ಯೇಸುವಿನ ಜೀವನ ಮತ್ತು ಶುಶ್ರೂಷೆ
ಯೆರೂಸಲೇಮಿಗೆ ರಹಸ್ಯ ಪ್ರಯಾಣ
ಸಾ.ಶ. 32ರ ಶರತ್ಕಾಲ. ಪರ್ಣಶಾಲೆಗಳ ಹಬ್ಬ ಹತ್ತಿರವಿದೆ. ಸಾ.ಶ. 31ರಲ್ಲಿ ಯೆಹೂದ್ಯರು ತನ್ನನ್ನು ಕೊಲ್ಲಲು ಪ್ರಯತ್ನಿಸಿದಂದಿನಿಂದ ಯೇಸು ತನ್ನ ಚಟುವಟಿಕೆಯನ್ನು ಅಧಿಕಾಂಶ ಗಲಿಲಾಯಕ್ಕೆ ಸೀಮಿತ ಮಾಡಿದ್ದಾನೆ. ಪ್ರಾಯಶಃ ಅಂದಿನಿಂದ ಯೇಸು ಯೆರೂಸಲೇಮಿಗೆ ಭೇಟಿಕೊಟ್ಟ ಒಂದೇ ಸಮಯ, ಯೆಹೂದ್ಯರ ಮೂರು ವಾರ್ಷಿಕ ಹಬ್ಬಗಳಲ್ಲಿ ಹಾಜರಾಗಿರಲಿಕ್ಕಾಗಿ.
ಯೇಸುವಿನ ಸೋದರರು ಈಗ “ಇಲ್ಲಿಂದ ಹೊರಟು ಯೂದಾಯಕ್ಕೆ ಹೋಗು” ಎಂದು ಪ್ರೋತ್ಸಾಹಿಸುತ್ತಾರೆ. ಯೆರೂಸಲೇಮು ಯೂದಾಯದ ಮುಖ್ಯ ನಗರ ಮತ್ತು ದೇಶದ ಧಾರ್ಮಿಕ ಕೇಂದ್ರ. ಅವನ ಸೋದರರು ಹೀಗೆ ತರ್ಕಿಸುತ್ತಾರೆ: “ಪ್ರಸಿದ್ಧಿಗೆ ಬರಬೇಕೆಂದಿರುವ ಯಾವನಾದರೂ ತಾನು ಮಾಡುವದನ್ನು ಮರೆಯಲ್ಲಿ ಮಾಡುವದಿಲ್ಲವಲ್ಲಾ.”
ತಮ್ಮ ಅಣನ್ಣಾದ ಯೇಸು ನಿಜವಾಗಿಯೂ ಮೆಸ್ಸೀಯನೆಂದು ಯಾಕೋಬ, ಸೀಮೋನ, ಯೋಸೇಫ ಮತ್ತು ಯೂದ ನಂಬುವುದಿಲ್ಲವಾದರೂ ಹಬ್ಬದಲ್ಲಿ ಸೇರಿಬಂದವರೆಲ್ಲರಿಗೆ ಅವನ ಅದ್ಭುತ ಶಕ್ತಿಗಳನ್ನು ಅವನು ತೋರಿಸಬೇಕೆಂದು ಅವರು ಅಪೇಕ್ಷಿಸುತ್ತಾರೆ. ಆದರೆ ಯೇಸುವಿಗೆ ಅಪಾಯದ ಪ್ರಜ್ಞೆ ಇದೆ. ಅವನು ಹೇಳುವುದು: “ಲೋಕವು ನಿಮ್ಮನ್ನು ಹಗೆ ಮಾಡಲಾರದು; ಆದರೆ ನಾನು ಅದರ ಕ್ರಿಯೆಗಳು ಕೆಟ್ಟವುಗಳೆಂದು ಸಾಕ್ಷಿ ಹೇಳುವುದರಿಂದ ನನ್ನನ್ನು ಹಗೆ ಮಾಡುತ್ತದೆ.” ಈ ಕಾರಣದಿಂದ ಯೇಸು ತನ್ನ ಸೋದರರಿಗೆ, “ನೀವೇ ಜಾತ್ರೆಗೆ ಹೋಗಿರಿ. . . ನಾನು ಈ ಜಾತ್ರೆಗೆ ಈಗ ಹೋಗುವದಿಲ್ಲ” ಎನ್ನುತ್ತಾನೆ.
ಪರ್ಣಶಾಲೆಗಳ ಜಾತ್ರೆ ಏಳು ದಿನಗಳ ಆಚರಣೆ. ಅದನ್ನು ಎಂಟನೆಯ ದಿನದ ಘನ ಚಟುವಟಿಕೆಗಳು ಮುಗಿಸುತ್ತವೆ. ಈ ಜಾತ್ರೆ ವ್ಯಾವಸಾಯಿಕ ವರ್ಷಾಂತ್ಯವನ್ನು ಗುರುತಿಸುವುದರಿಂದ ಇದು ಮಹಾ ಸಂತೋಷ ಮತ್ತು ಕೃತಜ್ಞತೆಯ ಸಮಯ. ಯೇಸುವಿನ ತಮ್ಮಂದಿರು ಪ್ರಯಾಣಿಕರ ಪ್ರಧಾನ ಗುಂಪಿನೊಂದಿಗೆ ಪ್ರಯಾಣ ಬೆಳೆಸಿ ಕೆಲವು ದಿನಗಳಾದ ಬಳಿಕ ಯೇಸುವೂ ಶಿಷ್ಯರೂ ಸಾರ್ವಜನಿಕರ ಕಣ್ಣಿಗೆ ಬೀಳದಂತೆ ಗುಪ್ತವಾಗಿ ಅಲ್ಲಿಗೆ ಹೋಗುತ್ತಾರೆ. ಅಧಿಕಾಂಶ ಜನರು ಹೋಗುವ ಯೋರ್ದಾನಿನ ಬಳಿಯ ರಸ್ತೆಯಲ್ಲಿ ಹೋಗುವುದಕ್ಕೆ ಬದಲು ಅವರು ಸಮಾರ್ಯದ ಮಾರ್ಗವಾಗಿ ಹೋಗುತ್ತಾರೆ.
ಸಮಾರ್ಯದ ಹಳ್ಳಿಯಲ್ಲಿ ಯೇಸುವಿಗೂ ಶಿಷ್ಯರಿಗೂ ವಸತಿ ಅಗತ್ಯವಿರುವುದರಿಂದ ಅವನು ಇದಕ್ಕಾಗಿ ತಯಾರಿಸಲು ಸಂದೇಶವಾಹಕರನ್ನು ಕಳುಹಿಸುತ್ತಾನೆ. ಆದರೆ ಅವನು ಹೋಗುವುದು ಯೆರೂಸಲೇಮಿಗೆಂದು ತಿಳಿದ ಜನರು ಅವನಿಗೆ ಸಹಾಯ ಮಾಡಲು ನಿರಾಕರಿಸುತ್ತಾರೆ. ಆಗ ಯಾಕೋಬ ಮತ್ತು ಯೋಹಾನರು ಕೋಪದಿಂದ, “ಸ್ವಾಮೀ, ಆಕಾಶದಿಂದ ಬೆಂಕಿ ಬಿದ್ದು ಇವರನ್ನು ನಾಶಮಾಡಲಿ ಎಂದು ನಾವು ಹೇಳುವದಕ್ಕೆ ನಿನಗೆ ಮನಸ್ಸುಂಟೋ” ಎಂದು ಕೇಳುತ್ತಾರೆ. ಇಂಥ ಸೂಚನೆ ಕೊಟ್ಟದ್ದಕ್ಕೆ ಯೇಸು ಅವರನ್ನು ಗದರಿಸಿದ ಮೇಲೆ ಅವರು ಇನ್ನೊಂದು ಹಳ್ಳಿಗೆ ಹೋಗುತ್ತಾರೆ.
ಅವರು ದಾರಿ ನಡೆಯುತ್ತಿರುವಾಗ ಒಬ್ಬ ಶಾಸ್ತ್ರಿ ಬಂದು, “ಗುರುವೇ, ನೀನು ಎಲ್ಲಿಗೆ ಹೋದರೂ ನಾನು ನಿನ್ನ ಹಿಂದೆ ಬರುತ್ತೇನೆ” ಎಂದು ಹೇಳುತ್ತಾನೆ.
ಯೇಸು ಅವನಿಗೆ, “ನರಿಗಳಿಗೆ ಗುದ್ದುಗಳಿವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳಿವೆ. ಆದರೆ ಮನುಷ್ಯಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ” ಎಂದು ಹೇಳುತ್ತಾನೆ. ತನ್ನ ಶಿಷ್ಯನಾಗುವಲ್ಲಿ ಶಾಸ್ತ್ರಿಗೆ ಕಷ್ಟಗಳು ಬರುತ್ತವೆ ಎಂದು ಯೇಸು ತೋರಿಸುತ್ತಾನೆ. ಶಾಸ್ತ್ರಿಯು ಈ ಜೀವನ ರೀತಿಯನ್ನು ಅಂಗೀಕರಿಸಲು ತೀರಾ ಜಂಬವುಳ್ಳವನೆಂಬುದೆ ಇಲ್ಲಿರುವ ಅಭಿಪ್ರಾಯ ಸೂಚನೆಯೆಂದು ಕಾಣುತ್ತದೆ.
ಇನ್ನೊಬ್ಬನಿಗೆ ಯೇಸು, “ನನ್ನ ಹಿಂದೆ ಬಾ” ಎಂದು ಹೇಳುತ್ತಾನೆ.
“ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿ ಬರುವಂತೆ ನನಗೆ ಅಪ್ಪಣೆಯಾಗಬೇಕು” ಎಂದು ಅವನು ಉತ್ತರಿಸುತ್ತಾನೆ.
“ಸತ್ತವರೇ ತಮ್ಮವರಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಲಿ. ನೀನಂತೂ ಹೋಗಿ ದೇವರ ರಾಜ್ಯವನ್ನು ಪ್ರಸಿದ್ಧಿಪಡಿಸು” ಎಂದು ಉತ್ತರ ಕೊಡುತ್ತಾನೆ ಯೇಸು. ಆ ಮನುಷ್ಯನ ತಂದೆ ಸತ್ತಿರಲಿಲ್ಲವೆಂಬುದು ವ್ಯಕ್ತ. ಸತ್ತಿದ್ದಿದ್ದರೆ ಅವನು ಯೇಸುವನ್ನು ಇಲ್ಲಿ ಆಲಿಸುತ್ತಿರುವುದು ಅಸಂಭವನೀಯ. ತನ್ನ ತಂದೆ ಸಾಯುವ ತನಕ ಕಾಯಲು ಇಲ್ಲಿ ಮಗನು ಕೇಳುತ್ತಿದ್ದಾನೆಂಬುದು ಸ್ಪಷ್ಟ. ದೇವರ ರಾಜ್ಯವನ್ನು ತನ್ನ ಜೀವನದಲ್ಲಿ ಪ್ರಥಮವಾಗಿಡಲು ಅವನು ಸಿದ್ಧನಾಗಿಲ್ಲ.
ಅವರು ದಾರಿಯಲ್ಲಿ ಮಂದುವರಿಯುವಾಗ ಇನ್ನೊಬ್ಬನು ಯೇಸುವಿಗೆ, “ಸ್ವಾಮೀ, ನಿನ್ನನ್ನು ಹಿಂಬಾಲಿಸುತ್ತೇನೆ. ಆದರೆ ಮೊದಲು ನನ್ನ ಮನೆಯವರಿಗೆ ಹೇಳಿ ಬರುವದಕ್ಕೆ ನನಗೆ ಅಪ್ಪಣೆಯಾಗಬೇಕು” ಎಂದು ಹೇಳುತ್ತಾನೆ.
ಯೇಸು ಉತ್ತರವಾಗಿ, “ಯಾವನಾದರೂ ನೇಗಿಲಿನ ಮೇಲೆ ತನ್ನ ಕೈಯನ್ನು ಹಾಕಿ ಹಿಂದಕ್ಕೆ ನೋಡಿದರೆ ಅವನು ದೇವರ ರಾಜ್ಯಕ್ಕೆ ತಕ್ಕವನಲ್ಲ” ಎಂದು ಹೇಳುತ್ತಾನೆ. ಯೇಸುವಿನ ಶಿಷ್ಯರಾಗುವವರು ಕಣ್ಣುಗಳನ್ನು ರಾಜ್ಯ ಸೇವೆಯ ಮೇಲೆ ಕೇಂದ್ರೀಕರಿಸಬೇಕು. ಉಳುವವನು ನೆಟ್ಟಗೆ ಮುಂದೆ ನೋಡದಿರುವಲ್ಲಿ ಸಾಲು ಹೇಗೆ ಡೊಂಕಾಗುವ ಸಂಭವವಿದೆಯೊ ಹಾಗೆಯೆ ಈ ಹಳೆಯ ವ್ಯವಸ್ಥೆಯನ್ನು ಹಿಂದೆ ತಿರುಗಿ ನೋಡುವವನು ಜೀವಕ್ಕೆ ಹೋಗುವ ದಾರಿಯಿಂದ ಮುಗ್ಗರಿಸಿ ಬಿದ್ದಾನು. ಯೋಹಾನ 7:2-10; ಲೂಕ 9:51-62; ಮತ್ತಾಯ 8:19-22.
◆ ಯೇಸುವಿನ ಸೋದರರಾರು, ಮತ್ತು ಅವನ ಕುರಿತು ಅವರ ಅನಿಸಿಕೆ ಏನು?
◆ ಸಮಾರ್ಯದವರು ಅಷ್ಟು ಒರಟೇಕೆ, ಮತ್ತು ಯಾಕೋಬ, ಯೋಹಾನರು ಏನು ಮಾಡಬಯಸುತ್ತಾರೆ?
◆ ದಾರಿಯಲ್ಲಿ ಯಾವ ಮೂರು ಸಂಭಾಷಣೆಗಳನ್ನು ಯೇಸು ನಡೆಸುತ್ತಾನೆ, ಮತ್ತು ಆತ್ಮತ್ಯಾಗದ ಸೇವೆಯ ಅಗತ್ಯವನ್ನು ಅವನು ಹೇಗೆ ಒತ್ತಿ ಹೇಳುತ್ತಾನೆ? (w88 3/15)