“ನೀವು ಪ್ರಭಾವ ಬೀರಿದ ಅನೇಕ ಜೀವಗಳಲ್ಲಿ ಕೇವಲ ಒಂದು ಜೀವ”
ಜನವರಿ 1996ರಲ್ಲಿ, ಕಾರಲ್ ಮಿದುಳಿನ ಟ್ಯೂಮರ್ (ಗೆಡ್ಡೆ)ನಿಂದ ಅಸ್ವಸ್ಥಳಾಗಿದ್ದಳು. ಅವಳು ತನ್ನ 60ಗಳ ಪ್ರಾಯದಲ್ಲಿದ್ದಳು. ಮತ್ತು ಅಂದಿನ ತನಕ ಅವಳು, ಪ್ರತಿಯೊಬ್ಬರಿಗೂ ಉತ್ತೇಜನದಾಯಕ ಮಾತುಗಳನ್ನು ಆಡುತ್ತಿದ್ದ ಒಬ್ಬ ಸಂತೋಷಭರಿತ, ಗಟ್ಟಿಮುಟ್ಟಾದ ಸ್ತ್ರೀಯಾಗಿದ್ದಳು. ಆದರೆ ಈಗ ಈ ಮಾರಕ ಬೆಳವಣಿಗೆಯನ್ನು ಸರಿಪಡಿಸಲಿಕ್ಕಾಗಿ ವೈದ್ಯರು ಹೆಣಗಾಡುತ್ತಿದ್ದರು. ತನ್ನ ಹೋರಾಟದ ನಡುವೆ, ಕಾರಲ್ಗೆ ಈ ಕೆಳಗಿನ ಪತ್ರವು ಬಂದು ತಲಪಿತು:
“ಆತ್ಮೀಯ ಕಾರಲ್:
“ನಿಮ್ಮ ಅನಾರೋಗ್ಯದ ಕುರಿತಾಗಿ ನಾನು ತುಂಬಾ ವಿಷಾದಿಸುತ್ತೇನೆ. ಸಂತೋಷಕರವಾಗಿ, ನಾವು ತಿಳಿದುಕೊಂಡು, ಪ್ರೀತಿಸುವಂತೆ ಬೈಬಲು ಸಹಾಯ ಮಾಡುವ ನಿಜ ನಿರೀಕ್ಷೆ ನಮಗಿದೆ. ಈ ನಿರೀಕ್ಷೆಯು, ಯೆಹೋವನ ರಾಜ್ಯವು ಭೂಮಿಯನ್ನು ಆಳಲಿಕ್ಕಾಗಿರುವುದೇ; ಇದರಿಂದ ನಾವು ಒಂದು ಪ್ರಮೋದವನ ಪರಿಸ್ಥಿತಿಯಲ್ಲಿ ಜೀವಿಸಬಲ್ಲೆವು. ಈ ಸಮಯಕ್ಕಾಗಿಯೇ ನಾವೆಲ್ಲರೂ ಎದುರುನೋಡುತ್ತೇವೆ.
“ನಿಮ್ಮ ವೈಯಕ್ತಿಕ ಸಾರುವ ಕಾರ್ಯವು, ನಿತ್ಯ ಮರಣದಿಂದ ಅನೇಕ ಜನರನ್ನು ಕಾಪಾಡಿದೆ ಎಂಬುದನ್ನು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ಈ ಜನರಲ್ಲಿ ನಾನು ಒಬ್ಬನು. ನಾವು ಮೊದಲ ಬಾರಿ ಭೇಟಿಯಾದುದು ನಿಮಗೆ ಜ್ಞಾಪಕವಿದೆಯೋ ಇಲ್ಲವೋ ನನಗೆ ತಿಳಿಯದು. ಆ ಸಮಯದಲ್ಲಿ ನಾನು 20 ವರ್ಷ ಪ್ರಾಯದವನಾಗಿದ್ದೆ. ನನಗೆ ಉದ್ದವಾದ ಕೂದಲಿತ್ತು, ನಾನು ಅಮಲೌಷಧಗಳನ್ನು ಮಾರುತ್ತಿದ್ದೆ, ಮತ್ತು ಬೀದಿಯ ಪುಂಡರ ಒಂದು ಗುಂಪಿನೊಂದಿಗೆ ಕಾಲಕ್ಷೇಪಮಾಡುತ್ತಿದ್ದೆ. ನಾವೆಲ್ಲರೂ ಬಂದೂಕುಗಳನ್ನು ಕೊಂಡೊಯ್ದೆವು, ಮತ್ತು ಸ್ವಪ್ರೀತಿಯ ಹೊರತಾಗಿ ನೈಜವಾದ ಪ್ರೀತಿಯು ನಮ್ಮಲ್ಲಿ ಇರಲಿಲ್ಲ.
“ನೀವು ಇನ್ನೊಬ್ಬ ಸಾಕ್ಷಿಯೊಂದಿಗೆ ನನ್ನ ಮನೆ ಬಾಗಿಲನ್ನು ತಟ್ಟಿ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನನಗೆ ನೀಡಿದಿರಿ. ನನಗೆ ಪತ್ರಿಕೆಗಳು ಬೇಡವೆಂದು ಹೇಳುತ್ತಾ, ನಾನು ನಿಮಗೆ ಒಂದು ಡಾಲರನ್ನು ಕೊಡಲು ಪ್ರಯತ್ನಿಸಿದೆ. ನೀವು ಬರಿಯ ದಾನಗಳನ್ನು ಸಂಪಾದಿಸಲಿಕ್ಕಾಗಿ ಸಾರುತ್ತಿರಲಿಲ್ಲವೆಂಬುದನ್ನು ನನಗೆ ತಿಳಿಯಪಡಿಸಿದಿರಿ. ಬೈಬಲನ್ನು ಓದುವಂತೆ ಜನರಿಗೆ ಸಹಾಯ ಮಾಡುವ ಒಂದು ಕೆಲಸವನ್ನು ನೀವು ಮಾಡುತ್ತಿದ್ದಿರಿ ಎಂದು ನನಗೆ ಹೇಳಿದಿರಿ. ನಾನು ಆ ಪತ್ರಿಕೆಗಳನ್ನು ಪಡೆದುಕೊಂಡೆನೊ ಅಥವಾ ಅವುಗಳನ್ನು ಓದಿದೆನೊ ಎಂಬುದು ನನಗಷ್ಟು ಖಚಿತವಿಲ್ಲ. ಆದರೂ, ನೀವು ನನ್ನ ಜೀವಿತದಲ್ಲಿ ಸತ್ಯದ ಬೀಜವನ್ನು ನೆಟ್ಟಿರಿ.
“ಕೆಲವು ವರ್ಷಗಳಾನಂತರ, ನಾನು ನನ್ನ ತಾಯಿಯ ಮನೆಯಲ್ಲಿದ್ದಾಗ, ಗ್ಯಾರಿ ಎಂಬ ಇನ್ನೊಬ್ಬ ಸಾಕ್ಷಿಯು ಅಲ್ಲಿಗೆ ಬಂದನು. ಕೆಲವು ವರ್ಷಗಳ ಮುಂಚೆ ನೀವು ಭೇಟಿ ನೀಡಿದ್ದರ ಕುರಿತಾಗಿ ನಾನು ಅವನಿಗೆ ಹೇಳಿದೆ. ನಾನು ಅಂತಿಮವಾಗಿ 1984ರಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುವ ವರೆಗೆ—ಬಹಳ ಸಮಯದ ತನಕ ಗ್ಯಾರಿ ನನ್ನೊಂದಿಗೆ ಬೈಬಲನ್ನು ಅಭ್ಯಾಸಿಸಿದನು. ಈಗ ನಾನು ನನ್ನ ಮಕ್ಕಳಿಗೆ ದೇವರ ರಾಜ್ಯದ ಸತ್ಯವನ್ನು ಬೋಧಿಸುತ್ತಾ ಇದ್ದೇನೆ.
“ನಿಮ್ಮ ನಂಬಿಗಸ್ತ ಸೇವೆಯ ಹಲವಾರು ವರ್ಷಗಳಲ್ಲಿ ನೀವು ಪ್ರಭಾವ ಬೀರಿದ ಅನೇಕ ಜೀವಗಳಲ್ಲಿ ನಾನು ಕೇವಲ ಒಂದು ಜೀವ ಎಂಬುದು ನನಗೆ ಖಂಡಿತವಾಗಿಯೂ ತಿಳಿದಿದೆ. ಆದರೂ, ಈ ಪ್ರೀತಿಪೂರ್ಣ ದಯಾಭಾವದ ಮೂಲಕ ನೀವು, ನಾನೂ ನನ್ನ ಕುಟುಂಬವೂ ಮಹಾ ದೇವರಾದ ಯೆಹೋವನ ಹಾಗೂ ಆತನ ಮಗನಾದ ಯೇಸು ಕ್ರಿಸ್ತನ ಕುರಿತು ತಿಳಿಯುವಂತೆ ಮಾಡಿದ್ದೀರಿ. ಯೆಹೋವನು ನಮ್ಮ ಕಣ್ಣುಗಳಿಂದ ಕಣ್ಣೀರನ್ನು ಒರೆಸಿಬಿಡುವ, ಹಾಗೂ ಇನ್ನೆಂದಿಗೂ ಮರಣವಿರದ ಹೊಸ ವಿಷಯಗಳ ವ್ಯವಸ್ಥೆಯಲ್ಲಿ, ನಾನು ನಿಮ್ಮನ್ನು ನೋಡಸಾಧ್ಯವಿರುವ ಆ ದಿನಕ್ಕಾಗಿ ಮುನ್ನೋಡುತ್ತೇನೆ.—ಪ್ರಕಟನೆ 21:4.
“ನನ್ನ ಹಾಗೂ ನನ್ನ ಕುಟುಂಬದ ವಿಷಯದಲ್ಲಿ ಹೇಳುವುದಾದರೆ, ನಮಗೆ ನಿಮ್ಮ ಕುರಿತಾಗಿ ತಿಳಿಯುವ ಹಾಗೂ ನಿಮ್ಮ ಸಾಕ್ಷಿ ಕಾರ್ಯದ ಒಂದು ಭಾಗವಾಗಿರುವ ಅವಕಾಶವು ದೊರೆತದ್ದಕ್ಕಾಗಿ ನಾವು ಸಂತೋಷಿತರು. ನಿಮಗೆ ಉಪಕಾರ.
“ಸಹೋದರ ಪ್ರೀತಿಯೊಂದಿಗೆ,
ಪೀಟರ್”
ಆರು ತಿಂಗಳುಗಳ ಅನಾರೋಗ್ಯದ ಬಳಿಕ, ಮಾರ್ಚ್ 1996ರಲ್ಲಿ ಕಾರಲ್ ಮೃತಪಟ್ಟಳು. ಅವಳು ಒಬ್ಬ ಹುರುಪಿನ ಸೌವಾರ್ತಿಕಳೋಪಾದಿ ತನ್ನ 35 ವರ್ಷಗಳ ಜೀವನಪಥದಲ್ಲಿ ಸತ್ಯದ ಅನೇಕ ಬೀಜಗಳನ್ನು ಬಿತ್ತಿದ್ದಳು. ಬೀಜವೊಂದು ಯಾವಾಗ ಫಲಬಿಡುವುದೆಂಬುದು ತಿಳಿದಿರುವುದಿಲ್ಲ—ಅನೇಕ ವರ್ಷಗಳ ನಂತರವೂ ಫಲಬಿಡಬಹುದು ಎಂಬುದನ್ನು ಅವಳು ಅರಿತುಕೊಂಡಳು.—ಮತ್ತಾಯ 13:23.