ದೇವರು, ರಾಜ್ಯ, ಮತ್ತು ನೀವು
“ಐಯರ್ಲೆಂಡಿನಲ್ಲಿ ಚರ್ಚ್ ಮತ್ತು ರಾಜ್ಯವು ವಿಚ್ಛೇದದ ಮೇಲಿನ ತೀರ್ಮಾನದಲ್ಲಿ ಪರಸ್ಪರ ಎದುರಿಸುತ್ತದೆ.”
ದ ನ್ಯೂ ಯಾರ್ಕ್ ಟೈಮ್ಸ್‌ನಲ್ಲಿನ ಈ ತಲೆಬರಹವು, ಇಂದು ಜನರು, ರಾಜ್ಯವು ಬಯಸುವಂತಹ ಮತ್ತು ತಮ್ಮ ಚರ್ಚ್ ಕಲಿಸುವಂತಹ ವಿಷಯದ ನಡುವಿನ ಒಂದು ಆಯ್ಕೆಯೊಂದಿಗೆ ಹೇಗೆ ಎದುರಿಸಲ್ಪಡಬಹುದು ಎಂಬುದನ್ನು ದೃಷ್ಟಾಂತಿಸುತ್ತದೆ.
ಆ ಲೇಖನವು ತಿಳಿಸಿದ್ದು: “ವಿಚ್ಛೇದದ ಮೇಲಿನ ತನ್ನ ಸಾಂವಿಧಾನಿಕ ನಿಷೇಧವನ್ನು ತೆಗೆದುಹಾಕಬೇಕೋ ಬೇಡವೋ ಎಂಬ ತೀರ್ಮಾನವನ್ನು ತೆಗೆದುಕೊಳ್ಳುವ ಒಂದು ತಿಂಗಳಿಗಿಂತ ಕಡಿಮೆ ಸಮಯದೊಂದಿಗೆ, ರೋಮನ್ ಕ್ಯಾಥೊಲಿಕ್ ಐಯರ್ಲೆಂಡ್ ತನ್ನ ಸರಕಾರ ಮತ್ತು ತನ್ನ ಚರ್ಚಿನ ನಾಯಕರ ನಡುವೆ ಒಂದು ಅಪರೂಪದ ಸಂಘಟನೆಯನ್ನು ನೋಡುತ್ತಿದೆ.” ರಾಜ್ಯವು ವಿಚ್ಛೇದದ ಮೇಲಿನ ನಿಷೇಧದ ತೆಗೆದುಹಾಕುವಿಕೆಯನ್ನು ಪ್ರಸ್ತಾಪಿಸಿತು, ಆದರೆ ಕ್ಯಾಥೊಲಿಕ್ ಚರ್ಚ್, ವಿಚ್ಛೇದ ಮತ್ತು ಪುನರ್‌ವಿವಾಹವನ್ನು ಬಲವಾಗಿ ವಿರೋಧಿಸುತ್ತದೆ. ಐರಿಷ್ ಕ್ಯಾಥೊಲಿಕರು, ಚರ್ಚ್ ಮತ್ತು ರಾಜ್ಯದಲ್ಲಿ ಒಂದನ್ನು ಆರಿಸಬೇಕಾಗಿತ್ತು. ಅಂತಿಮವಾಗಿ, ರಾಜ್ಯವು ಕಿರುಅಂಚಿನ ಜಯಗಳಿಸಿತು.
ಹೆಚ್ಚು ನಾಟಕೀಯವಾಗಿ, ಉತ್ತರ ಐಯರ್ಲೆಂಡಿನಲ್ಲಿ ಅನೇಕ ವರ್ಷಗಳ ವರೆಗೆ ಜನರು ರಾಷ್ಟ್ರೀಯ ಪರಮಾಧಿಕಾರದ ಕುರಿತಾದ ಒಂದು ಕಟು ಸಂಘರ್ಷವನ್ನು ಎದುರಿಸಿದ್ದಾರೆ. ಅನೇಕರು ಕೊಲ್ಲಲ್ಪಟ್ಟಿದ್ದಾರೆ. ರೋಮನ್ ಕ್ಯಾಥೊಲಿಕರು ಮತ್ತು ಪ್ರಾಟೆಸ್ಟಂಟರು ಯಾವ ರಾಜ್ಯಕ್ಕೆ ಅಧೀನರಾಗಬೇಕೆಂಬುದರ ಮೇಲೆ ವಿರೋಧಿಸುವ ನೋಟಗಳನ್ನು ಹೊಂದಿರುತ್ತಾರೆ: ಉತ್ತರ ಐಯರ್ಲೆಂಡಿನಲ್ಲಿ ಮುಂದುವರಿದ ಬ್ರಿಟಿಷ್ ಆಳಿಕೆ ಅಥವಾ ಇಡೀ ಐಯರ್ಲೆಂಡ್‌ಗಾಗಿ ಒಂದು ಕೇಂದ್ರೀಕೃತ ಸರಕಾರ.
ತದ್ರೀತಿಯಲ್ಲಿ, ಯಾವುದು ಯುಗಸ್ಲಾವಿಯಾ ಆಗಿತ್ತೋ ಅಲ್ಲಿ, ಕ್ಯಾಥೊಲಿಕ್ ಮತ್ತು ಆರ್ತೊಡಾಕ್ಸ್‌ರನ್ನು ಒಳಗೊಂಡು, ವಿಭಿನ್ನ ಧರ್ಮಗಳ ಸದಸ್ಯರು, ಕ್ಷೇತ್ರಕ್ಕಾಗಿ ಹೋರಾಟದಲ್ಲಿ ಹೋರಾಡಬೇಕೆಂಬುದನ್ನು ಆಳುತ್ತಿದ್ದ ಅಧಿಕಾರಿಗಳು ಅವಶ್ಯಪಡಿಸಿದ್ದಾರೆ. ಸರಾಸರಿ ನಾಗರಿಕರಿಗಾಗಿ, ಅವರ ಪ್ರಥಮ ಕರ್ತವ್ಯವು ಏನಾಗಿತ್ತು? ರಾಜ್ಯವನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುತ್ತಿದ್ದವರನ್ನು ಅವರು ಹಿಂಬಾಲಿಸಬೇಕಿತ್ತೋ, ಅಥವಾ “ನರಹತ್ಯಮಾಡಬಾರದು, . . . ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂದು ಹೇಳುವ ದೇವರಿಗೆ ಅವರು ವಿಧೇಯರಾಗಬೇಕಿತ್ತೋ?—ರೋಮಾಪುರ 13:9.
ಈ ರೀತಿಯ ಪರಿಸ್ಥಿತಿಯು ನಿಮ್ಮನ್ನೆಂದೂ ಬಾಧಿಸದೆಂದು ನೀವು ನೆನಸಬಹುದು. ಆದರೆ ಅದು ಬಾಧಿಸಸಾಧ್ಯವಿದೆ. ವಾಸ್ತವದಲ್ಲಿ, ಅದು ಈಗಲೂ ನಿಮಗೆ ಆಸ್ಥೆಗೊಳಪಡಿಸುವ ವಿಷಯವಾಗಿರಬಹುದು. ದೇವತಾಶಾಸ್ತ್ರಜ್ಞನಾದ ಆಸ್ಕರ್ ಕಲ್‌ಮ್ಯಾನ್, ದ ಸ್ಟೇಟ್ ಇನ್ ದ ನ್ಯೂ ಟೆಸ್ಟಮೆಂಟ್ ಎಂಬ ತನ್ನ ಪುಸ್ತಕದಲ್ಲಿ, “ಆಧುನಿಕ ಕ್ರೈಸ್ತರು ಸರ್ವಾಧಿಕಾರಿ ಸರಕಾರಗಳಿಂದ ಬೆದರಿಸಲ್ಪಟ್ಟಾಗ, ಹತಾಶೆಯ ಪರಿಸ್ಥಿತಿಗಳಲ್ಲಿ ಮಾಡಲೇಬೇಕಾದ ಅಥವಾ ಮಾಡಲು ಕರೆಕೊಡಲ್ಪಡಬಹುದಾದ ಜೀವಮರಣದ ನಿರ್ಣಯಗಳ” ಕುರಿತಾಗಿ ಮಾತಾಡುತ್ತಾನೆ. ಆದಾಗಲೂ, “ಪ್ರತಿಯೊಬ್ಬ ಕ್ರೈಸ್ತನೂ—‘ಸಾಮಾನ್ಯ,’ ‘ದೈನಂದಿನ’ ಎನ್ನುವ ಪರಿಸ್ಥಿತಿಗಳಡಿಯಲ್ಲಿ ಜೀವಿಸುತ್ತಿರುವ ಕ್ರೈಸ್ತನೂ—ಅವನು ಕೇವಲ ಒಬ್ಬ ಕ್ರೈಸ್ತನಾಗಿದ್ದೇನೆ ಎಂಬ ಕಾರಣಕ್ಕಾಗಿ ಅವನಿಗೆ ಎದುರಾಗುವ ಒಂದು ಗಂಭೀರ ಸಮಸ್ಯೆಯನ್ನು ಎದುರಿಸುವ ಮತ್ತು ಉತ್ತರಿಸುವ, ಅಷ್ಟೇ ವಾಸ್ತವವಾದ ಮತ್ತು ಪ್ರಮುಖವಾದ ಜವಾಬ್ದಾರಿಯ” ಕುರಿತಾಗಿಯೂ ಅವನು ಮಾತಾಡುತ್ತಾನೆ.
ಆದುದರಿಂದ ಧರ್ಮ ಮತ್ತು ರಾಜ್ಯದ ನಡುವಿನ ಸಂಬಂಧವು ಇಂದು ಕ್ರೈಸ್ತರಿಗೆ ಆಸಕ್ತಿಯ ವಿಷಯವಾಗಿರಬೇಕೋ? ಅದು ನಿಶ್ಚಯವಾಗಿಯೂ ಆಸಕ್ತಿಯ ವಿಷಯವಾಗಿರತಕ್ಕದ್ದು. ಅತಿ ಆರಂಭದ ಸಮಯಗಳಿಂದಲೂ, ಕ್ರೈಸ್ತರು ಐಹಿಕ ಅಧಿಕಾರಿಗಳ ಕುರಿತಾಗಿ ಒಂದು ಸಮತೂಕದ ನೋಟವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಅವರ ನಾಯಕನಾದ ಯೇಸು ಕ್ರಿಸ್ತನು, ರೋಮನ್ ರಾಜ್ಯದಿಂದ ತೀರ್ಪು ಮಾಡಲ್ಪಟ್ಟನು, ಖಂಡಿಸಲ್ಪಟ್ಟನು ಮತ್ತು ಹತಿಸಲ್ಪಟ್ಟನು. ಆತನ ಶಿಷ್ಯರು ರೋಮನ್ ಸಾಮ್ರಾಜ್ಯದೆಡೆಗಿನ ಅವರ ಕರ್ತವ್ಯಗಳೊಂದಿಗೆ ತಮ್ಮ ಕ್ರೈಸ್ತ ಹಂಗುಗಳನ್ನು, ಸರಿಹೊಂದಿಸಿಕೊಳ್ಳಬೇಕಾಗಿತ್ತು. ಹೀಗಿರುವುದರಿಂದ, ಅಧಿಕಾರಿಗಳೊಂದಿಗಿನ ಅವರ ಸಂಬಂಧದ ಕುರಿತಾಗಿರುವ ಒಂದು ಪುನರ್ವಿಮರ್ಶೆಯು, ಇಂದು ಕ್ರೈಸ್ತರಿಗಾಗಿ ನಿರ್ದೇಶನಗಳನ್ನು ಒದಗಿಸುವುದು.
[ಪುಟ 3 ರಲ್ಲಿರುವ ಚಿತ್ರ ಕೃಪೆ]
Tom Haley/Sipa Press