ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 50 ಪು. 258-ಪು. 262 ಪ್ಯಾ. 5
  • ಹೃದಯವನ್ನು ತಲಪಲು ಪ್ರಯತ್ನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹೃದಯವನ್ನು ತಲಪಲು ಪ್ರಯತ್ನಿಸುವುದು
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • ಹೃದಯ ಮುಟ್ಟಲು ಪ್ರಯತ್ನ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ವಿದ್ಯಾರ್ಥಿಗಳ ಹೃದಯ ತಲುಪುವುದು ಹೇಗೆ?
    2015 ನಮ್ಮ ರಾಜ್ಯದ ಸೇವೆ
  • ಬೋಧಕರಾಗುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿರಿ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ನಾವು ಸಾರಲೇಬೇಕಾದಂಥ ಸಂದೇಶ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 50 ಪು. 258-ಪು. 262 ಪ್ಯಾ. 5

ಅಧ್ಯಾಯ 50

ಹೃದಯವನ್ನು ತಲಪಲು ಪ್ರಯತ್ನಿಸುವುದು

ನೀವೇನು ಮಾಡುವ ಅಗತ್ಯವಿದೆ?

ಚರ್ಚಿಸಲ್ಪಡುತ್ತಿರುವ ವಿಷಯಗಳ ಬಗ್ಗೆ ಜನರ ಅನಿಸಿಕೆ ಏನೆಂಬುದನ್ನು ಪರಿಗಣಿಸಿರಿ. ದೇವರಿಗೆ ಸಮೀಪ ಬರುವುದರಿಂದ ಮತ್ತು ಆತನ ಸ್ನೇಹಿತರಾಗುವುದರಿಂದ ಫಲಿಸುವ ಭಾವನೆಗಳನ್ನೂ ಪ್ರಚೋದನೆಗಳನ್ನೂ ಬೆಳೆಸಿಕೊಳ್ಳುವಂತೆ ಅವರಿಗೆ ಸಹಾಯಮಾಡಿರಿ.

ಇದು ಪ್ರಾಮುಖ್ಯವೇಕೆ?

ಯೆಹೋವನನ್ನು ಮೆಚ್ಚಿಸಬೇಕಾದರೆ, ಜನರ ಹೃದಯಗಳಲ್ಲಿ ದೇವರ ವಾಕ್ಯವು ಸ್ಥಿರವಾಗಿ ಬೇರೂರಿಸಲ್ಪಟ್ಟಿರಬೇಕು.

ಜನರಿಗೆ ಸಾಕ್ಷಿ ನೀಡುವುದಲ್ಲದೆ, ನೀವು ಅವರ ಹೃದಯವನ್ನು ತಲಪಲೂ ಪ್ರಯತ್ನಿಸುವ ಅಗತ್ಯವಿದೆ. ಅನೇಕವೇಳೆ ಬೈಬಲಿನಲ್ಲಿ ಹೃದಯವನ್ನು, ಮನುಷ್ಯನ ಬಾಹ್ಯ ತೋರಿಕೆಗೆ ತದ್ವಿರುದ್ಧವಾಗಿರುವಂತೆ ತೋರಿಸಲಾಗಿದೆ. ಸಾಂಕೇತಿಕ ಹೃದಯವು ಆ ವ್ಯಕ್ತಿಯು ಆಂತರಿಕವಾಗಿ ಏನಾಗಿದ್ದಾನೆ, ಅಂದರೆ ಅವನಿಗೆ ಯಾವ ಅನಿಸಿಕೆ ಇದೆ, ಅವನು ಯಾವ ವಿಷಯಗಳನ್ನು ಯೋಚಿಸುತ್ತಾನೆ, ಅದರ ಕುರಿತು ಏಕೆ ಯೋಚಿಸುತ್ತಾನೆ ಮತ್ತು ಆ ಆಲೋಚನೆಗಳು ಅವನನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ಪ್ರತಿನಿಧಿಸುತ್ತದೆ. ಸತ್ಯದ ಬೀಜವು ಬಿತ್ತಲ್ಪಡುವುದು ಈ ಸಾಂಕೇತಿಕ ಹೃದಯದಲ್ಲಿಯೇ. (ಮತ್ತಾ. 13:19) ಮತ್ತು ದೇವರಿಗೆ ತೋರಿಸುವ ವಿಧೇಯತೆಯು ಈ ಹೃದಯದಿಂದಲೇ ಹೊರಹೊಮ್ಮಬೇಕು.—ಜ್ಞಾನೋ. 3:1; ರೋಮಾ. 6:17.

ನಿಮ್ಮ ಬೋಧನೆಯು ಹೃದಯವನ್ನು ಭೇದಿಸಿಕೊಂಡು ಹೋಗಬೇಕಾಗಿರುವುದರಿಂದ, ಈ ಮುಂದಿನ ಉದ್ದೇಶಗಳ ಮೇಲೆ ಗಮನವನ್ನು ಕೇಂದ್ರೀಕರಿಸಿರಿ: (1) ನಿಮ್ಮ ಕೇಳುಗನ ಹೃದಯವನ್ನು ಈಗಾಗಲೇ ಯಾವುದು ಪ್ರಭಾವಿಸಿದೆ ಎಂಬುದನ್ನು ವಿವೇಚಿಸಿ ತಿಳಿದುಕೊಳ್ಳಿರಿ. (2) ಪ್ರೀತಿ ಮತ್ತು ದೇವಭಯದಂತಹ ಪ್ರಯೋಜನಕರವಾದ ಗುಣಗಳನ್ನು ಬಲಗೊಳಿಸಿರಿ. (3) ನಿಮ್ಮ ಕೇಳುಗನು ಪೂರ್ಣ ರೀತಿಯಲ್ಲಿ ಯೆಹೋವನನ್ನು ಸಂತೋಷಪಡಿಸಲು ಸಾಧ್ಯವಾಗುವಂತೆ, ಅವನು ತನ್ನ ಆಂತರಿಕ ಹೇತುಗಳನ್ನು ವಿಶ್ಲೇಷಿಸುವಂತೆ ಅವನನ್ನು ಪ್ರೋತ್ಸಾಹಿಸಿರಿ.

ವಿವೇಚನಾಶಕ್ತಿಯನ್ನು ಉಪಯೋಗಿಸುವುದು. ಜನರು ಇನ್ನೂ ಸತ್ಯವನ್ನು ಏಕೆ ಅಂಗೀಕರಿಸಿಲ್ಲ ಎಂಬುದಕ್ಕೆ ಬೇರೆ ಬೇರೆ ಕಾರಣಗಳಿವೆ. ನೀವು ಒಂದು ಮನೆ ಬೈಬಲ್‌ ಅಧ್ಯಯನವನ್ನು ನಡೆಸುವಾಗ, ಪೂರ್ವಾಭಿಪ್ರಾಯಗಳನ್ನು ತೊಲಗಿಸಿ, ವಿದ್ಯಾರ್ಥಿಗಿರುವ ತಪ್ಪಭಿಪ್ರಾಯಗಳನ್ನು ಸರಿಪಡಿಸಲು ನಿಜತ್ವಗಳನ್ನು ಒದಗಿಸಬೇಕಾಗಬಹುದು, ಅಥವಾ ನೀವು ಕೇವಲ ರುಜುವಾತನ್ನು ಒದಗಿಸಬೇಕಾಗಬಹುದು. ಸ್ವತಃ ಹೀಗೆ ಪ್ರಶ್ನಿಸಿಕೊಳ್ಳಿರಿ: ‘ಒಬ್ಬ ಮಾನವನೋಪಾದಿ ತನಗೆ ಆತ್ಮಿಕ ಆವಶ್ಯಕತೆಗಳಿವೆ ಎಂಬ ಅರಿವು ಈ ವ್ಯಕ್ತಿಗಿದೆಯೊ? ಅವನು ಈಗಾಗಲೇ ಎಷ್ಟನ್ನು ನಂಬುತ್ತಾನೆ? ಅವನು ಏನನ್ನು ನಂಬುವುದಿಲ್ಲ? ಅವನು ಏಕೆ ಈ ತೀರ್ಮಾನಗಳಿಗೆ ಬಂದಿದ್ದಾನೆ? ಸತ್ಯವನ್ನು ತಿಳಿಯುವುದರೊಂದಿಗೆ ಬರುವ ಜವಾಬ್ದಾರಿಗಳನ್ನು ಅಂಗೀಕರಿಸುವುದರಿಂದ ಅವನನ್ನು ತಡೆಯಬಹುದಾದ ಆಸೆಗಳನ್ನು ಜಯಿಸಲು ಅವನಿಗೆ ಸಹಾಯದ ಅಗತ್ಯವಿದೆಯೆ?’

ಜನರು ಕೆಲವು ವಿಷಯಗಳನ್ನು ಏಕೆ ನಂಬುತ್ತಾರೆಂದು ತಿಳಿದುಕೊಳ್ಳುವುದು ಯಾವಾಗಲೂ ಸುಲಭವಾಗಿರುವುದಿಲ್ಲ. “ಮನುಷ್ಯನ ಹೃದಯಸಂಕಲ್ಪವು ಆಳವಾದ [ಬಾವಿಯ] ನೀರು. ಆದರೆ ವಿವೇಕಿಯು [“ವಿವೇಚನಾಶಕ್ತಿಯುಳ್ಳ ಮನುಷ್ಯನು,” NW] ಅದನ್ನು ಸೇದಬಲ್ಲನು” ಎನ್ನುತ್ತದೆ ಜ್ಞಾನೋಕ್ತಿ 20:5. ಸುಲಭವಾಗಿ ವ್ಯಕ್ತವಾಗದಿರುವ ಸಂಗತಿಯನ್ನು ಗ್ರಹಿಸುವ ಸಾಮರ್ಥ್ಯವೇ ಈ ವಿವೇಚನಾಶಕ್ತಿಯಾಗಿದೆ. ಇದು ತೀಕ್ಷ್ಣವಾದ ಗಮನವನ್ನೂ ಆಸಕ್ತಿ ವಹಿಸುವ ಮನೋಭಾವವನ್ನೂ ಅಗತ್ಯಪಡಿಸುತ್ತದೆ.

ಎಲ್ಲ ಸಂವಾದವು ಕೇವಲ ಬಾಯಿಮಾತಿನದ್ದಾಗಿರುವುದಿಲ್ಲ. ಒಂದು ವಿಷಯವು ವಿದ್ಯಾರ್ಥಿಯ ಮುಖಭಾವದಲ್ಲಿ ಅಥವಾ ಸ್ವರದಲ್ಲಿ ಬದಲಾವಣೆಯನ್ನು ಉಂಟುಮಾಡಬಹುದು. ನೀವು ಒಬ್ಬ ಹೆತ್ತವರಾಗಿರುವಲ್ಲಿ, ನಿಮ್ಮ ಮಗನ ವರ್ತನೆಯಲ್ಲಿ ಬದಲಾವಣೆಯು, ಅವನು ಜೀವನದಲ್ಲಿ ಉಂಟಾಗಿರುವ ಯಾವುದೊ ಹೊಸ ಪ್ರಭಾವಕ್ಕೆ ಪ್ರತಿಕ್ರಿಯಿಸುತ್ತಿದ್ದಾನೆಂಬುದನ್ನು ಸೂಚಿಸಬಹುದು ಎಂದು ನೀವು ಗ್ರಹಿಸುತ್ತೀರೆಂಬುದರಲ್ಲಿ ಸಂಶಯವೇ ಇಲ್ಲ. ಈ ಸೂಚನೆಗಳನ್ನು ಅಸಡ್ಡೆಮಾಡಬೇಡಿರಿ. ಅವು ಆಂತರಿಕ ವ್ಯಕ್ತಿತ್ವದ ನಸುನೋಟಗಳಾಗಿವೆ.

ಸಂದರ್ಭೋಚಿತ ಪ್ರಶ್ನೆಗಳು, ಒಬ್ಬನ ಹೃದಯದಲ್ಲಿ ಏನಿದೆಯೊ ಅದನ್ನು ಹೊರತರಲು ನಿಮಗೆ ಸಹಾಯಮಾಡಬಲ್ಲವು. ನೀವು ಹೀಗೆ ಪ್ರಶ್ನಿಸಬಹುದು: “. . . ಕುರಿತು ನಿಮಗೆ ಹೇಗನಿಸುತ್ತದೆ?” “. . . ಎಂಬುದನ್ನು ನಿಮಗೆ ಯಾವುದು ಮನದಟ್ಟುಮಾಡಿತು?” “. . . ಎಂಬುದಕ್ಕೆ ನೀವು ಹೇಗೆ ಪ್ರತಿಕ್ರಿಯೆ ತೋರಿಸುವಿರಿ?” ಆದರೆ, ಜನರ ಮೇಲೆ ಪ್ರಶ್ನೆಗಳ ಸುರಿಮಳೆಯನ್ನು ಸುರಿಸಿ ಆಕ್ರಮಣ ಮಾಡದಿರುವಂತೆ ಜಾಗ್ರತೆ ವಹಿಸಿ. “ನಿಮಗೆ ಆಕ್ಷೇಪಣೆ ಇಲ್ಲವಾದರೆ, ನಾನು . . . ಎಂದು ಕೇಳಬಹುದೇ?” ಎಂಬ ಹೇಳಿಕೆಯ ಸಹಾಯದಿಂದ ನಿಮ್ಮ ಪ್ರಶ್ನೆಗಳನ್ನು ನೀವು ಜಾಣ್ಮೆಯಿಂದ ಕೇಳಲು ಪ್ರಯತ್ನಿಸಬಹುದು. ಒಬ್ಬನ ಹೃದಯದಲ್ಲಿ ಏನಿದೆ ಎಂಬುದನ್ನು ಕಂಡುಹಿಡಿಯುವುದು ಶ್ರಮದ ಕೆಲಸವಾದುದರಿಂದ, ಅದನ್ನು ಅವಸರದಿಂದ ಮಾಡಲಿಕ್ಕಾಗುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ, ಒಬ್ಬ ವ್ಯಕ್ತಿಯ ಭರವಸೆಯನ್ನು ಕಟ್ಟಲು ಸ್ವಲ್ಪ ಸಮಯವು ತಗಲುತ್ತದೆ, ಅನಂತರವೇ ಅವನು ತನ್ನ ಆಂತರಿಕ ಅನಿಸಿಕೆಗಳನ್ನು ನಿಮಗೆ ತಿಳಿಯಪಡಿಸುವನು. ಆದರೆ ಆಗಲೂ, ನೀವು ಅವನ ವೈಯಕ್ತಿಕ ವಿಷಯಗಳಲ್ಲಿ ತಲೆಹಾಕುತ್ತಿದ್ದೀರಿ ಎಂದು ಅವನು ನೆನಸದಂತೆ ಜಾಗ್ರತೆ ವಹಿಸುವ ಅಗತ್ಯವಿದೆ.—1 ಪೇತ್ರ 4:15.

ನೀವು ಏನನ್ನು ಕೇಳಿಸಿಕೊಳ್ಳುತ್ತೀರೊ ಅದಕ್ಕೆ ಪ್ರತಿವರ್ತನೆ ತೋರಿಸುವ ರೀತಿಯೂ ವಿವೇಚನಾಶಕ್ತಿಯನ್ನು ಕೇಳಿಕೊಳ್ಳುತ್ತದೆ. ಯಾವ ಬೈಬಲಾಧಾರಿತ ಮಾಹಿತಿಯು ಜನರನ್ನು ಪ್ರಚೋದಿಸಬಹುದೆಂದು ನಿರ್ಧರಿಸಸಾಧ್ಯವಾಗುವಂತೆ, ನೀವು ಅವರನ್ನು ಅರ್ಥಮಾಡಿಕೊಳ್ಳುವುದೇ ನಿಮ್ಮ ಉದ್ದೇಶವಾಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಆದುದರಿಂದ, ಅವರ ದೃಷ್ಟಿಕೋನಗಳು ತಪ್ಪಾಗಿವೆಯೆಂದು ಒಡನೆಯೇ ತಿಳಿಸುವ ಯಾವುದೇ ಪ್ರೇರಣೆಯನ್ನು ಬೇಗನೇ ನಿಗ್ರಹಿಸಿಬಿಡಿ. ಅದಕ್ಕೆ ಬದಲಾಗಿ, ಆ ಮಾತುಗಳ ಹಿಂದೆ ಅಡಗಿರುವ ಅನಿಸಿಕೆಗಳನ್ನು ವಿವೇಚಿಸಿ ತಿಳಿಯುವ ಪ್ರಜ್ಞೆಯುಳ್ಳವರಾಗಿರ್ರಿ. ಆಗ ನೀವು ಹೇಗೆ ಪ್ರತಿಕ್ರಿಯಿಸಬೇಕೆಂಬುದು ನಿಮಗೆ ತಿಳಿದುಬರುವುದು; ಮತ್ತು ನಿಮ್ಮ ವಿದ್ಯಾರ್ಥಿಯು, ನೀವು ಅವನನ್ನು ಅರ್ಥಮಾಡಿಕೊಳ್ಳುತ್ತೀರಿ ಎಂಬ ಅನಿಸಿಕೆಯುಳ್ಳವನಾಗಿರುವನು. ಆಗ ಅವನು ನೀವು ಹೇಳುವ ವಿಷಯದ ಕುರಿತು ಗಂಭೀರವಾಗಿ ಆಲೋಚಿಸುವುದು ಹೆಚ್ಚು ಸಂಭವನೀಯ.—ಜ್ಞಾನೋ. 16:23.

ನೀವು ಒಂದು ದೊಡ್ಡ ಗುಂಪನ್ನು ಸಂಬೋಧಿಸಿ ಮಾತಾಡುತ್ತಿರುವಾಗಲೂ ಒಬ್ಬೊಬ್ಬ ವ್ಯಕ್ತಿಗಳನ್ನು ನೀವು ಸ್ವಲ್ಪಮಟ್ಟಿಗೆ ಪ್ರಚೋದಿಸಬಲ್ಲಿರಿ. ನಿಮಗೆ ಉತ್ತಮವಾದ ಸಭಾ ಸಂಪರ್ಕವಿರುವಲ್ಲಿ, ಮುಖಭಾವಗಳನ್ನು ನೀವು ಎಚ್ಚರಿಕೆಯಿಂದ ಗಮನಿಸುತ್ತಿರುವಲ್ಲಿ ಮತ್ತು ಆಲೋಚನಾಪ್ರೇರಕವಾದ ಭಾವೋತ್ತೇಜಕ ಪ್ರಶ್ನೆಗಳನ್ನು ಕೇಳುವಲ್ಲಿ, ನೀವು ಏನು ಹೇಳುತ್ತಿದ್ದೀರೋ ಅದರ ಕುರಿತು ನಿಮ್ಮ ಕೇಳುಗರಿಗೆ ಹೇಗನಿಸುತ್ತದೆಂಬುದು ನಿಮಗೆ ಸ್ವಲ್ಪಮಟ್ಟಿಗೆ ತಿಳಿಯುವ ಸಾಧ್ಯತೆಯಿರುವುದು. ನಿಮ್ಮ ಸಭಿಕರನ್ನು ನೀವು ಚೆನ್ನಾಗಿ ಅರ್ಥಮಾಡಿಕೊಂಡಿರುವಲ್ಲಿ, ಅವರ ಸನ್ನಿವೇಶಗಳಿಗೆ ಪರಿಗಣನೆ ತೋರಿಸಿರಿ. ನೀವು ಅವರೊಂದಿಗೆ ದೇವರ ವಾಕ್ಯದಿಂದ ತರ್ಕಸಮ್ಮತವಾಗಿ ಮಾತಾಡುವಾಗ, ಸಭೆಯ ಸರ್ವಸಾಧಾರಣವಾದ ಮನೋಭಾವವನ್ನು ಗಣನೆಗೆ ತೆಗೆದುಕೊಳ್ಳಿರಿ.—ಗಲಾ. 6:18.

ಪ್ರಯೋಜನಕರವಾದ ಅನಿಸಿಕೆಗಳನ್ನು ಚುರುಕುಗೊಳಿಸುವುದು. ಒಬ್ಬ ವ್ಯಕ್ತಿಯು ಏನನ್ನು ನಂಬುತ್ತಾನೆ, ಏನನ್ನು ನಂಬುವುದಿಲ್ಲ ಮತ್ತು ಹಾಗೇಕೆ ಎಂಬುದರ ಕುರಿತು ನಿಮಗೆ ಸ್ವಲ್ಪಮಟ್ಟಿಗೆ ತಿಳಿದ ಬಳಿಕ, ನೀವು ಆ ಅಸ್ತಿವಾರದ ಮೇಲೆ ಕಟ್ಟಲು ಶಕ್ತರಾಗುವಿರಿ. ಪುನರುತ್ಥಾನದ ಬಳಿಕ ಯೇಸು ತನ್ನ ಶಿಷ್ಯರಿಗೆ ಇತ್ತೀಚೆಗೆ ನಡೆದಿದ್ದ ಸಂಭವಗಳ ಬೆಳಕಿನಲ್ಲಿ, “ಗ್ರಂಥಗಳ ಅರ್ಥವನ್ನು . . . ಬಿಚ್ಚಿಹೇಳಿದಾಗ,” ಅವರ ಹೃದಯಗಳನ್ನು ತಲಪಿದನು. (ಲೂಕ 24:32) ಹಾಗೆಯೇ ನೀವೂ, ಒಬ್ಬ ವ್ಯಕ್ತಿಗೆ ಯಾವ ಅನುಭವವಾಗಿದೆ, ಅವನು ಯಾವುದಕ್ಕಾಗಿ ಹಂಬಲಿಸುತ್ತಾನೆ ಮತ್ತು ದೇವರ ವಾಕ್ಯದಲ್ಲಿ ಏನನ್ನು ನೋಡುತ್ತಿದ್ದಾನೆಂಬಂಥ ವಿಷಯಗಳ ಮಧ್ಯೆ ಸಂಬಂಧವನ್ನು ಕಲ್ಪಿಸಲು ಪ್ರಯತ್ನಿಸಬೇಕು. ಆ ವಿದ್ಯಾರ್ಥಿಯು “ಇದೇ ಸತ್ಯ!” ಎಂದು ಸ್ಪಷ್ಟವಾಗಿ ಗ್ರಹಿಸುವಾಗ, ಅವನ ಹೃದಯವು ಪ್ರಯೋಜನಕರವಾದ ರೀತಿಯಲ್ಲಿ ಸ್ಪರ್ಶಿಸಲ್ಪಟ್ಟಿರುವುದು.

ನೀವು ಯೆಹೋವನ ಒಳ್ಳೆಯತನ, ಆತನ ಪ್ರೀತಿ, ಆತನ ಅಪಾತ್ರ ದಯೆ ಮತ್ತು ಆತನ ಮಾರ್ಗಗಳ ಔಚಿತ್ಯವನ್ನು ಒತ್ತಿಹೇಳುವಾಗ, ನೀವು ಯಾರಿಗೆ ಕಲಿಸುತ್ತೀರೊ ಅವರು ದೇವರಿಗಾಗಿರುವ ತಮ್ಮ ಪ್ರೀತಿಯನ್ನು ಬೆಳೆಸುವಂತೆ ಅವರಿಗೆ ಸಹಾಯಮಾಡುತ್ತೀರಿ. ನಿಮ್ಮ ಕೇಳುಗರಲ್ಲಿ ವ್ಯಕ್ತಿಗತವಾಗಿ ಒಬ್ಬೊಬ್ಬರಲ್ಲಿ ದೇವರು ನೋಡುವ ಉತ್ತಮ ಗುಣಗಳನ್ನು ತೋರಿಸಲು ನೀವು ಸಮಯವನ್ನು ತೆಗೆದುಕೊಳ್ಳುವಾಗ, ಆತನೊಂದಿಗೆ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳಸಾಧ್ಯವಿದೆ ಎಂಬುದನ್ನು ನಂಬಲು ನೀವು ಅವರಿಗೆ ಕಾರಣವನ್ನು ಕೊಡುತ್ತೀರಿ. ಕೀರ್ತನೆ 139:1-3, ಲೂಕ 21:1-4, ಮತ್ತು ಯೋಹಾನ 6:44 ರಂತಹ ವಚನಗಳನ್ನು ಪರಿಗಣಿಸುವ ಮೂಲಕ ಮತ್ತು ತನ್ನ ನಂಬಿಗಸ್ತ ಸೇವಕರೊಂದಿಗೆ ಯೆಹೋವನ ಪ್ರೀತಿಪರ ಅಂಟಿಕೊಳ್ಳುವಿಕೆಯ ಆಳವನ್ನು ಗಣ್ಯಮಾಡುವಂತೆ ನಿಮ್ಮ ಕೇಳುಗರಿಗೆ ಸಹಾಯಮಾಡುವ ಮೂಲಕ ನೀವು ಇದನ್ನು ಸಾಧಿಸಬಲ್ಲಿರಿ. (ರೋಮಾ. 8:38, 39) ಯೆಹೋವನು ನಮ್ಮ ತಪ್ಪುಗಳನ್ನು ಮಾತ್ರ ಗಮನಿಸುವುದಿಲ್ಲ, ಬದಲಿಗೆ ನಮ್ಮ ಇಡೀ ಜೀವನ ಮಾರ್ಗವನ್ನು, ಶುದ್ಧಾರಾಧನೆಗಾಗಿ ನಮಗಿರುವ ಆಸಕ್ತಿಯನ್ನು ಮತ್ತು ಆತನ ಹೆಸರಿಗಾಗಿ ನಮಗಿರುವ ಪ್ರೀತಿಯನ್ನು ನೋಡುತ್ತಾನೆಂದು ಅವರಿಗೆ ವಿವರಿಸಿರಿ. (2 ಪೂರ್ವ. 19:2, 3; ಇಬ್ರಿ. 6:10) ವ್ಯಕ್ತಿಗತವಾಗಿ ನಮ್ಮ ಕುರಿತು ಅತಿ ಚಿಕ್ಕ ವಿವರವನ್ನೂ ಆತನು ಜ್ಞಾಪಕದಲ್ಲಿಟ್ಟುಕೊಳ್ಳುತ್ತಾನೆ ಮತ್ತು ಆತನು ಗಮನಾರ್ಹವಾದ ರೀತಿಯಲ್ಲಿ “ಸಮಾಧಿಗಳಲ್ಲಿರುವ” ಎಲ್ಲರನ್ನೂ ಪುನರುಜ್ಜೀವಿಸುವನು. (ಯೋಹಾ. 5:28, 29; ಲೂಕ 12:6, 7) ಮನುಷ್ಯರು ದೇವರ ಸ್ವರೂಪದಲ್ಲಿ ಮತ್ತು ಹೋಲಿಕೆಯಲ್ಲಿ ಉಂಟುಮಾಡಲ್ಪಟ್ಟಿರುವುದರಿಂದ, ಆತನ ಗುಣಗಳ ಕುರಿತಾದ ಚರ್ಚೆಯು, ಅನೇಕವೇಳೆ ಒಬ್ಬ ವ್ಯಕ್ತಿಯಲ್ಲಿ ಹೃತ್ಪೂರ್ವಕವಾದ ಪ್ರತಿವರ್ತನೆಯನ್ನು ಉಂಟುಮಾಡುವುದು.—ಆದಿ. 1:27.

ಒಬ್ಬ ವ್ಯಕ್ತಿಯು ಇತರರನ್ನು ಯೆಹೋವನು ವೀಕ್ಷಿಸುವಂತೆಯೇ ವೀಕ್ಷಿಸಲು ಕಲಿಯುವಾಗಲೂ ಹೃದಯವು ಸ್ಪರ್ಶಿಸಲ್ಪಡಬಲ್ಲದು. ನಮ್ಮ ದೇವರು ವೈಯಕ್ತಿಕವಾಗಿ ನಮ್ಮಲ್ಲಿ ಪ್ರತಿಯೊಬ್ಬರ ಕಡೆಗೆ ಕೋಮಲವಾದ ಪರಿಗಣನೆಯನ್ನು ತೋರಿಸುವಾಗ, ಇತರರ ಹಿನ್ನೆಲೆ, ರಾಷ್ಟ್ರೀಯತೆ, ಅಥವಾ ಜಾತಿಯು ಯಾವುದೇ ಆಗಿರಲಿ ಅವರಿಗೂ ಆತನು ಅದೇ ರೀತಿಯ ಪರಿಗಣನೆಯನ್ನು ತೋರಿಸುವನೆಂಬುದು ತರ್ಕಬದ್ಧವಾದ ವಿಷಯವಾಗಿದೆ. (ಅ. ಕೃ. 10:34, 35) ಒಬ್ಬ ವ್ಯಕ್ತಿಯು ಇಂತಹ ತಿಳಿವಳಿಕೆಯನ್ನು ಪಡೆದ ನಂತರ, ತನ್ನ ಹೃದಯದಿಂದ ದ್ವೇಷ ಮತ್ತು ಪೂರ್ವಾಗ್ರಹವನ್ನು ಸಂಪೂರ್ಣವಾಗಿ ತೆಗೆದುಹಾಕಲು ಬಲವಾದ ಶಾಸ್ತ್ರೀಯ ಆಧಾರವು ಅವನಿಗಿರುವುದು. ಮತ್ತು ಇದು, ಅವನು ದೈವಿಕ ಚಿತ್ತವನ್ನು ಮಾಡುತ್ತಾ ಮುಂದುವರಿಯಲು ಕಲಿಯುವಾಗ, ಇತರರೊಂದಿಗೆ ಶಾಂತಿಯಿಂದ ಹೊಂದಿಕೊಂಡುಹೋಗಲು ಅವನನ್ನು ಶಕ್ತನನ್ನಾಗಿ ಮಾಡುವುದು.

ಇತರರು ಬೆಳೆಸಿಕೊಳ್ಳುವಂತೆ ನೀವು ಸಹಾಯಮಾಡಬೇಕಾದ ಇನ್ನೊಂದು ಸದ್ಭಾವವು ದೇವಭಯವೇ ಆಗಿದೆ. (ಕೀರ್ತ. 111:10; ಪ್ರಕ. 14:6, 7) ಇಂತಹ ಗಾಢವಾದ ಪೂಜ್ಯಭಾವ ಅಥವಾ ದೇವಭಯವು, ಒಬ್ಬನು ತನ್ನ ಸ್ವಂತ ಬಲದಿಂದ ಸಾಧಿಸಲು ಅಸಾಧ್ಯವಾಗಿರುವಂಥದ್ದನ್ನು ಸಾಧಿಸುವಂತೆ ಪ್ರಚೋದಿಸಬಲ್ಲದು. ಯೆಹೋವನ ಭಯಚಕಿತಗೊಳಿಸುವ ಚಟುವಟಿಕೆಗಳು ಮತ್ತು ಆತನ ಅಸಾಧಾರಣವಾದ ಪ್ರೀತಿಪೂರ್ವಕ ದಯೆಯ ಕುರಿತು ಚರ್ಚಿಸುವ ಮೂಲಕ, ಇತರರು ದೇವರನ್ನು ಅಸಮಾಧಾನಪಡಿಸುವ ವಿಷಯದಲ್ಲಿ ಹಿತಕರವಾದ ಭಯವನ್ನು ಬೆಳೆಸಿಕೊಳ್ಳುವಂತೆ ನೀವು ಅವರಿಗೆ ಸಹಾಯಮಾಡಬಲ್ಲಿರಿ.—ಕೀರ್ತ. 66:5; ಯೆರೆ. 32:40.

ತಮ್ಮ ನಡತೆಯು ಯೆಹೋವನಿಗೆ ಪ್ರಾಮುಖ್ಯವಾಗಿದೆ ಎಂಬುದು ನಿಮ್ಮ ಕೇಳುಗರಿಗೆ ತಿಳಿದಿದೆಯೆಂಬುದನ್ನು ಖಚಿತಪಡಿಸಿಕೊಳ್ಳಿರಿ. ಆತನಿಗೂ ಭಾವನೆಗಳಿವೆ ಮತ್ತು ಆತನ ನಿರ್ದೇಶನಕ್ಕೆ ನಾವು ತೋರಿಸುವ ಪ್ರತಿಕ್ರಿಯೆಯ ಮೂಲಕ ನಾವು ಆತನಿಗೆ ದುಃಖವನ್ನು ಅಥವಾ ಸಂತೋಷವನ್ನು ಉಂಟುಮಾಡುತ್ತೇವೆ. (ಕೀರ್ತ. 78:40-42) ಜನರ ವೈಯಕ್ತಿಕ ನಡತೆಯು, ಸೈತಾನನು ದೇವರಿಗೆ ಒಡ್ಡಿದ ಪಂಥಾಹ್ವಾನಕ್ಕೆ ಉತ್ತರವನ್ನು ನೀಡುವ ವಿಷಯದಲ್ಲಿ ಏಕೆ ತುಂಬ ಮಹತ್ವಭರಿತವಾದದ್ದಾಗಿದೆ ಎಂಬುದನ್ನು ಅವರಿಗೆ ತೋರಿಸಿರಿ.—ಜ್ಞಾನೋ. 27:11.

ದೇವರು ಕೇಳಿಕೊಳ್ಳುವ ವಿಷಯಗಳನ್ನು ಪೂರೈಸುವುದು ಅವರಿಗೆ ಪ್ರಯೋಜನದಾಯಕವಾಗಿದೆ ಎಂಬುದನ್ನು ನಿಮ್ಮ ಸಭಿಕರು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಿರಿ. (ಯೆಶಾ. 48:17) ಇದನ್ನು ಮಾಡಸಾಧ್ಯವಿರುವ ಒಂದು ವಿಧವು, ದೇವರ ವಿವೇಕವನ್ನು ಕ್ಷಣಿಕವಾಗಿಯಾದರೂ ಧಿಕ್ಕರಿಸುವುದರಿಂದ ಬರುವ ಶಾರೀರಿಕ ಮತ್ತು ಭಾವನಾತ್ಮಕ ದುಷ್ಪರಿಣಾಮಗಳಿಗೆ ಸೂಚಿಸುವುದೇ ಆಗಿದೆ. ಪಾಪವು ನಮ್ಮನ್ನು ಹೇಗೆ ದೇವರಿಂದ ದೂರಗೊಳಿಸುತ್ತದೆ, ಇತರರು ನಮ್ಮಿಂದ ಸತ್ಯವನ್ನು ಕಲಿತುಕೊಳ್ಳುವ ಸಂದರ್ಭದಿಂದ ಅವರನ್ನು ವಂಚಿತರನ್ನಾಗಿ ಮಾಡುತ್ತದೆ ಮತ್ತು ಬೇರೆ ರೀತಿಯಲ್ಲಿ ಅವರ ಹಕ್ಕುಗಳನ್ನು ಕಡೆಗಣಿಸುತ್ತದೆಂಬುದನ್ನು ವಿವರಿಸಿರಿ. (1 ಥೆಸ. 4:6) ದೇವರ ನಿಯಮಗಳನ್ನು ಪಾಲಿಸಿದ್ದರ ಪರಿಣಾಮವಾಗಿ ಸಭಿಕರು ಈಗಾಗಲೇ ಅನುಭವಿಸುತ್ತಿರುವ ಆಶೀರ್ವಾದಗಳನ್ನು ಅಮೂಲ್ಯವಾಗಿ ಪರಿಗಣಿಸುವಂತೆ ಅವರಿಗೆ ಸಹಾಯಮಾಡಿರಿ. ಯೆಹೋವನ ನೀತಿಯ ಮಾರ್ಗಗಳಲ್ಲಿ ನಡೆಯುವುದು ನಮ್ಮನ್ನು ಅನೇಕ ವಿಪತ್ತುಗಳಿಂದ ಕಾಪಾಡುತ್ತದೆಂಬ ನಿಜತ್ವಕ್ಕಾಗಿ ಅವರಿಗಿರುವ ಕೃತಜ್ಞತಾಭಾವವನ್ನು ಬಲಪಡಿಸಿರಿ. ದೇವರ ಮಾರ್ಗಗಳ ವಿವೇಕಪೂರ್ಣತೆಯಲ್ಲಿ ಒಬ್ಬನಿಗೆ ನಂಬಿಕೆ ಇರುವುದಾದರೆ, ಅವುಗಳಿಗೆ ವಿರುದ್ಧವಾಗಿರುವ ಪ್ರತಿಯೊಂದು ಮಾರ್ಗವೂ ಅವನಿಗೆ ಅಸಹ್ಯಕರವಾಗಿರುವುದು. (ಕೀರ್ತ. 119:104) ಆಗ ಅವನು ವಿಧೇಯತೆಯನ್ನು ಒಂದು ಹೊರೆಯಾಗಿ ಕಾಣದೆ, ಒಬ್ಬ ವ್ಯಕ್ತಿಯೋಪಾದಿ ಯೆಹೋವನಿಗೆ ಪ್ರೀತಿಯ ಭಕ್ತಿಯನ್ನು ವ್ಯಕ್ತಪಡಿಸಲಿಕ್ಕಾಗಿರುವ ಒಂದು ಮಾರ್ಗದೋಪಾದಿ ವೀಕ್ಷಿಸುವನು.

ಸ್ವತಃ ಪರೀಕ್ಷಿಸಿಕೊಳ್ಳುವಂತೆ ಇತರರಿಗೆ ಸಹಾಯಮಾಡುವುದು. ಆತ್ಮಿಕವಾಗಿ ಬೆಳೆಯುತ್ತಾ ಮುಂದುವರಿಯಬೇಕಾದರೆ, ಜನರು ತಮ್ಮ ಹೃದಯಗಳಲ್ಲಿ ಏನಿದೆಯೊ ಅದಕ್ಕೆ ಪ್ರತಿಕ್ರಿಯೆ ತೋರಿಸುವವರಾಗಿರುವ ಅಗತ್ಯವಿದೆ. ಇದನ್ನು ಮಾಡಲು ಬೈಬಲು ಅವರಿಗೆ ಹೇಗೆ ಸಹಾಯಮಾಡಬಲ್ಲದೆಂಬುದನ್ನು ಅವರಿಗೆ ವಿವರಿಸಿರಿ.

ಬೈಬಲು, ಆಜ್ಞೆಗಳು, ಸಲಹೆಗಳು, ಐತಿಹಾಸಿಕ ಘಟನೆಗಳು ಮತ್ತು ಪ್ರವಾದನೆಗಳ ಕೇವಲ ಒಂದು ದಾಖಲೆಯಾಗಿಲ್ಲ ಎಂಬುದನ್ನು ನಿಮ್ಮ ಕೇಳುಗರು ಗ್ರಹಿಸುವಂತೆ ಸಹಾಯಮಾಡಿರಿ. ಅದು ದೇವರ ಆಲೋಚನೆಗಳನ್ನೂ ತಿಳಿಯಪಡಿಸುತ್ತದೆ. ಯಾಕೋಬ 1:22-25 ರಲ್ಲಿ, ದೇವರ ವಾಕ್ಯವನ್ನು ಒಂದು ಕನ್ನಡಿಗೆ ಹೋಲಿಸಲಾಗಿದೆ. ಅದು ಏನು ಹೇಳುತ್ತದೋ ಅದಕ್ಕೆ ಮತ್ತು ಯೆಹೋವನು ತನ್ನ ಉದ್ದೇಶವನ್ನು ಪೂರೈಸುವ ರೀತಿಗೆ ನಾವು ತೋರಿಸುವ ಪ್ರತಿಕ್ರಿಯೆಯ ಮೂಲಕ, ಬೈಬಲಿನ ಸಂದೇಶವು ನಮ್ಮ ಹೃದಯದಲ್ಲಿ ಏನಿದೆಯೊ ಅದನ್ನು ಬಯಲುಪಡಿಸುತ್ತದೆ. ಹೀಗೆ, “ಹೃದಯಗಳನ್ನು ಶೋಧಿಸುವವ”ನಾಗಿರುವ ದೇವರು ನಮ್ಮನ್ನು ಹೇಗೆ ನೋಡುತ್ತಾನೆಂಬುದನ್ನು ಅದು ತಿಳಿಯಪಡಿಸುತ್ತದೆ. (ಜ್ಞಾನೋ. 17:3) ನಿಮ್ಮ ಕೇಳುಗರು ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಿರಿ. ಬೈಬಲ್‌ ದಾಖಲೆಯಲ್ಲಿ ದೇವರು ನಮಗಾಗಿ ಏನನ್ನು ಸಂರಕ್ಷಿಸಿಟ್ಟಿದ್ದಾನೆ ಎಂಬುದನ್ನು ಮತ್ತು ಆತನಿಗೆ ಹೆಚ್ಚು ಸಂತೋಷವನ್ನು ತರುವವರಾಗಿರಲಿಕ್ಕಾಗಿ ತಮ್ಮ ಜೀವಿತದಲ್ಲಿ ಅವರು ಯಾವ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗಬಹುದು ಎಂಬುದನ್ನು ಪರ್ಯಾಲೋಚಿಸುವಂತೆ ಅವರನ್ನು ಪ್ರೋತ್ಸಾಹಿಸಿರಿ. ಅಗತ್ಯವಿರುವ ಹೊಂದಾಣಿಕೆಗಳನ್ನು ಮಾಡುವುದರಲ್ಲಿ ದೇವರೊಂದಿಗೆ ಸಹಕರಿಸಲು ಸಾಧ್ಯವಾಗುವಂತೆ, ಅವರು ಬೈಬಲ್‌ ವಾಚನವನ್ನು ‘ಹೃದಯದ ಆಲೋಚನೆಗಳ ಮತ್ತು ಉದ್ದೇಶಗಳ’ ವಿಷಯದಲ್ಲಿ ಯೆಹೋವನ ಅಭಿಪ್ರಾಯವನ್ನು ಪಡೆಯುವ ಸಾಧನವಾಗಿ ಪರಿಗಣಿಸುವಂತೆ ಅವರಿಗೆ ಸಹಾಯಮಾಡಿರಿ.—ಇಬ್ರಿ. 4:12; ರೋಮಾ. 15:4.

ಕೆಲವು ಬೈಬಲ್‌ ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ವಿಷಯಗಳಿಗನುಸಾರ ನಡೆಯಲು ಬಯಸಬಹುದಾದರೂ ಇತರರು ತಮ್ಮ ಬಗ್ಗೆ ಏನು ನೆನಸಬಹುದೊ ಎಂಬ ಚಿಂತೆ ಅವರಿಗಿರುತ್ತದೆ. ಅವರು ಬಲವಾದ ಶರೀರದಾಶೆಗಳ ವಿರುದ್ಧ ಹೋರಾಡುತ್ತಿರಬಹುದು. ಅಥವಾ ಅವರು ಲೋಕದ ರೀತಿನೀತಿಗಳಿಗೆ ಅಂಟಿಕೊಂಡಿದ್ದು, ಅದೇ ಸಮಯದಲ್ಲಿ ಯಾವುದಾದರೊಂದು ವಿಧದಲ್ಲಿ ದೇವರನ್ನು ಸೇವಿಸಲಿಕ್ಕಾಗಿ ತಮ್ಮ ಕೃತ್ಯಗಳಿಗಾಗಿ ಏನಾದರೂ ವಿವರಣೆಯನ್ನು ಕೊಟ್ಟು ವಿಷಯವನ್ನು ತೇಲಿಸಿಬಿಡುತ್ತಿರಬಹುದು. ಅಂತಹ ಅನಿರ್ಧಾರದ ಅಪಾಯಗಳನ್ನು ಅವರಿಗೆ ತೋರಿಸಿರಿ. (1 ಅರ. 18:21) ದೇವರು ತಮ್ಮ ಹೃದಯಗಳನ್ನು ಪರೀಕ್ಷಿಸಿ, ಪರಿಶೋಧಿಸಲಿಕ್ಕಾಗಿ ಆತನಿಗೆ ಪ್ರಾರ್ಥಿಸುವಂತೆ ಅವರನ್ನು ಪ್ರೋತ್ಸಾಹಿಸಿರಿ.—ಕೀರ್ತ. 26:2; 139:23, 24.

ಅವರು ನಡೆಸುತ್ತಿರುವ ಹೋರಾಟವು ಯೆಹೋವನಿಗೆ ತಿಳಿದಿದೆ ಮತ್ತು ಏನು ನಡೆಯುತ್ತಿದೆಯೊ ಅದನ್ನು ಬೈಬಲು ವಿವರಿಸುತ್ತದೆ ಎಂಬುದನ್ನೂ ಅವರಿಗೆ ತೋರಿಸಿರಿ. (ರೋಮಾ. 7:22, 23) ಅಪರಿಪೂರ್ಣ ಹೃದಯದ ಪ್ರವೃತ್ತಿಗಳು ತಮ್ಮ ಮೇಲೆ ಅಧಿಕಾರ ನಡೆಸಲು ಬಿಡದಂತೆ ಜಾಗ್ರತೆ ವಹಿಸಲು ಅವರಿಗೆ ಸಹಾಯಮಾಡಿರಿ.—ಜ್ಞಾನೋ. 3:5, 6; 28:26; ಯೆರೆ. 17:9, 10.

ಯಾವುದೇ ವಿಷಯವನ್ನು ಮಾಡುವಾಗ ಪ್ರತಿಯೊಬ್ಬನು ತನ್ನ ಹೇತುಗಳನ್ನು ವಿಶ್ಲೇಷಿಸುವಂತೆ ಪ್ರೋತ್ಸಾಹಿಸಿರಿ. ಪ್ರತಿಯೊಬ್ಬನು ಸ್ವತಃ ಹೀಗೆ ಕೇಳಿಕೊಳ್ಳುವಂತೆ ಕಲಿಸಿರಿ: ‘ನಾನು ಇದನ್ನು ಮಾಡಲು ಬಯಸುವುದೇಕೆ? ಯೆಹೋವನು ನನಗಾಗಿ ಮಾಡಿರುವಂಥದ್ದೆಲ್ಲವನ್ನು ನಾನು ನಿಜವಾಗಿಯೂ ಗಣ್ಯಮಾಡುತ್ತೇನೆಂದು ಇದು ಆತನಿಗೆ ತೋರಿಸುವುದೊ?’ ಯೆಹೋವನೊಂದಿಗಿನ ಅಂಗೀಕೃತ ಸಂಬಂಧವು ಒಬ್ಬನಿಗಿರಸಾಧ್ಯವಿರುವ ಅತಿ ಅಮೂಲ್ಯವಾದ ಸೊತ್ತಾಗಿದೆಯೆಂಬ ನಿಶ್ಚಿತಾಭಿಪ್ರಾಯವನ್ನು ಬಲಪಡಿಸಲು ಕಾರ್ಯನಡಿಸಿರಿ.

ಯೆಹೋವನನ್ನು “ಪೂರ್ಣಹೃದಯದಿಂದ” ಸೇವಿಸುವುದರ ಮಹತ್ವವನ್ನು ಗ್ರಹಿಸುವಂತೆ ನಿಮ್ಮ ಸಭಿಕರಿಗೆ ಸಹಾಯಮಾಡಿರಿ. (ಲೂಕ 10:27) ಅವರ ಎಲ್ಲ ಅನಿಸಿಕೆಗಳು, ಬಯಕೆಗಳು ಮತ್ತು ಪ್ರಚೋದನೆಗಳು ಯೆಹೋವನ ಮಾರ್ಗಗಳೊಂದಿಗೆ ಹೊಂದಿಕೆಯಲ್ಲಿರಬೇಕೆಂಬುದೇ ಇದರ ಅರ್ಥವಾಗಿದೆ. ಆದಕಾರಣ, ಅವರು ಏನು ಮಾಡುತ್ತಾರೊ ಅಷ್ಟೇಯಲ್ಲ, ಬದಲಾಗಿ ದೇವರ ಆವಶ್ಯಕತೆಗಳ ಬಗ್ಗೆ ಅವರಿಗೆ ಹೇಗೆ ಅನಿಸುತ್ತದೆ ಮತ್ತು ಆತನನ್ನು ಸೇವಿಸುವುದರಲ್ಲಿ ಅವರಿಗೆ ಯಾವ ಹೇತುಗಳಿವೆ ಎಂಬುದನ್ನೂ ವಿಶ್ಲೇಷಿಸುವಂತೆ ನಿಮ್ಮ ಕೇಳುಗರಿಗೆ ಕಲಿಸಿರಿ. (ಕೀರ್ತ. 37:4) ನಿಮ್ಮ ವಿದ್ಯಾರ್ಥಿಗಳು ತಾವು ಅಭಿವೃದ್ಧಿಮಾಡಬೇಕಾಗಿರುವ ಕ್ಷೇತ್ರಗಳನ್ನು ವಿವೇಚಿಸಿ ತಿಳಿದುಕೊಳ್ಳುವಾಗ, “ನಾನು ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು” ಎಂದು ಅವರು ಯೆಹೋವನಿಗೆ ಪ್ರಾರ್ಥಿಸುವಂತೆ ಅವರನ್ನು ಪ್ರೋತ್ಸಾಹಿಸಿರಿ.—ಕೀರ್ತ. 86:11.

ಒಬ್ಬ ವಿದ್ಯಾರ್ಥಿಯು ಯೆಹೋವನೊಂದಿಗೆ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳುವಾಗ, ಅವನು ಕೇವಲ ನಿಮ್ಮ ಪ್ರೋತ್ಸಾಹದಿಂದಲ್ಲ, ಬದಲಿಗೆ ನಂಬಿಕೆಯ ಫಲಿತಾಂಶವಾಗಿ ದೇವರಿಗೆ ವಿಧೇಯನಾಗುವನು. ಆಗ ಸ್ವತಃ ಅವನೇ, “ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬದನ್ನು ಪರಿಶೋಧಿಸಿ” ತಿಳಿದುಕೊಳ್ಳುವನು. (ಎಫೆ. 5:10; ಫಿಲಿ. 2:12) ಇಂತಹ ಹೃತ್ಪೂರ್ವಕವಾದ ವಿಧೇಯತೆಯು ಯೆಹೋವನನ್ನು ಸಂತೋಷಗೊಳಿಸುತ್ತದೆ.—ಜ್ಞಾನೋ. 23:15.

ಜನರ ಹೃದಯಗಳನ್ನು ಪರೀಕ್ಷಿಸಿ, ಅವರು ತನ್ನೊಂದಿಗೆ ಒಂದು ಸಂಬಂಧವನ್ನು ಬೆಳೆಸಿಕೊಳ್ಳುವಂತೆ ಆಕರ್ಷಿಸುವಾತನು ಯೆಹೋವನೇ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ. (ಜ್ಞಾನೋ. 21:2; ಯೋಹಾ. 6:44) ಇದರಲ್ಲಿ ನಮ್ಮ ಪಾತ್ರವು ಸಹಕಾರವನ್ನು ನೀಡುವುದಾಗಿದೆ. (1 ಕೊರಿಂ. 3:9) ಇದು “ದೇವರೇ ನಮ್ಮ ಮೂಲಕ ಬುದ್ಧಿ ಹೇಳು”ವಂತಿದೆ. (ಓರೆ ಅಕ್ಷರಗಳು ನಮ್ಮವು.) (2 ಕೊರಿಂ. 5:20; ಅ. ಕೃ. 16:14) ಸತ್ಯವನ್ನು ಸ್ವೀಕರಿಸುವಂತೆ ಯೆಹೋವನು ಯಾರನ್ನೂ ಬಲಾತ್ಕರಿಸುವುದಿಲ್ಲ. ಆದರೆ ನಾವು ಶಾಸ್ತ್ರವಚನಗಳನ್ನು ಉಪಯೋಗಿಸುವಾಗ, ತಾವು ಏನನ್ನು ಕೇಳಿಸಿಕೊಳ್ಳುತ್ತಿದ್ದೇವೋ ಅದು ತಮ್ಮ ಪ್ರಶ್ನೆಗಳಿಗೆ ಅಥವಾ ತಮ್ಮ ಪ್ರಾರ್ಥನೆಗಳಿಗೆ ಉತ್ತರವಾಗಿದೆ ಎಂಬುದನ್ನು ನಮ್ಮ ಕೇಳುಗರು ಗ್ರಹಿಸುವಂತೆ ದೇವರು ಮಾಡಬಹುದು. ಆದುದರಿಂದ, ಇತರರಿಗೆ ಬೋಧಿಸುವ ಸದವಕಾಶವು ನಿಮಗಿರುವಾಗೆಲ್ಲಾ ಈ ವಾಸ್ತವಾಂಶವನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ, ಮತ್ತು ಯೆಹೋವನ ಮಾರ್ಗದರ್ಶನ ಹಾಗೂ ಸಹಾಯಕ್ಕಾಗಿ ಶ್ರದ್ಧಾಪೂರ್ವಕವಾಗಿ ಆತನಿಗೆ ಪ್ರಾರ್ಥಿಸಿರಿ.—1 ಪೂರ್ವ. 29:18, 19; ಎಫೆ. 1:16-18.

ಅಭಿವೃದ್ಧಿಮಾಡುವ ವಿಧ

  • ನಿಜವಾದ ಪ್ರೀತಿಯನ್ನು ತೋರಿಸಿರಿ.

  • ನಿಮ್ಮ ಕೇಳುಗನ ಹೃದಯವನ್ನು ಯಾವುದು ಪ್ರಭಾವಿಸಿದೆ ಎಂಬುದನ್ನು ವಿವೇಚಿಸಿ ತಿಳಿದುಕೊಳ್ಳಿರಿ.

  • ಯೆಹೋವನ ಅದ್ಭುತಕರ ಗುಣಗಳನ್ನು ಒತ್ತಿಹೇಳಿರಿ.

  • ತಮ್ಮ ಹೇತುಗಳನ್ನು ಹೇಗೆ ವಿಶ್ಲೇಷಿಸುವುದು ಮತ್ತು ಶೋಧಿಸುವುದು ಎಂಬುದನ್ನು ಕೇಳುಗರು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಿರಿ.

ಅಭ್ಯಾಸಪಾಠಗಳು: (1) ಮತ್ತಾಯ 6:22 ನ್ನು ಓದಿ, ಈ ವಚನವು ನಿಮ್ಮ ಜೀವನಕ್ಕೆ ಹೇಗೆ ಅನ್ವಯಿಸುತ್ತದೆಂಬುದನ್ನು ವಿಶ್ಲೇಷಿಸಿರಿ. ಅಲ್ಲದೆ 19 ಮತ್ತು 20ನೆಯ ವಚನಗಳನ್ನೂ ಓದಿರಿ, ಮತ್ತು ನಿಮ್ಮ ಹೃದಯವು ಯಾವ ಹೊಂದಾಣಿಕೆಗಳನ್ನು ಮಾಡುವಂತೆ ನಿಮ್ಮನ್ನು ಪ್ರಚೋದಿಸುತ್ತದೆಂಬುದನ್ನು ಗಮನಿಸಿರಿ. (2) ಯೆಹೋವನನ್ನು ಸೇವಿಸಲು ಆರಂಭಿಸುವಂತೆ ಯಾವುದು ನಿಮ್ಮನ್ನು ಪ್ರೇರಿಸಿತೆಂಬುದನ್ನು ವಿಶ್ಲೇಷಿಸಿರಿ. ಈಗ ನಿಮ್ಮನ್ನು ಯಾವುದು ಪ್ರಚೋದಿಸುತ್ತದೆ? ಯೆಹೋವನನ್ನು ಸಂತೋಷಪಡಿಸುವಂಥ ಯಾವ ಪ್ರಚೋದನೆಗಳನ್ನು ನೀವು ಬಲಗೊಳಿಸಲು ಬಯಸುತ್ತೀರಿ?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ