ಆಕೆ ತನ್ನ ನಂಬಿಕೆಗಾಗಿ ಹೋರಾಡಿದಳು
ಮೂರು ವರ್ಷಗಳ ಹಿಂದೆ ಸ್ಪೆಯ್ನ್ನ ಕಡಿಜ್ ಊರಿನ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾದ ಕಾರೀಡಾಡ್ ಬಾಸಾನ್ ಲಿಸ್ಟಾನ್ಗೆ ತುರ್ತಾಗಿ ಒಂದು ಶಸ್ತ್ರ ಚಿಕಿತ್ಸೆಯಾಗಬೇಕಾಗಿತ್ತು. ಪಿತ್ತಾಶ್ಮರಿ ಆಕೆಗೆ ಜ್ವರವನ್ನು ಬರಿಸುತ್ತಿದ್ದುದು ಮಾತ್ರವಲ್ಲ, ಆಕೆಯ ರಕ್ತಪ್ರವಾಹವನ್ನು ವಿಷಮಯ ಮಾಡುತ್ತಿತ್ತು. ಆಕೆಯನ್ನು ಸ್ಥಳಿಕ ಆಸ್ಪತ್ರೆಗೆ ಸೇರಿಸಿದಾಗ, ಆಕೆ ತನ್ನ ರಕ್ತಪೂರಣವನ್ನು ನಿರಾಕರಿಸುವ ಬೈಬಲಾಧಾರಿತ ನಿಲುವನ್ನು ವಿವರಿಸಿದಳು. ಆಗ ಡಾಕ್ಟರರು ರಕ್ತವಿಲ್ಲದೆ ಶಸ್ತ್ರ ಚಿಕಿತ್ಸೆಯನ್ನು ಮಾಡಲು ಸಮ್ಮತಿಸಿದರು. ಆದರೆ ಆಕೆಯನ್ನು ಶಸ್ತ್ರಚಿಕಿತ್ಸಾ ಗೃಹದೊಳಗೆ ಕೊಂಡೊಯ್ಯುವುದಕ್ಕೆ ತುಸು ಮೊದಲು, ಆಕೆ ಒಂದು ಪ್ರಮಾಣ ಪತ್ರಕ್ಕೆ ಹಸ್ತಾಕ್ಷರ ಹಾಕುವಂತೆ ಡಾಕ್ಟರರು ಕೇಳಿಕೊಂಡರು. ರಕ್ತದ ಬಗೆಗೆ ಆಕೆಯ ನಿರ್ಣಯವನ್ನು ಗೌರವಿಸಲು ಅವರು ಇಚ್ಫಿತರೆಂದೂ, ಆದರೆ ತುರ್ತು ಸಂಭವಿಸುವಲ್ಲಿ, ಅವಶ್ಯವಿರುವ ಯಾವುದೇ ಚಿಕಿತ್ಸೆಯನ್ನು ಕೊಡಲು ಅವರಿಗೆ ಆಕೆಯ ಅನುಮತಿ ಬೇಕೆಂದೂ ಅದು ಸೂಚಿಸಿತು.
ಅಲ್ಲಿ ಉಪಸ್ಥಿತನಾಗಿದ್ದ ಒಬ್ಬ ಸಭಾ ಹಿರಿಯನು ಮತ್ತು ಕಾರೀಡಾಡರ ಸಾಕ್ಷಿಯಾಗಿದ್ದ ಮಗನು, ಇಂಥ ದಾಖಲೆಗೆ ಸಹಿ ಹಾಕುವುದರ ಪರಿಣಾಮಗಳ ಕುರಿತ ಸಲಹೆಯನ್ನು ಕೊಟ್ಟರು. ತುರ್ತು ಬರುವಲ್ಲಿ ರಕ್ತಪೂರಣಕ್ಕೆ ಅಧಿಕಾರವನ್ನು ಆಕೆಯ ಸಹಿ ಡಾಕ್ಟರರಿಗೆ ಕೊಡುತ್ತಿತ್ತು. ವೈದ್ಯಕೀಯ ಸಿಬ್ಬಂದಿಗಳು ಆಕೆಯನ್ನು ಶಸ್ತ್ರಚಿಕಿತ್ಸಾ ಗೃಹಕ್ಕೆ ಕೊಂಡೊಯ್ಯಲು ಬಂದಾಗ, ತಾನು ಆ ಕಾಗದಕ್ಕೆ ಹಸ್ತಾಕ್ಷರ ಮಾಡುವುದಿಲ್ಲವೆಂದು ಆಕೆ ವಿವರಿಸಿದಳು. ಆಗ ಆಕೆಯನ್ನು ಅವಸರದಿಂದ ಆಕೆಯ ಕೋಣೆಗೆ ಕೊಂಡೊಯ್ದು, ಆಕೆ ಮನಸ್ಸು ಬದಲಾಯಿಸುವಂತೆ ತೀವ್ರ ಒತ್ತಡವನ್ನು ಹಾಕಲಾಯಿತು.
ಅನೇಕ ಸಂಭಾಷಣೆಗಳು ನಡೆದ ಬಳಿಕ, ಅವಳಿಗೆ ಮನದಟ್ಟು ಮಾಡುವಂತೆ ವೈದ್ಯ ನ್ಯಾಯಾಧೀಶರನ್ನು ಕರೆಯಲು ಅವರು ನಿರ್ಣಯಿಸಿದರು, ಆದರೆ ಇದರಿಂದ ಪ್ರಯೋಜನವಾಗಲಿಲ್ಲ. ಅವರು ತನಗೆ ರಕ್ತ ಕೊಡುವಂತೆ ಅನುಮತಿಸುವಲ್ಲಿ ತಾನು ದೇವರ ಮುಂದೆ ದೋಷಿಯಾಗುವೆನೆಂದು ಕಾರೀಡಾಡ್ ವಿವರಿಸಿದಳು. ಮೋಶೆಯ ಧರ್ಮಶಾಸ್ತ್ರದಲ್ಲಿ, ಒಬ್ಬ ಸ್ತ್ರೀಗೆ ಬಲಾತ್ಕಾರ ಸಂಭೋಗವಾಗುವಲ್ಲಿ, ಆಕೆ ಸಹಾಯಕ್ಕಾಗಿ ಕೂಗಿಕೊಂಡು ತಡೆಯುವಲ್ಲಿ ಆಕೆ ದೋಷಿಯೆಂದು ಪರಿಗಣಿಸಲಾಗುತ್ತಿರಲಿಲ್ಲ ಎಂಬುದನ್ನು ಆಕೆ ತೋರಿಸಿದಳು. (ಧರ್ಮೋಪದೇಶಕಾಂಡ 22:23-27) “ಡಾಕ್ಟರರು ನನ್ನ ಅಪೇಕ್ಷೆಗಳನ್ನು ಅಸಡ್ಡೆ ಮಾಡಿ ನನ್ನ ಮನಸ್ಸಾಕ್ಷಿಯನ್ನು ಉಲ್ಲಂಘಿಸುವಂತೆ ಪ್ರಯತ್ನಿಸುತ್ತಿದ್ದಾರೆ. ಆದುದರಿಂದ ಬಲಾತ್ಕಾರ ಸಂಭೋಗದಂತೆಯೇ ನಾನು ಅವರನ್ನು ತಡೆಯಲೇಬೇಕು,” ಎಂದಳು ಅವಳು.
ಅನೇಕ ತಾಸುಗಳು ಕಳೆದವು, ಮತ್ತು ಅಂತಿಮವಾಗಿ ಡಾಕ್ಟರರು ಅವಳಿಗೆ ರಕ್ತವಿಲ್ಲದೆ ಶಸ್ತ್ರಚಿಕಿತ್ಸೆ ಮಾಡಲು ಒಪ್ಪಿದರು. ಆಪರೇಟಿಂಗ್ ರೂಮಿನಲ್ಲಿ, ಕಾರೀಡಾಡ್, ಯೆಹೋವನಿಗೆ ಪ್ರಾರ್ಥಿಸಲು ಅನುಮತಿ ಕೇಳಿದಳು. ಪ್ರಾರ್ಥನೆ ಮಾಡಿದಳು, ಮತ್ತು ಶಸ್ತ್ರ ಚಿಕಿತ್ಸೆ ಯಶಸ್ವಿಯಾಯಿತು.
ಆದರೂ, ಆ ಬಳಿಕ ಕಾರೀಡಾಡಳ ಸ್ಥಿತಿ ಕೆಟ್ಟಿತು, ಮತ್ತು ಡಾಕ್ಟರರು ಆಕೆಯ ಅಪೇಕ್ಷೆಗಳನ್ನು ಅಲಕ್ಷಿಸಿ ರಕ್ತಪೂರಣವನ್ನು ಬಲಾತ್ಕರಿಸಲು ನಿರ್ಣಯಿಸಿದರು. ಹೀಗೆ ಒಬ್ಬ ಡಾಕ್ಟರ್ ಮತ್ತು ಒಬ್ಬ ನರ್ಸ್ ರಕ್ತಪೂರಣ ಮಾಡಲು ತಯಾರಿಸಿದರು. ಆಕೆಯ ಸ್ಥಿತಿ ದುರ್ಬಲವಾಗಿದ್ದರೂ, ಕಾರೀಡಾಡ್ ತನಗಿದ್ದ ಸರ್ವ ಶಕಿಯ್ತಿಂದ ನಿರೋಧಿಸಿದಳು. ರಕ್ತ ದಾಟಿಹೋಗಲಿದ್ದ ನಳಿಗೆಯನ್ನು ಸಹ ಆಕೆಗೆ ಕಚ್ಚಿಬಿಡಲು ಸಾಧ್ಯವಾಯಿತು. ಕೊನೆಗೆ ತಾವು ಮಾಡುತ್ತಿದ್ದ ಸಂಗತಿಯಿಂದ ಡಾಕ್ಟರರಿಗೆ ಎಷ್ಟು ನಾಚಿಕೆಯಾಯಿತೆಂದರೆ ಅವರು ಅದನ್ನು ನಿಲ್ಲಿಸಿದರು. “ನನಗೆ ಇದನ್ನು ಮುಂದುವರಿಸುವುದು ಸಾಧ್ಯವಿಲ್ಲ. ನಾನು ಬಿಟ್ಟು ಕೊಡುತ್ತೇನೆ!” ಎಂದರವರು.
ಕಾರೀಡಾಡ್ ಈ ಉತ್ಕಟ ಸ್ಥಿತಿಯನ್ನು ಪಾರಾಗಿ ಮುಂದೆ ಯಾವ ಜಟಿಲತೆಯೂ ಇಲ್ಲದೆ ಗುಣಹೊಂದಿದಳು. ಡಾಕ್ಟರರೂ ನರ್ಸ್ಗಳೂ ಆಕೆಯ ನಂಬಿಕೆ ಮತ್ತು ಧೈರ್ಯದಿಂದ ಆಳವಾಗಿ ಮನತಟ್ಟಿದವರಾಗದಿರಲಿಲ್ಲ. ಇದೆಲ್ಲವೂ ಸಂಭವಿಸಿದ್ದು ಕಾರೀಡಾಡಳಿಗೆ 94 ವಯಸ್ಸು ಆಗಿದ್ದಾಗ.