ರಾಜ್ಯ ಘೋಷಕರು ವರದಿ ಮಾಡುತ್ತಾರೆ
ದೃಢ ನಿಷ್ಠೆಯು ಹೇರಳ ಪ್ರತಿಫಲಗಳನ್ನು ತರುತ್ತದೆ
ಯೇಸು ತನ್ನ ಹಿಂಬಾಲಕರು ಹಿಂಸಿಸಲ್ಪಡುವರೆಂದು ಮುಂತಿಳಿಸಿದನು, ಮತ್ತು ಹಾಗೆಯೇ ಅಪೊಸ್ತಲ ಪೌಲನು ಸಹ, 2 ತಿಮೊಥೆಯ 3:12 ರಲ್ಲಿ ತಿಳಿಸಿದ ಪ್ರಕಾರ: “ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸುಮಾಡುವವರೆಲ್ಲರೂ ಹಿಂಸೆಗೊಳಗಾಗುವರು.” ಆದರೆ ಯೆಹೋವ ದೇವರನ್ನು ಸೇವಿಸುವುದರಲ್ಲಿ ದೃಢ ನಿಷ್ಠೆಯು ಹೇರಳವಾದ ಪ್ರತಿಫಲಗಳನ್ನು ತರುತ್ತದೆ.
▫ ಇದು ಮಲೇಷಿಯದ ಈಶಾನ್ಯ ಕರಾವಳಿಯ ಮೇಲಿನ ಒಂದು ಊರಿನ ವಿಷಯದಲ್ಲಿ ಸತ್ಯವಾಗಿತ್ತು. ಒಬ್ಬ ತಂದೆಯು ತನ್ನ ಮಕ್ಕಳಿಗೆ ಕಟು ವಾಗ್ದಂಡನೆ ನೀಡುವ ಅತಿ ನಿಷ್ಠೆಯ ಬೌದ್ಧನಾಗಿದ್ದರೂ, ತನ್ನ ಮೂವರು ಹೆಣ್ಣು ಮತ್ತು ಮೂವರು ಗಂಡು ಮಕ್ಕಳನ್ನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನ ಮಾಡುವುದರಿಂದ ತಡೆಯ ಶಕ್ತನಾಗಲಿಲ್ಲ. ಅವನ ಪತ್ನಿಯು ಸಹ ಸತ್ಯದಲ್ಲಿ ಅಭಿರುಚಿ ತೋರಿಸಿದಳು. ಹೀಗೆ ಒಮ್ಮೆ ಒಬ್ಬ ನೆರೆಯವನು ಅವನನ್ನು ಅಣಕಿಸಿದ್ದು: “ನೀನು ಮಕ್ಕಳ ಮೇಲಣ ನಿನ್ನ ಅಂಕೆಯನ್ನು ಕಳೆದುಕೊಂಡು ಅವರನ್ನು ಯೆಹೋವನ ಸಾಕ್ಷಿಗಳಾಗುವಂತೆ ಬಿಡುವುದು ಹೇಗೆ ಸಾಧ್ಯ? ನನ್ನ ಮಕ್ಕಳೆಲ್ಲರು ನನಗೆ ಮತ್ತು ನಮ್ಮ ಪುರಾತನ ಬೌದ್ಧ ಧರ್ಮಕ್ಕೆ ಅಂಟಿಕೊಂಡಿದ್ದಾರೆ. ನೀನು ಮರುಕಗೂಡಿದವನು!”
ತನ್ನ ಮಕ್ಕಳೊಂದಿಗೆ ಅಭ್ಯಾಸ ಮಾಡುತ್ತಿದ್ದ ಸಹೋದರಿಗೆ ಪೆಟ್ಟು ಹಾಕುವೆನೆಂದು ಬೆದರಿಸುತ್ತಾ ತಂದೆಯು ಮನೆಗೆ ಧಾವಿಸಿದನು. ಆದರೂ, ಮಕ್ಕಳು ಅವನನ್ನು ಶಾಂತಗೊಳಿಸಿದರು ಮತ್ತು ಯೆಹೋವನ ಸಾಕ್ಷಿಗಳೊಂದಿಗೆ ಅಭ್ಯಾಸ ಮಾಡುವುದನ್ನು ಮತ್ತು ಕೂಟಗಳಿಗೆ ಹಾಜರಾಗುವುದನ್ನು ತಮ್ಮ ತಾಯಿಯ ಬೆಂಬಲದಿಂದ ಮುಂದುವರಿಸಿದರು.
ಆದರೂ ಕೊನೆಗೆ, ಇಡೀ ಕುಟುಂಬ ತನ್ನ ಮುಂದೆ ಹಾಜರಾಗಬೇಕೆಂದು ತಂದೆ ಆಜ್ಞೆಮಾಡಿದನು. “ನನ್ನ ಮನೆಯಲ್ಲಿ ಉಳಿಯುವ ಮತ್ತು ಕ್ರೈಸ್ತರಾಗಿ ಮನೆಬಿಟ್ಟು ಹೋಗುವ ಈ ಎರಡರ ನಡುವೆ ಆರಿಸಿಕೊಳ್ಳಿ” ಎಂದು ನಿರ್ಬಂಧಿಸಿದನವನು. ಅತ್ಯಂತ ನಯನುಡಿಯ ಹುಡುಗನಾದ ಹಿರೀ ಮಗನು ಕೂಡಲೆ ಹೊರಡಲು ಗಂಟುಕಟ್ಟ ತೊಡಗಿದನು. “ಬೇಡ!” ಎಂದು ಅರಚಿದನು ತಂದೆ. “ನೀವೆಲ್ಲರೂ ದಂಗೆಖೋರ ಮಕ್ಕಳಾಗಿರುವುದರಿಂದ, ನಾನೇ ಸಾಯುವುದು ಲೇಸು.” ಅನಂತರ ಅವನು ಮನೆಯ ಹೊರಗೆ ಧಾವಿಸಿದನು, ಅವನು ತನ್ನನ್ನು ಹತಿಸಿಕೊಳ್ಳಬಾರದೆಂದು ಬೇಡುತ್ತಾ ಕುಟುಂಬವು ಅವನನ್ನು ಬೆನ್ನಟ್ಟಿತು. ಅವರ ವಿನಂತಿಗಳಿಂದ ಮನತಟ್ಟಿದವನಾಗಿ ಅವನು ಮನೆಗೆ ಮರಳಿದನು.
ಸಮಯವು ದಾಟಿತು. ತನ್ನ ಮಕ್ಕಳ ವರ್ತನೆಯ ಮೇಲೆ ಬೈಬಲ್ ಸತ್ಯದ ಸತ್ಪರಿಣಾಮವನ್ನು ತಂದೆಯು ಗಮನಿಸತೊಡಗಿದನು. ಒಂದು ದಿನ ಅವನು ಈಗ ಬಹಳ ಚಿಂತಾಪರನಾಗಿ ತೋರಿದ ಅವನ ಅಣಕಿಸುವ ಮಿತ್ರನನ್ನು ಭೇಟಿಯಾದನು, ಅವನು ಹೇಳಿದ್ದು: “ನನ್ನ ಮಕ್ಕಳಲ್ಲಿ ನಾನು ಅತೀವ ನಿರಾಶೆಗೊಂಡಿದ್ದೇನೆ. ಅವರು ನನಗೆ ಮೋಸ ಮಾಡುತ್ತಿದ್ದಾರೆ ಮತ್ತು ನನ್ನಿಂದ ಕದಿಯುತ್ತಿದ್ದಾರೆ.” ಆದರೆ ಯಾರ ಮಕ್ಕಳು ಯೆಹೋವನ ಸಾಕ್ಷಿಗಳೊಂದಿಗೆ ಅಭ್ಯಾಸಮಾಡುತ್ತಿದ್ದರೋ ಅವರ ತಂದೆಯು ಅಂದದ್ದು: “ಓ, ನನ್ನ ಮಕ್ಕಳಾದರೋ ವಿಭಿನ್ನರು! ಅವರು ನನ್ನ ಕಡೆಗೆ ಅತಿ ದಯಾಪರರಾಗಿದ್ದಾರೆ ಮತ್ತು ನನಗೆ ಕೆಲಸವಿಲ್ಲದೆ ಇದ್ದಾಗ ನನ್ನ ಕಾರಿನ ಹಣ ಸಾಲವನ್ನು ಸಲ್ಲಿಸಲು ಕೂಡ ನನಗೆ ಸಹಾಯ ಮಾಡಿದರು.”
ಇಂದು, ಆ ಮೂವರು ಹೆಣ್ಣು ಮಕ್ಕಳು ಮತ್ತು ತಾಯಿ ದೀಕ್ಷಾಸ್ನಾನ ಪಡೆದಿದ್ದಾರೆ. ಒಬ್ಬ ಮಗನು ವಿಶೇಷ ಪಯನೀಯರನಾಗಿದ್ದಾನೆ. ಮತ್ತು ಹಿಂದಣ ಅತಿ ನಿಷ್ಠೆಯ ಮತ್ತು ಕುಪಿತ ತಂದೆ? ಅವನೀಗ ಸ್ನೇಹಪರನಾಗಿದ್ದಾನೆ ಮತ್ತು ಸ್ಮಾರಕಕ್ಕೆ ಹಾಜರಾಗಿದ್ದಾನೆ.
ಆತನಿಗೆ ಅವರು ತೋರಿಸಿದ ದೃಢ ನಿಷ್ಠೆಗಾಗಿ ಮಗನಿಗೆ ಮತ್ತು ಅವನ ಮೂವರು ಸಹೋದರಿಯರಿಗೆ ಹಾಗೂ ಅವರ ತಾಯಿಗೆ ಯೆಹೋವನು ಪ್ರತಿಫಲವನ್ನು ಕೊಟ್ಟನು. ಈಗ ಅವರು ಯೆಹೋವನ ಹೃದಯವನ್ನು ಸಂತೋಷಪಡಿಸುವ ಹುರುಪಿನ ರಾಜ್ಯ ಸುವಾರ್ತಿಕರಾಗಿದ್ದಾರೆ.—ಜ್ಞಾನೋಕ್ತಿ 27:11.