“ನಿಜ ಕ್ರೈಸ್ತರು ವರ್ತಿಸಬೇಕಾದದ್ದು ಆ ವಿಧದಲ್ಲಿಯೇ”
ತನ್ನ 1990ರ ಪುಸ್ತಕ, ಆರ್ಬೈಟ್ ಮಾಕ್ಟ್ ಟೋಟ್—ಐನ್ ಯೂಗೆಂಟ್ ಇನ್ ಆಶ್ವಿಟ್ಸ್ (ಶ್ರಮವು ನಿಮ್ಮನ್ನು ಕೊಲ್ಲುತ್ತದೆ—ಆಶ್ವಿಟ್ಸ್ನಲ್ಲಿ ಯುವ ಪೌರುಷ) ದಲ್ಲಿ, ಆಶ್ವಿಟ್ಸ್ನಿಂದ ಬದುಕಿ ಪಾರಾದ ಟೀಬೋರ್ ವೂಲ್, ತಾನು ಕೇಳಿದ ಇಬ್ಬರು ಜೊತೆ ಕೈದಿಗಳ ಸಂಭಾಷಣೆಯನ್ನು ದಾಖಲಿಸುತ್ತಾನೆ. ಅವರಲ್ಲಿ, ಆಸ್ಟ್ರಿಯ ದೇಶದವನಾಗಿದ್ದ ಒಬ್ಬನು, ತಾನೊಬ್ಬ “ಅವಿಶ್ವಾಸಿ” ಎಂದು ಹೇಳಿಕೊಂಡನು. ಆದರೂ, ಕೆನ್ನೀಲಿ ತ್ರಿಕೋನದ ಚಿಹ್ನೆಯನ್ನು ಧರಿಸಿದ್ದ ಕೈದಿಗಳನ್ನು—ಬೈಬಲ್ ವಿದ್ಯಾರ್ಥಿಗಳು, ಹಾಗೆಂದು ಯೆಹೋವನ ಸಾಕ್ಷಿಗಳು ಶಿಬಿರದಲ್ಲಿ ಕರೆಯಲ್ಪಡುತ್ತಿದ್ದರು—ಅವನು ಪ್ರಶಂಸಿಸಿದನು.
“ಅವರು ಯುದ್ಧಕ್ಕೆ ಹೋಗುವುದಿಲ್ಲ,” ಎಂದು ಆಸ್ಟ್ರಿಯದವನು ತನ್ನ ಸಂಗಾತಿಗೆ ಹೇಳಿದನು. “ಬೇರೆ ಯಾರನ್ನಾದರೂ ಕೊಲ್ಲುವುದಕ್ಕಿಂತ ತಾವೇ ಕೊಲ್ಲಲ್ಪಡುವುದು ಅವರ ಆಯ್ಕೆ. ನನ್ನ ದೃಷ್ಟಿಕೋನದಲ್ಲಿ ನಿಜ ಕ್ರೈಸ್ತರು ವರ್ತಿಸಬೇಕಾದದ್ದು ಆ ವಿಧದಲ್ಲಿಯೇ. ಅವರೊಂದಿಗೆ ಅನುಭವಿಸಿದ ಒಂದು ಬಹಳ ಮನೋಹರವಾದ ಘಟನೆಯ ಕುರಿತು ನಾನು ನಿನಗೆ ಹೇಳಲೇ ಬೇಕು. ಸ್ಟುಟ್ಹೋಫ್ ಶಿಬಿರದಲ್ಲಿ, ಒಂದೇ ಕಟ್ಟಡದಲ್ಲಿ ನಾವು ಯೆಹೂದ್ಯರು ಮತ್ತು ಬೈಬಲ್ ವಿದ್ಯಾರ್ಥಿಗಳು—ಇವರೊಂದಿಗೆ ಒಟ್ಟಿಗೆ ಇದ್ದೆವು. ಆ ದಿನಗಳಲ್ಲಿ ಬೈಬಲ್ ವಿದ್ಯಾರ್ಥಿಗಳು ಹೊರಗೆ ಕಡುಚಳಿಯಲ್ಲಿ ಕಠಿನ ಕೆಲಸವನ್ನು ಮಾಡಬೇಕಿತ್ತು. ಅವರು ಹೇಗೆ ಬದುಕಿದರೆಂದು ನಮಗೆ ತಿಳಿಯುತ್ತಿರಲಿಲ್ಲ. ಯೆಹೋವನು ಅವರಿಗೆ ಬಲವನ್ನು ನೀಡಿದನೆಂದು ಅವರು ಹೇಳಿದರು. ಅವರು ಹೊಟ್ಟೆಗಿಲ್ಲದೆ ಕೃಶವಾಗಿದರ್ದಿಂದ, ತಮ್ಮ ರೊಟ್ಟಿಯ ಅಗತ್ಯ ಅವರಿಗೆ ವಿಪರೀತವಾಗಿತ್ತು. ಆದರೆ ಅವರು ಏನು ಮಾಡಿದರು? ತಮ್ಮಲ್ಲಿದ್ದ ಎಲ್ಲ ರೊಟ್ಟಿಯನ್ನು ಅವರು ಕೂಡಿಸಿದರು, ಅದರಲ್ಲಿ ಅರ್ಧ ರೊಟ್ಟಿಯನ್ನು ತಾವು ತೆಗೆದುಕೊಂಡರು ಮತ್ತು ಉಳಿದ ಅರ್ಧ ರೊಟ್ಟಿಯನ್ನು ಇತರ ಶಿಬಿರಗಳಿಂದ ಬಹಳ ಹಸಿವಿನಿಂದ ಬಂದ ತಮ್ಮ ಸಹೋದರರಿಗೆ, ತಮ್ಮ ಆತ್ಮಿಕ ಸಹೋದರರಿಗೆ ಕೊಟ್ಟರು. ಮತ್ತು ಅವರನ್ನು ಸ್ವಾಗತಿಸಿದರು ಹಾಗೂ ಮುದ್ದಿಸಿದರು. ಊಟಮಾಡುವ ಮೊದಲು ಅವರು ಪ್ರಾರ್ಥಿಸಿದರು, ಮತ್ತು ತದನಂತರ ಅವರ ಮುಖಗಳು ಸಂತೋಷದಿಂದ ಪ್ರಕಾಶಿಸಿದವು. ಆ ಮೇಲೆ ಯಾರೂ ಹಸಿವುಳ್ಳವರಾಗಿರಲಿಲ್ಲವೆಂದು ಅವರು ಹೇಳಿದರು. ಆದುದರಿಂದ, ನೋಡಿ, ತದನಂತರ ನಾನಾಗಿಯೇ ಯೋಚಿಸಿದ್ದು, ‘ಇವರು ನಿಜ ಕ್ರೈಸ್ತರು.’ ಅವರು ಹಾಗೆಯೇ ಇರತಕ್ಕದೆಂದು ನಾನು ಯಾವಾಗಲೂ ಕಲ್ಪಿಸಿಕೊಳ್ಳುತ್ತಿದ್ದೆ. ಹೊಟ್ಟೆಗಿಲ್ಲದೆ ಇದ್ದ ಜೊತೆಗಾರರಿಗೆ ಇಂತಹ ಸ್ವಾಗತವನ್ನು ಇಲ್ಲಿ ಆಶ್ವಿಟ್ಸ್ನಲ್ಲಿ ನೀಡುವುದು ಎಷ್ಟು ಹಿತಕರವಾಗಿದ್ದಿರಬಹುದು!”