ಎಲ್ಲರಿಗೂ ಒಳ್ಳೆಯ ಆರೋಗ್ಯ—ಎಟುಕಿಸಿಕೊಳ್ಳಬಹುದಾದ ಗುರಿಯೋ?
ನೀವೂ ನಿಮ್ಮ ಕುಟುಂಬವೂ ಉತ್ತಮವಾದ ಆರೋಗ್ಯವನ್ನು ಅನುಭವಿಸಬೇಕೆಂದು ಬಯಸುತ್ತೀರೋ? ಖಂಡಿತವಾಗಿಯೂ ಬಯಸುವಿರಿ. ನಮ್ಮಲ್ಲಿ ಅನೇಕರು ಆಗಿಂದಾಗ್ಗೆ ಕೇವಲ ಚಿಕ್ಕಪುಟ್ಟ ಅನಾರೋಗ್ಯಗಳಿಂದ ನರಳುವಾಗ, ಲಕ್ಷಾಂತರ ಜನರಿಗಾದರೋ ಅಸ್ವಸ್ಥತೆಯು ವೇದನಾಭರಿತವಾದ ಜೀವನಪರ್ಯಂತ ಇರುವ ಸಂಗಾತಿಯಾಗಿದೆ.
ಹಾಗಿದ್ದರೂ, ಅಸ್ವಸ್ಥತೆ ಮತ್ತು ರೋಗದ ವ್ಯಾಪ್ತಿಯನ್ನು ಕಡಿಮೆಗೊಳಿಸಲು ದೊಡ್ಡ ಪ್ರಮಾಣದ ಪ್ರಯತ್ನಗಳು ಮಾಡಲ್ಪಡುತ್ತಿವೆ. ವಿಶ್ವ ಸಂಸ್ಥೆಯ ಭಾಗವಾಗಿರುವ ಲೋಕಾರೋಗ್ಯ ಸಂಸ್ಥೆ (ಡಬ್ಲ್ಯೂ.ಏಚ್.ಓ.)ಯನ್ನು ಪರಿಗಣಿಸಿರಿ. 1978ರಲ್ಲಿ ಈ ಸಂಸ್ಥೆಯಿಂದ ಆಯೋಜಿಸಲ್ಪಟ್ಟ ಒಂದು ಸಮ್ಮೇಳನದಲ್ಲಿ, 134 ದೇಶಗಳು ಮತ್ತು ವಿಶ್ವ ಸಂಸ್ಥೆಯ 67 ಸಂಘಗಳ ಪ್ರತಿನಿಧಿಗಳು, ಆರೋಗ್ಯವೆಂಬುದು ಕೇವಲ ಅಸ್ವಸ್ಥತೆ ಅಥವಾ ರೋಗವಿಲ್ಲದಿರುವ ಸ್ಥಿತಿಯಲ್ಲ ಎಂಬುದನ್ನು ಒಪ್ಪಿಕೊಂಡರು. ಅವರು ಪ್ರಕಟಿಸಿದ್ದು, ಆರೋಗ್ಯವು “ಶಾರೀರಿಕವಾಗಿಯೂ, ಮಾನಸಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಸಂಪೂರ್ಣವಾಗಿ ಕ್ಷೇಮದಿಂದಿರುವ ಸ್ಥಿತಿಯಾಗಿದೆ.” ತದನಂತರ, ಅದರ ಪ್ರತಿನಿಧಿಗಳು ಒಂದು ದಿಟ್ಟವಾದ ಹೆಜ್ಜೆಯನ್ನು ತೆಗೆದುಕೊಂಡು ಆರೋಗ್ಯವು “ಮಾನವನ ಮೂಲಭೂತ ಹಕ್ಕಾಗಿದೆ” ಎಂದು ಪ್ರಕಟಿಸಿದರು. ಹೀಗೆ “ಲೋಕದಲ್ಲಿರುವ ಎಲ್ಲಾ ಜನರಿಗೆ ಅಂಗೀಕಾರಾರ್ಹ ಮಟ್ಟದ ಆರೋಗ್ಯವನ್ನು” ಸಾಧಿಸುವ ಗುರಿಯನ್ನು ಡಬ್ಲ್ಯೂ.ಏಚ್.ಓ. ಇಟ್ಟಿತು.
ಇಂತಹ ಒಂದು ಗುರಿಯು ಆಕರ್ಷಕವೂ, ಉದಾತ್ತವಾದದ್ದೂ ಆಗಿದೆ. ಆದರೆ ಇದನ್ನು ಸಾಧಿಸುವುದು ಎಷ್ಟು ಸಂಭವನೀಯ? ಮಾನವ ಸಾಧನೆಗಳ ಎಲ್ಲಾ ಕ್ಷೇತ್ರಗಳಲ್ಲಿ, ಹೆಚ್ಚು ನಂಬಲ್ಪಟ್ಟ ಮತ್ತು ಮೆಚ್ಚಲ್ಪಟ್ಟ ಒಂದು ಕ್ಷೇತ್ರವು ಔಷಧಶಾಸ್ತ್ರವಾಗಿದೆ. ದಿ ಯೂರೋಪಿಯನ್ ಎಂಬ ಬ್ರಿಟಿಷ್ ವಾರ್ತಾಪತ್ರಕ್ಕನುಸಾರ, ಪಾಶ್ಚಾತ್ಯ ದೇಶಗಳ ಜನರು “‘ಅದ್ಭುತ ಗುಂಡು’ ಗುಣಪಡಿಸುವಿಕೆಯ ಸಾಂಪ್ರದಾಯಿಕ ವೈದ್ಯಕೀಯ ವಿಚಾರ: ಒಂದು ಸಮಸ್ಯೆಗೆ ಒಂದು ಮಾತ್ರೆ,” ಎಂಬ ರೂಢಿಗೆ ಒಗ್ಗಿಹೋಗಿದ್ದಾರೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಔಷಧಶಾಸ್ತ್ರದ ಕ್ಷೇತ್ರವು ಪ್ರತಿಯೊಂದು ಕಾಯಿಲೆಯನ್ನು ಸರಳವಾದ ರೀತಿಯಲ್ಲಿ ಮತ್ತು ಯಾವುದೇ ತೊಡಕಿಲ್ಲದೆ ಗುಣಪಡಿಸುವ ಔಷಧವನ್ನು ಕೊಡಬೇಕೆಂದು ನಾವು ನಿರೀಕ್ಷಿಸುತ್ತೇವೆ. ಇಂತಹ ಉಚ್ಚ ನಿರೀಕ್ಷೆಯನ್ನು ವೈದ್ಯಕೀಯ ವೃತ್ತಿಯು ನಿಜವಾಗಿಯೂ ಪೂರೈಸಬಲ್ಲದೋ?
(g01 6/8)