ವಾಚಕರಿಂದ ಪ್ರಶ್ನೆಗಳು
ಕೆಲವೊಮ್ಮೆ ಸಹೋದರರು, ದೇವರ ರಾಜ್ಯವು ಭೂಮಿಗೆ ಬರುವುದಕ್ಕಾಗಿ ಪ್ರಾರ್ಥಿಸುವುದನ್ನು ಅಥವಾ ಅದರ ಕುರಿತಾಗಿ ಮಾತಾಡುವುದನ್ನು ನಾವು ಕೇಳುತ್ತೇವೆ. ಇದು ಒಂದು ಸರಿಯಾದ ಅಭಿವ್ಯಕ್ತಿಯಾಗಿದೆಯೊ?
ಕಟ್ಟುನಿಟ್ಟಾಗಿ ಹೇಳುವುದಾದರೆ, ಇದು ವಿಷಯಗಳನ್ನು ವ್ಯಕ್ತಪಡಿಸುವ ಒಂದು ಶಾಸ್ತ್ರೀಯ ರೀತಿಯಾಗಿರುವುದಿಲ್ಲ. ದೇವರ ರಾಜ್ಯವು ಸ್ವರ್ಗೀಯವಾಗಿದೆ. ಆದುದರಿಂದ, ಅಪೊಸ್ತಲ ಪೌಲನು ಹೀಗೆ ಬರೆಯಸಾಧ್ಯವಿತ್ತು: “ನಾನು ಯಾವ ದುಷ್ಕೃತ್ಯವನ್ನೂ ಮಾಡದಂತೆ ಕರ್ತನು ನನ್ನನ್ನು ಕಾಪಾಡಿ ತನ್ನ ಬಳಿಗೆ ಪರಲೋಕ [“ಸ್ವರ್ಗೀಯ,” NW]ರಾಜ್ಯಕ್ಕೆ ಸೇರಿಸುವನು. ಯುಗಯುಗಾಂತರಗಳಲ್ಲಿಯೂ ಆತನಿಗೆ ಸ್ತೋತ್ರ. ಆಮೆನ್.”—2 ತಿಮೊಥೆಯ 4:18; ಮತ್ತಾಯ 13:44; 1 ಕೊರಿಂಥ 15:50.
ಆ ರಾಜ್ಯವು 1914ರಲ್ಲಿ ಸ್ವರ್ಗದಲ್ಲಿ ಸ್ಥಾಪಿತವಾಯಿತು, ಮತ್ತು ಅದು ಪುನರ್‌ಸ್ಥಾಪಿಸಲ್ಪಟ್ಟ ಭೂಪ್ರಮೋದವನದಲ್ಲಿ ಅಥವಾ ಬೇರೆ ಎಲ್ಲಾದರೂ ಎಂದಿಗೂ ವರ್ಗಾಯಿಸಲ್ಪಡುವುದಿಲ್ಲ. ಯೇಸು ಕ್ರಿಸ್ತನು ಆ ರಾಜ್ಯದ ರಾಜನಾಗಿದ್ದಾನೆ. ರಾಜನೋಪಾದಿ ಯೇಸುವಿಗೆ ದೇವದೂತರ ಮೇಲೆ ಅಧಿಕಾರವಿದೆ. ಆದುದರಿಂದ, ಸ್ವರ್ಗಗಳಲ್ಲಿನ ದೇವರ ಬಲಗಡೆಯು, ಅವನ ಆಳ್ವಿಕೆಗೆ ಸೂಕ್ತವಾದ ಸ್ಥಳವಾಗಿದೆ. ಸ್ವರ್ಗದಲ್ಲಿ ಅಭಿಷಿಕ್ತ ಕ್ರೈಸ್ತರು ಅವನೊಂದಿಗೆ ರಾಜರುಗಳಾಗಿಯೂ ಯಾಜಕರಾಗಿಯೂ ಜೊತೆಗೂಡುತ್ತಾರೆ.—ಎಫೆಸ 1:19-21; ಪ್ರಕಟನೆ 5:9, 10; 20:6.
ಹಾಗಾದರೆ, “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂದು ಹೇಳುವ ಕರ್ತನ ಪ್ರಾರ್ಥನೆಯ ಒಂದು ಭಾಗದಲ್ಲಿ ಕಂಡುಬರುವ ವಿಜ್ಞಾಪನೆಗಳನ್ನು, ನಾವು ಇನ್ನುಮುಂದೆ ದೇವರಿಗೆ ವ್ಯಕ್ತಪಡಿಸಬಾರದೆಂಬುದನ್ನು ಇದು ಅರ್ಥೈಸುತ್ತದೊ? (ಮತ್ತಾಯ 6:10) ಇದಕ್ಕೆ ವ್ಯತಿರಿಕ್ತವಾಗಿ, ಆ ಪ್ರಾರ್ಥನೆಯು ಸೂಕ್ತವಾದದ್ದೂ, ಇನ್ನೂ ಅರ್ಥಭರಿತವಾದದ್ದೂ ಆಗಿದೆ.
ಈ ಭೂಮಿಯ ಕಡೆಗೆ, ದೇವರ ರಾಜ್ಯವು ಇನ್ನೂ ಒಂದು ನಿರ್ಣಾಯಕವಾದ ವಿಧದಲ್ಲಿ ಕ್ರಿಯೆಗೈಯುವುದು, ಮತ್ತು ನಾವು ಪ್ರಾರ್ಥಿಸುವಾಗಲೂ ಕರ್ತನ ಪ್ರಾರ್ಥನೆಯ ನುಡಿಗಳಿಗೆ ಸದೃಶವಾದ ಅಭಿವ್ಯಕ್ತಿಗಳನ್ನು ಉಪಯೋಗಿಸುವಾಗಲೂ, ನಮ್ಮ ಮನಸ್ಸಿನಲ್ಲಿರುವುದು ಇದೇ ವಿಚಾರವಾಗಿರುತ್ತದೆ. ಉದಾಹರಣೆಗಾಗಿ, ಆ ರಾಜ್ಯವು ಎಲ್ಲಾ ರಾಷ್ಟ್ರಗಳನ್ನು ನಾಶಮಾಡಲು ‘ಬರುವುದು,’ ಮತ್ತು ಈ ಭೂಮಿಯ ಆಳ್ವಿಕೆಯನ್ನು ವಶಪಡಿಸಿಕೊಳ್ಳುವುದು ಎಂದು ದಾನಿಯೇಲ 2:44 ಮುಂತಿಳಿಸುತ್ತದೆ. ಪ್ರಕಟನೆ 21:2, ಸ್ವರ್ಗದಿಂದ ಕೆಳಗಿಳಿದು ಬರುತ್ತಿರುವ ಹೊಸ ಯೆರೂಸಲೇಮಿನ ಕುರಿತಾಗಿ ಮಾತಾಡುತ್ತದೆ. ಈ ಹೊಸ ಯೆರೂಸಲೇಮ್, ಕ್ರಿಸ್ತನ ವಧುವಾಗಲಿರುವ 1,44,000 ಮಂದಿ ಅಭಿಷಿಕ್ತ ಕ್ರೈಸ್ತರಿಂದ ರಚಿಸಲ್ಪಟ್ಟಿದೆ. ಅವರು ಯೇಸುವಿನೊಂದಿಗೆ ಆ ರಾಜ್ಯದಲ್ಲಿ ಜೊತೆಬಾಧ್ಯಸ್ಥರೂ ಆಗಿದ್ದಾರೆ. ಆದುದರಿಂದ ನಂಬಿಗಸ್ತ ಮಾನವಕುಲಕ್ಕೆ ಮಹತ್ತರವಾದ ಆಶೀರ್ವಾದಗಳು ಫಲಿಸುವುದರೊಂದಿಗೆ, ಅವರು ತಮ್ಮ ಗಮನವನ್ನು ಭೂಮಿಯ ಕಡೆಗೆ ತಿರುಗಿಸುವುದನ್ನು ಪ್ರಕಟನೆ 21:2 ವರ್ಣಿಸುತ್ತದೆ.—ಪ್ರಕಟನೆ 21:3, 4.
ಈ ಪ್ರವಾದನೆಗಳು ಹಾಗೂ ಅದ್ಭುತಕರವಾದ ಇತರ ಪ್ರವಾದನೆಗಳು ನೆರವೇರಿಸಲ್ಪಡುವ ವರೆಗೆ, “ನಿನ್ನ ರಾಜ್ಯವು ಬರಲಿ” ಎಂಬ ಯೇಸುವಿನ ಮಾತುಗಳಿಗನುಸಾರ, ಯೆಹೋವ ದೇವರಿಗೆ ಪ್ರಾರ್ಥಿಸುವುದು ಸೂಕ್ತವಾದದ್ದಾಗಿ ಮುಂದುವರಿಯುವುದು. ಆದರೆ ಆ ರಾಜ್ಯವು ಒಂದು ಅಕ್ಷರಾರ್ಥವಾದ ರೀತಿಯಲ್ಲಿ ಈ ಭೂಗ್ರಹಕ್ಕೆ ಬರುವುದಿಲ್ಲ ಎಂಬುದನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಆ ರಾಜ್ಯ ಸರಕಾರವು, ಭೂಮಿಯ ಮೇಲಲ್ಲ, ಸ್ವರ್ಗದಲ್ಲಿಯೇ ನೆಲೆಸಿರುತ್ತದೆ.
[ಪುಟ 31 ರಲ್ಲಿರುವ ಚಿತ್ರ ಕೃಪೆ]
Earth: Based on NASA photo