ಭಯವು ಯಾವಾಗಲೂ ಕೆಟ್ಟದ್ದೋ?
ಅದು ಸಂತೋಷವನ್ನು ಹಾಳುಗೆಡವಬಹುದು, ನಿರೀಕ್ಷೆಯನ್ನು ನಾಶಮಾಡಬಹುದು. ಅದನ್ನು ಮಾನಸಿಕ ವಿಷ, ವಿಮೋಚನೆಯ ನಾಶಕ ಎಂದು ಸೂಚಿಸಲಾಗಿದೆ. ಅತೀ ಕೆಟ್ಟ ದೈಹಿಕ ರೋಗಕ್ಕಿಂತ ಹೆಚ್ಚು ನಾಶಕಾರಿ ಎಂದು ಅದರ ಕುರಿತು ಹೇಳಲಾಗಿದೆ. ಹೌದು, ಭಯವು ಒಂದು ಬಲಶಾಲಿ ಭಾವನಾಪ್ರವೃತ್ತಿ. ಆದರೂ, ಅದು ಯಾವಾಗಲೂ ಕೆಟ್ಟದ್ದೋ?
ನೆನಸಿರಿ, ನೀವೊಂದು ಅಪರಿಚಿತ ರಸ್ತೆಯಲ್ಲಿ ವಾಹನ ನಡಿಸುತ್ತಾ ಇದ್ದೀರಿ. ರಸ್ತೆಯು ಪರ್ವತದ ದಾರಿ ಹಿಡಿದು, ತಿರುವು-ಮುರುವುಗಳನ್ನು ಆರಂಭಿಸುತ್ತದೆ. ರಾತ್ರಿಯಾಗಲು ತೊಡಗುತ್ತದೆ, ಹಗುರವಾದ ಮಂಜಿನ ತುಂತುರು ಹನಿ ಬೀಳಲಾರಂಭಿಸುತ್ತದೆ. ನಿಮ್ಮ ಕಾರು ಸ್ವಲ್ಪ ಜಾರುತ್ತದೆ, ಮತ್ತು ನೀವೀಗ ರಸ್ತೆಯು ಹಿಮದಿಂದ ತುಂಬಿದ ಎತ್ತರಮಟ್ಟಕ್ಕೆ ತಲಪಿದ್ದೀರೆಂಬ ಅರಿವು ನಿಮಗಾಗುತ್ತದೆ.
ಈಗ ನೀವು ಅತಿ ಜಾಗೃತರಾಗಿರತಕ್ಕದ್ದು. ಪ್ರತಿಯೊಂದು ಹಿಮಪೂರಿತ ತಿರುವನ್ನು ನೀವು ಜಾಗ್ರತೆಯಿಂದ ಚಲಾಯಿಸುತ್ತಾ ಮುನ್ನಡೆಯುವಾಗ, ಈ ಜಾರುವ ಮೇಲ್ಪದರಿನಿಂದ ಕಾರು ತನ್ನ ನಿಯಂತ್ರಣವನ್ನು ಕಳಕೊಂಡು ಕೆಳಗಿನ ಕಣಿವೆಗೆ ದುಮುಕುವದು ಎಷ್ಟೊಂದು ಸುಲಭ ಎಂದೆಣಿಸುತ್ತೀರಿ. ಇನ್ನೂ ಹೆಚ್ಚಾಗಿ, ಕತ್ತಲೆಯಲ್ಲಿ ಬೇರೆ ಯಾವೆಲ್ಲಾ ಅಪಾಯಗಳು ಅಡಗಿಕುಳಿತಿವೆ ಎಂಬರಿವು ನಿಮಗಿಲ್ಲ. ಈ ಎಲ್ಲಾ ಯೋಚನೆಗಳು ಮನಸ್ಸಿಗೆ ಬರುವಾಗ ನಿಮ್ಮ ಬಾಯಿ ಒಣಗುತ್ತದೆ, ಹೃದಯವು ಸ್ವಲ್ಪ ಹೆಚ್ಚು ವೇಗದಿಂದ ಬಡಿಯಲಾರಂಭಿಸುತ್ತದೆ. ನೀವು ಪೂರ್ಣ ಎಚ್ಚರಿಕೆಯಲ್ಲಿರುತ್ತೀರಿ. ಮೊದಲು ನೀವೇನೇ ಯೋಚಿಸುತ್ತಿದ್ದಿರಬಹುದು, ಆದರೆ ಈಗ ಪೂರ್ಣವಾಗಿ, ಎದುರಲ್ಲಿರುವ ಕೆಲಸದ ಮೇಲೆ ನಿಗ್ರಹವನ್ನಿಡುತ್ತೀರಿ: ಕಾರನ್ನು ರಸ್ತೆಯ ಮೇಲಿಡುವುದು ಮತ್ತು ಅಪಘಾತವನ್ನು ಹೋಗಲಾಡಿಸುವುದು.
ಕೊನೆಗೆ, ರಸ್ತೆಯು ಕೆಳಮಟ್ಟಕ್ಕೆ ಇಳಿಯುತ್ತದೆ. ಅಲೀಗ್ಲ ರಸ್ತೆಯ ದೀಪಗಳಿವೆ, ಹಿಮವಿಲ್ಲ, ಮೆಲ್ಲನೆ ನಿಮ್ಮ ಬಿಗುಪು ನಿಮ್ಮ ಶರೀರವನ್ನು ಬಿಡುತ್ತದೆ. ನೀವು ಆರಾಮವಾಗಿ, ಬಿಡುಗಡೆಯ ನಿಟ್ಟುಸಿರನ್ನು ಬಿಡುತ್ತೀರಿ. ಭಯಪಟ್ಟದ್ದು ಸುಮ್ಮಗೆ!
ಆದರೆ, ಅದೆಲ್ಲಾ ಸುಮ್ಮಗೆಯೋ? ನಿಜವಾಗಿ ಹಾಗಲ್ಲ. ಸಮಂಜಸ ಗಾಬರಿಯು ಅಂಥ ಪರಿಸ್ಥಿತಿಗಳ ಕೆಳಗೆ ಸ್ವಾಭಾವಿಕ ಪ್ರತಿಕ್ರಿಯೆಯಾಗಿದೆ. ಅದು ನಮ್ಮನ್ನು ಜಾಗೃತರಾಗಿ ಮಾಡಿ, ಎಚ್ಚರಗೊಳಿಸುತ್ತದೆ. ಹಿತಕರವಾದ ಭಯವು, ಯಾವುದೇ ವಿಷಯವನ್ನು ಅವಸರದಿಂದ ಮಾಡಿ, ನಮ್ಮನ್ನು ಘಾತಗೊಳಿಸದಂತೆ ನೆರವಾಗುತ್ತದೆ. ಹೌದು, ಭಯವು ಯಾವಾಗಲೂ ವಿವೇಚನೆಯ ನಾಶಕವಲ್ಲ, ಮಾನಸಿಕ ವಿಷವೂ ಅಲ್ಲ. ಕೆಲವು ಪರಿಸ್ಥಿತಿಗಳ ಕೆಳಗೆ ಅದು ಪ್ರಯೋಜನದಾಯಕವಾಗಿರಲೂಬಲ್ಲದು.
ಬೈಬಲ್ ಭಯದ ಕುರಿತು ಮಾತಾಡುತ್ತದೆ ಮತ್ತು ಅದರ ಎರಡು ನಿರ್ದಿಷ್ಟ ವಿಧಗಳನ್ನು ನಮ್ಮ ಗಮನಕ್ಕೆ ತರುತ್ತದೆ. ಒಂದು ತರಹದ ಭಯವು ಖಂಡಿತವಾಗಿಯೂ ಮಾನಸಿಕ ವಿಷವಾಗಿರುತ್ತದೆ. ಆದರೆ ಇನ್ನೊಂದು ಸಹಜವೂ ಹಿತಕರವೂ ಆಗಿದೆ ಮಾತ್ರವಲ್ಲ ನಮ್ಮ ರಕ್ಷಣೆಗೆ ಅತ್ಯಾವಶ್ಯಕವೂ ಆಗಿದೆ. ಈ ಎರಡು ವಿಧದ ಭಯಗಳು ಯಾವುವು? ಮತ್ತು ಒಂದನ್ನು ನಾವು ಬೆಳೆಸಿಕೊಳ್ಳುವಾಗ, ಇನ್ನೊಂದನ್ನು ವಿಸರ್ಜಿಸುವುದು ಹೇಗೆ? ಅದನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು. (w89 6/1)