ತಿಳುವಳಿಕೆಯ ಸಮ್ಮತಿಯ ಹಕ್ಕು ಪುನಃ ದೃಢೀಕರಿಸಲ್ಪಡುತ್ತದೆ
ಇಟಲಿಯ ಮಸೀನ ನ್ಯಾಯಾಲಯದ ಪೂರ್ವಭಾವಿ ತನಿಖೆಗಳಿಗಾಗಿರುವ ನ್ಯಾಯಾಧೀಶನಿಂದ ಉಚ್ಚರಿಸಲ್ಪಟ್ಟ ಒಂದು ಇತ್ತೀಚಿನ ತೀರ್ಮಾನವು, ಒಬ್ಬ ವಯಸ್ಕ ರೋಗಿಯ ವೈದ್ಯಕೀಯ ಇಚ್ಛೆಗಳು ವೈದ್ಯರನ್ನು ನಿರ್ಬಂಧಪಡಿಸುತ್ತವೆಂಬುದನ್ನು ಪುನಃ ದೃಢೀಕರಿಸಿದೆ. ಆ ತೀರ್ಪು, ಯೆಹೋವನ ಸಾಕ್ಷಿಗಳಲ್ಲೊಬ್ಬನನ್ನು ಒಳಗೊಂಡಿದ್ದ ಒಂದು ವಿದ್ಯಮಾನದಲ್ಲಿ ಹೊರಡಿಸಲ್ಪಟ್ಟಿತ್ತು.
ಜನವರಿ 1994ರಲ್ಲಿ, ಹೀಮೊಫಿಲಿಯಾಕ್ ರೋಗಿಯಾಗಿದ್ದ 64 ವರ್ಷ ಪ್ರಾಯದ ಸಾಕ್ಷಿಯಾದ ಆ್ಯಂಟೋನಿನೊ ಸ್ಟೆಲಾರ್ಯೊ ಲೆಂಟಿನಿಯನ್ನು, ಮಸೀನದ ಟಾವುಮೀನ ಆಸ್ಪತ್ರೆಗೆ ಸಾಗಿಸಲಾಯಿತು. ಯೆಹೋವನ ಸಾಕ್ಷಿಗಳೋಪಾದಿ ತಾನೂ ತನ್ನ ಗಂಡನೂ ರಕ್ತಪೂರಣ ಚಿಕಿತ್ಸೆಗೆ ಸಮ್ಮತಿಸದಿರುವೆವೆಂದು ಆಸ್ಪತ್ರೆಯ ಸಿಬ್ಬಂದಿಗೆ ಆ್ಯಂಟೋನಿನೊವಿನ ಹೆಂಡತಿಯಾದ ಕಾಟೇನಾ ಹೇಳಿದಳು. (ಅ. ಕೃತ್ಯಗಳು 15:20, 28, 29) ಅವರ ಇಚ್ಛೆಗಳು ಗೌರವಿಸಲ್ಪಟ್ಟವು.
ಆದಾಗಲೂ ಇನ್ನೊಂದು ಆರೋಗ್ಯಾರೈಕೆ ಕೇಂದ್ರಕ್ಕೆ ಸಾಗಿಸಲ್ಪಡುತ್ತಿದ್ದಾಗ, ಆ್ಯಂಟೋನಿನೊ ಉಸಿರಾಟದ ತಡೆಯನ್ನು ಅನುಭವಿಸಿ, ಚಿಂತಾಜನಕ ಸ್ಥಿತಿಯಲ್ಲಿ ಆಗಮಿಸಿದನು. ತದನಂತರ ಸ್ವಲ್ಪ ಸಮಯದಲ್ಲೇ ಅವನು ಸತ್ತುಹೋದನು. ಕಾಟೇನಾ ಕಂಗೆಟ್ಟುಹೋದಳಾದರೂ ಒಂದು ಪುನರುತ್ಥಾನದ ಕುರಿತಾದ ಬೈಬಲಿನ ವಾಗ್ದಾನದಲ್ಲಿ ಅವಳು ತುಂಬ ಸಾಂತ್ವನವನ್ನು ಕಂಡುಕೊಂಡಳು. (ಅ. ಕೃತ್ಯಗಳು 24:15) ಅನಂತರ, ಅವಳ ಮಹದಾಶ್ಚರ್ಯಕ್ಕೆ, ಮ್ಯಾಜಿಸ್ಟ್ರೇಟರು—ಪ್ರಾಯಶಃ ವಾರ್ತಾ ಮಾಧ್ಯಮದ ಮೂಲಕ ಪ್ರಸಾರಮಾಡಲ್ಪಟ್ಟ ತಪ್ಪಾದ ವಾರ್ತೆಯಿಂದ ತಪ್ಪಭಿಪ್ರಾಯ ಪಡೆದವರಾಗಿ—ವೈದ್ಯರು ಆವಶ್ಯಕವೆಂದು ಪರಿಗಣಿಸಿದಂತಹ ಶಸ್ತ್ರಚಿಕಿತ್ಸೆಯನ್ನು ಅವಳು ನಿರಾಕರಿಸಿದ ಕಾರಣ ಅವಳ ಗಂಡನ ಮರಣಕ್ಕೆ ಅವಳೇ ಕಾರಣಳೆಂದು ಆಪಾದಿಸಿದರು.
ಒಂದು ವರ್ಷಕ್ಕಿಂತ ಹೆಚ್ಚು ಸಮಯದ ನಂತರ, ಜುಲೈ 11, 1995ರಲ್ಲಿ, ಕಾಟೇನಾ ದೋಷಮುಕ್ತಗೊಳಿಸಲ್ಪಟ್ಟಳು, ಯಾಕಂದರೆ ಅವಳು ಯಾವ ಪಾತಕವನ್ನೂ ಮಾಡಿರಲಿಲ್ಲ. ವಾಸ್ತವದಲ್ಲಿ, ಪರಿಣತರ ಸಾಕ್ಷ್ಯವು ತೋರಿಸಿತೇನಂದರೆ, ರೋಗಿಯ ಪರಿಸ್ಥಿತಿಯನ್ನು ಪರಿಗಣಿಸುವಾಗ, ಶಸ್ತ್ರಚಿಕಿತ್ಸಾ ಹಸ್ತಕ್ಷೇಪವು ಹೇಗೂ ನಿಷ್ಪ್ರಯೋಜಕವಾಗಿರುತ್ತಿತ್ತು.
ಆದರೆ ನ್ಯಾಯಾಧೀಶನ ಹೇಳಿಕೆಗಳು ಮುಖ್ಯ ವಿವಾದಾಂಶಕ್ಕೆ ಸೂಚಿಸಿದವು. ರೋಗಿಯಿಂದ ಅಥವಾ ಅವನನ್ನು ಪ್ರತಿನಿಧಿಸುವ ವ್ಯಕ್ತಿಗಳಿಂದ ಚಿಕಿತ್ಸೆಯು ನಿರಾಕರಿಸಲ್ಪಡುವಾಗ, ವೈದ್ಯಕೀಯ ಸಿಬ್ಬಂದಿಯು ಹಸ್ತಕ್ಷೇಪಮಾಡಲೇಬೇಕೆಂಬ ವಿಚಾರವನ್ನು ಸ್ವೀಕರಿಸುವುದು ಕಷ್ಟಕರವೆಂದು ಅವರು ನಿರ್ದೇಶಿಸಿದರು. ಇಟಲಿಯಲ್ಲಿನ ವೈದ್ಯಕೀಯ ನೀತಿಶಾಸ್ತ್ರ ಸಂಹಿತೆಯು, “ಯಾವುದೇ ಹಸ್ತಕ್ಷೇಪದ ಮುಂಚೆ ರೋಗಿಯ ತಿಳುವಳಿಕೆಯುಳ್ಳ ಸಮ್ಮತಿಯನ್ನು ಪಡೆಯುವ ಅಗತ್ಯವನ್ನು ಮುಂಗಾಣುತ್ತದೆ” ಎಂದು ಅವರು ಕೂಡಿಸಿದರು. ಹೀಗೆ ಅವರು ತಿಳಿಸಿದ್ದೇನಂದರೆ, ಕಾಟೇನಾ “ತನ್ನ ಗಂಡನನ್ನು ಅಂತಹ ಒಂದು ಶಸ್ತ್ರಕ್ರಿಯೆಗೆ ಒಳಪಡಿಸುವುದರಿಂದ ನ್ಯಾಯಸಮ್ಮತವಾಗಿ ತಡೆದಳು.”
ಅವನ ಅಥವಾ ಅವಳ ಇಚ್ಛೆಗಳೊಂದಿಗೆ ಸಂಘರ್ಷಿಸುವಂತಹ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸುವ ಒಬ್ಬ ವಯಸ್ಕನ ಹಕ್ಕನ್ನು ಈ ತೀರ್ಪು ಪುನಃ ದೃಢೀಕರಿಸುತ್ತದೆ.