ಅಧ್ಯಾಯ 14
ದೇವರ ಸಂದೇಶವನ್ನು ಘೋಷಿಸುವ ಪ್ರವಾದಿಗಳು
ನ್ಯಾಯತೀರ್ಪು, ಮೆಸ್ಸೀಯ, ಶುದ್ಧ ಆರಾಧನೆ ಮುಂತಾದ ವಿಷಯಗಳ ಕುರಿತು ತನ್ನ ಸಂದೇಶಗಳನ್ನು ಜನರಿಗೆ ತಿಳಿಸಲು ಯೆಹೋವನು ಪ್ರವಾದಿಗಳನ್ನು ನೇಮಿಸುತ್ತಾನೆ
ಇಸ್ರಾಯೇಲ್ ಮತ್ತು ಯೆಹೂದವನ್ನು ರಾಜರು ಆಳುತ್ತಿದ್ದ ಸಮಯದಲ್ಲಿ, ಒಂದು ವಿಶೇಷ ಉದ್ದೇಶಕ್ಕಾಗಿ ದೇವರು ಕೆಲವು ಪುರುಷರನ್ನು ಆಯ್ಕೆಮಾಡಿಕೊಂಡನು. ಅವರನ್ನು ಪ್ರವಾದಿಗಳೆಂದು ಕರೆಯಲಾಗುತ್ತಿತ್ತು. ಅಸಾಧಾರಣ ನಂಬಿಕೆ ಮತ್ತು ಧೈರ್ಯವಿದ್ದ ಆ ಪುರುಷರು ದೇವರ ಸಂದೇಶಗಳನ್ನು ಜನರಿಗೆ ಪ್ರಕಟಿಸುತ್ತಿದ್ದರು. ಅವರು ಪ್ರಕಟಿಸಿದ ನಾಲ್ಕು ಮುಖ್ಯ ವಿಷಯಗಳನ್ನು ಗಮನಿಸಿ.
1. ಯೆರೂಸಲೇಮಿನ ನಾಶನ. ಯೆರೂಸಲೇಮ್ ಪಟ್ಟಣ ನಾಶವಾಗಿ ಪಾಳುಬೀಳುವುದೆಂದು ಬಹಳ ಕಾಲದ ಹಿಂದೆಯೇ ದೇವರ ಪ್ರವಾದಿಗಳು ಅದರಲ್ಲೂ ಯೆಶಾಯ ಮತ್ತು ಯೆರೆಮೀಯರು ಜನರನ್ನು ಎಚ್ಚರಿಸಿದ್ದರು. ದೇವರು ಏಕೆ ಆ ಪಟ್ಟಣದವರ ಮೇಲೆ ಕೋಪಗೊಂಡಿದ್ದಾನೆಂದು ಅವರು ಸ್ಪಷ್ಟವಾಗಿ ಹೇಳಿದರು. ಯೆರೂಸಲೇಮ್ ತಾನು ದೇವರನ್ನು ಪ್ರತಿನಿಧಿಸುತ್ತೇನೆಂದು ಹೇಳಿಕೊಂಡಿತಾದರೂ ಸುಳ್ಳು ಧರ್ಮದ ಆಚಾರವಿಚಾರಗಳನ್ನು ಅನುಸರಿಸಿತು. ಮಾತ್ರವಲ್ಲ ಭ್ರಷ್ಟತೆ, ಹಿಂಸಾಚಾರಗಳು ಅಲ್ಲಿ ಸರ್ವಸಾಮಾನ್ಯವಾಗಿತ್ತು.—2 ಅರಸುಗಳು 21:10-15; ಯೆಶಾಯ 3:1-8, 16-26; ಯೆರೆಮೀಯ 2:1–3:13.
2. ಶುದ್ಧಾರಾಧನೆಯ ಪುನಃಸ್ಥಾಪನೆ. ಬ್ಯಾಬಿಲೋನಿನಲ್ಲಿ ಸೆರೆವಾಸಿಗಳಾಗಿದ್ದ ದೇವಜನರು 70 ವರ್ಷಗಳ ನಂತರ ಬಿಡುಗಡೆ ಹೊಂದಲಿದ್ದರು. ಬಿಡುಗಡೆಯಾಗಿ ತಮ್ಮ ತಾಯ್ನಾಡಿಗೆ ಮರಳಿಬಂದು ಪಾಳುಬಿದ್ದಿದ್ದ ಯೆರೂಸಲೇಮಿನಲ್ಲಿ ಅವರು ಯೆಹೋವನ ಆಲಯವನ್ನು ಪುನಃ ಕಟ್ಟಲಿದ್ದರು. (ಯೆರೆಮೀಯ 46:27; ಆಮೋಸ 9:13-15) ಆ ದೇವಜನರನ್ನು ಯಾರು ಬಿಡುಗಡೆಗೊಳಿಸುವನೆಂದು ಯೆಶಾಯ ಪ್ರವಾದಿಯು 200 ವರ್ಷಗಳ ಹಿಂದೆಯೇ ಹೇಳಿದ್ದನು. ಅವನ ಹೆಸರು ಕೋರೇಷನೆಂದು ಮತ್ತು ಅವನು ಬ್ಯಾಬಿಲೋನನ್ನು ಸೋಲಿಸಿ ಶುದ್ಧಾರಾಧನೆಯನ್ನು ಪುನಃಸ್ಥಾಪಿಸಲು ದೇವಜನರಿಗೆ ಅನುಮತಿ ನೀಡುವನೆಂದು ಯೆಶಾಯನು ಹೇಳಿದನು. ಮಾತ್ರವಲ್ಲ ಕೋರೇಷನು ಬ್ಯಾಬಿಲೋನನ್ನು ಸೋಲಿಸಲು ಉಪಯೋಗಿಸುವ ಯುದ್ಧತಂತ್ರವನ್ನೂ ಅವನು ಸವಿವರವಾಗಿ ತಿಳಿಸಿದನು.—ಯೆಶಾಯ 44:24–45:3.
3. ಮೆಸ್ಸೀಯನ ಆಗಮನ ಹಾಗೂ ಅವನ ಜೀವನ. ಮೆಸ್ಸೀಯನು ಬೇತ್ಲೆಹೇಮ್ ಎಂಬ ಪಟ್ಟಣದಲ್ಲಿ ಹುಟ್ಟುವನು. (ಮೀಕ 5:2) ದೀನಸ್ವಭಾವದವನಾಗಿದ್ದ ಅವನು ಕತ್ತೆಮರಿಯ ಮೇಲೆ ಕೂತು ಯೆರೂಸಲೇಮನ್ನು ಪ್ರವೇಶಿಸುವನು. (ಜೆಕರ್ಯ 9:9) ಇಷ್ಟು ದೀನಸ್ವಭಾವದವನೂ ದಯೆಯುಳ್ಳವನೂ ಆಗಿದ್ದರೂ ಅವನು ಜನಪ್ರಿಯನಾಗಿರುವುದಿಲ್ಲ, ಅನೇಕ ಜನರು ಅವನನ್ನು ತಿರಸ್ಕರಿಸುವರು. (ಯೆಶಾಯ 42:1-3; 53:1, 3) ಈ ಮೆಸ್ಸೀಯನು ಭಯಾನಕವಾಗಿ ಸಾಯುವನು. ಆದರೆ ಅಷ್ಟಕ್ಕೇ ಅವನ ಜೀವನ ಮುಗಿದುಹೋಗುವುದೋ? ಇಲ್ಲ. ಏಕೆಂದರೆ, ತನ್ನ ಜೀವವನ್ನು ಅವನು ಯಜ್ಞವಾಗಿ ಅರ್ಪಿಸುವ ಉದ್ದೇಶವೇ ಜನರ ಪಾಪ ಕ್ಷಮಾಪಣೆಯಾಗಿತ್ತು. (ಯೆಶಾಯ 53:4, 5, 9-12) ಮತ್ತು ಆ ಉದ್ದೇಶ ನೆರವೇರಬೇಕಾದರೆ ಅವನ ಪುನರುತ್ಥಾನ ಆಗಬೇಕಿತ್ತು.
4. ಭೂಮಿಯ ಮೇಲೆ ಮೆಸ್ಸೀಯನ ಆಳ್ವಿಕೆ. ಅಪರಿಪೂರ್ಣ ಮಾನವರು ತಮ್ಮನ್ನು ತಾವೇ ಶಾಂತಿಸಮಾಧಾನದಿಂದ ಆಳಿಕೊಳ್ಳಲಾರರು. ಆದರೆ ತದ್ವಿರುದ್ಧವಾಗಿ ಮೆಸ್ಸೀಯ ರಾಜನು “ಸಮಾಧಾನದ ಪ್ರಭು” ಆಗಿರುವನು. (ಯೆಶಾಯ 9:6, 7; ಯೆರೆಮೀಯ 10:23) ಆ ಸಮಾಧಾನದ ಪ್ರಭುವಿನ ಆಳ್ವಿಕೆಯಡಿಯಲ್ಲಿ ಸಕಲ ಮಾನವರು ಪರಸ್ಪರ ಶಾಂತಿಯಿಂದಿರುವರು. ಮಾತ್ರವಲ್ಲ ಪ್ರಾಣಿಸಂಕುಲದೊಂದಿಗೂ ಶಾಂತಿ ಸಮಾಧಾನದಿಂದಿರುವರು. (ಯೆಶಾಯ 11:3-7) ಕಾಯಿಲೆಗಳು ಕಾಣದೆ ಹೋಗುವವು. (ಯೆಶಾಯ 33:24) ಮರಣದ ಸುಳಿವೇ ಇರದು, ಅದು ಶಾಶ್ವತವಾಗಿ ನಿರ್ನಾಮವಾಗುವುದು. (ಯೆಶಾಯ 25:8) ಸತ್ತವರು ಮೆಸ್ಸೀಯನ ಆಳ್ವಿಕೆಯ ಸಮಯದಲ್ಲಿ ಪುನರುತ್ಥಾನಗೊಂಡು ಭೂಮಿಯ ಮೇಲೆ ಜೀವಿಸುವರು.—ದಾನಿಯೇಲ 12:13.
—ಯೆಶಾಯ, ಯೆರೆಮೀಯ, ದಾನಿಯೇಲ, ಆಮೋಸ, ಮೀಕ ಮತ್ತು ಜೆಕರ್ಯ ಪುಸ್ತಕದ ಮೇಲೆ ಆಧಾರಿತವಾಗಿದೆ.