ಮಾನವ ಮಾರ್ಗದರ್ಶನವು ವಿಫಲಗೊಂಡಿದೆಯೆ?
ಎಲ್ಲಾ ವಸ್ತುಗಳನ್ನು ಯಾರು ಸೃಷ್ಟಿ ಮಾಡಿದರು? “ದೇವರು” ಎಂಬುದು ನಿಮ್ಮ ಉತ್ತರವಾಗಿರುವುದಾದರೆ, ಸೃಷ್ಟಿಕರ್ತನಾದ ಬೈಬಲಿನ ದೇವರಲ್ಲಿ ನಂಬಿಕೆಯನ್ನಿಡುವ ಲಕ್ಷಾಂತರ ಜನರೊಂದಿಗೆ ನೀವು ಸಮ್ಮತಿಸುವವರಾಗಿದ್ದೀರಿ.
ಆದರೂ, ದೇವರಲ್ಲಿ ನಂಬಿಕೆಯನ್ನಿಡುವ ಹಲವರಿಗೆ, ಮಾನವ ಕುಲದ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಆತನು ಕ್ರಿಯಾತ್ಮಕವಾಗಿ ಒಳಗೊಂಡಿದ್ದಾನೆಂಬುದನ್ನು ಅಂಗೀಕರಿಸುವುದು ಕಷ್ಟವಾಗುತ್ತದೆ. ಮಾನವ ಕುಲಕ್ಕೆ ಪರಿಹಾರವನ್ನು ತರುವಂತಹ ಒಂದು ಕಾರ್ಯಕ್ರಮವು ದೇವರಿಂದ ಕಾರ್ಯರೂಪಕ್ಕೆ ತರಲ್ಪಡುತ್ತಿದೆಯೆಂದು ಭಾವಿಸುವುದು ವಾಸ್ತವಿಕವೊ? ಇದು ಹಾಗಿದೆಯೆಂದು ಅನೇಕರು ವಿವೇಕಯುತವಾದ ರುಜುವಾತನ್ನು ಕಂಡುಕೊಂಡಿಲ್ಲ.
ಸಾವಿರಾರು ವರುಷಗಳ ವರೆಗೆ, ಮಾನವರು ದೇವರನ್ನು ಬಿಟ್ಟು, ಪರಿಹಾರಗಳ ಶೋಧನೆಯಲ್ಲಿ ಅಸಂಖ್ಯಾತ ಸ್ವಸಹಾಯ ವಿಧಾನಗಳೊಂದಿಗೆ ಪ್ರಯೋಗ ನಡೆಸಿದ್ದಾರೆ. ಆದರೆ ಮಾನವರು ಪರಿಹಾರವನ್ನು ಕಂಡುಕೊಂಡಿದ್ದಾರೊ? ಅಥವಾ ಸಮಸ್ಯೆಗಳು ಹೆಚ್ಚು ಗಂಭೀರ ಮತ್ತು ಬಗೆಹರಿಸಲು ಕಠಿನವಾಗುತ್ತಿವೆಯೊ? ಲೋಕದಲ್ಲಿ ಇಂದಿರುವಂತಹ ತುರ್ತಿನ ಸಮಸ್ಯೆಗಳನ್ನು ಮಾನವನು ಹೇಗೆ ನಿರ್ವಹಿಸುತ್ತಿದ್ದಾನೆ?
ಪರಿಣತನೊಬ್ಬನು ಇದನ್ನು ಈ ರೀತಿಯಲ್ಲಿ ಮುಂದಿಡುತ್ತಾನೆ: “ವಿಕಾಸಗೊಂಡ ದೇಶಗಳು, ಕೈಗಾರಿಕೆಯ ಕ್ರಾಂತಿಯಂದಿನಿಂದ, ಸಂರಕ್ಷಿಸಲಸಾಧ್ಯವಾದ ವಿಧಾನಗಳ ಉತ್ಪಾದನೆ ಮತ್ತು ಬಳಕೆಯ ಮೂಲಕ, ಲೋಕದ ನೈಸರ್ಗಿಕ ಸಂಪನ್ಮೂಲಗಳನ್ನು ಅತಿಯಾಗಿ ಶೋಷಣೆ ಮಾಡಿದ್ದು, ಭೌಗೋಳಿಕ ಪರಿಸರಕ್ಕೆ, ವಿಕಾಸಹೊಂದುತ್ತಿರುವ ದೇಶಗಳ ಹಾನಿಗೆ ಕಾರಣವಾಗಿವೆ.”
ಭೂಮಿಯನ್ನು ಧ್ವಂಸಗೊಳಿಸಲು ಮಾನವನು ಮುಂದುವರಿಯುತ್ತಿದ್ದಾನೆ. “ಈ ಶತಮಾನದ ಎರಡನೆಯ ಭಾಗದಲ್ಲಿ, ಆರ್ಥಿಕ ದುರಾಶೆ, ಎಚ್ಚರಿಕೆಯ ಕೊರತೆ, ಮತ್ತು ಅಲಕ್ಷ್ಯಗಳು ಮಾನವ ಬಲಿಗಳನ್ನು ತೆಗೆದುಕೊಂಡ ವಿಪತ್ತುಗಳಿಗೆ ಮಾತ್ರವಲ್ಲ ಅನೇಕ ವೇಳೆ ಅಗಣ್ಯ ಮಿತಿಗಳ ತನಕವೂ ಪರಿಸರವನ್ನು ಅವನತಿಗಿಳಿಸಿದ ಮಹಾ ವಿಪತ್ತುಗಳಿಗೆ ಹೊಣೆಯಾದವು,” ಎಂದು ಅರ್ಜೆಂಟೀನದ ಕ್ಲಾರೀನ್ ವಾರ್ತಾಪತ್ರಿಕೆಯು ವ್ಯಾಖ್ಯಾನಿಸಿತು.
ಆಧುನಿಕ ಸಮಾಜದಲ್ಲಿ ಇಂದು, ವಿಪರೀತ ಬಡತನವು ಒಂದು ಶಾಶ್ವತವಾದ ನೆಲೆಯಾಗಿರುವಂತೆ ಭಾಸವಾಗುತ್ತದೆ. ಲೋಕದ ಶ್ರೀಮಂತ ರಾಷ್ಟ್ರಗಳೆಂದು ಎನ್ನಿಸಿಕೊಂಡಿರುವವುಗಳೂ ಸಹ ಬಡತನದ ತಡೆಯಲಸಾಧ್ಯವಾದ ಭಾರದ ಕೆಳಗೆ ಬಗ್ಗಿಹೋಗುತ್ತಿವೆ. ಟೊರಾಂಟೊ ಕೆನಡದ ದ ಗ್ಲೋಬ್ ಆ್ಯಂಡ್ ಮೇಯ್ಲ್ ಗನುಸಾರ, “ಕೆನಡದ ಸರ್ವರಲ್ಲಿ ಮೂರನೇ ಒಂದು ಭಾಗದಷ್ಟು ಜನರು, ತಮ್ಮ ಕಾರ್ಮಿಕ ಜೀವನಾವಧಿಯಲ್ಲಿ ಬಡತನವನ್ನು ಅನುಭವಿಸುತ್ತಾರೆ,” ಎಂಬುದಾಗಿ ಅಂದಾಜು ಮಾಡಲ್ಪಡುತ್ತದೆ. ವಾರ್ತಾಪತ್ರಿಕೆಯು ಕೂಡಿಸಿದ್ದೇನಂದರೆ “ಬಡತನದ ಪ್ರಮುಖ ಕಾರಣಗಳಲ್ಲಿ ಕುಟುಂಬ ಕುಸಿತವು ಒಂದಾಗಿದೆ, ಮತ್ತು ಆ ಪ್ರವೃತ್ತಿಯು ಇತ್ತೀಚೆಗಿನ ವರ್ಷಗಳಲ್ಲಿ ಅಧಿಕಗೊಂಡಿದೆ.”
ಅಮಲೌಷಧದ ದುರುಪಯೋಗವು ಕ್ಷೀಣಿಸುತ್ತಿರುವ ಒಂದು ಸಮಾಜದ ಇನ್ನೊಂದು ಸೂಚನೆಯಾಗಿದೆ. ಅದರ ಕುರಿತು ಮಾನವ ಕುಲವು ಏನನ್ನು ಮಾಡಬಲ್ಲದು? ಮೊತ್ತದಲ್ಲಿ ತೀರಾ ಕೊಂಚವೆಂಬುದು ವ್ಯಕ್ತ. ನಿದ್ರಾಜನಕಗಳ ದುರುಪಯೋಗದ ಒಂದು ನೇರ ಫಲಿತಾಂಶವಾಗಿ, ಲಕ್ಷಾಂತರ ಜನರು ಶಾರೀರಿಕ, ಮಾನಸಿಕ, ಮತ್ತು ನೈತಿಕ ಅವನತಿಯನ್ನು ಸತತವಾಗಿ ಅನುಭವಿಸುತ್ತಿದ್ದಾರೆ. ಮತ್ತು ಸಮಸ್ಯೆಯು ಕಾಡ್ಕಿಚಿನ್ಚಂತೆ ಹಬ್ಬುತ್ತಿದೆ.
ವಿಜ್ಞಾನಿಗಳು ರೋಗದ ವಿರುದ್ಧ ಯುದ್ಧದಲ್ಲಿ ಸೋತುಹೋಗುತ್ತಿರುವಂತೆ ಕಾಣುತ್ತಿದೆ. ನಿಜ, ಆಧುನಿಕ ತಾಂತ್ರಿಕತೆಯು ಅನೇಕ ಕದನಗಳನ್ನು ಗೆದಿದ್ದೆ. ಆದರೂ, ಕೆಲವು ವೈಜ್ಞಾನಿಕ ಕಾರ್ಯವಿಧಾನಗಳು ತಾವೇ ರೋಗವನ್ನುಂಟುಮಾಡುವ ಸೂಕ್ಷಜೀವಾಣುಗಳ ಹೊಸ ಔಷಧ ನಿರೋಧಕ ರೋಗಗಳ ತಲೆದೋರುವಿಕೆಗೆ ಸಹಾಯ ನೀಡಿವೆ.
ಮಾನವ ಹಕ್ಕುಗಳ ವ್ಯಾಪಕವಾದ ಉಲ್ಲಂಘನೆಯನ್ನು ಮಾನವ ಸರಕಾರಗಳಿಗೆ ನಿಲ್ಲಿಸಲು ಸಾಧ್ಯವಿಲ್ಲ. ಉದಾಹರಣೆಗೆ, ಗುಲಾಮಗಿರಿಯನ್ನು ತಡೆಯಲು ಅನೇಕ ಬಹಿರಂಗ ವಾಗ್ದಾನಗಳು ಮತ್ತು ನಿಯಮಗಳು ರಚಿಸಲ್ಪಟ್ಟಿರುವುದಾದರೂ, ಲೋಕವ್ಯಾಪಕವಾಗಿ ಹತ್ತು ಕೋಟಿಗಿಂತಲೂ ಹೆಚ್ಚು ಜನರು ಹೀನವಾದ ಗುಲಾಮತನಕ್ಕೆ ಸಮವಾದ ಪರಿಸ್ಥಿತಿಗಳ ಕೆಳಗೆ ಕೆಲಸಮಾಡುತ್ತಾರೆಂದು ಅಂದಾಜು ಮಾಡಲಾಗುತ್ತದೆ.
ಆದರೆ ಮಾನವ ಮಾರ್ಗದರ್ಶನವು ಏಕೆ ವಿಫಲಗೊಂಡಿದೆ? ಈ ಅಂಶಗಳನ್ನು ಪರಿಗಣಿಸಿ. ಮಾನವ ಮಾರ್ಗದರ್ಶನವು ಜನರಿಂದ—ಗಂಭೀರ ಪರಿಮಿತಿಗಳುಳ್ಳ ಜನರು—ಬಂದದ್ದಾಗಿದೆ. ಜೀವನದಲ್ಲಿ ಅವರ ಅನುಭವವು ಸಂಬಂಧ ಸೂಚಕವಾಗಿ ಕೊಂಚವಾಗಿದೆ ಮತ್ತು ಸಾಮಾನ್ಯವಾಗಿ ನಿರ್ದಿಷ್ಟವಾದ ಸಂಸ್ಕೃತಿಗಳು ಅಥವಾ ಪರಿಸರಗಳಿಂದ ಪರಿಮಿತಗೊಳಿಸಲ್ಪಡುತ್ತದೆ. ಅವರ ಜ್ಞಾನವು ಕೂಡ ಸೀಮಿತಗೊಳಿಸಲ್ಪಟ್ಟಿದೆ. ಅವರು ಕೊಡುವಂತಹ ಯಾವುದೇ ಮಾರ್ಗದರ್ಶನವು ಆ ಮಿತಿಗಳನ್ನು ಪ್ರತಿಬಿಂಬಿಸುತ್ತದೆ. ಅಪೊಸ್ತಲ ಪೌಲನಂದಂತೆ, “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.”—ರೋಮಾಪುರ 3:23.
ವಾಸ್ತವದಲ್ಲಿ ಮಾನವ ಕುಲದ ಅಧಿಕ ಭಾಗವು ಅನುಭವಿಸುತ್ತಿರುವ ಅಧಿಕಾಂಶ ಸಮಸ್ಯೆಗಳು ಮತ್ತು ತೊಂದರೆಗಳು, ದೇವರ ಮಾರ್ಗದರ್ಶನವನ್ನು ತಿರಸ್ಕರಿಸುತ್ತಿರುವುದರ ಪ್ರತ್ಯಕ್ಷವಾದ ಅಥವಾ ಪರೋಕ್ಷವಾದ ಫಲಿತಾಂಶವಾಗಿವೆ. ಆದರೂ, ಅಂತಹ ಮಾರ್ಗದರ್ಶನವನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ? ಇಂದು ದೇವರು ನಮಗೆ ಮಾರ್ಗದರ್ಶನವನ್ನು ಹೇಗೆ ಒದಗಿಸುತ್ತಾನೆ? ಹಿಂಬಾಲಿಸುವ ಲೇಖನವು ಉತ್ತರವನ್ನು ಪರಿಗಣಿಸುವುದು.