ಆಡಳಿತ ಮಂಡಲಿಯ ಪತ್ರ
ನಮ್ಮ ಪ್ರಿಯ ಸಹೋದರ ಸಹೋದರಿಯರೇ:
ಕಾವಲಿನಬುರುಜುವಿನ ಸಾರ್ವಜನಿಕ ಆವೃತ್ತಿಯ ಪ್ರಪ್ರಥಮ ಸಂಚಿಕೆಯಿಂದ (ಜನವರಿ 1, 2008) “ಅವರ ನಂಬಿಕೆಯನ್ನು ಅನುಕರಿಸಿ” ಎಂಬ ಶೀರ್ಷಿಕೆಯುಳ್ಳ ಸ್ವಾರಸ್ಯಕರವಾದ ಹೊಸ ಲೇಖನಸರಣಿ ಆರಂಭವಾಯಿತು. ಅಂದಿನಿಂದ ಆ ಶೀರ್ಷಿಕೆಯಡಿ ಮೂಡಿಬಂದ ಹಲವಾರು ಲೇಖನಗಳು ನಮಗೆ ಹರ್ಷ ತಂದಿವೆ.
ಈ ಲೇಖನಸರಣಿಯ ಬಗ್ಗೆ ಓದುಗರ ಪ್ರತಿಕ್ರಿಯೆ ಏನಾಗಿತ್ತು? ಮಾರ್ಥಳ ಕುರಿತ ಲೇಖನದ ಬಗ್ಗೆ ಓದುಗಳೊಬ್ಬಳು ಬರೆದದ್ದು: “ಅದನ್ನು ಓದುತ್ತಿದ್ದಾಗ ನನಗೆ ನಗು ಬಂತು. ಏಕೆಂದರೆ ನಾನು ಥೇಟ್ ಅವಳ ಹಾಗೆಯೇ. ಮನೆಗೆ ಬಂದವರನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಒಳ್ಳೇ ಅಡಿಗೆ ಮಾಡಿ ಬಡಿಸಬೇಕು ಅನ್ನೋದು ನನ್ನಾಸೆ. ಹಾಗಾಗಿ ಆ ಕೆಲಸದಲ್ಲೇ ಮುಳುಗಿರುತ್ತೇನೆ. ಕೆಲವೊಮ್ಮೆ ಕೆಲಸದ ಭರದಲ್ಲಿ, ಬಂದಿರುವ ಸ್ನೇಹಿತರೊಂದಿಗೆ ಸ್ವಲ್ಪ ಕೂತು ಮಾತಾಡಿ ಅವರ ಒಡನಾಟದಲ್ಲಿ ಆನಂದಿಸಬೇಕೆಂಬದೇ ಮನಸ್ಸಿಗೆ ಹೊಳೆಯುವುದಿಲ್ಲ.” ಎಸ್ತೇರಳ ಕಥೆ ಓದಿ ಹದಿವಯಸ್ಕಳೊಬ್ಬಳು ಈ ತೀರ್ಮಾನಕ್ಕೆ ಬಂದದ್ದು ಆಸಕ್ತಿಕರ: “ಆ ಲೇಖನ ಓದುವಾಗ ಬಟ್ಟೆಬರೆ, ಹೊಸ ಹೊಸ ಫ್ಯಾಷನುಗಳ ಬಗ್ಗೆ ನನಗಿರುವ ಗೀಳು ನೆನಪಾಯಿತು. ಚೆನ್ನಾಗಿ ಕಾಣುವುದರಲ್ಲಿ ತಪ್ಪೇನಿಲ್ಲ. ಆದರೆ ವಿಪರೀತಕ್ಕೆ ಹೋಗಬಾರದೆಂದು ಕಲಿತೆ.” ಆಕೆ ಈ ಮಾತನ್ನೂ ಕೂಡಿಸಿದಳು: “ನಾವು ಆಂತರ್ಯದಲ್ಲಿ ಎಂಥವರಾಗಿದ್ದೇವೆ ಎಂಬುದಕ್ಕೆ ಯೆಹೋವನು ಹೆಚ್ಚು ಮಹತ್ವ ಕೊಡುತ್ತಾನೆ.” ಅಪೊಸ್ತಲ ಪೇತ್ರನ ಕುರಿತ ಲೇಖನ ಓದಿ ಕ್ರೈಸ್ತ ಸಹೋದರಿಯೊಬ್ಬಳು ಉತ್ಸಾಹದಿಂದ ಹೀಗೆ ಪ್ರತಿಕ್ರಿಯಿಸಿದಳು: “ನನ್ನ ಮೈಮನಸ್ಸೆಲ್ಲ ಆ ವೃತ್ತಾಂತದಲ್ಲೇ ಪೂರ್ತಿ ಮುಳುಗಿಹೋಯಿತು. ನಾನೇ ಅಲ್ಲಿ ಇದ್ದೇನೇನೊ ಎಂದನಿಸಿತು. ನೇರವಾಗಿ ತಿಳಿಸಲಾಗಿರದ ವಿವರಗಳನ್ನೂ ನೋಡಲು, ಕೇಳಿಸಿಕೊಳ್ಳಲು, ಸ್ಪರ್ಶಿಸಲು, ರುಚಿಸಲು, ಆಘ್ರಾಣಿಸಲು ಶಕ್ತಳಾದೆ.”
ಈ ಓದುಗರು ಮಾತ್ರವಲ್ಲದೆ ಲೆಕ್ಕವಿಲ್ಲದಷ್ಟು ಇತರ ಓದುಗರು ಸಹ ಈ ಲೇಖನಸರಣಿಗಾಗಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. “ಪೂರ್ವದಲ್ಲಿ ಬರೆದಿರುವ ಎಲ್ಲ ವಿಷಯಗಳು ನಮ್ಮನ್ನು ಉಪದೇಶಿಸುವುದಕ್ಕಾಗಿ ಬರೆಯಲ್ಪಟ್ಟವು” ಎಂದು ಅಪೊಸ್ತಲ ಪೌಲ ಬರೆದ ಮಾತುಗಳ ಸತ್ಯತೆಯನ್ನು ಅವರು ದೃಢೀಕರಿಸುತ್ತಾರೆ. (ರೋಮ. 15:4) ಹೌದು, ಯೆಹೋವನು ನಂಬಿಗಸ್ತರ ವೃತ್ತಾಂತಗಳನ್ನು ಬೈಬಲಿನಲ್ಲಿ ಒಳಗೂಡಿಸಿರುವುದು ನಮಗೆ ಅಮೂಲ್ಯ ಪಾಠಗಳನ್ನು ಕಲಿಸಲಿಕ್ಕೆಂದೇ. ಎಷ್ಟೇ ವರ್ಷಗಳಿಂದ ನಾವು ಸತ್ಯದಲ್ಲಿದ್ದರೂ ಆ ವೃತ್ತಾಂತಗಳಿಂದ ನಾವೆಲ್ಲರೂ ಪಾಠಗಳನ್ನು ಕಲಿಯಬಲ್ಲೆವು.
ಈ ಪುಸ್ತಕವನ್ನು ಆದಷ್ಟು ಬೇಗನೆ ಓದುವಂತೆ ನಿಮ್ಮನ್ನು ಆದರದಿಂದ ಪ್ರೋತ್ಸಾಹಿಸುತ್ತೇವೆ. ನಿಮ್ಮ ಕುಟುಂಬ ಆರಾಧನೆಯಲ್ಲೂ ಇದನ್ನು ಬಳಸಿ. ಮಕ್ಕಳಿಗೂ ಇದರಲ್ಲಿರುವ ವಿಷಯಗಳು ತುಂಬ ಇಷ್ಟವಾಗುವವು. ಸಭಾ ಬೈಬಲ್ ಅಧ್ಯಯನದಲ್ಲಿ ಈ ಪುಸ್ತಕವನ್ನು ಚರ್ಚಿಸಲಾಗುವಾಗ ಒಂದು ವಾರವೂ ತಪ್ಪಿಸಬೇಡಿ! ಈ ಪುಸ್ತಕವನ್ನು ಗಡಿಬಿಡಿಯಲ್ಲಿ ಓದಬೇಡಿ, ಮನಸ್ಸುಕೊಟ್ಟು ಓದಿ. ನಿಮ್ಮ ಕಲ್ಪನಾಶಕ್ತಿ ಬಳಸಿ. ಪಂಚೇಂದ್ರಿಯಗಳನ್ನು ಒಳಗೂಡಿಸಿ. ಆ ಬೈಬಲ್ ವ್ಯಕ್ತಿಗಳಿಗೆ ಯಾವ ಅನಿಸಿಕೆ, ಭಾವನೆಗಳಿತ್ತೋ ಅದನ್ನು ನಿಮ್ಮಲ್ಲಿ ತಂದುಕೊಳ್ಳಲು ಪ್ರಯತ್ನಿಸಿ. ಅವರೇನು ನೋಡುತ್ತಿದ್ದರೊ ಅದನ್ನು ನೋಡಲು ಪ್ರಯತ್ನಿಸಿ. ನಿರ್ದಿಷ್ಟ ಸನ್ನಿವೇಶವೊಂದರಲ್ಲಿ ಅವರು ತೋರಿಸಿದ ಪ್ರತಿಕ್ರಿಯೆ ಮತ್ತು ನೀವಲ್ಲಿರುತ್ತಿದ್ದರೆ ತೋರಿಸುತ್ತಿದ್ದ ಪ್ರತಿಕ್ರಿಯೆ ಎರಡನ್ನು ಹೋಲಿಸಿ ನೋಡಿ.
ಈ ಪ್ರಕಾಶನವನ್ನು ನಿಮ್ಮ ಮುಂದಿಡಲು ನಮಗೆ ತುಂಬ ಸಂತೋಷವಾಗುತ್ತಿದೆ. ಇದು ನಿಮಗೂ ನಿಮ್ಮ ಕುಟುಂಬಕ್ಕೂ ಯೆಹೋವನಿಂದ ಬಂದ ವರವಾಗಿ ಪರಿಣಮಿಸಲಿ. ತುಂಬು ಪ್ರೀತಿ ಹಾಗೂ ಶುಭ ಹಾರೈಕೆಗಳೊಂದಿಗೆ,
ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ