“ಯೆಹೋವನಿಂದ ಒಂದು ಅದ್ಭುತವಾದ ಕೊಡುಗೆ”
ಮೇ 1, 1996ರ ಕಾವಲಿನಬುರುಜು ಪತ್ರಿಕೆಯ ಸಂಚಿಕೆಯಲ್ಲಿ, ಕ್ರೈಸ್ತ ತಾಟಸ್ಥ್ಯ ಹಾಗೂ ಯೆಹೋವನ ಮತ್ತು “ಕೈಸರ”ನ ಕಡೆಗಿನ ನಮ್ಮ ಜವಾಬ್ದಾರಿಗಳನ್ನು ಸಮತೋಲನಗೊಳಿಸುವ ವಿಧದ ಕುರಿತಾದ ಒಂದು ಗಹನವಾದ ಚರ್ಚೆಯು ಅಡಕವಾಗಿತ್ತು. (ಮತ್ತಾಯ 22:21) ಒದಗಿಸಲ್ಪಟ್ಟಿರುವ ಹೊಸ ಮಾಹಿತಿಗಾಗಿ, ಗಣ್ಯತೆಯ ಅನೇಕ ಅಭಿವ್ಯಕ್ತಿಗಳು ಕೇಳಿಬಂದಿವೆ. ಅವುಗಳಲ್ಲಿ, ಗ್ರೀಸ್ನಲ್ಲಿನ ಒಬ್ಬ ಸಾಕ್ಷಿಯಿಂದ ಬರೆಯಲ್ಪಟ್ಟು, ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಗೆ ಸಂಬೋಧಿಸಲ್ಪಟ್ಟಿರುವ ಈ ಮುಂದಿನ ಪತ್ರವು ಇದೆ:
“ಆತ್ಮಿಕವಾಗಿ ಇಷ್ಟು ಉತ್ತಮವಾಗಿ ನಮ್ಮ ಕಾಳಜಿವಹಿಸುತ್ತಿರುವುದಕ್ಕಾಗಿ, ಪ್ರಿಯರಾದ ಸಹೋದರರೆಲ್ಲರಿಗೆ ನನ್ನ ಆಳವಾದ ಕೃತಜ್ಞತೆಯನ್ನು ನಾನು ವ್ಯಕ್ತಪಡಿಸಲು ಬಯಸುತ್ತೇನೆ. ನನ್ನ ಕ್ರೈಸ್ತ ನಂಬಿಕೆಗಾಗಿ ಸೆರೆಮನೆಯಲ್ಲಿ ಸುಮಾರು ಒಂಬತ್ತು ವರ್ಷಗಳನ್ನು ಕಳೆದಿದ್ದು, ಕಾವಲಿನಬುರುಜು ಪತ್ರಿಕೆಯ ಮೇ 1, 1996ರ ಸಂಚಿಕೆಯಲ್ಲಿದ್ದ ಅದ್ಭುತಕರ ವಿಚಾರಗಳನ್ನು ನಾನು ನಿಜವಾಗಿ ಗಣ್ಯಮಾಡುತ್ತೇನೆ. (ಯೆಶಾಯ 2:4) ಇದು ಯೆಹೋವನಿಂದ ಒಂದು ಅದ್ಭುತವಾದ ಕೊಡುಗೆಯಾಗಿತ್ತು.—ಯಾಕೋಬ 1:17.
“ನಾನು ಈ ಲೇಖನಗಳಲ್ಲಿ ಆನಂದಿಸುತ್ತಿದ್ದಾಗ, ಹಿಂದಿನ ಒಂದು ಕಾವಲಿನಬುರುಜು (ಆಗಸ್ಟ್ 1, 1994, ಪುಟ 14) ಪತ್ರಿಕೆಯಲ್ಲಿನ ಒಂದು ಟಿಪ್ಪಣಿಯನ್ನು ನಾನು ನೆನಪಿಸಿಕೊಂಡೆ: ‘ಸ್ಪಷ್ಟವಾಗಿಯೆ, ವಿವೇಚನಾ ಶಕ್ತಿಯು ಅಮೂಲ್ಯವಾದೊಂದು ಗುಣವಾಗಿದೆ, ಇನ್ನೂ ಹೆಚ್ಚಾಗಿ ಯೆಹೋವನನ್ನು ಪ್ರೀತಿಸುವಂತೆ ನಮ್ಮನ್ನು ಪ್ರೇರೇಪಿಸುವ ಗುಣವಾಗಿದೆ.’ ಹೌದು ಸಹೋದರರೇ, ನಾನು ಆತನ ವಿವೇಕವನ್ನು ಸ್ಫುಟವಾಗಿ ಪ್ರತಿಬಿಂಬಿಸುವ, ಆತನ ದಯೆಯುಳ್ಳ ಮತ್ತು ಪ್ರೀತಿಪರ ಸಂಸ್ಥೆಯ ಭಾಗವಾಗಿರುವುದಕ್ಕಾಗಿ ನಾನು ಯೆಹೋವನಿಗೆ ಉಪಕಾರ ಹೇಳುತ್ತೇನೆ.—ಯಾಕೋಬ 3:17.
“ಮೇ 1ರ ಕಾವಲಿನಬುರುಜು ಪತ್ರಿಕೆಯಲ್ಲಿನ ಹೆಚ್ಚಿನ ಪ್ರಕಾಶವು ಇಲ್ಲಿ ಗ್ರೀಸ್ನಲ್ಲಿ, ವಿಶೇಷವಾಗಿ ಸೆರೆಮನೆಯಲ್ಲಿ ಹಲವಾರು ವರ್ಷಗಳನ್ನು ಕಳೆದಿರುವವರಿಂದ ಅಥವಾ ತಮ್ಮ ನಂಬಿಕೆಯ ಕಾರಣದಿಂದ ಇನ್ನೂ ಸೆರೆಮನೆಯಲ್ಲಿರುವವರಿಂದ ಚೆನ್ನಾಗಿ ಸ್ವೀಕರಿಸಲ್ಪಟ್ಟಿದೆ. ಪುನಃ ಒಮ್ಮೆ ನಿಮಗೆ ಉಪಕಾರ. ಈ ತೊಂದರೆಯುಕ್ತ ಸಮಯಗಳಲ್ಲಿ ಅಮೂಲ್ಯವಾದ ಆತ್ಮಿಕ ಆಹಾರವನ್ನು ನಮಗೆ ಒದಗಿಸುತ್ತಾ ಇರುವಂತೆ ಯೆಹೋವನು ನಿಮ್ಮನ್ನು ತನ್ನ ಆತ್ಮದಿಂದ ಬಲಪಡಿಸಲಿ.”