‘ಉಳಿದವರು ದುಃಖಿಸುವಂತೆ ದುಃಖಿಸಬೇಡಿ’
ಬಿರುಗಾಳಿಯೊಂದನ್ನು ಎದುರಿಸಿದ ಬಳಿಕ ಹೂವೊಂದು ತನ್ನ ತಲೆ ತಗ್ಗಿಸಿರುವಂತೆ ತೋರುವ ರೀತಿಯನ್ನು ನೀವು ಎಂದಾದರೂ ಗಮನಿಸಿದ್ದೀರೊ? ಒಂದು ವಿಧದಲ್ಲಿ ಅದೊಂದು ಹೃದಯಸ್ಪರ್ಶಿ ನೋಟವಾಗಿದೆ. ಎಷ್ಟಾದರೂ, ಬಿರುಮಳೆಯು ಬಹುಶಃ ಎಣಿಕೆಯಿಲ್ಲದ ಪ್ರಾಣಿಗಳನ್ನು ಮತ್ತು ಜನರನ್ನು—ಯಾವುದೇ ಹೂವಿಗಿಂತ ಬಹಳ ಸದೃಢವಾದ ಸೃಷ್ಟಿಗಳು—ಆಶ್ರಯಕ್ಕಾಗಿ ದಿಕ್ಕಾಬಟ್ಟೆ ಓಡುವಂತೆ ಮಾಡಿದೆ. ಆದರೂ, ಹವಾಮಾನದ ಪೂರ್ಣ ಉಗ್ರತೆಯನ್ನು ಎದುರಿಸುತ್ತಾ, ಹೂವು ಆ ಸ್ಥಳದಲ್ಲಿ ಬೇರೂರಿ ನಿಂತಿತ್ತು. ಈಗ ಅದು, ತನ್ನ ನಾಜೂಕಾದ ತೋರಿಕೆಯನ್ನು ಸುಳ್ಳು ಮಾಡುವಂತಹ ಬಲವನ್ನು ತೋರಿಸುತ್ತಾ, ತಗ್ಗಿ ಹೋಗಿದ್ದರೂ ಬಿದ್ದುಹೋಗದೆ ಅಖಂಡವಾಗಿದೆ. ಅದನ್ನು ನೀವು ಮೆಚ್ಚಿದಂತೆ, ಅದು ತನ್ನ ಚೈತನ್ಯವನ್ನು ಪುನಃ ಪಡೆದು, ತನ್ನ ಸುಂದರವಾದ ತಲೆಯನ್ನು ಮತ್ತೊಮ್ಮೆ ಆಕಾಶದ ಕಡೆಗೆ ಎತ್ತುವುದೊ ಎಂದು ನೀವು ವಿಸ್ಮಯಪಡಬಹುದು.
ಜನರೊಂದಿಗೂ ವಿಷಯವು ತದ್ರೀತಿಯದ್ದಾಗಿದೆ. ಈ ತೊಂದರೆಯುಕ್ತ ಸಮಯಗಳಲ್ಲಿ, ನಾವು ಎಲ್ಲ ರೀತಿಯ ಬಿರುಗಾಳಿಗಳನ್ನು ಎದುರಿಸುತ್ತೇವೆ. ಆರ್ಥಿಕ ತೊಂದರೆಗಳು, ಖಿನ್ನತೆ, ಕ್ಷೀಣಿಸುತ್ತಿರುವ ಆರೋಗ್ಯ, ಮರಣದಲ್ಲಿ ಒಬ್ಬ ಪ್ರಿಯ ವ್ಯಕ್ತಿಯ ನಷ್ಟ—ಇಂತಹ ಬಿರುಗಾಳಿಗಳು ನಮ್ಮೆಲ್ಲರನ್ನು ಒಂದಲ್ಲ ಒಂದು ಸಮಯ ಮುತ್ತುತ್ತವೆ, ಮತ್ತು ಹೇಗೆ ಹೂವು ತನ್ನನ್ನು ಬೇರು ಸಹಿತ ಕಿತ್ತುಕೊಂಡು ಆಶ್ರಯಕ್ಕಾಗಿ ಓಡಿಹೋಗಲು ಸಾಧ್ಯವಿಲ್ಲವೊ ಹಾಗೆಯೇ ಕೆಲವೊಮ್ಮೆ ನಾವು ಅವುಗಳನ್ನು ತೊರೆಯಲು ಸಾಧ್ಯವಿಲ್ಲ. ಬಹಳಷ್ಟು ದುರ್ಬಲರಾಗಿ ಕಾಣುವ ವ್ಯಕ್ತಿಗಳು ಬೆರಗುಗೊಳಿಸುವ ಬಲವನ್ನು ತೋರಿಸಿ, ಇಂತಹ ಆಕ್ರಮಣಗಳನ್ನು ತಾಳಿಕೊಳ್ಳುವುದನ್ನು ನೋಡುವುದು ಮನಕರಗಿಸುವಂಥದ್ದಾಗಿದೆ. ಅವರು ಅದನ್ನು ಹೇಗೆ ಮಾಡುತ್ತಾರೆ? ಅನೇಕ ವೇಳೆ ಕೀಲಿ ಕೈಯು ನಂಬಿಕೆಯಾಗಿರುತ್ತದೆ. ಯೇಸು ಕ್ರಿಸ್ತನ ಮಲತಮ್ಮನಾದ ಯಾಕೋಬನು ಬರೆದದ್ದು: “ಇಂತಹ ಪರೀಕ್ಷೆಗಳನ್ನು ಎದುರಿಸುವುದರಲ್ಲಿ ನಿಮ್ಮ ನಂಬಿಕೆಯು ಸಫಲವಾದಾಗ, ಅದರ ಫಲಿತಾಂಶವು ತಾಳಿಕೊಳ್ಳುವ ಸಾಮರ್ಥ್ಯವಾಗಿದೆ ಎಂದು ನೀವು ತಿಳಿದಿದ್ದೀರಿ.”—ಯಾಕೋಬ 1:3, ಟುಡೇಸ್ ಇಂಗ್ಲಿಷ್ ವರ್ಷನ್.
ಇನ್ನೊಂದು ಕೀಲಿ ಕೈಯು ನಿರೀಕ್ಷೆಯಾಗಿದೆ. ಉದಾಹರಣೆಗೆ, ಮರಣವು ಒಬ್ಬ ಪ್ರಿಯ ವ್ಯಕ್ತಿಯನ್ನು ತಾಕುವಾಗ, ಬದುಕಿ ಉಳಿದಿರುವವರಿಗೆ ನಿರೀಕ್ಷೆಯು ಮಹಾ ವ್ಯತ್ಯಾಸವನ್ನುಂಟುಮಾಡಬಲ್ಲದು. ಥೆಸಲೊನೀಕದಲ್ಲಿದ್ದ ಕ್ರೈಸ್ತರಿಗೆ ಅಪೊಸ್ತಲನಾದ ಪೌಲನು ಬರೆದದ್ದು: “ನಿದ್ರೆಹೋಗುವವರ ಗತಿ ಏನೆಂದು ನೀವು ತಿಳಿಯದೆ ಇದ್ದು ನಿರೀಕ್ಷೆಯಿಲ್ಲದವರಾದ ಇತರರಂತೆ ದುಃಖಿಸುವದು ನಮ್ಮ ಮನಸ್ಸಿಗೆ ಒಪ್ಪುವದಿಲ್ಲ.” (1 ಥೆಸಲೊನೀಕ 4:13) ಮರಣದ ನಿಮಿತ್ತ ಕ್ರೈಸ್ತರು ನಿಶ್ಚಯವಾಗಿ ದುಃಖಿಸುವುದಾದರೂ, ವ್ಯತ್ಯಾಸವೊಂದಿದೆ. ಅವರಿಗೆ ಮೃತರ ಸ್ಥಿತಿಯ ಕುರಿತು ಮತ್ತು ಪುನರುತ್ಥಾನದ ನಿರೀಕ್ಷೆಯ ಕುರಿತು ನಿಷ್ಕೃಷ್ಟವಾದ ಜ್ಞಾನವಿದೆ.—ಯೋಹಾನ 5:28, 29; ಅ. ಕೃತ್ಯಗಳು 24:15.
ಈ ಜ್ಞಾನವು ಅವರಿಗೆ ನಿರೀಕ್ಷೆಯನ್ನು ನೀಡುತ್ತದೆ. ಮತ್ತು ಆ ನಿರೀಕ್ಷೆಯು, ಸರದಿಯಾಗಿ ಅವರ ದುಃಖವನ್ನು ಕ್ರಮೇಣ ಕಡಿಮೆಗೊಳಿಸುತ್ತದೆ. ಅವರು ತಾಳಿಕೊಳ್ಳುವಂತೆ, ಮತ್ತು ಇನ್ನೂ ಹೆಚ್ಚನ್ನು ಮಾಡುವಂತೆ ಅದು ಸಹಾಯ ಮಾಡುತ್ತದೆ. ಸಕಾಲದಲ್ಲಿ, ಬಿರುಗಾಳಿಯ ತರುವಾಯದ ಹೂವಿನಂತೆ, ಅವರು ತಮ್ಮ ತಲೆಗಳನ್ನು ದುಃಖದಿಂದ ಎತ್ತಬಹುದು ಮತ್ತು ಪುನಃ ಒಮ್ಮೆ ಜೀವಿತದಲ್ಲಿ ಆನಂದ ಮತ್ತು ತೃಪ್ತಿಯನ್ನು ಕಂಡುಕೊಳ್ಳಬಹುದು.