ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w96 12/15 ಪು. 20-21
  • “ಹಾಗಾದರೆ ನಿಮ್ಮ ಚರ್ಚ್‌ ಎಲ್ಲಿದೆ?”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಹಾಗಾದರೆ ನಿಮ್ಮ ಚರ್ಚ್‌ ಎಲ್ಲಿದೆ?”
  • ಕಾವಲಿನಬುರುಜು—1996
ಕಾವಲಿನಬುರುಜು—1996
w96 12/15 ಪು. 20-21

“ಹಾಗಾದರೆ ನಿಮ್ಮ ಚರ್ಚ್‌ ಎಲ್ಲಿದೆ?”

ಮೋಸಂಬೀಕ್‌ನಲ್ಲಿನ ಯೆಹೋವನ ಸಾಕ್ಷಿಗಳಿಗೆ ಅನೇಕ ವೇಳೆ ಈ ಪ್ರಶ್ನೆಯನ್ನು ಕೇಳಲಾಗುತ್ತದೆ. ಇತ್ತೀಚಿನ ವರೆಗೆ ಉತ್ತರಿಸಲು ಕಷ್ಟಕರವಾದ ಪ್ರಶ್ನೆ ಇದಾಗಿತ್ತು ಎಂಬುದು ಸ್ಪಷ್ಟ. ಏಕೆಂದರೆ, 1991ರ ವರೆಗೆ ಯೆಹೋವನ ಸಾಕ್ಷಿಗಳಿಗೆ ಈ ದೇಶದಲ್ಲಿ ಶಾಸನಬದ್ಧ ಮನ್ನಣೆ ಇರಲಿಲ್ಲ. ಆದಕಾರಣ, ಸ್ಪಷ್ಟವಾಗಿ ಗುರುತಿಸಸಾಧ್ಯವಾಗುವ ಮತ್ತು ಸ್ಥಾಪಿತ ಆರಾಧನಾ ಸ್ಥಳಗಳನ್ನು ಪಡೆದಿರುವುದು ಸಾಧ್ಯವಿರಲಿಲ್ಲ.

ಆದರೂ, ಫೆಬ್ರವರಿ 19, 1994ರಂದು ಆ ಪರಿಸ್ಥಿತಿ ಬದಲಾವಣೆಗೊಂಡಿತು. ಆ ಉರಿಬಿಸಿಲಿನ ದಿನದಂದು, ಮೋಸಂಬೀಕ್‌ನಲ್ಲಿ ಕಟ್ಟಲ್ಪಟ್ಟಿರುವುವುಗಳಲ್ಲಿಯೇ ಪ್ರಪ್ರಥಮವಾದ ಎರಡು ರಾಜ್ಯ ಸಭಾಗೃಹಗಳು ಸಮರ್ಪಿಸಲ್ಪಟ್ಟವು. ಮೋಸಂಬೀಕ್‌ನ ಕರಾವಳಿಯ ಸುಮಾರು ಅರ್ಧದಷ್ಟು ಉತ್ತರಕ್ಕಿರುವ ಬೇರ ಎಂಬ ರೇವುಪಟ್ಟಣದಲ್ಲಿ ನಡೆದ ಈ ಉತ್ತಮ ಕೂಟದ ಸ್ಥಳಗಳ ಸಮರ್ಪಣೆಗೆ ಒಟ್ಟು 602 ಮಂದಿ ಬಂದರು. ಈ ಸಭಾಗೃಹಗಳು ಆ ನಗರದ ಮೂರು ಸಭೆಗಳ ಆವಶ್ಯಕತೆಗಳನ್ನು ಪೂರೈಸುವುವು.

ಅಸ್ತಿವಾರ ಹಾಕುವುದರಿಂದ ಹಿಡಿದು, ಕಟ್ಟಡಗಳನ್ನು ಮುಗಿಸುವ ತನಕದ ಈ ಪೂರ್ತಿ ಯೋಜನೆಗೆ, ಒಂದು ವರ್ಷ ಎರಡು ತಿಂಗಳುಗಳ ಕಠಿಣ ಶ್ರಮ ಹಿಡಿಯಿತು. ಅನೇಕ ವೇಳೆ, ನೆರೆಯ ದೇಶವಾದ ಸಿಂಬಾಬ್ವೆಯಿಂದ 30 ಅಥವಾ ಹೆಚ್ಚು ಸ್ವಯಂಸೇವಕರು ಬಂದು, ಸ್ಥಳಿಕ ಸಾಕ್ಷಿಗಳೊಂದಿಗೆ ಹೆಗಲು ಕೊಟ್ಟು ಕೆಲಸಮಾಡಿದರು. ಈ ಕಾರ್ಯ ನಿರ್ವಹಣೆಯ ಆಧಾರ ಸ್ಥಾನವಾಗಿ ಕಾರ್ಯನಡೆಸಿದ ಬೇರದಲ್ಲಿನ ಮಿಷನೆರಿ ಗೃಹದಲ್ಲಿ ಅವರೆಲ್ಲರಿಗೆ ವಸತಿ ಕೊಡಲು ಸಾಧ್ಯವಿಲ್ಲದ್ದರಿಂದ, ಕೆಲವರು ವಾರಾಂತ್ಯಗಳಲ್ಲಿ ಮತ್ತು ಕೆಲವು ಸಂದರ್ಭಗಳಲ್ಲಿ ವಾರಗಟ್ಟಲೆ ಆ ಗೃಹದ ಸುತ್ತಲೂ ತಂಗಿದರು.

ಮಾಸಾಂಬ ಮತ್ತು ಮೂನಾವ ಸಭೆಗಳ ರಾಜ್ಯ ಸಭಾಗೃಹದ ನಿವೇಶನವು, ಬೇರದ ಮುಖ್ಯ ಬೀದಿಯಲ್ಲಿದೆ. ಒಬ್ಬ ಮಿಷನೆರಿ ಅವಲೋಕಿಸಿದ್ದು: “ಕಾರ್ಯನಿರತ ದಿನವೊಂದರಲ್ಲಿ, ಕೆಲಸವು ಬೇಗನೆ ನಡೆದು, ಪ್ರಗತಿಯು ಅತಿ ಗಮನಾರ್ಹವಾಗಿದ್ದಾಗ, ಹಾದುಹೋಗುತ್ತಿದ್ದ ಡ್ರೈವರರು, ತಮ್ಮ ಚಾಲಕ ಚಕ್ರ (ಸ್ಟಿಯರಿಂಗ್‌ ವೀಲ್‌)ಗಳನ್ನು ಬಹುಮಟ್ಟಿಗೆ ಮರೆತುಬಿಟ್ಟು ರಾಜ್ಯ ಸಭಾಗೃಹವನ್ನು ದಿಟ್ಟಿಸಿ ನೋಡುತ್ತಿದ್ದಾಗ, ಇನ್ನೇನು ಅಪಘಾತಗಳು ಸಂಭವಿಸಲಿದ್ದ ಪರಿಸ್ಥಿತಿಗಳನ್ನು ನಾವು ನೋಡಿದೆವು.” ಅನೇಕರು ಕೆಲಸವನ್ನು ಪ್ರೇಕ್ಷಿಸಲು ನಿಂತರು ಮತ್ತು ಒಂದಾಗಿ ಕೆಲಸಮಾಡುತ್ತಿದ್ದ ವಿವಿಧ ಕುಲಗಳವರ ಸಮಕ್ಷಮವು ಅವರನ್ನು ವಿಶೇಷವಾಗಿ ಪ್ರಭಾವಿಸಿತು.

ಆ ಕೆಲಸದಲ್ಲಿ ಮಹತ್ತಾದ ಯೋಜನೆ ಮತ್ತು ವ್ಯವಸ್ಥಾಪನೆಯು ಸೇರಿತ್ತು. ಸಲಕರಣೆಗಳು ಮತ್ತು ಸಂಪನ್ಮೂಲಗಳ ಕೊರತೆಯಿರುವ ಲೋಕದ ಈ ಭಾಗದಲ್ಲಿ ಸಾಗುತ್ತಿರುವ ಅನೇಕ ಇತರ ಯೋಜನೆಗಳಿಗೆ ಅಸದೃಶವಾಗಿ, ರಾಜ್ಯ ಸಭಾಗೃಹಗಳ ಕೆಲಸವು ಸರಬರಾಯಿಯ ಕೊರತೆಯ ಕಾರಣ ಎಂದೂ ಸ್ಥಗಿತವಾದದ್ದಿಲ್ಲ. ಒಂದು ಸಂದರ್ಭದಲ್ಲಿ, 800 ಗೋಣಿಚೀಲಗಳಷ್ಟು ಸಿಮೆಂಟಿನ ಅವಶ್ಯವಿತ್ತು, ಮತ್ತು ಅದನ್ನು ಸರಬರಾಯಿ ಮಾಡಸಾಧ್ಯವಿದ್ದ ಒಂದೇ ಸ್ಥಳದಲ್ಲಿ ಸಿಮೆಂಟು ಹಿಡಿಯಲವಶ್ಯವಾದ ಗೋಣಿಚೀಲಗಳಿರಲಿಲ್ಲ. ಸಹೋದರರು ರಾಜಧಾನಿಯಾದ ಮಾಪೂಟೊದಲ್ಲಿರುವ ವಾಚ್‌ ಟವರ್‌ ಸೊಸೈಟಿಯ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿದಾಗ, ಗೋಣಿಚೀಲಗಳನ್ನು ವಿಮಾನದ ಮೂಲಕ ಕಳುಹಿಸಲಾಯಿತು. ಮತ್ತು ಅವುಗಳನ್ನು ಸಿಮೆಂಟ್‌ ಫ್ಯಾಕ್ಟರಿಗೆ ತೆಗೆದುಕೊಂಡು ಹೋಗಿ ತುಂಬಿಸಲಾಯಿತು. ಕೆಲಸವು ತಡೆಯಿಲ್ಲದೆ ಮುಂದುವರಿಯಿತು.

ಇನ್ನೊಂದು ಸಂದರ್ಭದಲ್ಲಿ, ಚಾವಣಿ ಊರೆಗಳು ಇಡಲ್ಪಡುತ್ತಿದ್ದಾಗ, ಕೆಲಸಗಾರರಿಗೆ ಉಕ್ಕಿನ ತೊಲೆಗಳ ಅಭಾವ ಬಂದಿತು. ವಿಪರೀತ ಕೊರತೆಯ ಕಾರಣ, ಯೋಜನೆಗಾಗಿ ಬೇಕಾದ ಉಕ್ಕನ್ನು 600 ಕಿಲೊಮೀಟರುಗಳಷ್ಟು ದೂರದಿಂದ ಆಮದುಮಾಡಲಾಯಿತು! ಪ್ರೇಕ್ಷಿಸುತ್ತಿದ್ದ ಒಬ್ಬ ಪುರುಷನನ್ನು ಒಬ್ಬ ಕೆಲಸಗಾರನು ಸಮೀಪಿಸಿ, ಕೆಲಸ ಮುಗಿಸಲು ಬೇಕಾಗುವಷ್ಟು ಉಕ್ಕನ್ನು ಎಲ್ಲಿ ಕಂಡುಕೊಳ್ಳಬಹುದೆಂದು ಅವನಿಗೆ ಗೊತ್ತೊ ಎಂದು ಕೇಳಿದನು. ಆ ವ್ಯಕ್ತಿ ಉತ್ತರಿಸಿದ್ದು: “ನಾನು ಒಂದು ತಾಸಿಗೂ ಹೆಚ್ಚು ಸಮಯದಿಂದ ಇಲ್ಲಿ ನಿಂತಿದ್ದೇನೆ, ಮತ್ತು ಅದು ಕಾಕತಾಳೀಯವಾಗಿರಲಾರದು. ನೀವು ಮಾಡುತ್ತಿರುವ ಕೆಲಸವನ್ನು ಮತ್ತು ಈ ಯೋಜನೆಯ ಮನೋವೃತ್ತಿಯನ್ನು ಪ್ರಶಂಸಿಸದಿರಸಾಧ್ಯವಿಲ್ಲ. ನಿಮಗೆ ಬೇಕಾಗಿರುವಂತಹದ್ದೇ ಉಕ್ಕು ನನ್ನಲ್ಲಿದೆ, ಮತ್ತು ಅದನ್ನು ನಿಮಗೆ ಕೊಡುಗೆಯಾಗಿ ನೀಡುವುದು ನನ್ನ ಸಂತೋಷ.” ಅದು ಅತಿ ಸಮಯೋಚಿತ ಒದಗಿಸುವಿಕೆಯಾಗಿ ಪರಿಣಮಿಸಿತು.

ಅನೇಕ ಪ್ರೇಕ್ಷಕರು, ಈ ಯೋಜನೆಯನ್ನು ಯಾವ ದೊಡ್ಡ ಕಟ್ಟಡ ರಚನಾ ಸಂಸ್ಥೆಯು ನಿರ್ವಹಿಸಿತೆಂದು ಕುತೂಹಲಪಟ್ಟರು. ಇವರು ಸ್ವಯಂಸೇವಕರಾಗಿ ಸೇವೆಸಲ್ಲಿಸುತ್ತಿರುವ ಯೆಹೋವನ ಸಾಕ್ಷಿಗಳೇ ಎಂದು ಅವರಿಗೆ ತಿಳಿಸುವುದರಲ್ಲಿ ಕೆಲಸಗಾರರು ಅತಿ ಸಂತೋಷಪಟ್ಟರೆಂಬುದು ನಿಶ್ಚಯ. ಪ್ರೇಕ್ಷಕರ ಮನವನ್ನು ವಿಶೇಷವಾಗಿ ಯಾವುದು ತಟ್ಟಿತು? “ನೀವು ಐಕ್ಯರಾದ ಜನರು,” ಎಂದನು ಒಬ್ಬನು. “ವಿವಿಧ ಕುಲಗಳವರಾದರೂ ನೀವು ಸಹೋದರರಂತೆ ಕೂಡಿ ಕೆಲಸಮಾಡುತ್ತೀರಿ.” ಇದರಿಂದಾಗಿ ಅನೇಕರು ಬೈಬಲ್‌ ಅಭ್ಯಾಸಗಳನ್ನು ಕೇಳುತ್ತ ಬಂದರು. ಇದರ ಪ್ರಭಾವವು ಕೂಟಗಳಲ್ಲಿಯೂ ಕಂಡುಬಂದಿದೆ. ಉದಾಹರಣೆಗೆ, ಮಾಂಗ ಸಭೆಯ ಕೂಟದ ಸರಾಸರಿ ಹಾಜರಿಯು, ಸಾಕ್ಷಿಗಳ ಸಂಖ್ಯೆಯ ಎರಡರಷ್ಟಕ್ಕಿಂತಲೂ ಹೆಚ್ಚಾಗಿದೆ.

ಹೊಸ ರಾಜ್ಯ ಸಭಾಗೃಹಗಳು ಸ್ಥಳಿಕ ಸಾಕ್ಷಿಗಳಿಗೆ ನಿಜವಾಗಿಯೂ ಮಹಾ ಆಶೀರ್ವಾದವಾಗಿ ಪರಿಣಮಿಸಿವೆ. ಈ ಹಿಂದೆ ಹೆಚ್ಚಿನವರು ಕಚ್ಚಾ ಸ್ಥಳಗಳಲ್ಲಿ, ಹುಲ್ಲಿನ ಅಥವಾ ಕೆಲವೊಂದು ತಗಡುಗಳ ಚಾವಣಿಗಳಡಿಯಲ್ಲಿಯೊ, ಹಿತ್ತಿಲಲ್ಲಿಯೊ, ಖಾಸಗಿ ಮನೆಯ ಚಿಕ್ಕ ಕೋಣೆಯಲ್ಲಿಯೊ ಕೂಡಿಬರುತ್ತಿದ್ದರು. ಮಳೆ ಬಂದಾಗ ಅವರು ಅನೇಕ ವೇಳೆ ಒದ್ದೆಯಾಗುತ್ತಿದ್ದರು; ಆದರೂ ಅವರು ನಂಬಿಗಸ್ತಿಕೆಯಿಂದ ಕೂಟಗಳಿಗೆ ಹಾಜರಾದರು. ದಶಕಗಳಿಂದ ಮೋಸಂಬೀಕ್‌ನಲ್ಲಿನ ಯೆಹೋವನ ಸಾಕ್ಷಿಗಳು ತಿಳಿದಿದ್ದ “ರಾಜ್ಯ ಸಭಾಗೃಹಗಳು” ಇವೇ ಆಗಿದ್ದವು. ಮಾಸಾಂಬ ಸಭೆಯ ಒಬ್ಬ ಹಿರಿಯರಾದ ಸಹೋದರ ಕೈತಾನೂ ಗಾಬ್ರೀಎಲ್‌ ಹೇಳಿದ್ದು: “ಈ ಯೋಜನೆಯು ನಿಜವಾಗುವುದಕ್ಕೆ ವಂತಿಗೆ ಕೊಟ್ಟ ಲೋಕದ ಸುತ್ತಲೂ ಇರುವ ನಮ್ಮ ಸಹೋದರರಿಗೆ ನಾವು ಕೃತಜ್ಞರು.” ಯುವ ಸಾಕ್ಷಿಯೊಬ್ಬನು ಜ್ಞಾಪಿಸಿಕೊಂಡದ್ದು: “ನಾವು ಕಾರೀಕೂ (ಯೆಹೋವನ ಸಾಕ್ಷಿಗಳು ಹೆಚ್ಚುಕಡಿಮೆ 12 ವರ್ಷಗಳ ವರೆಗೆ ನಿರ್ಬಂಧದಲ್ಲಿದ್ದ “ಪುನರ್ಶಿಕ್ಷಣ ಶಿಬಿರಗಳು”)ನಲ್ಲಿದ್ದಾಗ, ‘ನಾವು ನಂಬಿಕೆಯಿಂದ ಬಿಡದೆ ಮುಂದುವರಿಯುವೆವು, ಮತ್ತು ಯೆಹೋವನು ನಮಗೆ ಪ್ರತಿಫಲ ಕೊಡುವನು,’ ಎಂದು ಹೇಳುತ್ತಿದ್ದೆವು. ಈ ಹೊಸ ರಾಜ್ಯ ಸಭಾಗೃಹವು ಯೆಹೋವನಿಂದ ಬಂದ ಪ್ರತಿಫಲವಾಗಿದೆ.” ಅವರ ಮಾತುಗಳು ಅವರ ಗಾಢವಾದ ಕೃತಜ್ಞತೆಯನ್ನು ಮತ್ತು ಯೆಹೋವನನ್ನು ಸ್ತುತಿಸುವ ಅವರ ದೃಢನಿರ್ಧಾರವನ್ನು ವ್ಯಕ್ತಪಡಿಸುತ್ತವೆ.

ಕಟ್ಟಡ ನಿರ್ಮಾಣ ಕೆಲಸದಲ್ಲಿ ಭಾಗವಹಿಸಿದ ಅನೇಕ ಯುವಜನರು, ಪಯನೀಯರ್‌ ಮನೋವೃತ್ತಿಯಿಂದ ತುಂಬಲ್ಪಟ್ಟು, ಆ ಬಳಿಕ ಕ್ರಮದ ಪಯನೀಯರ್‌ ಸೇವೆಯನ್ನು ಕೈಕೊಂಡರು. ಮಾಂಗ ಸಭೆಯಲ್ಲಿ ಕ್ರಮದ ಪಯನೀಯರಳಾಗಿರುವ ಈಸಾಬೆಲ್‌ ಎಂಬ ಯುವತಿ, ರಾಜ್ಯ ಸಭಾಗೃಹದ ಸಮರ್ಪಣೆಯ ಮುಂಚಿನ ದಿನ, ದೋಷರಹಿತವಾಗಿ ಸ್ವಚ್ಛವಾಗಿರುವ ರಾಜ್ಯ ಸಭಾಗೃಹವನ್ನು ನೋಡಿದಾಗ ಹೇಳಿದ್ದು: “ನನಗಾದರೊ ಇದು ಬೇರ ನಗರದಲ್ಲಿಯೇ ಅತ್ಯಂತ ಸುಂದರವಾದ ಸ್ಥಳ. ನನಗೆ ಇಲ್ಲಿರುವುದು ಅತ್ಯಂತ ಸಂತೋಷದ ಸಂಗತಿ.” ಆಡ್ನಾವ್‌ ಕಾಸ್ಟ ಎಂಬ ಒಬ್ಬ ಮಿಷನೆರಿ, ಸ್ಥಳಿಕ ಅಧಿಕಾರಿಗಳು ಸಾಕ್ಷಿಗಳ ಪ್ರಾಮಾಣಿಕತೆಯನ್ನು ಅರಿತಿದ್ದ ಕಾರಣ, ವಿಶೇಷ ಆಮದಿನ ಕಾರ್ಯವಿಧಾನಗಳನ್ನು ಅನುಮತಿಸುವುದರಲ್ಲಿ ಬಹಳಷ್ಟು ಸಹಕಾರವನ್ನು ತೋರಿಸಿದ್ದರೆಂದು ತಿಳಿಸಿದರು. ಬಳಿಕ ಅವರು ಕೂಡಿಸಿದ್ದು: “ನಾವು ಬಹಳ ದಣಿದರೂ, ಯೆಹೋವನ ಗೌರವ ಮತ್ತು ಮಹಿಮೆಗಾಗಿರುವ ಈ ಎಲ್ಲಾ ಕೆಲಸದ ಫಲಗಳನ್ನು ನೋಡುವುದು ಆನಂದಕರವಾಗಿತ್ತು.”

ಈಗ, ಬೇರ ನಗರದ ಮಿತ್ರಭಾವದ ನಿವಾಸಿಯೊಬ್ಬನು, “ಹಾಗಾದರೆ ನಿಮ್ಮ ಚರ್ಚ್‌ ಎಲ್ಲಿದೆ?” ಎಂದು ಎಂದಾದರೂ ಕೇಳುವಲ್ಲಿ, ಸಾಕ್ಷಿಗಳು ಅವನನ್ನು ಎರಡು ಹೊಸ ರಾಜ್ಯ ಸಭಾಗೃಹಗಳಲ್ಲಿ ಒಂದನ್ನು ನಿರ್ದೇಶಿಸಿ, “ಅದು ಇಂಟರ್‌ನ್ಯಾಷನಲ್‌ ರೋಡ್‌, ಆವೆನೀಡ ಏಕೋರ್ಡೂ ಡ ಲೂಸಾಕ, ಫೋರ್ತ್‌ ಸ್ಕ್ವಾಡ್ರನ್‌ ಪೊಲೀಸ್‌ ಸ್ಟೇಷನ್ನಿನ ಎದುರುಗಡೆಯೇ ಇದೆ” ಎಂಬಂತಹ ಮಾತುಗಳನ್ನು ಹೇಳುವ ಮೂಲಕ ಪ್ರತಿಕ್ರಿಯಿಸುತ್ತಾರೆ. ಬಳಿಕ ಒಂದು ತಪ್ಪನ್ನು ತಿದ್ದುತ್ತ ಅವರನ್ನುವುದು: “ಆದರೆ ಅದು ಚರ್ಚ್‌ ಅಲ್ಲ, ರಾಜ್ಯ ಸಭಾಗೃಹ!”

[ಪುಟ 20ರಲ್ಲಿರುವಚಿತ್ರ/ಚಿತ್ರಗಳು]

ಆಫ್ರಿಕ

ಮಾಪೂಟೊ

ಬೇರ

ಮೋಸಂಬೀಕ್‌

[ಕೃಪೆ]

Map: Mountain High Maps® Copyright © 1995 Digital Wisdom, Inc.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ