ನಂಬಿಕೆಯು ಅವನನ್ನು ಕ್ರಿಯೆಗೈಯುವಂತೆ ಪ್ರಚೋದಿಸಿತು
ಇಸ್ರಾಯೇಲ್ ಜನಾಂಗವನ್ನು ಐಗುಪ್ತದ ಬಂದಿವಾಸದಿಂದ ಮುನ್ನಡಿಸುವಂತೆ ಯೆಹೋವನು ಮೋಶೆಯನ್ನು ನಿಯೋಜಿಸಿದಾಗ, ಆರಂಭದಲ್ಲಿ ಮೋಶೆಯು ಹೀಗೆ ಹೇಳುವ ಮೂಲಕ, ತನ್ನನ್ನು ಆ ಕೆಲಸದಿಂದ ವಿಮುಕ್ತಗೊಳಿಸುವಂತೆ ಕೇಳಿಕೊಂಡನು: “ಸ್ವಾಮೀ, ನಾನು ಮೊದಲಿನಿಂದಲೂ ನೀನು ದಾಸನ ಸಂಗಡ ಮಾತಾಡಿದ ಮೇಲೆಯೂ ವಾಕ್ಚಾತುರ್ಯವಿಲ್ಲದವನು; ನನ್ನ ಮಾತೂ ನಾಲಿಗೆಯೂ ಮಂದವಾಗಿವೆ.” (ವಿಮೋಚನಕಾಂಡ 4:10) ಹೌದು, ಅಂತಹ ಅತಿ ಮಹತ್ತಾದ ನೇಮಕವನ್ನು ನಿರ್ವಹಿಸಲು ತಾನು ಅರ್ಹನೆಂದು ಮೋಶೆಗೆ ಅನಿಸಲಿಲ್ಲ.
ತದ್ರೀತಿಯಲ್ಲಿ ಇಂದು, ಆಗಿಂದಾಗ್ಗೆ ಯೆಹೋವನ ಸೇವಕರಲ್ಲಿ ಅನೇಕರು, ತಮಗೆ ನೇಮಿಸಲ್ಪಟ್ಟಿರುವ ಕರ್ತವ್ಯಗಳನ್ನು ಪೂರೈಸಲು ತಾವು ಕೊರತೆಯುಳ್ಳವರಾಗಿದ್ದೇವೆಂಬುದಾಗಿ ಭಾವಿಸುತ್ತಾರೆ. ಉದಾಹರಣೆಗಾಗಿ, ಥಿಯೊಡೋರ್ ಎಂಬ ಹೆಸರಿನ ಕ್ರೈಸ್ತ ಮೇಲ್ವಿಚಾರಕನೊಬ್ಬನು ಹೀಗೆ ವಿವರಿಸುತ್ತಾನೆ: “ನಾನು ಮಾಡುವಂತೆ ಯೆಹೋವನು ಕೇಳಿಕೊಳ್ಳುವ ಎಲ್ಲಾ ವಿಷಯಗಳಲ್ಲಿ, ಕ್ಷೇತ್ರ ಶುಶ್ರೂಷೆಯು ತೀರ ಕಷ್ಟಕರವಾದದ್ದಾಗಿದೆ. ನಾನು ಚಿಕ್ಕವನಿದ್ದಾಗ, ಮನೆ ಬಾಗಿಲಿನ ತನಕ ಬೇಗನೆ ನಡೆದುಕೊಂಡುಹೋಗುತ್ತಿದ್ದೆ, ಬಾಗಿಲ ಗಂಟೆಯನ್ನು ಒತ್ತುವವನಂತೆ ನಟನೆಮಾಡುತ್ತಾ, ಯಾರೂ ನನ್ನನ್ನು ನೋಡುವುದಿಲ್ಲ ಅಥವಾ ಕೇಳಿಸಿಕೊಳ್ಳುವುದಿಲ್ಲ ಎಂದು ಆಶಿಸುತ್ತಾ ಬೇಗನೆ ಅಲ್ಲಿಂದ ಹೊರಟುಬರುತ್ತಿದ್ದೆ. ನಾನು ದೊಡ್ಡವನಾದಂತೆ, ಹಾಗೆ ಮಾಡುವುದನ್ನು ನಿಲ್ಲಿಸಿದೆನಾದರೂ, ಮನೆಯಿಂದ ಮನೆಗೆ ಹೋಗುವ ಆಲೋಚನೆಯು ನನ್ನನ್ನು ಶಾರೀರಿಕವಾಗಿ ಅಸ್ವಸ್ಥನನ್ನಾಗಿ ಮಾಡಿತು. ಇಂದಿನ ತನಕವೂ ಶುಶ್ರೂಷೆಗೆ ಹೋಗುವ ಮೊದಲು ನಾನು ಜುಗುಪ್ಸೆಪಡುತ್ತೇನೆ, ಆದರೆ ಹೇಗೂ ಹೋಗುತ್ತೇನೆ.”
ಅಂತಹ ಭಯಗಳನ್ನು ನಿಭಾಯಿಸಲು, ಮೋಶೆಯನ್ನು ಹಾಗೂ ಥಿಯೊಡೋರ್ನಂತಹ ಆಧುನಿಕ ದಿನದ ಸಾಕ್ಷಿಗಳನ್ನು ಸಮರ್ಥರನ್ನಾಗಿ ಮಾಡಿದ್ದು ಯಾವುದು? ಬೈಬಲು ಉತ್ತರಿಸುವುದು: “ಅವನು [ಮೋಶೆಯು] . . . ಐಗುಪ್ತದೇಶವನ್ನು ಬಿಟ್ಟುಹೋದದ್ದು ನಂಬಿಕೆಯಿಂದಲೇ. . . . ಅವನು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.”—ಇಬ್ರಿಯ 11:27.
ವಾಸ್ತವವಾಗಿ, ಯೆಹೋವನಲ್ಲಿ ನಂಬಿಕೆಯನ್ನು ಅಭ್ಯಾಸಿಸುವ ಮೂಲಕ, ಮೋಶೆಯು ತನ್ನ ಕೊರತೆಯ ಭಾವನೆಗಳನ್ನು ಜಯಿಸಲು ಮತ್ತು ನ್ಯಾಯಾಧೀಶ, ಪ್ರವಾದಿ, ಜನಾಂಗೀಯ ನಾಯಕ, ನಿಯಮದೊಡಂಬಡಿಕೆಯ ಮಧ್ಯಸ್ಥಗಾರ, ಆಜ್ಞಾಪಕ, ಇತಿಹಾಸಕಾರ, ಮತ್ತು ಬೈಬಲ್ ಬರಹಗಾರನೋಪಾದಿ ತನ್ನ ನೇಮಿತ ಕರ್ತವ್ಯಗಳನ್ನು ಪೂರೈಸಲು ಶಕ್ತನಾದನು.
ತದ್ರೀತಿಯಲ್ಲಿ, ಮೋಶೆಯಂತೆ ನಂಬಿಕೆಯು ನಮ್ಮಲ್ಲಿರುವಾಗ, ನಾವು ‘ಅದೃಶ್ಯನಾಗಿರುವಾತನನ್ನು ದೃಷ್ಟಿಸುವವರೋ’ ಎಂಬಂತೆ ನಡೆಯುವೆವು. ಅಂತಹ ನಂಬಿಕೆಯು, ನಮ್ಮ ಕ್ರೈಸ್ತ ಜವಾಬ್ದಾರಿಗಳಿಗೆ—ನಾವು ಕೊರತೆಯುಳ್ಳವರಾಗಿದ್ದೇವೆಂಬ ಅನಿಸಿಕೆಯು ನಮಗಾಗಬಹುದಾಗಿರುವಾಗಲೂ—ಹೆಗಲುಕೊಡಲು ನಮ್ಮನ್ನು ಶಕ್ತರನ್ನಾಗಿ ಮಾಡುತ್ತಾ ಧೈರ್ಯವನ್ನು ಪ್ರೇರೇಪಿಸುತ್ತದೆ.