ಜ್ಞಾಪಿಸಿಕೊಳ್ಳಬೇಕಾದ ಒಂದು ರಾತ್ರಿ
ಸುಮಾರು 3,500 ವರ್ಷಗಳ ಹಿಂದೆ, ಚಿರಸ್ಮರಣೀಯವಾದ ಒಂದು ದಿನದಂದು, ಐಗುಪ್ತದಲ್ಲಿ ಗುಲಾಮರಾಗಿದ್ದ ಇಸ್ರಾಯೇಲ್ಯರು ಕುರಿಮರಿಯೊಂದನ್ನು ಕೊಂದು ಅದರ ರಕ್ತವನ್ನು ತಮ್ಮ ಮನೆಗಳ ನಿಲುವುಪಟ್ಟಿಗಳ ಮತ್ತು ಚೌಕಟ್ಟಿನ ಕಲ್ಲುಗಳ ಮೇಲೆ ಚಿಮುಕಿಸುವಂತೆ ಯೆಹೋವನು ಏರ್ಪಡಿಸಿದನು. ಅದೇ ರಾತ್ರಿ, ದೇವರ ದೂತನು ಈ ರೀತಿಯಲ್ಲಿ ಗುರುತು ಹಾಕಲ್ಪಟ್ಟ ಮನೆಗಳ ಮೇಲೆ ಹಾದುಹೋದನು, ಆದರೆ ಎಲ್ಲಾ ಐಗುಪ್ತ್ಯರ ಮನೆಯಲ್ಲಿದ್ದ ಚೊಚ್ಚಲು ಗಂಡು ಮಕ್ಕಳನ್ನು ಕೊಂದುಹಾಕಿದನು. ಆಗ ಇಸ್ರಾಯೇಲ್ಯರು ಬಿಡುಗಡೆ ಹೊಂದಿದರು. ಅಂದಿನಿಂದ, ಆ ಘಟನೆಯ ವಾರ್ಷಿಕೋತ್ಸವದಂದು, ಯೆಹೂದ್ಯರು ಪಸ್ಕವನ್ನು ಆಚರಿಸಿದ್ದಾರೆ.
ತನ್ನ ಅಪೊಸ್ತಲರೊಂದಿಗೆ ತನ್ನ ಕಡೆಯ ಪಸ್ಕವನ್ನು ಯೇಸು ಕ್ರಿಸ್ತನು ಆಚರಿಸಿದ ಕೂಡಲೇ, ತನ್ನ ಬಲಿಸೂಚಕ ಮರಣವನ್ನು ಸ್ಮರಿಸುವಂತಹ ಒಂದು ಭೋಜನವನ್ನು ಅವನು ಸ್ಥಾಪಿಸಿದನು. ತನ್ನ ನಂಬಿಗಸ್ತ ಅಪೊಸ್ತಲರಿಗೆ ರೊಟ್ಟಿಯನ್ನು ಕೊಟ್ಟು ಅವನು ಹೇಳಿದ್ದು: “ತಕ್ಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ ಅಂದನು.” ಆಮೇಲೆ ಅವನು ಅವರಿಗೆ ದ್ರಾಕ್ಷಾರಸದ ಪಾತ್ರೆಯನ್ನು ಕೊಟ್ಟು ಹೇಳಿದ್ದು: “ಇದರಲ್ಲಿರುವದನ್ನು ಎಲ್ಲರೂ ಕುಡಿಯಿರಿ; ಇದು ನನ್ನ ರಕ್ತ, ಇದು ಒಡಂಬಡಿಕೆಯ ರಕ್ತ, ಇದು ಪಾಪಗಳ ಕ್ಷಮೆಗಾಗಿ ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ.” “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ,” ಎಂದು ಸಹ ಯೇಸು ಹೇಳಿದನು. (ಮತ್ತಾಯ 26:26-28; ಲೂಕ 22:19, 20) ಹೀಗೆ ಯೇಸು ಅವನ ಮರಣದ ಈ ಆಚರಣೆಯನ್ನು ನಡೆಸುವಂತೆ ಅವನ ಹಿಂಬಾಲಕರಿಗೆ ಆಜ್ಞಾಪಿಸಿದನು.
ಯೇಸುವಿನ ಮರಣದ ಈ ಜ್ಞಾಪಕವನ್ನು ಆಚರಿಸುವುದರಲ್ಲಿ ತಮ್ಮ ಜೊತೆಸೇರುವಂತೆ ಯೆಹೋವನ ಸಾಕ್ಷಿಗಳು ನಿಮ್ಮನ್ನು ಆದರದಿಂದ ಆಮಂತ್ರಿಸುತ್ತಾರೆ. ನಿಮ್ಮ ಮನೆಗೆ ಅತಿ ಸಮೀಪದಲ್ಲಿರುವ ರಾಜ್ಯ ಸಭಾಗೃಹದಲ್ಲಿ ನೀವು ಹಾಜರಾಗಬಲ್ಲಿರಿ. ಸರಿಯಾದ ಸಮಯ ಮತ್ತು ಸ್ಥಳಕ್ಕಾಗಿ ನಿಮ್ಮ ವಠಾರದಲ್ಲಿರುವ ಸಾಕ್ಷಿಗಳೊಂದಿಗೆ ವಿಚಾರಿಸಿ ನೋಡಿ. ಇಸವಿ 1994 ರಲ್ಲಿ ಆಚರಣೆಗಾಗಿರುವ ತಾರೀಖು, ಶನಿವಾರ, ಮಾರ್ಚ್ 26 ಆಗಿದೆ. ಸೂರ್ಯಾಸ್ತಮಾನದ ಬಳಿಕ ರೊಟ್ಟಿ, ದ್ರಾಕ್ಷಾರಸಗಳು ಹಂಚಲ್ಪಡುವುವು.