ನೀವು ರಕ್ಷಿಸಲ್ಪಟ್ಟಿದ್ದೀರೊ?
ಸಂತೆಯಲ್ಲಿ ಒಬ್ಬ ಮನುಷ್ಯನು ಜಾನಿಯನ್ನು ನಿಲ್ಲಿಸಿ ಹೀಗೆ ಕೇಳಿದಾಗ, ಅವನು ಹತ್ತು ವರ್ಷ ಪ್ರಾಯದವನಾಗಿದ್ದನು: “ಯುವಕನೇ, ನೀನು ಯೇಸು ಕ್ರಿಸ್ತನನ್ನು ನಿನ್ನ ಕರ್ತನಾಗಿಯೂ ವಿಮೋಚಕನಾಗಿಯೂ ಸ್ವೀಕರಿಸುತ್ತೀಯೊ?” ಅದು ಜಾನಿಗೆ ಸ್ವಲ್ಪ ಮಟ್ಟಿಗೆ ವಿಚಿತ್ರವಾದೊಂದು ಪ್ರಶ್ನೆಯಾಗಿ ಧ್ವನಿಸಿತು, ಯಾಕೆಂದರೆ ಅವನು ಯಾವಾಗಲೂ ಯೇಸುವಿನಲ್ಲಿ ನಂಬಿಕೆಯನ್ನಿಟ್ಟಿದ್ದನು. ಆದುದರಿಂದ ಅವನು ಉತ್ತರಿಸಿದ್ದು, “ಖಂಡಿತವಾಗಿಯೂ, ನಾನು ನಂಬುತ್ತೇನೆ.” “ಕರ್ತನನ್ನು ಸ್ತುತಿಸಿರಿ!” ಎಂದು ಆ ಮನುಷ್ಯನು ಎಲ್ಲರಿಗೆ ಕೇಳಿಸುವಂತೆ ಗಟ್ಟಿಯಾಗಿ ಕೂಗಿದನು. “ಕ್ರಿಸ್ತನಿಗಾಗಿ ಇನ್ನೊಂದು ಪ್ರಾಣವು ರಕ್ಷಿಸಲ್ಪಟ್ಟಿದೆ!”
ರಕ್ಷಣೆಯು ನಿಜವಾಗಿ ಅಷ್ಟು ಸರಳವೊ? ಜಾನಿ ಆ ಮಾತುಗಳನ್ನು ಹೇಳಿದ ಕ್ಷಣದಂದಿನಿಂದ—ಅವನು ತನ್ನ ಉಳಿದ ಜೀವಮಾನದಲ್ಲಿ ಏನನ್ನು ಮಾಡುವನೋ ಅದರ ಲಕ್ಷ್ಯವಿಲ್ಲದೆ—“ರಕ್ಷಿಸಲ್ಪಟ್ಟ”ನೊ? ಅನೇಕ ಪ್ರಾಮಾಣಿಕ ಜನರು ಹೌದು ಎಂದು ಉತ್ತರಿಸುವರು. ಕೆಲವು ಧಾರ್ಮಿಕ ಕಿರುಹೊತ್ತಗೆಗಳು, ನೀವು ಅದನ್ನು ನೆನಪಿನಲ್ಲಿಡಲು ಸಾಧ್ಯವಾಗುವಂತೆ, ನೀವು “ರಕ್ಷಿಸಲ್ಪಟ್ಟ” ಆ ತಾರೀಖನ್ನು ಬರೆದಿಡುವಂತೆ ಹೇಳುತ್ತವೆ.
“ಕ್ರಿಸ್ತನಲ್ಲಿಟ್ಟ ಸರಳ ನಂಬಿಕೆಯ ಆ ಕ್ಷಣದಲ್ಲಿ . . . ಒಬ್ಬನ ಅದೃಷ್ಟವು ಶಾಶ್ವತವಾಗಿ ತೀರ್ಮಾನಿಸಲ್ಪಡುತ್ತದೆ” ಎಂದು ಒಬ್ಬ ವೈದಿಕನು ಬರೆದನು. ರಕ್ಷಣೆಯು ಅವಲಂಬಿಸಿರುವುದು “ನಂಬಿಕೆಯ ಮುಂದುವರಿಸುವಿಕೆಯ ಮೇಲಲ್ಲ,” ಒಂದು ಏಕಮಾತ್ರ, ಏಕ-ಕಾಲಿಕ “ನಂಬಿಕೆಯ ಕೃತ್ಯದ” ಮೇಲೆ ಎಂದು ಬೈಬಲು ಹೇಳುತ್ತದೆಂದು ಅವನು ಸಮರ್ಥಿಸಿದನು. ಇನ್ನೊಬ್ಬ ಧಾರ್ಮಿಕ ಬರಹಗಾರನು ಬರೆದುದು: “ಇದು ತೀರಿಸಲ್ಪಟ್ಟಿರುವ ಒಂದು ಕೆಲಸವಾಗಿದೆ. ಅದು ನಿನಗಾಗಿ ಈಗಾಗಲೇ ನೆರವೇರಿಸಲ್ಪಟ್ಟಿದೆ . . . ನಿನ್ನ ‘ಹೋರಾಟವು ಕೊನೆಗೊಂಡಿದೆ.’ ನಿನ್ನ ‘ಪಾಪವು ತೆಗೆದುಹಾಕಲ್ಪಟ್ಟಿದೆ.’” ಆದರೆ ಇದು ಸತ್ಯವೆಂದು ದೃಢವಾಗಿ ಮನವರಿಕೆಯಾಗಿರುವ ಜನರು ಸಹ ಇಲ್ಲಿ ಒಂದು ಸಮಸ್ಯೆಯನ್ನು ಕಾಣಬಹುದು. ತಾವು “ರಕ್ಷಿಸಲ್ಪಟ್ಟಿ”ದ್ದೇವೆ ಎಂದು ಹೇಳಲ್ಪಟ್ಟಿರುವ ಅನೇಕ ಜನರು, ಅವರು ಜೀವಿಸಬೇಕೆಂದು ಬೈಬಲು ಹೇಳುವಂತಹ ರೀತಿಯಲ್ಲಿ ಜೀವಿಸುವುದಿಲ್ಲವೆಂಬುದು ಸ್ಫುಟ. ಪ್ರಾಯಶಃ ಅವರು ಕ್ರಿಸ್ತನನ್ನು ನಿಜವಾಗಿ “ಸ್ವೀಕರಿ”ಸಿರಲಿಕ್ಕಿಲ್ಲ ಎಂಬುದು ಒಂದು ಸರ್ವಸಾಮಾನ್ಯವಾದ ವಿವರಣೆಯಾಗಿದೆ.
ಹಾಗಾದರೆ, ಯೇಸುವನ್ನು “ಸ್ವೀಕರಿಸುವುದು” ನಿಜವಾಗಿ ಏನನ್ನು ಅರ್ಥೈಸುತ್ತದೆ? ಅದು ನಂಬಿಕೆಯ ಒಂದು ಏಕಕಾಲಿಕ ಕೃತ್ಯವಾಗಿದೆಯೊ, ಅಥವಾ ಒಂದು ಮುಂದುವರಿಯುತ್ತಿರುವ ಜೀವನ ರೀತಿಯಾಗಿದೆಯೊ? ನಮ್ಮ ವಿಶ್ವಾಸವು ನಮ್ಮನ್ನು ಕಾರ್ಯಕ್ಕೆ ಪ್ರಚೋದಿಸುವಷ್ಟು ಬಲವುಳ್ಳದ್ದಾಗಿರಬೇಕೊ? ಯೇಸುವನ್ನು ಹಿಂಬಾಲಿಸುವ ಜವಾಬ್ದಾರಿಯಿಲ್ಲದೆ ನಾವು ಆತನ ಯಜ್ಞದ ಪ್ರಯೋಜನಗಳನ್ನು ನಿಜವಾಗಿಯೂ ಸ್ವೀಕರಿಸಬಲ್ಲೆವೋ?
ಅನೇಕ ಜನರಿಗೆ ಆಶೀರ್ವಾದಗಳು ಬೇಕು, ಆದರೆ ಯೇಸುವನ್ನು ಹಿಂಬಾಲಿಸಿ, ವಿಧೇಯರಾಗುವ ಜವಾಬ್ದಾರಿ ಬೇಡ. ವಾಸ್ತವದಲ್ಲಿ, “ವಿಧೇಯನಾಗು” ಎಂಬ ಶಬ್ದವು ಅವರನ್ನು ಅನೇಕವೇಳೆ ಕ್ಷೋಭೆಗೊಳಿಸುತ್ತದೆ. ಆದರೂ ಯೇಸು ಹೇಳಿದ್ದು: “ಬಂದು ನನ್ನನ್ನು ಹಿಂಬಾಲಿಸು.” (ಲೂಕ 18:18-23) ಮತ್ತು ಬೈಬಲು ತಿಳಿಸುವುದು: ‘ಆಗ ನಮ್ಮ ಕರ್ತನಾದ ಯೇಸು ಕ್ರಿಸ್ತನ ಸುವಾರ್ತೆಗೆ ಒಳಪಡದವರು . . . ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು.’—2 ಥೆಸಲೊನೀಕ 1:8, 9; ಮತ್ತಾಯ 10:38; 16:24.
ರಕ್ಷಣೆಯ ಕುರಿತಾಗಿ ಏನು ಕಲಿಸಲ್ಪಟ್ಟಿದೆಯೋ ಅದರ ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುವ ಅನೇಕ ವಿಷಯಗಳನ್ನು ಬೈಬಲು ಹೇಳುತ್ತದೆ. ಈ ವಿಷಯದ ಮೇಲೆ ಬೈಬಲ್ ವಾಸ್ತವವಾಗಿ ಏನನ್ನು ಹೇಳುತ್ತದೆಂಬುದನ್ನು ಪರೀಕ್ಷಿಸಲು ನೀವು ಇಷ್ಟಪಡುವಲ್ಲಿ, ಮುಂದಿನ ಪುಟಗಳು ನಿರ್ದಿಷ್ಟವಾಗಿ ಆಸಕ್ತಿಕರವಾಗಿರುವುದನ್ನು ನೀವು ಕಂಡುಕೊಳ್ಳುವಿರಿ. ನಿಮ್ಮ ಬೈಬಲನ್ನು ತೆರೆದು, ಈ ಅತ್ಯಾವಶ್ಯಕ ವಿಷಯದ ಮೇಲೆ ಯೇಸು ಮತ್ತು ಆತನ ಅಪೊಸ್ತಲರು ಏನನ್ನು ಕಲಿಸಿದರೆಂಬುದನ್ನು ನೋಡಲು ಉದ್ಧರಿಸಲ್ಪಟ್ಟಿರುವ ವಚನಗಳನ್ನು ಓದಿರಿ.