ಪ್ರಾರ್ಥನೆಯ ಅರ್ಥವು
“ಹಿಬ್ರೂ ಭಾಷೆಯಲ್ಲಿ, ಪ್ರಾರ್ಥನೆಗಾಗಿರುವ ಮುಖ್ಯ ಪದವು ಮೂಲಪದವಾದ ‘ತೀರ್ಪು ಮಾಡು’, ಮತ್ತು ಸಾಮಾನ್ಯ ಕರ್ತೃವಾಚಕ ರೂಪದಲ್ಲಿ . . . ಅಕ್ಷರಶಃ ‘ತನ್ನನ್ನು ತೀರ್ಪು ಮಾಡುವ’ ಅರ್ಥದಲ್ಲಿದೆ.” ಹೀಗೆಂದು ದಿ ಅಥೊರೈಸ್ಡ್ ಡೈಲೀ ಪ್ರೇಯರ್ ಬುಕ್ ಅವಲೋಕಿಸಿದೆ. ಇದರ ಒಳಾರ್ಥವು ಏನಂದರೆ ಪ್ರಾರ್ಥನೆಯ ಕಾರ್ಯವಿಧಾನವು ಒಬ್ಬನಿಗೆ ದೇವರ ನೀತಿಯುಳ್ಳ ಮಟ್ಟಗಳನ್ನು ಮತ್ತು ಆವಶ್ಯಕತೆಗಳನ್ನು ತಾನು ಮುಟ್ಟುತ್ತೇನೋ ಎಂದು ಕಾಣುವಂತೆ ಸಹಾಯ ಮಾಡಬೇಕು.
ಈ ಕಾರಣದಿಂದಾಗಿ ಇಡೀ ಬೈಬಲಿನಲ್ಲಿ, ಒಬ್ಬನು ದೇವರ ಚಿತ್ತವನ್ನು ಮಾಡದ ಹೊರತು, ಅವನ ಪ್ರಾರ್ಥನೆಗಳು ಪ್ರಸನ್ನತೆಯಿಂದ ಆಲೈಸಲ್ಪಡಲಾರವು ಎಂದು ನಮಗೆ ಹೇಳಲಾಗಿದೆ. “ಯೆಹೋವನು ದುಷ್ಟರಿಗೆ ದೂರ, ಆದರೆ ಶಿಷ್ಟರ ಪ್ರಾರ್ಥನೆಗೆ ಆತನು ಕಿವಿಗೊಡುತ್ತಾನೆ.”—ಜ್ಞಾನೋಕ್ತಿ 15:29; 1 ಯೋಹಾನ 5:14.
ಯೆಹೋವ ದೇವರ ಮುಂದೆ ಆತ್ಮ-ಪರೀಕ್ಷಣೆಯು, ಪ್ರಾರ್ಥನೆ ಮಾಡುವವನನ್ನು ನಿಶ್ಚಯವಾಗಿಯೂ ನಮ್ರನಾಗಿ ಮತ್ತು ಪಶ್ಚಾತ್ತಾಪಿಯಾಗಿ ಮಾಡಬೇಕು. ದೇವಾಲಯಕ್ಕೆ ಪ್ರಾರ್ಥನೆ ಮಾಡಲು ಬಂದ ಆ ಗರ್ವಿಯಾದ ಫರಿಸಾಯ ಮತ್ತು ಪಶ್ಚಾತ್ತಾಪಿ ಸುಂಕದವನ ಬಗ್ಗೆ ಯೇಸು ಕೊಟ್ಟ ಸಾಮ್ಯಕ್ಕೆ ಇದು ಇನ್ನಷ್ಟು ಹೆಚ್ಚಿನ ಬಲವನ್ನು ಕೊಡುತ್ತದೆ.—ಲೂಕ 18:9-14.
ಹೀಗೆ, ಉಪಕಾರ, ಸ್ತುತಿ, ಅಥವಾ ಭಿನ್ನಹದೊಂದಿಗೆ ಯಾವುದೇ ಪ್ರಾರ್ಥನೆಯನ್ನು ನಾವು ಯೆಹೋವನಿಗೆ ಸಲ್ಲಿಸಲಿ, ಪ್ರಾರ್ಥನೆಯು ಯಾವಾಗಲೂ ಆತ್ಮ-ಪರೀಕ್ಷಣೆಯ ಒಂದು ಸಂದರ್ಭವಾಗಿರುವುದು. ಈ ರೀತಿಯಲ್ಲಿ ಪ್ರಾರ್ಥನೆಯು ನಮ್ಮನ್ನು ಯೆಹೋವನಿಗೆ ಹತ್ತಿರವಾಗಿ ಸೆಳೆಯುವುದು ಮತ್ತು ಆತನೊಂದಿಗೆ ನಮ್ಮ ಸಂಬಂಧವನ್ನು ಬಲಪಡಿಸುವುದು. (w91 7/15)