರು ನಿಜವಾಗಿ ಅಸ್ತಿತ್ವದಲ್ಲಿದ್ದಾನೆಂಬ ವಿಷಯದಲ್ಲಿ ಅವನು ಖಚಿತನಾಗಿರಸಾಧ್ಯವಿತ್ತೊ?
ಒಂದು ಸಾಯಂಕಾಲ ಆಲ್ಬರ್ಟನು ವಾಹನದಲ್ಲಿ ಒಂದು ಏಕಾಂತ ಸ್ಥಳಕ್ಕೆ ಹೋಗಿ, “ದೇವರೇ ದಯವಿಟ್ಟು ನನಗೊಂದು ಸೂಚನೆಯನ್ನು ಕೊಡು—ನೀನು ಅಸ್ತಿತ್ವದಲ್ಲಿದ್ದೀ ಎಂಬುದನ್ನು ರುಜುಪಡಿಸಲು ಏನಾದರೂ ಸರಿ” ಎಂದು ಪ್ರಾರ್ಥಿಸಿದನು. ಆಲ್ಬರ್ಟ್ ಕಾಯುತ್ತಾ ನಿಂತನು. ಏನೂ ಸಂಭವಿಸದಿದ್ದಾಗ, ತನ್ನ ನಿರೀಕ್ಷಣೆಯು “ಆಶಾಭಂಗ, ಶೂನ್ಯಭಾವ, ಕೋಪಕ್ಕೆ ತಿರುಗಿತು” ಎಂದು ಅವನು ಜ್ಞಾಪಿಸಿಕೊಳ್ಳುತ್ತಾನೆ.
ಆಲ್ಬರ್ಟ್ನಂತೆ ಅನೇಕರಿಗೆ, ತಾವು ವ್ಯರ್ಥವಾಗಿ ದೇವರನ್ನು ಹುಡುಕಿದ್ದೇವೆಂದು ಅನಿಸುತ್ತದೆ. ಅವರು ವೈದಿಕರ ಪ್ರಸಂಗಗಳಿಂದ ಗಲಿಬಿಲಿಗೊಂಡಿರಬಹುದು ಅಥವಾ ಟೆಲಿವಿಷನ್ ಸೌವಾರ್ತಿಕರ ವಿಕ್ರಯ ಚಾತುರ್ಯದಿಂದ ಜುಗುಪ್ಸೆಗೊಂಡಿರಬಹುದು. ಕ್ರೈಸ್ತರೆಂದು ಹೇಳಿಕೊಳ್ಳುವ ತಮ್ಮ ನೆರೆಹೊರೆಯವರಲ್ಲಿ ಹೆಚ್ಚಿನವರ ನಡುವಿನ ಕಪಟಾಚಾರದಿಂದ ಬಾಧಿತರಾಗಿ, ಕೆಲವರಿಗೆ ಏನನ್ನು ನಂಬುವುದೆಂಬುದರ ಕುರಿತಾಗಿ ನಿಶ್ಚಯವಿಲ್ಲ. ಆದರೂ, ಪುರಾತನ ಇಸ್ರಾಯೇಲಿನ ರಾಜ ದಾವೀದನು ತನ್ನ ಮಗನಾದ ಸೊಲೊಮೋನನಿಗೆ ಆಶ್ವಾಸನೆಯನ್ನಿತ್ತದ್ದು: “ನೀನು ಆತನನ್ನು [ದೇವರನ್ನು] ಹುಡುಕುವದಾದರೆ ಆತನು ನಿನಗೆ ಸಿಕ್ಕುವನು.”—1 ಪೂರ್ವಕಾಲವೃತ್ತಾಂತ 28:9.
ಒಳ್ಳೇದು ಹಾಗಾದರೆ, ದೇವರು ತನ್ನನ್ನೇ ಹೇಗೆ ಪ್ರಕಟಪಡಿಸಿಕೊಳ್ಳುತ್ತಾನೆ? ನೀವು ಒಂದು ಸೂಚಕಕಾರ್ಯ—ದೇವರು ಅಸ್ತಿತ್ವದಲ್ಲಿದ್ದಾನೆಂದು ನಿಮಗೆ ರುಜುಪಡಿಸುವ ಯಾವುದೊ ಅಲೌಕಿಕ ಅನುಭವ—ವನ್ನು ನಿರೀಕ್ಷಿಸಬೇಕೊ? ಟೈಮ್ ಪತ್ರಿಕೆಯಲ್ಲಿ ವರದಿಸಲ್ಪಟ್ಟ ಇತ್ತೀಚಿನ ಒಂದು ಮತಚಲಾವಣೆಗನುಸಾರ, ಅಮೆರಿಕದವರಲ್ಲಿ ಮೂರನೆಯ ಎರಡಂಶಕ್ಕಿಂತಲೂ ಹೆಚ್ಚು ಮಂದಿ ಅದ್ಭುತಕಾರ್ಯಗಳಲ್ಲಿ ನಂಬುತ್ತಾರೆ. “ಅಮೆರಿಕದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಚರ್ಚುಗಳು, ಯಾರ ಆರಾಧನೆಯು ‘ಸೂಚಕಕಾರ್ಯಗಳು ಮತ್ತು ಚಮತ್ಕಾರಗಳ’ ಸುತ್ತಲೂ ಸುತ್ತುತ್ತದೊ ಆ ಕ್ಯಾರಿಸ್ಮಾಟಿಕ್ ಮತ್ತು ಪೆಂಟೆಕಾಸ್ಟಲ್ ಸಭೆಗಳಾಗಿವೆ” ಎಂದು ಸಹ ಆ ಲೇಖನವು ಅವಲೋಕಿಸಿತು.
ದೇವರನ್ನು ನಂಬಲಿಕ್ಕಾಗಿ “ಸೂಚಕಕಾರ್ಯಗಳು ಮತ್ತು ಚಮತ್ಕಾರಗಳು” ನಿಜವಾಗಿಯೂ ಬೇಕಾಗಿವೆಯೊ? ದೇವರು ಗತಕಾಲಗಳಲ್ಲಿ ಅದ್ಭುತಕಾರ್ಯಗಳನ್ನು ಉಪಯೋಗಿಸಿದ್ದಾನೆ. ದೃಷ್ಟಾಂತಕ್ಕಾಗಿ: ದೇವರ ಪುತ್ರನಾದ ಯೇಸು ಕ್ರಿಸ್ತನ ಹಿಂಬಾಲಕರನ್ನು ಹಿಂಸಿಸುತ್ತಿದ್ದ ತಾರ್ಸದ ಸೌಲನಿಗೆ, ಯೆರೂಸಲೇಮಿನಿಂದ ದಮಸ್ಕಕ್ಕೆ ಹೋಗುತ್ತಿದ್ದ ರಸ್ತೆಯಲ್ಲಿ ಒಂದು ಅಸಾಧಾರಣವಾದ ಅನುಭವವಾಯಿತು. ಪುನರುತ್ಥಿತ ಯೇಸುವಿನೊಂದಿಗಿನ ಈ ಅದ್ಭುತಕರವಾದ ಸಂಧಿಸುವಿಕೆಯು, ಸೌಲನ ಪರಿವರ್ತನೆಗೆ ನಡಿಸಿತು. (ಅ. ಕೃತ್ಯಗಳು 9:1-22) ಹೀಗೆ ಒಬ್ಬ ಮಾಜಿ ಹಿಂಸಕನು, ಅಪೊಸ್ತಲ ಪೌಲನು—ಕ್ರೈಸ್ತತ್ವದ ಅಗ್ರಗಣ್ಯ ಸಮರ್ಥಕರಲ್ಲಿ ಒಬ್ಬನಾಗಿ ಪರಿಣಮಿಸಿದನು!
ಆದರೆ ಅದ್ಭುತಕಾರ್ಯಗಳು ಯಾವಾಗಲೂ ಅಂತಹ ಒಂದು ಪ್ರಸನ್ನಕರ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೊ? ದೇವರಲ್ಲಿ ನಿಜವಾದ ನಂಬಿಕೆಯು, ಒಬ್ಬನು ಯಾವುದೊ ಅದ್ಭುತಕರವಾದ ಅನುಭವವನ್ನು ಪಡೆಯುವುದರ ಮೇಲೆ ಅವಲಂಬಿತವಾಗಿದೆಯೊ?
[ಪುಟ 3 ರಲ್ಲಿರುವ ಚಿತ್ರ]
ದೇವಕುಮಾರನು ತಾರ್ಸದ ಸೌಲನೊಂದಿಗೆ ಅದ್ಭುತ ರೀತಿಯಲ್ಲಿ ಮಾತಾಡಿದನು. ನೀವೂ ಒಂದು ಅದ್ಭುತಕಾರ್ಯವನ್ನು ನಿರೀಕ್ಷಿಸಬೇಕೊ?