ಜನ್ಮದಿನಾಚರಣೆಗಳು ಮರಣದ ಒಂದು ಜಾಡನ್ನು ಬಿಟ್ಟುಹೋಗಿವೆ
ಜನ್ಮದಿನಗಳ ಆಚರಣೆಯು ಹೆಚ್ಚಿನ ಜನರಿಂದ ಕೇವಲ ಒಂದು ಅಪಾಯರಹಿತ ರೂಢಿಯಂತೆ ವೀಕ್ಷಿಸಲ್ಪಡುತ್ತದೆ. ಆದರೆ ಬೈಬಲು ಈ ಸಂಪ್ರದಾಯದ ಸಕಾರಾತ್ಮಕ ಚಿತ್ರವನ್ನು ಚಿತ್ರಿಸುವುದಿಲ್ಲ. ಒಂದು ವಿಷಯವೇನಂದರೆ, ದೇವರ ನಂಬಿಗಸ್ತ ಸೇವಕರಲ್ಲಿ ಯಾರೊಬ್ಬರೂ ಜನ್ಮದಿನಗಳನ್ನು ಆಚರಿಸಿದರೆಂಬ ಯಾವ ಸೂಚನೆಯನ್ನೂ ಶಾಸ್ತ್ರಗಳು ಹೊಂದಿರುವುದಿಲ್ಲ.
ಬೈಬಲ್ ಉಲ್ಲೇಖಿಸುವ ಕೇವಲ ಎರಡು ಜನ್ಮದಿನಗಳು ದೇವರ ವೈರಿಗಳಾಗಿದ್ದ ಅರಸರದ್ದಾಗಿತ್ತು. ರಾಜನನ್ನು ಕೋಪಗೊಳಿಸಿದವನ ಮರಣದ ಕುರಿತು ಅತಿಥಿಗಳು ಹಿಗ್ಗುವಂತೆ, ಪ್ರತಿಯೊಂದು ಆಚರಣೆಯು ಒಂದು ಸಂಹಾರವನ್ನು ಒಳಗೊಂಡಿತ್ತು. ಮೊದಲನೆಯ ಸಂದರ್ಭದಲ್ಲಿ, ಐಗುಪ್ತದ ರಾಜನಾದ ಫರೋಹನು, ತನ್ನ ಮುಖ್ಯ ಭಕ್ಷ್ಯಕಾರನನ್ನು ಸಂಹರಿಸಿದನು. (ಆದಿಕಾಂಡ 40:2, 3, 20, 22) ಐಗುಪ್ತದ ಅರಸನು ತನ್ನ ಸೇವಕನೊಂದಿಗೆ ಕೋಪಗೊಂಡದರ್ದಿಂದ ಉತ್ಸವದಲ್ಲಿ ಹಾಗೆ ಮಾಡಿದನು. ಎರಡನೆಯ ಸಂದರ್ಭದಲ್ಲಿ, ಗಲಿಲಾಯದ ಅನೈತಿಕ ಅರಸನಾದ ಹೆರೋದನು, ಗೋಷ್ಠಿಯೊಂದರಲ್ಲಿ ತನ್ನನ್ನು ಹರ್ಷಿಸಿದ್ದ ಹುಡುಗಿಯ ನೃತ್ಯಕ್ಕೆ ಮೆಚ್ಚಿಕೆಯಾಗಿ ಸ್ನಾನಿಕನಾದ ಯೋಹಾನನ ಶಿರಚ್ಛೇದನ ಮಾಡಿಸಿದನು. ಎಂತಹ ವಿಕರ್ಷಕ ದೃಶ್ಯಗಳು!—ಮತ್ತಾಯ 14:6-11.
ಆದರೆ ಬೈಬಲ್ ಎರಡು ಬಹಳ ಅಸಾಧಾರಣವಾದ ಜನ್ಮದಿನಗಳ ಮೇಲೆ ಕೇಂದ್ರೀಕರಿಸಿಲ್ಲವೊ? ನಿಜವಾಗಿಯೂ ಇಲ್ಲ. ಈ ಘಟನೆಗಳು ಅಪೂರ್ವವಾಗಿರಲಿಲ್ಲವೆಂದು ಪ್ರಾಚೀನ ಯೆಹೂದ್ಯ ಇತಿಹಾಸಗಾರನಾದ ಜೋಸೀಫಸನು ಪ್ರಕಟಿಸುತ್ತಾನೆ. ಮನೋರಂಜನೆಗಾಗಿ ಜನ್ಮದಿನದ ಸಂಹಾರಗಳ ಆಚರಣೆಯ ಇತರ ಸಂದರ್ಭಗಳನ್ನು ಅವನು ದಾಖಲಿಸುತ್ತಾನೆ.
ಉದಾಹರಣೆಗೆ, ಸಾ.ಶ. 70 ರಲ್ಲಿ ಯೆರೂಸಲೇಮಿನ ನಾಶನದ ಅನಂತರ, 10,00,000 ಯೆಹೂದ್ಯರು ಸತ್ತುಹೋಗಿ 97,000 ಜನರು ಬಂದಿಗಳಾಗಿ ತೆಗೆದುಕೊಳ್ಳಲ್ಪಡಲು ಬದುಕಿದಾಗ, ಕೆಲವು ವಧೆಗಳು ಸಂಭವಿಸಿದವು. ರೋಮಿಗೆ ಹೋಗುವ ಮಾರ್ಗದಲ್ಲಿ, ರೋಮನ್ ಸೇನಾಪತಿ ಟೈಟಸ್, ತನ್ನ ಯೆಹೂದಿ ಬಂದಿಗಳನ್ನು ಹತ್ತಿರದ ಸೀಸರೀಯದ ಬಂದರಿಗೆ ಕರೆದೊಯ್ದನು.
ಜೋಸೀಫಸನು ಬರೆಯುವುದು: “ಟೈಟಸ್ ಸೀಸರೀಯದಲ್ಲಿ ತಂಗಿರುವಾಗ, ತನ್ನ ಸಹೋದರನಾದ ಡೊಮಿಷಿಯನ್ನ ಜನ್ಮದಿನವನ್ನು ಮಹಾ ವೈಭವದಿಂದ, ಪಶುಗಳೊಂದಿಗೆ ಕ್ರೀಡೆಗಳಲ್ಲಿ ಮತ್ತು ಜ್ವಾಲೆಗಳಲ್ಲಿ 2,500 ಕ್ಕಿಂತಲೂ ಹೆಚ್ಚು ಕೈದಿಗಳನ್ನು ಸಂಹರಿಸುತ್ತಾ, ಆಚರಿಸಿದನು. ಇದರ ತರುವಾಯ ಅವನು ಫಿನೀಷಿಯದಲ್ಲಿದ್ದ ರೋಮನ್ ವಸಾಹತು ಆಗಿದ್ದ ಬೆರೀಟಸ್ಗೆ [ಬೇರೂಟ್] ಹೋದನು, ಅಲ್ಲಿ ಅವನು ತನ್ನ ತಂದೆಯ ಜನ್ಮದಿನವನ್ನು ವಿಸ್ತಾರವಾದ ಪ್ರದರ್ಶನಗಳಲ್ಲಿ ಇನ್ನೂ ಅಧಿಕ ಬಂದಿಗಳನ್ನು ಕೊಲ್ಲುವ ಮೂಲಕ ಆಚರಿಸಿದನು.”—ಜೋಸೀಫಸ್: ದ ಎಸೆನಲ್ಷ್ ರೈಟಿಂಗ್ಸ್ ನಲ್ಲಿ ಪೌಲ ಎಲ್. ಮೇಅರ್ ಮೂಲಕ ಭಾಷಾಂತರಿಸಿದ ದ ಜೂಯಿಷ್ ವಾರ್, VII, 37.
“ತದನಂತರದ ಸಮಯದ ಹೀಬ್ರು ಜನರು ಜನ್ಮದಿನಗಳ ಆಚರಣೆಯನ್ನು ಮೂರ್ತಿ ಪೂಜೆಯ ಒಂದು ಭಾಗವೆಂಬಂತೆ ನೋಡಿದರು, ಇಂತಹ ನೋಟವು ಈ ದಿನಗಳೊಂದಿಗೆ ಸೇರಿದ್ದ ಸಾಮಾನ್ಯ ಆಚರಣೆಗಳ ಬಗ್ಗೆ ಅವರು ನೋಡಿದ್ದ ವಿಷಯಗಳಿಂದ ಹೇರಳವಾಗಿ ದೃಡೀಕರಿಸಲ್ಪಟ್ಟಿರಬಹುದಾಗಿತ್ತು” ಎಂದು ದಿ ಇಂಪೀರಿಯಲ್ ಬೈಬಲ್ ಡಿಕ್ಷನರಿ ಹೇಳುವುದು ಆಶ್ಚರ್ಯಕರವೇನೂ ಅಲ್ಲ.
ಬೈಬಲಿನಲ್ಲಿ ಅಷ್ಟು ಅಶುಭಕರವಾಗಿ ಸಾದರಪಡಿಸಿದ ಮತ್ತು ರೋಮನ್ ಜನರಿಂದ ಅಷ್ಟು ಅಸಹ್ಯವಾಗಿ ಆಚರಿಸಲ್ಪಟ್ಟ ರೂಢಿಯಲ್ಲಿ ಸೇರುವಂತೆ ನಂಬಿಗಸ್ತ ಪ್ರಥಮ ಶತಮಾನದ ಕ್ರೈಸ್ತರಿಗೆ ಅನಿಸತ್ತಿರಲಿಲ್ಲ. ಇಂದು, ಜನ್ಮದಿನಗಳ ಕುರಿತಿರುವ ಬೈಬಲ್ ದಾಖಲೆಗಳು ತಮ್ಮ ಉಪದೇಶಕ್ಕಾಗಿ ಬರೆದಿಟ್ಟಿರುವ ವಿಷಯಗಳಲ್ಲಿ ಒಂದಾಗಿವೆ ಎಂದು ಯಥಾರ್ಥ ಕ್ರೈಸ್ತರು ಗ್ರಹಿಸುತ್ತಾರೆ. (ರೋಮಾಪುರ 15:4) ಜನ್ಮದಿನದ ಆಚರಣೆಗಳು ವ್ಯಕ್ತಿಗೆ ಮಿತಿಮೀರಿದ ಪ್ರಮುಖತೆಯನ್ನು ಕೊಡುವುದರಿಂದ ಅವರು ಇಂತಹ ಆಚರಣೆಗಳನ್ನು ತ್ಯಜಿಸುತ್ತಾರೆ. ಹೆಚ್ಚು ಪ್ರಾಮುಖ್ಯವಾಗಿ, ಬೈಬಲಿನಲ್ಲಿರುವ ಜನ್ಮದಿನಗಳ ಅಹಿತಕರವಾದ ನಿರೂಪಣೆಯನ್ನು ಯೆಹೋವನ ಸೇವಕರು ವಿವೇಕದಿಂದ ಪರಿಗಣಿಸುತ್ತಾರೆ.
[ಪುಟ 25 ರಲ್ಲಿರುವ ಚಿತ್ರ]
ಸೀಸರೀಯದಲ್ಲಿರುವ ಅಖಾಡ