ರಾಜ್ಯ ಘೋಷಕರು ವರದಿಮಾಡುತ್ತಾರೆ
ಶಾಲೆಯಲ್ಲಿ ಒಂದು ದೃಢವಾದ ನಿಲುವನ್ನು ತೆಗೆದುಕೊಳ್ಳುವುದರಿಂದ ಪ್ರತಿಫಲ ದೊರೆಯುತ್ತದೆ
ಬೈಬಲು ಮುಂತಿಳಿಸುವುದು: “ನಿನ್ನ ಪುತ್ರರೆಲ್ಲರೂ ಯೆಹೋವನಿಂದ ಕಲಿಸಲ್ಪಡುವ ವ್ಯಕ್ತಿಗಳಾಗಿರುವರು ಮತ್ತು ನಿನ್ನ ಪುತ್ರರ ಶಾಂತಿಯು ಸಮೃದ್ಧವಾಗಿರುವುದು.” (ಯೆಶಾಯ 54:13, NW) ವಿಸ್ತಾರ್ಯವಾದೊಂದು ವಿಧದಲ್ಲಿ, “ನಿನ್ನ ಪುತ್ರರೆಲ್ಲರೂ” ಎಂಬುದು ತೀರ ಎಳೆಯರನ್ನೂ ಒಳಗೊಂಡು, ಭೂಮಿಯ ಮೇಲಿರುವ ದೇವರ ಸೇವಕರ ಇಡೀ ಸಮೂಹಕ್ಕೆ ಅನ್ವಯಿಸಲ್ಪಡಸಾಧ್ಯವಿದೆ. ಇಂದು, ಕ್ರೈಸ್ತ ಹೆತ್ತವರು ತಮ್ಮ ಮಕ್ಕಳು ಮನೆಯಲ್ಲಿ ಹಾಗೂ ಕ್ರೈಸ್ತ ಕೂಟಗಳಲ್ಲಿ “ಯೆಹೋವನಿಂದ ಕಲಿಸಲ್ಪಡು”ತ್ತಿದ್ದಾರೆಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಾರೆ.
ಆದರೂ, ಯುವ ಕ್ರೈಸ್ತರು ಶಾಲೆಯನ್ನು ಹಾಜರಾಗುತ್ತಿರುವಾಗ ಕಷ್ಟಸಾಧ್ಯ ಪಂಥಾಹ್ವಾನಗಳಿಂದ ಎದುರಿಸಲ್ಪಡುತ್ತಾರೆ. ಅನೇಕ ವೇಳೆ ಅವರು ಬೈಬಲಿನಿಂದ ಕಲಿತಿರುವ ವಿಷಯದ ಆಧಾರದ ಮೇಲೆ ಬಲವಾದೊಂದು ನಿಲುವನ್ನು ತೆಗೆದುಕೊಳ್ಳುವ ಆವಶ್ಯಕತೆಯನ್ನು ಕಂಡುಕೊಳ್ಳುತ್ತಾರೆ. ಅವರು ಬಲವಾದೊಂದು ನಿಲುವನ್ನು ತೆಗೆದುಕೊಳ್ಳುವಾಗ, ಫಲಿತಾಂಶಗಳು ಮೈಕ್ರೋನೇಷಿಯಾದಿಂದ ಬಂದ ಈ ಮುಂದಿನ ಅನುಭವವು ತೋರಿಸುವ ಹಾಗೆ, ವಿದ್ಯಾರ್ಥಿಗಳಿಗೂ ಶಿಕ್ಷಕರಿಗೂ ಸಮಾನವಾಗಿ ಪ್ರಯೋಜನಕರವಾಗಿರಸಾಧ್ಯವಿದೆ.
ಚುಕ್ ದ್ವೀಪಗಳಲ್ಲಿನ ಟೊಲ್ ಎಂಬ ಪುಟ್ಟ ಪಶ್ಚಿಮ ಪೆಸಿಫಿಕ್ ದ್ವೀಪದಲ್ಲಿ, ಸ್ಥಳಿಕ ಶಾಲೆಯಲ್ಲಿನ ಶಿಕ್ಷಕರು ಎಲ್ಲ ಮಕ್ಕಳಿಗೆ ಶಾಲಾ ಹ್ಯಾಲೋವೀನ್ ದಿನದ ಆಚರಣೆಗಾಗಿ ತಯಾರಿಸಿ, ಭಾಗವಹಿಸುವಂತೆ ಹೇಳಿದರು. ಆ ಆಚರಣೆಯು, ಪ್ರೇತಗಳು, ತುಂಟ ಪಿಶಾಚಿಗಳು, ಮತ್ತು ಮಂತ್ರವಾದಿನಿಗಳನ್ನು—ಎಲ್ಲವೂ ಪ್ರೇತಾತ್ಮ ಸಂಪ್ರದಾಯಗಳಿಗೆ ಸಂಬಂಧಿಸಿದ್ದು—ಚಿತ್ರಿಸುವ ಅಲಂಕರಣೆಗಳು ಹಾಗೂ ವೇಷಗಳನ್ನು ಒಳಗೂಡಸಾಧ್ಯವಿದೆ ಎಂಬುದರ ಕುರಿತು ಸಾಕ್ಷಿ ವಿದ್ಯಾರ್ಥಿಗಳು ಅರಿವುಳ್ಳವರಾಗಿದ್ದರು. ಈ ಮಕ್ಕಳು ಆತ್ಮಸಾಕ್ಷಿಕವಾಗಿ ಭಾಗವಹಿಸಸಾಧ್ಯವಿರಲಿಲ್ಲ.a
ಮನೆ ಹಾಗೂ ಕ್ರೈಸ್ತ ಸಭೆಯಲ್ಲಿನ ಅವರ ಬೈಬಲ್ ಆಧಾರಿತ ತರಬೇತಿಯಿಂದ, ಅಂಥ ಆಚರಣೆಗಳು ದೇವರಿಗೆ—ಬರೀ ಮನೋರಂಜನೆಗಾಗಿ ಮಾಡಲ್ಪಡುವಾಗಲೂ—ಅಪ್ರಸನ್ನಕರವಾಗಿವೆ ಎಂಬುದು ಅವರಿಗೆ ತಿಳಿದಿತ್ತು. ತಮ್ಮ ನಿಲುವನ್ನು ಹೆಚ್ಚು ಸ್ಫುಟವಾಗಿ ವಿವರಿಸಲು ಸಹಾಯಕವಾಗಿ, ತಮ್ಮ ಶಿಕ್ಷಕರೊಂದಿಗೆ ಮಾತಾಡುವಂತೆ, ದ್ವೀಪದಲ್ಲಿದ್ದ ಸಾಕ್ಷಿ ಮಿಷನೆರಿಗಳಲ್ಲಿ ಒಬ್ಬರಾದ ಬರಕ್ ಎಂಬುವರನ್ನು ಮಕ್ಕಳು ಆಮಂತ್ರಿಸಿದರು.
ವಿವರಣೆಯನ್ನು ಕೇಳಿದ ಅನಂತರ, ಶಿಕ್ಷಕರು ಎರಡನೆಯ ಕೂಟಕ್ಕಾಗಿ ಏರ್ಪಡಿಸಿದರು, ಅಲ್ಲಿ ಬರಕ್ ಇಡೀ ಶಾಲಾ ಸಿಬ್ಬಂದಿ ವರ್ಗದೊಂದಿಗೆ ಮಾತಾಡಶಕ್ತರಾದರು. ಈ ಕೂಟದಲ್ಲಿ, ಬರಕ್, ಹ್ಯಾಲೋವೀನ್ ದಿನದ ನಿಜ ಸ್ವರೂಪ ಲಕ್ಷಣವನ್ನು ತೋರಿಸಲಿಕ್ಕಾಗಿ ವಾಸ್ತವಾಂಶಗಳನ್ನು ನೀಡಿದರು. ಅವರು ತಮ್ಮ ಮಾಹಿತಿಯನ್ನು ಹಲವಾರು ವಾಚ್ ಟವರ್ ಪ್ರಕಾಶನಗಳಿಂದ, ಹಾಗೂ ಇತರ ಮೂಲಗಳಿಂದ ಪಡೆದುಕೊಂಡರು. ಆಚರಣೆಯ ಮೂಲ, ಇತಿಹಾಸ ಹಾಗೂ ಧಾರ್ಮಿಕ ಸ್ವರೂಪ ಲಕ್ಷಣದ ಕುರಿತು ಶಿಕ್ಷಕರು ಮತ್ತು ಆಡಳಿತಗಾರರು ಏನನ್ನು ಕಲಿತರೋ ಅದರಿಂದ ಅವರು ವಿಸ್ಮಯಗೊಂಡರು. ಸನ್ನಿವೇಶವನ್ನು ಹೇಗೆ ಬಗೆಹರಿಸಬೇಕೆಂಬುದನ್ನು ನಿರ್ಧರಿಸಲು ಅವರು ಸಿಬ್ಬಂದಿ ವರ್ಗದ ಒಂದು ಕೂಟವನ್ನು ನಡೆಸಲು ನಿರ್ಣಯಿಸಿದರು.
ಕೆಲವೊಂದು ದಿನಗಳ ಬಳಿಕ, ಒಂದು ಅನಿರೀಕ್ಷಿತ ನಿರ್ಧಾರವು ಪ್ರಕಟಿಸಲ್ಪಟ್ಟಿತು. ಹ್ಯಾಲೋವೀನ್ ದಿನಕ್ಕಾಗಿದ್ದ ಸಕಲ ತಯಾರಿಗಳು ರದ್ದುಗೊಳಿಸಲ್ಪಟ್ಟವು. ಆ ವರ್ಷದಲ್ಲಿ ಶಾಲೆಯು ಖಂಡಿತವಾಗಿಯೂ ಹ್ಯಾಲೋವೀನ್ ದಿನವನ್ನು ಆಚರಿಸುವುದಿಲ್ಲ. ಶಾಲೆಯಲ್ಲಿ ಯಾವುದು ಸರಿಯಾಗಿದೆಯೋ ಅದನ್ನು ಮಾಡಲು ಈ ಯುವ ಸಾಕ್ಷಿಗಳು ಮಾಡಿದಂಥ ದೃಢನಿಶ್ಚಯದಿಂದ ಎಂಥ ಒಂದು ಅನುಕೂಲಕರ ಪರಿಣಾಮವು ಫಲಿಸಿತು! ಬೈಬಲ್ ಸತ್ಯಕ್ಕಾಗಿ ದೃಢವಾದೊಂದು ನಿಲುವನ್ನು ತೆಗೆದುಕೊಳ್ಳಲು ಎಳೆಯರು ಎಂದೂ ಭಯಪಡುವ ಅಥವಾ ನಾಚುವ ಅಗತ್ಯವಿಲ್ಲ.
ಲೋಕದ ಸುತ್ತಲೂ, ಯೆಹೋವನ ಸಾಕ್ಷಿಗಳು ತಮ್ಮ ಮಕ್ಕಳಿಗೆ ಶಾಲೆಯಲ್ಲಿ ಶ್ರದ್ಧಾಪೂರ್ವಕವಾಗಿ ಓದುವಂತೆ ಕಲಿಸುತ್ತಾರೆ. ಯುವ ಸಾಕ್ಷಿಗಳಿಗೆ ಅವಕಾಶ ಒದಗಿದಂತೆ, ಅವರು ಬೈಬಲ್ ತತ್ತ್ವಗಳಿಗನುಸಾರ ಜೀವಿಸಲಿಕ್ಕಾಗಿ ಮತ್ತು ತಮ್ಮ ನಿರೀಕ್ಷೆ ಹಾಗೂ ನಂಬಿಕೆಗಳನ್ನು ಇತರ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲಿಕ್ಕಾಗಿ ಸಹ ತರಬೇತುಗೊಳಿಸಲ್ಪಡುತ್ತಾರೆ. ಫಲಿತಾಂಶಗಳು ಈ ವಿದ್ಯಮಾನದಲ್ಲಿದ್ದಂತೆ ಅಷ್ಟೊಂದು ಅನುಕೂಲಕರವೂ ತತ್ಕ್ಷಣವೂ ಆಗಿರದಿರುವಾಗಲೂ, ಯೌವನಸ್ಥರು ಸರಿಯಾಗಿರುವ ವಿಷಯಗಳನ್ನು ಮಾಡುವುದರಿಂದ ಬರುವ ಭರವಸೆ ಮತ್ತು ಸಂತೃಪ್ತಿಯನ್ನು ಪಡೆದುಕೊಳ್ಳಬಲ್ಲರು. ಮತ್ತು ಅತಿ ಪ್ರಾಮುಖ್ಯವಾಗಿ, ತಮ್ಮ ಸ್ವರ್ಗೀಯ ಪಿತನು ಪ್ರಸನ್ನಗೊಂಡಿದ್ದಾನೆ ಹಾಗೂ ತಮ್ಮ ನಂಬಿಗಸ್ತ ವಿಧೇಯತೆಯಿಂದಾಗಿ ತಮ್ಮನ್ನು ಆಶೀರ್ವದಿಸುವನೆಂಬ ಖಾತ್ರಿ ಅವರಿಗಿರಸಾಧ್ಯವಿದೆ.
[ಪಾದಟಿಪ್ಪಣಿ]
a ಹ್ಯಾಲೋವೀನ್ ದಿನ ಮತ್ತು ಅದರ ಪ್ರೇತಾತ್ಮಕ ಮೂಲಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ನವೆಂಬರ್ 22, 1993ರ ಅವೇಕ್! ಪತ್ರಿಕೆಯ ಸಂಚಿಕೆಯನ್ನು ನೋಡಿರಿ.