ಪ್ರೀತಿಗಾಗಿ ಅವರು ಅದನ್ನು ಮಾಡಿದರು
ಕೆನಡದಲ್ಲಿ ಒಬ್ಬ ನಂಬಿಗಸ್ತ, ಅತಿಥಿಸತ್ಕಾರ ಸ್ವಭಾವದ ವಿಧವೆಯು ನಾಲ್ಕು ಎಳೆಯ ಪುತ್ರಿಯರನ್ನು ನಿಜ ಕ್ರೈಸ್ತರಾಗಿ ಬೆಳೆಸುತ್ತಿದ್ದಳು. ಅವಳ ಮನೆಗೆ ವಿಸ್ತೃತವಾದ ರಿಪೇರಿಯ ಅಗತ್ಯವಿತ್ತೆಂದು ಆ ಸಭೆಯಲ್ಲಿನ ಹಿರಿಯರು ಗಮನಿಸಿದರು. ಅವಳು ಸ್ವತಃ ಆ ಕೆಲಸವನ್ನು ಮಾಡಲು ಅವಳ ಬಳಿ ಹಣವಾಗಲಿ ಕೌಶಲವಾಗಲಿ ಇರಲಿಲ್ಲ. ಆದುದರಿಂದ 1 ತಿಮೊಥೆಯ 5:9, 10 ರಲ್ಲಿ ತಿಳಿಸಲ್ಪಟ್ಟಿರುವ ಸೂತ್ರಕ್ಕನುಸಾರ, ಅವಳಿಗಾಗಿ ಆ ಕೆಲಸವನ್ನು ಮಾಡಿಸಲು ಹಿರಿಯರು ಎದ್ದುಕಾಣದಂತೆ ಏರ್ಪಡಿಸಿದರು. ಹೇಗೆ?
ಆ ವಿಧವೆ ಮತ್ತು ಅವಳ ಮಕ್ಕಳು ಐದು ದಿನಗಳ ವರೆಗೆ ಮನೆಯಿಂದ ದೂರವಿರಲು ಯೋಜನೆಗಳನ್ನು ಮಾಡಲಾಯಿತು. ಸಭೆಯಲ್ಲಿದ್ದ 80 ಕ್ಕಿಂತಲೂ ಹೆಚ್ಚು ವ್ಯಕ್ತಿಗಳು, ಸಾಮಗ್ರಿ, ಹಣ ಮತ್ತು ಸಮಯವನ್ನು ದಾನ ಮಾಡುತ್ತಾ ತಮ್ಮ ಪೂರ್ಣಹೃದಯದ ಬೆಂಬಲವನ್ನು ಕೊಟ್ಟರು. ಆ ಕುಟುಂಬವು ನಿರ್ಗಮಿಸಿದ ಕೆಲವು ನಿಮಿಷಗಳೊಳಗೆ, ಆತುರವುಳ್ಳ ಕಾರ್ಮಿಕರು ಮನೆಯನ್ನು ಜೇನುನೊಣಗಳಂತೆ ಮುತ್ತಿಕೊಂಡರು. ಮನೆಯ ಇಡೀ ಹೊರಗಿನ ಭಾಗವು ರಿಪೇರಿ ಮಾಡಲ್ಪಟ್ಟಿತು. ಗೋಡೆಗಳಲ್ಲಿ ಇದ್ದ ತೂತುಗಳನ್ನು ಮುಚ್ಚಲಾಯಿತು ಮತ್ತು ಬಣ್ಣ ಬಳಿಯಲಾಯಿತು. ನೆಲಗಳನ್ನು ಉಜ್ಜುವ ಮೂಲಕ ನಯಗೊಳಿಸಿ ಹೊಸ ಮೇಲ್ಮೈಯನ್ನು ಕೊಡಲಾಯಿತು. ನೆಲಕ್ಕೆ ಹೊಸ ಟೈಲ್ಗಳನ್ನು ಮತ್ತು ಜಮಖಾನೆಯನ್ನು ಹೊದಿಸಲಾಯಿತು. ಆವಶ್ಯಕವಾಗಿದ್ದ ಎಲ್ಲಾ ವಿದ್ಯುತ್ತಿನ ಮತ್ತು ಬೆಳಕಿನ ವಸ್ತುಗಳನ್ನು ಹೆಚ್ಚಿಸಲಾಯಿತು. ಸವೆದುಹೋದ ಪೀಠೋಪಕರಣವೂ ಬದಲಿಸಲ್ಪಟ್ಟಿತು. ಕೇವಲ ಐದು ದಿನಗಳಲ್ಲಿ ಒಂದು ಸಂಪೂರ್ಣ ಜೀರ್ಣೋದ್ಧಾರವು ಪೂರೈಸಲ್ಪಟ್ಟಿತು!
ಉದ್ರೇಕ ಮತ್ತು ಚಟುವಟಿಕೆಯ ವಾತಾವರಣವು ನೆರೆಹೊರೆಯಲ್ಲಿ ಗಮನವನ್ನು ಕೆರಳಿಸಿತು. ಒಬ್ಬ 80 ವರ್ಷ ಪ್ರಾಯದ ನೆರೆಯವನು ಸಾಕ್ಷಿಗಳ ಪ್ರಯತ್ನಗಳಿಂದ ಎಷ್ಟು ಪ್ರಚೋದಿಸಲ್ಪಟ್ಟನೆಂದರೆ, ಅವನು ತನ್ನ ಬಣ್ಣ ಬಳಿಯುವ ಬ್ರಷ್ ತಂದು, ಸಹಾಯ ಮಾಡುವುದಾಗಿ ಪಟ್ಟುಹಿಡಿದನು. ಸ್ವಯಂಸೇವಕರಲ್ಲಿ ಒಬ್ಬನ ಧಣಿಯು ಅಡಿಗೆಕೋಣೆಯ ಒಲೆಗೆ ಒಂದು ವಾಯುಸಂಚಾರದ ಚಾವಣಿಯನ್ನು ಕಾಣಿಕೆ ಕೊಟ್ಟನು. ಇನ್ನೊಬ್ಬ ಧಣಿಯು ಅಡಿಗೆಕೋಣೆಯ ಹೊಸ ಕಪಾಟುಗಳನ್ನು ದಾನವಾಗಿ ಕೊಟ್ಟನು. ಒಬ್ಬ ಮನುಷ್ಯನು ಎಷ್ಟು ಪ್ರಭಾವಿತನಾದನೆಂದರೆ, ಅವನು ಯೆಹೋವನ ಸಾಕ್ಷಿಗಳ ಕುರಿತಾಗಿ ಹೆಚ್ಚನ್ನು ಕಲಿಯಲು ಬಯಸಿದನು. ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪ್ರಕಾಶನವನ್ನು ಅವನು ಆತುರದಿಂದ ಸ್ವೀಕರಿಸಿದನು.
ಆ ವಿಧವೆ ಮತ್ತು ಅವಳ ಪುತ್ರಿಯರು ಹಿಂದಿರುಗಿದಾಗ ಅವರ ಮುಖಗಳ ಮೇಲೆ ಆಶ್ಚರ್ಯವನ್ನು ಸ್ಪಷ್ಟವಾಗಿಗಿ ನೋಡಸಾಧ್ಯವಿತ್ತು. ಹೇರಳವಾದ ಕಣ್ಣೀರು, ನಗೆ, ಮತ್ತು ಅಲಿಂಗನಗಳು ಇದ್ದವು—ಕ್ರೈಸ್ತ ಪ್ರೀತಿ ಮತ್ತು ಭಾವಾವೇಶದ ಒಂದು ಅವಿಸ್ಮರಣೀಯ ಕ್ಷಣ. ನಿಜವಾಗಿಯೂ, ಅಗತ್ಯದಲ್ಲಿರುವ ಸಭೆಯ ಸದಸ್ಯರಿಗಾಗಿ ಪ್ರಾಮಾಣಿಕ ಪ್ರೀತಿ ಮತ್ತು ಚಿಂತೆಯು ನಿಜ ಕ್ರೈಸ್ತತ್ವದ ಒಂದು ಗುರುತಾಗಿದೆ, ಯಾಕಂದರೆ ಪೌಲನು ಬರೆದುದು: “ಆದದರಿಂದ ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.”—ಗಲಾತ್ಯ 6:10.