ಫಲವತತ್ತೆಯ ಹಾಗೂ ಯುದ್ಧದ ದೇವತೆಗಳು
ಸಿರಿಯದ ಎಬದ್ಲ ಬಳಿ ಒಂದು ಪ್ರಾಕ್ತನಶಾಸ್ತ್ರದ ಕಾರ್ಯಾಚರಣೆಯ ಸಂದರ್ಭದಲ್ಲಿ, ಫಲವತತ್ತೆಯ ಮತ್ತು ಯುದ್ಧದ ಬಬಿಲೋನ್ಯ ದೇವತೆಯಾದ ಇಶಾರ್ಟ್ ಅನ್ನು ಚಿತ್ರಿಸುವ ಒಂದು ಅವಶಿಷ್ಟವನ್ನು ಕಂಡುಕೊಳ್ಳಲಾಯಿತು. ಪ್ರಾಕ್ತನಶಾಸ್ತ್ರಜ್ಞರಾದ ಪಾವೊಲೊ ಮಾಟೀಯೈ ಅದನ್ನು, “ಒಂದು ಎತ್ತರವಾದ ತೆಳ್ಳನೆಯ ಆಧಾರದ ಮೇಲೆ ಅದರ ತಲೆ ಜೋಡಿಸಲ್ಪಟ್ಟಿರುವ . . . ಏಕೈಕ ದಿವ್ಯ ಪ್ರತಿಮೆಯ ಮುಂದೆ, ಮುಸುಕು ಹಾಕಿರುವ ಒಬ್ಬ ಪುರೋಹಿತೆಯನ್ನು ಚಿತ್ರಿಸುವ ಒಂದು ಕರ್ಮಾಚರಣೆಯ ದೃಶ್ಯವುಳ್ಳ ಸಿಲಿಂಡರಾಕಾರದ ಮುದ್ರೆ,” ಎಂಬುದಾಗಿ ವರ್ಣಿಸಿದರು.
ಕಂಡುಹಿಡಿತವು ಮಹತ್ವದ್ದಾಗಿದೆ, ಏಕೆಂದರೆ ಪ್ರತಿಮೆಯು ಸಾ.ಶ.ಪೂ 18ನೆಯ ಶತಮಾನದ ಆರಂಭಕ್ಕೆ ಸಂಬಂಧಪಟ್ಟಿರುತ್ತದೆ. ಮಾಟೀಯೈ ಅವರಿಗನುಸಾರ, ಇಶಾರ್ಟ್ ದೇವತೆಯ ಆರಾಧನೆಯು ಸುಮಾರು 2,000 ವರ್ಷಗಳ ಕಾಲ ವ್ಯಾಪಿಸಿತ್ತೆಂಬುದಕ್ಕೆ ಇದು “ನಿರ್ಣಾಯಕ ಪ್ರಮಾಣವನ್ನು” ನೀಡುತ್ತದೆ.
ಇಶಾರ್ಟ್ ದೇವತೆಯ ಆರಾಧನೆಯು ಬಾಬೆಲಿನಲ್ಲಿ ಆರಂಭವಾಯಿತು ಮತ್ತು ಅನಂತರದ ಶತಮಾನಗಳಲ್ಲಿ ರೋಮನ್ ಸಾಮ್ರಾಜ್ಯದಾದ್ಯಂತ ಹರಡಿತು. ವಾಗ್ದತ್ತ ದೇಶದಿಂದ ಸುಳ್ಳು ಧರ್ಮದ ಪ್ರತಿಯೊಂದು ಲಕ್ಷಣವನ್ನು ನಿರ್ಮೂಲ ಮಾಡಬೇಕೆಂದು ಯೆಹೋವನು ಇಸ್ರಾಯೇಲ್ಯರಿಗೆ ಆಜ್ಞೆ ಕೊಟ್ಟನು, ಆದರೆ ಹಾಗೆ ಮಾಡಲು ಅವರು ತಪ್ಪಿಹೋದ ಕಾರಣ, ಅಷ್ಟೋರೆತ್ (ಇಶಾರ್ಟ್ ದೇವತೆಯ ಕಾನಾನ್ಯ ಪ್ರತಿರೂಪ) ದೇವತೆಯ ಆರಾಧನೆಯು ಅವರಿಗೊಂದು ಪಾಶವಾಯಿತು.—ಧರ್ಮೋಪದೇಶಕಾಂಡ 7:2, 5; ನ್ಯಾಯಸ್ಥಾಪಕರು 10:6.
ಇಶಾರ್ಟ್ ಮತ್ತು ಆಕೆಯ ಪ್ರತಿರೂಪವಾದ ಅಷ್ಟೋರೆತ್ ಇನ್ನುಮುಂದೆ ಅಸ್ತಿತ್ವದಲ್ಲಿರದಿದ್ದರೂ, ಅವರು ಪ್ರತಿನಿಧಿಸಿದ ಲಕ್ಷಣಗಳು—ಅನೈತಿಕತೆ ಮತ್ತು ಹಿಂಸಾಚಾರ—ಬಹಳವಾಗಿ ಹಬ್ಬಿರುತ್ತವೆ. ಆಧುನಿಕ ಸಮಾಜವು, ಫಲವತತ್ತೆಯ ಮತ್ತು ಯುದ್ಧದ ಈ ದೇವತೆಗಳನ್ನು ಆರಾಧಿಸಿದ ಆ ಪ್ರಾಚೀನ ನಾಗರಿಕತೆಗಳಿಂದ ನಿಜವಾಗಿಯೂ ಬಹಳ ಭಿನ್ನವಾಗಿದೆಯೊ ಎಂದು ನಾವು ಸೂಕ್ತವಾಗಿಯೇ ಕೇಳಬಹುದು.
[ಪುಟ 20 ರಲ್ಲಿರುವ ಚಿತ್ರ]
ಮಕ್ಕಳನ್ನು ಸಹ ಟಾನಿಟ್ ದೇವತೆಗೆ ಅರ್ಪಿಸಲಾಯಿತು
[ಕೃಪೆ]
Ralph Crane/Bardo Museum