“ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು”
ಇತಿಹಾಸದ ಉದ್ದಕ್ಕೂ ದೇವರ ನಂಬಿಗಸ್ತ ಸೇವಕರು ತೀಕ್ಷೈವಾದ ಭಾವನಾತ್ಮಕ ಸಂಕಟದ ಅವಧಿಗಳನ್ನು ಅನುಭವಿಸಿದ್ದಾರೆ. “ನಿಭಾಯಿಸಲು ಕಠಿನವಾದ ಸಮಯಗಳಲ್ಲಿ” ನಾವು ಜೀವಿಸುವುದರಿಂದ, ಇಂದು ಇದು ಎಷ್ಟೊಂದು ಸತ್ಯವಾಗಿದೆ! (2 ತಿಮೊಥೆಯ 3:1, NW) ಪ್ರಾರ್ಥನೆಯ ಮುಖಾಂತರ ಯೆಹೋವನ ಮೇಲೆ ತಮ್ಮ ಚಿಂತೆಗಳನ್ನು ಹಾಕುವಂತೆ ಅಪೊಸ್ತಲ ಪೌಲನು ಕ್ರೈಸ್ತರಿಗೆ ಸಲಹೆ ನೀಡಿದನು. ಯಾವ ಫಲಿತಾಂಶದೊಂದಿಗೆ? “ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.”—ಫಿಲಿಪ್ಪಿ 4:7.
ಈ “ದೇವಶಾಂತಿಯು” ಏನಾಗಿದೆ? ಅದು ಸೃಷ್ಟಿಕರ್ತನೊಂದಿಗೆ ಒಂದು ನಿಕಟ ಸಂಬಂಧವನ್ನು ಹೊಂದಿರುವುದರಿಂದ ಬರುವ ಪ್ರಶಾಂತತೆಯಾಗಿದೆ. ಅಂತಹ ಆಪತ್ತೆಯು ನಮಗೆ ನೀಡುವ ಭರವಸೆಯೇನೆಂದರೆ, ನಮ್ಮ ಸಂಕಟಗಳು ಏನೇ ಆಗಿರಲಿ, ಯೆಹೋವನು “ತನ್ನ ಜನರನ್ನು ಬೇಡವೆಂದು ತಳ್ಳಿಬಿಡುವದಿಲ್ಲ; ತನ್ನ ಸ್ವಾಸ್ತ್ಯವನ್ನು ಕೈಬಿಡುವದಿಲ್ಲ.”—ಕೀರ್ತನೆ 94:14, ಟುಡೇಸ್ ಇಂಗ್ಲಿಷ್ ವರ್ಶನ್.
ವಿಪತ್ತಿನಿಂದ ನಾವು ರಕ್ಷಿತರಾಗಿದ್ದೇವೆಂದು ಇದು ಅರ್ಥೈಸುವುದಿಲ್ಲ. “ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕ” ವೆಂದು ಕೀರ್ತನೆಗಾರನು ಬರೆದನು. (ಕೀರ್ತನೆ 34:19) ಆದರೆ ದೇವಶಾಂತಿಯು ಉಪಶಮನವನ್ನು ತರಬಲ್ಲದು. ಹೇಗೆ?
ದೇವಶಾಂತಿಯು “ಎಲ್ಲಾ ಗ್ರಹಿಕೆಯನ್ನು ಮೀರು” ತ್ತದೆ ಎಂದು ಪೌಲನು ಬರೆದನು,—ಅಥವಾ ಕನ್ಕಾರ್ಡೆಂಟ್ ವರ್ಶನ್ ನಲ್ಲಿ ತರ್ಜುಮೆ ಮಾಡಿರುವಂತೆ, ಅದು “ಪ್ರತಿಯೊಂದು ಮಾನಸಿಕ ಸ್ಥಿತಿಗಿಂತ ಶ್ರೇಷ್ಠವಾಗಿದೆ.” ಚಿಂತೆಯು ಸಂಕಟಗೊಳಿಸುವಂತಹ ವಿವಿಧ ಭಾವನೆಗಳನ್ನು ನಾವು ಅನುಭವಿಸುವಂತೆ ಮಾಡಬಲ್ಲದು. (ಪ್ರಸಂಗಿ 7:7) ಆದರೂ, ದೇವಶಾಂತಿಯು—ವಿಶೇಷವಾಗಿ ನಮಗೆ “ಸಾಮಾನ್ಯಕ್ಕಿಂತ ಅಧಿಕವಾಗಿರುವ ಬಲ” ಬೇಕಾದಾಗ—ನಮ್ಮನ್ನು ಭದ್ರಪಡಿಸಬಲ್ಲದು.—2 ಕೊರಿಂಥ 4:7, NW; 2 ತಿಮೊಥೆಯ 1:7.
ಇನ್ನೂ ಹೆಚ್ಚಾಗಿ, ದೇವಶಾಂತಿಯು ಒಂದು ರಕ್ಷಣೆಯಾಗಿದೆ. ಫಿಲಿಪ್ಪಿಯವರಿಗೆ ಪೌಲನು ಬರೆದಂತೆ ಅದು “ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ . . . ಕಾಯ” ಬಲ್ಲದು. “ಕಾಯುವದು” ಎಂಬುದಾಗಿ ಭಾಷಾಂತರಿಸಲಾದ ಗ್ರೀಕ್ ಪದವು ಒಂದು ಸೈನಿಕ ಪದವಾಗಿದ್ದು, ಹಗಲಿರುಳು ಪಹರೆಯನ್ನಿಡುತ್ತಿರುವ ಸಿಪಾಯಿಗಳ ಒಂದು ಮಾನಸಿಕ ಚಿತ್ರವನ್ನು ಬಹುಶಃ ಸೃಷ್ಟಿಸಿತು. ಹಾಗೆಯೇ, ದೇವಶಾಂತಿಯು ನಮ್ಮ ಹೃದಯಗಳ ಮತ್ತು ನಮ್ಮ ಮಾನಸಿಕ ಶಕ್ತಿಗಳ ಮೇಲೆ 24 ಗಂಟೆಯ ಕಾವಲೋಪಾದಿ ವರ್ತಿಸಬಲ್ಲದು.—1 ಕೊರಿಂಥ 10:13; ಹೋಲಿಸಿ ಎಫೆಸ 4:26.
ಇಂದು ನಾವು ಎದುರಿಸುವ ಒತ್ತಡಭರಿತ ಸವಾಲುಗಳನ್ನು ಪರಿಗಣಿಸುವಾಗ, ನಾವು ಆಭಾರಿಗಳಾಗಿರಬೇಕಾದ ಒಂದು ವಿಷಯವು ದೇವಶಾಂತಿಯಾಗಿರುವುದಿಲ್ಲವೊ?—ಕೀರ್ತನೆ 18:2; ಹೋಲಿಸಿ ವಿಮೋಚನಕಾಂಡ 40:38.