ಜಲಪ್ರಳಯದ ಐತಿಹ್ಯವು ಬೈಬಲ್ ವೃತ್ತಾಂತವನ್ನು ಸಮರ್ಥಿಸುತ್ತದೆ
ನೋಹನ ದಿನದ ಭೌಗೋಲಿಕ ಮಹಾ ಪ್ರಳಯವು ಒಂದು ಐತಿಹಾಸಿಕ ನಿಜತ್ವವಾಗಿದೆ. ಈ ವೃತ್ತಾಂತದ ಕಥನಗಳು ಲೋಕದ ಸುತ್ತಲಿರುವ ಅನೇಕ ವಿಭಿನ್ನ ನಾಗರಿಕತೆಗಳ ಮೌಖಿಕ ಚರಿತ್ರೆಯಲ್ಲಿ ಕಂಡುಕೊಳ್ಳಲ್ಪಡುತ್ತವೆ. ಚಾಡ್ ಎಂಬ ಆಫ್ರಿಕನ್ ದೇಶದಲ್ಲಿ, ಮುಸಾಯಿ ಪಂಗಡವು ಜಲಪ್ರಳಯವನ್ನು ಹೀಗೆ ವಿವರಿಸುತ್ತದೆ:
‘ಒಂದಾನೊಂದು ಕಾಲದಲ್ಲಿ, ಬಹುದೂರದ ಒಂದು ಸ್ಥಳದಲ್ಲಿ, ಒಂದು ಕುಟುಂಬವು ಜೀವಿಸಿತು. ಒಂದು ದಿನ, ಈ ಕುಟುಂಬದ ತಾಯಿಯು ತನ್ನ ಕುಟುಂಬದವರಿಗೆ ಪುಷ್ಕಳವಾದೊಂದು ಭೋಜನವನ್ನು ತಯಾರಿಸಲು ಬಯಸಿದಳು. ಆದುದರಿಂದ ಕಾಳನ್ನು ಹಿಟ್ಟಾಗಿ ಕುಟ್ಟಲು ತನ್ನ ಒರಳು ಹಾಗೂ ಕುಟ್ಟಣಿಯನ್ನು ಆಕೆ ತೆಗೆದುಕೊಂಡಳು. ಆ ಸಮಯದಲ್ಲಿ ಆಕಾಶವು ಈಗಿರುವುದಕ್ಕಿಂತಲೂ ಹೆಚ್ಚು ಹತ್ತಿರವಾಗಿತ್ತು. ವಾಸ್ತವದಲ್ಲಿ, ನೀವು ನಿಮ್ಮ ಕೈಯನ್ನು ಚಾಚುತ್ತಿದ್ದರೆ, ನೀವು ಅದನ್ನು ಮುಟ್ಟಸಾಧ್ಯವಿತ್ತು. ಆಕೆ ತನ್ನೆಲ್ಲಾ ಬಲದಿಂದ ಕಾಳನ್ನು ಕುಟ್ಟಿದಳು, ಮತ್ತು ಆಕೆ ಕುಟ್ಟಿದ ಕಾಳು ಬೇಗನೆ ಹಿಟ್ಟಾಗಿ ಮಾರ್ಪಟ್ಟಿತು. ಆದರೆ ಆಕೆ ಕುಟ್ಟಿದಂತೆ, ಆ ಸ್ತ್ರೀಯು ಅಜಾಗರೂಕವಾಗಿ ಕುಟ್ಟಣಿಯನ್ನು ಬಹಳ ಎತ್ತರಕ್ಕೆ ಏರಿಸಿ, ಆಕಾಶದಲ್ಲಿ ಒಂದು ತೂತನ್ನು ಮಾಡಿದಳು! ತತ್ಕ್ಷಣವೇ, ನೀರಿನ ಒಂದು ಮಹಾ ಮೊತ್ತವು ಭೂಮಿಗೆ ಬೀಳಲಾರಂಭಿಸಿತು. ಇದು ಸಾಧಾರಣ ಮಳೆಯಾಗಿರಲಿಲ್ಲ. ಇಡೀ ಭೂಮಿಯು ನೀರಿನಿಂದ ಆವರಿಸಲ್ಪಡುವ ತನಕ, ಏಳು ದಿನಗಳ ವರೆಗೆ—ಹಗಲೂ ರಾತ್ರಿ—ಮಳೆ ಸುರಿಯಿತು. ಮಳೆಯು ಸುರಿದಂತೆ, ಆಕಾಶವು ಅದು ಈಗ ಇರುವ ಸ್ಥಾನವನ್ನು—ತಲಪಲಾಗದಷ್ಟು ಎತ್ತರಕ್ಕೆ—ಮುಟ್ಟುವ ತನಕ ಮೇಲೇರಲು ತೊಡಗಿತು. ಮಾನವ ಜಾತಿಗೆ ಎಂತಹ ಒಂದು ದುರಂತ! ಆ ಸಮಯದಂದಿನಿಂದ, ನಾವು ನಮ್ಮ ಕೈಗಳಿಂದ ಆಕಾಶವನ್ನು ಮುಟ್ಟುವ ಸುಯೋಗವನ್ನು ಕಳೆದುಕೊಂಡಿದ್ದೇವೆ.’
ಸ್ವಾರಸ್ಯಕರವಾಗಿ, ಒಂದು ಭೌಗೋಲಿಕ ಜಲಪ್ರಳಯವನ್ನು ತಿಳಿಯಪಡಿಸುವ ಪುರಾತನ ವೃತ್ತಾಂತಗಳು ಲೋಕದ ಸುತ್ತಲೆಲ್ಲಾ ಕಂಡುಕೊಳ್ಳಲ್ಪಡಸಾಧ್ಯವಿದೆ. ಅಮೆರಿಕ ಭೂಖಂಡದ ಸ್ಥಳೀಯ ನಾಗರಿಕತೆಗಳು ಹಾಗೂ ಆಸ್ಟ್ರೇಲಿಯದ ಮೂಲ ನಿವಾಸಿಗಳಲ್ಲಿಯೂ ಅದರ ಕುರಿತಾಗಿ ಕಥೆಗಳಿವೆ. ವಿವರಗಳು ಭಿನ್ನವಾಗಿರಬಹುದು, ಆದರೆ ಭೂಮಿಯು ನೀರಿನಿಂದ ಆವರಿಸಲ್ಪಟ್ಟು, ಮಾನವ ನಿರ್ಮಿತ ದೋಣಿಯಲ್ಲಿ ಕೊಂಚ ಜನರು ಮಾತ್ರ ಪಾರಾದರು ಎಂಬ ವಿಚಾರವು ಹೆಚ್ಚಿನ ವೃತ್ತಾಂತಗಳಲ್ಲಿದೆ. ವ್ಯಾಪಕವಾಗಿ ಹರಡಿರುವ ಈ ಮುಖ್ಯವಿಷಯದ ಇರುವು, ಬೈಬಲಿನಲ್ಲಿ ವರದಿಸಲಾದಂತೆ ಒಂದು ಜಗದ್ವ್ಯಾಪಕ ಮಹಾ ಪ್ರಳಯವು ಖಂಡಿತವಾಗಿಯೂ ಸಂಭವಿಸಿತೆಂಬ ನಿಜತ್ವಕ್ಕೆ ಸಮರ್ಥನೆಯನ್ನು ಕೂಡಿಸುತ್ತದೆ.—ಆದಿಕಾಂಡ 7:11-20.