ಶೈಶವಾವಸ್ಥೆಯಿಂದಲೇ ಅವರಿಗೆ ತರಬೇತಿನೀಡಿರಿ
“ಭ್ರೂಣಗಳು, ಧ್ವನಿಗಳಿಗೆ ಶರೀರ ವಿಜ್ಞಾನಸಂಬಂಧವಾದ ಪ್ರತಿಕ್ರಿಯೆಗಳನ್ನು ಹೊಂದಿವೆ” ಎಂಬುದನ್ನು ಆಧುನಿಕ ಸಂಶೋಧನೆಯು ಸೂಚಿಸುತ್ತದೆ. ಯೂನಿವರ್ಸಿಟಿ ಆಫ್ ನಾರ್ತ್ ಕ್ಯಾರೊಲಿನದ ಸಂಶೋಧಕರು “ತಾಯಂದಿರು, ಜನನಕ್ಕೆ ಮೊದಲು ತಮ್ಮ ಮಕ್ಕಳಿಗೆ ಓದಿದ ಬಳಿಕ, ಆ ಭಾಗಗಳು ಪುನಃ ಓದಲ್ಪಟ್ಟಾಗ ನವಜಾತ ಶಿಶುಗಳು ಪ್ರತಿಕ್ರಿಯಿಸಿದವು ಎಂಬುದನ್ನು ಕಂಡುಕೊಂಡರು” ಎಂದು ವಿನಿಪೆಗ್ ಫ್ರೀ ಪ್ರೆಸ್ ಹೇಳುತ್ತದೆ. ಗರ್ಭಿಣಿಯರಾಗಿರುವಾಗ ಸ್ತ್ರೀಯರು ಗಟ್ಟಿಯಾಗಿ ಓದುವಾಗ, ಇದು ಮಗುವಿನಲ್ಲಿ ಒಳ್ಳೆಯ ನೈತಿಕ ಮೌಲ್ಯಗಳನ್ನು ತುಂಬಿಸಲು ಉತ್ತಮವಾಗಿ ಸಹಾಯಮಾಡಬಹುದು. ತಿಮೊಥೆಯನಿಗೆ ‘ಶೈಶವಾವಸ್ಥೆಯಿಂದಲೇ ಪವಿತ್ರ ಗ್ರಂಥಗಳ ಪರಿಚಯವಿತ್ತು’ (NW) ಎಂದು ಬೈಬಲು ಹೇಳುತ್ತದೆ. (2 ತಿಮೊಥೆಯ 3:14, 15) ಸುವ್ಯಕ್ತವಾಗಿಯೇ, ಅವನ ತಾಯಿಯೂ ಅವನ ಅಜ್ಜಿಯೂ, ಅವನಿಗೆ ಶೈಶವಾವಸ್ಥೆಯಿಂದಲೇ ತರಬೇತಿನೀಡುವುದರ ಮೌಲ್ಯವನ್ನು ಗಣ್ಯಮಾಡಿದರು—ಅದರಲ್ಲಿ ಗಟ್ಟಿಯಾಗಿ ಓದುವುದೂ ಒಳಗೂಡಿದ್ದದ್ದು ಸಂಭವನೀಯ.
ಓದುವಿಕೆಯು “ಇಂದು ನಮ್ಮ ಸಮಾಜದಲ್ಲಿ ನಮಗಿರುವ ಅತ್ಯಂತ ಪ್ರಬಲವಾದ ಜೀವನ ಕೌಶಲ”ವಾಗಿದೆ ಎಂದು ಲೇಖಕರಾದ ಜಿಮ್ ಟ್ರಲೀಸ್ ಹೇಳುತ್ತಾರೆ. ಭಾಷೆ ಮತ್ತು ಶಬ್ದಭಂಡಾರದ ಕೌಶಲಗಳು, ಗಟ್ಟಿಯಾಗಿ ಓದುವ ಮೂಲಕ ವರ್ಧಿಸಲ್ಪಡುತ್ತವೆ.
ಕಡಿಮೆಪಕ್ಷ ನಿಮ್ಮ ಶಿಶುವಿನೊಂದಿಗೆ ನೀವು ಮಾತಾಡಲಾರಂಭಿಸಿದ ಕೂಡಲೆ ಸಾಧ್ಯವಾದಷ್ಟು ಬೇಗನೆ ಗಟ್ಟಿಯಾಗಿ ಓದಲು ಪ್ರಾರಂಭಿಸುವುದು ವಿವೇಕಯುತವಾದದ್ದಾಗಿದೆ. ನಿಮ್ಮ ಅಜನಿತ ಅಥವಾ ನವಜಾತ ಮಗುವು ಆರಂಭದಲ್ಲಿ ನೀವು ಹೇಳುತ್ತಿರುವ ವಿಷಯವನ್ನು ಅರ್ಥಮಾಡಿಕೊಳ್ಳುವುದಿಲ್ಲವಾದರೂ, ಸಂಭಾವ್ಯ ದೀರ್ಘಾವಧಿಯ ಪ್ರಯೋಜನಗಳು ಸಾರ್ಥಕವಾಗಿವೆ. ಜ್ಞಾನೋಕ್ತಿ 22:6 ಹೇಳುವುದು: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.”
ಪ್ರಾಯೋಗಿಕವಾದದ್ದೂ ಪ್ರಯೋಜನಕರವಾದದ್ದೂ ಆಗಿರುವ ಯಾವುದನ್ನು ನೀವು ಓದಸಾಧ್ಯವಿದೆ? ಪ್ರತಿ ದಿನ ನಿಮ್ಮ ಮಗುವಿಗೆ ಬೈಬಲನ್ನು ಗಟ್ಟಿಯಾಗಿ ಓದಿರಿ. ಹಾಗೂ ಮಹಾ ಬೋಧಕನಿಗೆ ಕಿವಿಗೊಡುವುದು, ಬೈಬಲ್ ಕಥೆಗಳ ನನ್ನ ಪುಸ್ತಕ (ಇಂಗ್ಲಿಷ್), ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ, ಮತ್ತು ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಗಳಲ್ಲಿರುವ ಲೇಖನಗಳಂತಹ ಇತರ ಪ್ರಯೋಜನಕರ ಪ್ರಕಾಶನಗಳನ್ನು ಓದಿರಿ.
ನಿಜ, ಈ ರೀತಿಯಲ್ಲಿ ಸ್ವತಃ ನಿಮ್ಮನ್ನು ನೀಡಿಕೊಳ್ಳುವುದು ಸಮಯವನ್ನು ಒಳಗೂಡಿಸುತ್ತದೆ, ಆದರೆ ಅದು ಉತ್ತಮವಾಗಿ ಕಳೆದ ಸಮಯವಾಗಿದೆ. ನೀವು ನಿಮ್ಮ ಮಗುವಿನ ಕುರಿತಾಗಿ ಕಾಳಜಿ ವಹಿಸುತ್ತೀರಿ ಹಾಗೂ ಪ್ರೀತಿಸುತ್ತೀರಿ ಎಂಬುದನ್ನು ತೋರಿಸುವ ಒಂದು ಸ್ಪಷ್ಟವಾದ ರೀತಿಯು ಇದಾಗಿದೆ.