“ಅವರನ್ನು ಹೊರಹಾಕಬೇಡಿರಿ!”
“ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಲಿ ಇಬ್ಬರಾಗಲಿ ನಿಮ್ಮ ಬಾಗಿಲ ಗಂಟೆಯನ್ನು ಬಾರಿಸುವುದಾದರೆ, ಅವರನ್ನು ಹೊರಹಾಕಬೇಡಿರಿ!” ಎಂಬುದಾಗಿ ಕೋರೀಏರೆ ಡೇಲಾ ಸೇರಾ ಸಲಹೆ ನೀಡುತ್ತದೆ. ಆ ವಾರ್ತಾಪತ್ರವು ಉತ್ತರ ಇಟಲಿಯ ಟ್ರೇವೀಸೊದಲ್ಲಿ ಸಂಭವಿಸಿದ ಒಂದು ಘಟನಾವಳಿಯನ್ನು ಉಲ್ಲೇಖಿಸುತ್ತಿತ್ತು. ಆ ಘಟನಾವಳಿಯಲ್ಲಿ ವ್ಯಾಪಾರಿಯೊಬ್ಬನು ತನಗೊಂದು ಸಂದರ್ಶನವನ್ನು ನೀಡಿದ ಇಬ್ಬರು ಸಾಕ್ಷಿಗಳನ್ನು ಹೊರಹಾಕಿದ ಕಾರಣ, ಹತ್ತು ಲಕ್ಷಕ್ಕಿಂತಲೂ ಹೆಚ್ಚಿನ ಲೀರ (600 ಅಮೆರಿಕನ್ ಡಾಲರುಗಳಿಗಿಂತಲೂ ಹೆಚ್ಚು) ಹಣವನ್ನು ಕಳೆದುಕೊಳ್ಳುವ ಸಂಭವಕ್ಕೆ ಈಡಾದನು.
ವಾರ್ತಾಪತ್ರಕ್ಕನುಸಾರ, ಇಬ್ಬರು ಸಾಕ್ಷಿಗಳು ಈ ಮಾತುಗಳೊಂದಿಗೆ ತಮ್ಮನ್ನು ಆ ಮನುಷ್ಯನಿಗೆ ಪರಿಚಯಪಡಿಸಿಕೊಂಡರು: “ಈ ದಿನವು ನಿಮ್ಮ ಪಾಲಿಗೆ ಸುದಿನವಾಗಿದೆ. ನಾವು ಯೆಹೋವನ ಸಾಕ್ಷಿಗಳು, ಮತ್ತು ನಿಮಗೆ ಕೊಡಲು ನಮ್ಮಲ್ಲಿ ಅಮೂಲ್ಯವಾದದ್ದೇನೊ ಇದೆ.” ಆಗ, ಆ ಪ್ರತಿಕೂಲ ಮನೋಭಾವದ ವ್ಯಾಪಾರಿಯು, ಸಂದೇಶವನ್ನು ಪೂರ್ತಿಗೊಳಿಸಲು ಅವರನ್ನು ಅನುಮತಿಸದೆ, ಬಾಗಿಲನ್ನು ಮುಚ್ಚಿಬಿಟ್ಟನು.
ಆ ಮನುಷ್ಯನು ಕಿವಿಗೊಟ್ಟಿದ್ದಲ್ಲಿ, ಸಾಕ್ಷಿಗಳು ತಾವು ಉದ್ಯಾನದ ಒಂದು ಆಸನದ ಮೇಲೆ ಕಂಡುಕೊಂಡಿದ್ದ ತನ್ನ ಹಣದ ಚೀಲವನ್ನು ಹಿಂದಿರುಗಿಸಲು ತನ್ನ ಮನೆಗೆ ಬಂದಿದ್ದರೆಂದು ಅವನು ತಿಳಿದುಕೊಳ್ಳುತ್ತಿದ್ದನು. ಆದುದರಿಂದ ಸಾಕ್ಷಿಗಳಿಗೆ ಹಣದ ಚೀಲವನ್ನು, ಅದರಲ್ಲಿ ಅಡಕವಾಗಿರುವಂಥವುಗಳೊಂದಿಗೆ ಅತಿ ಸಮೀಪದ ಪೊಲೀಸ್ ಠಾಣೆಗೆ ಕೊಂಡೊಯ್ಯುವುದನ್ನು ಬಿಟ್ಟು ಅನ್ಯ ಮಾರ್ಗವಿರಲಿಲ್ಲ. ಮುಂದಿನ ದಿನ, ಪೊಲೀಸರು ಅದನ್ನು ಅದರ ನ್ಯಾಯವಾದ ಹಕ್ಕುಳ್ಳ ಯಜಮಾನನಿಗೆ ಹಿಂದಿರುಗಿಸಿದರು.
“ಆ ಇಬ್ಬರು ಅಸಫಲ [ಸಾಕ್ಷಿಗಳ] ಸನ್ನಿವೇಶದಲ್ಲಿ ಬೇರೆ ಯಾವನಾದರೂ ಇದ್ದಿದ್ದರೆ, ಅವನು ಬಹುಶಃ . . . ಹಣದ ಚೀಲದ ದೊಡ್ಡ ಮೊತ್ತವನ್ನು ಇಟ್ಟುಕೊಳ್ಳುತ್ತಿದ್ದನು. ಆದರೆ ಯಾರು ಸಂಪೂರ್ಣವಾಗಿ ಪ್ರಮಾಣಿಕರಾಗಿರಬೇಕೊ ಆ ಯೆಹೋವನ ಸಾಕ್ಷಿಗಳು ಹಾಗೆ ಮಾಡಲಿಲ್ಲ,” ಎಂಬುದಾಗಿ ಈಲ್ ಗಾಟ್ಸೆಟೀನೊ ಡೀ ಟ್ರೇವೀಸೊ ಹೇಳಿತು.
“ಸಂಪೂರ್ಣವಾಗಿ ಪ್ರಾಮಾಣಿಕರಾಗಿ”ರಲು, ಯೆಹೋವನ ಸಾಕ್ಷಿಗಳನ್ನು ಯಾವುದು ಪ್ರೇರೇಪಿಸುತ್ತದೆ? ಅದು ಯೇಸು ಕ್ರಿಸ್ತನ ಬೋಧನೆಗಳಿಗೆ ಅನುಗುಣವಾಗಿ, ದೇವರಿಗಾಗಿ ಮತ್ತು ನೆರೆಯವರಿಗಾಗಿರುವ ಅವರ ಪ್ರೀತಿಯೇ. (ಮತ್ತಾಯ 22:37-39) ಯೆಹೋವನ ಸಾಕ್ಷಿಗಳು ಮನೆಯಿಂದ ಮನೆಗೆ, ಯೆಹೋವ ದೇವರಿಂದ ವಾಗ್ದಾನಿಸಲ್ಪಟ್ಟಿರುವ ಅದ್ಭುತಕರವಾದ “ನೂತನಭೂಮಂಡಲ”ದ ಕುರಿತ ಸುವಾರ್ತೆಯನ್ನು ಪ್ರಕಟಿಸಲು ಹೋಗುವುದೂ ಈ ಕಾರಣಕ್ಕಾಗಿಯೇ. ನಿರೀಕ್ಷೆಯ ಇಂತಹ ಒಂದು ಸಂದೇಶವು, ಯಾವುದೇ ಪ್ರಾಪಂಚಿಕ ಸ್ವತ್ತಿಗಿಂತಲೂ ಬಹಳಷ್ಟು ಅಮೂಲ್ಯವಾಗಿದೆ!—2 ಪೇತ್ರ 3:13.