ಈರ್ಷ್ಯೆಯು—ಬಹುಮಟ್ಟಿಗೆ ನನ್ನ ಜೀವನವನ್ನೇ ಹಾಳುಗೆಡವಿತು
ಈರ್ಷ್ಯೆಯು ನನ್ನನ್ನು ನಿಜವಾಗಿ ಅಪಾಯಕರವಾಗಿ ಬಾಧಿಸಲು ತೊಡಗಿದುದು, ನನ್ನ ದ್ವಿತೀಯ ಪತಿ ಮಾರ್ಕನನ್ನು ನಾನು ವಿವಾಹವಾದಾಗಲೇ.a ನಮ್ಮಿಬ್ಬರ ನಡುವೆ ಹಲವಾರು ಮಲ-ಮಕ್ಕಳನ್ನು ನಾವು ಪರಿಪಾಲಿಸಲಿಕ್ಕಿತ್ತು ಮತ್ತು ನಮ್ಮ ಹಿಂದಿನ ಜೊತೆಗಳೊಂದಿಗೆ ವ್ಯವಹರಿಸಲಿಕ್ಕಿತ್ತು. ಸನ್ನಿವೇಶವು ಕೆಲವೊಮ್ಮೆ ಸಹಿಸಲಸಾಧ್ಯವಾಗಿತ್ತು. ಕುಟುಂಬದ ಜಗಳವಾದಾಗಲೆಲ್ಲಾ ಮಾರ್ಕ್ ನನ್ನನ್ನು ಬೆಂಬಲಿಸಲಿಲ್ಲವೋ ಎಂಬಂತೆ ತೋರಿತು. ಅವನು ತನ್ನ ಹಿಂದಿನ ಪತ್ನಿಯನ್ನು ಇನ್ನೂ ಪ್ರೀತಿಸುತ್ತಾನೆಂದು ನಾನು ಭಾವಿಸತೊಡಗಿದೆ. ಈರ್ಷ್ಯೆಯನ್ನು ನಾನು ಅಂಕೆಯಲಿಡ್ಲುವ ಬದಲಿಗೆ ಅದು ನನ್ನ ಜೀವನವನ್ನು ನಿಯಂತ್ರಿಸುವಂತೆ ನಾನು ಬಿಟ್ಟುಕೊಟ್ಟೆ. ಮಾರ್ಕನ ಹಿಂದಿನ ಪತ್ನಿ ಹತ್ತಿರವಿದ್ದಾಗಲ್ಲೆಲ್ಲ ನನಗೆ ಭಾವನಾತ್ಮಕವಾಗಿ ಬೆದರಿಸಲ್ಪಟ್ಟಂತಹ ಅನಿಸಿಕೆಯಾಯಿತು.
ನಾನು ಮಾರ್ಕನನ್ನು ಎಡೆಬಿಡದೆ ಗಮನಿಸುತ್ತಿದ್ದೆ, ಅವನು ಎಲ್ಲಿ ನೋಡುತ್ತಿದ್ದನೆಂದು ತಿಳಿಯಲು ಅವನ ಕಣ್ಣನ್ನೂ ಕಾದುನೋಡುತ್ತಿದ್ದೆ. ಅವನ ನೋಟಗಳಲ್ಲಿ ಇಲ್ಲದಿದ್ದವುಗಳಿಗೆ ಸಹ ಅರ್ಥಕಟ್ಟಿದೆ. ಅವನು ತನ್ನ ಹಿಂದಿನ ಪತ್ನಿಯಲ್ಲಿ ಇನ್ನೂ ಅನುರಕ್ತನೆಂದು ನಾನು ಕೆಲವೊಮ್ಮೆ ಬಹಿರಂಗವಾಗಿ ದೂರುತ್ತಿದ್ದೆ. ಒಂದು ಸಂದರ್ಭದಲ್ಲಿ ಅವನು ಇದರಿಂದ ಎಷ್ಟು ಹತಾಶೆಗೊಂಡನೆಂದರೆ, ಒಂದು ಕ್ರೈಸ್ತ ಸಮ್ಮೇಳನವನ್ನೂ ಬಿಟ್ಟು ಹೊರಟುಹೋದನು. ಯೆಹೋವನ ಮುಂದೆ ದೋಷಿಯ ಅನಿಸಿಕೆ ನನಗಾಯಿತು. ನನ್ನ ಕುಟುಂಬದ ಜೀವನವನ್ನು ನಾನು ದುಃಖಾರ್ತವನ್ನಾಗಿ ಮಾಡಿದೆ, ಯಾಕೆಂದರೆ ಕಟ್ಟಕಡೆಗೆ ಮಕ್ಕಳು ಸಹ ಬಾಧಿತರಾದರು. ನಾನು ಮಾಡುತ್ತಿದ್ದ ವಿಷಯಕ್ಕಾಗಿ ನನ್ನನ್ನು ದ್ವೇಷಿಸತೊಡಗಿದೆ, ಆದರೆ ನಾನೆಷ್ಟೇ ಕಠಿನವಾಗಿ ಪ್ರಯತ್ನಿಸಲಿ, ನನ್ನ ಈರ್ಷ್ಯೆಯನ್ನು ನಿಯಂತ್ರಿಸಲು ನನಗೆ ಸಾಧ್ಯವಿಲ್ಲವೆಂದೇ ತೋರಿತು.
ನನಗೆ ಸಹಾಯ ಮಾಡುವ ಬದಲಿಗೆ ಮಾರ್ಕ್ ಪ್ರತೀಕಾರ ಮಾಡತೊಡಗಿದನು. ನಾನು ಅವನನ್ನು ದೂರಿದಾಗ, “ಈರ್ಷ್ಯೆ, ನಿನಗೆ ಕೇವಲ ಈರ್ಷ್ಯೆ,” ಎಂದು ಕೂಗಾಡುತ್ತಿದ್ದನು. ನಾನು ಈರ್ಷ್ಯೆಗೊಳ್ಳುವಂತೆ ಅವನು ಬುದ್ಧಿಪೂರ್ವಕವಾಗಿ ಪ್ರಯತ್ನಿಸುತ್ತಿರುವಂತೆಯೂ ಭಾಸವಾದನು. ಇದು ನನ್ನ ಈರ್ಷ್ಯೆಗೆ ತಕ್ಕ ಮದ್ದು ಎಂದವನು ನೆನಸಿರಲೂಬಹುದು, ಆದರೆ ಅದು ಮಾತ್ರ ವಿಷಯವನ್ನು ಹೆಚ್ಚು ಕೆಡಿಸಿತು. ಪರಸ್ತ್ರೀಯರು ಎಷ್ಟು ಸುಂದರವಾಗಿ ಕಾಣುತ್ತಾರೆಂಬುದರ ಕುರಿತು ಹೇಳಿಕೆ ನೀಡುತ್ತಾ, ಅವನು ಅವರ ಕಡೆಗೆ ನೋಡತೊಡಗಿದನು. ಇದು ನನ್ನನ್ನು ಇನ್ನಷ್ಟು ಕಡಿಮೆಯವಳಾಗಿ, ಬೇಕಾಗಿಲ್ಲದವಳಾಗಿ ಭಾವಿಸುವಂತೆ ಮಾಡಿತು. ಈ ಬಿಂದುವಿನಲ್ಲಿ ಇನ್ನೊಂದು ಭಾವೋದ್ರೇಕವಾದ ದ್ವೇಷವು ತನ್ನ ವಿಕಾರ ತಲೆಯನ್ನೆತಿತ್ತು. ಆ ಬಿಂದುವಿನಲ್ಲಿ ನಾನೆಷ್ಟು ಗೊಂದಲಪಟೆನ್ಟೆಂದರೆ, ಅವನಿಂದ ಮತ್ತು ಅವನ ಕುಟುಂಬದಿಂದ ಕೇವಲ ಪ್ರತ್ಯೇಕವಾಗುವುದೇ ನನಗೆ ಬೇಕಿತ್ತು.
“ಈರ್ಷ್ಯೆಯು ಎಲುಬುಗಳಿಗೆ ಕ್ಷಯ,” ಎಂದು ಬೈಬಲು ಹೇಳುವಾಗ ಅದು ನಿಖರವಾಗಿ ಅದೇ ಆಗಿದೆ. (ಜ್ಞಾನೋಕ್ತಿ 14:30, NW) ನನ್ನ ಆರೋಗ್ಯದ ಮೇಲೆ ಈಗ ಪರಿಣಾಮವಾಗತೊಡಗಿತು. ವಾಸಿಯಾಗಲು ಬಹಳ ಸಮಯ ಹಿಡಿದ ಹೊಟ್ಟೆ ಹುಣ್ಣಗಳನ್ನು ನಾನು ಬೆಳೆಸಿಕೊಂಡೆ. ಮಾರ್ಕನು ಮಾಡಿದ ಪ್ರತಿಯೊಂದು ವಿಷಯವನ್ನು ಸಂಶಯದಿಂದ ನೋಡುವ ಮೂಲಕ ನನ್ನ ಜೀವನವನ್ನು ನಾನು ದುಃಖಾರ್ತವಾಗಿ ಮಾಡುತ್ತಲೇ ಹೋದೆ. ಅವನ ಕಿಸೆಗಳನ್ನು ಹುಡುಕಿ, ಟೆಲಿಫೋನ್ ನಂಬ್ರಗಳೇನಾದರೂ ಸಿಕ್ಕಿದರೆ ಫೋನ್ಮಾಡಿ ಅದು ಯಾರೆಂದು ಪರೀಕ್ಷಿಸುತ್ತಿದ್ದೆ. ಹೃದಯದಾಳದಲ್ಲಿ ನನ್ನ ಬಗ್ಗೆ ನಾನೆಷ್ಟು ಲಜ್ಜಿತಳಾಗಿದ್ದೆನೆಂದರೆ, ಆ ಲಜ್ಜೆಯ ನಿಮಿತ್ತ ಯೆಹೋವನ ಮುಂದೆ ಅಳುತ್ತಿದ್ದೆ. ಆದರೂ ನಾನು ನನ್ನನ್ನು ತಡೆಯಲಾರದೆ ಹೋದೆ. ನಾನು ಸ್ವತಃ ನನ್ನ ಪರಮ ವೈರಿಯಾಗಿದ್ದೆ.
ನನ್ನ ಆತ್ಮಿಕತೆಯು ಇನ್ನುಮುಂದೆ ನಾನು ಪ್ರಾರ್ಥಿಸಲಾರದಷ್ಟರ ಮಟ್ಟಿಗೆ ಬಾಧಿತವಾಯಿತು. ನಾನು ಯೆಹೋವನನ್ನು ಪ್ರೀತಿಸಿದ್ದೆ ಮತ್ತು ಯಾವುದು ಸರಿಯೋ ಅದನ್ನು ನಿಜವಾಗಿ ಮಾಡಬಯಸಿದ್ದೆ. ಪತಿಪತ್ನಿಯರಿಗೆ ಸಂಬಂಧಿಸಿದ ಶಾಸ್ತ್ರವಚನಗಳೆಲ್ಲವು ನನಗೆ ತಿಳಿದಿದ್ದವು, ಆದರೆ ನಾನು ಅವನ್ನು ಅನ್ವಯಿಸಲು ಶಕ್ತಳಾಗಿರಲಿಲ್ಲ. ಅಕ್ಕರೆಯ ಮಕ್ಕಳು ನನಗಿದ್ದವಾದರೂ, ನಾನು ನನ್ನ ಜೀವಿತದಲ್ಲಿ ಮೊದಲನೆಯ ಬಾರಿ, ಇನ್ನುಮುಂದೆ ಜೀವಿಸಬಯಸಲಿಲ್ಲ.
ಕ್ರೈಸ್ತ ಸಭೆಯ ಹಿರಿಯರು ಮಹಾ ಉತ್ತೇಜನವಾಗಿದ್ದು ನನಗೆ ಸಹಾಯ ಮಾಡಲು ತಮ್ಮಿಂದಾದಷ್ಟು ಪ್ರಯತ್ನಿಸಿದರು. ನನ್ನ ಈರ್ಷ್ಯೆಯ ಕುರಿತ ಪ್ರಸ್ತಾಪವನ್ನು ಅವರು ಮುಂದೆ ತಂದಾಗ, ನನಗೆ ಅಂತಹ ಒಂದು ಸಮಸ್ಯೆ ಇತ್ತೆಂದು ಒಪ್ಪಿಕೊಳ್ಳಲು ಮನಸ್ಸಿಲ್ಲದೆ, ನಾನು ಪೇಚಾಟಪಟ್ಟು ಅದನ್ನು ಅಲ್ಲಗಳೆಯುತ್ತಿದ್ದೆ.
ಕಟ್ಟಕಡೆಗೆ, ನನ್ನ ಆರೋಗ್ಯ ಎಷ್ಟರ ಮಟ್ಟಿಗೆ ಕೆಟ್ಟಿತೆಂದರೆ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಯನ್ನು ಸೇರಬೇಕಾಯಿತು. ಜೀವನವು ಅದೇ ರೀತಿ ಮುಂದುವರಿಯಲು ಸಾಧ್ಯವಿಲ್ಲವೆಂದು ನಾನಲ್ಲಿ ಮನಗಂಡೆ. ಮಾರ್ಕ್ ಮತ್ತು ನಾನು ಅಷ್ಟು ಭಾವೋದ್ರೇಕಕ್ಕೆ ಒಳಗೊಳ್ಳದೇ ಮೂರು ತಿಂಗಳು ಪ್ರತ್ಯೇಕವಾಸ ನಡೆಸಿ, ನಮ್ಮ ಸನ್ನಿವೇಶವನ್ನು ಪರೀಕ್ಷಿಸಿಕೊಳ್ಳಲು ನಿರ್ಣಯಿಸಿದೆವು. ಈ ಅವಧಿಯಲ್ಲಿ ಒಂದು ಆಶ್ಚರ್ಯವು ಸಂಭವಿಸಿತು. ಎಚ್ಚರ! ಪತ್ರಿಕೆಯಲ್ಲಿ ಒಂದು ಲೇಖನವು ತೋರಿಬಂತು, ಅದರ ಶೀರ್ಷಿಕೆ, “ಮದ್ಯವ್ಯಸನಿಗಳ ಪ್ರೌಢ ಮಕ್ಕಳಿಗೆ ಸಹಾಯ.”b
ನೋಡಿ, ನನ್ನ ತಾಯಿ ಒಬ್ಬ ಮದ್ಯವ್ಯಸನಿಯಾಗಿದ್ದರು. ನಾನು ಶಾರೀರಿಕವಾಗಿ ಅಪಪ್ರಯೋಗಿಸಲ್ಪಡಲಿಲ್ಲವಾದರೂ, ನನ್ನ ಹೆತ್ತವರು ಒಬ್ಬರಿಗೊಬ್ಬರು ಅಥವಾ ನನಗೆ ದೈಹಿಕ ಪ್ರೀತಿಯನ್ನೆಂದೂ ತೋರಿಸಿರಲಿಲ್ಲ. ನನ್ನ ತಾಯಿ ನನ್ನನ್ನು ಎಂದಾದರೂ ಅಪ್ಪಿಕೊಂಡದ್ದು ಅಥವಾ ನನ್ನನ್ನು ಪ್ರೀತಿಸಿದ್ದಳೆಂದು ಹೇಳಿದ್ದು ನನಗೆ ನೆನಪಿಲ್ಲ. ಆದುದರಿಂದ ಪ್ರೀತಿಸುವುದು ಹೇಗೆ ಅಥವಾ, ಅಷ್ಟೇ ಪ್ರಾಮುಖ್ಯವಾಗಿ, ಪ್ರೀತಿಸಲ್ಪಡುವುದು ಹೇಗೆಂದು ನಿಜವಾಗಿ ತಿಳಿಯದೆ ನಾನು ಕಾರ್ಯತಃ ಬೆಳೆದೆ.
ನನ್ನ ತಂದೆಯ ಪ್ರಣಯ ವ್ಯವಹಾರದ ಕುರಿತು ಮತ್ತು ಅವರಲ್ಲಿ ತನಗೆ ನಂಬಿಕೆಯಿಲ್ಲದ ಕುರಿತು ನನ್ನ ತಾಯಿ ನನಗೆ ಆಗಾಗ್ಗೆ ಹೇಳುತ್ತಿದ್ದರು. ಆದುದರಿಂದ ಸಾಮಾನ್ಯವಾಗಿ ಪುರುಷರನ್ನು ನಂಬದವಳಾಗಿ ನಾನು ಬೆಳೆದುಬಿಟ್ಟೆನೆಂದು ಕಾಣುತ್ತದೆ. ನನ್ನ ಪಾಲನೆ ಪೋಷಣೆಯ ಕಾರಣ, ಬೇರೆಯವರಿಗಿಂತ, ವಿಶೇಷವಾಗಿ ಬೇರೆ ಸ್ತ್ರೀಯರಿಗಿಂತ ಕಡಿಮೆಯವಳೆಂಬ ಭಾವನೆ ಯಾವಾಗಲೂ ನನಗಿತ್ತು. ಈ ವಿಷಯಗಳ ತಾತ್ಪರ್ಯವನ್ನು ಗ್ರಹಿಸಿಕೊಳ್ಳಲು ಆ ಅವೇಕ್! ಲೇಖನದ ವಾಚನವು ನನಗೆ ಸಹಾಯ ಮಾಡಿತು. ಈರ್ಷ್ಯೆಯ ವಿಷಯದಲ್ಲಿ ನನ್ನ ಸಮಸ್ಯೆಯ ಮೂಲ ಕಾರಣಗಳನ್ನು, ಮೊತ್ತಮೊದಲಾಗಿ, ನಾನು ಅರಿತುಕೊಂಡೆ.
ಆ ಅವೇಕ್! ಲೇಖನವನ್ನು ನನ್ನ ಪತಿ ಮಾರ್ಕನಿಗೆ ನಾನು ತೋರಿಸಿದೆ. ಅದು ಅವನಿಗೆ ನನ್ನನ್ನು ಹೆಚ್ಚು ಒಳ್ಳೆಯದಾಗಿ ಅರ್ಥಮಾಡಿಕೊಳ್ಳುವಂತೆ ಸಹಾಯ ಮಾಡಿತು. ಪ್ರತ್ಯೇಕವಾಸವನ್ನು ಯೋಜಿಸುತ್ತಿರುವ ದಂಪತಿಗಳಿಗೆ ಬೈಬಲು ಕೊಡುವ ಸಲಹೆಯನ್ನು ಪಾಲಿಸಲು ಅವನು ಮತ್ತು ನಾನು ಬೇಗನೆ ಶಕ್ತರಾದೆವು. ನಾವು ರಾಜಿಯಾದೆವು. (1 ಕೊರಿಂಥ 7:10, 11) ಈಗ ನಮ್ಮ ವೈವಾಹಿಕ ಜೀವನವು ಎಂದಿಗಿಂತಲೂ ಹೆಚ್ಚು ಉತ್ತಮವಾಗಿದೆ. ವಿಶೇಷವಾಗಿ ಕ್ರೈಸ್ತ ಚಟುವಟಿಕೆಗಳು ಒಳಗೂಡಿರುವಾಗ, ಹೆಚ್ಚಿನ ವಿಷಯಗಳನ್ನು ನಾವು ಒಂದುಗೂಡಿ ಮಾಡುತ್ತೇವೆ. ಮಾರ್ಕ್ ಹೆಚ್ಚಿನ ಅನುಕಂಪವನ್ನು ತೋರಿಸುತ್ತಾನೆ. ಅವನು ನನ್ನನ್ನೆಷ್ಟು ಪ್ರೀತಿಸುತ್ತಾನೆಂದು ಬಹುಮಟ್ಟಿಗೆ ಪ್ರತಿದಿನವೂ ನನಗನ್ನುತ್ತಾನೆ, ಮತ್ತು ನಾನೀಗ ಅದನ್ನು ನಿಜವಾಗಿಯೂ ನಂಬುತ್ತೇನೆ.
ಮಾರ್ಕನ ಹಿಂದಿನ ಪತ್ನಿಯನ್ನು ನಾವು ಭೇಟಿಯಾಗಲಿದ್ದೇವೆಂದು ನನಗೆ ತಿಳಿಯುವಾಗಲ್ಲೆಲ್ಲ, ಬಲಕ್ಕಾಗಿ ಯೆಹೋವನಿಗೆ ಪ್ರಾರ್ಥಿಸುತ್ತಾ, ಪ್ರೌಢ ಕ್ರೈಸ್ತ ವಿಧಾನದಲ್ಲಿ ವರ್ತಿಸುವಂತೆ ಸಹಾಯ ಮಾಡಲು ಆತನನ್ನು ಬೇಡಿಕೊಳ್ಳುತ್ತೇನೆ. ಮತ್ತು ಅದು ಕಾರ್ಯಸಾಧಕವಾಗುತ್ತದೆ. ಆಕೆಯ ಕಡೆಗಿನ ನನ್ನ ವೈರ ಭಾವನೆಗಳೂ ದೂರವಾಗುತಲ್ತಿವೆ. ನಕಾರಾತ್ಮಕ ವಿಚಾರಗಳ ಮೇಲೆ ನಾನೀಗ ನೆಲೆಸುವುದಿಲ್ಲ ಅಥವಾ ನನ್ನ ಕಲ್ಪನೆಯು ಅಂಕೆತಪ್ಪಿ ಹೋಗುವಂತೆ ಬಿಡುವುದೂ ಇಲ್ಲ.
ಕೆಲವು ಅಯೋಗ್ಯ ಈರ್ಷ್ಯೆಯ ಭಾವನೆಗಳು ನನ್ನಲ್ಲಿನ್ನೂ ಬರುವುದುಂಟು. ದೇವರ ಹೊಸ ಲೋಕದಲ್ಲಿನ ಪರಿಪೂರ್ಣ ಜೀವನವು ಮಾತ್ರ ಅದನ್ನು ನನ್ನಿಂದ ಪೂರ್ಣವಾಗಿ ತೊಲಗಿಸುವುದು. ಈ ಮಧ್ಯೆ, ನನ್ನ ಈರ್ಷ್ಯೆಯು ನನ್ನನ್ನು ನಿಯಂತ್ರಣಲ್ಲಿಡುವಂತೆ ಬಿಡುವ ಬದಲಿಗೆ ಅದನ್ನು ನಿಯಂತ್ರಿಸಲು ನಾನು ಕಲಿತಿದ್ದೇನೆ. ಹೌದು, ಈರ್ಷ್ಯೆಯು ಬಹುಮಟ್ಟಿಗೆ ನನ್ನ ಜೀವನವನ್ನೇ ಹಾಳುಗೆಡವಿತು, ಆದರೆ ನಾನೀಗ ಒಬ್ಬ ಹೆಚ್ಚು ಆನಂದಿತ ವ್ಯಕ್ತಿ, ಮತ್ತು ನನಗೆ ಪುನರಾರೋಗ್ಯ ಲಭಿಸಿದೆ, ಇದಕ್ಕಾಗಿ ಯೆಹೋವನಿಗೆ ಮತ್ತು ಆತನ ಸಂಸ್ಥೆಗೆ ಉಪಕಾರ. ನನ್ನ ದೇವರಾದ ಯೆಹೋವನೊಂದಿಗೆ ನಾನು ಪುನಃ ಒಮ್ಮೆ ಒಂದು ಬಲವಾದ ಸಂಬಂಧವನ್ನು ಹೊಂದಿದ್ದೇನೆ.—ದತ್ತ ಲೇಖನ.
[ಅಧ್ಯಯನ ಪ್ರಶ್ನೆಗಳು]
a ಹೆಸರು ಬದಲಾಯಿಸಲ್ಪಟ್ಟಿದೆ.
b ಮೇ 22, 1992ರ ಅವೇಕ್! ಪತ್ರಿಕೆಯ 8-12 ನೆಯ ಪುಟಗಳನ್ನು ನೋಡಿ.