ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಹಿಂದಿನ ಶತ್ರುಗಳು ಯೆಹೋವನನ್ನು ಸೇವಿಸುವದರಲ್ಲಿ ಐಕ್ಯಗೊಳಿಸಲ್ಪಡುತ್ತಾರೆ
“ಯೆಹೋವನ ಸಾಕ್ಷಿಗಳ ಕುರಿತಾಗಿ ನಾನು ಪ್ರಥಮವಾಗಿ ಏನನ್ನಾದರೂ ಕೇಳಿದಂತಹ ಸಮಯವು, ನಾನು ಬಾಸ್ನಿಯದಲ್ಲಿ ಒಬ್ಬ ಶಸ್ತ್ರಸಜ್ಜಿತ ಕಾವಲುಗಾರನಾಗಿ ಸೇವೆಸಲ್ಲಿಸುತ್ತಿದ್ದ ಸಮಯದಲ್ಲೇ ಆಗಿತ್ತು” ಎಂದು ಬ್ರಾಂಕೊ ವಿವರಿಸುತ್ತಾನೆ.a
ಗಾಯಗೊಂಡವರು ಉಪಚರಿಸಲ್ಪಡುತ್ತಿದ್ದ ಆಸ್ಪತ್ರೆಯೊಂದರಲ್ಲಿ ಬ್ರಾಂಕೊ ಪಹರೆಯ ಕೆಲಸದಲ್ಲಿದ್ದನು. ವೈದ್ಯರಲ್ಲಿ ಒಬ್ಬನು ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸುತ್ತಿದ್ದನು, ಮತ್ತು ಒಂದು ನೈಟ್ ಷಿಫ್ಟ್ನ ಸಮಯದಲ್ಲಿ, ತಾನು ಬೈಬಲಿನ ಕುರಿತಾಗಿ ಕಲಿತಿದ್ದ ವಿಷಯದಲ್ಲಿ ಹೆಚ್ಚಿನ ವಿಷಯವನ್ನು ಅವನು ಬ್ರಾಂಕೊಗೆ ವಿವರಿಸಿದನು.
ಆ ರಾತ್ರಿ ಬ್ರಾಂಕೊ ಏನನ್ನು ಕೇಳಿದನೋ ಅದು ಅವನನ್ನು ಎಷ್ಟು ಪ್ರಚೋದಿಸಿತೆಂದರೆ ಅವನು ತನ್ನ ಶಸ್ತ್ರಗಳನ್ನು ಆ ಕೂಡಲೇ ಬಿಟ್ಟುಬಿಟ್ಟನು. ಹೆಚ್ಚಿನ ವಿಷಯವನ್ನು ಕಲಿಯಲು ಬಯಸುತ್ತಾ, ಅವನು ಸಾಕ್ಷಿಗಳನ್ನು ಸಂಪರ್ಕಿಸಿದನು. ಸ್ವಲ್ಪ ಸಮಯದ ನಂತರ ಇನ್ನೊಂದು ಯೂರೋಪಿಯನ್ ದೇಶಕ್ಕೆ ಸ್ಥಳಾಂತರಿಸಿದ ಬಳಿಕ, ಬ್ರಾಂಕೊ ಒಂದು ರಾಜ್ಯ ಸಭಾಗೃಹವನ್ನು ಹುಡುಕಿ, ಯೆಹೋವನ ಸಾಕ್ಷಿಗಳ ಯುಗೊಸ್ಲಾವಿಯದ ಸಭೆಯ ಕೂಟವೊಂದಕ್ಕೆ ಹಾಜರಾದನು. ಬ್ರಾಂಕೊ ಸ್ಲಾಬಾಡಾನ್ನನ್ನು ಸಂಧಿಸಿದ್ದು ಅಲ್ಲಿಯೇ.
ಸ್ಲಾಬಾಡಾನ್ ಸಹ ಬ್ರಾಂಕೊವಿನಂತೆ ಅದೇ ಯುದ್ಧದಲ್ಲಿ ಒಬ್ಬ ಸ್ವಯಂಸೇವಕನಾಗಿ ಸೇವೆ ಸಲ್ಲಿಸಿದ್ದನು—ಆದರೆ ವಿರುದ್ಧ ಪಕ್ಷದಲ್ಲಿ. ಸ್ಲಾಬಾಡಾನ್ನು ಕ್ರೊಆಟರ ವಿರುದ್ಧ ಸರ್ಬ್ ಜನರಿಗಾಗಿ ಹೋರಾಡಿದನು. ಅವರಿಬ್ಬರೂ ಸಂಧಿಸುವಷ್ಟರಲ್ಲಿ, ಸ್ಲಾಬಾಡಾನ್ ಯೆಹೋವನ ಒಬ್ಬ ದೀಕ್ಷಾಸ್ನಾನಿತ ಸಾಕ್ಷಿಯಾಗಿದ್ದನು. ಅವನು, ತನ್ನ ಹಿಂದಿನ ಶತ್ರುವಾಗಿದ್ದ ಬ್ರಾಂಕೊನೊಂದಿಗೆ ಬೈಬಲನ್ನು ಅಭ್ಯಾಸಿಸಲು ಸಿದ್ಧನಾಗಿದ್ದನು. ಅಭ್ಯಾಸವು ಪ್ರಗತಿಗೊಂಡಂತೆ, ಬ್ರಾಂಕೊ ಯೆಹೋವನ ಕುರಿತಾಗಿ ಹೆಚ್ಚನ್ನು ಕಲಿತನು ಮತ್ತು ದೇವರಿಗಾಗಿರುವ ಅವನ ಪ್ರೀತಿಯು ಬೆಳೆಯಿತು. ತನ್ನ ಜೀವಿತವನ್ನು ಸೃಷ್ಟಿಕರ್ತನಿಗೆ ಸಮರ್ಪಿಸುವಂತೆ ಇದು ಬ್ರಾಂಕೊನನ್ನು ಪ್ರಚೋದಿಸಿತು. ಅಕ್ಟೋಬರ್ 1993ರಲ್ಲಿ ಆತನು ತನ್ನ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಿದನು.
ಸ್ಲಾಬಾಡಾನ್ ಒಬ್ಬ ಯೆಹೋವನ ಸಾಕ್ಷಿಯಾದದ್ದು ಹೇಗೆ? ಅವನು ಬಾಸ್ನಿಯದಲ್ಲಿನ ಯುದ್ಧ ಕ್ಷೇತ್ರವನ್ನು ಸ್ವಲ್ಪ ಸಮಯದ ಮುಂಚೆಯೇ ಬಿಟ್ಟುಬಿಟ್ಟಿದ್ದನು. ಅವನು ಸಾಕ್ಷಿಗಳ ಕೆಲವು ಪ್ರಕಾಶನಗಳನ್ನು ಓದಿದ್ದನು, ಆದರೆ 1992ರ ಆದಿಭಾಗದಲ್ಲಿ ಇಬ್ಬರು ಸಾಕ್ಷಿಗಳು ಅವನ ಮನೆಯನ್ನು ಸಂದರ್ಶಿಸಿದಾಗ ಮಾತ್ರವೇ ದೇವರ ವಾಕ್ಯದಲ್ಲಿನ ಅವನ ಆಸಕ್ತಿಯು ಬೆಳೆಯಿತು. ಸ್ಲಾಬಾಡಾನ್ನನ್ನು ಸಂದರ್ಶಿಸಿ, ಆತನೊಂದಿಗೆ ಬೈಬಲನ್ನು ಅಭ್ಯಾಸಿಸಲು ನೀಡುವಿಕೆಯನ್ನು ಮಾಡಿದವರು ಯಾರು? ಯಾವನು ಬಾಸ್ನಿಯದಿಂದಲೇ ಬಂದಿದ್ದರೂ, ಮುಸ್ಲಿಮನಾಗಿ ಬೆಳೆಸಲ್ಪಟ್ಟಿದ್ದನೊ ಆ ಮೂಯೋ ಎಂಬವನೇ. ಬೈಬಲ್ ಅಭ್ಯಾಸವು ಪ್ರಗತಿಗೊಂಡಂತೆ, ಒಮ್ಮೆ ಶತ್ರುಗಳಾಗಿದ್ದ, ಮೂಯೋ ಮತ್ತು ಸ್ಲಾಬಾಡಾನ್, ಪರಸ್ಪರ ನಂಬಿಕೆಯನ್ನು ಬಲಪಡಿಸಲು ಪ್ರತಿ ದಿನ ಜೊತೆಯಾಗಿ ಸಮಯವನ್ನು ಕಳೆದರು.
ಹಿಂದಿನ ಯುಗೊಸ್ಲಾವಿಯದಲ್ಲಿನ ಯುದ್ಧವು ನೂರಾರು ಸಾವಿರ ಜನರ ಜೀವಗಳನ್ನು ತೆಗೆದುಕೊಂಡಿದೆ. ಆದರೆ ಬ್ರಾಂಕೊ, ಸ್ಲಾಬಾಡಾನ್ ಮತ್ತು ಮೂಯೋ, ಈಗ ಯೆಹೋವನ ಸಾಕ್ಷಿಗಳ ಒಂದೇ ಸಭೆಯಲ್ಲಿ ಸುವಾರ್ತೆಯ ಪೂರ್ಣ ಸಮಯದ ಪ್ರಚಾರಕರಾಗಿದ್ದಾರೆ. ಅವರು ಕುಲಸಂಬಂಧಿತ ಮತ್ತು ಜಾತೀಯ ಕಲಹವನ್ನು ಜಯಿಸಿದ್ದಾರೆ, ಮತ್ತು ಈಗ ತಮ್ಮ ಸೃಷ್ಟಿಕರ್ತನಾದ ಯೆಹೋವನಿಗೆ ಅಧೀನರಾಗುತ್ತಿರುವಾಗ ಶಾಂತಿಯನ್ನು ಹುಡುಕುತ್ತಾರೆ.
ಆದರೆ ಅಂತಹ ಬದಲಾವಣೆಗಳನ್ನು ತಂದಂತಹ ಸಂಗತಿಯು ಯಾವುದು? ಅದು ಯೆಹೋವನಿಗಾಗಿರುವ ಅವರ ಪ್ರೀತಿ, ಬೈಬಲಿಗಾಗಿ ಅವರ ಗೌರವ ಮತ್ತು ತಮ್ಮ ಜೀವಿತಗಳಲ್ಲಿ ಬೈಬಲ್ ಸತ್ಯವನ್ನು ಅನ್ವಯಿಸಿಕೊಳ್ಳಲು ಅವರಿಗಿರುವ ಆತುರತೆಯಾಗಿದೆ. ಪವಿತ್ರ ಶಾಸ್ತ್ರಗಳು ಹೇಳುವಂತೆ “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, . . . ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.”—ಇಬ್ರಿಯ 4:12.
[ಪಾದಟಿಪ್ಪಣಿ]
a ಕೃತಕ ಹೆಸರುಗಳು ಬಳಸಲ್ಪಟ್ಟಿವೆ.