ಅಧ್ಯಾಯ 24
ಸಭೆಗಳಿಗೆ ಪೌಲನು ಬರೆದ ಪತ್ರಗಳು
ಪೌಲನ ಪತ್ರಗಳು ಕ್ರೈಸ್ತ ಸಭೆಯನ್ನು ಬಲಪಡಿಸುತ್ತವೆ
ಹೊಸದಾಗಿ ಸ್ಥಾಪನೆಯಾದ ಕ್ರೈಸ್ತ ಸಭೆಯು ಯೆಹೋವನ ಉದ್ದೇಶವನ್ನು ಪೂರೈಸುವುದರಲ್ಲಿ ಒಂದು ಪ್ರಮುಖ ಪಾತ್ರ ವಹಿಸಲಿತ್ತು. ಆದರೆ, ಒಂದನೆಯ ಶತಮಾನದಲ್ಲಿದ್ದ ಕ್ರೈಸ್ತರು ಬೇಗನೆ ಹಿಂಸೆವಿರೋಧಗಳಿಗೆ ತುತ್ತಾದರು. ಅವರು ಸಭೆಯ ಹೊರಗೆ ಹಿಂಸೆಯನ್ನು ಎದುರಿಸಬೇಕಾಯಿತು. ಮಾತ್ರವಲ್ಲ, ಸಭೆಯ ಒಳಗಿನಿಂದಲೂ ನಯವಂಚನೆಯ ಅಪಾಯಗಳು ತಲೆದೋರಿದವು. ಇಂಥ ಕಷ್ಟಕರ ಪರಿಸ್ಥಿತಿಯಲ್ಲೂ ಅವರು ದೇವರ ಕಡೆಗೆ ತಮ್ಮ ಸಮಗ್ರತೆಯನ್ನು ಕಾಪಾಡಿಕೊಂಡರೋ? ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿರುವ 21 ಪತ್ರಗಳು ಅವರಿಗೆ ಆವಶ್ಯಕವಾದ ಸಲಹೆ ಪ್ರೋತ್ಸಾಹಗಳನ್ನು ನೀಡಿದವು.
ಆ ಪತ್ರಗಳಲ್ಲಿ, ರೋಮನ್ನರಿಗೆ ಬರೆದ ಪತ್ರದಿಂದ ಹಿಡಿದು ಇಬ್ರಿಯರಿಗೆ ಬರೆದ ಪತ್ರದ ವರೆಗೆ ಒಟ್ಟು ಹದಿನಾಲ್ಕು ಪತ್ರಗಳನ್ನು ಅಪೊಸ್ತಲ ಪೌಲನು ಬರೆದನು. ಪತ್ರಗಳನ್ನು ನಿರ್ದಿಷ್ಟ ವ್ಯಕ್ತಿಗಳಿಗೇ ಬರೆದಿರಲಿ ಅಥವಾ ಸಭೆಗಳಿಗೇ ಬರೆದಿರಲಿ, ಯಾರಿಗೆ ಬರೆಯಲಾಗಿತ್ತೋ ಅವರ ಹೆಸರುಗಳನ್ನೇ ಆ ಪತ್ರಗಳಿಗೆ ಕೊಡಲಾಗಿದೆ. ಪೌಲನು ಬರೆದ ಪತ್ರಗಳಲ್ಲಿರುವ ಕೆಲವು ವಿಷಯಗಳನ್ನು ಗಮನಿಸಿ.
ನೈತಿಕತೆ ಮತ್ತು ನಡತೆಯ ಕುರಿತು ಬುದ್ಧಿವಾದ. ಜಾರತ್ವ, ವ್ಯಭಿಚಾರ ಮುಂತಾದ ಗಂಭೀರ ಪಾಪಗಳನ್ನು ಮಾಡುವವರು “ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ.” (ಗಲಾತ್ಯ 5:19-21; 1 ಕೊರಿಂಥ 6:9-11) ದೇವರ ಆರಾಧಕರು ಯಾವುದೇ ರಾಷ್ಟ್ರದವರಾಗಿರಲಿ ಪರಸ್ಪರ ಸ್ನೇಹ ಸೌಹಾರ್ದತೆಯಿಂದ ಐಕ್ಯರಾಗಿರಬೇಕು. (ರೋಮನ್ನರಿಗೆ 2:11; ಎಫೆಸ 4:1-6) ಅವರು ಅಗತ್ಯದಲ್ಲಿರುವ ಜೊತೆ ಆರಾಧಕರಿಗೆ ಸಂತೋಷದಿಂದ ನೆರವಾಗಬೇಕು. (2 ಕೊರಿಂಥ 9:7) “ಎಡೆಬಿಡದೆ ಪ್ರಾರ್ಥನೆಮಾಡಿರಿ” ಎಂದು ಪೌಲನು ಹೇಳಿದನು. ಅಂದರೆ ಯೆಹೋವನ ಆರಾಧಕರು ಮನಬಿಚ್ಚಿ ಪ್ರಾರ್ಥನೆ ಮಾಡಬೇಕು. (1 ಥೆಸಲೊನೀಕ 5:17; 2 ಥೆಸಲೊನೀಕ 3:1; ಫಿಲಿಪ್ಪಿ 4:6, 7) ಅವರು ನಂಬಿಕೆಯಿಂದ ಪ್ರಾರ್ಥನೆ ಮಾಡಿದರೆ ದೇವರು ಅದನ್ನು ಆಲಿಸುತ್ತಾನೆ.—ಇಬ್ರಿಯ 11:6.
ಕುಟುಂಬಗಳು ಯಶಸ್ವಿಯಾಗಲು ಯಾವುದು ಸಹಾಯಮಾಡುವುದು? ಗಂಡಂದಿರು ತಮ್ಮ ಹೆಂಡತಿಯರನ್ನು ಸ್ವಶರೀರದಂತೆ ಪ್ರೀತಿಸಬೇಕು. ಹೆಂಡತಿಯರು ತಮ್ಮ ಗಂಡಂದಿರಿಗೆ ಆಳವಾದ ಗೌರವ ತೋರಿಸಬೇಕು. ಮಕ್ಕಳು ತಂದೆತಾಯಿಗಳಿಗೆ ವಿಧೇಯರಾಗಿರಬೇಕು, ಇದು ದೇವರಿಗೆ ಮೆಚ್ಚಿಕೆಯಾದ ಸಂಗತಿಯಾಗಿದೆ. ದೇವರ ವಾಕ್ಯದಲ್ಲಿರುವ ಮೂಲತತ್ತ್ವಗಳನ್ನು ಉಪಯೋಗಿಸುತ್ತಾ ಹೆತ್ತವರು ತಮ್ಮ ಮಕ್ಕಳಿಗೆ ಪ್ರೀತಿಯಿಂದ ಮಾರ್ಗದರ್ಶನ ನೀಡಿ ತರಬೇತುಗೊಳಿಸಬೇಕು.—ಎಫೆಸ 5:22–6:4; ಕೊಲೊಸ್ಸೆ 3:18-21.
ದೇವರ ಉದ್ದೇಶದ ಕುರಿತು ಹೆಚ್ಚಿನ ಅರ್ಥವಿವರಣೆ. ಮೋಶೆಯ ಧರ್ಮಶಾಸ್ತ್ರದ ಅನೇಕ ಅಂಶಗಳು ಕ್ರಿಸ್ತನ ಆಗಮನದ ವರೆಗೆ ಇಸ್ರಾಯೇಲ್ಯರನ್ನು ಕಾಪಾಡಿ ಮಾರ್ಗದರ್ಶಿಸಿತು. (ಗಲಾತ್ಯ 3:24) ಆದುದರಿಂದ, ಕ್ರೈಸ್ತರು ದೇವರನ್ನು ಆರಾಧಿಸಲಿಕ್ಕಾಗಿ ಆ ಧರ್ಮಶಾಸ್ತ್ರವನ್ನು ಪಾಲಿಸುವ ಅಗತ್ಯವಿಲ್ಲ. ಇಬ್ರಿಯರಿಗೆ ಅಂದರೆ ಯೆಹೂದಿ ಹಿನ್ನೆಲೆಯಿಂದ ಕ್ರೈಸ್ತರಾದವರಿಗೆ ಬರೆದ ತನ್ನ ಪತ್ರದಲ್ಲಿ ಪೌಲನು, ಧರ್ಮಶಾಸ್ತ್ರದ ಅರ್ಥ ಹಾಗೂ ದೇವರ ಉದ್ದೇಶವು ಕ್ರಿಸ್ತನಲ್ಲಿ ಹೇಗೆ ನೆರವೇರಿತು ಎಂಬುದರ ಕುರಿತು ಹೆಚ್ಚಿನ ಬೆಳಕು ಚೆಲ್ಲಿದನು. ಆ ಧರ್ಮಶಾಸ್ತ್ರದಲ್ಲಿ ಕೊಡಲಾಗಿದ್ದ ಹಲವಾರು ಏರ್ಪಾಡುಗಳು ಮುಂದೆ ನಡೆಯಲಿದ್ದ ವಿಷಯಗಳನ್ನು ಸೂಚಿಸಿದವೆಂದು ಪೌಲನು ವಿವರಿಸಿದನು. ಉದಾಹರಣೆಗೆ, ಮಾನವರ ಪಾಪಗಳಿಗೆ ನಿಜವಾದ ಕ್ಷಮಾಪಣೆ ತರಲಿದ್ದ ಯೇಸುವಿನ ಯಜ್ಞಾರ್ಪಿತ ಮರಣವನ್ನು ಪ್ರಾಣಿಗಳ ಯಜ್ಞವು ಮುನ್ಸೂಚಿಸಿತು. (ಇಬ್ರಿಯ 10:1-4) ಯೇಸುವಿನ ಮರಣದ ಆಧಾರದ ಮೇರೆಗೆ ದೇವರು ಧರ್ಮಶಾಸ್ತ್ರದ ಒಡಂಬಡಿಕೆಯನ್ನು ರದ್ದುಪಡಿಸಿದನು. ಏಕೆಂದರೆ, ಯೇಸುವಿನ ಮರಣದ ನಂತರ ಅದರ ಆವಶ್ಯಕತೆಯಿರಲಿಲ್ಲ.—ಕೊಲೊಸ್ಸೆ 2:13-17; ಇಬ್ರಿಯ 8:13.
ಸಭಾ ಏರ್ಪಾಡುಗಳ ಕುರಿತು ನಿರ್ದೇಶನ. ಸಭೆಯ ಜವಾಬ್ದಾರಿಗಳನ್ನು ಹೊರಲಿಚ್ಛಿಸುವ ಪುರುಷರು ಉತ್ತಮ ನೈತಿಕ ಮಟ್ಟವನ್ನು ಹಾಗೂ ಆಧ್ಯಾತ್ಮಿಕ ಅರ್ಹತೆಗಳನ್ನು ಹೊಂದಿರಬೇಕು. (1 ತಿಮೊಥೆಯ 3:1-10, 12, 13; ತೀತ 1:5-9) ಯೆಹೋವ ದೇವರ ಆರಾಧಕರು ಪರಸ್ಪರ ಪ್ರೋತ್ಸಾಹ ನೀಡಲಿಕ್ಕಾಗಿ ಜೊತೆ ಆರಾಧಕರರೊಂದಿಗೆ ಕ್ರಮವಾಗಿ ಕೂಡಿಬರಬೇಕು. (ಇಬ್ರಿಯ 10:24, 25) ಆರಾಧನಾ ಕೂಟಗಳು ಭಕ್ತಿವೃದ್ಧಿ ಮಾಡುವಂತಿದ್ದು ಪ್ರಯೋಜನಕರ ವಿಷಯಗಳನ್ನು ಕಲಿಸಬೇಕು.—1 ಕೊರಿಂಥ 14:26, 31.
ಪೌಲನು ತಿಮೊಥೆಯನಿಗೆ ತನ್ನ ಎರಡನೇ ಪತ್ರವನ್ನು ಬರೆಯುವಷ್ಟರಲ್ಲಿ ರೋಮ್ ನಗರದಲ್ಲಿದ್ದನು. ಅಲ್ಲಿ ಅವನು ಸೆರೆಮನೆಯಲ್ಲಿದ್ದು ತೀರ್ಪಿಗಾಗಿ ಕಾಯುತ್ತಿದ್ದನು. ಕೆಲವು ಧೈರ್ಯವಂತ ಜನರು ಮಾತ್ರ ಅವನನ್ನು ಭೇಟಿಯಾಗುವ ಸಾಹಸ ಮಾಡಿದರು. ತನ್ನ ಸಮಯ ಹತ್ತಿರವಾಯಿತೆಂದು ತಿಳಿದ ಪೌಲನು, “ನಾನು ಉತ್ತಮ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕೊನೆಗಾಣಿಸಿದ್ದೇನೆ, ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ” ಎಂದು ಹೇಳಿದನು. (2 ತಿಮೊಥೆಯ 4:7) ಅನಂತರ ಸ್ವಲ್ಪದರಲ್ಲೇ ಪೌಲನನ್ನು ಹುತಾತ್ಮನಾಗಿ ವಧಿಸಲಾಯಿತೆಂದು ತೋರುತ್ತದೆ. ಆ ಅಪೊಸ್ತಲನು ಬರೆದ ಪತ್ರಗಳು ಇಂದಿಗೂ ದೇವರ ಸತ್ಯಾರಾಧಕರನ್ನು ದಾರಿ ನಡೆಸುತ್ತಾ ಇವೆ.
—ರೋಮನ್ನರಿಗೆ; 1 ಕೊರಿಂಥ; 2 ಕೊರಿಂಥ; ಗಲಾತ್ಯ; ಎಫೆಸ; ಫಿಲಿಪ್ಪಿ; ಕೊಲೊಸ್ಸೆ; 1 ಥೆಸಲೊನೀಕ; 2 ಥೆಸಲೊನೀಕ; 1 ತಿಮೊಥೆಯ; 2 ತಿಮೊಥೆಯ; ತೀತ; ಫಿಲೆಮೋನ; ಇಬ್ರಿಯ ಪುಸ್ತಕಗಳ ಮೇಲೆ ಆಧಾರಿತವಾಗಿದೆ.