ಅಮರಸಸ್ಯ—ಆ್ಯಸ್ಟೆಕ್ ಜನಾಂಗದವರ ಆಹಾರ
ಮೆಕ್ಸಿಕೊದ ಎಚ್ಚರ! ಸುದ್ದಿಗಾರರಿಂದ
ಆಲೆಗ್ರೀಯಾ ಎಂಬ ಹೆಸರಿನ ಒಂದು ಪೌಷ್ಟಿಕ ಮಿಠಾಯಿಯು, ಸಾಮಾನ್ಯವಾಗಿ ಮೆಕ್ಸಿಕೊವಿನ ಆಹಾರದ ಮಾರುಕಟ್ಟೆಗಳಲ್ಲಿನ ವರ್ಣರಂಜಿತ ಚಪ್ಪರಗಳಲ್ಲಿ ಕಂಡುಬರುತ್ತದೆ. ಅದರ ಸ್ಪ್ಯಾನಿಷ್ ಹೆಸರನ್ನು “ಆನಂದ” ಅಥವಾ “ಸಂತೋಷ” ಎಂದು ಭಾಷಾಂತರಿಸಲಾಗುತ್ತದೆ. ಅದನ್ನು, ಉಜ್ವಲವಾದ ಕೆಂಪು ಹೂವುಗಳುಳ್ಳ ಉಷ್ಣವಲಯದ ಒಂದು ಗಿಡವಾಗಿರುವ, ಅಮರಸಸ್ಯದ (ಆಮರಾಂತ್ ಗಿಡದ) ಬೀಜಗಳಿಂದ ತಯಾರಿಸಲಾಗುತ್ತದೆ. ಆ ಮಿಠಾಯಿಯು, ಸಂಸ್ಕರಿಸಲ್ಪಟ್ಟಿರದ ಜೇನಿನಿಂದ ಮಾಡಲ್ಪಟ್ಟಿದೆ ಮತ್ತು ಕೆಲವೊಮ್ಮೆ ಅದನ್ನು, ಅಕ್ರೋಡುಗಳು, ಪೈನ್ ಬೀಜಗಳು, ಮತ್ತು ಒಣಗಿದ ದ್ರಾಕ್ಷಿಗಳೊಂದಿಗೆ ಅಲಂಕರಿಸಲಾಗುತ್ತದೆ. ಅಮರಸಸ್ಯದ ಬೀಜಗಳನ್ನು ಸಿರೀಅಲ್ ಆಗಿ ಅಥವಾ ಹಿಟ್ಟಾಗಿಯೂ ಅರೆಯಸಾಧ್ಯವಿದೆ. ಇದನ್ನು ಬ್ರೆಡ್ ಮತ್ತು ಕೇಕ್ಗಳನ್ನು ತಯಾರಿಸಲು ಉಪಯೋಗಿಸಲಾಗುತ್ತದೆ.
ಆ್ಯಸ್ಟೆಕ್ ಜನಾಂಗದವರು, ಅಮರಸಸ್ಯದ ಹಿಟ್ಟಿನಿಂದ ಟಾಟಿಲ್ಯಾಗಳನ್ನು (ಚಪ್ಪಟ್ಟೆ ರೊಟ್ಟಿಗಳು) ಮತ್ತು ಟಮಾಲೆಗಳನ್ನು ಮಾಡಿದರು. ಇನ್ನೂ ಹೆಚ್ಚಾಗಿ, ಅವರ ಧಾರ್ಮಿಕ ಸಂಸ್ಕಾರಗಳಲ್ಲಿ, ಅಮರಸಸ್ಯವು ಒಂದು ಪ್ರಮುಖ ಪಾತ್ರವನ್ನು ವಹಿಸಿತು. ಮೆಕ್ಸಿಕೊ ನಗರದ ದ ನ್ಯೂಸ್ ಹೇಳಿದ್ದು: “ಅವರ ಅನೇಕ ಸಂಸ್ಕಾರಗಳಲ್ಲಿನ ಒಂದು ಸಂಸ್ಕಾರದಲ್ಲಿ, ಆ್ಯಸ್ಟೆಕ್ ಜನಾಂಗದವರು, ಸೆರೆಹಿಡಿಯಲ್ಪಟ್ಟು [ಹತಿಸಲ್ಪಟ್ಟ] ತಮ್ಮ ಶತ್ರುಗಳಲ್ಲೊಬ್ಬನ ರಕ್ತದಲ್ಲಿ, ಅಮರಸಸ್ಯದಿಂದ ಮಾಡಿದ ರೊಟ್ಟಿಯ ತುಂಡೊಂದನ್ನು ಅದ್ದಿ ತಿನ್ನುತ್ತಿದ್ದರು.” ಇನ್ನೊಂದು ಪದ್ಧತಿಯು, ಅರೆಯಲ್ಪಟ್ಟ ಅಮರಸಸ್ಯ ಬೀಜವನ್ನು ಜೋಳ ಮತ್ತು ಜೇನಿನೊಂದಿಗೆ ಮಿಶ್ರಮಾಡಿ, ಆ ಮಿಶ್ರಣವನ್ನು ಚಿಕ್ಕ ಮೂರ್ತಿಗಳು ಅಥವಾ ದೇವತೆಗಳಾಗಿ ರೂಪಿಸುವುದನ್ನು ಒಳಗೊಂಡಿತು. ಈ ಮೂರ್ತಿಗಳನ್ನು ಅನಂತರ, ಕ್ಯಾಥೊಲಿಕರ ಪ್ರಭುಭೋಜನ ಸಂಸ್ಕಾರಕ್ಕೆ ಹೋಲುವಂತಹ ಸಂಸ್ಕಾರದಲ್ಲಿ ತಿನ್ನಲಾಗುತ್ತಿತ್ತು.
ಈ ಎರಡೂ ಆಚರಣೆಗಳು, ಸ್ಪ್ಯಾನಿಷ್ ವಿಜಯಿ ಅರ್ನಾನ್ ಕಾರ್ಟಿಸ್ನನ್ನು ಕೆರಳಿಸಿದವು, ಮತ್ತು ಅವನು ಅಮರಸಸ್ಯದ ಸಾಗುವಳಿ ಮತ್ತು ಸೇವನೆಯನ್ನು ಬಹಿಷ್ಕೃತಗೊಳಿಸುವಂತೆ ಮಾಡಿತು. ಅವನ ಆಜ್ಞೆಗೆ ಅವಿಧೇಯನಾಗಲು ಧೈರ್ಯ ಮಾಡಿದ ಯಾವನೇ ವ್ಯಕ್ತಿಯು ಕೊಲ್ಲಲ್ಪಟ್ಟನು ಇಲ್ಲವೆ ತಪ್ಪುಮಾಡಿದ ಕೈಯನ್ನು ಕತ್ತರಿಸಿಹಾಕಲಾಗುತ್ತಿತ್ತು. ಹೀಗೆ, ಆ ಸಮಯದಲ್ಲಿ ಮೆಕ್ಸಿಕೊದಲ್ಲಿ ಅತಿ ಪ್ರಾಮುಖ್ಯ ಬೆಳೆಗಳಲ್ಲಿ ಒಂದಾಗಿದ್ದ ಈ ಬೆಳೆಯು ಬಹುಮಟ್ಟಿಗೆ ಕಾಣೆಯಾಯಿತು.
ಹಾಗಿದ್ದರೂ, ಅಮರಸಸ್ಯವು ಪಾರಾಗಿ ಉಳಿಯಿತು ಮತ್ತು ಹೇಗೊ ಮಧ್ಯ ಅಮೆರಿಕದಿಂದ, ಹಿಮಾಲಯಕ್ಕೆ ಹರಡಿತು. ಕಳೆದ ಶತಮಾನದಲ್ಲಿ ಅದು, ಚೀನ, ಭಾರತ, ನೇಪಾಲ, ಪಾಕಿಸ್ತಾನ್ ಮತ್ತು ಟಿಬೆಟ್ನಲ್ಲಿರುವ ಪರ್ವತ ಬುಡಕಟ್ಟುಗಳಿಗೆ ಒಂದು ಪ್ರಧಾನ ಆಹಾರವಾಗಿ ಪರಿಣಮಿಸಿದೆ.
ಮೆಕ್ಸಿಕೊ ದೇಶದಲ್ಲಿ, ದನದ ಹಾಲಿನ ಪೌಷ್ಟಿಕ ಮೌಲ್ಯಕ್ಕೆ ಸಮಾನವಾಗಿರುವ ಒಂದು ಪಾನೀಯವಾದ ಅಮರಸಸ್ಯ ಹಾಲನ್ನು ಉತ್ಪಾದಿಸಲಿಕ್ಕಾಗಿ, ಸಂಶೋಧಕರು ಇತ್ತೀಚೆಗೆ ಆ ಬೀಜದ ಪ್ರೋಟೀನನ್ನು ಬೇರ್ಪಡಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಗುರಿಯು, ಮೊಟ್ಟೆಗಳು, ಹಾಲು, ಮೀನು ಅಥವಾ ಕೆಂಪು ಮಾಂಸವನ್ನು ಖರೀದಿಸಲು ಆಗದೆ ಇರುವವರ ಆಹಾರ ಮತ್ತು ಪಾನೀಯಗಳನ್ನು ಪುಷ್ಟೀಕರಿಸಲಿಕ್ಕಾಗಿ ಅದನ್ನು ಬಳಸುವುದೇ ಆಗಿದೆ.
ಅಮರಸಸ್ಯದ ಗೊಂದಲಮಯ ಇತಿಹಾಸದ ಎದುರಿನಲ್ಲೂ, ಇಂದು ಅನೇಕ ಜನರು ಈಗಲೂ ಈ ವಿವಿಧೋಪಯೋಗಿ, ಪೌಷ್ಟಿಕ ಆಹಾರದಲ್ಲಿ ಆನಂದಿಸುತ್ತಾರೆ.