ಅವರು ತಮ್ಮ ಬಲವನ್ನು ಎಲ್ಲಿಂದ ಪಡೆದುಕೊಳ್ಳುತ್ತಾರೆ?
ಈ ಛಾಯಾಚಿತ್ರದಲ್ಲಿರುವ ಚಿಟ್ಟೆಯ ಕಡೆಗೆ ನೀವು ಒಂದು ಹತ್ತಿರದ ನೋಟವನ್ನು ಹರಿಸುವಲ್ಲಿ, ಅದರ ನಾಲ್ಕು ರೆಕ್ಕೆಗಳಲ್ಲಿ ಒಂದು ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಿರುವುದನ್ನು ನೀವು ನೋಡುವಿರಿ. ಆದರೂ ಚಿಟ್ಟೆಯು ಉಣ್ಣುವುದನ್ನೂ ಹಾರಾಡುವುದನ್ನೂ ಮುಂದುವರಿಸುತ್ತದೆ. ಇದು ಒಂದು ಅಪೂರ್ವವಾದ ವಿದ್ಯಮಾನವೇನೂ ಆಗಿರುವುದಿಲ್ಲ. ತಮ್ಮ ರೆಕ್ಕೆಗಳ 70 ಪ್ರತಿಶತ ಮೇಲ್ಮೈಯು ಕಾಣೆಯಾಗಿರುವುದರೊಂದಿಗೆ ಚಿಟ್ಟೆಗಳು ತಮ್ಮ ದಿನನಿತ್ಯದ ಚಟುವಟಿಕೆಯನ್ನು ನಡಿಸುವುದನ್ನು ಗಮನಿಸಲಾಗಿದೆ.
ತದ್ರೀತಿಯಲ್ಲಿ, ಅನೇಕ ಜನರು ಒಂದು ದೃಢನಿಶ್ಚಯದ ಆತ್ಮವನ್ನು ಪ್ರದರ್ಶಿಸುತ್ತಾರೆ. ತೀಕ್ಷ್ಣವಾದ ದೈಹಿಕ ಅಥವಾ ಭಾವನಾತ್ಮಕ ಸಮಸ್ಯೆಗಳಿಂದ ಕಷ್ಟಾನುಭವಿಸುತ್ತಿರುವುದಾದರೂ, ಅವರು ಬಿಟ್ಟುಕೊಡುವುದಿಲ್ಲ.—ಹೋಲಿಸಿ 2 ಕೊರಿಂಥ 4:16.
ಅಪೊಸ್ತಲ ಪೌಲನು ತನ್ನ ಮಿಷನೆರಿ ಪ್ರಯಾಣಗಳ ಸಮಯದಲ್ಲಿ ಮಹತ್ತಾದ ಕಷ್ಟಗಳನ್ನು ವೈಯಕ್ತಿಕವಾಗಿ ತಾಳಿಕೊಂಡನು. ಅವನನ್ನು ಚೆಡಿಗಳಿಂದ ತೀಡಲಾಯಿತು, ಹೊಡೆಯಲಾಯಿತು, ಕಲ್ಲೆಸೆಯಲಾಯಿತು ಮತ್ತು ಸೆರೆಮನೆಗೆ ಹಾಕಲಾಯಿತು. ಇದಕ್ಕೆ ಕೂಡಿಸಿ, ಅವನು ಒಂದು ಪ್ರಕಾರದ ದೌರ್ಬಲ್ಯದಿಂದ, ಅವನಿಗೆ ಸತತವಾಗಿ ‘ಶರೀರದಲ್ಲಿನ ಒಂದು ಶೂಲ’ವಾಗಿದ್ದ ಪ್ರಾಯಶಃ ಒಂದು ನೇತ್ರ ಸಮಸ್ಯೆಯಿಂದ ಕಷ್ಟಾನುಭವಿಸಿದನು.—2 ಕೊರಿಂಥ 12:7-9; ಗಲಾತ್ಯ 4:15.
ಅನೇಕ ವರ್ಷಗಳ ವರೆಗೆ ಖಿನ್ನತೆಯ ತೀಕ್ಷ್ಣ ಆವೃತ್ತಿಗಳೊಂದಿಗೆ ಹೋರಾಡಿದ ಒಬ್ಬ ಕ್ರೈಸ್ತ ಹಿರಿಯನಾದ ಡೇವಿಡ್ ನಂಬುವುದೇನಂದರೆ, ತನ್ನ ಚೇತರಿಸುವಿಕೆಗೆ ಯೆಹೋವನ ಬಲವು ನಿರ್ಣಾಯಕವಾಗಿತ್ತೆಂದೇ. “ಅನೇಕ ಸಲ, ಗಳಿಸಲು ಕಷ್ಟಕರವಾಗಿರುವ ಪ್ರಗತಿಯು ಕಾಣೆಯಾಗುತ್ತಿದ್ದಂತೆ ತೋರುತ್ತಿತ್ತು,” ಎಂದು ಅವನು ವಿವರಿಸುತ್ತಾನೆ. “ಅಂತಹ ನಿರುತ್ಸಾಹದ ಎದುರಿನಲ್ಲಿ, ನಾನು ಯೆಹೋವನ ಮೇಲೆ ಪೂರ್ಣವಾಗಿ ಆತುಕೊಂಡೆ, ಮತ್ತು ಆತನು ನನಗೆ ನಿಜವಾಗಿಯೂ ಆಧಾರ ಕೊಟ್ಟನು. ಒಂದು ಸಮಯದಲ್ಲಿ ನಾನು ಗಂಟೆಗಟ್ಟಲೆ ಪ್ರಾರ್ಥನೆ ಮಾಡುತ್ತಿದ್ದ ಸಂದರ್ಭಗಳಿದ್ದವು. ನಾನು ಯೆಹೋವನೊಂದಿಗೆ ಮಾತಾಡಿದಾಗ, ಏಕಾಂಗಿತನ ಮತ್ತು ನಿಷ್ಪ್ರಯೋಜಕತೆಯ ನನ್ನ ಭಾವನೆಗಳು ಇಲ್ಲವಾಗುತ್ತಿದ್ದವು. ನಾನು ಮಹತ್ತಾದ ಬಲಹೀನತೆಯ ಅವಧಿಗಳಲ್ಲಿ ಹೆಣಗಾಡಿದ್ದೇನೆ, ಆದರೆ ಯೆಹೋವನಿಂದಾಗಿ, ಈ ಬಲಹೀನತೆಯಿಂದ ಬಲವು ಬಂದಿದೆ—ಇತರರಿಗೆ ಸಹಾಯ ಮಾಡುವ ಬಲವು ಸಹ.”
ಯೆಹೋವ ದೇವರು ಪೌಲನನ್ನು ಬಲಪಡಿಸಿದನು. ಆದುದರಿಂದಲೇ ಅವನು ಹೀಗೆ ಹೇಳಸಾಧ್ಯವಿತ್ತು: “ನಾನು ಯಾವಾಗ ನಿರ್ಬಲನಾಗಿದ್ದೇನೋ ಆವಾಗಲೇ ಬಲವುಳ್ಳವನಾಗಿದ್ದೇನೆ.” (2 ಕೊರಿಂಥ 12:10) ಹೌದು, ಪೌಲನ ಬಲಹೀನತೆಗಳು, ಅವನು ದೇವದತ್ತ ಬಲದ ಮೇಲೆ ಆತುಕೊಳ್ಳುವಂತೆ ಅವನಿಗೆ ಕಲಿಸಿದವು. “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ” ಎಂದು ಅಪೊಸ್ತಲನು ಹೇಳಿದನು. (ಫಿಲಿಪ್ಪಿ 4:13) ನಿಶ್ಚಯವಾಗಿಯೂ ಯೆಹೋವನು ತನ್ನ ಸೇವಕರಿಗೆ ಶಕ್ತಿಯನ್ನು ಕೊಡುತ್ತಾನೆ.