ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g96 3/8 ಪು. 14-15
  • ನನ್ನ ಪ್ರೀತಿಯ ಸ್ನೇಹಿತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನನ್ನ ಪ್ರೀತಿಯ ಸ್ನೇಹಿತೆ
  • ಎಚ್ಚರ!—1996
  • ಅನುರೂಪ ಮಾಹಿತಿ
  • ನಿಮ್ಮ ಪ್ರೀತಿನ ಅವ್ರಿಗೆ ತಿಳಿಸಿ
    ಅನುಭವಗಳು
  • “ನಾನು ನಂಬಿಕೆಯನ್ನು ಪಾಲಿಸಿದ್ದೇನೆ”
    ಕಾವಲಿನಬುರುಜು—1994
ಎಚ್ಚರ!—1996
g96 3/8 ಪು. 14-15

ನನ್ನ ಪ್ರೀತಿಯ ಸ್ನೇಹಿತೆ

ನಿಮ್ಮ ಸ್ನೇಹಿತರು ಯಾರು? ಅವರು ನಿಮ್ಮ ಸ್ವಂತ ವಯೋವರ್ಗದವರು ಮಾತ್ರವೊ? ತನ್ನ ಸ್ನೇಹಿತರಲ್ಲಿ ಒಬ್ಬಾಕೆಯ ಕುರಿತು ಒಬ್ಬ ಯುವತಿಯ ವೃತ್ತಾಂತವನ್ನು ಓದಿರಿ. ಆಕೆ ಯುವತಿಗಿಂತ ಸುಮಾರು ಏಳು ದಶಕಗಳಷ್ಟು ಹಿರಿಯಳು.

ಸುಮಾರು ಒಂಬತ್ತು ವರ್ಷಗಳ ಹಿಂದೆ, ನಾನು ಕೇವಲ ಆರು ವರ್ಷದವಳಾಗಿದ್ದಾಗ, ನಮ್ಮ ಕುಟುಂಬವು ಸ್ಕಾಟ್‌ಲೆಂಡ್‌ನ ಅಬರ್‌ಡೀನ್‌ಗೆ ಸ್ಥಳಾಂತರಿಸಿತು. ಇದು ನನಗೆ ಭಯಪಡಿಸುವಂತಹ ಒಂದು ಸಮಯವಾಗಿತ್ತು ಏಕೆಂದರೆ ನಾನು ಹೊಸದೊಂದು ಶಾಲೆಯಲ್ಲಿ ತೊಡಗಬೇಕಿತ್ತು ಮತ್ತು ಹೊಸ ಸ್ನೇಹಿತರನ್ನು ಮಾಡಿಕೊಳ್ಳಬೇಕಿತ್ತು. ಆದರೆ ಯಾವುದೊ ಒಂದು ಸಂಗತಿಯು ನನ್ನನ್ನು ನನ್ನ ಹೊಸ ಸನ್ನಿವೇಶದೊಳಗೆ ಕೋಮಲವಾಗಿ ಹೋಗಗೊಡಿಸಿತು. ಹಿಂದೊಮ್ಮೆ ನನ್ನ ಹೆತ್ತವರು ಭೇಟಿಯಾಗಿದ್ದ ಒಬ್ಬ ವಯಸ್ಸಾದ ಸ್ತ್ರೀಯು, ನಮ್ಮ ಮನೆಯ ಹತ್ತಿರ ಜೀವಿಸುತ್ತಿದ್ದರು. ನಾನು ಸಕಾಲದಲ್ಲಿ ಅವರಿಗೆ ಪರಿಚಯಿಸಲ್ಪಟ್ಟೆ ಮತ್ತು ಬೇಗನೆ ಅವರು ಎಷ್ಟು ಸ್ವಾರಸ್ಯಕರವಾಗಿದ್ದರೆಂಬುದನ್ನು ಕಂಡು, ಆಶ್ಚರ್ಯಗೊಂಡೆ. ಅವರು ಅಂತರಂಗದಲ್ಲಿ ಎಳೆಯವರಾಗಿದ್ದರು ಮತ್ತು ರಮ್ಯವಾದ ಸೊಬಗಿನಿಂದ ವಸ್ತ್ರಾಲಂಕಾರ ಮಾಡಿಕೊಳ್ಳುತ್ತಿದ್ದರು.

ನಾವು ತಂಗಿದ್ದ ಮನೆಯು ಬಾಡಿಗೆಯ ಮನೆಯಾಗಿತ್ತು, ಆದುದರಿಂದ ನಾವು ಆಂಟಿ ಲೂಯಿಯ ಮನೆಯಿಂದ ಸುಮಾರು ಒಂದು ಮೈಲು ದೂರವಿದ್ದ ಸ್ಥಾಯಿ ಮನೆಗೆ ಸ್ಥಳಾಂತರಿಸಿದೆವು. ನಾನು “ಆಂಟಿ” ಎಂಬ ಅಭಿವ್ಯಕ್ತಿಯನ್ನು ಗೌರವದಿಂದ ಮತ್ತು ಪ್ರೀತಿಯ ಒಂದು ಪದವಾಗಿ ಉಪಯೋಗಿಸುತ್ತೇನೆ. ನಾವು ಸ್ಥಳಾಂತರಿಸಲೇಬೇಕಾಗಿದ್ದಾಗ ನಾನು ದುಃಖಿತಳಾದೆ ಏಕೆಂದರೆ ನನ್ನ ಅಣ್ಣ ಮತ್ತು ನಾನು ಅವರನ್ನು ಕ್ರಮವಾಗಿ ಸಂದರ್ಶಿಸಲು ತೊಡಗಿದ್ದೆವು.

ಹಾಗಿದ್ದರೂ, ನಾನು ಹಾಜರಾಗುತ್ತಿದ್ದ ಶಾಲೆಯು, ಆಂಟಿ ಲೂಯಿಯ ಮನೆಯ ಹತ್ತಿರವಿತ್ತು. ಆದುದರಿಂದ ಪ್ರತಿ ಶುಕ್ರವಾರ, ತರಗತಿಗಳು ಮುಗಿದ ನಂತರ, ಶಾಲೆಯಲ್ಲಿ ನನ್ನ ಸಂಜೆಯ ಸ್ಕಾಟಿಷ್‌ ಕಂಟ್ರಿ ಡಾನ್ಸಿಂಗ್‌ ಅಭ್ಯಾಸಕ್ಕೆ ಹೋಗುವ ಮುಂಚೆ, ನಾನು ಚಹ ಕುಡಿಯಲು ಆಂಟಿಯ ಮನೆಗೆ ಹೋದೆ. ಇದು ನನ್ನ ದಿನಚರಿಯಾಯಿತು. ನನ್ನೊಂದಿಗೆ, ನಾನು ನನ್ನ ಕಥೆ ಪುಸ್ತಕಗಳಲ್ಲಿ ಒಂದನ್ನು ತರುತ್ತಿದ್ದೆ ಮತ್ತು ನಾನು ಸೌತೆಕಾಯಿಯ ಸ್ಯಾಂಡ್‌ವಿಚ್‌ಗಳನ್ನು ತಿಂದು, ಒಂದು ಗ್ಲಾಸ್‌ ತಣ್ಣನೆಯ ಹಾಲನ್ನು ಕುಡಿಯುತ್ತಿರುವಾಗ, ಅವರು ನನಗೆ ಓದಿ ಹೇಳುತ್ತಿದ್ದರು.

ಸಂಜೆ 3:30ರ ಗಂಟೆ—ಆಂಟಿ ಲೂಯಿಯ ಮನೆಗೆ ಅತ್ಯವಸರದಿಂದ ಹೋಗಲಿಕ್ಕಾಗಿದ್ದ ಒಂದು ಸೂಚನೆ—ಗಾಗಿ ನಾನು ಆತುರದ ನಿರೀಕ್ಷೆಯಿಂದ ಕಾದಂತೆ ಶುಕ್ರವಾರಗಳು ನಿಧಾನವಾಗಿ ಹೋಗುವಂತೆ ತೋರಿದವೆಂಬುದನ್ನು ನಾನು ಜ್ಞಾಪಿಸಿಕೊಳ್ಳುತ್ತೇನೆ. ವಯಸ್ಸಾದ ಜನರು ಎಷ್ಟು ಸ್ವಾರಸ್ಯವುಳ್ಳವರೂ ಆನಂದಪಡಿಸುವವರೂ ಆಗಿರಬಲ್ಲರೆಂಬುದನ್ನು ನಾನು ಪ್ರಥಮವಾಗಿ ಕಲಿತದ್ದು ಆ ಸಮಯದಲ್ಲೇ. ವಾಸ್ತವದಲ್ಲಿ ನಾನು ಅವರನ್ನು ವಯಸ್ಸಾದವರೆಂದು ವೀಕ್ಷಿಸಲೇ ಇಲ್ಲ. ನನ್ನ ಮನಸ್ಸಿನಲ್ಲಿ ಅವರು ಬಹಳ ಎಳೆಯವರಾಗಿದ್ದರು. ಅವರು ವಾಹನವನ್ನು ಚಲಾಯಿಸಬಲ್ಲವರಾಗಿದ್ದರು ಮತ್ತು ಸುವಾಸನೆಯಿಂದ ತುಂಬಿದ್ದ ಒಂದು ಮನೆ ಮತ್ತು ತೋಟವೊಂದನ್ನು ನಡೆಸಿಕೊಂಡು ಬಂದಿದ್ದರು—ಒಂದು ಮಗುವಿಗೆ ಇನ್ನಾವ ಹೆಚ್ಚಿನ ವಿಷಯವು ಬೇಕಾಗಿದ್ದೀತು?

ಮೂರು ವರ್ಷಗಳು ಗತಿಸಿಹೋದವು, ಮತ್ತು ನಾನು ಪ್ರಾಥಮಿಕ ಶಾಲೆಯ ಕೊನೆಯ ವರ್ಷದಲ್ಲಿದ್ದೆ. ತೋಟವು ಅವರಿಗೆ ಅತ್ಯಧಿಕ ಕೆಲಸವನ್ನು ಕೊಡುತ್ತಿತ್ತೆಂದು ಮತ್ತು ಒಂದು ಫ್ಲ್ಯಾಟ್‌ ಹೆಚ್ಚು ವಾಸ್ತವವಾದ ಆಯ್ಕೆಯಾಗಿತ್ತೆಂದು ಆಂಟಿ ಲೂಯಿ ನಿರ್ಧರಿಸಿದ್ದು ಆ ಸಮಯದಲ್ಲೇ. ಆ ಸಮಯದಲ್ಲಿ ನನಗೆ ವಯಸ್ಸಾಗುವಿಕೆಯ ಪರಿಕಲ್ಪನೆಯನ್ನು ಗ್ರಹಿಸಸಾಧ್ಯವಾಗಲಿಲ್ಲ. ಅವರ ಫ್ಲ್ಯಾಟ್‌, ಪಟ್ಟಣದ ಬೇರೊಂದು ಭಾಗದಲ್ಲಿತ್ತೆಂಬ ವಿಷಯದಿಂದ ನಾನು ಕ್ಷೋಭೆಗೊಂಡೆ. ಶುಕ್ರವಾರಗಳು ಈ ಮುಂಚೆ ಆಕರ್ಷಕವಾಗಿದ್ದಷ್ಟು ಈಗ ಆಕರ್ಷಕವಾಗಿರಲಿಲ್ಲ.

1990ರಲ್ಲಿ, ಪ್ರೌಢ ಶಾಲೆಗೆ ನನ್ನ ಪ್ರವೇಶವು ಆಸನ್ನವಾಗಿತ್ತು. ಅಂತಹ ಒಂದು ದೊಡ್ಡ ಶಾಲೆಯಲ್ಲಿ ನಾನೇನು ಮಾಡುವೆನು? ನಾನು ಹೇಗೆ ನಿಭಾಯಿಸುವೆನು? ನಮ್ಮ ಕುಟುಂಬವು ಭಿನ್ನವಾದೊಂದು ಕ್ಷೇತ್ರದಲ್ಲಿ ಜೀವಿಸಿದ ಕಾರಣ, ನನ್ನ ಸ್ನೇಹಿತೆಯರಿಗಿಂತ ಭಿನ್ನವಾದೊಂದು ಶಾಲೆಗೆ ನಾನು ಹೋಗಬೇಕಿತ್ತು. ಆದರೆ ಪುನಃ ಆಂಟಿ ಲೂಯಿ ಅಲ್ಲಿದ್ದರು ಏಕೆಂದರೆ ಅವರು ಸ್ಥಳಾಂತರಿಸಿದ್ದ ಫ್ಲ್ಯಾಟ್‌ ನನ್ನ ಪ್ರೌಢ ಶಾಲೆಯ ಪಕ್ಕದಲ್ಲೇ ಇತ್ತು! ನನ್ನ ಸ್ಯಾಂಡ್‌ವಿಚ್‌ಗಳನ್ನು ತಿನ್ನಲು, ಊಟದ ಸಮಯದಲ್ಲಿ ಅವರ ಫ್ಲ್ಯಾಟ್‌ಗೆ ನಾನು ಬರಸಾಧ್ಯವಿತ್ತೊ ಎಂದು ನಾನು ಅವರನ್ನು ಕೇಳಿದೆ. ಹೀಗೆ ಮತ್ತೊಂದು ಅಮೂಲ್ಯವಾದ ದಿನಚರಿಯು ಸ್ಥಾಪನೆಗೊಂಡಿತು.

ನಮ್ಮ ಸಂಬಂಧವು ಮಗು-ವಯಸ್ಕ ಸಂಬಂಧದಿಂದ, ಒಬ್ಬರು ಮತ್ತೊಬ್ಬರ ಸಹವಾಸದ ಪರಸ್ಪರ ಆನಂದಕ್ಕೆ ಬದಲಾದದ್ದು ಈ ಸಮಯದಲ್ಲೇ ಎಂದು ನಾನು ನಂಬುತ್ತೇನೆ. ಇದು ಅನೇಕ ವಿಧಗಳಲ್ಲಿ ವ್ಯಕ್ತವಾಗಿತ್ತು, ಆದರೆ ವಿಶೇಷವಾಗಿ ಒಂದು ವಿಧವು, ನಾವು ನನ್ನ ಕಥೆ ಪುಸ್ತಕಗಳ ಬದಲು ಜೇನ್‌ ಆ್ಯಅರ್‌, ವಿಲೆಟ್‌, ಪ್ರೈಡ್‌ ಆ್ಯಂಡ್‌ ಪ್ರೆಜುಡಿಸ್‌, ಮತ್ತು ವಿಮೆನ್‌ ಇನ್‌ ವೈಟ್‌ನಂತಹ ಪ್ರಾಚೀನ ಸಾಹಿತ್ಯಗಳನ್ನು ಒಟ್ಟಿಗೆ ಓದಲಾರಂಭಿಸಿದ ಸಮಯದಲ್ಲಾಗಿತ್ತು. ಓದುವ ವಿಷಯದಲ್ಲಿನ ನನ್ನ ರುಚಿಯು ಪಕ್ವಗೊಂಡಿತ್ತು.

ಜನರಿಗಾಗಿ ಪ್ರೀತಿಯು, ಒಂದು ಕೌಶಲ ಹಾಗೂ ಕಲೆಯಾಗಿದೆಯೆಂದು ಆಂಟಿ ಲೂಯಿ ನನಗೆ ಕಲಿಸಿದರು. ಆ ಕಲೆಯನ್ನು ಅವರು ನನಗೆ ಕಲಿಸದೆ ಹೋಗಿದ್ದರೆ, ನಾನು ಬಹಳ ಪ್ರಾಯದವಳಾಗುವ ತನಕ ಅದನ್ನು ಗ್ರಹಿಸದೆ ಹೋಗಿದ್ದಿರಬಹುದು. ಆಲಿಸುವಂತೆ ಅವರು ನನಗೆ ಕಲಿಸಿದರು, ಮತ್ತು ತುಂಬ ಕಾರ್ಯಮಗ್ನವಾಗಿರುವ ಈ ಲೋಕದಲ್ಲಿನ ಅನೇಕ ಜನರು—ವೃದ್ಧರಾಗಲಿ ಎಳೆಯರಾಗಲಿ—ಅದನ್ನು ಎಂದಿಗೂ ಕಲಿಯುವುದಿಲ್ಲ. ಅವರ ಸೋಫದ ಮೇಲೆ ನಾನು ಮುದುರಿಕೊಂಡು ಕುಳಿತಂತೆ, ಅವರು ತಮ್ಮ ಜೀವನದ ಕಥೆಗಳನ್ನು ಮತ್ತು ತಮ್ಮ ಅನುಭವಗಳನ್ನು ನನಗೆ ಹೇಳುತ್ತಾರೆ. ಈ ಸ್ತ್ರೀಯು ಪಡೆದಿರುವ ಅತಿ ಸ್ವಾರಸ್ಯಕರ ಜ್ಞಾನದಿಂದ ನಾನು ಹುರಿದುಂಬಿಸಲ್ಪಡುತ್ತೇನೆ.

ಅಗಾಧ ವೇದನಾ ಅಸ್ವಸ್ಥತೆಗಳಲ್ಲಿ, ತಮ್ಮ ಹೆತ್ತವರು ಮತ್ತು ತಮ್ಮ ದೊಡ್ಡಮ್ಮನನ್ನು ನೋಡಿಕೊಳ್ಳಲು, ಆಂಟಿ ಲೂಯಿ ಹೆಚ್ಚನ್ನು—ವಿವಾಹ, ಮಕ್ಕಳು, ಒಂದು ಜೀವನೋಪಾಯವನ್ನು ತ್ಯಾಗಮಾಡಿದರು. ಇದು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಉಳಿಯುವಂತೆ ಅವರ ತಮ್ಮನನ್ನು ಶಕ್ತಗೊಳಿಸಿತು.

ಕಳೆದ ಎರಡು ವರ್ಷಗಳಿಂದ, ಆಂಟಿ ಲೂಯಿ ಆರೋಗ್ಯದಲ್ಲಿ ಕ್ಷೀಣವಾಗುತ್ತಿದ್ದಾರೆ, ಮತ್ತು ವೃದ್ಧಾಪ್ಯವು ತರುವ ಆಶಾಭಂಗ, ಯಾತನೆ ಮತ್ತು ನೋವನ್ನು ನಾನು ನೋಡಬಲ್ಲೆ. ಇತ್ತೀಚೆಗೆ, 84ರ ವಯಸ್ಸಿನಲ್ಲಿ ಅವರು ವಾಹನ ಚಲಾಯಿಸುವುದನ್ನು ಬಿಟ್ಟುಬಿಡಬೇಕಾಯಿತು, ಮತ್ತು ಇದು ಅವರನ್ನು ಮಹತ್ತರವಾದ ಕಷ್ಟಕ್ಕೆ ಗುರಿಮಾಡಿದೆ. ಅವರು ಬಹಳ ಸಕ್ರಿಯ ಜೀವನಕ್ಕೆ ಒಗ್ಗಿಕೊಂಡಿದ್ದರು, ಮತ್ತು ಈಗ ತಮ್ಮ ಮನೆಗೆ ನಿರ್ಬಂಧಿಸಲ್ಪಟ್ಟಿರುವುದು ಬಹಳ ಆಶಾಭಂಗ ಪಡಿಸುವಂತಹದ್ದಾಗಿದೆ. ತಾವು ಜನರನ್ನು ಕಾಡಿಸುತ್ತಿದ್ದೇವೆಂಬ ಅನಿಸಿಕೆಯೊಂದಿಗೆ ಅವರು ಹೋರಾಡಬೇಕಾಗಿದೆ. ನಾವು ಅವರನ್ನು ಪ್ರೀತಿಸುತ್ತೇವೆ ಮತ್ತು ಅವರಿಗಾಗಿ ಏನನ್ನಾದರೂ ಮಾಡಲು ಸಿದ್ಧರೆಂದು ಎಷ್ಟು ಬಾರಿ ಹೇಳಿದರೂ, ತಾವು ದೋಷಪ್ರದರೆಂದು ಅವರು ಭಾವಿಸುತ್ತಾರೆ.

ವಿಷಯಗಳನ್ನು ಹೆಚ್ಚು ಕೆಡಿಸುವುದು ಯಾವುದೆಂದರೆ, ಸ್ವತಃ ತೊಳೆದುಕೊಂಡು, ಉಡುಪು ಧರಿಸುವುದು ಅವರಿಗೆ ಈಗ ಕಷ್ಟಕರವಾಗಿರುವುದೇ. ಇದನ್ನು ಅವರು ಇತರರಿಗೆ ಮಾಡಿರುವುದಾದರೂ, ಇಂತಹ ನೆರವಿನ ಅಗತ್ಯದಲ್ಲಿ ತಮ್ಮನ್ನು ಈಗ ಕಂಡುಕೊಳ್ಳುವುದು ಒಂದು ಪರೀಕ್ಷೆಯಾಗಿದೆ. ಜನರು ತಾವೇ ಎಲ್ಲವನ್ನೂ ಮಾಡಿಕೊಳ್ಳಲು ಸಾಧ್ಯವಿರದಿರುವಾಗಲೂ, ಅವರು ನಮ್ಮ ಗೌರವಕ್ಕೆ ಇನ್ನೂ ಅರ್ಹರಾಗಿದ್ದಾರೆಂಬುದನ್ನು ಇದು ನನಗೆ ಕಲಿಸುತ್ತಿದೆ.

ಆದರೆ ಎಲ್ಲಕ್ಕಿಂತ ಹೆಚ್ಚಾಗಿ, ವೃದ್ಧರಾಗುವುದರಲ್ಲಿ ಏನು ಒಳಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಅನುಭವವು ನನಗೆ ಸಹಾಯ ಮಾಡಿದೆ. ಆಂಟಿ ಲೂಯಿ ಈಗ ಮಾಡಸಾಧ್ಯವಿರದ ಪ್ರತಿಯೊಂದು ವಿಷಯವು ನನ್ನನ್ನು ಅಳುವಂತೆ ಮಾಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಅವರು ಆಶಾಭಂಗ ಪಟ್ಟಿರುವುದನ್ನು ಅಥವಾ ಬಹಳ ನೋವಿನಲ್ಲಿರುವುದನ್ನು ನಾನು ನೋಡುವಾಗ, ಬಹಳ ಅಳಬೇಕೆಂದು ನನಗನಿಸುತ್ತದೆ. ಅವರ ಎಲ್ಲ ವಿವೇಕವು ನನಗಿಂತ ಚಿಕ್ಕದಾಗಿರುವ ಮತ್ತೊಂದು ಮಗುವಿನಿಂದ ಅನುಭವಿಸಲ್ಪಡಲು ಮತ್ತು ಗಣ್ಯಮಾಡಲ್ಪಡಲು ಸಾಧ್ಯವಿಲ್ಲದೆ ಹೋಗಬಹುದೆಂಬ ವಿಷಯಕ್ಕಾಗಿ ನಾನು ವಿಶೇಷವಾಗಿ ದುಃಖಿಸುತ್ತೇನೆ.

ಕೆಲವೊಮ್ಮೆ ನಾನು ಅವರಿಗಾಗಿ ಸಾಕಷ್ಟನ್ನು ಮಾಡುತ್ತೇನೊ ಎಂದು ವಿಸ್ಮಯಪಡುತ್ತೇನೆ. ನಾನು ಅವರಲ್ಲಿ ಸಂತೋಷಿಸಿ, ಅವರನ್ನು ಪ್ರೀತಿಸುವಷ್ಟು ಅವರು ನನ್ನಲ್ಲಿ ಸಂತೋಷಿಸಿ ನನ್ನನ್ನು ಪ್ರೀತಿಸುತ್ತಾರೋ? ಆದರೆ ನಾನು ಊಟಕ್ಕೆ ಹೋಗಿ ಅವರನ್ನು ಅಪ್ಪಿಕೊಂಡಾಗ, ಎಲ್ಲ ಸಂದೇಹಗಳು ಮಾಯವಾಗುತ್ತವೆ.

ಇಂತಹ ಒಬ್ಬ ಸ್ನೇಹಿತೆಯನ್ನು ಪಡೆದಿರುವುದರಲ್ಲಿ ನಾನು ಗೌರವಿತಳು. ಅವರು ನನಗೆ ಬಹಳಷ್ಟು ಉತ್ತಮ ಗುಣಗಳನ್ನು ಕಲಿಸಿದ್ದಾರೆ—ಎಲ್ಲಕ್ಕಿಂತ ಹೆಚ್ಚಾಗಿ ಅವರು ನನಗೆ ಪ್ರೀತಿಯನ್ನು ಕಲಿಸಿದ್ದಾರೆ. ಅವರ ಸ್ನೇಹವನ್ನು ನಾನು, ನನ್ನ ಸ್ವಂತ ವಯಸ್ಸಿನ ಒಂದು ನೂರು ಸ್ನೇಹಿತೆಯರಿಗಾಗಿ ಅದಲುಬದಲು ಮಾಡಲಾರೆ. ನಾನು ಬೇಗನೆ ಶಾಲೆಯನ್ನು ಬಿಟ್ಟು, ಇನ್ನು ಮೇಲೆ ಊಟಕ್ಕೆ ಅವರ ಫ್ಲ್ಯಾಟ್‌ಗೆ ಹೋಗದೆ ಇರುವೆನಾದರೂ, ನನ್ನ ಪ್ರೀತಿಯ ಸ್ನೇಹಿತೆಯನ್ನು ಪ್ರೀತಿಸುವುದನ್ನು, ಸಂದರ್ಶಿಸುವುದನ್ನು ಮತ್ತು ಸಹಾಯ ಮಾಡುವುದನ್ನು ಎಂದಿಗೂ ನಿಲ್ಲಿಸಲಾರೆ. ನಿಮಗಿಂತ ಮುಂಚೆ ಇತರರ ಕುರಿತು ನೀವು ಯೋಚಿಸುವುದಾದರೆ ಜೀವಿತವು ಸಂತೋಷಕರವೂ ಸಫಲವೂ ಆಗಿರಬಲ್ಲದೆಂದು ಅವರು ನನಗೆ ಕಲಿಸಿದ್ದಾರೆ.—ದತ್ತಲೇಖನ.

[ಪುಟ 25 ರಲ್ಲಿರುವ ಚಿತ್ರ]

ಆಂಟಿ ಲೂಯಿಯೊಂದಿಗೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ