ಯಾಜಕಕಾಂಡ
1 ಯೆಹೋವ ಮೋಶೆನ ಕರೆದು ದೇವದರ್ಶನ ಡೇರೆ ಒಳಗಿಂದ+ ಮಾತಾಡ್ತಾ ಹೀಗಂದನು: 2 “ನೀನು ಇಸ್ರಾಯೇಲ್ಯರಿಗೆ ಏನು ಹೇಳಬೇಕಂದ್ರೆ ‘ನಿಮ್ಮಲ್ಲಿ ಯಾರಾದ್ರೂ ಯೆಹೋವನಿಗೆ ಸಾಕುಪ್ರಾಣಿಯನ್ನ ಬಲಿ ಅರ್ಪಿಸಬೇಕಂತ ಇದ್ರೆ ಹಸು ಅಥವಾ ಆಡು ಅಥವಾ ಕುರಿಯನ್ನೇ ಅರ್ಪಿಸಬೇಕು.+
3 ಸರ್ವಾಂಗಹೋಮ ಬಲಿಗಾಗಿ ಹಸುನ ಕೊಡೋದಾದ್ರೆ ಗಂಡನ್ನೇ ಕೊಡಬೇಕು.+ ಅದ್ರಲ್ಲಿ ಯಾವುದೇ ದೋಷ ಇರಬಾರದು. ಅದನ್ನ ಯೆಹೋವನಾದ ನನ್ನ ಮುಂದೆ, ದೇವದರ್ಶನ ಡೇರೆಯ ಬಾಗಿಲ ಹತ್ರ ತರಬೇಕು. ಅದನ್ನ ಕೊಡೋನು ಸ್ವಂತ ಇಷ್ಟದಿಂದ ಕೊಡಬೇಕು.+ 4 ತನ್ನ ಕೈಯನ್ನ ಆ ಹೋರಿ ತಲೆ ಮೇಲೆ ಇಡಬೇಕು. ತನ್ನ ಪ್ರಾಯಶ್ಚಿತ್ತಕ್ಕಾಗಿ ಅರ್ಪಿಸೋ ಆ ಹೋರಿನ ನಾನು ಸ್ವೀಕರಿಸ್ತಿನಿ.
5 ಆಮೇಲೆ ಯೆಹೋವನಾದ ನನ್ನ ಮುಂದೆ ಅಂದ್ರೆ ದೇವದರ್ಶನ ಡೇರೆಯ ಬಾಗಿಲ ಹತ್ರ ಆ ಎಳೇ ಹೋರಿನ ಕಡಿಬೇಕು. ಪುರೋಹಿತರಾದ*+ ಆರೋನನ ಮಕ್ಕಳು ಆ ಹೋರಿಯ ರಕ್ತನ ಯಜ್ಞವೇದಿ ಹತ್ರ ತಂದು ಅದ್ರ ಎಲ್ಲ ಬದಿಗಳಿಗೆ ಚಿಮಿಕಿಸಬೇಕು.+ 6 ಸರ್ವಾಂಗಹೋಮ ಬಲಿಯಾಗಿ ಕೊಡೋ ಪ್ರಾಣಿಯ ಚರ್ಮ ಸುಲಿದು ಅದನ್ನ ತುಂಡುತುಂಡು ಮಾಡಬೇಕು.+ 7 ಪುರೋಹಿತರಾದ ಆರೋನನ ಮಕ್ಕಳು ಯಜ್ಞವೇದಿ ಮೇಲೆ ಕೆಂಡ ಇಟ್ಟು+ ಅದ್ರ ಮೇಲೆ ಕಟ್ಟಿಗೆಗಳನ್ನ ಜೋಡಿಸಬೇಕು. 8 ಪುರೋಹಿತರಾದ ಆರೋನನ ಮಕ್ಕಳು ಬಲಿ ಕೊಟ್ಟ ಪ್ರಾಣಿಯ+ ತಲೆ, ಕೊಬ್ಬು* ಮತ್ತು ತುಂಡುಗಳನ್ನ ಯಜ್ಞವೇದಿ ಮೇಲಿರೋ ಕೆಂಡದ ಮೇಲಿನ ಕಟ್ಟಿಗೆಗಳ ಮೇಲೆ ಜೋಡಿಸಬೇಕು. 9 ಪ್ರಾಣಿಯ ಕರುಳನ್ನ ಕಾಲನ್ನ ನೀರಲ್ಲಿ ತೊಳಿಬೇಕು. ಪುರೋಹಿತ ಅದನ್ನೆಲ್ಲ ಯಜ್ಞವೇದಿ ಮೇಲೆ ಸರ್ವಾಂಗಹೋಮವಾಗಿ ಅರ್ಪಿಸಬೇಕು. ಅದ್ರಿಂದ ಮೇಲೆ ಹೋಗೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ. ಇದು ಬೆಂಕಿ ಮೂಲಕ ಆತನಿಗೆ ಮಾಡೋ ಅರ್ಪಣೆ.+
10 ಒಬ್ಬ ಸರ್ವಾಂಗಹೋಮ ಬಲಿಗಾಗಿ ಕುರಿ+ ಅಥವಾ ಆಡನ್ನ ಕೊಡೋದಾದ್ರೆ ಗಂಡನ್ನೇ ಕೊಡಬೇಕು. ಅದ್ರಲ್ಲಿ ಯಾವುದೇ ದೋಷ ಇರಬಾರದು.+ 11 ಅದನ್ನ ಯೆಹೋವನ ಮುಂದೆ ಯಜ್ಞವೇದಿಯ ಉತ್ತರ ದಿಕ್ಕಿಗೆ ಕಡಿಬೇಕು. ಪುರೋಹಿತರಾದ ಆರೋನನ ಮಕ್ಕಳು ಅದ್ರ ರಕ್ತನ ಯಜ್ಞವೇದಿಯ ಎಲ್ಲ ಬದಿಗಳಲ್ಲಿ ಚಿಮಿಕಿಸಬೇಕು.+ 12 ಅದನ್ನ ತುಂಡುತುಂಡಾಗಿ ಕಡಿಬೇಕು. ಪುರೋಹಿತ ಅದ್ರ ತಲೆ, ಕೊಬ್ಬು* ಮತ್ತು ಆ ತುಂಡುಗಳನ್ನ ಯಜ್ಞವೇದಿ ಮೇಲಿರೋ ಕೆಂಡದ ಮೇಲಿನ ಕಟ್ಟಿಗೆಗಳ ಮೇಲೆ ಜೋಡಿಸಬೇಕು. 13 ಕರುಳನ್ನ ಕಾಲನ್ನ ನೀರಲ್ಲಿ ತೊಳಿಬೇಕು. ಪುರೋಹಿತ ಅದನ್ನೆಲ್ಲ ಯಜ್ಞವೇದಿ ಮೇಲೆ ಅರ್ಪಿಸಬೇಕು. ಅದ್ರಿಂದ ಮೇಲೆ ಹೋಗೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ. ಇದು ಸರ್ವಾಂಗಹೋಮ ಬಲಿ. ಇದು ಬೆಂಕಿ ಮೂಲಕ ಆತನಿಗೆ ಮಾಡೋ ಅರ್ಪಣೆ.
14 ಯೆಹೋವನಿಗೆ ಸರ್ವಾಂಗಹೋಮ ಬಲಿ ಅರ್ಪಿಸೋಕೆ ಪಕ್ಷಿಯನ್ನ ಕೊಡೋದಾದ್ರೆ ಕಾಡುಪಾರಿವಾಳ ಅಥವಾ ಪಾರಿವಾಳದ ಮರಿಯನ್ನೇ ಕೊಡಬೇಕು.+ 15 ಪುರೋಹಿತ ಯಜ್ಞವೇದಿ ಹತ್ರ ಅದ್ರ ಕುತ್ತಿಗೆ ಚಿವುಟಿ ರಕ್ತವನ್ನ ಯಜ್ಞವೇದಿಯ ಬದಿಗೆ ಸುರಿಸಬೇಕು. ಆಮೇಲೆ ಆ ಪಕ್ಷಿನ ಯಜ್ಞವೇದಿ ಮೇಲೆ ಅರ್ಪಿಸಬೇಕು, ಅದ್ರ ಹೊಗೆ ಮೇಲೆ ಹೋಗಬೇಕು. 16 ಅವನು ಆ ಪಕ್ಷಿಯ ಎರೆಚೀಲ ತೆಗೆದು, ಪುಕ್ಕಗಳನ್ನ ಕಿತ್ತು ಅವುಗಳನ್ನ ಯಜ್ಞವೇದಿಯ ಪೂರ್ವಕ್ಕೆ ಬೂದಿ*+ ಹಾಕೋ ಸ್ಥಳದಲ್ಲಿ ಎಸಿಬೇಕು. 17 ಪಕ್ಷಿಯನ್ನ ಅದ್ರ ಎರಡು ರೆಕ್ಕೆಗಳ ಮಧ್ಯದಲ್ಲಿ ಸೀಳಬೇಕು. ಆದ್ರೆ ಎರಡು ಭಾಗ ಮಾಡಬಾರದು. ಯಜ್ಞವೇದಿಯ ಕೆಂಡದ ಮೇಲಿನ ಕಟ್ಟಿಗೆ ಮೇಲೆ ಅದನ್ನ ಅರ್ಪಿಸಬೇಕು. ಅದ್ರಿಂದ ಮೇಲೆ ಹೋಗೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ. ಇದು ಸರ್ವಾಂಗಹೋಮ ಬಲಿ. ಇದು ಬೆಂಕಿ ಮೂಲಕ ಆತನಿಗೆ ಮಾಡೋ ಅರ್ಪಣೆ.
2 ಯಾರಾದ್ರೂ ಯೆಹೋವನಿಗೆ ಧಾನ್ಯ ಅರ್ಪಣೆ+ ಕೊಡೋಕೆ ಇಷ್ಟಪಟ್ರೆ ಧಾನ್ಯವನ್ನ ನುಣ್ಣಗೆ ಹಿಟ್ಟು* ಮಾಡಿ ಕೊಡಬೇಕು. ಅದ್ರ ಮೇಲೆ ಎಣ್ಣೆ ಸುರಿದು ಸಾಂಬ್ರಾಣಿ ಇಡಬೇಕು.+ 2 ಅದನ್ನ ಪುರೋಹಿತರಾದ ಆರೋನನ ಮಕ್ಕಳ* ಹತ್ರ ತರಬೇಕು. ಪುರೋಹಿತ ಎಣ್ಣೆ ಬೆರೆತ ನುಣ್ಣಗಿನ ಆ ಹಿಟ್ಟನ್ನ ಮತ್ತು ಅದ್ರ ಮೇಲಿರೋ ಎಲ್ಲ ಸಾಂಬ್ರಾಣಿನ ಹಿಡಿತುಂಬ ತಗೊಂಡು ಯಜ್ಞವೇದಿ ಮೇಲಿರೋ ಬೆಂಕಿಯಲ್ಲಿ ಅರ್ಪಿಸಬೇಕು. ಈ ರೀತಿ ಮಾಡೋದು ಧಾನ್ಯ ಅರ್ಪಣೆನ+ ಪೂರ್ತಿಯಾಗಿ ಅರ್ಪಿಸಿದ್ದಾರೆ ಅಂತ ಸೂಚಿಸುತ್ತೆ. ಯಜ್ಞವೇದಿಯಿಂದ ಮೇಲೇರೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ. 3 ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸಿದ ಆ ಧಾನ್ಯ ಅರ್ಪಣೆಯಲ್ಲಿ ಉಳಿದಿರೋದು ಅತಿ ಪವಿತ್ರವಾಗಿರುತ್ತೆ.+ ಅದು ಆರೋನನಿಗೆ, ಅವನ ಮಕ್ಕಳಿಗೆ+ ಸೇರಬೇಕು.
4 ನೀವು ಒಲೆಯಲ್ಲಿ ಸುಟ್ಟದ್ದನ್ನ ಧಾನ್ಯ ಅರ್ಪಣೆಯಾಗಿ ಕೊಡೋಕೆ ಇಷ್ಟಪಟ್ರೆ ನುಣ್ಣಗಿನ ಹಿಟ್ಟಿಗೆ ಎಣ್ಣೆ ಬೆರೆಸಿ ಹುಳಿ ಇಲ್ಲದ ರೊಟ್ಟಿಗಳನ್ನ ಬಳೆ ಆಕಾರದಲ್ಲಿ ಮಾಡಿ ಕೊಡಬೇಕು ಅಥವಾ ನುಣ್ಣಗಿನ ಹಿಟ್ಟಿಂದ ಹುಳಿ ಇಲ್ಲದ ತೆಳುವಾದ ರೊಟ್ಟಿಗಳನ್ನ ಮಾಡಿ ಎಣ್ಣೆ ಸವರಿ ಕೊಡಬೇಕು.+
5 ನೀವು ಹೆಂಚಿನ ಮೇಲೆ ಸುಟ್ಟದ್ದನ್ನ+ ಧಾನ್ಯ ಅರ್ಪಣೆಯಾಗಿ ಕೊಡೋಕೆ ಇಷ್ಟಪಟ್ರೆ ಮೊದ್ಲು ನುಣ್ಣಗಿನ ಹಿಟ್ಟಿಗೆ ಎಣ್ಣೆ ಬೆರೆಸಿ ಹುಳಿ ಇಲ್ಲದ ರೊಟ್ಟಿ ಮಾಡಬೇಕು. 6 ಅದನ್ನ ಮುರಿದು ತುಂಡುತುಂಡುಗಳಾಗಿ ಮಾಡಿ ಅದ್ರ ಮೇಲೆ ಎಣ್ಣೆ ಸುರಿದು ಕೊಡಬೇಕು.+ ಅದು ಧಾನ್ಯ ಅರ್ಪಣೆ.
7 ನೀವು ಬಾಂಡ್ಲಿಯಲ್ಲಿ ತಯಾರಿಸಿದ್ದನ್ನ ಧಾನ್ಯ ಅರ್ಪಣೆಯಾಗಿ ಕೊಡೋಕೆ ಇಷ್ಟಪಟ್ರೆ ಅದು ನುಣ್ಣಗಿನ ಹಿಟ್ಟಿಗೆ ಎಣ್ಣೆ ಬೆರೆಸಿ ಮಾಡಿದ್ದಾಗಿರಬೇಕು. 8 ನೀವು ಯೆಹೋವನಿಗೆ ಕೊಡಬೇಕು ಅಂತಿರೋ ಧಾನ್ಯ ಅರ್ಪಣೆನ ತಂದು ಪುರೋಹಿತನಿಗೆ ಕೊಡಬೇಕು. ಅವನು ಅದನ್ನ ಯಜ್ಞವೇದಿ ಹತ್ರ ತಗೊಂಡು ಹೋಗ್ತಾನೆ. 9 ಪುರೋಹಿತ ಧಾನ್ಯ ಅರ್ಪಣೆಯಲ್ಲಿ ಸ್ವಲ್ಪ ತಗೊಂಡು ಯಜ್ಞವೇದಿ ಮೇಲಿರೋ ಬೆಂಕಿಯಲ್ಲಿ ಅರ್ಪಿಸ್ತಾನೆ.+ ಇದು ಧಾನ್ಯ ಅರ್ಪಣೆನ ಪೂರ್ತಿಯಾಗಿ ಅರ್ಪಿಸಿದ್ದಾರೆ ಅಂತ ಸೂಚಿಸುತ್ತೆ. ಯಜ್ಞವೇದಿಯಿಂದ ಮೇಲೇರೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ.+ 10 ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸಿದ ಧಾನ್ಯ ಅರ್ಪಣೆಯಲ್ಲಿ ಉಳಿದಿರೋದು ಅತಿ ಪವಿತ್ರವಾಗಿರುತ್ತೆ. ಅದು ಆರೋನನಿಗೆ, ಅವನ ಮಕ್ಕಳಿಗೆ ಸೇರಬೇಕು.+
11 ನೀವು ಯೆಹೋವನಿಗೆ ಕೊಡೋ ಯಾವುದೇ ಧಾನ್ಯ ಅರ್ಪಣೆಯಲ್ಲಿ ಹುಳಿ ಬೆರೆಸಬಾರದು.+ ಯಾಕಂದ್ರೆ ಹುಳಿಹಿಟ್ಟನ್ನ ಹಣ್ಣುಗಳ ರಸವನ್ನ* ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸಿ ಹೊಗೆ ಮೇಲೇರಿಸೋದು ತಪ್ಪು.
12 ಹುಳಿಹಿಟ್ಟನ್ನ ಅಥವಾ ಹಣ್ಣುಗಳ ರಸವನ್ನ ನೀವು ಮೊದಲ ಬೆಳೆಯ ಅರ್ಪಣೆಯಾಗಿ ಯೆಹೋವನಿಗೆ ಕೊಡಬಹುದು.+ ಆದ್ರೆ ಸುವಾಸನೆಯ ಅರ್ಪಣೆಯಾಗಿ ಅವುಗಳನ್ನ ಯಜ್ಞವೇದಿ ಮೇಲೆ ಅರ್ಪಿಸಬಾರದು.
13 ದೇವರಿಗೆ ಅರ್ಪಿಸೋ ಪ್ರತಿಯೊಂದು ಧಾನ್ಯ ಅರ್ಪಣೆಯಲ್ಲಿ ನೀವು ಉಪ್ಪು ಸೇರಿಸಬೇಕು. ಉಪ್ಪಿಲ್ಲದೆ ಧಾನ್ಯ ಅರ್ಪಣೆ ಕೊಡಬಾರದು. ಯಾಕಂದ್ರೆ ಆ ಉಪ್ಪು ದೇವರು ನಿಮ್ಮ ಜೊತೆ ಮಾಡ್ಕೊಂಡಿರೋ ಒಪ್ಪಂದನ* ನೆನಪಿಸುತ್ತೆ. ನೀವು ಪ್ರತಿಯೊಂದು ಅರ್ಪಣೆ ಜೊತೆ ಉಪ್ಪನ್ನ ಅರ್ಪಿಸ್ಲೇಬೇಕು.+
14 ನೀವು ಮೊದಲ ಬೆಳೆಯಿಂದ ಧಾನ್ಯ ಅರ್ಪಣೆನ ಯೆಹೋವನಿಗೆ ಕೊಡೋದಾದ್ರೆ ಆ ಹೊಸ ಧಾನ್ಯವನ್ನ* ಬೆಂಕಿಯಲ್ಲಿ ಹುರಿದು ಕುಟ್ಟಿ ನುಚ್ಚು ಮಾಡಬೇಕು. ಇದು ಧಾನ್ಯದ ಮೊದಲ ಬೆಳೆಯ ಅರ್ಪಣೆ.+ 15 ಅದ್ರ ಮೇಲೆ ಎಣ್ಣೆ ಹಾಕಿ ಸಾಂಬ್ರಾಣಿ ಇಟ್ಟು ಕೊಡಬೇಕು. ಇದೇ ಧಾನ್ಯ ಅರ್ಪಣೆ. 16 ಪುರೋಹಿತ ಎಣ್ಣೆ ಬೆರೆತ ನುಚ್ಚಿನಲ್ಲಿ ಸ್ವಲ್ಪವನ್ನ,+ ಎಲ್ಲ ಸಾಂಬ್ರಾಣಿಯನ್ನ ತಗೊಂಡು ಯಜ್ಞವೇದಿ ಮೇಲಿರೋ ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸಬೇಕು. ಯಜ್ಞವೇದಿಯಿಂದ ಹೊಗೆ ಮೇಲೆ ಹೋಗಬೇಕು. ಇದು ಧಾನ್ಯ ಅರ್ಪಣೆಯನ್ನ ಪೂರ್ತಿಯಾಗಿ ಅರ್ಪಿಸಿದ್ದಾರೆ ಅಂತ ಸೂಚಿಸುತ್ತೆ.
3 ಒಂದುವೇಳೆ ಗಂಡು ಅಥವಾ ಹೆಣ್ಣು ಹಸುನ ಯೆಹೋವನಿಗೆ ಸಮಾಧಾನ ಬಲಿಯಾಗಿ*+ ಅರ್ಪಿಸೋಕೆ ಯಾರಾದ್ರೂ ಇಷ್ಟಪಟ್ರೆ ಅದ್ರಲ್ಲಿ ಯಾವುದೇ ದೋಷ ಇರಬಾರದು. 2 ಅದನ್ನ ಕೊಡೋನು ತನ್ನ ಕೈಯನ್ನ ಆ ಪ್ರಾಣಿ ತಲೆ ಮೇಲೆ ಇಡಬೇಕು. ಪುರೋಹಿತರಾದ ಆರೋನನ ಮಕ್ಕಳು ದೇವದರ್ಶನ ಡೇರೆಯ ಬಾಗಿಲ ಹತ್ರ ಆ ಪ್ರಾಣಿನ ಕಡಿಬೇಕು. ಅದ್ರ ರಕ್ತನ ಯಜ್ಞವೇದಿಯ ಎಲ್ಲ ಬದಿಗಳಿಗೆ ಚಿಮಿಕಿಸಬೇಕು. 3 ಸಮಾಧಾನ ಬಲಿಗಾಗಿ ತಂದಿರೋ ಆ ಪ್ರಾಣಿಯ ಕೆಲವು ಭಾಗಗಳನ್ನ ಬೆಂಕಿಯಲ್ಲಿ ಅರ್ಪಿಸೋ ಅರ್ಪಣೆಯಾಗಿ ಯೆಹೋವನಿಗೆ ಕೊಡಬೇಕು.+ ಆ ಭಾಗಗಳು ಯಾವುದಂದ್ರೆ, ಕರುಳುಗಳ ಸುತ್ತ ಇರೋ ಕೊಬ್ಬು,+ ಕರುಳುಗಳಿಗೆ ಅಂಟ್ಕೊಂಡಿರೋ ಎಲ್ಲ ಕೊಬ್ಬು, 4 ಎರಡು ಮೂತ್ರಪಿಂಡಗಳು, ಅವುಗಳ ಮೇಲಿರೋ ಕೊಬ್ಬು ಅಂದ್ರೆ ಸೊಂಟದ ಹತ್ರ ಇರೋ ಕೊಬ್ಬು. ಮೂತ್ರಪಿಂಡಗಳ ಜೊತೆ ಪಿತ್ತಜನಕಾಂಗದ ಮೇಲಿರೋ ಕೊಬ್ಬು ಸಹ ಕೊಡಬೇಕು.+ 5 ಇದನ್ನೆಲ್ಲ ಆರೋನನ ಮಕ್ಕಳು ಯಜ್ಞವೇದಿಯಲ್ಲಿ ಉರಿತಿರೋ ಕಟ್ಟಿಗೆ ಮೇಲಿರೋ ಸರ್ವಾಂಗಹೋಮ ಬಲಿ ಮೇಲೆ ಅರ್ಪಿಸಬೇಕು.+ ಅದ್ರಿಂದ ಮೇಲೇರೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ.+ ಇದು ಬೆಂಕಿ ಮೂಲಕ ಕೊಡೋ ಅರ್ಪಣೆ.
6 ಆಡು ಅಥವಾ ಕುರಿಯನ್ನ ಯೆಹೋವನಿಗೆ ಸಮಾಧಾನ ಬಲಿಯಾಗಿ ಅರ್ಪಿಸೋಕೆ ಇಷ್ಟಪಟ್ರೆ ಗಂಡನ್ನಾಗಲಿ ಹೆಣ್ಣನ್ನಾಗಲಿ ಕೊಡಬಹುದು. ಅದ್ರಲ್ಲಿ ಯಾವುದೇ ದೋಷ ಇರಬಾರದು.+ 7 ಗಂಡು ಕುರಿಮರಿಯನ್ನ ಅರ್ಪಿಸೋದಾದ್ರೆ ಯೆಹೋವನ ಮುಂದೆ ತರಬೇಕು. 8 ಅದನ್ನ ಕೊಡೋನು ತನ್ನ ಕೈಯನ್ನ ಅದ್ರ ತಲೆ ಮೇಲೆ ಇಡಬೇಕು. ಆರೋನನ ಮಕ್ಕಳು ದೇವದರ್ಶನ ಡೇರೆ ಮುಂದೆ ಆ ಪ್ರಾಣಿನ ಕಡಿಬೇಕು. ಅದ್ರ ರಕ್ತನ ಯಜ್ಞವೇದಿಯ ಎಲ್ಲ ಬದಿಗಳಿಗೆ ಚಿಮಿಕಿಸಬೇಕು. 9 ಆ ಕುರಿಮರಿಯ ಕೊಬ್ಬನ್ನ ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸಬೇಕು.+ ಅವನು ಅದ್ರ ಬೆನ್ನೆಲುಬಿನ ಕೊನೆಯಿಂದ ಕೊಬ್ಬಿದ ಇಡೀ ಬಾಲ,* ಕರುಳುಗಳ ಸುತ್ತ ಇರೋ ಕೊಬ್ಬು, ಕರುಳುಗಳಿಗೆ ಅಂಟ್ಕೊಂಡಿರೋ ಎಲ್ಲ ಕೊಬ್ಬು, 10 ಎರಡು ಮೂತ್ರಪಿಂಡಗಳು, ಅವುಗಳ ಮೇಲಿರೋ ಕೊಬ್ಬು ಅಂದ್ರೆ ಸೊಂಟದ ಹತ್ರ ಇರೋ ಕೊಬ್ಬು ಕೊಡಬೇಕು. ಮೂತ್ರಪಿಂಡಗಳ ಜೊತೆ ಪಿತ್ತಜನಕಾಂಗದ ಮೇಲಿರೋ ಕೊಬ್ಬನ್ನೂ ಕೊಡಬೇಕು.+ 11 ಇದನ್ನೆಲ್ಲ ಪುರೋಹಿತ ಯಜ್ಞವೇದಿ ಮೇಲೆ ಅರ್ಪಿಸಿದಾಗ ಅದ್ರ ಹೊಗೆ ಮೇಲೆ ಹೋಗಬೇಕು. ಬೆಂಕಿ ಮೂಲಕ ಅರ್ಪಿಸೋ ಈ ಅರ್ಪಣೆ ಯೆಹೋವನ ಪಾಲು.*+
12 ಅವನು ಆಡನ್ನ ಅರ್ಪಿಸೋದಾದ್ರೆ ಅದನ್ನ ಯೆಹೋವನ ಮುಂದೆ ತರಬೇಕು. 13 ತನ್ನ ಕೈಯನ್ನ ಅದ್ರ ತಲೆ ಮೇಲೆ ಇಡಬೇಕು. ಆರೋನನ ಮಕ್ಕಳು ದೇವದರ್ಶನ ಡೇರೆ ಮುಂದೆ ಅದನ್ನ ಕಡಿದು ರಕ್ತನ ಯಜ್ಞವೇದಿಯ ಎಲ್ಲ ಬದಿಗಳಿಗೆ ಚಿಮಿಕಿಸಬೇಕು. 14 ಅವನು ಆ ಪ್ರಾಣಿಯ ಕೆಲವು ಭಾಗಗಳನ್ನ ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸೋಕೆ ಕೊಡಬೇಕು. ಆ ಭಾಗಗಳು ಯಾವುದಂದ್ರೆ, ಕರುಳುಗಳ ಸುತ್ತ ಇರೋ ಕೊಬ್ಬು, ಕರುಳುಗಳಿಗೆ ಅಂಟ್ಕೊಂಡಿರೋ ಎಲ್ಲ ಕೊಬ್ಬು,+ 15 ಎರಡು ಮೂತ್ರಪಿಂಡಗಳು, ಅವುಗಳ ಮೇಲಿರೋ ಕೊಬ್ಬು ಅಂದ್ರೆ ಸೊಂಟದ ಹತ್ರ ಇರೋ ಕೊಬ್ಬು. ಮೂತ್ರಪಿಂಡಗಳ ಜೊತೆ ಪಿತ್ತಜನಕಾಂಗದ ಮೇಲಿರೋ ಕೊಬ್ಬು ಸಹ ಕೊಡಬೇಕು. 16 ಇದನ್ನೆಲ್ಲ ಪುರೋಹಿತ ಯಜ್ಞವೇದಿ ಮೇಲೆ ಅರ್ಪಿಸಬೇಕು. ಅದ್ರಿಂದ ಮೇಲೇರೋ ಹೊಗೆಯ ಸುವಾಸನೆಯಿಂದ ದೇವರಿಗೆ ಸಂತೋಷ* ಆಗುತ್ತೆ. ಬೆಂಕಿ ಮೂಲಕ ಅರ್ಪಿಸೋ ಈ ಅರ್ಪಣೆ ದೇವರ ಪಾಲು.* ಎಲ್ಲ ಕೊಬ್ಬು ಯೆಹೋವನಿಗೆ ಸೇರಿದ್ದು.+
17 ನೀವು ಕೊಬ್ಬು ಮತ್ತು ರಕ್ತ ತಿನ್ನಲೇಬಾರದು.+ ನೀವು ಎಲ್ಲೇ ಇದ್ರೂ ಈ ನಿಯಮ ಪಾಲಿಸಬೇಕು. ಇದು ಎಲ್ಲ ಪೀಳಿಗೆಗೆ ಇರೋ ನಿಯಮ.’”
4 ಯೆಹೋವ ಮೋಶೆಗೆ ಇನ್ನೂ ಹೇಳಿದ್ದೇನಂದ್ರೆ 2 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು ‘ಮಾಡಬಾರದು ಅಂತ ಯೆಹೋವ ಹೇಳಿರೋ ಒಂದು ಪಾಪವನ್ನ ಯಾರಾದ್ರೂ ಗೊತ್ತಿಲ್ಲದೆ ಮಾಡಿದ್ರೆ+ ಅವನು ಹೀಗೆ ಮಾಡಬೇಕು:
3 ಒಂದುವೇಳೆ ಮಹಾ ಪುರೋಹಿತ*+ ಪಾಪಮಾಡಿ,+ ಅದ್ರಿಂದ ಇಸ್ರಾಯೇಲ್ಯರನ್ನ ಅಪರಾಧಿಗಳನ್ನಾಗಿ ಮಾಡಿದ್ರೆ ಅವನು ತನ್ನ ಪಾಪಪರಿಹಾರಕ್ಕಾಗಿ ಒಂದು ಹೋರಿಯನ್ನ ಯೆಹೋವನಿಗೆ ಅರ್ಪಿಸಬೇಕು. ಪಾಪಪರಿಹಾರಕ ಬಲಿಯಾಗಿ ಅರ್ಪಿಸೋ ಆ ಹೋರಿಯಲ್ಲಿ ಯಾವುದೇ ದೋಷ ಇರಬಾರದು.+ 4 ಅವನು ಆ ಹೋರಿಯನ್ನ ದೇವದರ್ಶನ ಡೇರೆಯ ಬಾಗಿಲಲ್ಲಿ+ ಯೆಹೋವನ ಮುಂದೆ ತಂದು ಅದ್ರ ತಲೆ ಮೇಲೆ ಕೈ ಇಟ್ಟು ಅದನ್ನ ಯೆಹೋವನ ಮುಂದೆ ಕಡಿಬೇಕು.+ 5 ಆಮೇಲೆ ಅವನು+ ಆ ಹೋರಿಯ ರಕ್ತದಲ್ಲಿ ಸ್ವಲ್ಪ ತಗೊಂಡು ದೇವದರ್ಶನ ಡೇರೆ ಒಳಗೆ ಬರಬೇಕು. 6 ಅವನು ಬೆರಳನ್ನ ಆ ರಕ್ತದಲ್ಲಿ ಅದ್ದಿ+ ಯೆಹೋವನ ಮುಂದೆ ಪವಿತ್ರ ಸ್ಥಳದ ಪರದೆ ಮುಂದೆ ಅದನ್ನ ಏಳು ಸಾರಿ ಚಿಮಿಕಿಸಬೇಕು.+ 7 ದೇವದರ್ಶನ ಡೇರೆಯಲ್ಲಿ ಯೆಹೋವನ ಮುಂದೆ ಇರೋ ಧೂಪವೇದಿಯ ಕೊಂಬುಗಳಿಗೆ ಸಹ ಅವನು ಸ್ವಲ್ಪ ರಕ್ತ ಹಚ್ಚಬೇಕು.+ ಆ ಹೋರಿಯ ಉಳಿದ ರಕ್ತವನ್ನೆಲ್ಲ ದೇವದರ್ಶನ ಡೇರೆಯ ಬಾಗಿಲ ಹತ್ರ ಇರೋ ಸರ್ವಾಂಗಹೋಮದ ಯಜ್ಞವೇದಿ ಬುಡದಲ್ಲಿ ಸುರಿಬೇಕು.+
8 ಆಮೇಲೆ ಮಹಾ ಪುರೋಹಿತ ಆ ಹೋರಿಯ ಎಲ್ಲ ಕೊಬ್ಬು ತೆಗಿಬೇಕು. ಕರುಳುಗಳ ಸುತ್ತ ಇರೋ ಕೊಬ್ಬು, ಕರುಳುಗಳಿಗೆ ಅಂಟ್ಕೊಂಡಿರೋ ಕೊಬ್ಬು, 9 ಎರಡು ಮೂತ್ರಪಿಂಡಗಳು, ಅವುಗಳ ಮೇಲಿರೋ ಕೊಬ್ಬು ಅಂದ್ರೆ ಸೊಂಟದ ಹತ್ರ ಇರೋ ಕೊಬ್ಬು ತೆಗಿಬೇಕು. ಮೂತ್ರಪಿಂಡಗಳ ಜೊತೆ ಪಿತ್ತಜನಕಾಂಗದ ಮೇಲಿರೋ ಕೊಬ್ಬು ಸಹ ತೆಗಿಬೇಕು.+ 10 ಸಮಾಧಾನ ಬಲಿಯಾಗಿ ಅರ್ಪಿಸೋ ಹೋರಿಯ ಕೊಬ್ಬನ್ನ ತೆಗೆಯೋ ಹಾಗೇ ಈ ಹೋರಿಯ ಕೊಬ್ಬನ್ನ ತೆಗೆದು ಪ್ರತ್ಯೇಕಿಸಬೇಕು.+ ಅದನ್ನೆಲ್ಲ ಸರ್ವಾಂಗಹೋಮದ ಯಜ್ಞವೇದಿ ಮೇಲೆ ಸುಟ್ಟು ಅದ್ರ ಹೊಗೆ ಮೇಲೆ ಹೋಗಬೇಕು.
11 ಆದ್ರೆ ಆ ಹೋರಿಯ ಚರ್ಮ, ಎಲ್ಲ ಮಾಂಸ, ತಲೆ, ಕಾಲುಗಳು, ಕರುಳುಗಳು, ಸಗಣಿ+ 12 ಹೀಗೆ ಉಳಿದ ಎಲ್ಲವನ್ನ ಪಾಳೆಯದ ಹೊರಗೆ ಯಜ್ಞವೇದಿಯ ಬೂದಿಯನ್ನ ಹಾಕೋ ಶುದ್ಧವಾದ ಸ್ಥಳಕ್ಕೆ ತಗೊಂಡು ಹೋಗಿ ಅಲ್ಲಿ ಕಟ್ಟಿಗೆಗಳ ಮೇಲಿಟ್ಟು ಬೆಂಕಿಯಿಂದ ಸುಡಬೇಕು.+ ಬೂದಿಯನ್ನ ಹಾಕೋ ಆ ಸ್ಥಳದಲ್ಲೇ ಅವುಗಳನ್ನ ಸುಡಬೇಕು.
13 ಇಸ್ರಾಯೇಲ್ಯರು ಗೊತ್ತಿಲ್ಲದೆ ಪಾಪಮಾಡಿ ಅಪರಾಧಿಗಳಾದ್ರೆ+ ಮತ್ತು ಮಾಡಬಾರದು ಅಂತ ಯೆಹೋವ ಆಜ್ಞೆ ಕೊಟ್ಟ ವಿಷ್ಯಗಳಲ್ಲಿ ಯಾವುದನ್ನೋ ಮಾಡಿದ್ದೀವಿ ಅಂತ ಇಸ್ರಾಯೇಲ್ ಸಭೆಗೆ ಗೊತ್ತಿಲ್ಲದಿದ್ರೆ+ 14 ಮುಂದೆ ಆ ವಿಷ್ಯ ಗೊತ್ತಾದಾಗ ಇಸ್ರಾಯೇಲ್ ಸಭೆ ಪಾಪಪರಿಹಾರಕ ಬಲಿಗಾಗಿ ಒಂದು ಎಳೇ ಹೋರಿ ಕೊಡಬೇಕು. ಆ ಹೋರಿಯನ್ನ ದೇವದರ್ಶನ ಡೇರೆ ಮುಂದೆ ತರಬೇಕು. 15 ಇಸ್ರಾಯೇಲ್ ಸಮೂಹದ ಹಿರಿಯರು ಯೆಹೋವನ ಮುಂದೆ ಆ ಹೋರಿಯ ತಲೆ ಮೇಲೆ ತಮ್ಮ ಕೈಗಳನ್ನ ಇಟ್ಟು ಅದನ್ನ ಯೆಹೋವನ ಮುಂದೆ ಕಡಿಬೇಕು.
16 ಆಮೇಲೆ ಮಹಾ ಪುರೋಹಿತ ಆ ಹೋರಿಯ ರಕ್ತದಲ್ಲಿ ಸ್ವಲ್ಪ ತಗೊಂಡು ದೇವದರ್ಶನ ಡೇರೆ ಒಳಗೆ ಬರಬೇಕು. 17 ಬೆರಳನ್ನ ಆ ರಕ್ತದಲ್ಲಿ ಅದ್ದಿ ಯೆಹೋವನ ಮುಂದೆ ಪರದೆ ಮುಂದೆ ಏಳು ಸಾರಿ ಚಿಮಿಕಿಸಬೇಕು.+ 18 ಆಮೇಲೆ ದೇವದರ್ಶನ ಡೇರೆಯಲ್ಲಿ ಯೆಹೋವನ ಮುಂದಿರೋ ಧೂಪವೇದಿಯ+ ಕೊಂಬುಗಳಿಗೆ ಸ್ವಲ್ಪ ರಕ್ತ ಹಚ್ಚಬೇಕು. ಆ ಹೋರಿಯ ಉಳಿದ ರಕ್ತನ ದೇವದರ್ಶನ ಡೇರೆಯ ಬಾಗಿಲ ಹತ್ರ ಇರೋ ಸರ್ವಾಂಗಹೋಮದ ಯಜ್ಞವೇದಿಯ ಬುಡದಲ್ಲಿ ಸುರಿಬೇಕು.+ 19 ಆ ಹೋರಿಯ ಎಲ್ಲ ಕೊಬ್ಬು ತೆಗೆದು ಯಜ್ಞವೇದಿ ಮೇಲೆ ಸುಡಬೇಕು. ಅದ್ರ ಹೊಗೆ ಮೇಲೆ ಹೋಗಬೇಕು.+ 20 ಮಹಾ ಪುರೋಹಿತ ಪಾಪ ಮಾಡಿದಾಗ ಅವನು ಹೋರಿನ ಹೇಗೆ ಅರ್ಪಿಸಬೇಕೋ ಅದೇ ತರ ಈ ಹೋರಿಯನ್ನೂ ಅರ್ಪಿಸಬೇಕು. ಮಹಾ ಪುರೋಹಿತ ಎಲ್ಲ ಇಸ್ರಾಯೇಲ್ಯರ ಪಾಪಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು.+ ಆಗ ಅವರ ಪಾಪವನ್ನ ದೇವರು ಕ್ಷಮಿಸ್ತಾನೆ. 21 ಅವನು ಹೋರಿಯ ಉಳಿದ ಭಾಗಗಳನ್ನ ಮೊದ್ಲು ಹೇಳಿದ ತರಾನೇ ಪಾಳೆಯದ ಹೊರಗೆ ತಗೊಂಡು ಹೋಗಿ ಸುಡಬೇಕು.+ ಇದು ಇಸ್ರಾಯೇಲ್ ಸಭೆಗಾಗಿ ಕೊಡೋ ಪಾಪಪರಿಹಾರಕ ಬಲಿ.+
22 ಮಾಡಬಾರದು ಅಂತ ಯೆಹೋವ ದೇವರು ಹೇಳಿರೋ ಒಂದು ಪಾಪವನ್ನ ಒಬ್ಬ ಪ್ರಧಾನ+ ಗೊತ್ತಿಲ್ಲದೆ ಮಾಡಿ ಅಪರಾಧಿ ಆದ್ರೆ 23 ಅಥವಾ ಆ ಆಜ್ಞೆಗಳನ್ನ ಮೀರಿ ಪಾಪ ಮಾಡಿದ್ದೀನಿ ಅಂತ ಆಮೇಲೆ ಅವನಿಗೆ ಗೊತ್ತಾದ್ರೆ ತನ್ನ ಪಾಪ ಪರಿಹಾರಕ್ಕಾಗಿ ಯಾವುದೇ ದೋಷ ಇಲ್ಲದ ಒಂದು ಗಂಡು ಆಡುಮರಿನ ಅರ್ಪಿಸೋಕೆ ತರಬೇಕು. 24 ಅದ್ರ ತಲೆ ಮೇಲೆ ತನ್ನ ಕೈ ಇಟ್ಟು ಅದನ್ನ ಯೆಹೋವನ ಮುಂದೆ ಸರ್ವಾಂಗಹೋಮ ಬಲಿಯ ಪ್ರಾಣಿಯನ್ನ ಕಡಿಯೋ ಸ್ಥಳದಲ್ಲೇ ಕಡಿಬೇಕು.+ ಇದು ಪಾಪಪರಿಹಾರಕ ಬಲಿ. 25 ಪುರೋಹಿತ ಆ ಆಡುಮರಿಯ ರಕ್ತದಲ್ಲಿ ಸ್ವಲ್ಪ ಬೆರಳಿಂದ ತಗೊಂಡು ಸರ್ವಾಂಗಹೋಮ ಬಲಿಯನ್ನ ಅರ್ಪಿಸೋ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಬೇಕು.+ ಉಳಿದ ರಕ್ತನ ಅದೇ ಯಜ್ಞವೇದಿಯ ಬುಡದಲ್ಲಿ ಸುರಿಬೇಕು.+ 26 ಅವನು ಆ ಆಡುಮರಿಯ ಎಲ್ಲ ಕೊಬ್ಬನ್ನ ತೆಗೆದು ಸಮಾಧಾನ ಬಲಿಯಲ್ಲಿ ಕೊಬ್ಬನ್ನ ಅರ್ಪಿಸೋ ಹಾಗೇ ಯಜ್ಞವೇದಿ ಮೇಲೆ ಸುಡಬೇಕು.+ ಅದ್ರ ಹೊಗೆ ಮೇಲೆ ಹೋಗಬೇಕು. ಪುರೋಹಿತ ಪ್ರಧಾನನ ಪಾಪಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು. ಆಗ ದೇವರು ಅವನ ಪಾಪವನ್ನ ಕ್ಷಮಿಸ್ತಾನೆ.
27 ಮಾಡ್ಬಾರದು ಅಂತ ಯೆಹೋವ ಹೇಳಿರೋ ಒಂದು ಪಾಪವನ್ನ ಸಾಮಾನ್ಯ ಜನ್ರಲ್ಲಿ ಒಬ್ಬ ಗೊತ್ತಿಲ್ಲದೆ ಮಾಡಿ ಅಪರಾಧಿಯಾದ್ರೆ+ 28 ಅಥವಾ ತಾನು ಪಾಪ ಮಾಡಿದ್ದೀನಿ ಅಂತ ಆಮೇಲೆ ಗೊತ್ತಾದ್ರೆ ಆಗ ಅವನು ತನ್ನ ಪಾಪ ಪರಿಹಾರಕ್ಕಾಗಿ ಯಾವುದೇ ದೋಷ ಇಲ್ಲದ ಒಂದು ಹೆಣ್ಣು ಆಡುಮರಿಯನ್ನ ಅರ್ಪಿಸಬೇಕು. 29 ಅದ್ರ ತಲೆ ಮೇಲೆ ತನ್ನ ಕೈ ಇಡಬೇಕು, ಅದನ್ನ ಸರ್ವಾಂಗಹೋಮ ಬಲಿಯ ಪ್ರಾಣಿಯನ್ನ ಕಡಿಯೋ ಸ್ಥಳದಲ್ಲೇ ಕಡಿಬೇಕು.+ 30 ಪುರೋಹಿತ ಆ ಆಡುಮರಿಯ ರಕ್ತದಲ್ಲಿ ಸ್ವಲ್ಪ ಬೆರಳಿಂದ ತಗೊಂಡು ಸರ್ವಾಂಗಹೋಮದ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಬೇಕು. ಉಳಿದ ರಕ್ತನ ಅದೇ ಯಜ್ಞವೇದಿಯ ಬುಡದಲ್ಲಿ ಸುರಿಬೇಕು.+ 31 ಅವನು ಸಮಾಧಾನ ಬಲಿ ಕೊಡೋ ಪ್ರಾಣಿಯ ಕೊಬ್ಬನ್ನ ತೆಗಿಯೋ+ ಹಾಗೇ ಆ ಆಡುಮರಿಯ ಎಲ್ಲ ಕೊಬ್ಬನ್ನ ತೆಗೆದು+ ಯಜ್ಞವೇದಿ ಮೇಲೆ ಸುಡಬೇಕು. ಅದ್ರಿಂದ ಮೇಲೇರೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ. ಪುರೋಹಿತ ಆ ವ್ಯಕ್ತಿಯ ಪಾಪಕ್ಕಾಗಿ ಪ್ರಾಯಶ್ಚಿತ್ತ ಮಾಡಿದಾಗ ದೇವರು ಅವನ ಪಾಪವನ್ನ ಕ್ಷಮಿಸ್ತಾನೆ.
32 ಅವನು ಪಾಪಪರಿಹಾರಕ ಬಲಿಗಾಗಿ ಕುರಿಮರಿ ಕೊಡೋಕೆ ಇಷ್ಟಪಟ್ರೆ ಯಾವುದೇ ದೋಷ ಇಲ್ಲದ ಹೆಣ್ಣು ಕುರಿಮರಿಯನ್ನ ತರಬೇಕು. 33 ಅದ್ರ ತಲೆ ಮೇಲೆ ಕೈ ಇಟ್ಟು ಅದನ್ನ ಸರ್ವಾಂಗಹೋಮ ಬಲಿಯ ಪ್ರಾಣಿಯನ್ನ ಕಡಿಯೋ ಸ್ಥಳದಲ್ಲೇ ಕಡಿಬೇಕು.+ 34 ಪುರೋಹಿತ ಆ ಕುರಿಮರಿಯ ರಕ್ತದಲ್ಲಿ ಸ್ವಲ್ಪ ಬೆರಳಿಂದ ತಗೊಂಡು ಸರ್ವಾಂಗಹೋಮದ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಬೇಕು.+ ಉಳಿದ ರಕ್ತನ ಅದೇ ಯಜ್ಞವೇದಿಯ ಬುಡದಲ್ಲಿ ಸುರಿಬೇಕು. 35 ಅವನು ಸಮಾಧಾನ ಬಲಿಯ ಗಂಡು ಕುರಿಮರಿಯ ಕೊಬ್ಬನ್ನ ತೆಗಿಯೋ ಹಾಗೇ ಈ ಹೆಣ್ಣು ಕುರಿಮರಿಯ ಎಲ್ಲ ಕೊಬ್ಬನ್ನ ತೆಗಿಬೇಕು, ಅದನ್ನೆಲ್ಲ ಯಜ್ಞವೇದಿ ಮೇಲೆ ಅರ್ಪಿಸಲಾದ ಯೆಹೋವನ ಅರ್ಪಣೆಗಳ ಮೇಲಿಟ್ಟು ಸುಡಬೇಕು.+ ಅದ್ರ ಹೊಗೆ ಮೇಲೆ ಹೋಗಬೇಕು. ಪುರೋಹಿತ ಆ ವ್ಯಕ್ತಿಯ ಪಾಪಕ್ಕಾಗಿ ಪ್ರಾಯಶ್ಚಿತ್ತ ಮಾಡಿದಾಗ ದೇವರು ಅವನ ಪಾಪವನ್ನ ಕ್ಷಮಿಸ್ತಾನೆ.+
5 ಯಾರಾದ್ರೂ ಪಾಪ ಮಾಡೋದನ್ನ ಒಬ್ಬ ನೋಡಿದ್ರೆ ಅಥವಾ ಅದ್ರ ಬಗ್ಗೆ ಏನಾದ್ರೂ ಅವನಿಗೆ ಗೊತ್ತಾದ್ರೆ ಅವನು ಅದಕ್ಕೆ ಸಾಕ್ಷಿ ಆಗಿದ್ದಾನೆ. ಪಾಪ ಮಾಡಿದ ವ್ಯಕ್ತಿ ವಿರುದ್ಧ ಸಾಕ್ಷಿ ಹೇಳಬೇಕು ಅನ್ನೋ ಪ್ರಕಟಣೆ* ಕೇಳಿಸ್ಕೊಂಡ ಮೇಲೂ+ ಅವನು ಬಂದು ಸಾಕ್ಷಿ ಹೇಳದಿದ್ರೆ ಅದು ಪಾಪ. ಆ ಪಾಪಕ್ಕಾಗಿ ಅವನಿಗೆ ಶಿಕ್ಷೆ ಆಗಬೇಕು.
2 ಸತ್ತುಹೋಗಿರೋ ಅಶುದ್ಧ ಕಾಡುಪ್ರಾಣಿನ, ಅಶುದ್ಧ ಸಾಕುಪ್ರಾಣಿನ, ಚಿಕ್ಕ ಅಶುದ್ಧ ಜೀವಿನ*+ ಹೀಗೆ ಅಶುದ್ಧವಾದ ಯಾವುದನ್ನೇ ಆಗ್ಲಿ ಮುಟ್ಟಿದವನು ಅಶುದ್ಧನಾಗ್ತಾನೆ, ಅಪರಾಧಿ ಆಗ್ತಾನೆ. ಅವನಿಗೆ ಅದು ಗೊತ್ತಿಲ್ಲದಿದ್ರೂ ಅಪರಾಧಿ ಆಗಿದ್ದಾನೆ. 3 ಮನುಷ್ಯ ದೇಹಕ್ಕೆ ಸಂಬಂಧಿಸಿದ ಯಾವುದೇ ಅಶುದ್ಧತೆಯನ್ನ+ ಅಥವಾ ತನ್ನನ್ನ ಅಶುದ್ಧನನ್ನಾಗಿ ಮಾಡೋ ಬೇರೆ ಏನನ್ನಾದ್ರೂ ಒಬ್ಬ ಗೊತ್ತಿಲ್ಲದೆ ಮುಟ್ಟಿ, ಆಮೇಲೆ ಗೊತ್ತಾದ್ರೆ ಅವನು ಅಪರಾಧಿ ಆಗ್ತಾನೆ.
4 ಒಳ್ಳೇದನ್ನಾಗ್ಲಿ ಕೆಟ್ಟದನ್ನಾಗ್ಲಿ ಮಾಡ್ತೀನಿ ಅಂತ ಒಬ್ಬ ದುಡುಕಿ ಮಾತುಕೊಟ್ಟು, ಆಮೇಲೆ ಹಿಂದೆ ಮುಂದೆ ಯೋಚ್ನೆ ಮಾಡ್ದೆ ಮಾತುಕೊಟ್ಟೆ ಅಂತ ಗೊತ್ತಾದ್ರೆ ಅವನು ಅಪರಾಧಿ ಆಗ್ತಾನೆ.*+
5 ಒಬ್ಬ ವ್ಯಕ್ತಿ ಇದ್ರಲ್ಲಿ ಯಾವ ಪಾಪ ಮಾಡಿ ಅಪರಾಧಿ ಆದ್ರೂ ತಾನು ಯಾವ ಪಾಪ ಮಾಡಿದ್ದಿನಿ ಅಂತ ಅವನು ಹೇಳಬೇಕು.+ 6 ಆ ಪಾಪಕ್ಕಾಗಿ ಒಂದು ಹೆಣ್ಣು ಕುರಿಮರಿ ಅಥವಾ ಹೆಣ್ಣು ಆಡುಮರಿಯನ್ನ ತಂದು ಯೆಹೋವನಿಗೆ ಅರ್ಪಿಸಲೂಬೇಕು.+ ಇದು ದೋಷಪರಿಹಾರಕ ಬಲಿ. ಆಗ ಅವನ ಪಾಪಕ್ಕಾಗಿ ಪುರೋಹಿತ ಪ್ರಾಯಶ್ಚಿತ್ತ ಮಾಡ್ತಾನೆ.
7 ಒಂದು ಕುರಿಯನ್ನ ತಗೊಳ್ಳೋಕೆ ಹಣ ಇಲ್ಲದಿದ್ರೆ ಅವನು ಎರಡು ಕಾಡುಪಾರಿವಾಳಗಳನ್ನ ಅಥವಾ ಪಾರಿವಾಳದ ಎರಡು ಮರಿಗಳನ್ನ+ ದೋಷಪರಿಹಾರಕ್ಕಾಗಿ ಯೆಹೋವನಿಗೆ ಕೊಡಬೇಕು. ಅವುಗಳಲ್ಲಿ ಒಂದನ್ನ ಪಾಪಪರಿಹಾರಕ ಬಲಿಗಾಗಿ, ಇನ್ನೊಂದನ್ನ ಸರ್ವಾಂಗಹೋಮ ಬಲಿಗಾಗಿ+ 8 ಪುರೋಹಿತನಿಗೆ ಕೊಡಬೇಕು. ಪಾಪಪರಿಹಾರಕ ಬಲಿಗಾಗಿ ತಂದ ಪಕ್ಷಿಯನ್ನ ಪುರೋಹಿತ ಮೊದ್ಲು ತಗೊಂಡು ಅದ್ರ ಕುತ್ತಿಗೆಯ ಮುಂಭಾಗವನ್ನ ಚಿವುಟಬೇಕು. ಆದ್ರೆ ತಲೆಯನ್ನ ದೇಹದಿಂದ ಬೇರೆ ಮಾಡಬಾರದು. 9 ಪುರೋಹಿತ ಆ ಪಕ್ಷಿಯ ಸ್ವಲ್ಪ ರಕ್ತನ ಯಜ್ಞವೇದಿಯ ಬದಿಗೆ ಚಿಮಿಕಿಸಿ ಉಳಿದ ರಕ್ತನ ಯಜ್ಞವೇದಿಯ ಬುಡದಲ್ಲಿ ಸುರಿಸಬೇಕು.+ ಇದು ಪಾಪಪರಿಹಾರಕ ಬಲಿ. 10 ಪುರೋಹಿತ ಇನ್ನೊಂದು ಪಕ್ಷಿನ ಸರ್ವಾಂಗಹೋಮ ಬಲಿಯಾಗಿ ಅರ್ಪಿಸಬೇಕು. ಸರ್ವಾಂಗಹೋಮ ಬಲಿಗಳನ್ನ ಯಾವಾಗ್ಲೂ ಅರ್ಪಿಸಬೇಕಾದ ಕ್ರಮದಲ್ಲೇ+ ಇದನ್ನೂ ಅರ್ಪಿಸಬೇಕು. ಆ ವ್ಯಕ್ತಿ ಮಾಡಿದ ಪಾಪಕ್ಕಾಗಿ ಪುರೋಹಿತ ಪ್ರಾಯಶ್ಚಿತ್ತ ಮಾಡ್ತಾನೆ, ದೇವರು ಆ ವ್ಯಕ್ತಿಯ ಪಾಪ ಕ್ಷಮಿಸ್ತಾನೆ.+
11 ಎರಡು ಕಾಡುಪಾರಿವಾಳ ಅಥವಾ ಎರಡು ಪಾರಿವಾಳ ಮರಿ ತಗೊಳೋಕೆ ಹಣ ಇಲ್ಲದವರು ಏಫಾ ಅಳತೆಯ ಹತ್ತನೇ ಒಂದು ಭಾಗದಷ್ಟು*+ ನುಣ್ಣಗಿನ ಹಿಟ್ಟನ್ನ ಪಾಪಪರಿಹಾರಕ ಅರ್ಪಣೆಯಾಗಿ ಕೊಡೋಕೆ ತರಬೇಕು. ಇದು ಪಾಪಪರಿಹಾರಕ ಅರ್ಪಣೆ ಆಗಿರೋದ್ರಿಂದ ಅದಕ್ಕೆ ಎಣ್ಣೆ ಸೇರಿಸಬಾರದು, ಅದ್ರ ಮೇಲೆ ಸಾಂಬ್ರಾಣಿ ಇಡಬಾರದು. 12 ಅವನು ಆ ಹಿಟ್ಟನ್ನ ಪುರೋಹಿತನಿಗೆ ಕೊಡಬೇಕು. ಪುರೋಹಿತ ಅದ್ರಿಂದ ಒಂದು ಹಿಡಿತುಂಬ ತಗೊಂಡು ಯಜ್ಞವೇದಿ ಮೇಲೆ ಅರ್ಪಿಸಿದ ಯೆಹೋವನ ಅರ್ಪಣೆಗಳ ಮೇಲಿಟ್ಟು ಸುಡಬೇಕು. ಅದ್ರಿಂದ ಹೊಗೆ ಮೇಲೆ ಹೋಗಬೇಕು. ಇದು ಎಲ್ಲ ಹಿಟ್ಟನ್ನ ಅರ್ಪಿಸಿದ್ದಾರೆ ಅಂತ ಸೂಚಿಸುತ್ತೆ. ಇದು ಪಾಪಪರಿಹಾರಕ ಅರ್ಪಣೆ. 13 ಈ ಮುಂಚೆ ಹೇಳಿದ ಪಾಪಗಳಲ್ಲಿ ಯಾವುದನ್ನೇ ಅವನು ಮಾಡಿರಲಿ ಆ ಪಾಪಕ್ಕಾಗಿ ಪುರೋಹಿತ ಪ್ರಾಯಶ್ಚಿತ್ತ ಮಾಡ್ತಾನೆ. ಆಗ ದೇವರು ಅವನ ಪಾಪ ಕ್ಷಮಿಸ್ತಾನೆ.+ ಧಾನ್ಯ ಅರ್ಪಣೆಯಲ್ಲಿ ಉಳಿದಿದ್ದು ಹೇಗೆ ಪುರೋಹಿತನಿಗೆ ಸೇರುತ್ತೋ+ ಅದೇ ತರ ಈ ಅರ್ಪಣೆಯಲ್ಲಿ ಉಳಿದಿದ್ದು ಪುರೋಹಿತನಿಗೆ ಸೇರುತ್ತೆ.’”+
14 ಯೆಹೋವ ಮೋಶೆ ಜೊತೆ ಮಾತು ಮುಂದುವರಿಸಿ ಹೀಗಂದನು: 15 “ಒಬ್ಬ ಯೆಹೋವನ ಪವಿತ್ರ ವಸ್ತುಗಳ ವಿಷ್ಯದಲ್ಲಿ ಗೊತ್ತಿಲ್ಲದೆ ಪಾಪಮಾಡಿ ನಂಬಿಕೆ ದ್ರೋಹ ಮಾಡಿದ್ರೆ+ ಅವನು ಯಾವುದೇ ದೋಷ ಇಲ್ಲದ ಒಂದು ಟಗರನ್ನ ದೋಷಪರಿಹಾರಕ ಬಲಿಯಾಗಿ ಯೆಹೋವನಿಗೆ ಅರ್ಪಿಸಬೇಕು.+ ಪುರೋಹಿತ ಹೇಳುವಷ್ಟೇ ಬೆಳ್ಳಿಯ ಶೆಕೆಲ್* ಮೌಲ್ಯದ ಟಗರನ್ನ ತರಬೇಕು. ಆ ಶೆಕೆಲ್ ಮೌಲ್ಯ ಆರಾಧನಾ ಸ್ಥಳದ ತೂಕದ ಪ್ರಕಾರ* ಇರಬೇಕು.+ 16 ಅವನು ಯಾವ ಪವಿತ್ರ ವಸ್ತುಗಳ ವಿಷ್ಯದಲ್ಲಿ ಪಾಪ ಮಾಡಿದ್ದಾನೊ ಆ ವಸ್ತುಗಳ ಬೆಲೆ ಕೊಡಬೇಕು. ಅದ್ರ ಜೊತೆ ಆ ಬೆಲೆಯ ಐದನೇ ಒಂದು ಭಾಗ ಸಹ ಸೇರಿಸಿ ಕೊಡಬೇಕು.+ ಅವನು ಈ ಬೆಲೆಯನ್ನ ದೋಷಪರಿಹಾರಕ ಬಲಿಯಾಗಿ ಅರ್ಪಿಸೋ ಟಗರಿನ ಜೊತೆ ಪುರೋಹಿತನಿಗೆ ಕೊಡಬೇಕು. ಅವನಿಗಾಗಿ ಪುರೋಹಿತ ಪ್ರಾಯಶ್ಚಿತ್ತ ಮಾಡ್ತಾನೆ.+ ಆಗ ದೇವರು ಅವನ ಪಾಪ ಕ್ಷಮಿಸ್ತಾನೆ.+
17 ಮಾಡಬಾರದು ಅಂತ ಯೆಹೋವ ಹೇಳಿರೋ ಒಂದು ಪಾಪವನ್ನ ಒಬ್ಬ ಮಾಡಿದ್ರೆ, ಅದು ಅವನಿಗೆ ಗೊತ್ತಿಲ್ಲದೇ ಇದ್ರೂ ಅವನು ಅಪರಾಧಿನೇ. ಆ ಪಾಪಕ್ಕಾಗಿ ಅವನಿಗೆ ಶಿಕ್ಷೆ ಆಗಬೇಕು.+ 18 ಅವನು ದೋಷಪರಿಹಾರಕ ಬಲಿಗಾಗಿ ಒಂದು ಟಗರನ್ನ ತರಬೇಕು. ಪುರೋಹಿತ ನಿರ್ಧರಿಸೋ ಬೆಲೆಯ ಟಗರನ್ನ ಅವನು ಕೊಡಬೇಕು. ಅದ್ರಲ್ಲಿ ಯಾವುದೇ ದೋಷ ಇರಬಾರದು.+ ಆಮೇಲೆ ಪುರೋಹಿತ ಆ ವ್ಯಕ್ತಿ ಗೊತ್ತಿಲ್ಲದೆ ಮಾಡಿದ ಪಾಪಕ್ಕಾಗಿ ಪ್ರಾಯಶ್ಚಿತ್ತ ಮಾಡ್ತಾನೆ. ಆಗ ದೇವರು ಅವನನ್ನ ಕ್ಷಮಿಸ್ತಾನೆ. 19 ಅವನು ಯೆಹೋವನ ವಿರುದ್ಧ ಪಾಪ ಮಾಡಿ ಅಪರಾಧಿ ಆಗಿರೋದ್ರಿಂದ ಈ ದೋಷಪರಿಹಾರಕ ಬಲಿ ಅರ್ಪಿಸಬೇಕು.”
6 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ 2 “ಒಬ್ಬ ತನ್ನ ವಶಕ್ಕೆ ನೆರೆಯವನು ಕೊಟ್ಟ ಅಥವಾ ಅಡವಿಟ್ಟ ವಸ್ತುವಿನ ವಿಷ್ಯದಲ್ಲಿ ಮೋಸ ಮಾಡಿದ್ರೆ,+ ಬೇರೆಯವರಿಂದ ಸುಲಿಗೆ ಮಾಡಿದ್ರೆ, ನೆರೆಯವನನ್ನ ವಂಚಿಸಿದ್ರೆ ಅದು ಪಾಪ. ಹಾಗೆ ಮಾಡಿದ್ರೆ ಅವನು ಯೆಹೋವನಿಗೆ ನಂಬಿಗಸ್ತನಾಗಿ ನಡ್ಕೊಂಡಿಲ್ಲ.+ 3 ಬೇರೆಯವರು ಕಳ್ಕೊಂಡಿದ್ದು ಸಿಕ್ಕಿದಾಗ ಅದ್ರ ಬಗ್ಗೆ ಸುಳ್ಳು ಹೇಳಿದ್ರೂ ಅದು ಪಾಪನೇ. ಈ ಪಾಪಗಳಲ್ಲಿ ಯಾವುದನ್ನಾದ್ರೂ ಮಾಡಿ ‘ನಾನು ಮಾಡ್ಲೇ ಇಲ್ಲ’ ಅಂತ ಸುಳ್ಳು ಆಣೆ ಇಟ್ರೆ ಅದೂ ಪಾಪಾನೇ.+ ಹಾಗೆ ಮಾಡಿದ್ರೆ ಅವನು ದೇವರಿಗೆ ನಂಬಿಗಸ್ತನಾಗಿಲ್ಲ. 4 ದೇವರ ಮುಂದೆ ಅವನು ಅಪರಾಧಿ. ತಾನು ಕದ್ದದ್ದನ್ನ ಅಥವಾ ಬಲವಂತವಾಗಿ ಕಿತ್ಕೊಂಡಿದ್ದನ್ನ ಅಥವಾ ಮೋಸದಿಂದ ತಗೊಂಡಿದ್ದನ್ನ ಹಿಂದೆ ಕೊಡಬೇಕು. ಅವನ ವಶಕ್ಕೆ ನೆರೆಯವನು ಕೊಟ್ಟಿದ್ದನ್ನ ಅಥವಾ ಅವನಿಗೆ ಸಿಕ್ಕಿದ ಬೇರೆಯವರ ವಸ್ತುನ ವಾಪಸ್ ಕೊಡಬೇಕು. 5 ಯಾವುದನ್ನ ತಗೊಂಡೇ ಇಲ್ಲ ಅಂತ ಸುಳ್ಳು ಪ್ರಮಾಣ ಮಾಡಿದ್ನೋ ಅದಕ್ಕೆ ಪೂರ್ತಿ ನಷ್ಟಭರ್ತಿ ಮಾಡಬೇಕು.+ ಜೊತೆಗೆ ಅದ್ರ ಬೆಲೆಯ ಐದನೇ ಒಂದು ಭಾಗ ಕೂಡ ಸೇರಿಸಿ ಕೊಡಬೇಕು. ಅವನು ತಪ್ಪು ಮಾಡಿದ್ದಾನೆ ಅಂತ ಸಾಬೀತಾದ ದಿನಾನೇ ಅದನ್ನ ಅದ್ರ ಯಜಮಾನನಿಗೆ ಕೊಡಬೇಕು. 6 ಅಷ್ಟೇ ಅಲ್ಲ ಅವನು ದೋಷಪರಿಹಾರಕ ಬಲಿಯಾಗಿ ಯೆಹೋವನಿಗೆ ಅರ್ಪಿಸೋಕೆ ಒಂದು ಟಗರನ್ನ ತಂದು ಪುರೋಹಿತನಿಗೆ ಕೊಡಬೇಕು. ಪುರೋಹಿತ ನಿರ್ಧರಿಸಿದ ಬೆಲೆಯ ಟಗರನ್ನ ಅವನು ತರಬೇಕು. ಅದ್ರಲ್ಲಿ ಯಾವುದೇ ದೋಷ ಇರಬಾರದು.+ 7 ಪುರೋಹಿತ ಅವನಿಗಾಗಿ ಯೆಹೋವ ದೇವರ ಮುಂದೆ ಪ್ರಾಯಶ್ಚಿತ್ತ ಮಾಡಬೇಕು. ಅವನು ಯಾವುದೇ ವಿಷ್ಯದಲ್ಲಿ ಅಪರಾಧಿ ಆಗಿದ್ರೂ ಆಗ ದೇವರು ಕ್ಷಮಿಸ್ತಾನೆ.”+
8 ಯೆಹೋವ ಮೋಶೆಗೆ ಮತ್ತೂ ಏನು ಹೇಳಿದನಂದ್ರೆ 9 “ಆರೋನನಿಗೆ, ಅವನ ಮಕ್ಕಳಿಗೆ ಹೀಗೆ ಆಜ್ಞೆ ಕೊಡು: ‘ಸರ್ವಾಂಗಹೋಮ ಬಲಿಯ ನಿಯಮಗಳು+ ಯಾವುದಂದ್ರೆ, ಸರ್ವಾಂಗಹೋಮ ಬಲಿ ಇಡೀ ರಾತ್ರಿಯಿಂದ ಬೆಳಿಗ್ಗೆ ತನಕ ಯಜ್ಞವೇದಿ ಮೇಲೆ ಉರಿತಾ ಇರಬೇಕು. ಯಜ್ಞವೇದಿ ಮೇಲೆ ಬೆಂಕಿ ಯಾವಾಗ್ಲೂ ಉರಿತಾ ಇರಬೇಕು. 10 ಪುರೋಹಿತ ನಾರುಬಟ್ಟೆಯಿಂದ ತಯಾರಿಸಿದ ಬಟ್ಟೆ ಹಾಕಬೇಕು.+ ಅವನ ಗುಪ್ತಾಂಗಗಳು ಕಾಣದ ಹಾಗೆ ನಾರಿನ ಚಡ್ಡಿ*+ ಹಾಕಬೇಕು. ಆಮೇಲೆ ಅವನು ಯಜ್ಞವೇದಿ ಮೇಲೆ ಬೆಂಕಿಯಿಂದ ಸುಟ್ಟುಹೋದ ಸರ್ವಾಂಗಹೋಮ ಬಲಿಯ ಬೂದಿ ತೆಗೆದು+ ಯಜ್ಞವೇದಿ ಪಕ್ಕಕ್ಕೆ ಹಾಕಬೇಕು. 11 ಆಮೇಲೆ ಆ ಬಟ್ಟೆ ಬಿಚ್ಚಿ+ ಬೇರೆ ಬಟ್ಟೆ ಹಾಕೊಂಡು ಆ ಬೂದಿಯನ್ನ ಪಾಳೆಯದ ಹೊರಗೆ ಶುದ್ಧವಾದ ಒಂದು ಸ್ಥಳಕ್ಕೆ ತಗೊಂಡು ಹೋಗಿ ಹಾಕಬೇಕು.+ 12 ಯಜ್ಞವೇದಿ ಮೇಲಿನ ಬೆಂಕಿ ಆರಿಹೋಗಬಾರದು, ಉರಿತಾ ಇರಬೇಕು. ಪ್ರತಿದಿನ ಬೆಳಿಗ್ಗೆ ಪುರೋಹಿತ ಆ ಬೆಂಕಿ ಮೇಲೆ ಕಟ್ಟಿಗೆಗಳನ್ನ ಇಡಬೇಕು,+ ಅದ್ರ ಮೇಲೆ ಸರ್ವಾಂಗಹೋಮ ಬಲಿಯ ಪ್ರಾಣಿಯ ತುಂಡುಗಳನ್ನ ಜೋಡಿಸಿಡಬೇಕು. ಅದ್ರ ಮೇಲೆ ಸಮಾಧಾನ ಬಲಿಯ ಪ್ರಾಣಿಗಳ ಕೊಬ್ಬು ಇಟ್ಟು ಸುಡಬೇಕು. ಅದ್ರ ಹೊಗೆ ಮೇಲೆ ಹೋಗಬೇಕು.+ 13 ಯಜ್ಞವೇದಿ ಮೇಲೆ ಬೆಂಕಿ ಯಾವಾಗ್ಲೂ ಉರಿತಾ ಇರಬೇಕು, ಆರಿಹೋಗಬಾರದು.
14 ಧಾನ್ಯ ಅರ್ಪಣೆಯ ನಿಯಮಗಳು+ ಯಾವುದಂದ್ರೆ, ಆರೋನನ ಮಕ್ಕಳು ಧಾನ್ಯ ಅರ್ಪಣೆಯನ್ನ ಯೆಹೋವನ ಮುಂದೆ ಯಜ್ಞವೇದಿ ಎದುರಿಗೆ ತರಬೇಕು. 15 ಅವ್ರಲ್ಲಿ ಒಬ್ಬ ಧಾನ್ಯ ಅರ್ಪಣೆಯ ನುಣ್ಣಗಿನ ಹಿಟ್ಟಿಂದ ಎಣ್ಣೆ ಬೆರೆತ ಹಿಟ್ಟನ್ನ ಮತ್ತು ಅದ್ರ ಮೇಲಿರೋ ಎಲ್ಲ ಸಾಂಬ್ರಾಣಿಯನ್ನ ಒಂದು ಹಿಡಿತುಂಬ ತಗೊಂಡು ಯಜ್ಞವೇದಿ ಮೇಲೆ ಅರ್ಪಿಸಬೇಕು. ಇದು ಧಾನ್ಯ ಅರ್ಪಣೆಯನ್ನ ಪೂರ್ತಿಯಾಗಿ ಅರ್ಪಿಸಿದ್ದಾರೆ ಅಂತ ಸೂಚಿಸುತ್ತೆ. ಅದ್ರಿಂದ ಮೇಲೇರೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ.+ 16 ಉಳಿದ ಹಿಟ್ಟು ಆರೋನನಿಗೆ ಅವನ ಮಕ್ಕಳಿಗೆ ಸೇರುತ್ತೆ.+ ಆ ಹಿಟ್ಟಿಂದ ಹುಳಿ ಇಲ್ಲದ ರೊಟ್ಟಿಗಳನ್ನ ಮಾಡಿ ಪವಿತ್ರವಾದ ಒಂದು ಜಾಗದಲ್ಲಿ ಅಂದ್ರೆ ದೇವದರ್ಶನ ಡೇರೆಯ ಅಂಗಳದಲ್ಲಿ ತಿನ್ನಬೇಕು.+ 17 ರೊಟ್ಟಿಗಳನ್ನ ಮಾಡುವಾಗ ಸ್ವಲ್ಪನೂ ಹುಳಿ ಬೆರೆಸಬಾರದು.+ ಬೆಂಕಿಯಲ್ಲಿ ನನಗೆ ಕೊಟ್ಟ ಅರ್ಪಣೆಗಳಿಂದ ಅವರಿಗೆ ಈ ಪಾಲನ್ನ ಕೊಟ್ಟಿದ್ದೀನಿ.+ ಇದು ಪಾಪಪರಿಹಾರಕ ಬಲಿ ತರ, ದೋಷಪರಿಹಾರಕ ಬಲಿ ತರ ಅತಿ ಪವಿತ್ರ.+ 18 ಆರೋನನ ವಂಶದ ಪ್ರತಿಯೊಬ್ಬ ಪುರುಷ ಅದನ್ನ ತಿನ್ನಬೇಕು.+ ಬೆಂಕಿಯಲ್ಲಿ ಯೆಹೋವನಿಗೆ ಕೊಡಲಾದ ಅರ್ಪಣೆಗಳಿಂದ ಅವರಿಗೆ ಆ ಪಾಲು ಸಿಗಬೇಕು. ಈ ರೀತಿ ಅವರಿಗೆ ತಲೆಮಾರು ತಲೆಮಾರುಗಳ ತನಕ ಪಾಲು ಸಿಗಬೇಕು.+ ಆ ಅರ್ಪಣೆಗಳನ್ನ ಮಾಡೋಕೆ ಬಳಸೋ ವಸ್ತುಗಳೆಲ್ಲ ಪವಿತ್ರವಾಗುತ್ತೆ.’”
19 ಯೆಹೋವ ಮೋಶೆಗೆ ಇನ್ನೂ ಹೇಳಿದ್ದೇನಂದ್ರೆ 20 “ಆರೋನನನ್ನ ಮಹಾ ಪುರೋಹಿತನಾಗಿ ಅಭಿಷೇಕಿಸೋ+ ದಿನ ಅವನು ಏಫಾ ಅಳತೆಯ ಹತ್ತನೇ ಒಂದು ಭಾಗದಷ್ಟು*+ ನುಣ್ಣಗಿನ ಹಿಟ್ಟನ್ನ ಯೆಹೋವನಿಗೆ ಅರ್ಪಿಸೋಕೆ ತರಬೇಕು. ಅದ್ರಲ್ಲಿ ಅರ್ಧ ಭಾಗನ ಬೆಳಿಗ್ಗೆ, ಇನ್ನು ಅರ್ಧ ಭಾಗನ ಸಂಜೆ ಅರ್ಪಿಸಬೇಕು. ಮುಂದೆ ಆರೋನನ ಮಕ್ಕಳಲ್ಲಿ ಮಹಾ ಪುರೋಹಿತ ತನ್ನನ್ನ ಅಭಿಷೇಕಿಸೋ ದಿನ ಇದೇ ತರ ಅರ್ಪಣೆಯನ್ನ ಕೊಡಬೇಕು.+ 21 ಅರ್ಪಿಸೋ ಮೊದ್ಲು ಹಿಟ್ಟಿಗೆ ಎಣ್ಣೆ ಬೆರೆಸಿ ನಾದಿ ಹಂಚಿನ ಮೇಲೆ ಸುಟ್ಟಿರಬೇಕು.+ ಅದನ್ನ ಚೂರುಚೂರು ಮಾಡಿ ಚೆನ್ನಾಗಿ ಎಣ್ಣೆ ಹಾಕಿ ಯೆಹೋವನ ಮುಂದೆ ತರಬೇಕು. ಇದ್ರ ಸುವಾಸನೆಯಿಂದ ಆತನಿಗೆ ಸಂತೋಷ* ಆಗುತ್ತೆ. 22 ಆರೋನನ ನಂತ್ರ ಅವನ ಮಕ್ಕಳಲ್ಲಿ ಯಾರಿಗೆ ಮಹಾ ಪುರೋಹಿತನಾಗಿ ಅಭಿಷೇಕ ಆಗುತ್ತೋ+ ಅವನು ಈ ಧಾನ್ಯ ಅರ್ಪಣೆಯನ್ನ ಕೊಡಬೇಕು. ಈ ಇಡೀ ಧಾನ್ಯ ಅರ್ಪಣೆಯನ್ನ ಸುಡೋ ಮೂಲಕ ಯೆಹೋವನಿಗೆ ಅರ್ಪಿಸಬೇಕು. ಅದ್ರ ಹೊಗೆ ಮೇಲೇ ಹೋಗಬೇಕು. ಇದು ಶಾಶ್ವತ ನಿಯಮ. 23 ಹೀಗೆ ಪ್ರತಿಯೊಬ್ಬ ಮಹಾ ಪುರೋಹಿತನನ್ನ ಅಭಿಷೇಕಿಸುವಾಗ ಅವನು ಕೊಡೋ ಧಾನ್ಯ ಅರ್ಪಣೆಯನ್ನ ಪೂರ್ತಿಯಾಗಿ ಸುಡಬೇಕು. ಅದನ್ನ ತಿನ್ನಬಾರದು.”
24 ಯೆಹೋವ ಮೋಶೆ ಜೊತೆ ಮತ್ತೆ ಮಾತಾಡಿ ಹೀಗಂದನು: 25 “ಆರೋನನಿಗೆ, ಅವನ ಮಕ್ಕಳಿಗೆ ಹೀಗೆ ಹೇಳು: ‘ಪಾಪಪರಿಹಾರಕ ಬಲಿಯ ನಿಯಮಗಳು+ ಯಾವದಂದ್ರೆ, ಯೆಹೋವನ ಮುಂದೆ ಸರ್ವಾಂಗಹೋಮ ಬಲಿಯ ಪ್ರಾಣಿ ಕಡಿಯೋ ಜಾಗದಲ್ಲೇ+ ಪಾಪಪರಿಹಾರಕ ಬಲಿಯ ಪ್ರಾಣಿಯನ್ನೂ ಕಡಿಬೇಕು. ಈ ಪಾಪಪರಿಹಾರಕ ಬಲಿ ಅತಿ ಪವಿತ್ರವಾಗಿದೆ. 26 ಪಾಪಪರಿಹಾರಕ್ಕಾಗಿ ಆ ಪ್ರಾಣಿನ ಅರ್ಪಿಸೋ ಪುರೋಹಿತ ಅದ್ರ ಮಾಂಸ ತಿನ್ನಬೇಕು.+ ಇದನ್ನ ಪವಿತ್ರವಾದ ಒಂದು ಜಾಗದಲ್ಲಿ ಅಂದ್ರೆ ದೇವದರ್ಶನ ಡೇರೆಯ ಅಂಗಳದಲ್ಲಿ ತಿನ್ನಬೇಕು.+
27 ಆ ಪ್ರಾಣಿಯ ಬಲಿಗಾಗಿ ಉಪಯೋಗಿಸೋ ಎಲ್ಲ ವಸ್ತುಗಳು ಪವಿತ್ರವಾಗುತ್ತೆ. ಪುರೋಹಿತನ ಬಟ್ಟೆ ಮೇಲೆ ಆ ಪ್ರಾಣಿಯ ರಕ್ತ ಬಿದ್ರೆ ಆ ಬಟ್ಟೆಯನ್ನ ಪವಿತ್ರವಾದ ಒಂದು ಜಾಗದಲ್ಲಿ* ತೊಳಿಬೇಕು. 28 ಆ ಪ್ರಾಣಿಯ ಮಾಂಸನ ಮಣ್ಣಿನ ಪಾತ್ರೆಯಲ್ಲಿ ಬೇಯಿಸಿದ್ರೆ ಆ ಪಾತ್ರೆಯನ್ನ ಒಡೆದುಬಿಡಬೇಕು. ತಾಮ್ರದ ಪಾತ್ರೆಯಲ್ಲಿ ಬೇಯಿಸಿದ್ರೆ ಆ ಪಾತ್ರೆಯನ್ನ ಚೆನ್ನಾಗಿ ತಿಕ್ಕಿ ನೀರಲ್ಲಿ ತೊಳಿಬೇಕು.
29 ಪುರೋಹಿತರಾಗಿ ಸೇವೆ ಮಾಡೋರು ಮಾತ್ರ ಆ ಪಾಪಪರಿಹಾರಕ ಬಲಿಯ ಪ್ರಾಣಿಯ ಮಾಂಸ ತಿನ್ನಬೇಕು.+ ಆ ಬಲಿ ಅತಿ ಪವಿತ್ರವಾಗಿದೆ.+ 30 ಆದ್ರೆ ಪ್ರಾಯಶ್ಚಿತ್ತ ಮಾಡೋಕೆ ಪಾಪಪರಿಹಾರಕ ಬಲಿಯ ಪ್ರಾಣಿಯ ರಕ್ತನ ದೇವದರ್ಶನ ಡೇರೆಯ ಒಳಗೆ ಪವಿತ್ರ ಜಾಗದಲ್ಲಿ+ ತಂದ್ರೆ ಆ ಪ್ರಾಣಿಯ ಮಾಂಸ ತಿನ್ನಬಾರದು. ಅದನ್ನ ಬೆಂಕಿಯಿಂದ ಸುಟ್ಟುಬಿಡಬೇಕು.
7 ದೋಷಪರಿಹಾರಕ ಬಲಿ ಅರ್ಪಿಸುವಾಗ ಪಾಲಿಸಬೇಕಾದ ನಿಯಮಗಳು:+ ಆ ಬಲಿ ಅತಿ ಪವಿತ್ರ. 2 ಸರ್ವಾಂಗಹೋಮ ಬಲಿಯ ಪ್ರಾಣಿಯನ್ನ ಕಡಿಯೋ ಸ್ಥಳದಲ್ಲೇ ದೋಷಪರಿಹಾರಕ ಬಲಿಯ ಪ್ರಾಣಿಯನ್ನೂ ಕಡಿಬೇಕು. ಅದ್ರ ರಕ್ತವನ್ನ+ ಯಜ್ಞವೇದಿಯ ಎಲ್ಲ ಬದಿಗಳಿಗೆ ಚಿಮಿಕಿಸಬೇಕು.+ 3 ಪುರೋಹಿತ ಆ ಪ್ರಾಣಿಯ ಎಲ್ಲ ಕೊಬ್ಬು ತೆಗಿಬೇಕು.+ ಕೊಬ್ಬಿರೋ ಬಾಲ, ಕರುಳುಗಳ ಸುತ್ತಲಿರೋ ಕೊಬ್ಬು, 4 ಎರಡು ಮೂತ್ರಪಿಂಡಗಳು, ಅವುಗಳ ಕೊಬ್ಬು ಅಂದ್ರೆ ಸೊಂಟದ ಹತ್ರ ಇರೋ ಕೊಬ್ಬನ್ನ ತೆಗಿಬೇಕು. ಮೂತ್ರಪಿಂಡಗಳ ಜೊತೆ ಪಿತ್ತಜನಕಾಂಗದ ಮೇಲಿರೋ ಕೊಬ್ಬನ್ನೂ ತೆಗಿಬೇಕು.+ 5 ಪುರೋಹಿತ ಅದನ್ನ ಯಜ್ಞವೇದಿ ಮೇಲಿನ ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸಬೇಕು. ಅದ್ರ ಹೊಗೆ ಮೇಲೆ ಹೋಗಬೇಕು.+ ಅದು ದೋಷಪರಿಹಾರಕ ಬಲಿ. 6 ಪುರೋಹಿತರಾಗಿ ಸೇವೆ ಮಾಡೋರು ಮಾತ್ರ ಆ ಪ್ರಾಣಿಯ ಮಾಂಸ ತಿನ್ನಬೇಕು.+ ಅದನ್ನ ಪವಿತ್ರವಾದ ಒಂದು ಜಾಗದಲ್ಲಿ* ತಿನ್ನಬೇಕು. ಅದು ಅತಿ ಪವಿತ್ರ.+ 7 ಪಾಪಪರಿಹಾರಕ ಬಲಿಯನ್ನ ಅರ್ಪಿಸುವಾಗ ಪಾಲಿಸೋ ನಿಯಮಗಳನ್ನೇ ದೋಷಪರಿಹಾರಕ ಬಲಿ ಅರ್ಪಿಸುವಾಗ್ಲೂ ಪಾಲಿಸಬೇಕು. ಪ್ರಾಯಶ್ಚಿತ್ತ ಮಾಡೋಕೆ ಬಲಿಯನ್ನ ಅರ್ಪಿಸೋ ಪುರೋಹಿತನಿಗೇ ಆ ಬಲಿಯ ಮಾಂಸ ಸಿಗಬೇಕು.+
8 ಯಾರಾದ್ರೂ ಸರ್ವಾಂಗಹೋಮ ಬಲಿಗಾಗಿ ಪ್ರಾಣಿ ತಂದ್ರೆ ಅದ್ರ ಚರ್ಮ+ ಆ ಪ್ರಾಣಿಯನ್ನ ಅರ್ಪಿಸೋ ಪುರೋಹಿತನಿಗೆ ಸಿಗಬೇಕು.
9 ಯಾರಾದ್ರೂ ಒಲೆ, ಬಾಂಡ್ಲಿ ಅಥವಾ ಹೆಂಚಿನಲ್ಲಿ ಸುಟ್ಟಿರೋದನ್ನ ಧಾನ್ಯ ಅರ್ಪಣೆಯಾಗಿ+ ಕೊಟ್ರೆ ಅದ್ರಲ್ಲಿ ಉಳಿಯೋದೆಲ್ಲ ಆ ಅರ್ಪಣೆ ಮಾಡೋ ಪುರೋಹಿತನಿಗೆ ಸಿಗಬೇಕು.+ 10 ಆದ್ರೆ ಎಣ್ಣೆ ಬೆರೆಸಿದ+ ಅಥವಾ ಎಣ್ಣೆ ಬೆರೆಸಿರದ+ ಹಿಟ್ಟನ್ನ ಯಾರಾದ್ರೂ ಧಾನ್ಯ ಅರ್ಪಣೆಯಾಗಿ ಕೊಟ್ರೆ ಅದ್ರಲ್ಲಿ ಉಳಿಯೋದೆಲ್ಲ ಆರೋನನ ಎಲ್ಲ ಮಕ್ಕಳು ಸರಿಸಮಾನವಾಗಿ ಹಂಚ್ಕೊಳ್ಳಬೇಕು.
11 ಯೆಹೋವನಿಗೆ ಸಮಾಧಾನ ಬಲಿ ಅರ್ಪಿಸುವಾಗ ಪಾಲಿಸಬೇಕಾದ ನಿಯಮಗಳು:+ 12 ಒಬ್ಬ ಕೃತಜ್ಞತೆ ತೋರಿಸೋಕೆ ಸಮಾಧಾನ ಬಲಿಯನ್ನ ಅರ್ಪಿಸೋದಾದ್ರೆ+ ಅವನು ಆ ಕೃತಜ್ಞತಾ ಬಲಿಯ ಪ್ರಾಣಿಯನ್ನ ಹಾಗೂ ಎಣ್ಣೆ ಬೆರೆಸಿ ಮಾಡಿದ ಬಳೆಯಾಕಾರದ ಹುಳಿಯಿಲ್ಲದ ರೊಟ್ಟಿಗಳನ್ನ, ಎಣ್ಣೆ ಸವರಿದ ಹುಳಿಯಿಲ್ಲದ ತೆಳುವಾದ ರೊಟ್ಟಿಗಳನ್ನ, ಎಣ್ಣೆ ಬೆರೆಸಿ ಚೆನ್ನಾಗಿ ನಾದಿದ ನುಣ್ಣಗಿನ ಹಿಟ್ಟಿಂದ ಮಾಡಿದ ಬಳೆಯಾಕಾರದ ರೊಟ್ಟಿಗಳನ್ನ ಕೊಡಬೇಕು. 13 ಅಲ್ಲದೇ ಕೃತಜ್ಞತೆ ತೋರಿಸೋಕೆ ಕೊಟ್ಟ ಸಮಾಧಾನ ಬಲಿ ಜೊತೆ ಹುಳಿ ಬೆರೆಸಿದ ಬಳೆಯಾಕಾರದ ರೊಟ್ಟಿಗಳನ್ನೂ ಕೊಡಬೇಕು. 14 ಅವನು ಪ್ರತಿಯೊಂದು ವಿಧದ ರೊಟ್ಟಿಗಳಲ್ಲಿ ಒಂದೊಂದನ್ನ ತೆಗೆದು ಅರ್ಪಿಸೋಕೆ ಕೊಡಬೇಕು. ಅದು ಯೆಹೋವನಿಗೆ ಕೊಡೋ ಪವಿತ್ರ ಪಾಲು. ಅದು ಸಮಾಧಾನ ಬಲಿಗಳ ರಕ್ತ ಚಿಮಿಕಿಸೋ ಪುರೋಹಿತನಿಗೆ ಸಿಗಬೇಕು.+ 15 ಕೃತಜ್ಞತೆ ತೋರಿಸೋಕೆ ಕೊಟ್ಟ ಸಮಾಧಾನ ಬಲಿಯ ಪ್ರಾಣಿನ ಅರ್ಪಿಸಿದ ದಿನಾನೇ ಅದ್ರ ಮಾಂಸ ತಿನ್ನಬೇಕು. ಅದ್ರಲ್ಲಿ ಏನನ್ನೂ ಮಾರನೇ ದಿನ ಬೆಳಿಗ್ಗೆ ತನಕ ಉಳಿಸಬಾರದು.+
16 ಒಬ್ಬ ಸಮಾಧಾನ ಬಲಿನ ಹರಕೆಯಾಗಿ+ ಅಥವಾ ಸ್ವಇಷ್ಟದಿಂದ ಕೊಟ್ರೆ+ ಅದನ್ನ ಕೊಡೋ ದಿನಾನೇ ಅದ್ರ ಮಾಂಸ ತಿನ್ನಬೇಕು. ಉಳಿದದ್ದನ್ನ ಮಾರನೇ ದಿನಾನೂ ತಿನ್ನಬಹುದು. 17 ಆದ್ರೆ ಆ ಬಲಿಯ ಮಾಂಸ ಮೂರನೇ ದಿನದ ತನಕ ಉಳಿದ್ರೆ ಬೆಂಕಿಯಿಂದ ಸುಟ್ಟು ಹಾಕಬೇಕು.+ 18 ಆ ಬಲಿಯ ಮಾಂಸವನ್ನ ಮೂರನೇ ದಿನ ತಿಂದ್ರೆ ಅದು ಅಸಹ್ಯ. ಆ ಬಲಿ ಅರ್ಪಿಸಿದವನನ್ನ ದೇವರು ಮೆಚ್ಚಲ್ಲ. ಆಶೀರ್ವಾದ ಮಾಡಲ್ಲ. ಆ ಮಾಂಸ ತಿಂದವನಿಗೆ ಶಿಕ್ಷೆಯಾಗಬೇಕು.+ 19 ಅಶುದ್ಧವಾದ ಯಾವುದಕ್ಕಾದ್ರೂ ಆ ಮಾಂಸ ತಗಲಿದ್ರೆ ಅದನ್ನ ತಿನ್ನಬಾರದು, ಬೆಂಕಿಯಲ್ಲಿ ಸುಟ್ಟು ಹಾಕಬೇಕು. ಶುದ್ಧ ಮಾಂಸವನ್ನ ಶುದ್ಧನಾಗಿರೋನು ತಿನ್ನಬಹುದು.
20 ಯೆಹೋವನಿಗಾಗಿ ಅರ್ಪಿಸಿದ ಸಮಾಧಾನ ಬಲಿಯ ಮಾಂಸವನ್ನ ಅಶುದ್ಧ ಆಗಿರೋ ವ್ಯಕ್ತಿ ತಿಂದ್ರೆ ಅವನನ್ನ ಸಾಯಿಸಬೇಕು.+ 21 ಒಬ್ಬನು ಅಶುದ್ಧ ವ್ಯಕ್ತಿ,+ ಅಶುದ್ಧ ಪ್ರಾಣಿ,+ ಅಶುದ್ಧವಾದ ಹೊಲಸಾದ ವಸ್ತುವನ್ನ+ ಮುಟ್ಟಿ ಯೆಹೋವನಿಗೆ ಅರ್ಪಿಸಲಾದ ಸಮಾಧಾನ ಬಲಿಯ ಮಾಂಸ ತಿಂದ್ರೆ ಅವನನ್ನ ಸಾಯಿಸಬೇಕು.’”
22 ಯೆಹೋವ ಇನ್ನೂ ಮೋಶೆಗೆ ಹೇಳೋದು ಏನಂದ್ರೆ 23 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಹೋರಿ, ಎಳೇ ಟಗರು ಅಥವಾ ಆಡಿನ ಕೊಬ್ಬನ್ನ ನೀವು ತಿನ್ನಲೇಬಾರದು.+ 24 ಸತ್ತು ಬಿದ್ದ ಪ್ರಾಣಿಯ ಅಥವಾ ಬೇರೆ ಪ್ರಾಣಿ ಕೊಂದು ಹಾಕಿದ ಪ್ರಾಣಿಯ ಕೊಬ್ಬನ್ನ ಬೇರೆ ಕೆಲಸಕ್ಕೆ ಬಳಸಬಹುದು. ಆದ್ರೆ ನೀವು ಅದನ್ನ ಯಾವತ್ತೂ ತಿನ್ನಬಾರದು.+ 25 ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸೋಕೆ ತಂದ ಪ್ರಾಣಿಯ ಕೊಬ್ಬನ್ನ ಯಾರಾದ್ರೂ ತಿಂದ್ರೆ ಅವನನ್ನ ಸಾಯಿಸಬೇಕು.
26 ಪಕ್ಷಿ, ಪ್ರಾಣಿ ಅಥವಾ ಬೇರೆ ಯಾವುದ್ರ ರಕ್ತವನ್ನೂ ನೀವು ತಿನ್ನಬಾರದು.+ ನೀವು ಎಲ್ಲೇ ವಾಸಿಸಿದ್ರೂ ಈ ನಿಯಮ ಪಾಲಿಸಬೇಕು. 27 ಒಬ್ಬ ಯಾವುದೇ ಜೀವಿಯ ರಕ್ತ ತಿಂದ್ರೆ ಅವನನ್ನ ಸಾಯಿಸಬೇಕು.’”+
28 ಯೆಹೋವ ಮೋಶೆಗೆ ಮುಂದುವರಿಸಿ ಹೇಳಿದ್ದೇನಂದ್ರೆ 29 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಯೆಹೋವನಿಗೆ ಸಮಾಧಾನ ಬಲಿ ಅರ್ಪಿಸೋ ವ್ಯಕ್ತಿ ಆ ಬಲಿಯ ಕೆಲವು ಭಾಗಗಳನ್ನ ಯೆಹೋವನಿಗೆ ಕೊಡಬೇಕು.+ 30 ಅವನು ಬಲಿಯಾಗಿ ಕೊಡೋ ಪ್ರಾಣಿಯ ಕೊಬ್ಬನ್ನ, ಎದೆ ಭಾಗವನ್ನ ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸೋಕೆ ತನ್ನ ಕೈಗಳಲ್ಲಿ ತಗೊಂಡು ಬರಬೇಕು.+ ಅವನು ಅವುಗಳನ್ನ ಯೆಹೋವನ ಎದುರು ಹಿಂದೆ ಮುಂದೆ ಆಡಿಸಬೇಕು. ಇದು ಓಲಾಡಿಸೋ ಅರ್ಪಣೆ.+ 31 ಪುರೋಹಿತ ಆ ಕೊಬ್ಬನ್ನ ಯಜ್ಞವೇದಿ ಮೇಲೆ ಸುಡಬೇಕು ಮತ್ತು ಅದ್ರ ಹೊಗೆ ಮೇಲೆ ಹೋಗಬೇಕು.+ ಎದೆ ಭಾಗ ಆರೋನನಿಗೆ, ಅವನ ಮಕ್ಕಳಿಗೆ ಸೇರಬೇಕು.+
32 ನೀವು ಅರ್ಪಿಸೋ ಸಮಾಧಾನ ಬಲಿಯ ಪ್ರಾಣಿಯ ಬಲಗಾಲನ್ನ ಪುರೋಹಿತನಿಗೆ ಕೊಡಬೇಕು. ಅದು ಪವಿತ್ರ ಪಾಲು.+ 33 ಆರೋನನ ಮಕ್ಕಳಲ್ಲಿ ಆ ಸಮಾಧಾನ ಬಲಿಯ ಪ್ರಾಣಿಯ ರಕ್ತ ಮತ್ತು ಕೊಬ್ಬನ್ನ ಅರ್ಪಿಸೋನು ಅದ್ರ ಬಲಗಾಲನ್ನ ತಗೊಳ್ಳಬೇಕು. ಅದು ಅವನ ಪಾಲು.+ 34 ಸಮಾಧಾನ ಬಲಿಯಲ್ಲಿ ಇಸ್ರಾಯೇಲ್ಯರು ಆಡಿಸಿ ಕೊಡೋ ಎದೆಭಾಗ ಮತ್ತು ಪವಿತ್ರ ಪಾಲಿನಲ್ಲಿರೋ ಕಾಲನ್ನ ನಾನು ತಗೊಂಡು ಪುರೋಹಿತ ಆರೋನನಿಗೂ ಅವನ ಮಕ್ಕಳಿಗೂ ಕೊಡ್ತೀನಿ. ಇದು ಇಸ್ರಾಯೇಲ್ಯರಿಗೆ ಶಾಶ್ವತ ನಿಯಮ.+
35 ಬೆಂಕಿಯ ಮೂಲಕ ಯೆಹೋವನಿಗೆ ಮಾಡೋ ಅರ್ಪಣೆಗಳಲ್ಲಿ ಆ ಭಾಗಗಳನ್ನೇ ಪುರೋಹಿತರಿಗಾಗಿ ಅಂದ್ರೆ ಆರೋನ ಮತ್ತು ಅವನ ಮಕ್ಕಳಿಗಾಗಿ ಪ್ರತ್ಯೇಕವಾಗಿ ಇಡಬೇಕು. ಅವರನ್ನ ಪುರೋಹಿತರಾಗಿ ಯೆಹೋವನ ಸೇವೆ ಮಾಡೋಕೆ ಮೋಶೆ ಅಭಿಷೇಕಿಸಿದ ದಿನ ಈ ಆಜ್ಞೆಯನ್ನ ಕೊಡಲಾಯ್ತು.+ 36 ಆ ಭಾಗಗಳನ್ನ ಇಸ್ರಾಯೇಲ್ಯರು ಪುರೋಹಿತರಿಗೆ ಕೊಡಬೇಕು ಅಂತ ಪುರೋಹಿತರನ್ನ ಅಭಿಷೇಕಿಸಿದ ದಿನ+ ಯೆಹೋವ ಆಜ್ಞೆಕೊಟ್ಟನು. ಇದು ಎಲ್ಲ ಪೀಳಿಗೆಯವರು ಪಾಲಿಸಬೇಕಾದ ಶಾಶ್ವತ ನಿಯಮ.’”
37 ಸರ್ವಾಂಗಹೋಮ ಬಲಿ,+ ಧಾನ್ಯ ಅರ್ಪಣೆ,+ ಪಾಪಪರಿಹಾರಕ ಬಲಿ,+ ದೋಷಪರಿಹಾರಕ ಬಲಿ,+ ಪುರೋಹಿತರನ್ನ ನೇಮಿಸುವಾಗ ಕೊಡೋ ಬಲಿ,+ ಸಮಾಧಾನ ಬಲಿ+ ಅರ್ಪಿಸುವಾಗ ಪಾಲಿಸಬೇಕಾದ ನಿಯಮಗಳು ಇವೇ. 38 ಯೆಹೋವ ಈ ಎಲ್ಲ ಆಜ್ಞೆಗಳನ್ನ ಮೋಶೆಗೆ ಸಿನಾಯಿ ಬೆಟ್ಟದ ಮೇಲೆ ಕೊಟ್ಟನು.+ ಸಿನಾಯಿ ಕಾಡಲ್ಲಿ* ಯೆಹೋವನಿಗೆ ಬಲಿಗಳನ್ನ ಅರ್ಪಿಸಬೇಕು ಅಂತ ಆಜ್ಞೆ ಕೊಟ್ಟ ದಿನಾನೇ ಈ ನಿಯಮಗಳನ್ನೂ ಕೊಟ್ಟನು.+
8 ಯೆಹೋವ ಮೋಶೆಗೆ 2 “ಆರೋನನನ್ನ ಅವನ ಮಕ್ಕಳನ್ನ ನೀನು ಕರ್ಕೊಂಡು ಬಾ.+ ಅವರಿಗಾಗಿ ತಯಾರಿಸಿದ ಬಟ್ಟೆಗಳನ್ನ,+ ಅಭಿಷೇಕ ತೈಲವನ್ನ,+ ಪಾಪಪರಿಹಾರಕ ಬಲಿಗಾಗಿ ಹೋರಿಯನ್ನ ತಗೊಂಡು ಬಾ. ಅಷ್ಟೇ ಅಲ್ಲ ಎರಡು ಟಗರುಗಳನ್ನ, ಹುಳಿ ಇಲ್ಲದ ರೊಟ್ಟಿಗಳಿರೋ+ ಬುಟ್ಟಿಯನ್ನ ಕೂಡ ತಗೊ. 3 ಎಲ್ಲ ಜನ್ರಿಗೆ ದೇವದರ್ಶನ ಡೇರೆಯ ಬಾಗಿಲ ಹತ್ರ ಬರೋಕೆ ಹೇಳು” ಅಂದನು.
4 ಯೆಹೋವ ಆಜ್ಞೆ ಕೊಟ್ಟ ಹಾಗೇ ಮೋಶೆ ಮಾಡಿದ. ಜನ್ರೆಲ್ಲ ದೇವದರ್ಶನ ಡೇರೆಯ ಬಾಗಿಲ ಹತ್ರ ಬಂದ್ರು. 5 ಆಗ ಮೋಶೆ “ಹೀಗೆಹೀಗೆ ಮಾಡಬೇಕಂತ ಯೆಹೋವ ನಮಗೆ ಆಜ್ಞೆ ಕೊಟ್ಟಿದ್ದಾನೆ” ಅಂತ ಹೇಳಿದ. 6 ಮೋಶೆ ಆರೋನನನ್ನ ಅವನ ಮಕ್ಕಳನ್ನ ಬಾಗಿಲ ಹತ್ರ ಕರ್ಕೊಂಡು ಬಂದು ಅವರಿಗೆ ಸ್ನಾನ ಮಾಡೋಕೆ ಹೇಳಿದ.+ 7 ಮೋಶೆ ಆರೋನನಿಗೆ ಉದ್ದ ಅಂಗಿ+ ಹಾಕಿ ಸೊಂಟಪಟ್ಟಿ+ ಸುತ್ತಿದ. ಆಮೇಲೆ ತೋಳಿಲ್ಲದ ಅಂಗಿ+ ಹಾಕಿಸಿ ಅದ್ರ ಮೇಲೆ ಏಫೋದನ್ನ+ ಹಾಕಿ ಏಫೋದಿನ ನೇಯ್ದ ಪಟ್ಟಿಯನ್ನ*+ ಭದ್ರವಾಗಿ ಕಟ್ಟಿದ. 8 ಎದೆಪದಕನ+ ಕಟ್ಟಿ ಊರೀಮ್ ಮತ್ತು ತುಮ್ಮೀಮ್*+ ಅನ್ನು ಅದ್ರೊಳಗೆ ಇಟ್ಟ. 9 ಅವನ ತಲೆ ಮೇಲೆ ವಿಶೇಷ ಪೇಟ+ ಇಟ್ಟು ಅದ್ರ ಮುಂದೆ ಪಳಪಳ ಹೊಳೆಯೋ ಚಿನ್ನದ ಫಲಕ ಕಟ್ಟಿದ. ಇದು ಸಮರ್ಪಣೆಯ ಪವಿತ್ರ ಚಿಹ್ನೆ.*+ ಮೋಶೆ ಎಲ್ಲವನ್ನ ಯೆಹೋವ ಆಜ್ಞೆ ಕೊಟ್ಟ ಹಾಗೇ ಮಾಡಿದ.
10 ಆಮೇಲೆ ಮೋಶೆ ಅಭಿಷೇಕ ತೈಲ ತಗೊಂಡು ಪವಿತ್ರ ಡೇರೆ, ಅದ್ರಲ್ಲಿರೋ ಎಲ್ಲವನ್ನ+ ಅಭಿಷೇಕಿಸಿ ದೇವರ ಸೇವೆಗಾಗಿ ಮೀಸಲಾಗಿಟ್ಟ. 11 ಸ್ವಲ್ಪ ತೈಲ ತಗೊಂಡು ಯಜ್ಞವೇದಿ ಮೇಲೆ, ಅದ್ರ ಎಲ್ಲ ಉಪಕರಣಗಳ ಮೇಲೆ, ದೊಡ್ಡ ಬೋಗುಣಿ ಮೇಲೆ, ಅದ್ರ ಪೀಠದ ಮೇಲೆ ಏಳು ಸಲ ಚಿಮಿಕಿಸಿ ಅವನ್ನ ದೇವರ ಸೇವೆಗಾಗಿ ಪ್ರತ್ಯೇಕಿಸಿದ. 12 ಕೊನೆಗೆ ಮೋಶೆ ಸ್ವಲ್ಪ ಅಭಿಷೇಕ ತೈಲನ ಆರೋನನ ತಲೆ ಮೇಲೆ ಹೊಯ್ದು ಅವನನ್ನ ಅಭಿಷೇಕಿಸಿ ಪವಿತ್ರ ಸೇವೆಗಾಗಿ ಪ್ರತ್ಯೇಕಿಸಿದ.+
13 ಮೋಶೆ ಆರೋನನ ಮಕ್ಕಳನ್ನ ಕರ್ಕೊಂಡು ಬಂದು ಅವರಿಗೆ ಉದ್ದ ಅಂಗಿ ಹಾಕಿ ಸೊಂಟಪಟ್ಟಿ ಸುತ್ತಿದ. ಅವರ ತಲೆ ಮೇಲೆ ಪೇಟ ಇಟ್ಟ.+ ಮೋಶೆ ಇದೆಲ್ಲ ಯೆಹೋವ ಆಜ್ಞೆ ಕೊಟ್ಟ ಹಾಗೇ ಮಾಡಿದ.
14 ಆಮೇಲೆ ಮೋಶೆ ಪಾಪಪರಿಹಾರಕ ಬಲಿಗಾಗಿ ಹೋರಿ ತಂದ. ಆರೋನ, ಅವನ ಮಕ್ಕಳು ಆ ಹೋರಿ ತಲೆ ಮೇಲೆ ತಮ್ಮ ಕೈಗಳನ್ನ ಇಟ್ರು.+ 15 ಮೋಶೆ ಆ ಹೋರಿಯನ್ನ ಕಡಿದು ಅದ್ರ ರಕ್ತ ತಗೊಂಡು+ ಅದ್ರಲ್ಲಿ ತನ್ನ ಬೆರಳನ್ನ ಅದ್ದಿ ಯಜ್ಞವೇದಿಯ ಎಲ್ಲ ಕೊಂಬುಗಳಿಗೆ ಹಚ್ಚಿ ಯಜ್ಞವೇದಿಯನ್ನ ಪರಿಶುದ್ಧ ಮಾಡಿದ. ಉಳಿದ ರಕ್ತನ ಯಜ್ಞವೇದಿ ಬುಡದಲ್ಲಿ ಸುರಿದ. ಹೀಗೆ ಅವರು ಅದ್ರ ಮೇಲೆ ಬಲಿಗಳನ್ನ ಅರ್ಪಿಸೋಕೆ ಆಗೋ ತರ ಮೋಶೆ ಅದನ್ನ ದೇವರ ಸೇವೆಗೆ ಪ್ರತ್ಯೇಕಿಸಿದ. 16 ಅವನು ಆ ಹೋರಿಯ ಕರುಳುಗಳ ಮೇಲಿದ್ದ ಎಲ್ಲ ಕೊಬ್ಬು, ಪಿತ್ತಜನಕಾಂಗದ ಮೇಲಿದ್ದ ಕೊಬ್ಬು, ಎರಡು ಮೂತ್ರಪಿಂಡಗಳು, ಅವುಗಳ ಕೊಬ್ಬು ತೆಗೆದು ಯಜ್ಞವೇದಿ ಮೇಲಿಟ್ಟು ಸುಟ್ಟ. ಅದ್ರಿಂದ ಹೊಗೆ ಮೇಲೆ ಹೋಯ್ತು.+ 17 ಆಮೇಲೆ ಆ ಹೋರಿಯ ಚರ್ಮ, ಮಾಂಸ, ಸಗಣಿ ಹೀಗೆ ಉಳಿದಿದ್ದೆಲ್ಲ ಪಾಳೆಯದ ಹೊರಗೆ ತಗೊಂಡು ಹೋಗಿ ಬೆಂಕಿಯಿಂದ ಸುಟ್ಟ.+ ಮೋಶೆ ಇದೆಲ್ಲ ಯೆಹೋವ ಆಜ್ಞೆ ಕೊಟ್ಟ ಹಾಗೇ ಮಾಡಿದ.
18 ಮೋಶೆ ಸರ್ವಾಂಗಹೋಮ ಬಲಿಗಾಗಿ ಟಗರನ್ನ ತಂದ. ಆರೋನ, ಅವನ ಮಕ್ಕಳು ಅದ್ರ ತಲೆ ಮೇಲೆ ತಮ್ಮ ಕೈಗಳನ್ನ ಇಟ್ರು.+ 19 ಆಮೇಲೆ ಮೋಶೆ ಅದನ್ನ ಕಡಿದು ಅದ್ರ ರಕ್ತನ ಯಜ್ಞವೇದಿಯ ಎಲ್ಲ ಬದಿಗಳಿಗೆ ಚಿಮಿಕಿಸಿದ. 20 ಅವನು ಆ ಟಗರನ್ನ ತುಂಡುತುಂಡು ಮಾಡಿ ಆ ತುಂಡುಗಳನ್ನ, ಅದ್ರ ತಲೆಯನ್ನ ಮೂತ್ರಪಿಂಡಗಳ ಸುತ್ತ ಇದ್ದ ಕೊಬ್ಬನ್ನ ಯಜ್ಞವೇದಿ ಮೇಲೆ ಸುಟ್ಟ. 21 ಟಗರಿನ ಕರುಳುಗಳನ್ನ, ಕಾಲುಗಳನ್ನ ನೀರಲ್ಲಿ ತೊಳೆದ. ಇಡೀ ಟಗರನ್ನ ಯಜ್ಞವೇದಿ ಮೇಲೆ ಸುಟ್ಟ. ಈ ಸರ್ವಾಂಗಹೋಮ ಬಲಿಯಿಂದ ಮೇಲೇರಿದ ಹೊಗೆಯ ಸುವಾಸನೆಯಿಂದ ದೇವರಿಗೆ ಸಂತೋಷ* ಆಯ್ತು. ಇದು ಬೆಂಕಿ ಮೂಲಕ ಯೆಹೋವನಿಗೆ ಮಾಡಿದ ಅರ್ಪಣೆ. ಮೋಶೆ ಇದೆಲ್ಲ ಯೆಹೋವ ಆಜ್ಞೆ ಕೊಟ್ಟ ಹಾಗೇ ಮಾಡಿದ.
22 ಮೋಶೆ ಇನ್ನೊಂದು ಟಗರನ್ನ ತಂದ. ಪುರೋಹಿತ ಸೇವೆಗೆ ನೇಮಿಸೋ ಸಮಯದಲ್ಲಿ+ ಅರ್ಪಿಸೋಕೆ ಅದನ್ನ ತಂದಿದ್ದ. ಆ ಟಗರಿನ ತಲೆ ಮೇಲೆ ಆರೋನ ಮತ್ತು ಅವನ ಮಕ್ಕಳು ಕೈಗಳನ್ನ ಇಟ್ರು.+ 23 ಮೋಶೆ ಆ ಟಗರನ್ನ ಕಡಿದು ಅದ್ರ ರಕ್ತದಲ್ಲಿ ಸ್ವಲ್ಪ ತಗೊಂಡು ಆರೋನನ ಬಲ ಕಿವಿಯ ತುದಿಗೆ,* ಬಲಗೈಯ ಹೆಬ್ಬೆರಳಿಗೆ, ಬಲಗಾಲಿನ ಹೆಬ್ಬೆರಳಿಗೆ ಹಚ್ಚಿದ. 24 ಆಮೇಲೆ ಆರೋನನ ಮಕ್ಕಳನ್ನ ಕರೆದು ಅವರ ಬಲ ಕಿವಿಯ ತುದಿಗೆ,* ಬಲಗೈಯ ಹೆಬ್ಬೆರಳಿಗೆ, ಬಲಗಾಲಿನ ಹೆಬ್ಬೆರಳಿಗೆ ರಕ್ತ ಹಚ್ಚಿದ. ಉಳಿದ ರಕ್ತನ ಯಜ್ಞವೇದಿಯ ಎಲ್ಲ ಬದಿಗಳಿಗೆ ಚಿಮಿಕಿಸಿದ.+
25 ಅವನು ಆ ಟಗರಿನ ಕೊಬ್ಬನ್ನ ಅಂದ್ರೆ ಕೊಬ್ಬಿದ ಬಾಲ, ಕರುಳಿನ ಸುತ್ತ ಇದ್ದ ಕೊಬ್ಬು, ಪಿತ್ತಜನಕಾಂಗದ ಮೇಲಿದ್ದ ಕೊಬ್ಬು, ಎರಡು ಮೂತ್ರಪಿಂಡಗಳು, ಅವುಗಳ ಕೊಬ್ಬು, ಬಲಗಾಲು ತಗೊಂಡ.+ 26 ಯೆಹೋವನ ಮುಂದೆ ಬುಟ್ಟಿಯಲ್ಲಿ ಇಟ್ಟಿದ್ದ ಹುಳಿ ಇಲ್ಲದ ರೊಟ್ಟಿಗಳಲ್ಲಿ ಬಳೆ ಆಕಾರದ ಹುಳಿ ಇಲ್ಲದ ಒಂದು ರೊಟ್ಟಿಯನ್ನ,+ ಎಣ್ಣೆ ಬೆರೆಸಿ ಮಾಡಿದ ಒಂದು ಬಳೆ ಆಕಾರದ ರೊಟ್ಟಿಯನ್ನ,+ ಒಂದು ತೆಳುವಾದ ರೊಟ್ಟಿಯನ್ನ ತಗೊಂಡು ಅವುಗಳನ್ನ ಟಗರಿನ ಕೊಬ್ಬಿನ ಮೇಲೆ ಬಲಗಾಲಿನ ಮೇಲೆ ಇಟ್ಟ. 27 ಅವನು ಅವುಗಳನ್ನೆಲ್ಲ ಆರೋನ ಮತ್ತು ಅವನ ಮಕ್ಕಳ ಅಂಗೈಯಲ್ಲಿಟ್ಟು ಯೆಹೋವನ ಎದುರು ಹಿಂದೆ ಮುಂದೆ ಆಡಿಸಿದ. ಇದು ಓಲಾಡಿಸೋ ಅರ್ಪಣೆ. 28 ಮೋಶೆ ಅವುಗಳನ್ನ ಅವರ ಕೈಗಳಿಂದ ತಗೊಂಡು ಯಜ್ಞವೇದಿಯಲ್ಲಿ ಸರ್ವಾಂಗಹೋಮದ ಮೇಲಿಟ್ಟು ಸುಟ್ಟ. ಇದು ಪುರೋಹಿತ ಸೇವೆಗೆ ನೇಮಿಸೋ ಸಮಯದಲ್ಲಿ ಬೆಂಕಿ ಮೂಲಕ ಅರ್ಪಿಸಿದ ಬಲಿ. ಇದ್ರಿಂದ ಮೇಲೇರಿದ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಯ್ತು.
29 ಆಮೇಲೆ ಮೋಶೆ ಟಗರಿನ ಎದೆಭಾಗನ ಯೆಹೋವನ ಎದುರು ಓಲಾಡಿಸೋ ಅರ್ಪಣೆಯಾಗಿ ಹಿಂದೆ ಮುಂದೆ ಆಡಿಸಿದ.+ ಪುರೋಹಿತ ಸೇವೆಗೆ ನೇಮಿಸಿದ ಸಮಯದಲ್ಲಿ ಅರ್ಪಿಸಿದ ಟಗರಿನ ಎದೆಭಾಗ ಮೋಶೆಗೆ ಸಿಕ್ತು. ಯೆಹೋವ ಅವನಿಗೆ ಆಜ್ಞೆ ಕೊಟ್ಟ ಹಾಗೇ ಅದು ಅವನಿಗೆ ಸಿಕ್ತು.+
30 ಮೋಶೆ ಅಭಿಷೇಕ ತೈಲದಲ್ಲಿ ಸ್ವಲ್ಪ+ ಹಾಗೂ ಯಜ್ಞವೇದಿ ಮೇಲಿದ್ದ ರಕ್ತದಲ್ಲಿ ಸ್ವಲ್ಪ ತಗೊಂಡು ಆರೋನನ ಮೇಲೆ, ಅವನ ಬಟ್ಟೆಗಳ ಮೇಲೆ, ಅವನ ಮಕ್ಕಳ ಮೇಲೆ, ಅವರ ಬಟ್ಟೆಗಳ ಮೇಲೆ ಚಿಮಿಕಿಸಿದ. ಹೀಗೆ ಆರೋನನನ್ನ, ಅವನ ಬಟ್ಟೆಗಳನ್ನ, ಅವನ ಮಕ್ಕಳನ್ನ, ಅವರ ಬಟ್ಟೆಗಳನ್ನ ಪವಿತ್ರ ಸೇವೆಗಾಗಿ ಪ್ರತ್ಯೇಕಿಸಿದ.+
31 ಆರೋನನಿಗೆ ಅವನ ಮಕ್ಕಳಿಗೆ ಮೋಶೆ ಹೀಗಂದ: “ನೀವು ಟಗರಿನ ಮಾಂಸವನ್ನ ದೇವದರ್ಶನ ಡೇರೆಯ ಬಾಗಿಲ ಹತ್ರ ಬೇಯಿಸಿ+ ಅಲ್ಲೇ ತಿನ್ನಬೇಕು. ಪುರೋಹಿತ ಸೇವೆಗೆ ನೇಮಿಸುವಾಗ ಬಳಸೋ ಬುಟ್ಟಿಯಲ್ಲಿರೋ ರೊಟ್ಟಿ ಜೊತೆ ಆ ಮಾಂಸ ತಿನ್ನಬೇಕು. ಅದನ್ನ ತಿನ್ನಬೇಕಂತ ಆರೋನನಿಗೆ ಅವನ ಮಕ್ಕಳಿಗೆ ಹೇಳಬೇಕು+ ಅಂತ ದೇವರು ನನಗೆ ಹೇಳಿದ್ದಾನೆ. 32 ಈ ಮಾಂಸದಲ್ಲಿ ರೊಟ್ಟಿಯಲ್ಲಿ ಉಳಿದಿದ್ದನ್ನ ಬೆಂಕಿಯಿಂದ ಸುಡಬೇಕು.+ 33 ನಿಮ್ಮನ್ನ ಪುರೋಹಿತ ಸೇವೆಗೆ ನೇಮಿಸೋಕೆ ಏಳು ದಿನ ಹಿಡಿಯುತ್ತೆ. ಹಾಗಾಗಿ ಆ ಏಳು ದಿನ ನೀವು ದೇವದರ್ಶನ ಡೇರೆಯ ಬಾಗಿಲ ಹತ್ರಾನೇ ಇರಬೇಕು. ನಿಮ್ಮನ್ನ ಪುರೋಹಿತ ಸೇವೆಗೆ ನೇಮಿಸೋ ತನಕ ನೀವು ಆ ಸ್ಥಳ ಬಿಟ್ಟು ಹೋಗಬಾರದು.+ 34 ಯೆಹೋವ ಆಜ್ಞೆ ಕೊಟ್ಟ ಹಾಗೇ ನಿಮ್ಮ ಪ್ರಾಯಶ್ಚಿತ್ತಕ್ಕಾಗಿ ನಾವು ಇವತ್ತು ಇದನ್ನೆಲ್ಲ ಮಾಡಿದ್ವಿ.+ 35 ನೀವು ಏಳು ದಿನ ಹಗಲೂರಾತ್ರಿ ದೇವದರ್ಶನ ಡೇರೆಯ ಬಾಗಿಲ ಹತ್ರಾನೇ ಇರಬೇಕು.+ ಯೆಹೋವ ಹೇಳಿದ್ದೆಲ್ಲ ತಪ್ಪದೆ ಮಾಡಬೇಕು.+ ಆಗ ನೀವು ಸಾಯಲ್ಲ. ಹೀಗೇ ಮಾಡಬೇಕು ಅಂತ ದೇವರು ನನಗೆ ಆಜ್ಞೆ ಕೊಟ್ಟಿದ್ದಾನೆ.”
36 ಯೆಹೋವ ಮೋಶೆ ಮೂಲಕ ಆಜ್ಞೆ ಕೊಟ್ಟದ್ದೆಲ್ಲ ಆರೋನ, ಅವನ ಮಕ್ಕಳು ಮಾಡಿದ್ರು.
9 ಮೋಶೆ ಎಂಟನೇ ದಿನ+ ಆರೋನನನ್ನ, ಅವನ ಮಕ್ಕಳನ್ನ, ಇಸ್ರಾಯೇಲ್ಯರ ಹಿರಿಯರನ್ನ ಕರೆದ. 2 ಅವನು ಆರೋನನಿಗೆ “ನೀನು ನಿನಗೋಸ್ಕರ ಪಾಪಪರಿಹಾರಕ ಬಲಿ+ ಅರ್ಪಿಸೋಕೆ ಯಾವುದೇ ದೋಷ ಇಲ್ಲದ ಒಂದು ಕರುವನ್ನ, ಸರ್ವಾಂಗಹೋಮ ಬಲಿಗಾಗಿ ಯಾವುದೇ ದೋಷ ಇಲ್ಲದ ಒಂದು ಟಗರನ್ನ ತಗೊಂಡು ಯೆಹೋವನ ಮುಂದೆ ಅರ್ಪಿಸು. 3 ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ನೀವು ಪಾಪಪರಿಹಾರಕ ಬಲಿಗಾಗಿ ಒಂದು ಗಂಡು ಆಡನ್ನ, ಸರ್ವಾಂಗಹೋಮ ಬಲಿಗಾಗಿ ಒಂದು ವರ್ಷದ ಯಾವುದೇ ದೋಷ ಇಲ್ಲದ ಒಂದು ಕರುವನ್ನ, ಒಂದು ಟಗರನ್ನ, 4 ಸಮಾಧಾನ ಬಲಿಗಾಗಿ ಒಂದು ಹೋರಿಯನ್ನ, ಒಂದು ಟಗರನ್ನ+ ಯೆಹೋವನ ಮುಂದೆ ಅರ್ಪಿಸೋಕೆ ತರಬೇಕು. ಅಷ್ಟೇ ಅಲ್ಲ ಎಣ್ಣೆ ಬೆರೆಸಿದ ಧಾನ್ಯ ಅರ್ಪಣೆ ಸಹ ತರಬೇಕು.+ ಯಾಕಂದ್ರೆ ಇವತ್ತು ಯೆಹೋವ ನಿಮಗೆ ಕಾಣಿಸ್ಕೊಳ್ತಾನೆ”+ ಅಂದ.
5 ಮೋಶೆ ಅವರಿಗೆ ಏನೆಲ್ಲ ತರಬೇಕು ಅಂತ ಆಜ್ಞೆ ಕೊಟ್ನೋ ಅದನ್ನೆಲ್ಲ ತಗೊಂಡು ದೇವದರ್ಶನ ಡೇರೆ ಮುಂದೆ ಅಂದ್ರೆ ಯೆಹೋವನ ಮುಂದೆ ಬಂದು ನಿಂತ್ರು. 6 ಮೋಶೆ ಅವರಿಗೆ “ಯೆಹೋವ ಆಜ್ಞೆ ಕೊಟ್ಟ ಈ ಎಲ್ಲ ವಿಷ್ಯಗಳನ್ನ ಮಾಡಿದ್ರೆ ಯೆಹೋವನ ಮಹಿಮೆ ನಿಮಗೆ ಕಾಣಿಸುತ್ತೆ”+ ಅಂದ. 7 ಮೋಶೆ ಆರೋನನಿಗೆ “ನೀನು ಯಜ್ಞವೇದಿ ಹತ್ರ ಹೋಗಿ ಯೆಹೋವ ಆಜ್ಞೆ ಕೊಟ್ಟ ಹಾಗೇ ನಿನಗೋಸ್ಕರ ಪಾಪಪರಿಹಾರಕ ಬಲಿಯನ್ನ+ ಮತ್ತು ಸರ್ವಾಂಗಹೋಮ ಬಲಿಯನ್ನ ಅರ್ಪಿಸು, ನಿನಗೋಸ್ಕರ,+ ನಿನ್ನ ಕುಟುಂಬಕ್ಕೋಸ್ಕರ ಪ್ರಾಯಶ್ಚಿತ್ತ ಮಾಡು. ಜನ್ರು ತಂದಿರೋದನ್ನ ಅರ್ಪಿಸಿ+ ಅವರಿಗೋಸ್ಕರ ಪ್ರಾಯಶ್ಚಿತ್ತ ಮಾಡು”+ ಅಂದ.
8 ಆರೋನ ಕೂಡಲೇ ಯಜ್ಞವೇದಿ ಹತ್ರ ಹೋಗಿ ತನಗೋಸ್ಕರ ಪಾಪಪರಿಹಾರಕ ಬಲಿ ಅರ್ಪಿಸೋಕೆ ತಂದಿದ್ದ ಕರುವನ್ನ ಕಡಿದ.+ 9 ಅವನ ಮಕ್ಕಳು ಅದ್ರ ರಕ್ತನ ಅವನಿಗೆ ತಂದ್ಕೊಟ್ರು.+ ಆಗ ಅವನು ತನ್ನ ಬೆರಳನ್ನ ಆ ರಕ್ತದಲ್ಲಿ ಅದ್ದಿ ಅದನ್ನ ಯಜ್ಞವೇದಿ ಕೊಂಬುಗಳಿಗೆ ಹಚ್ಚಿದ. ಉಳಿದ ರಕ್ತನ ಯಜ್ಞವೇದಿ ಬುಡದಲ್ಲಿ ಸುರಿದ.+ 10 ಕರುವಿನ ಕೊಬ್ಬನ್ನ, ಮೂತ್ರಪಿಂಡಗಳನ್ನ, ಪಿತ್ತಜನಕಾಂಗದ ಮೇಲಿರೋ ಕೊಬ್ಬನ್ನ ಯಜ್ಞವೇದಿ ಮೇಲಿಟ್ಟು ಸುಟ್ಟ. ಅದ್ರ ಹೊಗೆ ಮೇಲೇರಿತು. ಯೆಹೋವ ಮೋಶೆಗೆ ಆಜ್ಞಾಪಿಸಿದ ಹಾಗೇ ಆರೋನ ಮಾಡಿದ.+ 11 ಕರುವಿನ ಮಾಂಸ ಮತ್ತು ಚರ್ಮವನ್ನ ಅವನು ಪಾಳೆಯದ ಹೊರಗೆ ಬೆಂಕಿಯಲ್ಲಿ ಸುಟ್ಟ.+
12 ಆರೋನ ಸರ್ವಾಂಗಹೋಮ ಬಲಿಗಾಗಿ ತಂದಿದ್ದ ಟಗರನ್ನ ಕಡಿದ. ಅವನ ಮಕ್ಕಳು ಅದ್ರ ರಕ್ತನ ಅವನಿಗೆ ತಂದ್ಕೊಟ್ರು. ಅದನ್ನ ಯಜ್ಞವೇದಿಯ ಎಲ್ಲ ಬದಿಗಳಿಗೆ ಚಿಮಿಕಿಸಿದ.+ 13 ಅವರು ಟಗರಿನ ತಲೆಯನ್ನ, ತುಂಡುಗಳನ್ನ ಆರೋನನಿಗೆ ಕೊಟ್ಟಾಗ ಅವುಗಳನ್ನ ಯಜ್ಞವೇದಿ ಮೇಲಿಟ್ಟು ಸುಟ್ಟ. 14 ಅವನು ಕರುಳುಗಳನ್ನ, ಕಾಲುಗಳನ್ನ ತೊಳೆದು ಯಜ್ಞವೇದಿಯಲ್ಲಿ ಸರ್ವಾಂಗಹೋಮದ ಮೇಲಿಟ್ಟು ಸುಟ್ಟ. ಅದ್ರ ಹೊಗೆ ಮೇಲೇರಿತು.
15 ಜನ ತಂದಿದ್ದ ಅರ್ಪಣೆಗಳನ್ನ ಆರೋನ ಅರ್ಪಿಸಿದ. ಜನ ತಮ್ಮ ಪಾಪಪರಿಹಾರಕ ಬಲಿಗಾಗಿ ತಂದಿದ್ದ ಆಡನ್ನ ಅವನು ಕಡಿದ. ತನ್ನ ಪಾಪಪರಿಹಾರಕ್ಕಾಗಿ ಅವನು ಕರುವನ್ನ ಅರ್ಪಿಸಿದ ಹಾಗೇ ಇದನ್ನೂ ಪಾಪಪರಿಹಾರಕ ಬಲಿಯಾಗಿ ಅರ್ಪಿಸಿದ. 16 ಅವನು ಸರ್ವಾಂಗಹೋಮ ಬಲಿಯನ್ನ ಅರ್ಪಿಸಿದ. ಸರ್ವಾಂಗಹೋಮ ಬಲಿಗಳನ್ನ ಯಾವಾಗ್ಲೂ ಅರ್ಪಿಸಬೇಕಾದ ಕ್ರಮದಲ್ಲೇ ಇದನ್ನೂ ಅರ್ಪಿಸಿದ.+
17 ಆಮೇಲೆ ಆರೋನ ಧಾನ್ಯ ಅರ್ಪಣೆಯನ್ನ ಕೊಟ್ಟ.+ ಹೇಗಂದ್ರೆ ಅದನ್ನ ತನ್ನ ಹಿಡಿತುಂಬ ತಗೊಂಡು ಯಜ್ಞವೇದಿ ಮೇಲೆ ಸುಟ್ಟ. ಅದ್ರ ಹೊಗೆ ಮೇಲೇರಿತು. ಅವನು ಬೆಳಗ್ಗೆ ಸರ್ವಾಂಗಹೋಮ ಬಲಿಯನ್ನ ಅರ್ಪಿಸಿದ್ರ ಜೊತೆಗೆ ಧಾನ್ಯ ಅರ್ಪಣೆನೂ ಅರ್ಪಿಸಿದ.+
18 ಸಮಾಧಾನ ಬಲಿಗಾಗಿ ಜನ ತಂದಿದ್ದ ಹೋರಿಯನ್ನ, ಟಗರನ್ನ ಆರೋನ ಕಡಿದ. ಅವನ ಮಕ್ಕಳು ರಕ್ತನ ಅವನಿಗೆ ತಂದ್ಕೊಟ್ರು. ಅವನು ಅದನ್ನ ಯಜ್ಞವೇದಿಯ ಎಲ್ಲ ಬದಿಗಳಿಗೆ ಚಿಮಿಕಿಸಿದ.+ 19 ಹೋರಿಯ ಕೊಬ್ಬಿನ ತುಂಡುಗಳು,+ ಟಗರಿನ ಕೊಬ್ಬಿದ ಬಾಲ, ಹೋರಿ ಮತ್ತು ಟಗರಿನ ಒಳಾಂಗಗಳ ಮೇಲಿರೋ ಕೊಬ್ಬು, ಮೂತ್ರಪಿಂಡಗಳು, ಪಿತ್ತಜನಕಾಂಗಗಳ ಮೇಲಿರೋ ಕೊಬ್ಬು+ 20 ಇದನ್ನೆಲ್ಲ ಎದೆಭಾಗಗಳ ಮೇಲಿಟ್ಟ. ಕೊಬ್ಬಿನ ಈ ಎಲ್ಲ ತುಂಡುಗಳನ್ನ ಯಜ್ಞವೇದಿ ಮೇಲೆ ಸುಟ್ಟ. ಅದ್ರ ಹೊಗೆ ಮೇಲೇರಿತು.+ 21 ಆದ್ರೆ ಎದೆಭಾಗಗಳನ್ನ, ಬಲಗಾಲನ್ನ ಆರೋನ ಯೆಹೋವನ ಎದುರಲ್ಲಿ ಹಿಂದೆ ಮುಂದೆ ಆಡಿಸಿದ. ಹೀಗೆ ಓಲಾಡಿಸೋ ಅರ್ಪಣೆ ಕೊಟ್ಟ. ಮೋಶೆ ಆಜ್ಞೆ ಕೊಟ್ಟ ಹಾಗೇ ಅವನು ಮಾಡಿದ.+
22 ಆರೋನ ಪಾಪಪರಿಹಾರಕ ಬಲಿ, ಸರ್ವಾಂಗಹೋಮ ಬಲಿ, ಸಮಾಧಾನ ಬಲಿ ಅರ್ಪಿಸಿದ ಮೇಲೆ ಜನ್ರ ಕಡೆ ತಿರುಗಿ ಕೈಗಳನ್ನ ಮೇಲಕ್ಕೆತ್ತಿ ಅವರನ್ನ ಆಶೀರ್ವದಿಸಿದ.+ ಆಮೇಲೆ ಕೆಳಗಿಳಿದು ಬಂದ. 23 ಕೊನೆಗೆ ಮೋಶೆ ಆರೋನ ದೇವದರ್ಶನ ಡೇರೆ ಒಳಗೆ ಹೋದ್ರು. ಆಮೇಲೆ ಬಂದು ಜನ್ರನ್ನ ಆಶೀರ್ವದಿಸಿದ್ರು.+
ಆಗ ಯೆಹೋವನ ಮಹಿಮೆ ಎಲ್ಲ ಜನ್ರಿಗೆ ಕಾಣಿಸ್ತು.+ 24 ಯೆಹೋವನಿಂದ ಬೆಂಕಿ ಬಂದು+ ಯಜ್ಞವೇದಿ ಮೇಲಿದ್ದ ಸರ್ವಾಂಗಹೋಮವನ್ನ, ಕೊಬ್ಬಿನ ತುಂಡುಗಳನ್ನ ಸುಟ್ಟುಬಿಡ್ತು. ಜನ್ರೆಲ್ಲ ಇದನ್ನ ನೋಡಿ ಸಂತೋಷದಿಂದ ಕೂಗ್ತಾ ನೆಲದ ತನಕ ಬಗ್ಗಿ ನಮಸ್ಕಾರ ಮಾಡಿದ್ರು.+
10 ಆಮೇಲೆ ಆರೋನನ ಮಕ್ಕಳಲ್ಲಿ ನಾದಾಬ್ ಮತ್ತು ಅಬೀಹೂ+ ಧೂಪ ಹಾಕೋ ತಮ್ಮ ತಮ್ಮ ಪಾತ್ರೆಗಳನ್ನ ಕೈಯಲ್ಲಿ ತಗೊಂಡ್ರು.+ ಅದ್ರಲ್ಲಿ ಯೆಹೋವ ಹೇಳದೇ ಇದ್ದ ಕೆಂಡಗಳನ್ನ+ ಇಟ್ಟು ಅದ್ರ ಮೇಲೆ ಧೂಪ ಹಾಕಿ ಆತನ ಮುಂದೆ ಅರ್ಪಿಸೋಕೆ ಶುರುಮಾಡಿದ್ರು. ಆದ್ರೆ ಹೀಗೆ ಮಾಡೋಕೆ ದೇವರು ಹೇಳಿರಲಿಲ್ಲ. 2 ಹಾಗಾಗಿ ಯೆಹೋವನಿಂದ ಬೆಂಕಿ ಬಂದು ಅವರನ್ನ ಸುಟ್ಟುಬಿಡ್ತು.+ ಅವರು ಯೆಹೋವನ ಮುಂದೆನೇ ಸತ್ತುಹೋದ್ರು.+ 3 ಆಗ ಆರೋನನಿಗೆ ಮೋಶೆ “ಯೆಹೋವ ಹೇಳೋದು ಏನಂದ್ರೆ ‘ನಾನು ಪವಿತ್ರ ಅಂತ ನನ್ನ ಹತ್ರ ಇರೋರು ನೆನಪಿಡಬೇಕು.+ ಎಲ್ಲ ಜನ್ರು ನನ್ನನ್ನ ಮಹಿಮೆಪಡಿಸಬೇಕು’” ಅಂದ. ಆಗ ಆರೋನ ಏನೂ ಮಾತಾಡದೆ ಸುಮ್ನಿದ್ದ.
4 ಆರೋನನ ಚಿಕ್ಕಪ್ಪ ಉಜ್ಜೀಯೇಲನ+ ಮಕ್ಕಳಾದ ಮೀಷಾಯೇಲ್ ಮತ್ತು ಎಲೀಚಾಫಾನನ್ನ ಕರೆದು ಮೋಶೆ ಅವರಿಗೆ “ಇಲ್ಲಿ ಬಂದು ಪವಿತ್ರ ಸ್ಥಳದ ಎದುರಿಂದ ನಿಮ್ಮ ಸಂಬಂಧಿಕರ ಶವಗಳನ್ನ ಪಾಳೆಯದ ಹೊರಗೆ ತಗೊಂಡು ಹೋಗಿ” ಅಂದ. 5 ಅವರು ಮೋಶೆ ಹೇಳಿದ ಹಾಗೇ ನಾದಾಬ್ ಮತ್ತು ಅಬೀಹೂವಿನ ಶವಗಳನ್ನ ಪಾಳೆಯದ ಹೊರಗೆ ತಗೊಂಡು ಹೋದ್ರು. ನಾದಾಬ್, ಅಬೀಹೂ ಹಾಕೊಂಡಿದ್ದ ಉದ್ದ ಅಂಗಿಗಳು ಇನ್ನೂ ಅವರ ಮೈಮೇಲಿತ್ತು.
6 ಆಮೇಲೆ ಆರೋನನಿಗೆ, ಅವನ ಇನ್ನಿಬ್ರು ಮಕ್ಕಳಾದ ಎಲ್ಲಾಜಾರ್, ಈತಾಮಾರಗೆ ಮೋಶೆ “ದುಃಖದಿಂದ ನಿಮ್ಮ ಬಟ್ಟೆ ಹರ್ಕೊಳ್ಳಬೇಡಿ.+ ನಿಮ್ಮ ತಲೆಕೂದಲನ್ನ ಬಾಚದೆ ಹಾಗೇ ಬಿಡಬೇಡಿ. ಈ ಮಾತು ಮೀರಿ ನಡೆದ್ರೆ ನೀವು ಸಾಯ್ತಿರ. ದೇವರು ಎಲ್ಲಾ ಇಸ್ರಾಯೇಲ್ ಜನ್ರ ಮೇಲೆ ಕೋಪ ಮಾಡ್ಕೊಳ್ತಾನೆ. ಯೆಹೋವ ದೇವರು ಬೆಂಕಿಯಿಂದ ಸಾಯಿಸಿದ ಆರೋನನ ಮಕ್ಕಳಿಗಾಗಿ ನಿಮ್ಮ ಸಹೋದರರಾದ ಇಸ್ರಾಯೇಲ್ ಜನ್ರೆಲ್ಲ ಅಳ್ತಾರೆ. 7 ಯೆಹೋವನ ಅಭಿಷೇಕ ತೈಲ ನಿಮ್ಮ ಮೇಲೆ ಇರೋದ್ರಿಂದ ನೀವು ದೇವದರ್ಶನ ಡೇರೆ ಬಾಗಿಲ ಹತ್ರಾನೇ ಇರಬೇಕು. ಇಲ್ಲಾಂದ್ರೆ ನೀವು ಸಾಯ್ತಿರ”+ ಅಂದ. ಅವರು ಮೋಶೆ ಹೇಳಿದ ಹಾಗೇ ಮಾಡಿದ್ರು.
8 ಯೆಹೋವ ಆರೋನನಿಗೆ 9 “ನೀನು, ನಿನ್ನ ಮಕ್ಕಳು ದ್ರಾಕ್ಷಾಮದ್ಯವನ್ನ ಅಥವಾ ಯಾವುದೇ ಮದ್ಯವನ್ನ ಕುಡಿದು ದೇವದರ್ಶನ ಡೇರೆ ಒಳಗೆ ಬರಬಾರದು.+ ಕುಡಿದು ಬಂದ್ರೆ ಸಾಯ್ತಿರ. ಈ ನಿಯಮವನ್ನ ನಿಮ್ಮ ವಂಶದವರು ಯಾವಾಗ್ಲೂ ಪಾಲಿಸಬೇಕು. 10 ಈ ನಿಯಮವನ್ನ ಕೊಟ್ಟಿದ್ದು, ನಿಮಗೆ ಪವಿತ್ರ ಮತ್ತು ಅಪವಿತ್ರ ವಿಷ್ಯಗಳ ಮಧ್ಯ, ಶುದ್ಧ ಮತ್ತು ಅಶುದ್ಧ ವಿಷ್ಯಗಳ ಮಧ್ಯ ವ್ಯತ್ಯಾಸ ಗೊತ್ತಾಗಬೇಕು,+ 11 ಯೆಹೋವ ಮೋಶೆ ಮೂಲಕ ಕೊಟ್ಟ ಎಲ್ಲ ನಿಯಮಗಳನ್ನ ನೀವು ಇಸ್ರಾಯೇಲ್ಯರಿಗೆ ಕಲಿಸಬೇಕು ಅಂತಾನೇ” ಅಂದನು.+
12 ಆರೋನನಿಗೆ, ಅವನ ಉಳಿದ ಮಕ್ಕಳಾದ ಎಲ್ಲಾಜಾರ್, ಈತಾಮಾರಗೆ ಮೋಶೆ ಹೀಗಂದ: “ಬೆಂಕಿ ಮೂಲಕ ಯೆಹೋವನಿಗೆ ಅರ್ಪಿಸಿದ ಧಾನ್ಯ ಅರ್ಪಣೆಯಲ್ಲಿ ಉಳಿದಿರೋದನ್ನ ತಗೊಂಡು ಹುಳಿ ಇಲ್ಲದ ರೊಟ್ಟಿ ಮಾಡಿ ಯಜ್ಞವೇದಿ ಹತ್ರ ತಂದು ತಿನ್ನಿ.+ ಯಾಕಂದ್ರೆ ಆ ರೊಟ್ಟಿ ಅತಿ ಪವಿತ್ರ.+ 13 ಬೆಂಕಿ ಮೂಲಕ ಯೆಹೋವನಿಗೆ ಮಾಡಿದ ಅರ್ಪಣೆಗಳಿಂದ ನಿಮಗೆ, ನಿಮ್ಮ ಮಕ್ಕಳಿಗೆ ಸಿಕ್ಕಿರೋ ಪಾಲು ಅದು. ಅದಕ್ಕೆ ನೀವು ಅದನ್ನ ಪವಿತ್ರವಾದ ಒಂದು ಜಾಗದಲ್ಲಿ* ತಿನ್ನಬೇಕು.+ ಈ ವಿಷ್ಯಗಳನ್ನ ನಿಮಗೆ ಹೇಳಬೇಕಂತ ದೇವರು ನನಗೆ ಹೇಳಿದ್ದಾನೆ. 14 ಅಷ್ಟೇ ಅಲ್ಲ ಓಲಾಡಿಸೋ ಅರ್ಪಣೆಯ ಎದೆಭಾಗವನ್ನ, ಪವಿತ್ರ ಪಾಲಿಂದ ಪ್ರಾಣಿಯ ಕಾಲನ್ನ ತಗೊಂಡು+ ನೀವು, ನಿಮ್ಮ ಮಕ್ಕಳು ಶುದ್ಧವಾದ ಒಂದು ಜಾಗದಲ್ಲಿ ತಿನ್ನಬೇಕು.+ ಯಾಕಂದ್ರೆ ಈ ಭಾಗಗಳು ಇಸ್ರಾಯೇಲ್ಯರು ಅರ್ಪಿಸೋ ಸಮಾಧಾನ ಬಲಿಗಳಿಂದ ನಿಮಗೆ, ನಿಮ್ಮ ಮಕ್ಕಳಿಗೆ ಸಿಗೋ ಪಾಲು. 15 ಇಸ್ರಾಯೇಲ್ಯರು ಬೆಂಕಿಯಲ್ಲಿ ಅರ್ಪಿಸೋಕೆ ತರೋ ಕೊಬ್ಬಿನ ಜೊತೆಗೆ ಪವಿತ್ರ ಪಾಲಿಂದ ಪ್ರಾಣಿಯ ಕಾಲನ್ನ ಮತ್ತು ಓಲಾಡಿಸೋ ಅರ್ಪಣೆಯ ಎದೆಭಾಗವನ್ನ ತರಬೇಕು. ಹೀಗೆ ಅವರು ಯೆಹೋವನ ಮುಂದೆ ಓಲಾಡಿಸೋ ಅರ್ಪಣೆಯನ್ನ ಕೊಡಬೇಕು. ಆ ಎದೆಭಾಗ ಮತ್ತು ಕಾಲು ನಿಮಗೆ, ನಿಮ್ಮ ಮಕ್ಕಳಿಗೆ ಸಿಗೋ ಪಾಲು.+ ಯೆಹೋವ ಹೇಳಿದ ಹಾಗೇ ಇದು ನಿಮಗೆ ಯಾವಾಗ್ಲೂ ಸಿಗೋ ಪಾಲು.”
16 ಪಾಪಪರಿಹಾರಕ ಬಲಿಯಾಗಿ ಅರ್ಪಿಸೋ ಆಡು+ ಏನಾಯ್ತು ಅಂತ ಮೋಶೆ ಚೆನ್ನಾಗಿ ಹುಡುಕಿದ. ಅದನ್ನ ಸುಟ್ಟುಬಿಟ್ರು ಅಂತ ಅವನಿಗೆ ಗೊತ್ತಾಯ್ತು. ಅದಕ್ಕೆ ಆರೋನನ ಉಳಿದ ಮಕ್ಕಳಾದ ಎಲ್ಲಾಜಾರ್ ಮತ್ತು ಈತಾಮಾರನ ಮೇಲೆ ಮೋಶೆಗೆ ತುಂಬ ಕೋಪ ಬಂತು. ಅವನು ಅವರಿಗೆ 17 “ಪಾಪಪರಿಹಾರಕ ಬಲಿಯ ಮಾಂಸವನ್ನ ನೀವ್ಯಾಕೆ ತಿನ್ನಲಿಲ್ಲ?+ ಅದನ್ನ ಪವಿತ್ರ ಸ್ಥಳದಲ್ಲಿ ತಿನ್ನಬೇಕಿತ್ತು. ಅದು ಅತಿ ಪವಿತ್ರ. ನೀವು ಇಸ್ರಾಯೇಲ್ಯರ ಪಾಪಗಳಿಗೆ ಹೊಣೆ ಹೊತ್ಕೊಂಡು ಅವರಿಗಾಗಿ ಯೆಹೋವನ ಮುಂದೆ ಪ್ರಾಯಶ್ಚಿತ್ತ ಮಾಡಬೇಕಂತ ದೇವರು ಅದನ್ನ ನಿಮಗೆ ಕೊಟ್ನಲ್ವಾ? 18 ಆ ಆಡಿನ ರಕ್ತವನ್ನ ಪವಿತ್ರ ಸ್ಥಳದ ಒಳಗೆ ತರಲಿಲ್ಲ.+ ಅಂದ್ಮೇಲೆ ನೀವು ಅದ್ರ ಮಾಂಸವನ್ನ ಪವಿತ್ರ ಸ್ಥಳದಲ್ಲಿ ತಿನ್ನಬೇಕಿತ್ತಲ್ವಾ? ಅದನ್ನ ತಿನ್ನೋಕೆ ನಿಮಗೆ ಹೇಳಬೇಕಂತ ದೇವರು ನನಗೆ ಆಜ್ಞೆ ಕೊಟ್ನಲ್ವಾ?” ಅಂದ. 19 ಅದಕ್ಕೆ ಆರೋನ ಮೋಶೆಗೆ “ಇವತ್ತು ಜನ್ರು ಪಾಪಪರಿಹಾರಕ ಬಲಿಯನ್ನ ಸರ್ವಾಂಗಹೋಮ ಬಲಿಯನ್ನ ಯೆಹೋವನ ಮುಂದೆ ಅರ್ಪಿಸಿದ್ರು.+ ಆ ಮಾಂಸವನ್ನ ನನಗೆ ತಿನ್ನೋಕೆ ಆಗಲಿಲ್ಲ. ನನಗೇನು ತೊಂದ್ರೆ ಆಯ್ತು ಅಂತ ನಿನಗೇ ಗೊತ್ತು. ಒಂದುವೇಳೆ ನಾನು ಇವತ್ತು ಆ ಪಾಪಪರಿಹಾರಕ ಬಲಿಯ ಪ್ರಾಣಿ ಮಾಂಸ ತಿಂದಿದ್ರೆ ಅದನ್ನ ಯೆಹೋವ ಮೆಚ್ತಿದ್ನಾ?” ಅಂದ. 20 ಆರೋನ ಹೇಳಿದ ಮಾತು ಮೋಶೆಗೆ ಸರಿ ಅನಿಸ್ತು.
11 ಆಮೇಲೆ ಯೆಹೋವ ಮೋಶೆ ಮತ್ತು ಆರೋನನಿಗೆ ಹೀಗಂದನು: 2 “ನೀವು ಇಸ್ರಾಯೇಲ್ಯರಿಗೆ ಏನು ಹೇಳಬೇಕಂದ್ರೆ ‘ಭೂಮಿ ಮೇಲೆ ವಾಸ ಮಾಡೋ ಜೀವಿಗಳಲ್ಲಿ ನೀವು ಯಾವುದನ್ನೆಲ್ಲ ತಿನ್ನಬಹುದಂದ್ರೆ:+ 3 ಕಾಲಿನ ಗೊರಸು ಪೂರ್ತಿಯಾಗಿ ಸೀಳಿರೋ, ಮೆಲುಕು ಹಾಕೋ ಪ್ರಾಣಿಯನ್ನ ತಿನ್ನಬಹುದು.
4 ಮೆಲುಕು ಹಾಕಿದ್ರೂ ಕಾಲಿನ ಗೊರಸು ಸೀಳಿರದ ಪ್ರಾಣಿಯನ್ನ ಅಥವಾ ಕಾಲಿನ ಗೊರಸು ಸೀಳಿದ್ರೂ ಮೆಲುಕು ಹಾಕದೆ ಇರೋ ಪ್ರಾಣಿಯನ್ನ ತಿನ್ನಬಾರದು. ಒಂಟೆ ಮೆಲುಕು ಹಾಕುತ್ತೆ, ಆದ್ರೆ ಕಾಲಿನ ಗೊರಸು ಸೀಳಿರಲ್ಲ. ಹಾಗಾಗಿ ಅದು ನಿಮಗೆ ಅಶುದ್ಧ.+ 5 ಬೆಟ್ಟದ ಮೊಲ+ ಮೆಲುಕು ಹಾಕುತ್ತೆ, ಆದ್ರೆ ಕಾಲಿನ ಗೊರಸು ಸೀಳಿರಲ್ಲ. ಹಾಗಾಗಿ ಅದು ನಿಮಗೆ ಅಶುದ್ಧ. 6 ಮೊಲ ಮೆಲುಕು ಹಾಕುತ್ತೆ, ಆದ್ರೆ ಕಾಲಿನ ಗೊರಸು ಸೀಳಿರಲ್ಲ. ಹಾಗಾಗಿ ಅದು ನಿಮಗೆ ಅಶುದ್ಧ. 7 ಹಂದಿಯ+ ಗೊರಸು ಪೂರ್ತಿ ಸೀಳಿದ್ರೂ ಮೆಲುಕು ಹಾಕಲ್ಲ. ಹಾಗಾಗಿ ಅದು ನಿಮಗೆ ಅಶುದ್ಧ. 8 ಇವುಗಳಲ್ಲಿ ಯಾವುದ್ರ ಮಾಂಸವನ್ನೂ ತಿನ್ನಬಾರದು. ಇವು ಸತ್ತಾಗ ಮುಟ್ಟಲೂಬಾರದು. ಇವು ನಿಮಗೆ ಅಶುದ್ಧ.+
9 ನೀರಲ್ಲಿ ವಾಸಿಸೋ ಜೀವಿಗಳಲ್ಲಿ ನೀವು ಯಾವುದನ್ನೆಲ್ಲ ತಿನ್ನಬಹುದಂದ್ರೆ: ಸಮುದ್ರ ಅಥವಾ ನದಿಯಲ್ಲಿರೋ ಯಾವ ಜೀವಿಗಳಿಗೆ ರೆಕ್ಕೆ ಮತ್ತು ಹುರುಪೆ ಇರುತ್ತೋ ಆ ಎಲ್ಲ ಜೀವಿಗಳನ್ನ ತಿನ್ನಬಹುದು.+ 10 ಸಮುದ್ರ ಹಾಗೂ ನದಿಯಲ್ಲಿರೋ ಗುಂಪುಗುಂಪಾದ ಚಿಕ್ಕಚಿಕ್ಕ ಜೀವಿಗಳಲ್ಲಿ ಮತ್ತು ಬೇರೆ ಎಲ್ಲ ಜೀವಿಗಳಲ್ಲಿ ಯಾವುದಕ್ಕೆ ರೆಕ್ಕೆ, ಹುರುಪೆ ಇರಲ್ವೋ ಅಂಥ ಜೀವಿಗಳು ನಿಮಗೆ ಅಶುದ್ಧ. 11 ಅವು ಅಶುದ್ಧ ಆಗಿರೋದ್ರಿಂದ ಅದ್ರ ಮಾಂಸ ತಿನ್ನಲೇಬಾರದು.+ ಅವು ಸತ್ತಾಗ ಮುಟ್ಟಲೂಬಾರದು. 12 ರೆಕ್ಕೆ ಮತ್ತು ಹುರುಪೆ ಇಲ್ಲದ ನೀರಲ್ಲಿರೋ ಎಲ್ಲ ಜೀವಿಗಳು ನಿಮಗೆ ಅಶುದ್ಧ.
13 ನೀವು ತಿನ್ನಬಾರದ ಮತ್ತು ಅಶುದ್ಧವಾಗಿ ನೋಡಬೇಕಾದ ಪಕ್ಷಿಗಳು ಯಾವುದಂದ್ರೆ ಹದ್ದು,+ ಕಡಲ ಗಿಡುಗ, ಕಪ್ಪು ರಣಹದ್ದು,+ 14 ಕೆಂಪು ಗಿಡುಗ, ಎಲ್ಲ ಜಾತಿಯ ಕಪ್ಪು ಗಿಡುಗಗಳು, 15 ಎಲ್ಲ ಜಾತಿಯ ಕಾಗೆಗಳು, 16 ಉಷ್ಟ್ರಪಕ್ಷಿ, ಗೂಬೆ, ಕಡಲ ಹಕ್ಕಿ, ಎಲ್ಲ ಜಾತಿಯ ಗಿಡುಗಗಳು, 17 ಚಿಕ್ಕ ಗೂಬೆ, ನೀರುಕಾಗೆ, ಉದ್ದ ಕಿವಿಯ ಗೂಬೆ, 18 ಹಂಸ, ನೇರೆಹಕ್ಕಿ,* ರಣಹದ್ದು, 19 ಕೊಕ್ಕರೆ, ಎಲ್ಲ ಜಾತಿಯ ಕ್ರೌಂಚ, ಚಂದ್ರಮುಕುಟ ಹಕ್ಕಿ ಮತ್ತು ಬಾವಲಿ. 20 ರೆಕ್ಕೆ ಇದ್ದು ನಾಲ್ಕು ಕಾಲಿಂದ ಹರಿದಾಡೋ ಗುಂಪುಗುಂಪಾಗಿರೋ ಎಲ್ಲ ಕೀಟಗಳು ನಿಮಗೆ ಅಶುದ್ಧ.
21 ರೆಕ್ಕೆ ಇರೋ ನಾಲ್ಕು ಕಾಲಿಂದ ಹರಿದಾಡೋ ಮತ್ತು ಗುಂಪುಗುಂಪಾಗಿರೋ ಕೀಟಗಳಲ್ಲಿ ಯಾವುದಕ್ಕೆ ನೆಲದ ಮೇಲೆ ಜಿಗಿಯೋಕೆ ಮುದುರಿಕೊಂಡಿರೋ ಹಿಂಗಾಲುಗಳು ಇದ್ಯೋ ಅವುಗಳನ್ನ ಮಾತ್ರ ನೀವು ತಿನ್ನಬಹುದು. 22 ನೀವು ತಿನ್ನಬಹುದಾದ ಕೀಟಗಳು: ವಲಸೆ ಹೋಗೋ ಬೇರೆ ಬೇರೆ ಜಾತಿಯ ಮಿಡತೆಗಳು, ಸಾಮಾನ್ಯ ಮಿಡತೆಗಳು,+ ಚಿಮ್ಮಂಡೆಗಳು, ಕುಪ್ಪಳಿಸೋ ಮಿಡತೆಗಳು. 23 ಆದ್ರೆ ರೆಕ್ಕೆ ಇದ್ದು ನಾಲ್ಕು ಕಾಲಿಂದ ಹರಿದಾಡೋ ಗುಂಪುಗುಂಪಾಗಿರೋ ಬೇರೆ ಎಲ್ಲ ಕೀಟಗಳು ನಿಮಗೆ ಅಶುದ್ಧ. 24 ಇವುಗಳನ್ನ ತಿಂದ್ರೆ ನೀವು ಅಶುದ್ಧ ಆಗ್ತಿರ. ಇವು ಸತ್ತಾಗ ಮುಟ್ಟಿದವನು ಸಂಜೆ ತನಕ* ಅಶುದ್ಧ.+ 25 ಆ ಕೀಟಗಳಲ್ಲಿ ಯಾವುದೇ ಸತ್ತುಬಿದ್ರೂ ಎತ್ತಿದವನು ತನ್ನ ಬಟ್ಟೆಗಳನ್ನ ಒಗೆದುಕೊಳ್ಳಬೇಕು.+ ಅವನು ಸಂಜೆ ತನಕ ಅಶುದ್ಧ.
26 ಯಾವ ಪ್ರಾಣಿಯ ಗೊರಸು ಸ್ವಲ್ಪ ಸೀಳಿದ್ರೂ ಎರಡು ಭಾಗ ಆಗಿಲ್ವೋ, ಅದು ಮೆಲುಕು ಹಾಕಲ್ವೋ ಅಂಥ ಪ್ರಾಣಿ ನಿಮಗೆ ಅಶುದ್ಧ. ಅವುಗಳನ್ನ ಮುಟ್ಟಿದವನು ಅಶುದ್ಧ.+ 27 ಪಂಜಗಳಿಂದ ನಡಿಯೋ ನಾಲ್ಕು ಕಾಲಿನ ಎಲ್ಲ ಪ್ರಾಣಿಗಳು ನಿಮಗೆ ಅಶುದ್ಧ. ಆ ಪ್ರಾಣಿಗಳಲ್ಲಿ ಸತ್ತುಹೋದದ್ದನ್ನ ಮುಟ್ಟಿದವನು ಸಂಜೆ ತನಕ ಅಶುದ್ಧ. 28 ಸತ್ತ ಆ ಪ್ರಾಣಿಯನ್ನ ಎತ್ತಿದವನು ತನ್ನ ಬಟ್ಟೆಗಳನ್ನ ಒಗೆದುಕೊಳ್ಳಬೇಕು.+ ಅವನು ಸಂಜೆ ತನಕ ಅಶುದ್ಧ.+ ಪಂಜಗಳಿಂದ ನಡಿಯೋ ಪ್ರಾಣಿಗಳು ನಿಮಗೆ ಅಶುದ್ಧ.
29 ಭೂಮಿ ಮೇಲೆ ಗುಂಪುಗುಂಪಾಗಿರೋ ಜೀವಿಗಳಲ್ಲಿ ನಿಮಗೆ ಅಶುದ್ಧವಾದ ಜೀವಿಗಳು: ಹೆಗ್ಗಣ, ಇಲಿ,+ ಎಲ್ಲ ಜಾತಿಯ ಹಲ್ಲಿಗಳು, 30 ಮನೆಹಲ್ಲಿ, ದೊಡ್ಡ ಹಲ್ಲಿ, ಉದ್ದ ಬಾಲದ ಹಲ್ಲಿ,* ಮರಳು ಹಲ್ಲಿ ಮತ್ತು ಊಸರವಳ್ಳಿ. 31 ಇವುಗಳು ನಿಮಗೆ ಅಶುದ್ಧ.+ ಇವು ಸತ್ತಾಗ ಇವುಗಳನ್ನ ಮುಟ್ಟಿದವನು ಸಂಜೆ ತನಕ ಅಶುದ್ಧ.+
32 ಈ ಜೀವಿಗಳಲ್ಲಿ ಯಾವುದಾದ್ರೂ ಸತ್ತ ಮೇಲೆ ಬಟ್ಟೆ, ಚರ್ಮ, ಗೋಣಿ ಅಥವಾ ಬೇರೆ ಯಾವ ವಸ್ತು ಮೇಲಾಗಲಿ ಮರದ ಪಾತ್ರೆಯಲ್ಲಾಗಲಿ ಬಿದ್ರೆ ಅದು ಅಶುದ್ಧ. ಆ ಪಾತ್ರೆ ಯಾವುದೇ ಆಗಿರಲಿ ಅದನ್ನ ಯಾವುದಕ್ಕೇ ಬಳಸ್ತಿರಲಿ ನೀರಿಂದ ತೊಳಿಬೇಕು. ಅದು ಸಂಜೆ ತನಕ ಅಶುದ್ಧ. ಆಮೇಲೆ ಅದು ಶುದ್ಧ. 33 ಸತ್ತ ಆ ಜೀವಿ ಮಣ್ಣಿನ ಪಾತ್ರೆಲಿ ಬಿದ್ರೆ ಅದನ್ನ ಒಡೆದು ಬಿಡಬೇಕು. ಆ ಪಾತ್ರೆಲಿ ಏನೇ ಇದ್ರೂ ಅದು ಅಶುದ್ಧ.+ 34 ಅಂಥ ಪಾತ್ರೆಯಲ್ಲಿರೋ ನೀರು ಯಾವುದೇ ಆಹಾರದ ಮೇಲೆ ಬಿದ್ರೂ ಆ ಆಹಾರ ಅಶುದ್ಧ. ಆ ಪಾತ್ರೆಯಲ್ಲಿ ಕುಡಿಯೋದು ಏನೇ ಇದ್ರೂ ಅದು ಅಶುದ್ಧ. 35 ಸತ್ತ ಜೀವಿ ಯಾವುದ್ರ ಮೇಲೆ ಬಿದ್ರೂ ಅದು ಅಶುದ್ಧ. ಗೂಡು ಒಲೆ ಅಥವಾ ಚಿಕ್ಕ ಒಲೆ ಮೇಲೆ ಬಿದ್ರೆ ಆ ಒಲೆಯನ್ನ ಚೂರುಚೂರು ಮಾಡಬೇಕು. ಅದು ನಿಮಗೆ ಅಶುದ್ಧ. ಅದು ಅಶುದ್ಧವಾಗೇ ಇರುತ್ತೆ. 36 ಸತ್ತ ಜೀವಿ ಬುಗ್ಗೆಯಲ್ಲಾಗಲಿ ನೀರನ್ನ ಶೇಖರಿಸಿಡೋ ಗುಂಡಿಯಲ್ಲಾಗಲಿ ಬಿದ್ರೆ ಅದು ಮಾತ್ರ ಅಶುದ್ಧ. ಅದ್ರಿಂದ ಆ ಸತ್ತ ಜೀವಿಯನ್ನ ತೆಗೆದವನು ಅಶುದ್ಧ. 37 ಬಿತ್ತಬೇಕಾದ ಬೀಜಗಳ ಮೇಲೆ ಸತ್ತ ಆ ಜೀವಿ ಬಿದ್ರೆ ಆ ಬೀಜಗಳು ಅಶುದ್ಧ ಆಗಲ್ಲ. 38 ಆದ್ರೆ ಸತ್ತ ಜೀವಿ ಯಾವುದಾದ್ರೂ ಒಂದು ಭಾಗ ನೆನೆದಿರೋ ಬೀಜಗಳ ಮೇಲೆ ಬಿದ್ರೆ ಆ ಬೀಜಗಳು ನಿಮಗೆ ಅಶುದ್ಧ.
39 ನೀವು ಆಹಾರಕ್ಕಾಗಿ ಬಳಸೋ ಪ್ರಾಣಿಗಳಲ್ಲಿ ಯಾವುದಾದ್ರೂ ಸತ್ರೆ ಅದನ್ನ ಮುಟ್ಟಿದವನು ಸಂಜೆ ತನಕ ಅಶುದ್ಧ.+ 40 ಸತ್ತ ಆ ಪ್ರಾಣಿಯ ಯಾವುದೇ ಭಾಗವನ್ನ ಯಾರಾದ್ರೂ ತಿಂದ್ರೆ ಅವನು ತನ್ನ ಬಟ್ಟೆಗಳನ್ನ ಒಗೆದುಕೊಳ್ಳಬೇಕು. ಅವನು ಸಂಜೆ ತನಕ ಅಶುದ್ಧ.+ ಸತ್ತ ಆ ಪ್ರಾಣಿಯನ್ನ ಎತ್ಕೊಂಡು ಹೋದವನೂ ತನ್ನ ಬಟ್ಟೆಗಳನ್ನ ಒಗೆದುಕೊಳ್ಳಬೇಕು. ಅವನು ಸಂಜೆ ತನಕ ಅಶುದ್ಧ. 41 ಭೂಮಿ ಮೇಲೆ ಗುಂಪುಗುಂಪಾಗಿ ಜೀವಿಸೋ ಎಲ್ಲ ಅಶುದ್ಧ ಜೀವಿಗಳು ನಿಮಗೆ ಅಶುದ್ಧ.+ ಅವುಗಳನ್ನ ತಿನ್ನಲೇಬಾರದು. 42 ಹೊಟ್ಟೆಯಿಂದ ತೆವಳೋ, ನಾಲ್ಕು ಕಾಲಿಂದ ಹರಿದಾಡೋ ಯಾವುದನ್ನೂ ಮತ್ತು ತುಂಬ ಕಾಲಿರೋ ಗುಂಪುಗುಂಪು ಜೀವಿಗಳಲ್ಲಿ ಯಾವುದನ್ನೂ ತಿನ್ನಬಾರದು. ಅವು ನಿಮಗೆ ಅಶುದ್ಧ.+ 43 ಗುಂಪಾಗಿರೋ ಜೀವಿಗಳಲ್ಲಿ ಅಶುದ್ಧವಾದ ಯಾವುದನ್ನಾದ್ರೂ ತಿಂದು ನಿಮ್ಮ ಬಗ್ಗೆ ನಿಮಗೇ ಹೇಸಿಗೆ ಆಗೋ ತರ ಮಾಡ್ಕೊಬೇಡಿ, ನಿಮ್ಮನ್ನ ಮಲಿನ ಮಾಡ್ಕೊಬೇಡಿ. ಅವುಗಳಿಂದ ಅಶುದ್ಧ ಆಗಬೇಡಿ.+ 44 ಯಾಕಂದ್ರೆ ನಾನು ನಿಮ್ಮ ದೇವರಾದ ಯೆಹೋವ.+ ನಾನು ಪವಿತ್ರನಾಗಿ ಇರೋದ್ರಿಂದ+ ನೀವು ಶುದ್ಧರಾಗೇ ಪವಿತ್ರರಾಗೇ ಇರಬೇಕು.+ ಭೂಮಿ ಮೇಲೆ ಚಲಿಸೋ ಗುಂಪುಗುಂಪಾಗಿ ಇರೋ ಯಾವುದೇ ಅಶುದ್ಧ ಜೀವಿಯನ್ನ ತಿಂದು ನೀವು ಅಶುದ್ಧ ಆಗಬಾರದು. 45 ಯಾಕಂದ್ರೆ ನಾನು ಯೆಹೋವ. ನಾನು ನಿಮ್ಮ ದೇವರು ಅಂತ ತೋರಿಸ್ಕೊಡೋಕೆ ನಿಮ್ಮನ್ನ ಈಜಿಪ್ಟಿಂದ* ಬಿಡಿಸ್ಕೊಂಡು ಬರ್ತಾ ಇದ್ದೀನಿ.+ ನಾನು ಪವಿತ್ರನಾಗಿ+ ಇರೋದ್ರಿಂದ ನೀವು ಸಹ ಪವಿತ್ರರು ಆಗಿರಬೇಕು.+
46 ಪ್ರಾಣಿಗಳು, ಪಕ್ಷಿಗಳು, ನೀರಲ್ಲಿರೋ ಎಲ್ಲ ಜೀವಿಗಳು, ಭೂಮಿ ಮೇಲೆ ಗುಂಪುಗುಂಪಾಗಿರೋ ಎಲ್ಲ ಜೀವಿಗಳ ವಿಷ್ಯದಲ್ಲಿ ನೀವು ಪಾಲಿಸಬೇಕಾದ ನಿಯಮಗಳು ಇವೇ. 47 ಯಾವ ಜೀವಿಗಳು ಶುದ್ಧ, ಯಾವುದು ಅಶುದ್ಧ, ಯಾವ ಜೀವಿಗಳನ್ನ ತಿನ್ನಬಹುದು, ಯಾವುದನ್ನ ತಿನ್ನಬಾರದು ಅಂತ ನಿಮಗೆ ಗೊತ್ತಾಗೋಕೆ ಈ ನಿಯಮಗಳಿವೆ.’”+
12 ಯೆಹೋವ ಮೋಶೆಗೆ ಇನ್ನೂ ಹೇಳಿದ್ದೇನಂದ್ರೆ 2 “ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಒಬ್ಬ ಸ್ತ್ರೀಗೆ ಗಂಡು ಮಗು ಹುಟ್ಟಿದ್ರೆ ಅವಳು ಏಳು ದಿನ ಅಶುದ್ಧ. ತಿಂಗಳ ಮುಟ್ಟಿಂದ ಅಶುದ್ಧ ಆಗಿರೋ ತರಾನೇ ಈ ಸಮಯದಲ್ಲೂ ಅಶುದ್ಧ.+ 3 ಎಂಟನೇ ದಿನದಲ್ಲಿ ಆ ಮಗುಗೆ ಸುನ್ನತಿ* ಮಾಡಿಸಬೇಕು.+ 4 ಅವಳಿಗೆ ರಕ್ತಸ್ರಾವ ಆಗೋದ್ರಿಂದ ಶುದ್ಧ ಆಗೋಕೆ ಇನ್ನೂ 33 ದಿನ ಹಿಡಿಯುತ್ತೆ. ಅವಳು ಶುದ್ಧ ಆಗೋ ತನಕ ಅವಳು ಪವಿತ್ರವಾದ ಯಾವುದನ್ನೂ ಮುಟ್ಟಬಾರದು, ಆರಾಧನಾ ಸ್ಥಳದ ಒಳಗೆ ಬರಬಾರದು.
5 ಅವಳಿಗೆ ಹೆಣ್ಣು ಮಗು ಹುಟ್ಟಿದ್ರೆ 14 ದಿನ ಅಶುದ್ಧ. ತಿಂಗಳ ಮುಟ್ಟಿಂದ ಅಶುದ್ಧ ಆಗಿರೋ ತರಾನೇ ಈ ಸಮಯದಲ್ಲೂ ಅಶುದ್ಧ. ಅವಳಿಗೆ ರಕ್ತಸ್ರಾವ ಆಗೋದ್ರಿಂದ ಅವಳು ಶುದ್ಧ ಆಗೋಕೆ ಇನ್ನೂ 66 ದಿನ ಹಿಡಿಯುತ್ತೆ. 6 ಅವಳಿಗೆ ಗಂಡು ಮಗು ಹುಟ್ಟಿದ್ರೂ ಹೆಣ್ಣು ಮಗು ಹುಟ್ಟಿದ್ರೂ ಅವಳು ಅಶುದ್ಧ ಆಗಿದ್ದ ದಿನಗಳು ಮುಗಿದ ಮೇಲೆ ಸರ್ವಾಂಗಹೋಮ ಬಲಿಗಾಗಿ ಒಂದು ವರ್ಷದೊಳಗಿನ ಟಗರು,+ ಪಾಪಪರಿಹಾರಕ ಬಲಿಗಾಗಿ ಒಂದು ಪಾರಿವಾಳ ಮರಿ ಅಥವಾ ಒಂದು ಕಾಡುಪಾರಿವಾಳ ತರಬೇಕು. ಅವುಗಳನ್ನ ದೇವದರ್ಶನ ಡೇರೆಯ ಬಾಗಿಲ ಹತ್ರ ತಂದು ಪುರೋಹಿತನಿಗೆ ಕೊಡಬೇಕು. 7 ಪುರೋಹಿತ ಅದನ್ನ ಯೆಹೋವನ ಮುಂದೆ ಅರ್ಪಿಸಬೇಕು, ಅವಳಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಇದ್ರಿಂದ ರಕ್ತಸ್ರಾವದಿಂದಾದ ಅಶುದ್ಧತೆ ಹೋಗಿ ಅವಳು ಶುದ್ಧ ಆಗ್ತಾಳೆ. ಸ್ತ್ರೀಗೆ ಒಂದು ಮಗು ಹುಟ್ಟಿದಾಗ ಪಾಲಿಸಬೇಕಾದ ನಿಯಮ ಇದೇ. 8 ಅವಳಿಗೆ ಟಗರು ಕೊಡೋಕೆ ಆಗದಿದ್ರೆ ಎರಡು ಕಾಡುಪಾರಿವಾಳ ಅಥವಾ ಎರಡು ಪಾರಿವಾಳ ಮರಿ ಕೊಡಬೇಕು.+ ಅವುಗಳಲ್ಲಿ ಒಂದನ್ನ ಸರ್ವಾಂಗಹೋಮ ಬಲಿಗಾಗಿ, ಇನ್ನೊಂದನ್ನ ಪಾಪಪರಿಹಾರಕ ಬಲಿಗಾಗಿ ಕೊಡಬೇಕು. ಪುರೋಹಿತ ಅವಳಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವಳು ಶುದ್ಧ ಆಗ್ತಾಳೆ.’”
13 ಮೋಶೆ ಮತ್ತು ಆರೋನನಿಗೆ ಯೆಹೋವ ಇನ್ನೂ ಹೇಳಿದ್ದೇನಂದ್ರೆ: 2 “ಒಬ್ಬನ ಚರ್ಮದ ಮೇಲೆ ಊತ, ಗಾಯದ ಮೇಲೆ ಗಟ್ಟಿ ಚರ್ಮ* ಅಥವಾ ಕಲೆ ಕಾಣಿಸ್ಕೊಂಡ್ರೆ, ಅದ್ರಲ್ಲಿ ಕುಷ್ಠರೋಗದ*+ ಲಕ್ಷಣಗಳು ಕಂಡುಬಂದ್ರೆ ಅವನನ್ನ ಪುರೋಹಿತರಾದ ಆರೋನನ ಹತ್ರ ಅಥವಾ ಅವನ ಮಕ್ಕಳಲ್ಲಿ ಒಬ್ಬನ ಹತ್ರ ಕರ್ಕೊಂಡು ಬರಬೇಕು.+ 3 ಪುರೋಹಿತ ಆ ವ್ಯಕ್ತಿ ಚರ್ಮದ ಮೇಲಿರೋ ಸೋಂಕನ್ನ ಪರೀಕ್ಷಿಸಬೇಕು. ಸೋಂಕು ಇರೋ ಚರ್ಮದ ಮೇಲಿನ ಕೂದಲು ಬೆಳ್ಳಗಾಗಿದ್ರೆ, ಆ ಸೋಂಕು ಚರ್ಮದ ಒಳಗೆ ಹೋಗಿದ್ರೆ ಅದು ಕುಷ್ಠರೋಗ. ಪುರೋಹಿತ ಅದನ್ನ ಪರೀಕ್ಷಿಸಿ, ಆಮೇಲೆ ಆ ವ್ಯಕ್ತಿಯನ್ನ ಅಶುದ್ಧ ಅಂತ ಎಲ್ರಿಗೂ ಹೇಳಬೇಕು. 4 ಒಂದುವೇಳೆ ಚರ್ಮದ ಮೇಲಿರೋ ಕಲೆ ಬೆಳ್ಳಗಿದ್ರೆ ಚರ್ಮದ ಒಳಭಾಗದ ತನಕ ಹೋಗಿಲ್ಲಾಂದ್ರೆ, ಆ ಕಲೆ ಮೇಲಿರೋ ಕೂದಲು ಬೆಳ್ಳಗೆ ಆಗಿಲ್ಲಾಂದ್ರೆ ಪುರೋಹಿತ ಅವನನ್ನ ಬೇರೆಯವರಿಂದ ಏಳು ದಿನ ದೂರ ಇಡಬೇಕು.+ 5 ಏಳನೇ ದಿನ ಪುರೋಹಿತ ಮತ್ತೆ ಪರೀಕ್ಷಿಸಬೇಕು. ಆ ಸೋಂಕು ಮೊದಲಿನ ತರಾನೇ ಇದೆ, ಚರ್ಮದಲ್ಲಿ ಹರಡಿಲ್ಲಾಂದ್ರೆ ಪುರೋಹಿತ ಅವನನ್ನ ಬೇರೆಯವರಿಂದ ಇನ್ನೂ ಏಳು ದಿನ ದೂರ ಇಡಬೇಕು.
6 ಏಳನೇ ದಿನ ಪುರೋಹಿತ ಮತ್ತೆ ಪರೀಕ್ಷಿಸಬೇಕು. ಆಗ ಆ ಸೋಂಕು ಕಮ್ಮಿ ಆಗಿದ್ರೆ, ಚರ್ಮದಲ್ಲಿ ಹರಡಿಲ್ಲಾಂದ್ರೆ ಆ ವ್ಯಕ್ತಿ ಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು.+ ಯಾಕಂದ್ರೆ ಅದು ಕುಷ್ಠ ಅಲ್ಲ, ಬರೀ ಗಾಯದ ಮೇಲೆ ಇರೋ ಗಟ್ಟಿ ಚರ್ಮ ಅಷ್ಟೆ. ಆ ವ್ಯಕ್ತಿ ತನ್ನ ಬಟ್ಟೆ ಒಗೆದುಕೊಳ್ಳಬೇಕು. ಆಗ ಅವನು ಶುದ್ಧ ಆಗ್ತಾನೆ. 7 ಆದ್ರೆ ಅವನನ್ನ ಮೊದಲನೇ ಸಲ ಬೇರೆಯವರಿಂದ ದೂರ ಇಟ್ಟಾಗ ಆ ಏಳು ದಿನದಲ್ಲಿ ಚರ್ಮದ ಮೇಲಿದ್ದ ಸೋಂಕು ಬೇರೆ ಕಡೆಗೂ ಹರಡಿದ್ರೆ ಮತ್ತೆ ಪುರೋಹಿತನಿಗೆ ತೋರಿಸಬೇಕು. 8 ಆಗ ಪುರೋಹಿತ ಆ ಸೋಂಕು ಹರಡಿದ್ಯಾ ಅಂತ ನೋಡಬೇಕು. ಹರಡಿದ್ರೆ ಆ ವ್ಯಕ್ತಿ ಅಶುದ್ಧ ಅಂತ ಎಲ್ರಿಗೂ ಹೇಳಬೇಕು. ಯಾಕಂದ್ರೆ ಅದು ಕುಷ್ಠರೋಗ.+
9 ಒಬ್ಬ ವ್ಯಕ್ತಿಯಲ್ಲಿ ಕುಷ್ಠದ ಲಕ್ಷಣಗಳು ಕಾಣಿಸ್ಕೊಂಡ್ರೆ ಅವನನ್ನ ಪುರೋಹಿತನ ಹತ್ರ ಕರ್ಕೊಂಡು ಬರಬೇಕು. 10 ಪುರೋಹಿತ ಅವನನ್ನ ಪರೀಕ್ಷಿಸಬೇಕು.+ ಚರ್ಮ ಊದ್ಕೊಂಡು ಬೆಳ್ಳಗಾಗಿದ್ರೆ, ಅದ್ರ ಮೇಲಿರೋ ಕೂದಲು ಬೆಳ್ಳಗಾಗಿದ್ರೆ, ಊತದ ಮೇಲೆ ತೆರೆದ ಹುಣ್ಣಾಗಿದ್ರೆ+ 11 ಅದು ತುಂಬಾ ದಿನ ಇರೋ ಕುಷ್ಠರೋಗ. ಅವನು ಅಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು. ಅವನು ಅಶುದ್ಧ ಆಗಿರೋದ್ರಿಂದ ಅವನನ್ನ ಪರೀಕ್ಷಿಸೋಕ್ಕಂತ ಮತ್ತೆ ದೂರ ಇಡಬೇಕಾಗಿಲ್ಲ.+ 12 ಆದ್ರೆ ಒಬ್ಬನ ದೇಹದ ಮೇಲೆಲ್ಲ ಕುಷ್ಠ ಹರಡ್ಕೊಂಡಿದ್ರೆ ಪುರೋಹಿತ ನೋಡಿದಾಗ ಅದು ತಲೆಯಿಂದ ಕಾಲಿನ ತನಕ 13 ಚರ್ಮದ ಮೇಲೆಲ್ಲ ಹರಡಿದೆ ಅಂತ ಗೊತ್ತಾದ್ರೆ ಆ ಕುಷ್ಠ ಬೇರೆಯವರಿಗೆ ಹರಡಲ್ಲ ಅಂತ* ಎಲ್ರಿಗೂ ಹೇಳಬೇಕು. ಅವನ ಚರ್ಮವೆಲ್ಲ ಬೆಳ್ಳಗಿದ್ರೂ ಅವನು ಅಶುದ್ಧನಲ್ಲ. 14 ಆದ್ರೆ ಹುಣ್ಣು ಕಾಣಿಸ್ಕೊಂಡ್ರೆ ಅವನು ಅಶುದ್ಧ. 15 ಪುರೋಹಿತ ಆ ಹುಣ್ಣನ್ನ ನೋಡಿದ ಮೇಲೆ ಅವನನ್ನ ಅಶುದ್ಧ ಅಂತ ಎಲ್ರಿಗೂ ಹೇಳಬೇಕು.+ ಆ ಹುಣ್ಣು ಅಶುದ್ಧ. ಯಾಕಂದ್ರೆ ಅದು ಕುಷ್ಠ.+ 16 ಒಂದುವೇಳೆ ಆ ಹುಣ್ಣು ವಾಸಿ ಆದ್ರೆ ಅವನು ಪುರೋಹಿತನ ಹತ್ರ ಬರಬೇಕು. 17 ಆಗ ಪುರೋಹಿತ ಅವನನ್ನ ಪರೀಕ್ಷಿಸಬೇಕು.+ ಆ ಸೋಂಕು ವಾಸಿ ಆಗಿದ್ರೆ ಅವನನ್ನ ಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು.
18 ಒಬ್ಬನಿಗೆ ಚರ್ಮದ ಮೇಲೆ ಗುಳ್ಳೆ ಬಂದು ವಾಸಿಯಾದ್ರೂ 19 ಗುಳ್ಳೆ ಇದ್ದ ಜಾಗ ಊದ್ಕೊಂಡು ಚರ್ಮ ಬೆಳ್ಳಗಾದ್ರೆ ಅಥವಾ ಕೆಂಪು-ಬಿಳಿ ಮಿಶ್ರಿತ ಕಲೆ ಆದ್ರೆ ಅದನ್ನ ಪುರೋಹಿತನಿಗೆ ತೋರಿಸಬೇಕು. 20 ಪುರೋಹಿತ ಅದನ್ನ ಪರೀಕ್ಷೆ ಮಾಡಿದಾಗ+ ಅದು ಚರ್ಮದ ಒಳಗಡೆ ತನಕ ಹೋಗಿದ್ರೆ, ಅದ್ರ ಮೇಲಿನ ಕೂದಲು ಬೆಳ್ಳಗಾಗಿದ್ರೆ ಆ ವ್ಯಕ್ತಿ ಅಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು. ಅದು ಗುಳ್ಳೆ ಇದ್ದ ಜಾಗದಿಂದ ಶುರುವಾದ ಕುಷ್ಠರೋಗ. 21 ಆ ಜಾಗದಲ್ಲಿ ಬಿಳಿ ಕೂದಲು ಇಲ್ಲಾಂದ್ರೆ ಆ ಕಲೆ ಚರ್ಮದ ಒಳಗೆ ಹೋಗಿಲ್ಲಾಂದ್ರೆ ಅದು ಮಾಸಿದ್ರೆ ಪುರೋಹಿತ ಆ ವ್ಯಕ್ತಿನ ಬೇರೆಯವರಿಂದ ಏಳು ದಿನ ದೂರ ಇಡಬೇಕು.+ 22 ಆ ಕಲೆ ಚರ್ಮದ ಮೇಲೆ ಹರಡಿರೋದು ಕಂಡ್ರೆ ಅವನು ಅಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು. ಅದು ಕುಷ್ಠರೋಗ. 23 ಆದ್ರೆ ಆ ಕಲೆ ಇದ್ದಲ್ಲೇ ಇದ್ದು ಹರಡದೇ ಇದ್ರೆ ಅದು ಗುಳ್ಳೆಯಿಂದಾದ ಉರಿಯೂತ ಅಷ್ಟೆ. ಅದು ಕುಷ್ಠ ಅಲ್ಲ. ಹಾಗಾಗಿ ಆ ವ್ಯಕ್ತಿ ಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು.+
24 ಒಬ್ಬ ವ್ಯಕ್ತಿಗೆ ಬೆಂಕಿ ತಾಗಿ ಗಾಯ ಆಗಿ ಆ ಹಸಿ ಗಾಯ ಮಾಸಿ ಕೆಂಪು-ಬಿಳಿ ಮಿಶ್ರಿತ ಕಲೆ ಅಥವಾ ಬಿಳಿ ಕಲೆಯಾದ್ರೆ 25 ಅದನ್ನ ಪುರೋಹಿತ ಪರೀಕ್ಷಿಸಬೇಕು. ಆ ಕಲೆ ಮೇಲೆ ಇರೋ ಕೂದಲು ಬೆಳ್ಳಗಾದ್ರೆ ಆ ಕಲೆ ಚರ್ಮದ ಒಳಗೆ ಹೋಗಿದ್ರೆ ಅದು ಸುಟ್ಟಗಾಯದಿಂದ ಶುರುವಾದ ಕುಷ್ಠ. ಪುರೋಹಿತ ಆ ವ್ಯಕ್ತಿನ ಅಶುದ್ಧ ಅಂತ ಎಲ್ರಿಗೂ ಹೇಳಬೇಕು. ಅದು ಕುಷ್ಠರೋಗ. 26 ಆದ್ರೆ ಪುರೋಹಿತ ಆ ಕಲೆಯನ್ನ ಪರೀಕ್ಷಿಸುವಾಗ ಅದ್ರ ಮೇಲೆ ಬಿಳಿ ಕೂದಲು ಇಲ್ಲಾಂದ್ರೆ ಆ ಕಲೆ ಚರ್ಮದ ಒಳಗೆ ಹೋಗಿಲ್ಲಾಂದ್ರೆ ಅದು ಮಾಸಿದ್ರೆ ಪುರೋಹಿತ ಅವನನ್ನ ಬೇರೆಯವರಿಂದ ಏಳು ದಿನ ದೂರ ಇಡಬೇಕು.+ 27 ಏಳನೇ ದಿನ ಪುರೋಹಿತ ಆ ವ್ಯಕ್ತಿನ ಪರೀಕ್ಷಿಸಬೇಕು. ಆಗ ಆ ಕಲೆ ಚರ್ಮದ ಮೇಲೆಲ್ಲ ಹರಡಿದ್ರೆ ಅವನು ಅಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು. ಅದು ಕುಷ್ಠರೋಗ. 28 ಆದ್ರೆ ಆ ಕಲೆ ಇದ್ದಲ್ಲೇ ಇದೆ, ಚರ್ಮದಲ್ಲಿ ಎಲ್ಲೂ ಹರಡಿಲ್ಲ, ಮಾಸಿ ಹೋಗಿದ್ರೆ ಅದು ಕುಷ್ಠ ಅಲ್ಲ, ಸುಟ್ಟಗಾಯದಿಂದ ಆದ ಊತ ಅಷ್ಟೆ. ಹಾಗಾಗಿ ಆ ವ್ಯಕ್ತಿ ಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು.
29 ಒಬ್ಬ ಗಂಡಸು ಅಥವಾ ಹೆಂಗಸಿಗೆ ತಲೆ ಮೇಲೋ ಗಲ್ಲದ ಮೇಲೋ ಸೋಂಕಾದ್ರೆ 30 ಪುರೋಹಿತ ಅದನ್ನ ಪರೀಕ್ಷಿಸಬೇಕು.+ ಆ ಸೋಂಕು ಚರ್ಮದ ಒಳಗೆ ಹೋಗಿದ್ರೆ ಅಥವಾ ಅದ್ರ ಮೇಲೆ ಹಳದಿ ಬಣ್ಣದ ತೆಳುವಾದ ಕೂದಲಿದ್ರೆ ಆ ವ್ಯಕ್ತಿ ಅಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು. ಅದು ತಲೆಯ ಚರ್ಮದಲ್ಲಿ ಅಥವಾ ಗಡ್ಡದಲ್ಲಿ ಆಗೋ ಸೋಂಕು. ಅದು ತಲೆ ಅಥವಾ ಗಲ್ಲದ ಮೇಲೆ ಬರೋ ಕುಷ್ಠ. 31 ಆದ್ರೆ ಪುರೋಹಿತ ನೋಡಿದಾಗ ಸೋಂಕು ಚರ್ಮದ ಒಳಗೆ ಹೋಗಿಲ್ಲಾಂದ್ರೂ ಅದ್ರಲ್ಲಿ ಕಪ್ಪು ಕೂದಲು ಇಲ್ಲಾಂದ್ರೂ ಪುರೋಹಿತ ಆ ವ್ಯಕ್ತಿನ ಬೇರೆಯವರಿಂದ ಏಳು ದಿನ ದೂರ ಇಡಬೇಕು.+ 32 ಏಳನೇ ದಿನ ಪುರೋಹಿತ ಮತ್ತೆ ಆ ಸೋಂಕನ್ನ ಪರೀಕ್ಷಿಸಬೇಕು. ಅದು ಹರಡಿಲ್ಲಾಂದ್ರೆ ಅದ್ರಲ್ಲಿ ಹಳದಿ ಕೂದಲು ಬೆಳೆದಿಲ್ಲಾಂದ್ರೆ ಆ ಸೋಂಕು ಚರ್ಮದ ಒಳಗೆ ಹೋಗಿಲ್ಲಾಂದ್ರೆ 33 ಆ ವ್ಯಕ್ತಿ ತನ್ನ ತಲೆಕೂದಲು, ಗಡ್ಡ ತೆಗಿಬೇಕು. ಆದ್ರೆ ಸೋಂಕು ಇರೋ ಜಾಗದಲ್ಲಿ ಕೂದಲು ತೆಗಿಬಾರದು. ಆಮೇಲೆ ಪುರೋಹಿತ ಆ ವ್ಯಕ್ತಿನ ಪರೀಕ್ಷಿಸೋಕೆ ಬೇರೆಯವರಿಂದ ಏಳು ದಿನ ದೂರ ಇಡಬೇಕು.
34 ಏಳನೇ ದಿನ ಪುರೋಹಿತ ಆ ಸೋಂಕನ್ನ ಮತ್ತೆ ಪರೀಕ್ಷಿಸಬೇಕು. ತಲೆಬುರುಡೆ, ಗಡ್ಡದಲ್ಲಿದ್ದ ಸೋಂಕು ಚರ್ಮದ ಮೇಲೆ ಹರಡಿಲ್ಲಾಂದ್ರೆ, ಚರ್ಮದ ಒಳಗೆ ಹೋಗಿಲ್ಲಾಂದ್ರೆ ಆ ವ್ಯಕ್ತಿ ಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು. ಆ ವ್ಯಕ್ತಿ ತನ್ನ ಬಟ್ಟೆಗಳನ್ನ ಒಗೆದುಕೊಳ್ಳಬೇಕು. ಆಗ ಅವನು ಶುದ್ಧ ಆಗ್ತಾನೆ. 35 ಚರ್ಮದ ಮೇಲೆ ಸೋಂಕು ಮತ್ತೆ ಕಾಣಿಸ್ಕೊಂಡ್ರೆ 36 ಪುರೋಹಿತ ಅವನನ್ನ ಪರೀಕ್ಷಿಸಬೇಕು. ಸೋಂಕು ಅವನ ಚರ್ಮದ ಮೇಲೆ ಹರಡಿದ್ರೆ ಅದ್ರ ಮೇಲೆ ಹಳದಿ ಕೂದಲು ಇದ್ಯಾ ಇಲ್ವಾ ಅಂತ ನೋಡಬೇಕಾಗಿಲ್ಲ. ಅವನು ಅಶುದ್ಧನೇ. 37 ಆದ್ರೆ ಅವನನ್ನ ಪರೀಕ್ಷಿಸಿದಾಗ ಸೋಂಕು ಹರಡಿಲ್ಲಾಂದ್ರೆ, ಅದ್ರ ಮೇಲೆ ಕಪ್ಪು ಕೂದಲು ಬೆಳೆದಿದ್ರೆ ಸೋಂಕು ವಾಸಿ ಆಗಿದೆ ಅಂತರ್ಥ. ಅವನು ಶುದ್ಧ ಆಗಿದ್ದಾನೆ. ಅವನು ಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು.+
38 ಒಬ್ಬ ಗಂಡಸು ಅಥವಾ ಹೆಂಗಸಿಗೆ ಚರ್ಮದ ಮೇಲೆ ಬಿಳಿ ಕಲೆಗಳಾದ್ರೆ 39 ಪುರೋಹಿತ ಪರೀಕ್ಷಿಸಬೇಕು.+ ಅದು ನಸು ಬಿಳಿ ಬಣ್ಣದ ಕಲೆಗಳಾಗಿದ್ರೆ ಅದ್ರಿಂದ ಅಪಾಯ ಇಲ್ಲ. ಅದು ಚರ್ಮದ ಮೇಲೆ ಇರೋ ಗುಳ್ಳೆ ಅಷ್ಟೇ. ಆ ವ್ಯಕ್ತಿ ಶುದ್ಧ.
40 ಒಬ್ಬನಿಗೆ ಕೂದಲು ಉದುರಿ ತಲೆ ಬೋಳಾದ್ರೆ ಅವನು ಅಶುದ್ಧ ಅಲ್ಲ, ಶುದ್ಧ. 41 ಅವನ ತಲೆಯ ಮುಂಭಾಗದಲ್ಲಿ ಕೂದಲು ಉದುರಿ ಬೋಳಾದ್ರೆ ಅಶುದ್ಧನಲ್ಲ, ಶುದ್ಧ. 42 ಆದ್ರೆ ಬೋಳಾದ ಜಾಗದಲ್ಲಿ ಅಥವಾ ಹಣೆ ಮೇಲೆ ಕೆಂಪು-ಬಿಳಿ ಮಿಶ್ರಿತ ಬಣ್ಣದ ಹುಣ್ಣಾದ್ರೆ ಅದು ತಲೆಬುರುಡೆ ಅಥವಾ ಹಣೆ ಮೇಲೆ ಬಂದಿರೋ ಕುಷ್ಠ. 43 ಪುರೋಹಿತ ಅವನನ್ನ ಪರೀಕ್ಷಿಸಬೇಕು. ಬೋಳಾದ ಜಾಗದ ಮೇಲೆ ಅಥವಾ ಹಣೆ ಮೇಲೆ ಸೋಂಕಿನಿಂದಾಗಿ ಕೆಂಪು-ಬಿಳಿ ಮಿಶ್ರಿತ ಬಣ್ಣದ ಊತ ಇದ್ರೆ, ಅದು ಚರ್ಮದ ಮೇಲೆ ಕುಷ್ಠದ ಹಾಗೆ ಕಾಣಿಸಿದ್ರೆ 44 ಅವನು ಕುಷ್ಠರೋಗಿ. ಅವನು ಅಶುದ್ಧ. ಹಣೆ ಮೇಲೆ ಕುಷ್ಠ ಇರೋದ್ರಿಂದ ಅವನು ಅಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು. 45 ಆ ಕುಷ್ಠರೋಗಿ ಹರಿದಿರೋ ಬಟ್ಟೆ ಹಾಕೊಳ್ಳಬೇಕು, ತಲೆ ಬಾಚಬಾರದು. ಬಟ್ಟೆಯಿಂದ ಬಾಯಿ* ಮುಚ್ಕೊಳ್ಳಬೇಕು. ‘ನಾನು ಅಶುದ್ಧ, ನಾನು ಅಶುದ್ಧ’ ಅಂತ ಕೂಗಿಕೊಳ್ಳಬೇಕು. 46 ಆ ರೋಗ ಇರೋ ತನಕ ಅವನು ಅಶುದ್ಧನೇ. ಹಾಗಾಗಿ ಜನ್ರಿಂದ ದೂರ ಅಂದ್ರೆ ಪಾಳೆಯದ ಹೊರಗೆ ಅವನು ವಾಸ ಮಾಡಬೇಕು.+
47 ಕುಷ್ಠರೋಗ ಉಣ್ಣೆ ಬಟ್ಟೆಯಲ್ಲಿ ನಾರಿನ ಬಟ್ಟೆಯಲ್ಲಿ 48 ಉಣ್ಣೆ ಬಟ್ಟೆ ಅಥವಾ ನಾರಿನ ಬಟ್ಟೆಯ ನೇಯ್ಗೆಯಲ್ಲಿ ನೂಲಿನಲ್ಲಿ ಚರ್ಮದಲ್ಲಿ ಚರ್ಮದಿಂದ ಮಾಡಿದ ವಸ್ತು ಮೇಲೆ ಕಾಣಿಸ್ಕೊಂಡ್ರೆ 49 ಮತ್ತು ಬಟ್ಟೆ, ಚರ್ಮ, ನೇಯ್ಗೆ, ನೂಲು ಅಥವಾ ಚರ್ಮದ ವಸ್ತುವಿನಲ್ಲಿ ಆ ರೋಗದಿಂದ ಹಳದಿ-ಹಸಿರು ಅಥವಾ ನಸುಗೆಂಪು ಬಣ್ಣದ ಕಲೆ ಇದ್ರೆ ಅದಕ್ಕೆ ಕುಷ್ಠ ಬಂದಿದೆ ಅಂತರ್ಥ. ಹಾಗಾಗಿ ಆ ವಸ್ತುವನ್ನ ಪುರೋಹಿತನಿಗೆ ತಂದು ತೋರಿಸಬೇಕು. 50 ಪುರೋಹಿತ ಆ ಕುಷ್ಠವನ್ನ ಪರೀಕ್ಷಿಸಬೇಕು, ಆ ವಸ್ತುವನ್ನ ಏಳು ದಿನ ದೂರ ಇಡಬೇಕು.+ 51 ಏಳನೇ ದಿನ ಆ ಬಟ್ಟೆ, ನೇಯ್ಗೆ, ನೂಲು ಅಥವಾ ಚರ್ಮವನ್ನ (ಆ ಚರ್ಮವನ್ನ ಯಾವುದಕ್ಕೇ ಬಳಸ್ತಾ ಇರಲಿ ಅದನ್ನ) ಪರೀಕ್ಷಿಸಿದಾಗ ಅದ್ರ ಮೇಲೆ ರೋಗ ಹರಡಿದೆ ಅಂತ ಗೊತ್ತಾದ್ರೆ ಅದು ಅಪಾಯಕರ ಕುಷ್ಠ. ಅದು ಅಶುದ್ಧ.+ 52 ಆಗ ಅವನು ಕುಷ್ಠ ಇರೋ ಉಣ್ಣೆ ಬಟ್ಟೆ ಅಥವಾ ನಾರಿನ ಬಟ್ಟೆ, ಅವುಗಳ ನೇಯ್ಗೆ, ನೂಲು, ಚರ್ಮದ ಯಾವುದೇ ವಸ್ತುವನ್ನ ಸುಟ್ಟುಬಿಡಬೇಕು. ಯಾಕಂದ್ರೆ ಅದು ಅಪಾಯಕಾರಿ ಕುಷ್ಠ. ಅದನ್ನ ಬೆಂಕಿಯಲ್ಲಿ ಸುಡಬೇಕು.
53 ಆದ್ರೆ ಪುರೋಹಿತ ಬಟ್ಟೆ, ನೇಯ್ಗೆ, ನೂಲು, ಚರ್ಮದ ವಸ್ತು ಪರೀಕ್ಷಿಸಿದಾಗ ಅದ್ರಲ್ಲಿ ಕುಷ್ಠ ಹರಡದೇ ಇದ್ರೆ 54 ಸೋಂಕು ಇರೋ ಆ ವಸ್ತುನ ತೊಳಿಬೇಕು ಅಂತ ಪುರೋಹಿತ ಹೇಳಬೇಕು. ಆಮೇಲೆ ಆ ವಸ್ತುವನ್ನ ಇನ್ನೂ ಏಳು ದಿನ ದೂರ ಇಡಬೇಕು. 55 ಸೋಂಕು ಇರೋ ಆ ವಸ್ತುನ ಚೆನ್ನಾಗಿ ತೊಳೆದ ಮೇಲೆ ಪುರೋಹಿತ ಪರೀಕ್ಷಿಸಬೇಕು. ಸೋಂಕು ಹರಡದೇ ಇದ್ರೂ ಮುಂಚಿನ ತರಾನೇ ಇದ್ರೆ ವಸ್ತುವಿನ ಒಳಭಾಗವನ್ನ ಅಥವಾ ಹೊರಭಾಗವನ್ನ ಕುಷ್ಠ ತಿಂದುಹಾಕಿದೆ ಅಂತರ್ಥ. ಹಾಗಾಗಿ ಅದು ಅಶುದ್ಧ. ನೀವು ಆ ವಸ್ತುನ ಸುಟ್ಟುಬಿಡಬೇಕು.
56 ಆದ್ರೆ ಆ ಬಟ್ಟೆ, ಚರ್ಮ, ನೇಯ್ಗೆ ಅಥವಾ ನೂಲುಗಳನ್ನ ಚೆನ್ನಾಗಿ ತೊಳೆದ ಮೇಲೆ ಪುರೋಹಿತ ಅದನ್ನ ಪರೀಕ್ಷಿಸಿದಾಗ ಸೋಂಕು ಇರೋ ಭಾಗ ಮಾಸಿದೆ ಅಂತ ಗೊತ್ತಾದ್ರೆ ಆ ಭಾಗವನ್ನ ಅವನು ಹರಿದು ತೆಗಿಬೇಕು. 57 ಆದ್ರೂ ಆ ಬಟ್ಟೆ, ನೇಯ್ಗೆ, ನೂಲು ಅಥವಾ ಚರ್ಮದ ವಸ್ತುವಿನ ಬೇರೆ ಭಾಗದಲ್ಲಿ ಆ ಸೋಂಕು ಬಂದ್ರೆ ಕುಷ್ಠ ಹರಡ್ತಿದೆ ಅಂತ ತಿಳ್ಕೊಳ್ಳಬೇಕು. ಅಂಥ ವಸ್ತುವನ್ನ ಬೆಂಕಿಯಲ್ಲಿ ಸುಡಬೇಕು.+ 58 ಒಂದುವೇಳೆ ಬಟ್ಟೆ, ನೇಯ್ಗೆ, ನೂಲನ್ನ ಅಥವಾ ಚರ್ಮದ ವಸ್ತುವನ್ನ ತೊಳೆದ ಮೇಲೆ ಸೋಂಕು ಪೂರ್ತಿಯಾಗಿ ಹೋದ್ರೆ ಅದನ್ನ ಇನ್ನೊಂದು ಸಲ ತೊಳಿಬೇಕು. ಆಗ ಅದು ಶುದ್ಧ ಆಗುತ್ತೆ.
59 ಉಣ್ಣೆ ಅಥವಾ ನಾರಿನ ಬಟ್ಟೆಯಲ್ಲಿ, ಅವುಗಳ ನೇಯ್ಗೆ ಅಥವಾ ನೂಲಲ್ಲಿ, ಚರ್ಮದ ವಸ್ತು ಮೇಲೆ ಕುಷ್ಠ ಕಾಣಿಸ್ಕೊಂಡಾಗ ಪಾಲಿಸಬೇಕಾದ ನಿಯಮಗಳು ಇವೇ. ಆ ವಸ್ತು ಶುದ್ಧನಾ ಅಶುದ್ಧನಾ ಅಂತ ಪುರೋಹಿತ ತೀರ್ಮಾನ ಮಾಡೋಕೆ ಈ ನಿಯಮಗಳಿವೆ.”
14 ಯೆಹೋವ ಮೋಶೆಗೆ ಇನ್ನೂ ಹೇಳಿದ್ದೇನಂದ್ರೆ 2 “ಒಬ್ಬ ಕುಷ್ಠರೋಗಿ ವಾಸಿ ಆದ್ಮೇಲೆ ಅವನನ್ನ ಶುದ್ಧ ಅಂತ ತೀರ್ಮಾನಿಸೋ ದಿನ ಪಾಲಿಸಬೇಕಾದ ನಿಯಮಗಳು: ಅವನನ್ನ ಪುರೋಹಿತನಿಗೆ ತೋರಿಸಬೇಕು.+ 3 ಪುರೋಹಿತ ಪಾಳೆಯದ ಹೊರಗೆ ಹೋಗಿ ಅವನನ್ನ ಪರೀಕ್ಷಿಸಬೇಕು. ಕುಷ್ಠರೋಗ ವಾಸಿ ಆಗಿದ್ರೆ 4 ಅವನು ತನ್ನ ಶುದ್ಧೀಕರಣಕ್ಕಾಗಿ ಎರಡು ಶುದ್ಧ ಪಕ್ಷಿ, ದೇವದಾರು ಮರದ ಕಟ್ಟಿಗೆ, ಕಡುಗೆಂಪು ಬಣ್ಣದ ಬಟ್ಟೆ, ಹಿಸ್ಸೋಪ್* ಗಿಡ ತರೋಕೆ ಪುರೋಹಿತ ಅವನಿಗೆ ಹೇಳಬೇಕು.+ 5 ಆ ಪಕ್ಷಿಗಳಲ್ಲಿ ಒಂದನ್ನ ಹರಿಯೋ ನೀರು ತುಂಬಿಸಿರೋ ಮಣ್ಣಿನ ಪಾತ್ರೆಯಲ್ಲಿ ಕೊಲ್ಲಬೇಕು ಅಂತ ಪುರೋಹಿತ ಹೇಳಬೇಕು. 6 ಆ ಪಕ್ಷಿಯನ್ನ ಕೊಂದಾಗ ಅದ್ರ ರಕ್ತ ಪಾತ್ರೆಯಲ್ಲಿರೋ ನೀರು ಜೊತೆ ಬೆರೆಯುತ್ತೆ. ಪುರೋಹಿತ ಈ ರಕ್ತದಲ್ಲಿ ಜೀವ ಇರೋ ಇನ್ನೊಂದು ಪಕ್ಷಿಯನ್ನ, ದೇವದಾರು ಮರದ ಕಟ್ಟಿಗೆಯನ್ನ, ಕಡುಗೆಂಪು ಬಣ್ಣದ ಬಟ್ಟೆಯನ್ನ, ಹಿಸ್ಸೋಪ್ ಗಿಡವನ್ನ ಒಟ್ಟಿಗೆ ಅದ್ದಿ ತೆಗೆದು 7 ಶುದ್ಧ ಮಾಡ್ಕೊಳ್ತಾ ಇರೋ ವ್ಯಕ್ತಿ ಮೇಲೆ ಏಳು ಸಲ ಚಿಮಿಕಿಸಬೇಕು. ಈಗ ಅವನು ಶುದ್ಧ ಅಂತ ಎಲ್ರಿಗೂ ಹೇಳಬೇಕು. ಜೀವ ಇರೋ ಪಕ್ಷಿಯನ್ನ ಬಯಲಲ್ಲಿ ಬಿಟ್ಟುಬಿಡಬೇಕು.+
8 ಶುದ್ಧ ಮಾಡ್ಕೊಳ್ತಾ ಇರೋ ವ್ಯಕ್ತಿ ತನ್ನ ಬಟ್ಟೆಗಳನ್ನ ಒಗಿಬೇಕು. ಮೈಮೇಲಿರೋ ಕೂದಲೆಲ್ಲಾ ತೆಗೆದು ಸ್ನಾನ ಮಾಡಬೇಕು. ಆಗ ಅವನು ಶುದ್ಧ ಆಗ್ತಾನೆ. ಆಮೇಲೆ ಅವನು ಪಾಳೆಯದ ಒಳಗೆ ಬರಬಹುದು. ಆದ್ರೆ ಏಳು ದಿನ ತನಕ ತನ್ನ ಡೇರೆ ಹೊರಗೆನೇ ಇರಬೇಕು. 9 ಏಳನೇ ದಿನ ತಲೆ, ಗಲ್ಲ, ಹುಬ್ಬು ಮೇಲಿರೋ ಎಲ್ಲ ಕೂದಲು ತೆಗಿಬೇಕು. ಆಮೇಲೆ ಬಟ್ಟೆಗಳನ್ನ ಒಗೆದು ಸ್ನಾನ ಮಾಡಬೇಕು. ಆಗ ಅವನು ಶುದ್ಧ ಆಗ್ತಾನೆ.
10 ಎಂಟನೇ ದಿನ ಯಾವುದೇ ದೋಷ ಇಲ್ಲದ ಎರಡು ಟಗರನ್ನ, ಒಂದು ವರ್ಷದೊಳಗಿನ ಒಂದು ಹೆಣ್ಣು ಕುರಿಮರಿಯನ್ನ ಅವನು ತರಬೇಕು.+ ಅಷ್ಟೇ ಅಲ್ಲ ಏಫಾ ಅಳತೆಯ ಹತ್ತರಲ್ಲಿ ಮೂರು ಭಾಗದಷ್ಟು* ನುಣ್ಣಗಿರೋ ಹಿಟ್ಟಿಗೆ ಎಣ್ಣೆ ಬೆರೆಸಿ ಧಾನ್ಯ ಅರ್ಪಣೆಗಾಗಿ ತರಬೇಕು.+ ಒಂದು ಲೋಗ್ ಅಳತೆ* ಎಣ್ಣೆ ಕೂಡ ತರಬೇಕು.+ 11 ಆ ವ್ಯಕ್ತಿ ಶುದ್ಧ ಅಂತ ಎಲ್ರಿಗೂ ಹೇಳೋ ಪುರೋಹಿತ ಆ ವ್ಯಕ್ತಿ ಜೊತೆಗೆ ಅರ್ಪಣೆಗಳನ್ನ ಯೆಹೋವನ ಮುಂದೆ, ದೇವದರ್ಶನ ಡೇರೆಯ ಬಾಗಿಲ ಹತ್ರ ತರಬೇಕು. 12 ಪುರೋಹಿತ ದೋಷಪರಿಹಾರಕ ಬಲಿಗಾಗಿ ಒಂದು ಟಗರು,+ ಜೊತೆಗೆ ಒಂದು ಲೋಗ್ ಅಳತೆ ಎಣ್ಣೆ ತಗೊಳ್ಳಬೇಕು. ಅವುಗಳನ್ನ ಯೆಹೋವನ ಮುಂದೆ ಓಲಾಡಿಸೋ ಅರ್ಪಣೆಯಾಗಿ ಹಿಂದೆ ಮುಂದೆ ಆಡಿಸಬೇಕು.+ 13 ಆಮೇಲೆ ಅವನು ಆ ಟಗರನ್ನ ಪವಿತ್ರವಾದ ಒಂದು ಜಾಗದಲ್ಲಿ ಕಡಿಬೇಕು ಅಂದ್ರೆ ಪಾಪಪರಿಹಾರಕ ಬಲಿಯ ಮತ್ತು ಸರ್ವಾಂಗಹೋಮ ಬಲಿಯ ಪ್ರಾಣಿಯನ್ನ ಕಡಿಯೋ ಜಾಗದಲ್ಲೇ ಕಡಿಬೇಕು.+ ಪಾಪಪರಿಹಾರಕ ಬಲಿ ತರಾನೇ ದೋಷಪರಿಹಾರಕ ಬಲಿಯ ಮಾಂಸನೂ ಪುರೋಹಿತನಿಗೆ ಸೇರಿದೆ.+ ಅದು ಅತಿ ಪವಿತ್ರ.+
14 ಆಮೇಲೆ ಪುರೋಹಿತ ದೋಷಪರಿಹಾರಕ ಬಲಿಗಾಗಿ ಅರ್ಪಿಸಿದ ಟಗರಿನ ರಕ್ತದಲ್ಲಿ ಸ್ವಲ್ಪ ತಗೊಂಡು ಶುದ್ಧ ಮಾಡ್ಕೊಳ್ತಾ ಇರೋ ವ್ಯಕ್ತಿಯ ಬಲ ಕಿವಿಯ ತುದಿಗೆ,* ಬಲಗೈಯ ಹೆಬ್ಬೆರಳಿಗೆ, ಬಲಗಾಲಿನ ಹೆಬ್ಬೆರಳಿಗೆ ಹಚ್ಚಬೇಕು. 15 ಒಂದು ಲೋಗ್ ಅಳತೆ ಎಣ್ಣೆಯಲ್ಲಿ ಸ್ವಲ್ಪ ತಗೊಂಡು+ ಪುರೋಹಿತ ತನ್ನ ಎಡ ಅಂಗೈಗೆ ಹಾಕೊಳ್ಳಬೇಕು. 16 ಈ ಎಣ್ಣೆಯಲ್ಲಿ ತನ್ನ ಬಲಗೈಯ ಬೆರಳು ಅದ್ದಿ ಎಣ್ಣೆಯನ್ನ ಯೆಹೋವನ ಮುಂದೆ ಏಳು ಸಲ ಚಿಮಿಕಿಸಬೇಕು. 17 ಆಮೇಲೆ ಅಂಗೈಯಲ್ಲಿ ಉಳಿದಿರೋ ಎಣ್ಣೆಯಲ್ಲಿ ಸ್ವಲ್ಪ ತಗೊಂಡು ಶುದ್ಧ ಮಾಡ್ಕೊಳ್ತಾ ಇರೋ ವ್ಯಕ್ತಿಗೆ ದೋಷಪರಿಹಾರಕ ಬಲಿಯ ಟಗರಿನ ರಕ್ತವನ್ನ ಹಚ್ಚಿದ ಜಾಗದಲ್ಲೇ ಅಂದ್ರೆ ಅವನ ಬಲ ಕಿವಿಯ ತುದಿಗೆ, ಬಲಗೈಯ ಹೆಬ್ಬೆರಳಿಗೆ, ಬಲಗಾಲಿನ ಹೆಬ್ಬೆರಳಿಗೆ ಹಚ್ಚಬೇಕು. 18 ತನ್ನ ಅಂಗೈಯಲ್ಲಿ ಉಳಿದಿರೋ ಎಣ್ಣೆಯನ್ನ ಶುದ್ಧ ಮಾಡ್ಕೊಳ್ತಾ ಇರೋ ವ್ಯಕ್ತಿ ತಲೆ ಮೇಲೆ ಹೊಯ್ಯಬೇಕು. ಅವನಿಗೋಸ್ಕರ ಯೆಹೋವನ ಮುಂದೆ ಪ್ರಾಯಶ್ಚಿತ್ತ ಮಾಡಬೇಕು.+
19 ಆಮೇಲೆ ಪುರೋಹಿತ ಪಾಪಪರಿಹಾರಕ ಬಲಿ ಪ್ರಾಣಿಯನ್ನ ಅರ್ಪಿಸಬೇಕು.+ ಶುದ್ಧ ಮಾಡ್ಕೊಳ್ತಾ ಇರೋ ವ್ಯಕ್ತಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಸರ್ವಾಂಗಹೋಮ ಬಲಿಯ ಪ್ರಾಣಿಯನ್ನ ಕಡಿಬೇಕು. 20 ಆ ಸರ್ವಾಂಗಹೋಮ ಬಲಿಯ ಪ್ರಾಣಿಯನ್ನ, ಧಾನ್ಯ ಅರ್ಪಣೆಯನ್ನ ಯಜ್ಞವೇದಿ ಮೇಲೆ ಅರ್ಪಿಸಬೇಕು.+ ಆ ವ್ಯಕ್ತಿಗಾಗಿ ಪ್ರಾಯಶ್ಚಿತ್ತ ಮಾಡಬೇಕು.+ ಆಗ ಅವನು ಶುದ್ಧ ಆಗ್ತಾನೆ.+
21 ಆ ವ್ಯಕ್ತಿ ಬಡವನಾಗಿದ್ದು ಆ ಪ್ರಾಣಿಗಳನ್ನ ಕೊಡೋಕೆ ಆಗಿಲ್ಲಾಂದ್ರೆ ಅವನು ದೋಷಪರಿಹಾರಕ ಬಲಿಗಾಗಿ ಒಂದು ಟಗರು ಕೊಡಬೇಕು. ಅದು ಹಿಂದೆ ಮುಂದೆ ಆಡಿಸಿ ಕೊಡೋ ಅರ್ಪಣೆ. ಪ್ರಾಯಶ್ಚಿತ್ತಕ್ಕಾಗಿ ಅವನು ಅದನ್ನ ಕೊಡಬೇಕು. ಜೊತೆಗೆ ಏಫಾ ಅಳತೆಯ ಹತ್ತನೇ ಒಂದು ಭಾಗದಷ್ಟು* ನುಣ್ಣಗಿರೋ ಹಿಟ್ಟಿಗೆ ಎಣ್ಣೆ ಬೆರೆಸಿ ಧಾನ್ಯ ಅರ್ಪಣೆಯಾಗಿ ಕೊಡಬೇಕು. ಒಂದು ಲೋಗ್ ಅಳತೆ ಎಣ್ಣೆ, 22 ಆಗೋದಾದ್ರೆ ಎರಡು ಕಾಡುಪಾರಿವಾಳ ಅಥವಾ ಎರಡು ಪಾರಿವಾಳ ಮರಿಗಳನ್ನ ಕೂಡ ಕೊಡಬೇಕು. ಈ ಪಕ್ಷಿಗಳಲ್ಲಿ ಒಂದನ್ನ ಪಾಪಪರಿಹಾರಕ ಬಲಿಗಾಗಿ, ಇನ್ನೊಂದನ್ನ ಸರ್ವಾಂಗಹೋಮ ಬಲಿಗಾಗಿ ಕೊಡಬೇಕು.+ 23 ಇದನ್ನೆಲ್ಲ ಆ ವ್ಯಕ್ತಿ ತನ್ನ ಶುದ್ಧೀಕರಣದ ಎಂಟನೇ ದಿನ+ ಯೆಹೋವನ ಮುಂದೆ ಅಂದ್ರೆ ದೇವದರ್ಶನ ಡೇರೆಯ ಬಾಗಿಲ ಹತ್ರ ತಂದು ಪುರೋಹಿತನಿಗೆ ಕೊಡಬೇಕು.+
24 ಪುರೋಹಿತ ದೋಷಪರಿಹಾರಕ ಬಲಿಯ ಟಗರು,+ ಒಂದು ಲೋಗ್ ಅಳತೆ ಎಣ್ಣೆ ತಗೊಂಡು ಯೆಹೋವನ ಎದುರಲ್ಲಿ ಹಿಂದೆ ಮುಂದೆ ಆಡಿಸಬೇಕು. ಇದು ಓಲಾಡಿಸೋ ಅರ್ಪಣೆ.+ 25 ಆಮೇಲೆ ಪುರೋಹಿತ ಆ ಟಗರನ್ನ ಕಡಿದು ಅದ್ರ ರಕ್ತದಲ್ಲಿ ಸ್ವಲ್ಪ ತಗೊಂಡು ಶುದ್ಧ ಮಾಡ್ಕೊಳ್ತಾ ಇರೋ ವ್ಯಕ್ತಿಯ ಬಲ ಕಿವಿಯ ತುದಿಗೆ, ಬಲಗೈಯ ಹೆಬ್ಬೆರಳಿಗೆ, ಬಲಗಾಲಿನ ಹೆಬ್ಬೆರಳಿಗೆ ಹಚ್ಚಬೇಕು.+ 26 ಸ್ವಲ್ಪ ಎಣ್ಣೆಯನ್ನ ತನ್ನ ಎಡ ಅಂಗೈಗೆ ಹಾಕೊಳ್ಳಬೇಕು.+ 27 ಈ ಎಣ್ಣೆಯಲ್ಲಿ ಸ್ವಲ್ಪ ತಗೊಂಡು ತನ್ನ ಬಲಗೈಯ ಬೆರಳಿಂದ ಯೆಹೋವನ ಮುಂದೆ ಏಳು ಸಲ ಚಿಮಿಕಿಸಬೇಕು. 28 ತನ್ನ ಅಂಗೈಯಲ್ಲಿ ಇರೋ ಎಣ್ಣೆಯಲ್ಲಿ ಸ್ವಲ್ಪ ತಗೊಂಡು ಶುದ್ಧ ಮಾಡ್ಕೊಳ್ತಾ ಇರೋ ವ್ಯಕ್ತಿಗೆ ದೋಷಪರಿಹಾರಕ ಬಲಿಯ ಟಗರಿನ ರಕ್ತವನ್ನ ಹಚ್ಚಿದ್ದಲ್ಲೇ ಅಂದ್ರೆ ಅವನ ಬಲ ಕಿವಿಯ ತುದಿಗೆ, ಬಲಗೈಯ ಹೆಬ್ಬೆರಳಿಗೆ, ಬಲಗಾಲಿನ ಹೆಬ್ಬೆರಳಿಗೆ ಹಚ್ಚಬೇಕು. 29 ಶುದ್ಧ ಮಾಡ್ಕೊಳ್ತಾ ಇರೋ ವ್ಯಕ್ತಿಗಾಗಿ ಯೆಹೋವನ ಮುಂದೆ ಪ್ರಾಯಶ್ಚಿತ್ತ ಮಾಡೋಕೆ ಪುರೋಹಿತ ತನ್ನ ಅಂಗೈಯಲ್ಲಿ ಉಳಿದಿರೋ ಎಣ್ಣೆಯನ್ನ ಆ ವ್ಯಕ್ತಿ ತಲೆ ಮೇಲೆ ಹೊಯ್ಯಬೇಕು.
30 ಆ ವ್ಯಕ್ತಿ ತನ್ನ ಸಾಮರ್ಥ್ಯಕ್ಕೆ ತಕ್ಕ ಹಾಗೆ ಕೊಟ್ಟ ಎರಡು ಕಾಡುಪಾರಿವಾಳಗಳಲ್ಲಿ ಒಂದನ್ನ ಅಥವಾ ಎರಡು ಪಾರಿವಾಳ ಮರಿಗಳಲ್ಲಿ+ ಒಂದನ್ನ 31 ಪಾಪಪರಿಹಾರಕ ಬಲಿಗಾಗಿ, ಇನ್ನೊಂದನ್ನ ಸರ್ವಾಂಗಹೋಮ ಬಲಿಗಾಗಿ+ ಅರ್ಪಿಸಬೇಕು. ಜೊತೆಗೆ ಧಾನ್ಯ ಅರ್ಪಣೆ ಕೊಡಬೇಕು. ಶುದ್ಧ ಮಾಡ್ಕೊಳ್ತಾ ಇರೋ ವ್ಯಕ್ತಿಗಾಗಿ ಪುರೋಹಿತ ಯೆಹೋವನ ಮುಂದೆ ಪ್ರಾಯಶ್ಚಿತ್ತ ಮಾಡಬೇಕು.+
32 ಇದಿಷ್ಟು ಕುಷ್ಠರೋಗ ವಾಸಿ ಆದವರು ಶುದ್ಧೀಕರಣಕ್ಕಾಗಿ ಪ್ರಾಣಿಗಳನ್ನ ಕೊಡೋಕೆ ಆಗದಿದ್ರೆ ಪಾಲಿಸಬೇಕಾದ ನಿಯಮಗಳು.”
33 ಮೋಶೆ ಮತ್ತು ಆರೋನನಿಗೆ ಯೆಹೋವ ಹೀಗಂದನು: 34 “ನಾನು ನಿಮಗೆ ಆಸ್ತಿಯಾಗಿ ಕೊಡೋ+ ಕಾನಾನ್ ದೇಶಕ್ಕೆ ಹೋದ್ಮೇಲೆ+ ಅಲ್ಲಿ ಯಾವುದಾದ್ರೂ ಮನೆಗೆ ಕುಷ್ಠ ಬರೋಕೆ ನಾನು ಬಿಟ್ರೆ,+ 35 ಆ ಮನೆ ಯಜಮಾನ ಪುರೋಹಿತನ ಹತ್ರ ಹೋಗಿ ‘ನನ್ನ ಮನೆ ಗೋಡೆ ಮೇಲೆ ಕಲೆಗಳಿವೆ. ಅವು ಕುಷ್ಠರೋಗದ ತರ ಇದೆ’ ಅಂತ ಹೇಳಬೇಕು. 36 ಆಗ ಪುರೋಹಿತ ಆ ಮನೆಯನ್ನ ಪರೀಕ್ಷಿಸೋ ಮುಂಚೆ ಮನೆ ಖಾಲಿ ಮಾಡೋಕೆ ಹೇಳಬೇಕು. ಖಾಲಿ ಮಾಡದಿದ್ರೆ ಮನೇಲಿ ಇರೋದನ್ನೆಲ್ಲ ಅವನು ಅಶುದ್ಧ ಅಂತ ಹೇಳಬೇಕು. ಮನೆ ಖಾಲಿ ಮಾಡಿದ ಮೇಲೆ ಅದನ್ನ ಪರೀಕ್ಷಿಸೋಕೆ ಮನೆ ಒಳಗೆ ಹೋಗಬೇಕು. 37 ಕಲೆಗಳು ಇರೋ ಜಾಗವನ್ನ ಪರೀಕ್ಷಿಸಬೇಕು. ಆ ಕಲೆಗಳು ಹಳದಿ-ಹಸಿರು ಮಿಶ್ರಿತ ಬಣ್ಣದಲ್ಲಿ ಇದ್ರೆ ಅಥವಾ ನಸುಗೆಂಪು ಬಣ್ಣ ಆಗಿದ್ರೆ ಅವು ಗೋಡೆ ಒಳಗಡೆ ತನಕ ಹೋಗಿದೆ ಅಂತ ಗೊತ್ತಾದ್ರೆ 38 ಪುರೋಹಿತ ಮನೆ ಹೊರಗೆ ಹೋಗಿ ಬಾಗಿಲು ಮುಚ್ಚಬೇಕು. ಏಳು ದಿನ ಆ ಮನೆ ಮುಚ್ಚಿನೇ ಇರಬೇಕು.+
39 ಏಳನೇ ದಿನ ಪುರೋಹಿತ ಮತ್ತೆ ಆ ಮನೆಗೆ ಬಂದು ಪರೀಕ್ಷಿಸಬೇಕು. ಆ ಕಲೆಗಳು ಗೋಡೆಗಳಲ್ಲಿ ಹರಡಿದ್ರೆ 40 ಆ ಜಾಗದಲ್ಲಿ ಇರೋ ಕಲ್ಲುಗಳನ್ನ ತೆಗೆದು ಪಟ್ಟಣದ ಹೊರಗೆ ಒಂದು ಅಶುದ್ಧ ಸ್ಥಳದಲ್ಲಿ ಬಿಸಾಡೋಕೆ ಹೇಳಬೇಕು. 41 ಆಮೇಲೆ ಮನೆ ಒಳಗಿನ ಗೋಡೆನ್ನೆಲ್ಲ ಕೆರೆದು ಗಾರೆ, ಗಿಲಾಯಿ ತೆಗೆದು ಅದನ್ನ ಪಟ್ಟಣದ ಹೊರಗೆ ಒಂದು ಅಶುದ್ಧ ಜಾಗದಲ್ಲಿ ಹಾಕಬೇಕು. 42 ಕಲ್ಲುಗಳನ್ನ ತೆಗೆದಿರೋ ಜಾಗದಲ್ಲಿ ಬೇರೆ ಕಲ್ಲುಗಳನ್ನ ಇಡಬೇಕು. ಮನೆ ಒಳಗೆ ಹೊಸದಾಗಿ ಗಾರೆ, ಗಿಲಾವು ಮಾಡಬೇಕು.
43 ಕಲೆಗಳ ಜಾಗದಲ್ಲಿದ್ದ ಕಲ್ಲುಗಳನ್ನ ತೆಗೆಸಿ ಗೋಡೆಗಳನ್ನ ಕೆರೆಸಿ ಹೊಸ ಗಾರೆ, ಗಿಲಾವು ಮಾಡಿಸಿದ ಮೇಲೂ ಗೋಡೆಯಲ್ಲಿ ಕಲೆಗಳು ಕಾಣಿಸ್ಕೊಂಡ್ರೆ 44 ಪುರೋಹಿತ ಮನೆ ಒಳಗೆ ಹೋಗಿ ಪರೀಕ್ಷಿಸಬೇಕು. ಒಂದುವೇಳೆ ಆ ಕಲೆಗಳು ಮನೇಲಿ ಹರಡ್ಕೊಂಡಿದ್ರೆ ಅದು ಅಪಾಯ ತರೋ ಕುಷ್ಠ.+ ಆ ಮನೆ ಅಶುದ್ಧ. 45 ಆಗ ಅವನು ಆ ಮನೆಯನ್ನ ಕೆಡವಿಸಬೇಕು. ಅದ್ರ ಕಲ್ಲುಗಳನ್ನ, ದಿಮ್ಮಿಗಳನ್ನ, ಗಾರೆ ಗಿಲಾಯಿನ್ನೆಲ್ಲ ತಗೊಂಡು ಹೋಗಿ ಪಟ್ಟಣದ ಹೊರಗೆ ಒಂದು ಅಶುದ್ಧ ಜಾಗದಲ್ಲಿ ಹಾಕಿಸಬೇಕು.+ 46 ಆ ಮನೆಯನ್ನ ಮುಚ್ಚಿದ್ದ ದಿನಗಳಲ್ಲಿ+ ಯಾರಾದ್ರೂ ಅದ್ರ ಒಳಗೆ ಹೋದ್ರೆ ಅವನು ಆ ಸಂಜೆ ತನಕ ಅಶುದ್ಧ.+ 47 ಆ ದಿನಗಳಲ್ಲಿ ಯಾರಾದ್ರೂ ಆ ಮನೆ ಒಳಗೆ ಮಲಗಿದ್ರೆ ಅಥವಾ ಊಟ ಮಾಡಿದ್ರೆ ತಮ್ಮ ಬಟ್ಟೆಗಳನ್ನ ಒಗಿಬೇಕು.
48 ಒಂದುವೇಳೆ ಮನೆಗೆ ಮತ್ತೆ ಗಾರೆ, ಗಿಲಾವು ಮಾಡಿಸಿದ ಮೇಲೆ ಪುರೋಹಿತ ಬಂದು ಪರೀಕ್ಷಿಸಿದಾಗ ಆ ಕಲೆ ಇಲ್ಲದಿದ್ರೆ ಆ ಮನೆ ಶುದ್ಧ ಅಂತ ಅವನು ಹೇಳಬೇಕು. ಯಾಕಂದ್ರೆ ಕುಷ್ಠದ ಕಲೆ ಮನೆಯಲ್ಲಿಲ್ಲ. 49 ಮನೆಯ ಶುದ್ಧೀಕರಣಕ್ಕಾಗಿ ಅವನು ಎರಡು ಪಕ್ಷಿ, ದೇವದಾರು ಮರದ ಕಟ್ಟಿಗೆ, ಕಡುಗೆಂಪು ಬಣ್ಣದ ಬಟ್ಟೆ, ಹಿಸ್ಸೋಪ್ ಗಿಡ ತಗೋಬೇಕು.+ 50 ಒಂದು ಪಕ್ಷಿಯನ್ನ ಅವನು ಹರಿಯೋ ನೀರು ತುಂಬಿಸಿರೋ ಮಣ್ಣಿನ ಪಾತ್ರೇಲಿ ಕೊಲ್ಲಬೇಕು. 51 ಆಗ ಅದ್ರ ರಕ್ತ ಪಾತ್ರೆಯಲ್ಲಿರೋ ನೀರು ಜೊತೆ ಬೆರೆಯುತ್ತೆ. ಆಮೇಲೆ ಆ ರಕ್ತದಲ್ಲಿ ದೇವದಾರು ಮರದ ಕಟ್ಟಿಗೆ, ಹಿಸ್ಸೋಪ್ ಗಿಡ, ಕಡುಗೆಂಪು ಬಣ್ಣದ ಬಟ್ಟೆ, ಜೀವ ಇರೋ ಇನ್ನೊಂದು ಪಕ್ಷಿಯನ್ನ ಅದ್ದಿ ತೆಗೆದು ಮನೆ ಕಡೆ ಏಳು ಸಲ ಚಿಮಿಕಿಸಬೇಕು.+ 52 ಈ ರೀತಿ ಅವನು ಪಕ್ಷಿಯ ರಕ್ತ, ಹರಿಯೋ ನೀರು, ಜೀವ ಇರೋ ಪಕ್ಷಿ, ದೇವದಾರು ಮರದ ಕಟ್ಟಿಗೆ, ಹಿಸ್ಸೋಪ್ ಗಿಡ, ಕಡುಗೆಂಪು ಬಣ್ಣದ ಬಟ್ಟೆಯಿಂದ ಆ ಮನೆಯನ್ನ ಶುದ್ಧೀಕರಿಸಬೇಕು. 53 ಆಮೇಲೆ ಜೀವ ಇರೋ ಪಕ್ಷಿಯನ್ನ ಪಟ್ಟಣದ ಹೊರಗೆ ಬಯಲಲ್ಲಿ ಬಿಟ್ಟುಬಿಡಬೇಕು. ಆ ಮನೆಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಆಗ ಆ ಮನೆ ಶುದ್ಧ ಆಗುತ್ತೆ.
54 ಈ ನಿಯಮಗಳನ್ನ ಯಾವುದೇ ವಿಧದ ಕುಷ್ಠ ಬಂದಾಗ, ತಲೆಯ ಚರ್ಮ ಅಥವಾ ಗಡ್ಡಕ್ಕೆ ಸೋಂಕು ಬಂದಾಗ,+ 55 ಬಟ್ಟೆಗೆ+ ಮನೆಗೆ ಕುಷ್ಠ ಬಂದಾಗ,+ 56 ಊತ ಅಥವಾ ಗಾಯದ ಮೇಲೆ ಗಟ್ಟಿ ಚರ್ಮ, ಕಲೆಗಳು+ ಆದಾಗ ಪಾಲಿಸಬೇಕು. 57 ಯಾವುದು ಶುದ್ಧ, ಯಾವುದು ಅಶುದ್ಧ ಅಂತ ತೀರ್ಮಾನಿಸೋಕೆ ಈ ನಿಯಮಗಳಿವೆ.+ ಇವು ಕುಷ್ಠದ ವಿಷ್ಯದಲ್ಲಿ ಇರೋ ನಿಯಮಗಳು.”+
15 ಯೆಹೋವ ಮೋಶೆ ಆರೋನರ ಜೊತೆ ಮಾತು ಮುಂದುವರಿಸಿ 2 “ಇಸ್ರಾಯೇಲ್ಯರಿಗೆ ಹೀಗೆ ಹೇಳಿ: ‘ಒಬ್ಬ ಗಂಡಸಿಗೆ ಜನನಾಂಗದಲ್ಲಿ ಸ್ರಾವ ಆದ್ರೆ ಅವನು ಅಶುದ್ಧ.+ 3 ಸ್ರಾವ ಆಗ್ತಾ ಇದ್ರೂ ಆಗೋದು ಈಗ ನಿಂತಿದ್ರೂ ಅವನು ಅಶುದ್ಧನೇ.
4 ಅಂಥ ವ್ಯಕ್ತಿ ಮಲಗೋ ಹಾಸಿಗೆ ಅಶುದ್ಧ. ಅವನು ಯಾವುದ್ರ ಮೇಲೆ ಕೂತ್ಕೊಳ್ತಾನೋ ಅದು ಅಶುದ್ಧ. 5 ಅವನ ಹಾಸಿಗೆಯನ್ನ ಮುಟ್ಟಿದವನು ತನ್ನ ಬಟ್ಟೆಗಳನ್ನ ಒಗಿಬೇಕು, ಸ್ನಾನ ಮಾಡಬೇಕು. ಅವನು ಸಂಜೆ ತನಕ* ಅಶುದ್ಧ.+ 6 ಸ್ರಾವ ಇರೋ ವ್ಯಕ್ತಿ ಯಾವುದ್ರ ಮೇಲೆ ಕೂತ್ಕೊಳ್ತಾನೋ ಅದ್ರ ಮೇಲೆ ಬೇರೆಯವರು ಕೂತ್ಕೊಂಡ್ರೆ ತಮ್ಮ ಬಟ್ಟೆಗಳನ್ನ ಒಗೆದು, ಸ್ನಾನ ಮಾಡಬೇಕು. ಅವರು ಸಂಜೆ ತನಕ ಅಶುದ್ಧ. 7 ಸ್ರಾವ ಇರೋ ವ್ಯಕ್ತಿಯನ್ನ ಮುಟ್ಟಿದವನು ತನ್ನ ಬಟ್ಟೆಗಳನ್ನ ಒಗೆದು, ಸ್ನಾನ ಮಾಡಬೇಕು. ಅವನು ಸಂಜೆ ತನಕ ಅಶುದ್ಧ. 8 ಸ್ರಾವ ಆಗ್ತಾ ಇರೋನು ಶುದ್ಧನಾಗಿರೋ ವ್ಯಕ್ತಿ ಮೇಲೆ ಉಗುಳಿದ್ರೆ ಆ ವ್ಯಕ್ತಿ ತನ್ನ ಬಟ್ಟೆಗಳನ್ನ ಒಗೆದು, ಸ್ನಾನ ಮಾಡಬೇಕು. ಅವನು ಸಂಜೆ ತನಕ ಅಶುದ್ಧ. 9 ಸ್ರಾವ ಇರೋ ವ್ಯಕ್ತಿ ಯಾವುದಾದ್ರೂ ಪ್ರಾಣಿಯ ತಡಿ ಮೇಲೆ ಕೂತು ಪ್ರಯಾಣ ಮಾಡಿದ್ರೆ ಆ ತಡಿ ಅಶುದ್ಧ. 10 ಸ್ರಾವ ಇರೋ ವ್ಯಕ್ತಿ ಯಾವುದ್ರ ಮೇಲೆ ಕೂತ್ಕೊಳ್ತಾನೋ ಆ ವಸ್ತುವನ್ನ ಮುಟ್ಟಿದವನು ಸಂಜೆ ತನಕ ಅಶುದ್ಧ. ಆ ವಸ್ತುವನ್ನ ಎತ್ತಿದವನು ತನ್ನ ಬಟ್ಟೆಗಳನ್ನ ಒಗೆದು, ಸ್ನಾನ ಮಾಡಬೇಕು. ಅವನು ಸಂಜೆ ತನಕ ಅಶುದ್ಧ. 11 ಸ್ರಾವ ಇರೋನು+ ಕೈಗಳನ್ನ ತೊಳೀದೆ ಯಾರನ್ನಾದ್ರೂ ಮುಟ್ಟಿದ್ರೆ ಆ ವ್ಯಕ್ತಿ ತನ್ನ ಬಟ್ಟೆಗಳನ್ನ ಒಗೆದು, ಸ್ನಾನ ಮಾಡಬೇಕು. ಅವನು ಸಂಜೆ ತನಕ ಅಶುದ್ಧ. 12 ಸ್ರಾವ ಇರೋನು ಮಣ್ಣಿನ ಪಾತ್ರೆ ಮುಟ್ಟಿದ್ರೆ ಅದನ್ನ ಒಡೆದುಹಾಕಬೇಕು. ಅವನು ಮುಟ್ಟಿದ್ದು ಮರದ ಪಾತ್ರೆ ಆಗಿದ್ರೆ ಅದನ್ನ ನೀರಲ್ಲಿ ತೊಳಿಬೇಕು.+
13 ಸ್ರಾವ ನಿಂತುಹೋದ್ರೆ ನಿಂತುಹೋದ ದಿನದಿಂದ ಏಳು ದಿನ ಆದ್ಮೇಲೆ ಅವನು ತನ್ನ ಬಟ್ಟೆಗಳನ್ನ ಒಗಿಬೇಕು. ಹರಿಯೋ ನೀರಲ್ಲಿ ಸ್ನಾನ ಮಾಡಬೇಕು. ಆಗ ಅವನು ಶುದ್ಧ ಆಗ್ತಾನೆ.+ 14 ಎಂಟನೇ ದಿನ ಅವನು ಎರಡು ಕಾಡುಪಾರಿವಾಳ ಅಥವಾ ಪಾರಿವಾಳದ ಎರಡು ಮರಿಯನ್ನ+ ಯೆಹೋವನ ಮುಂದೆ, ದೇವದರ್ಶನ ಡೇರೆಯ ಬಾಗಿಲ ಹತ್ರ ತರಬೇಕು. ಅದನ್ನ ಪುರೋಹಿತನಿಗೆ ಕೊಡಬೇಕು. 15 ಪುರೋಹಿತ ಆ ಪಕ್ಷಿಗಳಲ್ಲಿ ಒಂದನ್ನ ಪಾಪಪರಿಹಾರಕ ಬಲಿಗಾಗಿ, ಇನ್ನೊಂದನ್ನ ಸರ್ವಾಂಗಹೋಮ ಬಲಿಗಾಗಿ ಅರ್ಪಿಸಬೇಕು. ಅವನ ಅಶುದ್ಧತೆಯ ವಿಷ್ಯದಲ್ಲಿ ಪುರೋಹಿತ ಅವನಿಗಾಗಿ ಯೆಹೋವನ ಮುಂದೆ ಪ್ರಾಯಶ್ಚಿತ್ತ ಮಾಡಬೇಕು.
16 ಒಬ್ಬ ಗಂಡಸಿಂದ ವೀರ್ಯ ಸ್ರಾವ ಆದ್ರೆ ಅವನು ತನ್ನ ಇಡೀ ದೇಹ ತೊಳಿಬೇಕು. ಅವನು ಸಂಜೆ ತನಕ ಅಶುದ್ಧ.+ 17 ವೀರ್ಯ ಯಾವುದೇ ಬಟ್ಟೆಗೆ ಅಥವಾ ಚರ್ಮದ ಯಾವುದೇ ವಸ್ತುಗೆ ತಾಗಿದ್ರೆ ಆ ವಸ್ತುವನ್ನ ನೀರಲ್ಲಿ ತೊಳಿಬೇಕು. ಅದು ಸಂಜೆ ತನಕ ಅಶುದ್ಧ.
18 ಹೆಂಡತಿ ಜೊತೆ ಮಲಗಿದಾಗ ಗಂಡನಿಗೆ ವೀರ್ಯ ಸ್ರಾವ ಆದ್ರೆ ಅವರಿಬ್ರು ಸ್ನಾನ ಮಾಡಬೇಕು. ಅವರು ಸಂಜೆ ತನಕ ಅಶುದ್ಧ.+
19 ಒಬ್ಬ ಸ್ತ್ರೀಗೆ ತಿಂಗಳ ಮುಟ್ಟಿಂದ ರಕ್ತಸ್ರಾವ ಆದ್ರೆ ಅವಳು ಏಳು ದಿನ ತನಕ ಅಶುದ್ಧ.+ ಅವಳನ್ನ ಮುಟ್ಟಿದವರು ಸಂಜೆ ತನಕ ಅಶುದ್ಧ.+ 20 ತಿಂಗಳ ಮುಟ್ಟಿನ ದಿನಗಳಲ್ಲಿ ಯಾವುದ್ರ ಮೇಲೆ ಮಲಗ್ತಾಳೋ, ಕೂತ್ಕೊಳ್ತಾಳೋ ಅದು ಅಶುದ್ಧ.+ 21 ಅವಳ ಹಾಸಿಗೆ ಮುಟ್ಟಿದವರು ತಮ್ಮ ಬಟ್ಟೆಗಳನ್ನ ಒಗೆದು, ಸ್ನಾನ ಮಾಡಬೇಕು. ಅವರು ಸಂಜೆ ತನಕ ಅಶುದ್ಧ. 22 ಅವಳು ಯಾವುದ್ರ ಮೇಲೆ ಕೂತ್ಕೊಳ್ತಾಳೋ ಅದನ್ನ ಮುಟ್ಟಿದವರು ತಮ್ಮ ಬಟ್ಟೆಗಳನ್ನ ಒಗೆದು, ಸ್ನಾನ ಮಾಡಬೇಕು. ಅವರು ಸಂಜೆ ತನಕ ಅಶುದ್ಧ. 23 ಅವಳು ಕೂತ ಹಾಸಿಗೆಯನ್ನ, ಬೇರೆ ಯಾವುದೇ ವಸ್ತುವನ್ನ ಮುಟ್ಟಿದವರು ಸಂಜೆ ತನಕ ಅಶುದ್ಧ.+ 24 ಹೆಂಡತಿ ಜೊತೆ ಮಲಗಿದಾಗ ಅವಳ ಮುಟ್ಟಿನ ರಕ್ತ ಗಂಡನಿಗೆ ತಾಗಿದ್ರೆ+ ಅವನು ಏಳು ದಿನ ತನಕ ಅಶುದ್ಧ. ಅವನು ಮಲಗೋ ಹಾಸಿಗೆನೂ ಅಶುದ್ಧ.
25 ಒಬ್ಬ ಸ್ತ್ರೀಗೆ ಮುಟ್ಟಿನ ಸಮಯ ಬಿಟ್ಟು+ ಬೇರೆ ಸಮಯದಲ್ಲಿ ತುಂಬ ದಿನ ರಕ್ತಸ್ರಾವ ಆದ್ರೆ+ ಅಥವಾ ಮುಟ್ಟಿನ ಸಮಯದಲ್ಲಿ ಜಾಸ್ತಿ ದಿನ ರಕ್ತಸ್ರಾವ ಆದ್ರೆ ಆ ಎಲ್ಲ ದಿನ ಅವಳು ಅಶುದ್ಧ. ಮುಟ್ಟಿನ ಸಮಯದಲ್ಲಿ ಹೇಗೋ ಹಾಗೇ ಅಶುದ್ಧ. 26 ಈ ರೀತಿ ರಕ್ತಸ್ರಾವ ಆಗೋ ದಿನಗಳಲ್ಲಿ ಅವಳು ಮಲಗೋ ಹಾಸಿಗೆ, ಯಾವುದ್ರ ಮೇಲೆ ಕೂತ್ಕೊಳ್ತಾಳೋ ಅದು ಅಶುದ್ಧ.+ ಮುಟ್ಟಿನ ಸಮಯದಲ್ಲಿ ಹೇಗೋ ಹಾಗೇ ಅವು ಅಶುದ್ಧ. 27 ಅದನ್ನ ಮುಟ್ಟಿದವರು ಅಶುದ್ಧ. ಅವರು ತಮ್ಮ ಬಟ್ಟೆಗಳನ್ನ ಒಗೆದು, ಸ್ನಾನ ಮಾಡಬೇಕು. ಅವರು ಸಂಜೆ ತನಕ ಅಶುದ್ಧ.+
28 ರಕ್ತಸ್ರಾವ ನಿಂತುಹೋದ್ರೆ ಅದು ನಿಂತುಹೋಗಿ ಏಳು ದಿನ ಆದ್ಮೇಲೆ ಅವಳು ಶುದ್ಧ.+ 29 ಎಂಟನೇ ದಿನ ಅವಳು ಎರಡು ಕಾಡುಪಾರಿವಾಳ ಅಥವಾ ಪಾರಿವಾಳದ ಎರಡು ಮರಿಗಳನ್ನ+ ದೇವದರ್ಶನ ಡೇರೆಯ ಬಾಗಿಲ ಹತ್ರ ತಂದು ಪುರೋಹಿತನಿಗೆ ಕೊಡಬೇಕು.+ 30 ಪುರೋಹಿತ ಆ ಪಕ್ಷಿಗಳಲ್ಲಿ ಒಂದನ್ನ ಪಾಪಪರಿಹಾರಕ ಬಲಿಯಾಗಿ, ಇನ್ನೊಂದನ್ನ ಸರ್ವಾಂಗಹೋಮ ಬಲಿಯಾಗಿ ಅರ್ಪಿಸಬೇಕು. ರಕ್ತಸ್ರಾವದಿಂದಾದ ಅಶುದ್ಧತೆ ವಿಷ್ಯದಲ್ಲಿ ಪುರೋಹಿತ ಅವಳಿಗಾಗಿ ಯೆಹೋವನ ಮುಂದೆ ಪ್ರಾಯಶ್ಚಿತ್ತ ಮಾಡಬೇಕು.+
31 ಈ ರೀತಿ ನೀವು ಇಸ್ರಾಯೇಲ್ಯರಿಗೆ ಶುದ್ಧ ಆಗಿರೋಕೆ ಸಹಾಯ ಮಾಡಬೇಕು. ಇಲ್ಲಾಂದ್ರೆ ಅವ್ರ ಮಧ್ಯ ಇರೋ ನನ್ನ ಪವಿತ್ರ ಡೇರೆಯನ್ನ ಅವರು ತಮ್ಮ ಅಶುದ್ಧತೆಯಿಂದ ಅಪವಿತ್ರ ಮಾಡಿ ಜೀವ ಕಳ್ಕೊಳ್ತಾರೆ.+
32 ಒಬ್ಬನಿಗೆ ಸ್ರಾವ ಆಗ್ತಾ ಇದ್ರೆ, ವೀರ್ಯಸ್ರಾವದಿಂದ ಅಶುದ್ಧನಾದ್ರೆ,+ 33 ಒಬ್ಬ ಸ್ತ್ರೀ ತಿಂಗಳ ಮುಟ್ಟಿಂದ ಅಶುದ್ಧ ಆದ್ರೆ,+ ಒಬ್ಬ ಪುರುಷ ಅಥವಾ ಸ್ತ್ರೀಗೆ ಸ್ರಾವ ಆದ್ರೆ,+ ಹೆಂಡತಿಯನ್ನ ಅಶುದ್ಧಳಾದಾಗ ಕೂಡಿದ್ರೆ ಈ ನಿಯಮಗಳನ್ನ ಪಾಲಿಸಬೇಕು.’”
16 ಆರೋನನ ಇಬ್ರು ಮಕ್ಕಳು ನಿಯಮಕ್ಕೆ ವಿರುದ್ಧವಾಗಿ ನಡ್ಕೊಂಡು ಯೆಹೋವನ ಮುಂದೆ ಸತ್ತುಹೋದ ಮೇಲೆ+ ಯೆಹೋವ ಮೋಶೆ ಜೊತೆ ಮಾತಾಡಿದನು. 2 ಯೆಹೋವ ಮೋಶೆಗೆ ಹೀಗಂದನು: “ನಿನ್ನ ಅಣ್ಣ ಆರೋನ ನೆನಸಿದಾಗೆಲ್ಲ ಪರದೆ ದಾಟಿ+ ಅತಿ ಪವಿತ್ರ ಸ್ಥಳದೊಳಗೆ ಮಂಜೂಷದ* ಮುಂದೆ ಬರಬಾರದು+ ಅಂತ ಅವನಿಗೆ ಹೇಳು. ಬಂದ್ರೆ ಸತ್ತುಹೋಗ್ತಾನೆ.+ ಯಾಕಂದ್ರೆ ನಾನು ಮಂಜೂಷದ ಮುಚ್ಚಳದ ಮೇಲೆ ಮೋಡದಲ್ಲಿ+ ಕಾಣಿಸ್ಕೊಳ್ತೀನಿ.+
3 ಆರೋನ ಅತಿ ಪವಿತ್ರ ಸ್ಥಳದ ಒಳಗೆ ಬರೋ ಮುಂಚೆ ಪಾಪಪರಿಹಾರಕ ಬಲಿಗಾಗಿ ಒಂದು ಹೋರಿಯನ್ನ,+ ಸರ್ವಾಂಗಹೋಮ ಬಲಿಗಾಗಿ ಒಂದು ಟಗರನ್ನ ತರಬೇಕು.+ 4 ಅವನು ಅತಿ ಪವಿತ್ರ ಸ್ಥಳದ ಒಳಗೆ ಬರೋ ಮುಂಚೆ ಸ್ನಾನ ಮಾಡಿ+ ನಾರಿನ ಪವಿತ್ರವಾದ ಉದ್ದ ಅಂಗಿಯನ್ನ,+ ಗುಪ್ತಾಂಗಗಳು ಕಾಣಿಸದ ಹಾಗೆ ನಾರಿನ ಚಡ್ಡಿ*+ ಹಾಕೊಳ್ಳಬೇಕು. ನಾರಿನ ಸೊಂಟಪಟ್ಟಿಯನ್ನ ಸುತ್ಕೊಂಡು,+ ನಾರಿನ ವಿಶೇಷ ಪೇಟವನ್ನ+ ತಲೆಗೆ ಸುತ್ಕೊಳ್ಳಬೇಕು. ಅವು ಪವಿತ್ರ ಬಟ್ಟೆಗಳು.+
5 ಆರೋನ ಎಲ್ಲ ಇಸ್ರಾಯೇಲ್ಯರಿಂದ ಪಾಪಪರಿಹಾರಕ ಬಲಿಗಾಗಿ ಎರಡು ಆಡುಮರಿಗಳನ್ನ, ಸರ್ವಾಂಗಹೋಮ ಬಲಿಗಾಗಿ ಒಂದು ಟಗರನ್ನ ತಗೊಳ್ಳಬೇಕು.+
6 ಆರೋನ ತಾನು ತಂದ ಹೋರಿಯನ್ನ ತನ್ನ ಪಾಪಗಳ ಪರಿಹಾರಕ್ಕಾಗಿ ಬಲಿ ಅರ್ಪಿಸಬೇಕು. ತನಗಾಗಿ,+ ತನ್ನ ಮನೆಯವರಿಗಾಗಿ ಪ್ರಾಯಶ್ಚಿತ್ತ ಮಾಡಬೇಕು.
7 ಆಮೇಲೆ ಅವನು ಆ ಎರಡು ಆಡುಗಳನ್ನ ಯೆಹೋವನ ಮುಂದೆ, ದೇವದರ್ಶನ ಡೇರೆಯ ಬಾಗಿಲ ಹತ್ರ ತಂದು ನಿಲ್ಲಿಸಬೇಕು. 8 ಒಂದು ಯೆಹೋವನಿಗಾಗಿ, ಇನ್ನೊಂದು ಜನ್ರ ಪಾಪಗಳನ್ನ ಹೊತ್ಕೊಂಡು ಹೋಗೋಕೆ.* ಅವುಗಳಲ್ಲಿ ಯಾವುದನ್ನ ಯಾವುದಕ್ಕಾಗಿ ಉಪಯೋಗಿಸಬೇಕು ಅಂತ ಆರೋನ ಚೀಟು ಹಾಕಿ ತೀರ್ಮಾನಿಸಬೇಕು. 9 ಚೀಟು ಹಾಕಿದಾಗ+ ಯೆಹೋವನಿಗೆ ಬಂದ ಆಡನ್ನ ಆರೋನ ಪಾಪಪರಿಹಾರಕ ಬಲಿಗಾಗಿ ಅರ್ಪಿಸಬೇಕು. 10 ಪ್ರಾಯಶ್ಚಿತ್ತ ಮಾಡೋಕೆ ಇನ್ನೊಂದು* ಆಡನ್ನ ಯೆಹೋವನ ಮುಂದೆ ಜೀವಂತವಾಗಿ ತಂದು ನಿಲ್ಲಿಸಬೇಕು. ಜನ್ರ ಪಾಪಗಳನ್ನ ಹೊತ್ಕೊಂಡು ಹೋಗೋಕೆ* ಅದನ್ನ ಕಾಡಿಗೆ ಕಳಿಸಿಬಿಡಬೇಕು.+
11 ಆರೋನ ತನಗೋಸ್ಕರ ಪಾಪಪರಿಹಾರಕ ಬಲಿಗಾಗಿ ಅರ್ಪಿಸೋ ಹೋರಿಯನ್ನ ಯಜ್ಞವೇದಿ ಹತ್ರ ತರಬೇಕು. ಅವನು ತನ್ನ,+ ತನ್ನ ಕುಟುಂಬದವರ ಪಾಪಗಳಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಆಮೇಲೆ ಅವನು ಆ ಹೋರಿನ ಕಡಿಬೇಕು.
12 ಆರೋನ ಧೂಪ ಹಾಕೋ ಪಾತ್ರೆ ತಗೊಂಡು+ ಅದ್ರಲ್ಲಿ ಯೆಹೋವನ ಮುಂದಿರೋ ಯಜ್ಞವೇದಿಯಿಂದ ಕೆಂಡ ತುಂಬಿಸಬೇಕು.+ ಜೊತೆಗೆ ಎರಡು ಹಿಡಿ ತುಂಬ ಪರಿಮಳ ಇರೋ ಧೂಪದ ಪುಡಿ+ ತಗೊಂಡು ಅತಿ ಪವಿತ್ರ ಸ್ಥಳದ ಒಳಗೆ ಬರಬೇಕು.+ 13 ಅಲ್ಲಿ ಅವನು ಯೆಹೋವನ ಮುಂದೆ+ ಕೆಂಡಗಳ ಮೇಲೆ ಧೂಪ ಹಾಕಬೇಕು. ಆಗ ಸಾಕ್ಷಿ ಮಂಜೂಷದ+ ಮೇಲಿರೋ ಮುಚ್ಚಳವನ್ನ ಧೂಪದ ಹೊಗೆ ಮುಚ್ಕೊಳ್ಳುತ್ತೆ.+ ಆಗ ಅವನು ಸಾಯಲ್ಲ.
14 ಅವನು ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನ+ ತನ್ನ ಬೆರಳಿಂದ ತಗೊಂಡು ಮಂಜೂಷದ ಮುಚ್ಚಳದ ಮುಂದೆ ಪೂರ್ವದ ಕಡೆಗೆ ಚಿಮಿಕಿಸಬೇಕು. ಸ್ವಲ್ಪ ರಕ್ತವನ್ನ ಮಂಜೂಷದ ಮುಚ್ಚಳದ ಮುಂದೆ ಬೆರಳಿಂದ ಏಳು ಸಲ ಚಿಮಿಕಿಸಬೇಕು.+
15 ಆಮೇಲೆ ಆರೋನ ಜನ್ರ ಪಾಪಗಳ ಪರಿಹಾರಕ್ಕಾಗಿ+ ಇರೋ ಆಡನ್ನ ಕಡಿಬೇಕು. ಅದ್ರ ರಕ್ತವನ್ನ ಅತಿ ಪವಿತ್ರ ಸ್ಥಳದ ಒಳಗೆ ತಂದು+ ಹೋರಿಯ ರಕ್ತವನ್ನ ಚಿಮಿಕಿಸಿದ ಹಾಗೆ+ ಮಂಜೂಷದ ಮುಚ್ಚಳದ ಕಡೆ ಮತ್ತು ಅದ್ರ ಮುಂದೆ ಚಿಮಿಕಿಸಬೇಕು.
16 ಆರೋನ ಅತಿ ಪವಿತ್ರ ಸ್ಥಳಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು. ಇಸ್ರಾಯೇಲ್ಯರ ಅಶುದ್ಧ ಕೆಲಸಗಳಿಂದ, ಅಪರಾಧ ಪಾಪಗಳಿಂದ+ ಆ ಸ್ಥಳ ಅಪವಿತ್ರ ಆಗದ ಹಾಗೆ ಮಾಡಬೇಕು. ಇಸ್ರಾಯೇಲ್ಯರ ಮಧ್ಯ ಇರೋ ದೇವದರ್ಶನ ಡೇರೆ ಅವರ ಅಶುದ್ಧ ಕೆಲಸಗಳಿಂದ ಅಪವಿತ್ರ ಆಗದ ಹಾಗೆ ಆ ಡೇರೆಗಾಗಿ ಅವನು ಪ್ರಾಯಶ್ಚಿತ್ತ ಮಾಡಬೇಕು.
17 ಅವನು ಪ್ರಾಯಶ್ಚಿತ್ತ ಮಾಡೋಕೆ ಅತಿ ಪವಿತ್ರ ಸ್ಥಳದ ಒಳಗೆ ಹೋಗಿ ಹೊರಗೆ ಬರೋ ತನಕ ಯಾರೂ ದೇವದರ್ಶನ ಡೇರೆಯಲ್ಲಿ ಇರಬಾರದು. ಅವನು ತನಗಾಗಿ, ತನ್ನ ಕುಟುಂಬದವರಿಗಾಗಿ,+ ಎಲ್ಲ ಇಸ್ರಾಯೇಲ್ ಜನರಿಗಾಗಿ ಪ್ರಾಯಶ್ಚಿತ್ತ ಮಾಡಬೇಕು.+
18 ಆರೋನ ಹೊರಗೆ ಬಂದ ಮೇಲೆ ಯೆಹೋವನ ಮುಂದಿರೋ ಯಜ್ಞವೇದಿ+ ಹತ್ರ ಹೋಗಿ ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು. ಅವನು ಹೋರಿ ರಕ್ತದಲ್ಲಿ ಸ್ವಲ್ಪ, ಆಡಿನ ರಕ್ತದಲ್ಲಿ ಸ್ವಲ್ಪ ತಗೊಂಡು ಯಜ್ಞವೇದಿಯ ಎಲ್ಲ ಕೊಂಬುಗಳಿಗೆ ಹಚ್ಚಬೇಕು. 19 ಅಷ್ಟೇ ಅಲ್ಲ ಯಜ್ಞವೇದಿಯ ಮೇಲೆನೂ ಸ್ವಲ್ಪ ರಕ್ತವನ್ನ ಬೆರಳಿಂದ ಏಳು ಸಲ ಚಿಮಿಕಿಸಬೇಕು. ಇಸ್ರಾಯೇಲ್ಯರಿಂದ ಅಶುದ್ಧವಾಗಿದ್ದ ಯಜ್ಞವೇದಿಯನ್ನ ಶುದ್ಧ ಮಾಡಬೇಕು, ಪವಿತ್ರ ಮಾಡಬೇಕು.
20 ಅವನು ಅತಿ ಪವಿತ್ರ ಸ್ಥಳಕ್ಕಾಗಿ, ದೇವದರ್ಶನ ಡೇರೆಗಾಗಿ, ಯಜ್ಞವೇದಿಗಾಗಿ ಪ್ರಾಯಶ್ಚಿತ್ತ ಮಾಡಿದ+ ಮೇಲೆ ಜೀವ ಇರೋ ಆಡನ್ನ ತರಬೇಕು.+ 21 ಆರೋನ ತನ್ನ ಎರಡು ಕೈಯನ್ನ ಆ ಆಡಿನ ತಲೆ ಮೇಲಿಟ್ಟು ಇಸ್ರಾಯೇಲ್ಯರ ಎಲ್ಲ ತಪ್ಪು, ಅಪರಾಧ, ಪಾಪಗಳನ್ನ ಅರಿಕೆ ಮಾಡಬೇಕು. ಇದು ಆಡಿನ ತಲೆ ಮೇಲೆ ಆ ಎಲ್ಲ ಪಾಪಗಳನ್ನ ಹಾಕಿದ ಹಾಗೆ ಇರುತ್ತೆ.+ ಆಮೇಲೆ ಆ ಆಡನ್ನ ಕಾಡಿಗೆ ಕಳಿಸಿಬಿಡಬೇಕು. ಅದನ್ನ ಕಳಿಸೋಕೆ ಒಬ್ಬನನ್ನ ನೇಮಿಸಿರಬೇಕು. 22 ಅವನು ಆ ಆಡನ್ನ ಕಾಡಿಗೆ ಕಳಿಸಿಬಿಡ್ತಾನೆ.+ ಅದು ಅವ್ರ ಎಲ್ಲ ತಪ್ಪನ್ನ ತನ್ನ ಮೇಲೆ ಹೊತ್ಕೊಂಡು+ ಬಯಲು ಪ್ರದೇಶಕ್ಕೆ+ ಹೋಗುತ್ತೆ.
23 ಆಮೇಲೆ ಆರೋನ ದೇವದರ್ಶನ ಡೇರೆ ಒಳಗೆ ಹೋಗಬೇಕು. ಅವನು ಅತಿ ಪವಿತ್ರ ಸ್ಥಳದ ಒಳಗೆ ಹೋಗುವಾಗ ಹಾಕೊಂಡಿದ್ದ ನಾರಿನ ಬಟ್ಟೆಗಳನ್ನ ತೆಗೆದು ಅಲ್ಲೇ ಕೆಳಗೆ ಇಡಬೇಕು. 24 ಅವನು ಪವಿತ್ರವಾದ ಒಂದು ಜಾಗದಲ್ಲಿ* ಸ್ನಾನ ಮಾಡಿ+ ಪುರೋಹಿತ ಬಟ್ಟೆಗಳನ್ನ ಹಾಕೊಳ್ಳಬೇಕು.+ ಆಮೇಲೆ ಯಜ್ಞವೇದಿ ಹತ್ರ ಬಂದು ಸರ್ವಾಂಗಹೋಮ ಬಲಿಗಾಗಿ ತಾನು ತಂದ ಪ್ರಾಣಿನ,+ ಜನ್ರು ತಂದಿದ್ದ ಪ್ರಾಣಿನ+ ಅರ್ಪಿಸಬೇಕು. ತನ್ನ ಮತ್ತು ಜನ್ರ ಪಾಪಗಳಿಗಾಗಿ ಪ್ರಾಯಶ್ಚಿತ್ತ ಮಾಡಬೇಕು.+ 25 ಪಾಪಪರಿಹಾರಕ ಬಲಿಯ ಪ್ರಾಣಿಯ ಕೊಬ್ಬನ್ನ ಯಜ್ಞವೇದಿ ಮೇಲೆ ಸುಡಬೇಕು. ಅದ್ರ ಹೊಗೆ ಮೇಲೆ ಹೋಗಬೇಕು.
26 ಜನ್ರ ಪಾಪಗಳನ್ನ ಹೊತ್ಕೊಂಡು ಹೋದ ಆಡನ್ನ+ ಕಾಡಿಗೆ ಕಳಿಸಿಬಿಟ್ಟ ವ್ಯಕ್ತಿ ತನ್ನ ಬಟ್ಟೆಗಳನ್ನ ಒಗೆದು ಸ್ನಾನ ಮಾಡ್ಕೊಂಡ ಮೇಲೆ ಪಾಳೆಯದ ಒಳಗೆ ಬರಬಹುದು.
27 ಪ್ರಾಯಶ್ಚಿತ್ತ ಮಾಡೋಕೆ ಯಾವುದ್ರ ರಕ್ತವನ್ನ ಅತಿ ಪವಿತ್ರ ಸ್ಥಳದ ಒಳಗೆ ತಗೊಂಡು ಹೋಗಿದ್ರೋ ಆ ಪಾಪಪರಿಹಾರಕ ಬಲಿಯ ಹೋರಿಯನ್ನ, ಪಾಪಪರಿಹಾರಕ ಬಲಿಯ ಆಡನ್ನ, ಅವುಗಳ ಚರ್ಮ, ಮಾಂಸ, ಸಗಣಿಯನ್ನ ಪಾಳೆಯದ ಹೊರಗೆ ತಗೊಂಡು ಹೋಗಿ ಬೆಂಕಿಯಲ್ಲಿ ಸುಟ್ಟುಬಿಡಬೇಕು.+ 28 ಅದನ್ನ ಸುಡೋ ವ್ಯಕ್ತಿ ತನ್ನ ಬಟ್ಟೆ ಒಗೆದು ಸ್ನಾನ ಮಾಡಬೇಕು. ಆಮೇಲೆ ಅವನು ಪಾಳೆಯದ ಒಳಗೆ ಬರಬಹುದು.
29 ನೀವು ಯಾವಾಗ್ಲೂ ಪಾಲಿಸಬೇಕಾದ ನಿಯಮ ಯಾವುದಂದ್ರೆ, ನೀವೆಲ್ಲ ಏಳನೇ ತಿಂಗಳ ಹತ್ತನೇ ದಿನದಲ್ಲಿ ನಿಮ್ಮ ಪಾಪಗಳಿಗಾಗಿ ದುಃಖ ಪಡಬೇಕು,* ಇಸ್ರಾಯೇಲ್ಯನಾಗಲಿ ನಿಮ್ಮ ಮಧ್ಯ ವಾಸ ಮಾಡೋ ವಿದೇಶಿಯಾಗಲಿ ಯಾವುದೇ ಕೆಲಸ ಮಾಡಬಾರದು.+ 30 ಯಾಕಂದ್ರೆ ಆ ದಿನ ಪುರೋಹಿತ ಪ್ರಾಯಶ್ಚಿತ್ತ ಮಾಡ್ತಾನೆ.+ ಆಗ ನಿಮ್ಮ ಎಲ್ಲ ಪಾಪಗಳಿಗೆ ಕ್ಷಮೆ ಸಿಗುತ್ತೆ. ಯೆಹೋವನ ದೃಷ್ಟಿಯಲ್ಲಿ ನೀವು ಶುದ್ಧ ಆಗ್ತೀರ.+ 31 ಅವತ್ತು ನಿಮಗೆ ಸಬ್ಬತ್ ದಿನ ಆಗಿರೋದ್ರಿಂದ ನೀವು ಪೂರ್ತಿ ವಿಶ್ರಾಂತಿ ಪಡ್ಕೊಬೇಕು, ನಿಮ್ಮ ಪಾಪಗಳಿಗಾಗಿ ದುಃಖ ಪಡಬೇಕು.+ ಈ ನಿಯಮವನ್ನ ಯಾವಾಗ್ಲೂ ಪಾಲಿಸಬೇಕು.
32 ಮಹಾ ಪುರೋಹಿತ ಸ್ಥಾನಕ್ಕೆ+ ತಂದೆ ನಂತ್ರ ಅವನ ಮಕ್ಕಳಲ್ಲಿ ಯಾರಿಗೆ+ ಅಭಿಷೇಕ ಆಗಿರುತ್ತೋ,+ ಯಾರ ನೇಮಕ ಆಗಿರುತ್ತೋ ಅವನು ಪ್ರಾಯಶ್ಚಿತ್ತ ಮಾಡಬೇಕು. ಅವನು ನಾರಿನ ಬಟ್ಟೆಗಳನ್ನ+ ಅಂದ್ರೆ ಪವಿತ್ರ ಬಟ್ಟೆಗಳನ್ನ+ ಹಾಕೊಳ್ಳಬೇಕು. 33 ಅವನು ಅತಿ ಪವಿತ್ರ ಸ್ಥಳಕ್ಕಾಗಿ,+ ದೇವದರ್ಶನ ಡೇರೆಗಾಗಿ,+ ಯಜ್ಞವೇದಿಗಾಗಿ+ ಪ್ರಾಯಶ್ಚಿತ್ತ ಮಾಡಬೇಕು. ಅವನು ಪುರೋಹಿತರಿಗಾಗಿ, ಎಲ್ಲ ಇಸ್ರಾಯೇಲ್ಯರಿಗಾಗಿ ಪ್ರಾಯಶ್ಚಿತ್ತ ಮಾಡಬೇಕು.+ 34 ಇಸ್ರಾಯೇಲ್ಯರ ಎಲ್ಲ ಪಾಪಗಳಿಗಾಗಿ ವರ್ಷಕ್ಕೆ ಒಮ್ಮೆ ಪ್ರಾಯಶ್ಚಿತ್ತ ಮಾಡಬೇಕು.+ ಈ ನಿಯಮವನ್ನ ಯಾವಾಗ್ಲೂ ಪಾಲಿಸಬೇಕು.”+
ಮೋಶೆಗೆ ಯೆಹೋವ ಹೇಳಿದ ಹಾಗೆನೇ ಆರೋನ ಮಾಡಿದ.
17 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ 2 “ನೀನು ಆರೋನನಿಗೆ, ಅವನ ಮಕ್ಕಳಿಗೆ, ಎಲ್ಲ ಇಸ್ರಾಯೇಲ್ಯರಿಗೆ ಇದನ್ನ ಹೇಳು: ‘ಯೆಹೋವ ನಿಮಗೆ ಹೇಳೋದು ಏನಂದ್ರೆ
3 “ಇಸ್ರಾಯೇಲ್ಯರಲ್ಲಿ ಯಾರೂ ಎತ್ತನ್ನ, ಟಗರನ್ನ, ಆಡನ್ನ ಪಾಳೆಯದ ಒಳಗೆ ಅಥವಾ ಹೊರಗೆ ಕಡಿಬಾರದು. 4 ಅದನ್ನ ದೇವದರ್ಶನ ಡೇರೆಯ ಬಾಗಿಲ ಹತ್ರ ಅಂದ್ರೆ ಯೆಹೋವನ ಪವಿತ್ರ ಡೇರೆ ಮುಂದೆ ಯೆಹೋವನಿಗೆ ಅರ್ಪಣೆಯಾಗಿ ಕೊಡಬೇಕು. ಅವನು ಆ ಪ್ರಾಣಿನ ಪಾಳೆಯದ ಒಳಗೆ ಅಥವಾ ಹೊರಗೆ ಕಡಿದ್ರೆ ಅಪರಾಧಿ ಆಗ್ತಾನೆ. ನಿಯಮಕ್ಕೆ ವಿರುದ್ಧವಾಗಿ ರಕ್ತ ಸುರಿಸಿದ್ರಿಂದ ಅವನನ್ನ ಸಾಯಿಸಬೇಕು. 5 ಇಸ್ರಾಯೇಲ್ಯರು ಇಲ್ಲಿ ತನಕ ಬಯಲಲ್ಲಿ ಬಲಿಗಳನ್ನ ಅರ್ಪಿಸ್ತಾ ಇದ್ರು. ಇನ್ನು ಮುಂದೆ ಹಾಗೆ ಮಾಡಬಾರದು. ಅದಕ್ಕೇ ಈ ನಿಯಮ ಕೊಡ್ತಿರೋದು. ಅವರು ಯೆಹೋವನಿಗೆ ಬಲಿ ಅರ್ಪಿಸೋಕೆ ಪ್ರಾಣಿಗಳನ್ನ ದೇವದರ್ಶನ ಡೇರೆಯ ಬಾಗಿಲ ಹತ್ರ ತಂದು ಪುರೋಹಿತನಿಗೆ ಕೊಡಬೇಕು. ಆ ಪ್ರಾಣಿಗಳನ್ನ ಅವರು ಸಮಾಧಾನ ಬಲಿಗಳಾಗಿ ಯೆಹೋವನಿಗೆ ಅರ್ಪಿಸಬೇಕು.+ 6 ಪುರೋಹಿತ ಆ ಪ್ರಾಣಿ ರಕ್ತವನ್ನ ದೇವದರ್ಶನ ಡೇರೆಯ ಬಾಗಿಲ ಹತ್ರ ಇರೋ ಯೆಹೋವನ ಯಜ್ಞವೇದಿ ಮೇಲೆ ಚಿಮಿಕಿಸಬೇಕು. ಪ್ರಾಣಿಯ ಕೊಬ್ಬನ್ನ ಯಜ್ಞವೇದಿ ಮೇಲೆ ಸುಡಬೇಕು. ಇದ್ರಿಂದ ಮೇಲೇರೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಖುಷಿ* ಆಗುತ್ತೆ.+ 7 ಇನ್ನು ಮುಂದೆ ಇಸ್ರಾಯೇಲ್ಯರು ಕೆಟ್ಟ ದೇವದೂತರಿಗೆ* ಬಲಿ ಕೊಡಬಾರದು.+ ಹಾಗೆ ಕೊಟ್ಟು ದೇವರಿಗೆ ನಂಬಿಕೆ ದ್ರೋಹ ಮಾಡಬಾರದು.+ ಈ ನಿಯಮವನ್ನ ಎಲ್ಲ ಪೀಳಿಗೆಗಳು ಪಾಲಿಸಬೇಕು.”’
8 ನೀನು ಇಸ್ರಾಯೇಲ್ಯರಿಗೆ ಇದನ್ನ ಹೇಳು: ‘ನೀವಾಗ್ಲಿ ನಿಮ್ಮ ಮಧ್ಯ ವಾಸ ಮಾಡೋ ವಿದೇಶಿಯರಾಗ್ಲಿ ಸರ್ವಾಂಗಹೋಮ ಬಲಿ ಅಥವಾ ಬೇರೆ ಬಲಿ ಅರ್ಪಿಸುವಾಗ 9 ಬಲಿ ಪ್ರಾಣಿಯನ್ನ ಯೆಹೋವನಿಗೆ ಅರ್ಪಿಸೋಕೆ ದೇವದರ್ಶನ ಡೇರೆಯ ಬಾಗಿಲ ಹತ್ರ ತರದೇ ಇದ್ರೆ ಅವರನ್ನ ಸಾಯಿಸಬೇಕು.+
10 ನೀವಾಗ್ಲಿ, ನಿಮ್ಮ ಮಧ್ಯ ಇರೋ ವಿದೇಶಿಯರಾಗ್ಲಿ ಯಾವುದೇ ಜೀವಿಯ ರಕ್ತ ತಿಂದ್ರೆ+ ನಾನು ಅವರನ್ನ ದೂರ ಮಾಡೇ ಮಾಡ್ತೀನಿ, ಅವರನ್ನ ಸಾಯಿಸ್ತೀನಿ. 11 ಯಾಕಂದ್ರೆ ಪ್ರತಿಯೊಂದು ಜೀವಿಯ ಜೀವ ಅದ್ರ ರಕ್ತದಲ್ಲಿದೆ.+ ನಿಮ್ಮ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ರಕ್ತವನ್ನ ಯಜ್ಞವೇದಿ ಮೇಲೆ ಅರ್ಪಿಸಬೇಕು+ ಅಂತ ನಾನು ಏರ್ಪಾಡು ಮಾಡಿದ್ದೀನಿ. ರಕ್ತದಲ್ಲಿ ಜೀವ ಇರೋದ್ರಿಂದ ರಕ್ತದ ಮೂಲಕ ಮಾತ್ರ ನಿಮ್ಮ ಪಾಪಗಳಿಗೆ ಪ್ರಾಯಶ್ಚಿತ್ತ ಆಗುತ್ತೆ.+ 12 ಅದಕ್ಕೆ “ನಿಮ್ಮಲ್ಲಿ ಯಾರೂ ರಕ್ತ ತಿನ್ನಬಾರದು, ನಿಮ್ಮ ಮಧ್ಯ ವಾಸ ಮಾಡೋ ವಿದೇಶಿಯರು+ ಸಹ ರಕ್ತ ತಿನ್ನಬಾರದು”+ ಅನ್ನೋ ಆಜ್ಞೆ ನಿಮಗೆ ಕೊಟ್ಟಿದ್ದೀನಿ.
13 ನೀವಾಗ್ಲಿ, ನಿಮ್ಮ ಮಧ್ಯ ಇರೋ ವಿದೇಶಿಯರಾಗ್ಲಿ ಬೇಟೆಯಾಡಿ ಆಹಾರಕ್ಕೆ ಯೋಗ್ಯವಾದ ಪ್ರಾಣಿ ಅಥವಾ ಪಕ್ಷಿಯನ್ನ ಹಿಡಿದ್ರೆ ಅವರು ಅದ್ರ ರಕ್ತವನ್ನ ನೆಲಕ್ಕೆ ಸುರಿದು+ ಮಣ್ಣಿಂದ ಮುಚ್ಚಬೇಕು. 14 ಪ್ರತಿಯೊಂದು ಜೀವಿಯ ಜೀವ ಅದ್ರ ರಕ್ತದಲ್ಲಿ ಇರೋದ್ರಿಂದ ಆ ರಕ್ತವೇ ಅದ್ರ ಜೀವ. ಅದಕ್ಕೇ ನಾನು ನಿಮಗೆ “ನೀವು ಯಾವುದೇ ಜೀವಿಯ ರಕ್ತವನ್ನ ತಿನ್ನಬಾರದು. ಯಾಕಂದ್ರೆ ಪ್ರತಿಯೊಂದು ಜೀವಿಯ ರಕ್ತವೇ ಅದ್ರ ಜೀವ. ರಕ್ತ ತಿಂದವನನ್ನ ಸಾಯಿಸಬೇಕು”+ ಅನ್ನೋ ಆಜ್ಞೆ ಕೊಟ್ಟಿದ್ದೀನಿ. 15 ನೀವಾಗ್ಲಿ, ನಿಮ್ಮ ಮಧ್ಯ ಇರೋ ವಿದೇಶಿಯರಾಗ್ಲಿ ಸತ್ತ ಪ್ರಾಣಿಯನ್ನ ಅಥವಾ ಕಾಡುಪ್ರಾಣಿ ಕೊಂದುಹಾಕಿದ ಪ್ರಾಣಿಯನ್ನ ತಿಂದ್ರೆ+ ಬಟ್ಟೆಗಳನ್ನ ಒಗೆದು, ಸ್ನಾನ ಮಾಡಬೇಕು. ಸಂಜೆ ತನಕ ಅವನು ಅಶುದ್ಧ.+ ಆಮೇಲೆ ಶುದ್ಧ ಆಗ್ತಾನೆ. 16 ಬಟ್ಟೆ ಒಗೆದು ಸ್ನಾನ ಮಾಡದಿದ್ರೆ ಆ ತಪ್ಪಿಗೆ ಶಿಕ್ಷೆ ಕೊಡಬೇಕು.’”+
18 ಯೆಹೋವ ಮೋಶೆಗೆ ಹೇಳೋದು ಏನಂದ್ರೆ 2 “ನಾನು ಹೇಳೋ ಮಾತನ್ನ ಇಸ್ರಾಯೇಲ್ಯರಿಗೆ ಹೇಳು: ‘ನಾನು ನಿಮ್ಮ ದೇವರಾದ ಯೆಹೋವ.+ 3 ಈ ಮುಂಚೆ ನೀವು ವಾಸ ಮಾಡ್ತಿದ್ದ ಈಜಿಪ್ಟಿನ ಜನ್ರ ತರ ಆಗ್ಲಿ, ಮುಂದೆ ನಾನು ನಿಮ್ಮನ್ನ ಕರ್ಕೊಂಡು ಹೋಗೋ ಕಾನಾನ್ ದೇಶದ ಜನ್ರ ತರ ಆಗ್ಲಿ ನೀವು ನಡ್ಕೊಬಾರದು.+ ಅವ್ರ ಪದ್ಧತಿಗಳನ್ನ ಆಚರಿಸಬಾರದು. 4 ನೀವು ನನ್ನ ತೀರ್ಪುಗಳನ್ನ ಒಪ್ಕೊಳ್ಳಬೇಕು, ನನ್ನ ನಿಯಮಗಳನ್ನ ಪಾಲಿಸಬೇಕು, ಅದ್ರಲ್ಲಿ ಇರೋ ತರ ಮಾಡಬೇಕು.+ ನಾನು ನಿಮ್ಮ ದೇವರಾದ ಯೆಹೋವ. 5 ನೀವು ನನ್ನ ನಿಯಮಗಳ ಪ್ರಕಾರ, ತೀರ್ಪುಗಳ ಪ್ರಕಾರ ನಡೀಬೇಕು. ಹಾಗೆ ಮಾಡಿದ್ರೆ ನೀವು ಬದುಕ್ತೀರ.+ ನಾನು ಯೆಹೋವ.
6 ನಿಮ್ಮಲ್ಲಿ ಯಾರೂ ಹತ್ರದ ಸಂಬಂಧಿಕರಲ್ಲಿ ಯಾರ ಜೊತೆನೂ ಲೈಂಗಿಕ ಸಂಬಂಧ ಇಟ್ಕೊಬಾರದು.+ ನಾನು ಯೆಹೋವ. 7 ನಿಮ್ಮ ತಂದೆ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು. ತಾಯಿ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು. ಅವಳು ನಿನಗೆ ಜನ್ಮ ಕೊಟ್ಟವಳಲ್ವಾ? ಹಾಗಾಗಿ ಅವಳ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು.
8 ನಿಮ್ಮ ತಂದೆಯ ಹೆಂಡತಿ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು.+ ಇಟ್ಕೊಂಡ್ರೆ ಅದು ನಿಮ್ಮ ತಂದೆಗೆ ಅವಮಾನ.
9 ನಿಮ್ಮ ಅಕ್ಕ-ತಂಗಿ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು. ಅವಳು ನಿಮ್ಮ ತಂದೆಯ ಮಗಳಾಗಿರಲಿ ತಾಯಿಯ ಮಗಳಾಗಿರಲಿ, ನಿಮ್ಮ ಕುಟುಂಬದಲ್ಲಿ ಹುಟ್ಟಿ ಬೆಳೆದವಳಾಗಿರಲಿ ಬೇರೆ ಕುಟುಂಬದಲ್ಲಿ ಹುಟ್ಟಿ ಬೆಳೆದವಳಾಗಿರಲಿ ಅವಳ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು.+
10 ನಿಮ್ಮ ಮೊಮ್ಮಗಳ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು. ಅವಳು ನಿಮ್ಮ ಮಗನಿಗೇ ಹುಟ್ಟಿರಲಿ ಮಗಳಿಗೇ ಹುಟ್ಟಿರಲಿ ಹಾಗೆ ಮಾಡಬಾರದು. ಅವಳು ನಿಮ್ಮ ರಕ್ತಸಂಬಂಧಿ ಆಗಿರೋದ್ರಿಂದ ಹಾಗೆ ಮಾಡಿದ್ರೆ ಅದು ನಿಮಗೇ ಅವಮಾನ.
11 ನಿಮ್ಮ ತಂದೆಯ ಹೆಂಡತಿಯ ಮಗಳ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು. ಯಾಕಂದ್ರೆ ಅವಳು ನಿಮ್ಮ ಸಹೋದರಿ, ನಿಮ್ಮ ತಂದೆಗೆ ಹುಟ್ಟಿದವಳು.
12 ನಿಮ್ಮ ಸೋದರತ್ತೆ ಜೊತೆ* ಲೈಂಗಿಕ ಸಂಬಂಧ ಇಟ್ಕೊಬಾರದು. ಯಾಕಂದ್ರೆ ಅವಳು ನಿಮ್ಮ ತಂದೆಯ ರಕ್ತಸಂಬಂಧಿ.+
13 ನಿಮ್ಮ ತಾಯಿಯ ಅಕ್ಕ-ತಂಗಿ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು. ಯಾಕಂದ್ರೆ ಅವಳು ನಿಮ್ಮ ತಾಯಿಯ ರಕ್ತಸಂಬಂಧಿ.
14 ನಿಮ್ಮ ತಂದೆಯ ಅಣ್ಣನ ಅಥವಾ ತಮ್ಮನ ಹೆಂಡತಿ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು. ಅವಳು ನಿಮ್ಮ ಸಂಬಂಧಿಕಳು.* ಅವಳ ಜೊತೆ ಸಂಬಂಧ ಇಟ್ಕೊಂಡ್ರೆ ನಿಮ್ಮ ಆ ದೊಡ್ಡಪ್ಪ ಅಥವಾ ಚಿಕ್ಕಪ್ಪನನ್ನ ಅವಮಾನ ಪಡಿಸ್ತೀರ.+
15 ನಿಮ್ಮ ಸೊಸೆ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು.+ ಅವಳು ನಿಮ್ಮ ಮಗನ ಹೆಂಡತಿ. ಹಾಗಾಗಿ ಅವಳ ಜೊತೆ ಸಂಬಂಧ ಇಟ್ಕೊಬಾರದು.
16 ನಿಮ್ಮ ಅಣ್ಣನ ಅಥವಾ ತಮ್ಮನ ಹೆಂಡತಿ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು.+ ಹಾಗೆ ಇಟ್ಕೊಂಡ್ರೆ ನಿಮ್ಮ ಅಣ್ಣ ಅಥವಾ ತಮ್ಮನಿಗೆ ಅವಮಾನ.
17 ಒಬ್ಬ ಸ್ತ್ರೀಯನ್ನ ಮದುವೆ ಮಾಡ್ಕೊಂಡ್ರೆ ಅವಳ ಮಗಳ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು.+ ಮೊಮ್ಮಗಳ ಜೊತೆಗೂ ಲೈಂಗಿಕ ಸಂಬಂಧ ಇಟ್ಕೊಬಾರದು. ಅವಳು ಮಗನಿಗೇ ಹುಟ್ಟಿರಲಿ ಮಗಳಿಗೇ ಹುಟ್ಟಿರಲಿ ನೀವು ಹಾಗೆ ಮಾಡಬಾರದು. ಅದು ಅಶ್ಲೀಲ ವಿಷ್ಯ.* ಯಾಕಂದ್ರೆ ಅವರು ಆ ಸ್ತ್ರೀಯ ರಕ್ತಸಂಬಂಧಿಕರು.
18 ನಿಮ್ಮ ಹೆಂಡತಿ ಬದುಕಿರುವಾಗ್ಲೇ ಅವಳ ಅಕ್ಕ ಅಥವಾ ತಂಗಿ ಜೊತೆ ಲೈಂಗಿಕ ಸಂಬಂಧ ಇಟ್ಕೊಳ್ಳೋ ಉದ್ದೇಶದಿಂದ ಅವಳನ್ನ ಮದುವೆ ಮಾಡ್ಕೊಳ್ಳಬಾರದು.+
19 ನಿಮ್ಮ ಹೆಂಡತಿ ಮುಟ್ಟಿಂದ ಅಶುದ್ಧ ಆಗಿರುವಾಗ ಅವಳ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು.+
20 ಇನ್ನೊಬ್ಬನ ಹೆಂಡತಿ ಜೊತೆ ಲೈಂಗಿಕ ಸಂಬಂಧ ಇಟ್ಕೊಳ್ಳೋ ಮೂಲಕ ನೀವು ಅಶುದ್ಧ ಆಗಬಾರದು.+
21 ನಿಮ್ಮ ಮಕ್ಕಳಲ್ಲಿ ಯಾರನ್ನೂ ಮೋಲೆಕನಿಗೆ ಅರ್ಪಿಸಬಾರದು.*+ ಹಾಗೆ ಮಾಡಿ ನಿಮ್ಮ ದೇವರ ಹೆಸರನ್ನ ಅಪವಿತ್ರ ಮಾಡಬಾರದು.+ ನಾನು ಯೆಹೋವ.
22 ನಿಮ್ಮಲ್ಲಿ ಒಬ್ಬ ಗಂಡಸು ಸ್ತ್ರೀ ಜೊತೆ ಲೈಂಗಿಕ ಸಂಬಂಧ ಇಟ್ಕೊಳ್ಳೋ ತರ ಇನ್ನೊಬ್ಬ ಗಂಡಸಿನ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು.+ ಇದು ಹೇಸಿಗೆ ಕೆಲಸ.
23 ಒಬ್ಬ ಗಂಡಸು ಪ್ರಾಣಿ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡು ಅಶುದ್ಧ ಆಗಬಾರದು. ಪ್ರಾಣಿ ಜೊತೆ ಲೈಂಗಿಕ ಸಂಬಂಧ ಇಟ್ಕೊಳ್ಳೋ ಉದ್ದೇಶದಿಂದ ಒಬ್ಬ ಹೆಂಗಸು ಅದ್ರ ಮುಂದೆ ಹೋಗಬಾರದು.+ ಇದು ದೇವರ ಏರ್ಪಾಡಿಗೆ ವಿರುದ್ಧ.
24 ಇದ್ಯಾವುದನ್ನೂ ಮಾಡಿ ಅಶುದ್ಧ ಆಗಬೇಡಿ. ನಾನು ನಿಮ್ಮ ಎದುರಿಂದ ಓಡಿಸಿಬಿಡೋ ದೇಶಗಳ ಜನ್ರು ಈ ಎಲ್ಲ ಕೆಲಸ ಮಾಡಿ ಅಶುದ್ಧ ಆಗಿದ್ದಾರೆ.+ 25 ಹಾಗಾಗಿ ಅವರಿರೋ ದೇಶ ಅಶುದ್ಧ. ಅವರ ಪಾಪಗಳಿಗಾಗಿ ಅವರಿಗೆ ಶಿಕ್ಷೆ ಕೊಡ್ತೀನಿ. ಆ ದೇಶದಿಂದ ಅವರನ್ನ ಓಡಿಸಿಬಿಡ್ತೀನಿ.+ 26 ಆದ್ರೆ ನೀವು ನನ್ನ ನಿಯಮಗಳಿಗೆ, ತೀರ್ಪುಗಳಿಗೆ ವಿಧೇಯರಾಗಬೇಕು.+ ನೀವಾಗ್ಲಿ ನಿಮ್ಮ ಮಧ್ಯ ವಾಸ ಮಾಡೋ ವಿದೇಶಿಯರಾಗ್ಲಿ ಆ ಕೆಟ್ಟ ಕೆಲಸಗಳಲ್ಲಿ ಯಾವುದನ್ನೂ ಮಾಡಬಾರದು.+ 27 ನಿಮಗಿಂತ ಮುಂಚೆ ಆ ದೇಶದಲ್ಲಿದ್ದ ಜನ್ರು ಈ ಎಲ್ಲ ಕೆಟ್ಟ ಕೆಲಸಗಳನ್ನ ಮಾಡ್ತಿದ್ರು.+ ಹಾಗಾಗಿ ಆ ದೇಶ ಈಗ ಅಶುದ್ಧ. 28 ನೀವು ಅವ್ರ ತರ ಮಾಡದೆ ಆ ದೇಶವನ್ನ ಅಶುದ್ಧ ಮಾಡದಿದ್ರೆ ಅಲ್ಲೇ ಇರ್ತೀರ. ನಿಮಗಿಂತ ಮುಂಚೆ ಅಲ್ಲಿದ್ದ ಜನ್ರನ್ನ ನಾನು ಓಡಿಸಿಬಿಡೋ ಹಾಗೆ ನಿಮ್ಮನ್ನ ಓಡಿಸಿಬಿಡಲ್ಲ. 29 ಯಾರಾದ್ರೂ ಈ ಕೆಟ್ಟ ಕೆಲಸಗಳನ್ನ ಮಾಡಿದ್ರೆ ಅವರನ್ನ ಸಾಯಿಸಬೇಕು. 30 ನಿಮ್ಮ ಕಣ್ಮುಂದೆ ನಡಿತಿದ್ದ ಕೆಟ್ಟ ಪದ್ಧತಿಗಳಲ್ಲಿ ಯಾವುದನ್ನೂ ನೀವು ಮಾಡಿ ಅಶುದ್ಧ ಆಗಬಾರದು.+ ಇಂಥ ವಿಷ್ಯಗಳಿಂದ ದೂರ ಇದ್ದು ನಿಮ್ಮ ಕರ್ತವ್ಯ ಮಾಡಿ. ನಾನು ನಿಮ್ಮ ದೇವರಾದ ಯೆಹೋವ.’”
19 ಯೆಹೋವ ಮೋಶೆಗೆ ಹೇಳಿದ್ದು, 2 “ಎಲ್ಲ ಇಸ್ರಾಯೇಲ್ಯರಿಗೆ ಈ ಮಾತನ್ನ ತಿಳಿಸು: ‘ನೀವು ಪವಿತ್ರರಾಗಿ ಇರಬೇಕು. ಯಾಕಂದ್ರೆ ನಾನು ನಿಮ್ಮ ದೇವರಾದ ಯೆಹೋವ ಪವಿತ್ರನಾಗಿದ್ದೀನಿ.+
3 ಪ್ರತಿಯೊಬ್ಬನು ಅಪ್ಪಅಮ್ಮಗೆ ಗೌರವ ಕೊಡಬೇಕು.+ ನಾನು ಆಜ್ಞೆ ಕೊಟ್ಟ ಹಾಗೆ ಸಬ್ಬತ್ ಆಚರಿಸಬೇಕು.+ ನಾನು ನಿಮ್ಮ ದೇವರಾದ ಯೆಹೋವ. 4 ಪ್ರಯೋಜನಕ್ಕೇ ಬರದ ದೇವರುಗಳನ್ನ ಆರಾಧಿಸಬೇಡಿ,+ ಲೋಹದ ಮೂರ್ತಿಗಳನ್ನ ಮಾಡ್ಕೊಬೇಡಿ.+ ನಾನು ನಿಮ್ಮ ದೇವರಾದ ಯೆಹೋವ.
5 ಯೆಹೋವನಾದ ನನಗೆ ನೀವು ಸಮಾಧಾನ ಬಲಿ ಕೊಡುವಾಗ+ ನಾನು ಹೇಳೋ ತರಾನೇ ಕೊಡಬೇಕು.+ ಆಗ ನಿಮ್ಮನ್ನ ಮೆಚ್ಕೊಳ್ತೀನಿ. 6 ನೀವು ಬಲಿ ಕೊಟ್ಟ ದಿನಾನೇ ಆ ಪ್ರಾಣಿಯ ಮಾಂಸನ ತಿನ್ನಬೇಕು. ಉಳಿದ ಮಾಂಸನ ಮಾರನೇ ದಿನ ತಿನ್ನಬಹುದು. ಆದ್ರೆ ಅದು ಮೂರನೇ ದಿನ ಉಳಿದ್ರೆ ಅದನ್ನ ತಿನ್ನಬಾರದು, ಬೆಂಕಿಯಿಂದ ಸುಟ್ಟುಬಿಡಬೇಕು.+ 7 ಆ ಮಾಂಸನ ಮೂರನೇ ದಿನ ಯಾರಾದ್ರೂ ತಿಂದ್ರೆ ಅದು ಅಸಹ್ಯ. ಆ ಬಲಿನ ನಾನು ಮೆಚ್ಚಲ್ಲ. 8 ಒಂದುವೇಳೆ ಹಾಗೆ ಮಾಡಿದ್ರೆ ಯೆಹೋವನಾದ ನನಗೆ ಕೊಟ್ಟ ಪವಿತ್ರ ಬಲಿನ ಅಪವಿತ್ರ ಮಾಡಿದ್ದಾನೆ. ಹಾಗಾಗಿ ಅವನಿಗೆ ಶಿಕ್ಷೆ ಆಗಬೇಕು. ಅವನನ್ನ ಸಾಯಿಸಬೇಕು.
9 ನೀವು ಬೆಳೆ ಕೊಯ್ಯುವಾಗ ನಿಮ್ಮ ಹೊಲದ ಅಂಚಲ್ಲಿರೋ ಬೆಳೆನ ಪೂರ್ತಿ ಕೊಯ್ಯಬಾರದು. ನೀವು ಹೊಲದಲ್ಲಿ ಬಿಟ್ಟಿರೋ ತೆನೆಗಳನ್ನ ತಗೊಂಡು ಬರಬಾರದು.*+ 10 ಅಷ್ಟೇ ಅಲ್ಲ ಕೊಯ್ಯದೆ ಬಿಟ್ಟ ದ್ರಾಕ್ಷಿನ ಕೂಡಿಸಬಾರದು. ತೋಟದಲ್ಲಿ ಕೆಳಗೆ ಬಿದ್ದ ದ್ರಾಕ್ಷಿನ ಹೆಕ್ಕಬಾರದು. ಅದನ್ನ ಬಡವರಿಗೆ* ವಿದೇಶಿಯರಿಗೆ ಬಿಟ್ಟುಬಿಡಬೇಕು.+ ನಾನು ನಿಮ್ಮ ದೇವರಾದ ಯೆಹೋವ.
11 ನೀವು ಕದಿಬಾರದು,+ ಮೋಸ ಮಾಡಬಾರದು,+ ಅಪ್ರಾಮಾಣಿಕರಾಗಿ ನಡ್ಕೊಬಾರದು. 12 ಸುಳ್ಳು ಹೇಳಿ ನನ್ನ ಹೆಸ್ರಲ್ಲಿ ಆಣೆ ಇಡಬಾರದು.+ ಹೀಗೆ ಆಣೆಯಿಟ್ಟು ನನ್ನ ಹೆಸ್ರನ್ನ ಅಪವಿತ್ರ ಮಾಡಬಾರದು. ನಾನು ನಿಮ್ಮ ದೇವರಾದ ಯೆಹೋವ. 13 ನೀವು ಬೇರೆಯವರಿಗೆ ಮೋಸ ಮಾಡಬಾರದು.+ ಸುಲಿಗೆ* ಮಾಡಬಾರದು.+ ಕೂಲಿ ಮಾಡಿದವನಿಗೆ ಕೊಡಬೇಕಾದ ಸಂಬಳನ ಕೊಡದೇ ಮಾರನೇ ದಿನ ಬೆಳಿಗ್ಗೆ ತನಕ ನಿಮ್ಮ ಹತ್ರಾನೇ ಇಟ್ಕೊಬಾರದು.+
14 ನೀವು ಕಿವುಡರಿಗೆ ಶಾಪ ಹಾಕಬಾರದು,* ಕುರುಡರು ಎಡವಿ ಬೀಳೋ ತರ ಅವರು ನಡಿಯೋ ದಾರೀಲಿ ಏನೂ ಅಡ್ಡ ಇಡಬಾರದು,+ ನೀವು ನಂಗೆ ಭಯಪಡಬೇಕು.+ ನಾನು ನಿಮ್ಮ ದೇವರಾದ ಯೆಹೋವ.
15 ನೀವು ಅನ್ಯಾಯವಾಗಿ ತೀರ್ಪು ಕೊಡಬಾರದು. ಒಬ್ಬ ವ್ಯಕ್ತಿ ಬಡವ ಅನ್ನೋ ಕಾರಣಕ್ಕೆ ಅವನಿಗೆ ದಯೆತೋರಿಸಿ ಅವನ ಪರವಾಗಿ ತೀರ್ಪು ಕೊಡಬಾರದು ಅಥವಾ ಶ್ರೀಮಂತ ಅನ್ನೋ ಕಾರಣಕ್ಕೆ ಅವನ ಪರವಹಿಸಿ ತೀರ್ಪು ಕೊಡಬಾರದು.+ ಎಲ್ರಿಗೂ ನ್ಯಾಯವಾಗಿ ತೀರ್ಪು ಕೊಡಬೇಕು.
16 ನೀವು ಬೇರೆಯವರ ಹೆಸ್ರು ಹಾಳು ಮಾಡೋಕೆ ಸುಳ್ಳುಗಳನ್ನ ಹಬ್ಬಿಸಬಾರದು.+ ನಿಮ್ಮಿಂದ ಇನ್ನೊಬ್ಬನ ಜೀವ ಹೋಗಬಾರದು.*+ ನಾನು ಯೆಹೋವ.
17 ನಿಮ್ಮ ಸಹೋದರನನ್ನ ಮನಸ್ಸಲ್ಲೂ ದ್ವೇಷಿಸಬಾರದು.+ ಯಾರಾದ್ರೂ ಪಾಪ ಮಾಡಿದ್ರೆ ನೀವು ಅವನನ್ನ ತಿದ್ಲೇಬೇಕು.+ ಇಲ್ಲಾಂದ್ರೆ ಅವನು ಮಾಡೋ ಪಾಪಕ್ಕೆ ನೀವೂ ಹೊಣೆ ಆಗ್ತೀರ.
18 ನೀವು ಯಾರಿಗೂ ಸೇಡು ತೀರಿಸಬಾರದು+ ಅಥವಾ ಯಾರ ಮೇಲೂ ದ್ವೇಷ ಸಾಧಿಸಬಾರದು. ನೀವು ನಿಮ್ಮನ್ನ ಪ್ರೀತಿಸೋ ತರಾನೇ ಬೇರೆಯವರನ್ನೂ ಪ್ರೀತಿಸಬೇಕು.+ ನಾನು ಯೆಹೋವ.
19 ನಾನು ಕೊಡೋ ಈ ನಿಯಮಗಳನ್ನ ನೀವು ಪಾಲಿಸಬೇಕು: ಎರಡು ಬೇರೆಬೇರೆ ತರದ ಸಾಕುಪ್ರಾಣಿಗಳು ಸಂಗಮಿಸೋ ಹಾಗೆ ಮಾಡಿ ಮಿಶ್ರತಳಿಯನ್ನ ಹುಟ್ಟಿಸಬಾರದು. ನೀವು ಹೊಲದಲ್ಲಿ ಎರಡು ತರದ ಬೀಜಗಳನ್ನ ಬಿತ್ತಬಾರದು.+ ಎರಡು ತರದ ನೂಲುಗಳನ್ನ ಸೇರಿಸಿ ತಯಾರಿಸಿದ ಬಟ್ಟೆನ ಹಾಕೊಳ್ಳಬಾರದು.+
20 ಬೇರೆಯವನ ಜೊತೆ ಮದುವೆ ನಿಶ್ಚಯ ಆಗಿ ಇನ್ನೂ ಬಿಡುಗಡೆ ಬೆಲೆ ಕೊಟ್ಟು ಬಿಡಿಸ್ಕೊಳ್ಳದ ಒಬ್ಬ ಸೇವಕಿ ಜೊತೆ ಯಾರಾದ್ರೂ ಸಂಬಂಧ ಇಟ್ಕೊಂಡ್ರೆ ಅವರಿಬ್ರಿಗೂ ಶಿಕ್ಷೆ ಆಗಬೇಕು. ಆದ್ರೆ ಅವಳನ್ನ ಯಾರೂ ಬಿಡಿಸ್ಕೊಳ್ಳದೇ ಇರೋದ್ರಿಂದ ಅವರಿಗೆ ಮರಣಶಿಕ್ಷೆ ಆಗಬಾರದು. 21 ಅವನು ದೋಷಪರಿಹಾರಕ ಬಲಿನ ಯೆಹೋವನಿಗೆ ಕೊಡೋಕೆ ಒಂದು ಟಗರನ್ನ ದೇವದರ್ಶನ ಡೇರೆಯ ಬಾಗಿಲ ಹತ್ರ ತರಬೇಕು.+ 22 ಅವನು ತಂದ ಟಗರನ್ನ ಪುರೋಹಿತ ಯೆಹೋವನ ಮುಂದೆ ಅರ್ಪಿಸ್ತಾನೆ, ಆ ವ್ಯಕ್ತಿಯ ಪಾಪಕ್ಕೆ ಪ್ರಾಯಶ್ಚಿತ್ತ ಮಾಡ್ತಾನೆ. ಆಗ ಅವನ ಪಾಪಕ್ಕೆ ಕ್ಷಮೆ ಸಿಗುತ್ತೆ.
23 ನಾನು ಕೊಡೋ ದೇಶಕ್ಕೆ ನೀವು ಬಂದ ಮೇಲೆ ಅಲ್ಲಿ ನೀವು ಹಣ್ಣಿನ ಮರ ನೆಟ್ರೆ ಮೂರು ವರ್ಷ ಅದ್ರ ಹಣ್ಣು ಅಶುದ್ಧವಾಗಿರುತ್ತೆ. ಆ ಹಣ್ಣನ್ನ ತಿನ್ನೋದು ನಿಷೇಧ ಆಗಿರೋದ್ರಿಂದ ನೀವು ತಿನ್ನಬಾರದು. 24 ಆದ್ರೆ ನಾಲ್ಕನೇ ವರ್ಷ ಆ ಮರಗಳ ಹಣ್ಣು ಪವಿತ್ರವಾಗಿರುತ್ತೆ. ಅದನ್ನ ನೀವು ಸಂತೋಷದಿಂದ ಯೆಹೋವನಿಗೆ ಅರ್ಪಿಸಬೇಕು.+ 25 ಐದನೇ ವರ್ಷ ನೀವು ಆ ಹಣ್ಣುಗಳನ್ನ ತಿನ್ನಬಹುದು. ಹೀಗೆ ಮಾಡಿದ್ರೆ ನಿಮಗೆ ಫಲ ಸಮೃದ್ಧಿಯಾಗಿ ಸಿಗುತ್ತೆ. ನಾನು ನಿಮ್ಮ ದೇವರಾದ ಯೆಹೋವ.
26 ನೀವು ತಿನ್ನೋ ಮಾಂಸದಲ್ಲಿ ರಕ್ತ ಇರಬಾರದು.+
ಶಕುನ ನೋಡಬಾರದು, ಮಾಟಮಂತ್ರ ಮಾಡಬಾರದು.+
27 ನಿಮ್ಮ ಕಣ್ಣು ಮತ್ತು ಕಿವಿ ಮಧ್ಯ ಇರೋ ಕೂದಲನ್ನ ಬೋಳಿಸಬಾರದು,* ಗಡ್ಡವನ್ನ ವಿಚಿತ್ರವಾಗಿ ಕತ್ತರಿಸಬಾರದು.+
28 ಸತ್ತವರಿಗಾಗಿ ಅಳ್ತಾ ನಿಮ್ಮ ದೇಹನ ಗಾಯ ಮಾಡ್ಕೊಬಾರದು.+ ನಿಮ್ಮ ದೇಹದ ಮೇಲೆ ಹಚ್ಚೆ ಹಾಕಿಸ್ಕೊಳ್ಳಬಾರದು. ನಾನು ಯೆಹೋವ.
29 ನಿಮ್ಮ ಮಗಳನ್ನ ವೇಶ್ಯೆಯಾಗಿ ಮಾಡಿ ಅವಳಿಗೆ ಅವಮಾನ ಮಾಡಬಾರದು.+ ಹಾಗೆ ಮಾಡಿದ್ರೆ ದೇಶ ವೇಶ್ಯಾವಾಟಿಕೆಯಿಂದ ಅಶುದ್ಧ ಆಗುತ್ತೆ. ನಿಮ್ಮ ದೇಶದಲ್ಲಿ ನಾಚಿಕೆಗೆಟ್ಟ ನಡತೆ ಹೆಚ್ಚಾಗುತ್ತೆ.+
30 ನಾನು ಆಜ್ಞೆ ಕೊಟ್ಟ ಹಾಗೆ ನೀವು ಸಬ್ಬತ್ ಆಚರಿಸಬೇಕು.+ ನನ್ನ ಆರಾಧನಾ ಸ್ಥಳನ ತುಂಬ ಗೌರವದಿಂದ* ನೋಡಬೇಕು. ನಾನು ಯೆಹೋವ.
31 ಸತ್ತವರನ್ನ ಮಾತಾಡಿಸ್ತೀವಿ ಅಂತ ಹೇಳೋರ ಹತ್ರ,+ ಭವಿಷ್ಯ ಹೇಳೋರ ಹತ್ರ+ ಹೋಗಿ ಅಶುದ್ಧ ಆಗಬಾರದು. ನಾನು ನಿಮ್ಮ ದೇವರಾದ ಯೆಹೋವ.
32 ವಯಸ್ಸಾದ ವೃದ್ಧರ ಮುಂದೆ ಎದ್ದು ನಿಂತು+ ಅವರನ್ನ ಗೌರವಿಸಬೇಕು.+ ನಿಮ್ಮ ದೇವರಿಗೆ ಭಯಪಡಬೇಕು.+ ನಾನು ಯೆಹೋವ.
33 ನಿಮ್ಮ ದೇಶದಲ್ಲಿ ವಾಸಿಸೋ ವಿದೇಶಿಯರಿಗೆ ಕಾಟ ಕೊಡಬಾರದು.+ 34 ಅವರನ್ನ ನಿಮ್ಮ ದೇಶದವರ ತರಾನೇ ನೋಡ್ಕೊಬೇಕು.+ ನೀವು ನಿಮ್ಮನ್ನ ಪ್ರೀತಿಸೋ ತರಾನೇ ಅವರನ್ನೂ ಪ್ರೀತಿಸಬೇಕು. ಯಾಕಂದ್ರೆ ನೀವೂ ಒಂದು ಕಾಲದಲ್ಲಿ ಈಜಿಪ್ಟ್ ದೇಶದಲ್ಲಿ ವಿದೇಶಿಯರಾಗಿದ್ರಿ.+ ನಾನು ನಿಮ್ಮ ದೇವರಾದ ಯೆಹೋವ.
35 ಅಳತೆ* ಮಾಡುವಾಗ, ತೂಕ ಮಾಡುವಾಗ ಮೋಸ ಮಾಡಬಾರದು.+ 36 ನೀವು ಉಪಯೋಗಿಸೋ ತಕ್ಕಡಿ, ತೂಕದ ಕಲ್ಲು, ಅಳೆಯೋ ಮಾಪಕಗಳು* ಸರಿಯಾಗಿ ಇರಬೇಕು.+ ನಿಮ್ಮನ್ನ ಈಜಿಪ್ಟ್ ದೇಶದಿಂದ ಬಿಡಿಸ್ಕೊಂಡು ಬಂದ ನಿಮ್ಮ ದೇವರಾದ ಯೆಹೋವ ನಾನೇ. 37 ಹಾಗಾಗಿ ನಾನು ಕೊಟ್ಟಿರೋ ಎಲ್ಲ ನಿಯಮಗಳನ್ನ, ನನ್ನ ಎಲ್ಲ ತೀರ್ಪುಗಳನ್ನ ನೀವು ಮನಸ್ಸಲ್ಲಿ ಇಟ್ಕೊಂಡು ಅದ್ರ ಪ್ರಕಾರ ನಡಿಬೇಕು.+ ನಾನು ಯೆಹೋವ.’”
20 ಯೆಹೋವ ಮೋಶೆಗೆ ಇದನ್ನೂ ಹೇಳಿದನು: 2 “ನನ್ನ ಮಾತುಗಳನ್ನ ನೀನು ಇಸ್ರಾಯೇಲ್ಯರಿಗೆ ಹೇಳು: ‘ಇಸ್ರಾಯೇಲ್ಯರಾಗ್ಲಿ ಅವ್ರ ಮಧ್ಯ ವಾಸ ಮಾಡೋ ವಿದೇಶಿಯರಾಗ್ಲಿ ಯಾವನಾದ್ರೂ ತನ್ನ ಮಕ್ಕಳನ್ನ ಮೋಲೆಕನಿಗೆ ಕೊಟ್ರೆ* ಅವನನ್ನ ಸಾಯಿಸ್ಲೇಬೇಕು.+ ಅಲ್ಲಿನ ಜನ್ರು ಅವನನ್ನ ಕಲ್ಲು ಹೊಡೆದು ಸಾಯಿಸಬೇಕು. 3 ಅವನು ತನ್ನ ಮಕ್ಕಳನ್ನ ಮೋಲೆಕನಿಗೆ ಕೊಟ್ಟು ನನ್ನ ಪವಿತ್ರ ಸ್ಥಳನ, ನನ್ನ ಪವಿತ್ರ ಹೆಸರನ್ನ ಅಪವಿತ್ರ ಮಾಡಿದ್ರಿಂದ ನನಗೆ ಅವನು ಬೇಡ.+ ಅವನನ್ನ ಸಾಯಿಸ್ತೀನಿ. 4 ತನ್ನ ಮಕ್ಕಳನ್ನ ಮೋಲೆಕನಿಗೆ ಕೊಡೋ ವ್ಯಕ್ತಿಯನ್ನ ಜನ ನೋಡಿನೂ ನೋಡದ ಹಾಗೆ ಇದ್ದು ಅವನನ್ನ ಸಾಯಿಸದಿದ್ರೆ+ 5 ನಾನೇ ಅವನನ್ನ, ಅವನ ಕುಟುಂಬವನ್ನ ತಿರಸ್ಕರಿಸ್ತೀನಿ.+ ಅವನನ್ನ ಮಾತ್ರ ಅಲ್ಲ ಅವನ ಜೊತೆ ಸೇರ್ಕೊಂಡು ಮೋಲೆಕನನ್ನ ಆರಾಧಿಸೋ ಎಲ್ರನ್ನ ಸಾಯಿಸ್ತೀನಿ.
6 ಸತ್ತವರನ್ನ ಮಾತಾಡಿಸ್ತೀವಿ ಅಂತ ಹೇಳೋರ+ ಹತ್ರ ಅಥವಾ ಭವಿಷ್ಯ ಹೇಳೋರ+ ಹತ್ರ ಯಾರಾದ್ರೂ ಹೋಗಿ ನನಗೆ ನಂಬಿಕೆ ದ್ರೋಹ ಮಾಡಿದ್ರೆ* ಅವರ ಕೈ ಬಿಟ್ಟುಬಿಡ್ತೀನಿ, ಸಾಯಿಸಿಬಿಡ್ತೀನಿ.+
7 ನಾನು ನಿಮ್ಮ ದೇವರಾದ ಯೆಹೋವ. ನೀವು ಶುದ್ಧರಾಗಿ ಪವಿತ್ರರಾಗಿ ಇರಬೇಕು.+ 8 ನೀವು ನನ್ನ ನಿಯಮಗಳನ್ನ ಮನಸ್ಸಲ್ಲಿ ಇಟ್ಕೊಂಡು ಅದ್ರ ಪ್ರಕಾರ ನಡೀಬೇಕು.+ ನಾನು ನಿಮ್ಮನ್ನ ಪವಿತ್ರ ಜನ್ರಾಗಿ ಮಾಡ್ತಾ ಇದ್ದೀನಿ.+ ನಾನು ಯೆಹೋವ.
9 ಅಪ್ಪಅಮ್ಮಗೆ ಶಾಪ ಹಾಕೋರನ್ನ* ಸಾಯಿಸ್ಲೇಬೇಕು.+ ಅವರು ಶಾಪ ಹಾಕಿರೋದ್ರಿಂದ ಅವರ ಸಾವಿಗೆ ಅವರೇ ಕಾರಣ.
10 ಒಬ್ಬನು ಇನ್ನೊಬ್ಬನ ಹೆಂಡತಿ ಜೊತೆ ವ್ಯಭಿಚಾರ ಮಾಡಿದ್ರೆ ಅವನನ್ನ ಸಾಯಿಸ್ಲೇಬೇಕು. ವ್ಯಭಿಚಾರ ಮಾಡಿದ ಇಬ್ರನ್ನೂ ಸಾಯಿಸಬೇಕು.+ 11 ಒಬ್ಬನು ತಂದೆಯ ಹೆಂಡತಿ ಜೊತೆ ಸಂಬಂಧ ಇಟ್ಕೊಂಡ್ರೆ ಅವನು ತನ್ನ ತಂದೆಗೆ ಅವಮಾನ ಮಾಡಿದ್ದಾನೆ.+ ಪಾಪಮಾಡಿದ ಅವರಿಬ್ರನ್ನೂ ಸಾಯಿಸ್ಲೇಬೇಕು. ಅವ್ರ ಸಾವಿಗೆ ಅವರೇ ಕಾರಣ. 12 ಒಬ್ಬನು ತನ್ನ ಸೊಸೆ ಜೊತೆ ಸಂಬಂಧ ಇಟ್ಕೊಂಡ್ರೆ ಅವರಿಬ್ರನ್ನೂ ಸಾಯಿಸ್ಲೇಬೇಕು. ಅವರು ಮಾಡಿದ್ದು ದೇವರ ನಿಯಮಕ್ಕೆ ವಿರುದ್ಧ. ಅವ್ರ ಸಾವಿಗೆ ಅವರೇ ಕಾರಣ.+
13 ಒಬ್ಬ ಗಂಡಸು ಸ್ತ್ರೀ ಜೊತೆ ಲೈಂಗಿಕ ಸಂಬಂಧ ಇಟ್ಕೊಳ್ಳೋ ತರ ಇನ್ನೊಬ್ಬ ಗಂಡಸಿನ ಜೊತೆ ಇಟ್ಕೊಂಡ್ರೆ* ಅದು ಹೇಸಿಗೆ ಕೆಲಸ.+ ಅವರನ್ನ ಸಾಯಿಸ್ಲೇಬೇಕು. ಅವ್ರ ಸಾವಿಗೆ ಅವರೇ ಕಾರಣ.
14 ಒಬ್ಬನು ಸ್ತ್ರೀಯನ್ನ ಮದುವೆಯಾಗಿ ಅವಳ ಜೊತೆ, ಅವಳ ತಾಯಿ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡ್ರೆ ಅದು ಹೇಸಿಗೆ ಕೆಲಸ.*+ ಆ ಮೂವರನ್ನೂ ಸಾಯಿಸಬೇಕು ಮತ್ತು ಬೆಂಕಿಯಿಂದ ಸುಟ್ಟುಬಿಡಬೇಕು.+ ಯಾಕಂದ್ರೆ ಅಂಥ ಹೇಸಿಗೆ ಕೆಲಸ ನಿಮ್ಮಲ್ಲಿ ಯಾವತ್ತೂ ನಡಿಬಾರದು.
15 ಒಬ್ಬನು ಪ್ರಾಣಿ ಜೊತೆ ಸಂಭೋಗ ಮಾಡಿದ್ರೆ ಅವನನ್ನ ಸಾಯಿಸ್ಲೇಬೇಕು. ಜೊತೆಗೆ ಆ ಪ್ರಾಣಿಯನ್ನೂ ಸಾಯಿಸಬೇಕು.+ 16 ಸ್ತ್ರೀ ಪ್ರಾಣಿ ಜೊತೆ ಸಂಭೋಗ ಮಾಡಿದ್ರೆ+ ಅವಳನ್ನ ಮತ್ತು ಆ ಪ್ರಾಣಿಯನ್ನ ಸಾಯಿಸಬೇಕು. ಅಂಥವರನ್ನ ಸಾಯಿಸಲೇಬೇಕು. ಅವರ ಸಾವಿಗೆ ಅವರೇ ಕಾರಣ.
17 ಒಬ್ಬನು ತನ್ನ ಅಕ್ಕ ಅಥವಾ ತಂಗಿ ಜೊತೆಯಾಗ್ಲಿ ಅಥವಾ ತಂದೆಯ ಮಗಳು, ತಾಯಿಯ ಮಗಳ ಜೊತೆ ಆಗ್ಲಿ ಲೈಂಗಿಕ ಸಂಬಂಧ ಇಟ್ಕೊಂಡ್ರೆ ಅದು ಅವಮಾನ.+ ಅವರಿಬ್ರನ್ನೂ ಜನ್ರ ಕಣ್ಮುಂದೆನೇ ಸಾಯಿಸಬೇಕು. ಯಾಕಂದ್ರೆ ಅದು ತಲೆ ತಗ್ಗಿಸೋ ಕೆಲಸ. ಆ ಪಾಪ ಮಾಡಿದ್ದಕ್ಕೆ ಅವನಿಗೆ ತಕ್ಕ ಶಿಕ್ಷೆ ಆಗಬೇಕು.
18 ಹೆಂಡತಿ ಮುಟ್ಟಾಗಿರೋ ಸಮಯದಲ್ಲಿ ಗಂಡ ಅವಳ ಜೊತೆ ಸಂಭೋಗ ಮಾಡಿದ್ರೆ ಅವಳ ರಕ್ತದ ವಿಷ್ಯದಲ್ಲಿ ಅವನು ಮತ್ತು ಅವಳು ಅಗೌರವ ತೋರಿಸಿದ್ದಾರೆ.+ ಹಾಗಾಗಿ ಅವರಿಬ್ರನ್ನೂ ಸಾಯಿಸಬೇಕು.
19 ನೀವು ನಿಮ್ಮ ತಂದೆ ಅಥವಾ ತಾಯಿಯ ಅಕ್ಕತಂಗಿ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು. ಇಟ್ಕೊಂಡ್ರೆ ಆ ರಕ್ತ ಸಂಬಂಧಿಗೆ ನೀವು ಅವಮಾನ ಮಾಡಿದ ಹಾಗೆ.+ ಆ ಪಾಪಕ್ಕೆ ಅವರಿಗೆ ತಕ್ಕ ಶಿಕ್ಷೆ ಆಗ್ಲೇಬೇಕು. 20 ಒಬ್ಬನು ದೊಡ್ಡಮ್ಮ ಅಥವಾ ಚಿಕ್ಕಮ್ಮನ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡ್ರೆ ಅವನು ದೊಡ್ಡಪ್ಪ ಅಥವಾ ಚಿಕ್ಕಪ್ಪಗೆ ಅವಮಾನ ಮಾಡಿದ ಹಾಗೆ.+ ಆ ಪಾಪಕ್ಕೆ ಅವರಿಗೆ ಶಿಕ್ಷೆ ಆಗಬೇಕು. ಅವರಿಗೆ ಮಕ್ಕಳು ಹುಟ್ಟಬಾರದು, ಹಾಗಾಗಿ ಅವರನ್ನ ಸಾಯಿಸಬೇಕು. 21 ಒಬ್ಬನು ತನ್ನ ಅತ್ತಿಗೆ ಅಥವಾ ನಾದಿನಿ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡ್ರೆ ಅದು ಹೇಸಿಗೆ ಕೆಲಸ.+ ಅವನು ತನ್ನ ಅಣ್ಣತಮ್ಮನ ಅವಮಾನ ಮಾಡಿದ ಹಾಗೆ. ಪಾಪಮಾಡಿದ ಅವರಿಗೆ ಮಕ್ಕಳು ಹುಟ್ಟಬಾರದು, ಹಾಗಾಗಿ ಅವರನ್ನ ಸಾಯಿಸಬೇಕು.
22 ನಾನು ಕೊಟ್ಟ ನಿಯಮಗಳನ್ನ ತೀರ್ಪುಗಳನ್ನ+ ನೀವು ಮನಸ್ಸಲ್ಲಿ ಇಟ್ಕೊಂಡು ಅದ್ರ ಪ್ರಕಾರ ನಡೀಬೇಕು.+ ಆಗ ನಾನು ನಿಮ್ಮನ್ನ ಕರ್ಕೊಂಡು ಹೋಗೋ ದೇಶದಿಂದ ನಿಮ್ಮನ್ನ ಓಡಿಸಿಬಿಡಲ್ಲ.+ 23 ನಾನು ನಿಮ್ಮ ಮುಂದೆ ಯಾವೆಲ್ಲ ಜನಾಂಗಗಳನ್ನ ಓಡಿಸಿಬಿಡ್ತೀನೋ ಆ ಜನ್ರ ಪದ್ಧತಿಗಳನ್ನ ನೀವು ಆಚರಣೆ ಮಾಡಬಾರದು.+ ಆ ಜನ್ರು ಎಲ್ಲ ನಾಚಿಕೆಗೆಟ್ಟ ಕೆಲಸ ಮಾಡಿದ್ರಿಂದ ಅವರು ನನಗೆ ಅಸಹ್ಯ.+ 24 ಅದಕ್ಕೇ “ಹಾಲೂ ಜೇನೂ ಹರಿಯೋ ಆ ದೇಶನ+ ನಿಮಗೆ ಆಸ್ತಿಯಾಗಿ ಕೊಡ್ತೀನಿ. ಆ ದೇಶನ ನೀವು ನಿಮ್ಮದಾಗಿ ಮಾಡ್ಕೊಳ್ತೀರ. ನಿಮ್ಮ ದೇವರಾದ ಯೆಹೋವ ಅನ್ನೋ ನಾನು ಆ ಜನ್ರಿಂದ ನಿಮ್ಮನ್ನ ಬೇರೆ ಮಾಡ್ತೀನಿ”+ ಅಂದೆ. 25 ಯಾವ ಪ್ರಾಣಿ ಶುದ್ಧ ಮತ್ತು ಯಾವುದು ಅಶುದ್ಧ, ಯಾವ ಪಕ್ಷಿ ಶುದ್ಧ ಮತ್ತು ಯಾವುದು ಅಶುದ್ಧ ಅಂತ ನೀವು ತಿಳ್ಕೊಬೇಕು.+ ನಾನು ಅಶುದ್ಧ ಅಂತ ಹೇಳಿರೋ ಪ್ರಾಣಿ, ಪಕ್ಷಿ ಅಥವಾ ನೆಲದ ಮೇಲೆ ಹರಿದಾಡೋ ಜೀವಿಯನ್ನ ತಿಂದು ನಿಮ್ಮ ಮೇಲೆ ನಿಮಗೇ ಅಸಹ್ಯ ಆಗೋ ತರ ಮಾಡ್ಕೊಬೇಡಿ.+ 26 ನೀವು ನನ್ನ ದೃಷ್ಟಿಯಲ್ಲಿ ಪವಿತ್ರರಾಗಿ ಇರಬೇಕು. ಯಾಕಂದ್ರೆ ಯೆಹೋವನಾದ ನಾನು ಪವಿತ್ರನಾಗಿದ್ದೀನಿ+ ಮತ್ತು ನಿಮ್ಮನ್ನ ಎಲ್ಲಾ ಜನ್ರಿಂದ ಬೇರೆ ಮಾಡಿ ನನ್ನ ಜನರನ್ನಾಗಿ ಮಾಡ್ಕೊಂಡಿದ್ದೀನಿ.+
27 ಸತ್ತವರನ್ನ ಮಾತಾಡಿಸ್ತೀವಿ ಅಂತ ಹೇಳೋರನ್ನ, ಭವಿಷ್ಯ* ಹೇಳೋರನ್ನ ಅವರು ಯಾರೇ ಆಗಿರಲಿ ಸಾಯಿಸ್ಲೇಬೇಕು.+ ಜನ್ರು ಅವರನ್ನ ಕಲ್ಲು ಹೊಡೆದು ಸಾಯಿಸಬೇಕು. ಅವರ ಸಾವಿಗೆ ಅವರೇ ಕಾರಣ.’”
21 ಯೆಹೋವ ಮೋಶೆಗೆ ಇದನ್ನೂ ಹೇಳಿದನು “ಪುರೋಹಿತರಿಗೆ ಅಂದ್ರೆ ಆರೋನನ ಮಕ್ಕಳಿಗೆ ಈ ಮಾತುಗಳನ್ನ ಹೇಳು: ‘ಒಬ್ಬ ಪುರೋಹಿತ ತನ್ನ ಜನ್ರಲ್ಲಿ ಯಾರಾದ್ರೂ ತೀರಿಹೋದ್ರೆ ಅವರಿಗೋಸ್ಕರ ತನ್ನನ್ನ ಅಶುದ್ಧ ಮಾಡ್ಕೊಬಾರದು.+ 2 ಆದ್ರೆ ಅವನ ಹತ್ರದ ರಕ್ತ ಸಂಬಂಧಿಕರು ಅಂದ್ರೆ ಅವನ ಅಪ್ಪ, ಅಮ್ಮ, ಮಗ, ಮಗಳು, ಅಣ್ಣ, ತಮ್ಮಂದಿರಲ್ಲಿ ಯಾರಾದ್ರೂ ತೀರಿಹೋದಾಗ ತನ್ನನ್ನ ಅಶುದ್ಧ ಮಾಡ್ಕೊಬಹುದು. 3 ಅಷ್ಟೇ ಅಲ್ಲ ತನ್ನ ಹತ್ರ ಇರೋ ಅಕ್ಕ ಅಥವಾ ತಂಗಿ ಮದುವೆ ಆಗದೆ ತೀರಿಹೋದ್ರೆ ತನ್ನನ್ನ ಅಶುದ್ಧ ಮಾಡ್ಕೊಬಹುದು. 4 ಆದ್ರೆ ಅವನ ಜನ್ರಲ್ಲಿ ಮದುವೆ ಆಗಿರೋ ಒಬ್ಬ ಸ್ತ್ರೀ ತೀರಿಹೋದಾಗ ತನ್ನನ್ನ ಅಶುದ್ಧ ಮಾಡ್ಕೊಂಡು ಅಪವಿತ್ರ ಆಗಬಾರದು. 5 ಯಾರಾದ್ರೂ ತೀರಿಹೋದಾಗ ಪುರೋಹಿತರು ತಮ್ಮ ತಲೆನ ಅಥವಾ ಗಡ್ಡದ ಬದಿಗಳನ್ನ ಬೋಳಿಸ್ಕೊಬಾರದು,+ ದೇಹಕ್ಕೆ ಗಾಯ ಮಾಡ್ಕೊಬಾರದು.+ 6 ಪುರೋಹಿತರು ದೇವರ ಮುಂದೆ ಪವಿತ್ರರಾಗಿ ಇರಬೇಕು.+ ಅವರು ದೇವರ ಆಹಾರನ ಅಂದ್ರೆ ಯೆಹೋವನಿಗೆ ಬೆಂಕಿಯಲ್ಲಿ ಬಲಿ ಕೊಡೋದ್ರಿಂದ ದೇವರ ಹೆಸರನ್ನ ಅಪವಿತ್ರ ಮಾಡಬಾರದು.+ 7 ಪುರೋಹಿತ ದೇವರ ಮುಂದೆ ಪವಿತ್ರನಾಗಿ ಇರೋದ್ರಿಂದ ಅವನು ವೇಶ್ಯೆಯನ್ನಾಗಲಿ,+ ಶೀಲ ಕಳ್ಕೊಂಡಿರೋ ಸ್ತ್ರೀಯನ್ನಾಗಲಿ, ಗಂಡನಿಂದ ವಿಚ್ಛೇದನ ಪಡ್ಕೊಂಡಿರೋ ಸ್ತ್ರೀಯನ್ನಾಗಲಿ+ ಮದುವೆ ಆಗಬಾರದು. 8 ಇಸ್ರಾಯೇಲ್ಯರೇ, ಪುರೋಹಿತ ದೇವರ ಆಹಾರನ ಅಂದ್ರೆ ಬಲಿಗಳನ್ನ ಕೊಡೋದ್ರಿಂದ ನೀವು ಅವನನ್ನ ಪವಿತ್ರವಾಗಿ ನೋಡಬೇಕು.+ ಯೆಹೋವನಾದ ನಾನು ಪವಿತ್ರನಾಗಿದ್ದೀನಿ, ನಿಮ್ಮನ್ನ ಪವಿತ್ರ ಜನರಾಗಿ ಮಾಡಿದ್ದೀನಿ.+ ಹಾಗಾಗಿ ನೀವು ಪುರೋಹಿತನನ್ನ ಪವಿತ್ರವಾಗಿ ನೋಡಬೇಕು.
9 ಪುರೋಹಿತನ ಮಗಳು ವೇಶ್ಯೆಯಾಗಿ ತನ್ನನ್ನ ಅಪವಿತ್ರ ಮಾಡ್ಕೊಂಡ್ರೆ ತನ್ನ ತಂದೆನ ಅಪವಿತ್ರ ಮಾಡ್ತಾಳೆ. ಹಾಗಾಗಿ ಅವಳನ್ನ ಸಾಯಿಸಿ ಬೆಂಕಿಯಿಂದ ಸುಟ್ಟುಬಿಡಬೇಕು.+
10 ಮಹಾ ಪುರೋಹಿತ ತನ್ನ ಜನ್ರಲ್ಲಿ ಯಾರಾದ್ರೂ ತೀರಿಹೋದಾಗ ತನ್ನ ಬಟ್ಟೆ ಹರ್ಕೊಳ್ಳಬಾರದು.+ ಯಾಕಂದ್ರೆ ವಿಶೇಷ ಬಟ್ಟೆನ ಹಾಕೊಳ್ಳೋ+ ನೇಮಕ ಅವನಿಗೆ ಸಿಕ್ಕಿರುತ್ತೆ. ಅವನು ತಲೆಕೂದಲನ್ನ ಬಾಚದೆ ಹಾಗೇ ಬಿಡಬಾರದು. ಯಾಕಂದ್ರೆ ಅವನ ತಲೆ ತೈಲದಿಂದ ಅಭಿಷೇಕ ಆಗಿರುತ್ತೆ.+ 11 ಮಹಾ ಪುರೋಹಿತ ಯಾರ ಶವದ* ಹತ್ರಾನೂ ಹೋಗಬಾರದು.+ ಅಪ್ಪ ಅಥವಾ ಅಮ್ಮ ತೀರಿಹೋದ್ರೂ ತನ್ನನ್ನ ಅಶುದ್ಧ ಮಾಡ್ಕೊಬಾರದು. 12 ದೇವರಿಗೆ ಸಮರ್ಪಿಸ್ಕೊಂಡಿದ್ದಾನೆ ಅನ್ನೋ ಗುರುತಾಗಿ ಅವನ ತಲೆ ಮೇಲೆ ಅಭಿಷೇಕ ತೈಲ ಹಾಕಿರೋದ್ರಿಂದ+ ಅವನು ಆರಾಧನಾ ಸ್ಥಳ ಬಿಟ್ಟು ಹೊರಗೆ ಹೋಗಬಾರದು. ಹಾಗೆ ಹೋಗಿ ದೇವರ ಆರಾಧನಾ ಸ್ಥಳನ ಅಪವಿತ್ರ ಮಾಡಬಾರದು.+ ನಾನು ಯೆಹೋವ.
13 ಅವನು ಕನ್ಯೆಯನ್ನೇ ಮದುವೆ ಆಗಬೇಕು.+ 14 ಅವನು ವಿಧವೆಯನ್ನಾಗಲಿ, ವಿಚ್ಛೇದನ ಪಡಿದಿರೋ ಸ್ತ್ರೀಯನ್ನಾಗಲಿ, ಶೀಲ ಕಳ್ಕೊಂಡಿರೋ ಸ್ತ್ರೀಯನ್ನಾಗಲಿ, ವೇಶ್ಯೆಯನ್ನಾಗಲಿ ಮದುವೆ ಆಗಬಾರದು. ಅವನು ತನ್ನ ಜನ್ರಲ್ಲಿ ಕನ್ಯೆಯನ್ನೇ ಮದುವೆ ಆಗಬೇಕು. 15 ಅವನು ತನ್ನ ಜನ್ರ ಮುಂದೆ ತನ್ನ ವಂಶದವರನ್ನ ಅಪವಿತ್ರ ಮಾಡಬಾರದು.+ ಹಾಗಾಗಿ ನಾನು ಆಜ್ಞೆ ಕೊಟ್ಟ ಹಾಗೇ ಅವನು ಮಾಡಬೇಕು. ನಾನು ಯೆಹೋವ, ಅವನು ನನ್ನ ಸೇವೆಗಂತಾನೇ ಇದ್ದಾನೆ.’”
16 ಯೆಹೋವ ಮೋಶೆಗೆ ಇನ್ನೂ ಹೇಳೋದು ಏನಂದ್ರೆ 17 “ನೀನು ಆರೋನನಿಗೆ ಹೀಗೆ ಹೇಳು: ‘ನಿನ್ನ ವಂಶದವರಲ್ಲಿ ಅಂಗವಿಕಲರು ಇದ್ರೆ ಅವರು ದೇವರಿಗೆ ಆಹಾರನ ಅಂದ್ರೆ ಬಲಿಗಳನ್ನ ಕೊಡಕ್ಕೆ ಹೋಗಬಾರದು. ಈ ನಿಯಮನ ಎಲ್ಲ ಪೀಳಿಗೆಯವರು ಪಾಲಿಸಬೇಕು. 18 ಒಬ್ಬನು ಕುರುಡನಾಗಿದ್ರೆ ಕುಂಟನಾಗಿದ್ರೆ ಮುಖ ವಿಕಾರ ಆಗಿದ್ರೆ ಒಂದು ಕೈ ಅಥವಾ ಕಾಲು ಉದ್ದವಾಗಿದ್ರೆ ಅವನು ತನ್ನ ದೇವರಿಗೆ ಆಹಾರನ ಅಂದ್ರೆ ಬಲಿಗಳನ್ನ ಕೊಡೋಕೆ ಹೋಗಬಾರದು. 19 ಕೈ ಅಥವಾ ಕಾಲಿನ ಮೂಳೆ ಮುರಿದಿದ್ರೆ 20 ಗೂನುಬೆನ್ನಿದ್ರೆ ತುಂಬ ಕುಳ್ಳಗಿದ್ರೆ,* ಕಣ್ಣಿನ ತೊಂದ್ರೆ ಇದ್ರೆ ಇಸಬು ಅಥವಾ ಹುಳಕಡ್ಡಿ ಇದ್ರೆ ಬೀಜಕ್ಕೆ ಹಾನಿಯಾಗಿದ್ರೆ+ ಅಂಥವನು ಕೂಡ ದೇವರಿಗೆ ಆಹಾರನ ಅಂದ್ರೆ ಬಲಿಗಳನ್ನ ಕೊಡೋಕೆ ಹೋಗಬಾರದು. 21 ಪುರೋಹಿತ ಆರೋನನ ವಂಶದವರಲ್ಲಿ ಅಂಗವಿಕಲ ಆದವನು ದೇವರಿಗೆ ಆಹಾರನ ಅಂದ್ರೆ ಯೆಹೋವನಿಗೆ ಬೆಂಕಿಯಲ್ಲಿ ಬಲಿಗಳನ್ನ ಕೊಡೋಕೆ ಹೋಗಬಾರದು. ಅವನು ಅಂಗವಿಕಲ ಆಗಿರೋದ್ರಿಂದ ಆ ಕೆಲಸ ಮಾಡಬಾರದು. 22 ದೇವರ ಆಹಾರನ ಅಂದ್ರೆ ಪವಿತ್ರ ಆಗಿರೋದನ್ನೂ+ ಅತಿ ಪವಿತ್ರ ಆಗಿರೋದನ್ನೂ+ ಅವನು ತಿನ್ನಬಹುದು. 23 ಆದ್ರೆ ಅವನು ಅಂಗವಿಕಲ ಆಗಿರೋದ್ರಿಂದ ಪವಿತ್ರ ಸ್ಥಳದ ಪರದೆ+ ಹತ್ರ ಮತ್ತು ಯಜ್ಞವೇದಿ+ ಹತ್ರ ಬರಬಾರದು. ಅವನು ನನ್ನ ಪವಿತ್ರ ಸ್ಥಳನ+ ಅಪವಿತ್ರ ಮಾಡಬಾರದು. ಯಾಕಂದ್ರೆ ನಾನು ಯೆಹೋವ ಮತ್ತು ನಾನು ಅವುಗಳನ್ನ ನನ್ನ ಸೇವೆಗಾಗಿ ಪವಿತ್ರ ಮಾಡಿದ್ದೀನಿ.’”+
24 ಮೋಶೆ ಈ ಎಲ್ಲ ಮಾತುಗಳನ್ನ ಆರೋನನಿಗೆ, ಅವನ ಮಕ್ಕಳಿಗೆ, ಎಲ್ಲ ಇಸ್ರಾಯೇಲ್ಯರಿಗೆ ಹೇಳಿದ.
22 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ 2 “ಇಸ್ರಾಯೇಲ್ಯರು ನನಗಂತಾನೇ ತಂದ್ಕೊಡೋ ಪವಿತ್ರ ಅರ್ಪಣೆಗಳನ್ನ+ ಆರೋನ ಆಗ್ಲಿ ಅವನ ಮಕ್ಕಳಾಗ್ಲಿ ಅಶುದ್ಧ ಆಗಿರೋವಾಗ ಮುಟ್ಟಿ ನನ್ನ ಪವಿತ್ರ ಹೆಸರನ್ನ ಅಪವಿತ್ರ ಮಾಡಬಾರದು+ ಅಂತ ಅವರಿಗೆ ಹೇಳು. ನಾನು ಯೆಹೋವ. 3 ನೀನು ಆರೋನನಿಗೂ ಅವನ ಮಕ್ಕಳಿಗೂ ಹೀಗೆ ಹೇಳು: ‘ಇಸ್ರಾಯೇಲ್ಯರು ಯೆಹೋವನಿಗೆ ಅಂತಾನೇ ತಂದ್ಕೊಡೋ ಅರ್ಪಣೆಗಳು ಪವಿತ್ರ ಆಗಿವೆ. ಹಾಗಾಗಿ ನಿಮ್ಮ ವಂಶದವರಲ್ಲಿ ಯಾರೂ ತಾವು ಅಶುದ್ಧರಾಗಿ ಇರೋವಾಗ ಅವುಗಳ ಹತ್ರ ಹೋಗಬಾರದು. ಹೋದ್ರೆ ಅವನನ್ನ ಸಾಯಿಸಬೇಕು.+ ಎಲ್ಲ ಪೀಳಿಗೆಯವರು ಈ ನಿಯಮ ಪಾಲಿಸಬೇಕು. ನಾನು ಯೆಹೋವ. 4 ಆರೋನನ ವಂಶದವರಲ್ಲಿ ಯಾರಿಗಾದ್ರೂ ಕುಷ್ಠರೋಗ+ ಇದ್ರೆ, ಸ್ರಾವ ಆಗ್ತಿದ್ರೆ+ ಅವರು ಶುದ್ಧವಾಗೋ ತನಕ+ ಪವಿತ್ರ ಅರ್ಪಣೆಗಳನ್ನ ತಿನ್ನಬಾರದು. ಅಷ್ಟೇ ಅಲ್ಲ ಶವ ಮುಟ್ಟಿ ಅಶುದ್ಧನಾಗಿರೋ ವ್ಯಕ್ತಿಯನ್ನ ಮುಟ್ಟಿದವನಾಗ್ಲಿ,+ ವೀರ್ಯ ಸ್ರಾವದಿಂದ ಅಶುದ್ಧನಾಗಿರೋ ವ್ಯಕ್ತಿಯಾಗ್ಲಿ,+ 5 ಗುಂಪುಗುಂಪಾಗಿರೋ ಅಶುದ್ಧ ಜೀವಿಗಳನ್ನ ಮುಟ್ಟಿದವನಾಗ್ಲಿ+ ಅಥವಾ ಬೇರೆ ಕಾರಣದಿಂದ ಅಶುದ್ಧನಾಗಿರೋ ವ್ಯಕ್ತಿನ ಮುಟ್ಟಿದವನಾಗ್ಲಿ+ ಆ ಪವಿತ್ರ ಅರ್ಪಣೆಗಳನ್ನ ತಿನ್ನಬಾರದು. 6 ಇಂಥ ವ್ಯಕ್ತಿ ಸಂಜೆ ತನಕ ಅಶುದ್ಧನಾಗಿ ಇರ್ತಾನೆ. ಅವನು ಪವಿತ್ರ ಅರ್ಪಣೆಗಳಲ್ಲಿ ಯಾವುದನ್ನೂ ತಿನ್ನಬಾರದು. ಅವನು ಸ್ನಾನ ಮಾಡಿದ ಮೇಲೆ+ ಮತ್ತು 7 ಸೂರ್ಯ ಮುಳುಗಿದ ಮೇಲೆ ಶುದ್ಧ ಆಗ್ತಾನೆ. ಆಮೇಲೆ ಅವನು ಪವಿತ್ರ ಅರ್ಪಣೆಗಳನ್ನ ತಿನ್ನಬಹುದು. ಯಾಕಂದ್ರೆ ಅದು ಅವನ ಆಹಾರ.+ 8 ಸತ್ತ ಪ್ರಾಣಿಯನ್ನ ಅಥವಾ ಕಾಡುಪ್ರಾಣಿ ಕೊಂದುಹಾಕಿದ ಪ್ರಾಣಿನ ಪುರೋಹಿತ ತಿಂದು ಅಶುದ್ಧ ಆಗಬಾರದು.+ ನಾನು ಯೆಹೋವ.
9 ನಾನು ಕೊಟ್ಟಿರೋ ಈ ಆಜ್ಞೆಗಳ ಪ್ರಕಾರ ಪುರೋಹಿತರು ನಡೀಬೇಕು. ಇಲ್ಲದಿದ್ರೆ ಅವರು ಪವಿತ್ರ ಅರ್ಪಣೆಗಳನ್ನ ಅಪವಿತ್ರ ಮಾಡಿ ಪಾಪ ಮಾಡ್ತಾರೆ, ಅದ್ರಿಂದ ಅವರು ಸಾಯಬೇಕಾಗುತ್ತೆ. ನಾನು ಯೆಹೋವ. ನಾನು ಅವರನ್ನ ನನ್ನ ಪವಿತ್ರ ಸೇವೆಗಾಗಿ ಆರಿಸ್ಕೊಂಡಿದ್ದೀನಿ.
10 ಆರೋನನ ಕುಟುಂಬಕ್ಕೆ ಸೇರದ ವ್ಯಕ್ತಿಯಾಗ್ಲಿ ಪುರೋಹಿತನ ಮನೆಗೆ ಅತಿಥಿಯಾಗಿ ಬಂದ ವಿದೇಶಿಯಾಗ್ಲಿ ಪುರೋಹಿತನ ಹತ್ರ ಕೂಲಿ ಕೆಲಸ ಮಾಡೋನಾಗ್ಲಿ ಪವಿತ್ರವಾದ ಯಾವುದನ್ನೂ ತಿನ್ನಬಾರದು.+ 11 ಆದ್ರೆ ಪುರೋಹಿತ ಹಣ ಕೊಟ್ಟು ಖರೀದಿಸಿದ ದಾಸನ ಜೊತೆ, ತನ್ನ ಮನೇಲೇ ಹುಟ್ಟಿದ ದಾಸನ ಜೊತೆ ತನ್ನ ಊಟ ಹಂಚ್ಕೊಳ್ಳಬಹುದು.+ 12 ಪುರೋಹಿತನ ಮಗಳು ಪುರೋಹಿತನಲ್ಲದ ವ್ಯಕ್ತಿಯನ್ನ ಮದುವೆಯಾದ್ರೆ ಕಾಣಿಕೆಯಾಗಿ ಬಂದ ಪವಿತ್ರ ಅರ್ಪಣೆಗಳನ್ನ ಅವಳು ತಿನ್ನಬಾರದು. 13 ಒಂದುವೇಳೆ ಅವಳು ವಿಧವೆಯಾದ್ರೆ ಅವಳಿಗೆ ವಿಚ್ಛೇದನ ಆದ್ರೆ ಅವಳಿಗೆ ಮಕ್ಕಳಿಲ್ಲದಿದ್ರೆ ಅವಳು ತಂದೆ ಮನೇಲಿ ಇದ್ರೆ ತಂದೆಗೆ ಸಿಗೋ ಆಹಾರವನ್ನ ಅವಳೂ ತಿನ್ನಬಹುದು.+ ಆದ್ರೆ ಆರೋನನ ಕುಟುಂಬಕ್ಕೆ ಸೇರದವರು ಪವಿತ್ರ ಅರ್ಪಣೆಗಳನ್ನ ತಿನ್ನಬಾರದು.
14 ಯಾರಾದ್ರೂ ಅಪ್ಪಿತಪ್ಪಿ ಪವಿತ್ರ ಅರ್ಪಣೆಯನ್ನ ತಿಂದ್ರೆ ಅವನು ಅದೇ ತರದ ಅರ್ಪಣೆಯನ್ನ ಪುರೋಹಿತನಿಗೆ ಕೊಡಬೇಕು. ಜೊತೆಗೆ ಅದ್ರ ಐದನೇ ಒಂದು ಭಾಗನೂ ಸೇರಿಸಿ ಕೊಡಬೇಕು.+ 15 ಇಸ್ರಾಯೇಲ್ಯರು ಯೆಹೋವನಿಗೆ ಕಾಣಿಕೆಯಾಗಿ ಕೊಡೋ ಪವಿತ್ರ ಅರ್ಪಣೆಗಳನ್ನ ಪುರೋಹಿತರು ಅಪವಿತ್ರ ಮಾಡಬಾರದು.+ 16 ಒಂದುವೇಳೆ ಪುರೋಹಿತರು ಜನ್ರನ್ನ ಪವಿತ್ರ ಅರ್ಪಣೆ ತಿನ್ನೋಕೆ ಬಿಟ್ರೆ ಆ ಜನ್ರು ಪಾಪಿಗಳಾಗೋಕೆ, ಅದಕ್ಕಾಗಿ ಶಿಕ್ಷೆ ಅನುಭವಿಸೋಕೆ ಪುರೋಹಿತರೇ ಕಾರಣ ಆಗ್ತಾರೆ. ನಾನು ಯೆಹೋವ. ನಾನು ಅವರನ್ನ ನನಗಾಗಿ ಆರಿಸ್ಕೊಂಡಿದ್ದೀನಿ.’”
17 ಯೆಹೋವ ಮೋಶೆಗೆ ಇನ್ನೂ ಹೇಳಿದ್ದೇನಂದ್ರೆ 18 “ನೀನು ಆರೋನನಿಗೂ ಅವನ ಮಕ್ಕಳಿಗೂ ಎಲ್ಲ ಇಸ್ರಾಯೇಲ್ಯರಿಗೂ ಈ ಮಾತು ಹೇಳು: ‘ಇಸ್ರಾಯೇಲ್ಯನಾಗ್ಲಿ ಅವರ ಮಧ್ಯ ಇರೋ ವಿದೇಶಿಯಾಗ್ಲಿ ತನ್ನ ಹರಕೆ ತೀರಿಸೋಕೆ ಅಥವಾ ಸ್ವಇಷ್ಟದಿಂದ ಯೆಹೋವನಿಗೆ ಸರ್ವಾಂಗಹೋಮ ಬಲಿ+ ಕೊಡೋಕೆ ಇಷ್ಟಪಟ್ರೆ+ 19 ಹಸು, ಆಡು-ಕುರಿಗಳಲ್ಲಿ ಯಾವುದೇ ದೋಷ ಇರದ ಒಂದು ಗಂಡನ್ನ ಕೊಡಬೇಕು.+ ಆಗ ದೇವರು ಅವನನ್ನ ಮೆಚ್ಕೊಳ್ತಾನೆ. 20 ದೋಷ ಇರೋ ಯಾವುದನ್ನೂ ನೀವು ಕೊಡಬಾರದು.+ ಒಂದುವೇಳೆ ಕೊಟ್ರೆ ದೇವರು ನಿಮ್ಮನ್ನ ಮೆಚ್ಚಲ್ಲ.
21 ಒಬ್ಬನು ಹರಕೆ ತೀರಿಸೋಕೆ ಅಥವಾ ಸ್ವಇಷ್ಟದಿಂದ ಯೆಹೋವ ದೇವರಿಗೆ ಸಮಾಧಾನ ಬಲಿ ಕೊಡೋಕೆ ಇಷ್ಟಪಟ್ರೆ+ ದೋಷ ಇಲ್ಲದ ಒಂದು ಹಸು ಅಥವಾ ಆಡು ಅಥವಾ ಕುರಿ ಕೊಡಬೇಕು. ಆಗ ದೇವರು ಅವನನ್ನ ಮೆಚ್ಕೊಳ್ತಾನೆ. ಆ ಪ್ರಾಣಿಯಲ್ಲಿ ದೋಷ ಇರಲೇಬಾರದು. 22 ಕುರುಡಾಗಿರೋ, ಮೂಳೆ ಮುರಿದಿರೋ, ಗಾಯ ಆಗಿರೋ, ಚರ್ಮದ ಮೇಲೆ ಗಂಟು ಇರೋ, ಹುಳಕಡ್ಡಿ ಅಥವಾ ಕಜ್ಜಿ ಇರೋ ಯಾವ ಪ್ರಾಣಿಯನ್ನೂ ನೀವು ಯೆಹೋವನಿಗೆ ಕೊಡಬಾರದು ಅಥವಾ ಯಜ್ಞವೇದಿಯ ಮೇಲೆ ಯೆಹೋವನಿಗೆ ಅರ್ಪಿಸಬಾರದು. 23 ಒಂದು ಕಾಲು ಉದ್ದ ಅಥವಾ ಗಿಡ್ಡ ಇರೋ ಹೋರಿನ ಅಥವಾ ಕುರಿನ ಸ್ವಇಷ್ಟದ ಕಾಣಿಕೆಯಾಗಿ ನೀವು ಕೊಡಬಹುದು. ಆದ್ರೆ ಅದನ್ನ ಹರಕೆ ಕಾಣಿಕೆಯಾಗಿ ದೇವರು ಸ್ವೀಕರಿಸಲ್ಲ. 24 ಬೀಜಕ್ಕೆ* ಹಾನಿಯಾಗಿರೋ, ಬೀಜ ಒಡೆದ ಅಥವಾ ಬೀಜ ತೆಗೆದ ಪ್ರಾಣಿನ ನೀವು ಯೆಹೋವನಿಗೆ ಕೊಡಬಾರದು. ಅಂಥ ಪ್ರಾಣಿಗಳನ್ನ ನಿಮ್ಮ ದೇಶದಲ್ಲಿ ಬಲಿಯಾಗಿ ಅರ್ಪಿಸಬಾರದು. 25 ದೋಷ, ಕೊರತೆ ಇರೋ ಪ್ರಾಣಿಗಳನ್ನ ವಿದೇಶಿಯರ ಕೈಯಿಂದ ತಗೊಂಡು ದೇವರಿಗೆ ಅರ್ಪಿಸಬಾರದು. ಅದನ್ನ ದೇವರು ಸ್ವೀಕರಿಸಲ್ಲ.’”
26 ಯೆಹೋವ ಮೋಶೆಗೆ ಇನ್ನೂ ಹೇಳಿದ್ದೇನಂದ್ರೆ 27 “ಕರು ಆಗ್ಲಿ ಕುರಿ ಅಥವಾ ಆಡು ಮರಿ ಆಗ್ಲಿ ಹುಟ್ಟಿದಾಗ ಏಳು ದಿನ ತಾಯಿ ಹತ್ರಾನೇ ಇರಬೇಕು.+ ಎಂಟನೇ ದಿನ ನೀವು ಅದನ್ನ ಯೆಹೋವನಿಗೆ ಬೆಂಕಿಯಲ್ಲಿ ಬಲಿಯಾಗಿ ಅರ್ಪಿಸಬಹುದು. ಅದನ್ನ ದೇವರು ಸ್ವೀಕರಿಸ್ತಾನೆ. 28 ನೀವು ಹಸು ಜೊತೆ ಅದ್ರ ಕರುನ, ಕುರಿ ಅಥವಾ ಆಡಿನ ಜೊತೆ ಅದ್ರ ಮರಿನ ಒಂದೇ ದಿನ ಕಡಿಬಾರದು.+
29 ನೀವು ಯೆಹೋವನಿಗೆ ಕೃತಜ್ಞತಾ ಬಲಿ ಕೊಡೋದಾದ್ರೆ+ ಆತನು ಹೇಳಿದ ತರಾನೇ ಕೊಡಬೇಕು. ಆಗ ದೇವರು ನಿಮ್ಮನ್ನ ಮೆಚ್ಕೊಳ್ತಾನೆ. 30 ನೀವು ಅದ್ರ ಮಾಂಸನ ಅದೇ ದಿನ ತಿನ್ನಬೇಕು. ಅದ್ರಲ್ಲಿ ಸ್ವಲ್ಪಾನೂ ಬೆಳಿಗ್ಗೆ ತನಕ ಇಟ್ಕೊಬಾರದು.+ ನಾನು ಯೆಹೋವ.
31 ನೀವು ನನ್ನ ಆಜ್ಞೆಗಳನ್ನು ಕೇಳಿ ಅದರ ಪ್ರಕಾರ ನಡಿಬೇಕು.+ ನಾನು ಯೆಹೋವ. 32 ನೀವು ನನ್ನ ಪವಿತ್ರ ಹೆಸರನ್ನ ಅಪವಿತ್ರ ಮಾಡಬಾರದು.+ ನೀವು ಇಸ್ರಾಯೇಲ್ಯರ ಮಧ್ಯ ನನ್ನ ಪವಿತ್ರತೆಯನ್ನ ಕಾಪಾಡಬೇಕು.+ ನಾನು ಯೆಹೋವ. ನಿಮ್ಮನ್ನ ನನ್ನ ಜನ್ರಾಗಿ ಆರಿಸ್ಕೊಂಡಿದ್ದೀನಿ.+ 33 ನಾನು ನಿಮ್ಮ ದೇವರು ಅಂತ ತೋರಿಸ್ಕೊಡೋಕೆ ನಿಮ್ಮನ್ನ ಈಜಿಪ್ಟ್ ದೇಶದಿಂದ ಬಿಡಿಸಿ ಕರ್ಕೊಂಡು ಬರ್ತಾ ಇದ್ದೀನಿ.+ ನಾನೇ ಯೆಹೋವ.”
23 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ 2 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನೀವು ವರ್ಷದ ಬೇರೆಬೇರೆ ಸಮಯದಲ್ಲಿ ಹಬ್ಬಗಳನ್ನ ಆಚರಿಸಬೇಕು+ ಅಂತ ಯೆಹೋವ ಹೇಳಿದ್ದಾನೆ.+ ಆ ಹಬ್ಬದ ದಿನಗಳಲ್ಲಿ ನೀವು ದೇವರ ಆರಾಧನೆಗೆ ಸೇರಿಬರಬೇಕು.* ವರ್ಷದ ಬೇರೆಬೇರೆ ಸಮಯದಲ್ಲಿ ಆಚರಿಸಬೇಕಾದ ಹಬ್ಬಗಳು ಯಾವುದಂದ್ರೆ,
3 ಆರು ದಿನ ನೀವು ಕೆಲಸ ಮಾಡಬಹುದು. ಆದ್ರೆ ಏಳನೇ ದಿನ ಪೂರ್ತಿ ವಿಶ್ರಾಂತಿ ಪಡ್ಕೊಬೇಕು.+ ಯಾಕಂದ್ರೆ ಏಳನೇ ದಿನ ಸಬ್ಬತ್ ದಿನ. ಅವತ್ತು ನೀವೆಲ್ರೂ ದೇವರ ಆರಾಧನೆಗೆ ಸೇರಿಬರಬೇಕು, ಯಾವ ಕೆಲಸನೂ ಮಾಡಬಾರದು. ನೀವು ಎಲ್ಲೇ ಇದ್ರೂ ಆ ದಿನ ಯೆಹೋವನಿಗೆ ಗೌರವ ಕೊಡೋಕೆ ಸಬ್ಬತ್ತನ್ನ ಆಚರಿಸಬೇಕು.+
4 ಯೆಹೋವ ಹೇಳಿರೋ ಹಬ್ಬಗಳನ್ನ ಆಚರಿಸಬೇಕು. ಆ ದಿನಗಳಲ್ಲಿ ಆರಾಧನೆಗೆ ಸೇರಿಬರಬೇಕು ಅಂತ ನೀವು ಸರಿಯಾದ ಸಮಯಕ್ಕೆ ಜನ್ರಿಗೆ ಹೇಳಬೇಕು. ಆ ಹಬ್ಬಗಳು ಯಾವುದಂದ್ರೆ, 5 ಮೊದಲನೇ ತಿಂಗಳ 14ನೇ ದಿನ+ ಸೂರ್ಯ ಮುಳುಗಿದ ಮೇಲೆ* ನೀವು ಪಸ್ಕ* ಹಬ್ಬ ಆಚರಿಸಬೇಕು.+ ಯೆಹೋವನಿಗೆ ಗೌರವ ಕೊಡೋಕೆ ಆ ಹಬ್ಬ ಮಾಡಬೇಕು.
6 ಅದೇ ತಿಂಗಳ 15ನೇ ದಿನ ನೀವು ಯೆಹೋವನಿಗೆ ಗೌರವ ಕೊಡೋಕೆ ಹುಳಿ ಇಲ್ಲದ ರೊಟ್ಟಿ ಹಬ್ಬ ಆಚರಿಸಬೇಕು.+ ಏಳು ದಿನ ಆ ಹಬ್ಬ ಮಾಡಬೇಕು. ಆ ದಿನಗಳಲ್ಲಿ ನೀವು ಹುಳಿ ಇಲ್ಲದ ರೊಟ್ಟಿ ತಿನ್ನಬೇಕು.+ 7 ಹಬ್ಬದ ಮೊದಲನೇ ದಿನ ದೇವರ ಆರಾಧನೆಗೆ ಸೇರಿಬರಬೇಕು.+ ಆ ದಿನ ಕಷ್ಟದ ಕೆಲಸ ಮಾಡಬಾರದು. 8 ಆ ಏಳೂ ದಿನ ನೀವು ಯೆಹೋವನಿಗೆ ಬೆಂಕಿಯಲ್ಲಿ ಅರ್ಪಣೆಗಳನ್ನ ಕೊಡಬೇಕು. ಏಳನೇ ದಿನಾನೂ ಸಭೆ ಸೇರಬೇಕು. ಆ ದಿನ ನೀವು ಕಷ್ಟದ ಕೆಲಸ ಮಾಡಬಾರದು.’”
9 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು 10 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನಾನು ನಿಮಗೆ ಕೊಡೋ ದೇಶಕ್ಕೆ ನೀವು ಹೋದ್ಮೇಲೆ ಹೊಲದ ಮೊದಲ ಬೆಳೆನ ಕೊಯ್ದಾಗ ತೆನೆಗಳ ಒಂದು ಕಟ್ಟನ್ನ+ ತಂದು ಪುರೋಹಿತನಿಗೆ ಕೊಡಬೇಕು.+ 11 ಪುರೋಹಿತ ಆ ಕಟ್ಟನ್ನ ಯೆಹೋವ ದೇವರ ಎದುರಲ್ಲಿ ಹಿಂದೆ ಮುಂದೆ ಆಡಿಸಬೇಕು. ನೀವು ದೇವರ ಮೆಚ್ಚುಗೆ ಪಡಿಯೋಕೆ ಹಾಗೆ ಮಾಡಬೇಕು. ಸಬ್ಬತ್ತಿನ ಮಾರನೇ ದಿನ ಪುರೋಹಿತ ಹೀಗೆ ಮಾಡ್ತಾನೆ. 12 ಅದೇ ದಿನ ನೀವು ದೋಷ ಇರದ ಒಂದು ವರ್ಷದ ಒಳಗಿನ ಟಗರನ್ನ ಯೆಹೋವನಿಗೆ ಸರ್ವಾಂಗಹೋಮ ಬಲಿಯಾಗಿ ಕೊಡಬೇಕು. 13 ಜೊತೆಗೆ ಧಾನ್ಯ ಅರ್ಪಣೆಯನ್ನ, ಪಾನ ಅರ್ಪಣೆಯನ್ನ ಕೊಡಬೇಕು. ಧಾನ್ಯ ಅರ್ಪಣೆಗಾಗಿ ಒಂದು ಏಫಾ ಅಳತೆಯ ಹತ್ತರಲ್ಲಿ ಎರಡು ಭಾಗದಷ್ಟು* ನುಣ್ಣಗಿನ ಹಿಟ್ಟನ್ನ ಕೊಡಬೇಕು, ಅದಕ್ಕೆ ಎಣ್ಣೆ ಬೆರೆಸಿ ಕೊಡಬೇಕು. ಆ ಹಿಟ್ಟನ್ನ ಯೆಹೋವನಿಗೆ ಬೆಂಕಿಯಲ್ಲಿ ಅರ್ಪಿಸಬೇಕು. ಇದ್ರಿಂದ ಬರೋ ಸುವಾಸನೆ ಆತನಿಗೆ ಖುಷಿ* ತರುತ್ತೆ. ಪಾನ ಅರ್ಪಣೆಗಾಗಿ ಒಂದು ಹಿನ್* ಅಳತೆಯ ನಾಲ್ಕನೇ ಒಂದು ಭಾಗದಷ್ಟು ದ್ರಾಕ್ಷಾಮದ್ಯವನ್ನ ಕೊಡಬೇಕು. 14 ಆ ಏಳನೇ ದಿನ ನೀವು ದೇವರಿಗೆ ಅರ್ಪಣೆ ಕೊಡೋ ತನಕ ಹೊಸ ಬೆಳೆಯನ್ನ ತಿನ್ನಬಾರದು. ಅದನ್ನ ಸುಟ್ಟು ಅಥವಾ ಅದ್ರಿಂದ ರೊಟ್ಟಿ ಮಾಡಿ ತಿನ್ನಬಾರದು. ನೀವು ಎಲ್ಲೇ ಇದ್ರೂ ಇದು ಶಾಶ್ವತ ನಿಯಮ.
15 ನೀವು ಸಬ್ಬತ್ತಿನ ಮಾರನೇ ದಿನ ಅಂದ್ರೆ ತೆನೆಗಳ ಕಟ್ಟನ್ನ ಓಲಾಡಿಸೋ ಅರ್ಪಣೆಯಾಗಿ ಕೊಡೋ ದಿನ ಏಳು ಸಬ್ಬತ್‌ಗಳನ್ನ ಅಂದ್ರೆ ಏಳು ವಾರಗಳನ್ನ ಲೆಕ್ಕ ಮಾಡಬೇಕು.+ 16 ಏಳನೇ ಸಬ್ಬತ್ತಿನ ಮಾರನೇ ದಿನ ಅಂದ್ರೆ 50ನೇ ದಿನ+ ನೀವು ಇನ್ನೊಂದು ಸಲ ಯೆಹೋವನಿಗೆ ಹೊಸ ಬೆಳೆಯನ್ನ ಅರ್ಪಿಸಬೇಕು.+ 17 ಓಲಾಡಿಸೋ ಅರ್ಪಣೆಗಾಗಿ ಮನೆಯಿಂದ ಎರಡು ರೊಟ್ಟಿ ತರಬೇಕು. ಒಂದು ಏಫಾ ಅಳತೆಯ ಹತ್ತರಲ್ಲಿ ಎರಡು ಭಾಗದಷ್ಟು* ನುಣ್ಣಗಿನ ಹಿಟ್ಟಿಗೆ ಹುಳಿ ಬೆರೆಸಿ, ಸುಟ್ಟು ಆ ಎರಡು ರೊಟ್ಟಿ ಮಾಡಿರಬೇಕು.+ ಅವನ್ನ ಮೊದಲ ಬೆಳೆಯ ಅರ್ಪಣೆಯಾಗಿ ಯೆಹೋವನಿಗೆ ಕೊಡಬೇಕು.+ 18 ಆ ರೊಟ್ಟಿಗಳ ಜೊತೆ ದೋಷ ಇರದ ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನ, ಒಂದು ಎತ್ತನ್ನ ಎರಡು ಟಗರುಗಳನ್ನ ಕೊಡಬೇಕು.+ ಆ ಪ್ರಾಣಿಗಳನ್ನ ಧಾನ್ಯ ಅರ್ಪಣೆ, ಪಾನ ಅರ್ಪಣೆ ಜೊತೆ ಬೆಂಕಿಯಲ್ಲಿ ಸರ್ವಾಂಗಹೋಮ ಬಲಿಯಾಗಿ ಯೆಹೋವನಿಗೆ ಕೊಡಬೇಕು. ಅದ್ರ ಸುವಾಸನೆ ಯೆಹೋವನಿಗೆ ಖುಷಿ* ತರುತ್ತೆ. 19 ಒಂದು ಆಡು ಮರಿಯನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+ ಒಂದು ವರ್ಷದ ಎರಡು ಗಂಡು ಕುರಿಮರಿಗಳನ್ನ ಸಮಾಧಾನ ಬಲಿಯಾಗಿ ಕೊಡಬೇಕು.+ 20 ಪುರೋಹಿತ ಆ ಗಂಡು ಕುರಿಮರಿಗಳನ್ನ ಮತ್ತು ಮೊದಲ ಬೆಳೆಯ ಅರ್ಪಣೆಯಾಗಿ ತಂದು ಕೊಟ್ಟ ರೊಟ್ಟಿಗಳನ್ನ ಓಲಾಡಿಸೋ ಅರ್ಪಣೆಯಾಗಿ ಕೊಡಬೇಕು ಅಂದ್ರೆ ಯೆಹೋವನ ಎದುರಲ್ಲಿ ಹಿಂದೆ ಮುಂದೆ ಆಡಿಸಬೇಕು. ಅದು ಯೆಹೋವನಿಗೆ ಪವಿತ್ರ ಆಗಿರೋದ್ರಿಂದ ಪುರೋಹಿತನಿಗೆ ಸೇರಬೇಕು.+ 21 ಆ ದಿನ ದೇವರ ಆರಾಧನೆಗೆ ಸೇರಿಬರಬೇಕು ಅಂತ ನೀವು ಎಲ್ರಿಗೂ ಹೇಳಬೇಕು.+ ಅವತ್ತು ನೀವು ಕಷ್ಟದ ಕೆಲಸ ಮಾಡಬಾರದು. ನೀವು ಎಲ್ಲೇ ಇದ್ರೂ ಈ ನಿಯಮನ ಶಾಶ್ವತವಾಗಿ ಪಾಲಿಸಬೇಕು.
22 ಬೆಳೆಯನ್ನ ಕೊಯ್ಯೋವಾಗ ನಿಮ್ಮ ಹೊಲದ ಅಂಚಲ್ಲಿರೋ ಬೆಳೆನ ಪೂರ್ತಿಯಾಗಿ ಕೊಯ್ಯಬಾರದು. ಹೊಲದಲ್ಲಿ ನೀವು ಬಿಟ್ಟಿರೋ ತೆನೆಗಳನ್ನ ತಗೊಂಡು ಬರಬಾರದು.+ ಅವನ್ನ ಬಡವರಿಗೆ,*+ ನಿಮ್ಮ ಮಧ್ಯ ವಾಸ ಮಾಡೋ ವಿದೇಶಿಯರಿಗೆ+ ಬಿಟ್ಟುಬಿಡಬೇಕು. ನಾನು ನಿಮ್ಮ ದೇವರಾದ ಯೆಹೋವ.’”
23 ಮೋಶೆಗೆ ಯೆಹೋವ ಇನ್ನೂ ಹೇಳಿದ್ದು ಏನಂದ್ರೆ 24 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನೀವು ಏಳನೇ ತಿಂಗಳಿನ ಮೊದಲನೇ ದಿನ ಪೂರ್ತಿ ವಿಶ್ರಾಂತಿ ಪಡ್ಕೊಳ್ಳಬೇಕು. ಅವತ್ತು ಎಲ್ರೂ ದೇವರ ಆರಾಧನೆಗೆ ಸೇರಿಬರಬೇಕು. ಅದನ್ನ ನಿಮಗೆ ನೆನಪಿಸೋಕೆ ತುತ್ತೂರಿ ಊದಿ ಹೇಳ್ತಾರೆ.+ 25 ಆ ದಿನ ನೀವು ಕಷ್ಟದ ಕೆಲಸ ಮಾಡಬಾರದು. ಅಷ್ಟೇ ಅಲ್ಲ ಯೆಹೋವನಿಗೆ ಬೆಂಕಿಯಲ್ಲಿ ಅರ್ಪಣೆ ಕೊಡಬೇಕು.’”
26 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ 27 “ಏಳನೇ ತಿಂಗಳಿನ ಹತ್ತನೇ ದಿನ ಪ್ರಾಯಶ್ಚಿತ್ತ ದಿನ.+ ಅವತ್ತು ನೀವು ದೇವರ ಆರಾಧನೆಗೆ ಸೇರಿಬರಬೇಕು, ನಿಮ್ಮ ಪಾಪಗಳಿಗಾಗಿ ದುಃಖಪಡಬೇಕು.*+ ಯೆಹೋವನಿಗೆ ಬೆಂಕಿಯಲ್ಲಿ ಅರ್ಪಣೆ ಕೊಡಬೇಕು. 28 ಆ ದಿನ ನೀವು ಕೆಲಸ ಮಾಡಬಾರದು. ಯಾಕಂದ್ರೆ ಅದು ಪ್ರಾಯಶ್ಚಿತ್ತ ದಿನ. ಆ ದಿನ ಪುರೋಹಿತ ನಿಮಗೋಸ್ಕರ ನಿಮ್ಮ ದೇವರಾದ ಯೆಹೋವನ ಮುಂದೆ ಪ್ರಾಯಶ್ಚಿತ್ತ ಮಾಡ್ತಾನೆ.+ 29 ಆ ದಿನ ಯಾರಾದ್ರೂ ತನ್ನ ಪಾಪಕ್ಕಾಗಿ ದುಃಖಪಡದಿದ್ರೆ* ಅವನನ್ನ ಸಾಯಿಸಬೇಕು.+ 30 ಆ ದಿನ ಯಾರಾದ್ರೂ ಏನಾದ್ರೂ ಕೆಲಸ ಮಾಡಿದ್ರೆ ಅವನನ್ನ ನಾಶಮಾಡ್ತೀನಿ. 31 ಆ ದಿನ ನೀವು ಯಾವ ಕೆಲಸನೂ ಮಾಡಬಾರದು. ನೀವು ಎಲ್ಲೇ ಇದ್ರೂ ಇದು ಶಾಶ್ವತ ನಿಯಮ. 32 ಇದು ಸಬ್ಬತ್ ದಿನ ಆಗಿರೋದ್ರಿಂದ ನೀವು ಪೂರ್ತಿ ವಿಶ್ರಾಂತಿ ತಗೊಳ್ಳಬೇಕು. ಆ ತಿಂಗಳ ಒಂಬತ್ತನೇ ದಿನ ಸಂಜೆಯಿಂದ ನಿಮ್ಮ ಪಾಪಗಳಿಗಾಗಿ ದುಃಖಪಡೋಕೆ ಶುರುಮಾಡಬೇಕು.+ ಆ ದಿನ ಸಂಜೆಯಿಂದ ಮಾರನೇ ದಿನ ಸಂಜೆ ತನಕ ಸಬ್ಬತ್ತನ್ನ ಮಾಡಬೇಕು.”
33 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ 34 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು, ‘ಏಳನೇ ತಿಂಗಳಿನ 15ನೇ ದಿನ ನೀವು ಯೆಹೋವನಿಗೆ ಗೌರವ ಕೊಡೋಕೆ ಚಪ್ಪರಗಳ* ಹಬ್ಬ* ಮಾಡಬೇಕು. ಆ ಹಬ್ಬವನ್ನ ಏಳು ದಿನ ಮಾಡಬೇಕು.+ 35 ಹಬ್ಬದ ಮೊದಲ ದಿನ ದೇವರ ಆರಾಧನೆಗೆ ಸೇರಿಬರಬೇಕು. ಅವತ್ತು ಕಷ್ಟದ ಕೆಲಸ ಮಾಡಬಾರದು. 36 ಆ ಏಳೂ ದಿನ ನೀವು ಯೆಹೋವನಿಗೆ ಬೆಂಕಿಯಲ್ಲಿ ಅರ್ಪಣೆ ಕೊಡಬೇಕು. ಎಂಟನೇ ದಿನ ದೇವರ ಆರಾಧನೆಗೆ ಸೇರಿಬರಬೇಕು.+ ಯೆಹೋವನಿಗೆ ಬೆಂಕಿಯಲ್ಲಿ ಅರ್ಪಣೆ ಕೊಡಬೇಕು. ಆ ದಿನ ದೇವರ ಆರಾಧನೆಗೆ ಸೇರಿಬರಬೇಕಾದ ವಿಶೇಷ ದಿನ. ಅವತ್ತು ನೀವು ಕಷ್ಟದ ಕೆಲಸ ಮಾಡಬಾರದು.
37 ವರ್ಷದ ಬೇರೆಬೇರೆ ತಿಂಗಳು ನೀವು ಆಚರಿಸಬೇಕು ಅಂತ ಯೆಹೋವ ಹೇಳಿರೋ ಹಬ್ಬಗಳು ಇವೇ.+ ಆ ದಿನಗಳಲ್ಲಿ ಪವಿತ್ರ ಅಧಿವೇಶನಕ್ಕೆ ಬರಬೇಕು+ ಅಂತ ನೀವು ಜನ್ರಿಗೆ ಹೇಳಬೇಕು. ಆ ದಿನಗಳಲ್ಲಿ ಯೆಹೋವನಿಗೆ ಬೆಂಕಿಯಲ್ಲಿ ಅರ್ಪಿಸಬೇಕಾದ ಬಲಿಗಳು ಯಾವುದಂದ್ರೆ, ಸರ್ವಾಂಗಹೋಮ ಬಲಿ,+ ಧಾನ್ಯ ಅರ್ಪಣೆ,+ ಪಾನ ಅರ್ಪಣೆ.+ ಆಯಾ ದಿನಗಳಲ್ಲಿ ಯಾವ್ಯಾವ ಬಲಿಯನ್ನ ಅರ್ಪಿಸಬೇಕು ಅಂತ ಹೇಳಿದ್ಯೋ ಆ ಬಲಿಗಳನ್ನ ನೀವು ಅರ್ಪಿಸಬೇಕು. 38 ಯೆಹೋವನಿಗೆ ಗೌರವ ಕೊಡೋಕೆ ಆಚರಿಸೋ ಸಬ್ಬತ್‌ಗಳಲ್ಲಿ+ ಕೊಡೋ ಅರ್ಪಣೆ, ನೀವು ಕೊಡೋ ಉಡುಗೊರೆ,+ ಹರಕೆಯ ಕಾಣಿಕೆ,+ ಸ್ವಇಷ್ಟದ ಕಾಣಿಕೆ ಅಷ್ಟೇ ಅಲ್ಲ+ ಹಬ್ಬದ ಸಮಯದಲ್ಲಿ ಯಾವ್ಯಾವ ಬಲಿಗಳನ್ನ ಕೊಡಬೇಕು ಅಂತ ಹೇಳಿದ್ಯೋ ಆ ಬಲಿಗಳನ್ನ ಸಹ ಯೆಹೋವನಿಗೆ ಕೊಡಬೇಕು. 39 ಏಳನೇ ತಿಂಗಳಿನ 15ನೇ ದಿನ ಅಂದ್ರೆ ನೀವು ನಿಮ್ಮ ಹೊಲದ ಬೆಳೆಯನ್ನ ಕೂಡಿಸಿದ ಮೇಲೆ ಏಳು ದಿನಗಳ ತನಕ ಯೆಹೋವ ಹೇಳಿದ ಹಾಗೆ ಹಬ್ಬ ಮಾಡಬೇಕು.+ ಹಬ್ಬದ ಮೊದಲನೇ ದಿನ ಮತ್ತು ಎಂಟನೇ ದಿನ ಪೂರ್ತಿ ವಿಶ್ರಾಂತಿ ತಗೊಳ್ಳಬೇಕು.+ 40 ಮೊದಲನೇ ದಿನ ಒಳ್ಳೇ ಮರದ ಹಣ್ಣುಗಳನ್ನ, ಖರ್ಜೂರ ಮರದ ಗರಿಗಳನ್ನ,+ ತುಂಬ ಎಲೆ ಇರೋ ಮರದಿಂದ ಕೊಂಬೆಗಳನ್ನ, ಕಣಿವೆಯಲ್ಲಿ ಬೆಳಿಯೋ ನೀರವಂಜಿ* ಮರಗಳ ಕೊಂಬೆಗಳನ್ನ ಹಬ್ಬದ ಸಮಯದಲ್ಲಿ ಬಳಸೋಕೆ ತಗೊಂಡು ಬರಬೇಕು. ಏಳು ದಿನ ನಿಮ್ಮ ದೇವರಾದ ಯೆಹೋವನ ಮುಂದೆ ಹಬ್ಬ ಮಾಡ್ತಾ ಖುಷಿಯಾಗಿ ಇರಬೇಕು.+ 41 ನೀವು ವರ್ಷದಲ್ಲಿ ಏಳು ದಿನ ಈ ಹಬ್ಬನ ಯೆಹೋವನಿಗೆ ಗೌರವ ಕೊಡೋಕೆ ಆಚರಿಸಬೇಕು.+ ವರ್ಷದ ಏಳನೇ ತಿಂಗಳಲ್ಲಿ ಇದನ್ನ ಆಚರಿಸಬೇಕು. ಇದು ಶಾಶ್ವತ ನಿಯಮ. 42 ಆ ಏಳು ದಿನ ನೀವು ಚಪ್ಪರಗಳಲ್ಲಿ ಇರಬೇಕು.+ ಎಲ್ಲಾ ಇಸ್ರಾಯೇಲ್ಯರು ಚಪ್ಪರಗಳಲ್ಲೇ ವಾಸಿಸಬೇಕು. 43 ಇದ್ರಿಂದ ನಾನು ಇಸ್ರಾಯೇಲ್ಯರನ್ನ ಈಜಿಪ್ಟ್ ದೇಶದಿಂದ ಕರ್ಕೊಂಡು ಬರ್ತಿದ್ದಾಗ+ ಅವರಿಗೆ ಚಪ್ಪರಗಳಲ್ಲೇ ಇರೋಕೆ ವ್ಯವಸ್ಥೆ ಮಾಡಿದ್ದೆ ಅಂತ ನಿಮ್ಮ ಮುಂದಿನ ಪೀಳಿಗೆಗೆ ಗೊತ್ತಾಗುತ್ತೆ.+ ನಾನು ನಿಮ್ಮ ದೇವರಾದ ಯೆಹೋವ.’”
44 ವರ್ಷದ ಬೇರೆಬೇರೆ ಸಮಯದಲ್ಲಿ ಯಾವ್ಯಾವ ಹಬ್ಬ ಮಾಡಬೇಕು ಅಂತ ಯೆಹೋವ ಹೇಳಿದ್ನೋ ಅದನ್ನೆಲ್ಲ ಮೋಶೆ ಇಸ್ರಾಯೇಲ್ಯರಿಗೆ ಹೇಳಿದನು.
24 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ 2 “ನನ್ನ ಆಲಯದ ದೀಪಗಳು ಯಾವಾಗ್ಲೂ ಉರೀತಾ ಇರೋ ಹಾಗೆ ಶುದ್ಧ ಆಲಿವ್ ಎಣ್ಣೆಯನ್ನ ತಂದು ಕೊಡೋಕೆ ಇಸ್ರಾಯೇಲ್ಯರಿಗೆ ಆಜ್ಞೆ ಕೊಡು.+ 3 ದೇವದರ್ಶನ ಡೇರೆಯಲ್ಲಿ ಸಾಕ್ಷಿ ಮಂಜೂಷದ ಹತ್ರ ಇರೋ ಪರದೆ ಹೊರಗೆ ದೀಪಗಳು ಸಂಜೆಯಿಂದ ಬೆಳಿಗ್ಗೆ ತನಕ ಯೆಹೋವನ ಮುಂದೆ ಉರೀತಾ ಇರೋಕೆ ಆರೋನ ಏರ್ಪಾಡು ಮಾಡಬೇಕು. ಇದು ಶಾಶ್ವತ ನಿಯಮ. ಇದನ್ನ ಎಲ್ಲ ಪೀಳಿಗೆಯವರು ಪಾಲಿಸಬೇಕು. 4 ಯೆಹೋವನ ಮುಂದೆ ಇರೋ ಶುದ್ಧ ಚಿನ್ನದ ದೀಪಸ್ತಂಭದ+ ಮೇಲೆ ದೀಪಗಳು ಯಾವಾಗ್ಲೂ ಜೋಡಿಸಿ ಇಟ್ಟಿರೋ ಹಾಗೆ ಅವನು ನೋಡ್ಕೊಬೇಕು.
5 ನೀನು ನುಣ್ಣಗಿನ ಹಿಟ್ಟನ್ನ ತಗೊಂಡು ಅದ್ರಿಂದ ಬಳೆ ಆಕಾರದ 12 ರೊಟ್ಟಿಗಳನ್ನ ಸುಡಬೇಕು. ಒಂದೊಂದು ರೊಟ್ಟಿನ ಒಂದು ಏಫಾ ಅಳತೆಯ ಹತ್ತರಲ್ಲಿ ಎರಡು ಭಾಗದಷ್ಟು* ಹಿಟ್ಟಿಂದ ಮಾಡಿರಬೇಕು. 6 ಶುದ್ಧ ಚಿನ್ನದಿಂದ ಮಾಡಿದ ಮೇಜಿನ+ ಮೇಲೆ ಯೆಹೋವನ ಮುಂದೆ ಅವನ್ನ ಒಂದ್ರ ಮೇಲೆ ಒಂದ್ರ ತರ ಎರಡು ಸಾಲಾಗಿ ಇಡಬೇಕು. ಒಂದು ಸಾಲಲ್ಲಿ ಆರು ರೊಟ್ಟಿ ಇರಬೇಕು.+ 7 ಎರಡೂ ಸಾಲಿನ ಮೇಲೆ ಶುದ್ಧ ಸಾಂಬ್ರಾಣಿ ಇಡಬೇಕು. ರೊಟ್ಟಿಗಳ ಬದ್ಲು ಆ ಸಾಂಬ್ರಾಣಿನ ಅರ್ಪಿಸಬೇಕು.+ ಇದು ಯೆಹೋವನಿಗೆ ಬೆಂಕಿಯಲ್ಲಿ ಮಾಡೋ ಅರ್ಪಣೆ ಆಗಿದೆ. 8 ಪ್ರತಿ ಸಬ್ಬತ್ ದಿನ ಆ ರೊಟ್ಟಿಗಳನ್ನ ಯೆಹೋವನ ಮುಂದೆ ಜೋಡಿಸಿ ಇಡಬೇಕು.+ ಇದು ನಾನು ಇಸ್ರಾಯೇಲ್ಯರ ಜೊತೆ ಮಾಡ್ಕೊಂಡಿರೋ ಶಾಶ್ವತ ಒಪ್ಪಂದ. 9 ಆ ರೊಟ್ಟಿಗಳು ಆರೋನನಿಗೆ ಅವನ ಮಕ್ಕಳಿಗೆ ಸೇರಿದ್ದು.+ ಆ ರೊಟ್ಟಿಗಳನ್ನ ಯೆಹೋವನಿಗೆ ಬೆಂಕಿಯಲ್ಲಿ ಅರ್ಪಣೆಯಾಗಿ ಕೊಡೋದ್ರಿಂದ ಅವು ಪುರೋಹಿತರಿಗೆ ಪವಿತ್ರವಾಗಿವೆ. ಹಾಗಾಗಿ ಅವರು ಅವುಗಳನ್ನ ಒಂದು ಪವಿತ್ರ ಜಾಗದಲ್ಲಿ* ತಿನ್ನಬೇಕು.+ ಇದು ಶಾಶ್ವತ ನಿಯಮ.”
10 ಒಬ್ಬ ಇಸ್ರಾಯೇಲ್ಯ ಸ್ತ್ರೀಗೆ ಈಜಿಪ್ಟಿನ ಪುರುಷನಿಂದ ಹುಟ್ಟಿದ ಒಬ್ಬ ಮಗನಿದ್ದ.+ ಒಂದಿನ ಪಾಳೆಯದಲ್ಲಿ ಅವನಿಗೂ ಒಬ್ಬ ಇಸ್ರಾಯೇಲ್ಯನಿಗೂ ಜಗಳ ಆಯ್ತು. 11 ಇಸ್ರಾಯೇಲ್ಯ ಸ್ತ್ರೀಗೆ ಈಜಿಪ್ಟಿನ ಪುರುಷನಿಂದ ಹುಟ್ಟಿದ ಆ ಮಗ ದೇವರ ಹೆಸರನ್ನ ಬೈಯೋಕೆ* ಮತ್ತು ಶಪಿಸೋಕೆ* ಶುರುಮಾಡಿದ.+ ಹಾಗಾಗಿ ಜನ್ರು ಅವನನ್ನ ಮೋಶೆ ಹತ್ರ ಕರ್ಕೊಂಡು ಬಂದ್ರು.+ ಅವನ ತಾಯಿ ಹೆಸ್ರು ಶೆಲೋಮೀತ್. ಅವಳು ದಾನ್ ಕುಲದ ದಿಬ್ರೀ ಅನ್ನೋನ ಮಗಳು. 12 ಅವಳ ಮಗನ ಬಗ್ಗೆ ಯೆಹೋವನ ತೀರ್ಪು ಏನಂತ ಗೊತ್ತಾಗೋ ತನಕ ಅವನನ್ನ ಬಂಧಿಸಿಟ್ರು.+
13 ಆಮೇಲೆ ಯೆಹೋವ ಮೋಶೆಗೆ ಹೀಗಂದನು: 14 “ನನ್ನ ಹೆಸರಿಗೆ ಶಾಪ ಹಾಕಿದ ಆ ವ್ಯಕ್ತಿನ ಪಾಳೆಯದ ಹೊರಗೆ ಕರ್ಕೊಂಡು ಬಾ. ಅವನು ಆಡಿದ ಮಾತನ್ನ ಕೇಳಿಸ್ಕೊಂಡವರೆಲ್ಲ ಅವನ ತಲೆ ಮೇಲೆ ಕೈ ಇಡಬೇಕು. ಆಮೇಲೆ ಎಲ್ಲ ಇಸ್ರಾಯೇಲ್ಯರು ಅವನನ್ನ ಕಲ್ಲು ಹೊಡೆದು ಸಾಯಿಸಬೇಕು.+ 15 ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಯಾರಾದ್ರೂ ದೇವರಿಗೆ ಅವಮಾನ ಆಗೋ ತರ ಮಾತಾಡಿದ್ರೆ ಅದು ಪಾಪ. ಹಾಗಾಗಿ ಅವನಿಗೆ ಶಿಕ್ಷೆ ಆಗಬೇಕು. 16 ಯೆಹೋವನ ಹೆಸರಿಗೆ ಗೌರವ ಕೊಡದೆ ಮಾತಾಡಿದ ವ್ಯಕ್ತಿಗೆ ಖಂಡಿತ ಮರಣಶಿಕ್ಷೆ ಆಗಬೇಕು.+ ಎಲ್ಲ ಇಸ್ರಾಯೇಲ್ಯರು ಕಲ್ಲು ಹೊಡೆದು ಅವನನ್ನ ಸಾಯಿಸಬೇಕು. ದೇವರ ಹೆಸರಿಗೆ ಗೌರವ ಕೊಡದೆ ಮಾತಾಡೋನು ಇಸ್ರಾಯೇಲ್ಯನಾಗಿರಲಿ ವಿದೇಶಿಯಾಗಿರಲಿ ಮರಣಶಿಕ್ಷೆ ಆಗಬೇಕು.
17 ಕೊಲೆಗಾರನನ್ನ ಸಾಯಿಸ್ಲೇಬೇಕು.+ 18 ಬೇರೆಯವರ ಸಾಕುಪ್ರಾಣಿನ ಹೊಡೆದು ಕೊಂದ್ರೆ ಕೊಂದವನು ನಷ್ಟಭರ್ತಿ ಮಾಡಬೇಕು. ಅವನು ಪ್ರಾಣಿಗೆ ಬದಲಾಗಿ ಪ್ರಾಣಿನ ಕೊಡಬೇಕು. 19 ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಹಾನಿ ಮಾಡಿದ್ರೆ ಇವನು ಅಷ್ಟೇ ಹಾನಿಯನ್ನ ಅವನಿಗೂ ಮಾಡಬೇಕು.+ 20 ಅವನು ಮೂಳೆ ಮುರಿದ್ರೆ ಇವನೂ ಮೂಳೆಯನ್ನ ಮುರಿಬೇಕು. ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಕೊಡಬೇಕು. ಅವನು ಯಾವ ತರ ಹಾನಿ ಮಾಡಿದ್ದಾನೋ ಅದೇ ತರ ಅವನಿಗೂ ಹಾನಿ ಮಾಡಬೇಕು.+ 21 ಒಬ್ಬನು ಒಂದು ಪ್ರಾಣಿನ ಹೊಡೆದು ಕೊಂದ್ರೆ ಅವನು ನಷ್ಟಭರ್ತಿ ಮಾಡಬೇಕು.+ ಆದ್ರೆ ಅವನು ಒಬ್ಬ ವ್ಯಕ್ತಿನ ಹೊಡೆದು ಕೊಂದ್ರೆ ಅವನನ್ನ ಸಾಯಿಸಬೇಕು.+
22 ಇಸ್ರಾಯೇಲ್ಯನಾಗಿರಲಿ ಅವರ ಮಧ್ಯ ಇರೋ ವಿದೇಶಿಯಾಗಿರಲಿ ಎಲ್ರಿಗೂ ಒಂದೇ ನಿಯಮ,+ ಯಾಕಂದ್ರೆ ನಾನು ನಿಮ್ಮ ದೇವರಾದ ಯೆಹೋವ.’”
23 ಈ ಎಲ್ಲ ಮಾತುಗಳನ್ನ ಮೋಶೆ ಇಸ್ರಾಯೇಲ್ಯರಿಗೆ ಹೇಳಿದ. ದೇವರ ಹೆಸರನ್ನ ಶಪಿಸಿದ ಆ ವ್ಯಕ್ತಿನ ಜನ್ರು ಪಾಳೆಯದ ಹೊರಗೆ ಕರ್ಕೊಂಡು ಬಂದು ಕಲ್ಲು ಹೊಡೆದು ಸಾಯಿಸಿದ್ರು.+ ಹೀಗೆ ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ತರಾನೇ ಇಸ್ರಾಯೇಲ್ಯರು ಮಾಡಿದ್ರು.
25 ಸಿನಾಯಿ ಬೆಟ್ಟದ ಮೇಲೆ ಮೋಶೆ ಜೊತೆ ಯೆಹೋವ ಇನ್ನೂ ಮಾತಾಡ್ತಾ ಹೇಳಿದ್ದು ಏನಂದ್ರೆ 2 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನಾನು ನಿಮಗೆ ಕೊಡೋ ದೇಶಕ್ಕೆ+ ನೀವು ಹೋದ ಮೇಲೆ ಯೆಹೋವ ಆಜ್ಞೆ ಕೊಟ್ಟ ಹಾಗೆ ಸಬ್ಬತ್ ವರ್ಷವನ್ನ ಆಚರಿಸಬೇಕು. ಆ ವರ್ಷ ನೀವು ವ್ಯವಸಾಯ ಮಾಡಬಾರದು.+ 3 ಆರು ವರ್ಷ ಹೊಲದಲ್ಲಿ ಬೀಜ ಬಿತ್ತಿ, ದ್ರಾಕ್ಷಿಬಳ್ಳಿಯ ಕೊಂಬೆಗಳನ್ನ ಕತ್ತರಿಸಿ, ಹೊಲದ ಬೆಳೆನ ಕೂಡಿಸಿ.+ 4 ಆದ್ರೆ ಏಳನೇ ವರ್ಷ ಸಬ್ಬತ್ ವರ್ಷ. ನೀವು ಯೆಹೋವನಿಗೆ ಗೌರವ ಕೊಡೋಕೆ ಆ ಸಬ್ಬತ್ತನ್ನ ಆಚರಿಸಬೇಕು. ಆ ವರ್ಷ ಜಮೀನಿಗೆ ಪೂರ್ತಿ ವಿಶ್ರಾಂತಿ ಕೊಡಬೇಕು. ಬೀಜ ಬಿತ್ತಬಾರದು, ದ್ರಾಕ್ಷಿಬಳ್ಳಿ ಕೊಂಬೆಗಳನ್ನ ಕತ್ತರಿಸಬಾರದು. 5 ಕೊನೇ ಕೊಯ್ಲು ಮಾಡಿದ ಮೇಲೆ ಹೊಲದಲ್ಲಿ ಧಾನ್ಯ ಉಳಿದು ತನ್ನಷ್ಟಕ್ಕೆ ತಾನೇ ಬರೋ ಬೆಳೆನ ಕಟಾವು ಮಾಡಬಾರದು. ಕೊಂಬೆಗಳನ್ನ ಕತ್ತರಿಸದೆ ಹಾಗೇ ಬಿಟ್ಟ ದ್ರಾಕ್ಷಿಬಳ್ಳಿಯಲ್ಲಿ ಬೆಳೆಯೋ ದ್ರಾಕ್ಷಿನ ಕೂಡಿಸಬಾರದು. ಸಬ್ಬತ್ ವರ್ಷದಲ್ಲಿ ಜಮೀನಿಗೆ ಪೂರ್ತಿ ವಿಶ್ರಾಂತಿ ಕೊಡಬೇಕು. 6 ಆದ್ರೆ ಆ ವರ್ಷ ಜಮೀನಲ್ಲಿ ತನ್ನಷ್ಟಕ್ಕೆ ತಾನೇ ಬೆಳೆಯೋದನ್ನ ನಿಮ್ಮ ದಾಸ ದಾಸಿಯರು, ಕೂಲಿ ಕೆಲಸಗಾರರು, ನಿಮ್ಮ ದೇಶದಲ್ಲಿ ಇರೋ ವಿದೇಶಿಯರು ತಗೊಬಹುದು.* 7 ಸಾಕುಪ್ರಾಣಿ, ಕಾಡುಪ್ರಾಣಿಗಳೂ ಅದನ್ನ ತಿನ್ನಬಹುದು. ನಿಮ್ಮ ದೇಶದಲ್ಲಿ ಬೆಳಿಯೋ ಎಲ್ಲವನ್ನ ನೀವು ತಿನ್ನಬಹುದು.
8 ಏಳು ಸಬ್ಬತ್ ವರ್ಷಗಳನ್ನ ಅಂದ್ರೆ ಏಳು ವರ್ಷಗಳನ್ನ ಏಳು ಸಲ ಲೆಕ್ಕಿಸಬೇಕು. ಆಗ ಒಟ್ಟು 49 ವರ್ಷ ಆಗುತ್ತೆ. 9 50ನೇ ವರ್ಷದ ಏಳನೇ ತಿಂಗಳಿನ ಹತ್ತನೇ ದಿನ ಅಂದ್ರೆ ಪ್ರಾಯಶ್ಚಿತ್ತ ದಿನ+ ದೇಶದವರಿಗೆಲ್ಲ ಕೇಳಿಸೋ ಹಾಗೆ ಗಟ್ಟಿಯಾಗಿ ಕೊಂಬು ಊದಬೇಕು. 10 50ನೇ ವರ್ಷವನ್ನ ಪವಿತ್ರ ವರ್ಷ ಅಂತ ಹೇಳಬೇಕು. ದೇಶದವರಿಗೆಲ್ಲ ಬಿಡುಗಡೆಯನ್ನ ಘೋಷಿಸಬೇಕು.+ ಇದು ನಿಮಗೆ ಬಿಡುಗಡೆಯ ವರ್ಷ* ಆಗಿರುತ್ತೆ. ಯಾರಾದ್ರೂ ತಮ್ಮ ಜಮೀನನ್ನ ಮಾರಿದ್ರೆ ಆ ವರ್ಷ ಅವರಿಗೆ ಅದು ವಾಪಸ್ ಸಿಗಬೇಕು. ದಾಸನಾಗಿ ಬಂದಿದ್ದ ವ್ಯಕ್ತಿ ಆ ವರ್ಷ ಅವನ ಮನೆಗೆ ವಾಪಸ್ ಹೋಗಬೇಕು.+ 11 ಆ 50ನೇ ವರ್ಷ ನಿಮಗೆ ಬಿಡುಗಡೆ ವರ್ಷ ಆಗಿರುತ್ತೆ. ಆ ವರ್ಷ ನೀವು ಹೊಲದಲ್ಲಿ ಬೀಜ ಬಿತ್ತಬಾರದು. ಹೊಲದಲ್ಲಿ ಉಳಿದ ಧಾನ್ಯದಿಂದ ತಾನಾಗಿ ಬೆಳೆಯೋ ಬೆಳೆನ ಕಟಾವು ಮಾಡಬಾರದು. ಕೊಂಬೆಗಳನ್ನ ಕತ್ತರಿಸದೆ ಹಾಗೇ ಬಿಟ್ಟ ದ್ರಾಕ್ಷಿಬಳ್ಳಿಯಲ್ಲಿ ಬೆಳೆಯೋ ದ್ರಾಕ್ಷಿನ ಕೂಡಿಸಬಾರದು.+ 12 ಯಾಕಂದ್ರೆ ಅದು ಬಿಡುಗಡೆ ವರ್ಷ. ಅದು ನಿಮಗೆ ಪವಿತ್ರ ಆಗಿರಬೇಕು. ಹೊಲದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನ ಮಾತ್ರ ಆ ವರ್ಷ ನೀವು ಆಹಾರಕ್ಕಾಗಿ ಬಳಸಬಹುದು.*+
13 ಯಾರಾದ್ರೂ ತಮ್ಮ ಜಮೀನನ್ನ ಮಾರಿದ್ರೆ ಬಿಡುಗಡೆ ವರ್ಷದಲ್ಲಿ ಅವ್ರಿಗೆ ವಾಪಸ್ ಸಿಗಬೇಕು.+ 14 ನೀವು ಏನಾದ್ರೂ ಮಾರೋವಾಗ ತಗೊಳ್ಳುವಾಗ ಲಾಭಕ್ಕಾಗಿ ಇನ್ನೊಬ್ರಿಗೆ ಮೋಸ ಮಾಡಬೇಡಿ.+ 15 ನೀವು ಜಮೀನನ್ನ ತಗೊಳ್ಳುವಾಗ ಮುಂದಿನ ಬಿಡುಗಡೆ ವರ್ಷಕ್ಕೆ ಇನ್ನೆಷ್ಟು ವರ್ಷ ಬಾಕಿ ಇದೆ ಅಂತ ನೋಡಬೇಕು. ಜಮೀನನ್ನ ಮಾರೋನು ಬಿಡುಗಡೆ ವರ್ಷಕ್ಕೆ ಮುಂಚೆ ಅದ್ರಿಂದ ಇನ್ನೆಷ್ಟು ಬೆಳೆ ಸಿಗುತ್ತೆ ಅಂತ ಲೆಕ್ಕಹಾಕಿ ಆ ಜಮೀನಿಗೆ ಬೆಲೆ ಹೇಳಬೇಕು.+ 16 ಬಿಡುಗಡೆ ವರ್ಷ ಬರೋದಕ್ಕೆ ಇನ್ನೂ ತುಂಬ ವರ್ಷ ಇರೋದಾದ್ರೆ ಅವನು ಜಮೀನಿಗೆ ಜಾಸ್ತಿ ಬೆಲೆ ಹೇಳಬಹುದು. ಒಂದುವೇಳೆ ಸ್ವಲ್ಪ ವರ್ಷ ಇದ್ರೆ ಕಡಿಮೆ ಬೆಲೆ ಹೇಳಬೇಕು. ಯಾಕಂದ್ರೆ ಅವನು ನಿಮಗೆ ಕೊಡ್ತಾ ಇರೋದು ಆ ಜಮೀನಿನ ಬೆಳೆಗಳನ್ನಷ್ಟೇ. 17 ನಿಮ್ಮಲ್ಲಿ ಯಾರೂ ಸ್ವಂತ ಲಾಭಕ್ಕಾಗಿ ಇನ್ನೊಬ್ಬನಿಗೆ ಮೋಸ ಮಾಡಬಾರದು.+ ನೀವು ದೇವರಿಗೆ ಭಯಪಡಬೇಕು.+ ಯಾಕಂದ್ರೆ ನಾನು ನಿಮ್ಮ ದೇವರಾದ ಯೆಹೋವ.+ 18 ನನ್ನ ನಿಯಮಗಳನ್ನ, ತೀರ್ಪುಗಳನ್ನ ಕೇಳಿ ಅದೇ ತರ ನಡೆದ್ರೆ ನಾನು ನಿಮಗೆ ಕೊಡೋ ದೇಶದಲ್ಲಿ ಸುರಕ್ಷಿತವಾಗಿ ಇರ್ತಿರ.+ 19 ಆ ದೇಶದಲ್ಲಿ ಬೆಳೆನೂ ಚೆನ್ನಾಗಿ ಬರುತ್ತೆ,+ ನಿಮಗೆ ಬೇಕಾದಷ್ಟು ಆಹಾರ ಇರುತ್ತೆ. ನೀವು ಸುರಕ್ಷಿತವಾಗಿ ಇರ್ತಿರ.+
20 ಆದ್ರೆ “ಏಳನೇ ವರ್ಷ ಬೀಜ ಬಿತ್ತದಿದ್ರೆ, ಬೆಳೆ ಕೊಯ್ಯದಿದ್ರೆ ಊಟಕ್ಕೇನು ಮಾಡೋದು?”+ ಅಂತ ನೀವು ಯೋಚಿಸಬಹುದು. 21 ಚಿಂತೆ ಮಾಡಬೇಡಿ. ಆರನೇ ವರ್ಷ ಚೆನ್ನಾಗಿ ಬೆಳೆ ಆಗೋ ತರ ಆಶೀರ್ವಾದ ಮಾಡ್ತೀನಿ. ಆ ಬೆಳೆ ಎಷ್ಟು ಜಾಸ್ತಿ ಇರುತ್ತೆ ಅಂದ್ರೆ ನಿಮಗೆ ಮೂರು ವರ್ಷಕ್ಕೆ ಬೇಕಾಗುವಷ್ಟು ಆಹಾರ ಸಿಗುತ್ತೆ.+ 22 ಎಂಟನೇ ವರ್ಷ ನೀವು ಬೀಜ ಬಿತ್ತಿ ಅದ್ರ ಬೆಳೆ ಕೊಯ್ಯೋ ತನಕ ಅಂದ್ರೆ ಒಂಬತ್ತನೇ ವರ್ಷದ ತನಕ ಆ ಬೆಳೆಯನ್ನೇ ನೀವು ತಿಂತೀರ.
23 ನಿಮ್ಮ ಜಮೀನನ್ನ ಶಾಶ್ವತವಾಗಿ ಮಾರಬಾರದು.+ ಯಾಕಂದ್ರೆ ಆ ಜಮೀನು ನಂದು.+ ನೀವು ನನ್ನ ದೃಷ್ಟಿಯಲ್ಲಿ ವಿದೇಶಿಯರು, ಪ್ರವಾಸಿಗರು ಆಗಿದ್ದೀರ.+ 24 ನೀವು ಆಸ್ತಿಯಾಗಿ ಪಡ್ಕೊಳ್ಳೋ ಆ ದೇಶದಲ್ಲಿ ಜಮೀನನ್ನ ಮಾರಿದ್ರೆ ಅದನ್ನ ವಾಪಸ್ ಪಡ್ಕೊಳ್ಳೋ ಹಕ್ಕು ನಿಮಗಿರುತ್ತೆ.
25 ನಿಮ್ಮ ಒಬ್ಬ ಬಡ ಸಹೋದರ ತನ್ನ ಜಮೀನಲ್ಲಿ ಸ್ವಲ್ಪ ಭಾಗನ ಮಾರಿದ್ರೆ ಅವನ ಹತ್ರದ ಸಂಬಂಧಿಗೆ ಆ ಜಮೀನನ್ನ ಬಿಡಿಸ್ಕೊಳ್ಳೋ ಹಕ್ಕಿದೆ. ಹಾಗಾಗಿ ಅವನು ಬಂದು ಆ ಜಮೀನನ್ನ ಮತ್ತೆ ಖರೀದಿಸಬೇಕು.+ 26 ಆ ಜಮೀನನ್ನ ಮಾರಿದವನಿಗೆ ಅದನ್ನ ಬಿಡಿಸ್ಕೊಳ್ಳೋ ಹಕ್ಕಿರೋ ಹತ್ರದ ಸಂಬಂಧಿ ಇಲ್ಲದಿದ್ರೆ ಮತ್ತು ಮಾರಿದವನೇ ಮುಂದೆ ಅದನ್ನ ಖರೀದಿಸೋ ಪರಿಸ್ಥಿತಿಗೆ ಬಂದ್ರೆ 27 ಅವನೇ ಅದನ್ನ ತಗೋಬಹುದು. ಆಗ ಅವನು ಜಮೀನನ್ನ ಮಾರಿದ ಸಮಯದಿಂದ ಎಷ್ಟು ವರ್ಷ ಫಸಲು ಕೊಯ್ತಿದ್ದಾರೆ ಅಂತ ಲೆಕ್ಕ ಮಾಡಬೇಕು. ಅವನು ಜಮೀನನ್ನ ಎಷ್ಟು ಬೆಲೆಗೆ ಮಾರಿದ್ದನೋ ಅದ್ರಲ್ಲಿ ಆ ಫಸಲಿನ ಬೆಲೆಯನ್ನ ಕಳೆದು ಉಳಿದ ಹಣವನ್ನ ಕೊಟ್ಟು ತನ್ನ ಜಮೀನನ್ನ ವಾಪಸ್ ತಗೋಬೇಕು.+
28 ಅವನಿಗೆ ಜಮೀನನ್ನ ವಾಪಸ್ ತಗೊಳ್ಳೋಕ್ಕೆ ಆಗದಿದ್ರೆ ಆ ಜಮೀನು ಬಿಡುಗಡೆ ವರ್ಷದ ತನಕ ಖರೀದಿಸಿದವನ ಹತ್ರಾನೇ ಇರುತ್ತೆ.+ ಆದ್ರೆ ಮಾರಿದವನಿಗೆ ಆ ಜಮೀನು ಬಿಡುಗಡೆ ವರ್ಷದಲ್ಲಿ ವಾಪಸ್ ಸಿಗುತ್ತೆ. ಅದು ಮತ್ತೆ ಅವನ ಆಸ್ತಿ ಆಗುತ್ತೆ.+
29 ಸುತ್ತ ಗೋಡೆ ಇರೋ ಪಟ್ಟಣದಲ್ಲಿ ಒಬ್ಬ ಮನೆಯನ್ನ ಮಾರಿದ್ರೆ ಅವನಿಗೆ ಅದನ್ನ ವಾಪಸ್ ಖರೀದಿಸೋ ಹಕ್ಕು+ ಒಂದು ವರ್ಷದ ತನಕ ಇರುತ್ತೆ. ಆ ಮನೆಯನ್ನ ಮಾರಿದ ಸಮಯದಿಂದ ಒಂದು ವರ್ಷದ ಒಳಗೆ ಅವನು ಅದನ್ನ ವಾಪಸ್ ಖರೀದಿಸಬೇಕು. 30 ಒಂದು ವರ್ಷದೊಳಗೆ ಖರೀದಿಸದಿದ್ರೆ ಸುತ್ತ ಗೋಡೆ ಇರೋ ಪಟ್ಟಣದ ಆ ಮನೆ ಖರೀದಿಸಿದವನಿಗೇ ಸೇರುತ್ತೆ. ಅವನ ನಂತ್ರ ಅವನ ವಂಶದವರಿಗೆ ಸೇರುತ್ತೆ. ಬಿಡುಗಡೆ ವರ್ಷದಲ್ಲಿ ಆ ಮನೆಯನ್ನ ಅವರು ವಾಪಸ್ ಕೊಡಬಾರದು. 31 ಆದ್ರೆ ಸುತ್ತ ಗೋಡೆ ಇಲ್ಲದಿರೋ ಪಟ್ಟಣದ ಮನೆಯನ್ನ ಒಬ್ಬನು ಮಾರಿದ್ರೆ ಅದನ್ನ ವಾಪಸ್ ಖರೀದಿಸೋ ಹಕ್ಕು ಅವನಿಗೆ ಯಾವಾಗ್ಲೂ ಇರುತ್ತೆ. ಯಾಕಂದ್ರೆ ಅಂಥ ಮನೆ ಹಳ್ಳಿ ಪ್ರದೇಶದಲ್ಲಿರೋ ಹೊಲದ ಭಾಗ ಆಗಿದೆ. ಆ ಮನೆನ ಖರೀದಿಸಿದವನು ಬಿಡುಗಡೆ ವರ್ಷದಲ್ಲಿ ಅದನ್ನ ವಾಪಸ್ ಕೊಡಬೇಕು.
32 ಲೇವಿಯರು ತಮ್ಮ ಪಟ್ಟಣದಲ್ಲಿರೋ+ ಮನೆಗಳನ್ನ ಮಾರಿದ್ರೆ ಅವುಗಳನ್ನ ವಾಪಸ್ ಖರೀದಿಸೋ ಹಕ್ಕು ಅವರಿಗೆ ಯಾವಾಗ್ಲೂ ಇರುತ್ತೆ. 33 ಲೇವಿಯರಲ್ಲಿ ಒಬ್ಬ ತನ್ನ ಮನೆನ ವಾಪಸ್ ತಗೊಳ್ಳದಿದ್ರೆ ಆ ಮನೆ ತಗೊಂಡವನು ಬಿಡುಗಡೆ ವರ್ಷ ಅದನ್ನ ವಾಪಸ್ ಕೊಡಬೇಕು.+ ಯಾಕಂದ್ರೆ ಇಸ್ರಾಯೇಲ್ಯರ ದೇಶದಲ್ಲಿ ಲೇವಿಯರ ಪಟ್ಟಣದಲ್ಲಿರೋ ಮನೆಗಳು ಲೇವಿಯರ ಆಸ್ತಿ.+ 34 ಆದ್ರೆ ಅವರು ಪಟ್ಟಣಗಳ ಸುತ್ತ ಇರೋ ಹುಲ್ಲುಗಾವಲಿನ ಪ್ರದೇಶವನ್ನ+ ಮಾರಬಾರದು. ಯಾಕಂದ್ರೆ ಅದು ಅವರ ಶಾಶ್ವತ ಆಸ್ತಿ.
35 ನಿಮ್ಮ ಅಕ್ಕಪಕ್ಕದಲ್ಲಿ ಇರೋ ಒಬ್ಬ ಬಡ ಇಸ್ರಾಯೇಲ್ಯ ಸಹೋದರ ಹೊಟ್ಟೆಬಟ್ಟೆಗೆ ಏನೂ ಇಲ್ಲದ ಸ್ಥಿತಿಗೆ ಬಂದ್ರೆ ನಿಮ್ಮ ಮಧ್ಯ ವಾಸಿಸೋ ವಿದೇಶಿಯರಿಗೆ, ಪ್ರವಾಸಿಗರಿಗೆ ಸಹಾಯ ಮಾಡೋ ತರ ಅವನಿಗೂ ಸಹಾಯ ಮಾಡಬೇಕು.+ ಆಗ ಅವನು ಬದುಕಿ ಉಳಿತಾನೆ. 36 ನೀವು ಅವನಿಂದ ಬಡ್ಡಿ ತಗೊಳ್ಳಬಾರದು, ಅವನಿಂದ ಲಾಭ* ಪಡಿಯೋಕೆ ಪ್ರಯತ್ನಿಸಬಾರದು.+ ನೀವು ದೇವರಿಗೆ ಭಯಪಡಬೇಕು.+ ಹೀಗೆ ಮಾಡಿದ್ರೆ ಆ ನಿಮ್ಮ ಸಹೋದರ ಬದುಕಿ ಉಳಿತಾನೆ. 37 ನೀವು ಅವನಿಗೆ ಕೊಟ್ಟ ಸಾಲಕ್ಕೆ ಬಡ್ಡಿ ಕೇಳಬಾರದು.+ ಅವನಿಗೆ ಊಟ ಕೊಟ್ರೆ ಅದ್ರಿಂದ ಲಾಭ ಪಡೀಬಾರದು. 38 ನಾನು ನಿಮ್ಮ ದೇವರಾದ ಯೆಹೋವ. ನಿಮಗೆ ಕಾನಾನ್ ದೇಶ ಕೊಡೋಕೆ, ನಾನು ನಿಮ್ಮ ದೇವರು ಅಂತ ತೋರಿಸೋಕೆ+ ನಿಮ್ಮನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬಂದ+ ದೇವರು ನಾನೇ.
39 ಅಕ್ಕಪಕ್ಕ ವಾಸಿಸೋ ಇಸ್ರಾಯೇಲ್ಯ ಸಹೋದರರಲ್ಲಿ ಒಬ್ಬ ಬಡವನಾಗಿ ತನ್ನನ್ನೇ ನಿಮಗೆ ಮಾರಿಕೊಂಡ್ರೆ+ ಅವನನ್ನ ಗುಲಾಮನ ತರ ದುಡಿಸ್ಕೊಳ್ಳಬಾರದು.+ 40 ಅವನು ನಿಮ್ಮ ಹತ್ರ ಕೂಲಿ ಕೆಲಸಗಾರ+ ಅಥವಾ ಪ್ರವಾಸಿಗನ ತರ ಇರಬೇಕು. ಬಿಡುಗಡೆ ವರ್ಷದ ತನಕ ಅವನು ನಿಮ್ಮ ಹತ್ರ ಕೆಲಸ ಮಾಡಬೇಕು. 41 ಆಮೇಲೆ ಅವನು ತನ್ನ ಮಕ್ಕಳನ್ನ ಕರ್ಕೊಂಡು ಅವನ ಸಂಬಂಧಿಕರ ಹತ್ರ ವಾಪಸ್ ಹೋಗಬೇಕು. ಅವನ ಪೂರ್ವಜರ ಆಸ್ತಿ ಅವನಿಗೆ ವಾಪಸ್ ಸಿಗಬೇಕು.+ 42 ಇಸ್ರಾಯೇಲ್ಯರು ನನ್ನ ದಾಸರು. ನಾನು ಅವರನ್ನ ಈಜಿಪ್ಟಿಂದ ಕರ್ಕೊಂಡು ಬಂದಿದ್ದೀನಿ.+ ಹಾಗಾಗಿ ಅವರು ತಮ್ಮನ್ನ ಬೇರೆಯವರಿಗೆ ದಾಸರಾಗಿ ಮಾರಿಕೊಳ್ಳಬಾರದು. 43 ಆ ನಿಮ್ಮ ಸಹೋದರನ ಜೊತೆ ಕ್ರೂರವಾಗಿ ನಡ್ಕೊಬಾರದು,+ ದೇವರಿಗೆ ಭಯಪಡಬೇಕು.+ 44 ನಿಮ್ಮ ಸುತ್ತಮುತ್ತ ಇರೋ ದೇಶಗಳ ಜನ್ರು ಮಾತ್ರ ನಿಮಗೆ ಗುಲಾಮರಾಗಿ ಇರಬೇಕು. ಅವರನ್ನ ಗುಲಾಮರಾಗಿ ಖರೀದಿ ಮಾಡ್ಕೊಬಹುದು. 45 ನಿಮ್ಮ ಮಧ್ಯ ಇರೋ ವಿದೇಶಿಯರನ್ನ,+ ನಿಮ್ಮ ದೇಶದಲ್ಲಿ ಅವರಿಗೆ ಹುಟ್ಟಿದ ಮಕ್ಕಳನ್ನ ಗುಲಾಮರಾಗಿ ಖರೀದಿ ಮಾಡ್ಕೊಬಹುದು. ಅವರು ನಿಮ್ಮ ಆಸ್ತಿ ಆಗ್ತಾರೆ. 46 ನೀವು ಸತ್ತಮೇಲೆ ಆ ಗುಲಾಮರು ನಿಮ್ಮ ಮಕ್ಕಳ ಆಸ್ತಿ ಆಗಬಹುದು. ಅವರು ಶಾಶ್ವತವಾಗಿ ನಿಮ್ಮ ಹತ್ರ ದಾಸರಾಗಿ ಇರಬಹುದು. ಆದ್ರೆ ನಿಮ್ಮ ಇಸ್ರಾಯೇಲ್ಯ ಸಹೋದರರ ಜೊತೆ ನೀವು ಕ್ರೂರವಾಗಿ ನಡ್ಕೊಬಾರದು.+
47 ನಿಮ್ಮ ಮಧ್ಯ ಇರೋ ವಿದೇಶಿ ಅಥವಾ ಪ್ರವಾಸಿಗ ಶ್ರೀಮಂತನಾದ್ರೆ ಮತ್ತು ಅವನ ಅಕ್ಕಪಕ್ಕ ಇರೋ ನಿಮ್ಮ ಇಸ್ರಾಯೇಲ್ಯ ಸಹೋದರ ಬಡವನಾಗಿ ತನ್ನನ್ನ ಆ ವಿದೇಶಿಗೋ ಅವನ ಕುಟುಂಬದಲ್ಲಿ ಒಬ್ಬನಿಗೋ ಅಥವಾ ಪ್ರವಾಸಿಗನಿಗೋ ಮಾರಿಕೊಂಡ್ರೆ 48 ಅವನನ್ನ ಬಿಡಿಸ್ಕೊಳ್ಳೋ ಹಕ್ಕು ಅವನಿಗೆ ಯಾವಾಗ್ಲೂ ಇರುತ್ತೆ. ಅವನ ಅಣ್ಣ ಅಥವಾ ತಮ್ಮ ಅವನನ್ನ ವಾಪಸ್ ಖರೀದಿಸಬಹುದು.+ 49 ಅವನ ದೊಡ್ಡಪ್ಪ, ಚಿಕ್ಕಪ್ಪನಿಗೆ ಅಥವಾ ಅವರ ಮಕ್ಕಳಿಗೆ ಅಥವಾ ಅವನ ಹತ್ರದ ಸಂಬಂಧಿಕರಿಗೆ* ಅವನನ್ನ ವಾಪಸ್ ಖರೀದಿಸೋ ಹಕ್ಕಿದೆ.
ತನ್ನನ್ನು ಮಾರಿಕೊಂಡವನ ಪರಿಸ್ಥಿತಿ ಮುಂದೆ ಚೆನ್ನಾಗಾದ್ರೆ ಅವನೇ ತನ್ನನ್ನ ಬಿಡಿಸ್ಕೊಬಹುದು.+ 50 ಅವನು ತನ್ನನ್ನ ಮಾರಿಕೊಂಡ ವರ್ಷದಿಂದ ಬಿಡುಗಡೆ ವರ್ಷದ+ ತನಕ ಎಷ್ಟು ವರ್ಷ ಆಗುತ್ತೆ ಅಂತ ತನ್ನನ್ನ ಖರೀದಿಸಿದವನ ಜೊತೆ ಸೇರಿ ಲೆಕ್ಕ ಮಾಡಬೇಕು. ಅವನು ತನ್ನನ್ನ ಮಾರಿಕೊಂಡಿರೋ ಬೆಲೆ ಆ ವರ್ಷಗಳಲ್ಲಿ ಅವನಿಗೆ ಸಿಗೋ ಕೂಲಿಗೆ ಸಮ.+ ಆ ಎಲ್ಲ ಸಮಯದಲ್ಲಿ ಅವನು ಮಾಡೋ ಕೆಲಸ ಕೂಲಿ ಕೆಲಸದವನ ತರ ಇರುತ್ತೆ.+ 51 ಅವನು ತನ್ನನ್ನ ಬಿಡಿಸ್ಕೊಳ್ಳುವಾಗ ಬಿಡುಗಡೆ ವರ್ಷಕ್ಕೆ ಇನ್ನೂ ಎಷ್ಟು ವರ್ಷ ಇದೆ ಅಂತ ಲೆಕ್ಕ ಮಾಡಬೇಕು. ತುಂಬ ವರ್ಷ ಇರೋದಾದ್ರೆ ಅವನು ಆ ವರ್ಷಗಳ ಹಣವನ್ನ ವಾಪಸ್ ಕೊಟ್ಟು ತನ್ನನ್ನ ಬಿಡಿಸ್ಕೊಬೇಕು. 52 ಸ್ವಲ್ಪ ವರ್ಷಾನೇ ಇರೋದಾದ್ರೆ ಆ ಸ್ವಲ್ಪ ವರ್ಷಗಳ ಹಣನ ವಾಪಸ್ ಕೊಟ್ಟು ಅವನು ತನ್ನನ್ನ ಬಿಡಿಸ್ಕೊಬೇಕು. 53 ಅವನು ತನ್ನನ್ನ ಖರೀದಿಸಿದವನ ಹತ್ರ ಇರೋಷ್ಟು ಕಾಲ ಕೂಲಿಯವನ ತರ ಕೆಲಸ ಮಾಡಬೇಕು. ಆದ್ರೆ ಯಜಮಾನ ಅವನ ಜೊತೆ ಕ್ರೂರವಾಗಿ ನಡ್ಕೊಳ್ಳದ ಹಾಗೆ ನೀವು ನೋಡ್ಕೊಬೇಕು.+ 54 ಒಂದುವೇಳೆ ಒಬ್ಬ ಇಸ್ರಾಯೇಲ್ಯ ವ್ಯಕ್ತಿಗೆ ಹೀಗೆ ತನ್ನನ್ನ ಬಿಡಿಸ್ಕೊಳ್ಳೋಕೆ ಆಗದಿದ್ರೆ ಬಿಡುಗಡೆ ವರ್ಷದಲ್ಲಿ+ ಅವನಿಗೆ ಅವನ ಮಕ್ಕಳಿಗೆ ಬಿಡುಗಡೆ ಆಗಬೇಕು.
55 ಯಾಕಂದ್ರೆ ಇಸ್ರಾಯೇಲ್ಯರು ನನ್ನ ದಾಸರು, ಈಜಿಪ್ಟ್ ದೇಶದಿಂದ ನಾನು ಬಿಡಿಸ್ಕೊಂಡು ಬಂದ ನನ್ನ ದಾಸರು.+ ನಾನು ನಿಮ್ಮ ದೇವರಾದ ಯೆಹೋವ.
26 “‘ಪ್ರಯೋಜನಕ್ಕೇ ಬರದ ದೇವರುಗಳನ್ನ ನೀವು ಮಾಡ್ಕೊಬಾರದು.+ ಕೆತ್ತಿದ ಮೂರ್ತಿಗಳನ್ನ+ ಅಥವಾ ವಿಗ್ರಹಸ್ತಂಭಗಳನ್ನ ಮಾಡ್ಕೊಂಡು ಪೂಜಿಸಬಾರದು. ಕಲ್ಲಿನ ಮೂರ್ತಿಗಳನ್ನ+ ಮಾಡಿ ಅವುಗಳಿಗೆ ಅಡ್ಡಬೀಳಬಾರದು.+ ಯಾಕಂದ್ರೆ ನಾನು ನಿಮ್ಮ ದೇವರಾದ ಯೆಹೋವ. 2 ನಾನು ಆಜ್ಞೆ ಕೊಟ್ಟ ಹಾಗೇ ನೀವು ಸಬ್ಬತ್ ಆಚರಿಸಬೇಕು. ನನ್ನ ಆರಾಧನಾ ಸ್ಥಳನ ತುಂಬ ಗೌರವದಿಂದ* ನೋಡಬೇಕು. ನಾನು ಯೆಹೋವ.
3 “‘ನೀವು ಯಾವಾಗ್ಲೂ ನನ್ನ ನಿಯಮಗಳನ್ನ, ಆಜ್ಞೆಗಳನ್ನ ಕೇಳಿ ಅದ್ರ ಪ್ರಕಾರ ನಡಿದ್ರೆ+ 4 ಕಾಲ ಕಾಲಕ್ಕೆ ಸರಿಯಾಗಿ ಮಳೆ ಬರೋ ತರ ಮಾಡ್ತೀನಿ.+ ನಿಮ್ಮ ಜಮೀನಲ್ಲಿ ಚೆನ್ನಾಗಿ ಬೆಳೆಯಾಗೋ+ ತರ, ಮರಗಳು ಜಾಸ್ತಿ ಹಣ್ಣು ಕೊಡೋ ತರ ಮಾಡ್ತೀನಿ. 5 ನಿಮಗೆ ಫಸಲು ಎಷ್ಟು ಸಮೃದ್ಧವಾಗಿ ಸಿಗುತ್ತೆ ಅಂದ್ರೆ ದ್ರಾಕ್ಷಿ ಕೊಯ್ಯೋ ಕಾಲ ಬಂದ್ರೂ ನೀವಿನ್ನೂ ಕಣದಲ್ಲಿ ಧಾನ್ಯವನ್ನ ತುಂಬ್ತಾ ಇರ್ತಿರ. ದ್ರಾಕ್ಷಿ ಬೆಳೆ ಎಷ್ಟು ಜಾಸ್ತಿ ಇರುತ್ತೆ ಅಂದ್ರೆ ಬಿತ್ತೋ ಸಮಯ ಬಂದ್ರೂ ನೀವಿನ್ನೂ ದ್ರಾಕ್ಷಿನ ಕೊಯ್ತಾ ಇರ್ತಿರ. ನಿಮಗೆ ಊಟಕ್ಕೇನೂ ಕೊರತೆ ಇರಲ್ಲ. ನೀವು ದೇಶದಲ್ಲಿ ಸುರಕ್ಷಿತವಾಗಿ ಇರ್ತಿರ.+ 6 ನಿಮ್ಮ ದೇಶದಲ್ಲಿ ಶಾಂತಿ ಇರೋ ತರ ಮಾಡ್ತೀನಿ.+ ನಿಮಗೆ ಯಾರ ಭಯನೂ ಇಲ್ಲದೆ ಸುಖವಾಗಿ ನಿದ್ದೆ ಮಾಡ್ತೀರ.+ ನಿಮ್ಮ ದೇಶದೊಳಗೆ ಕ್ರೂರ ಪ್ರಾಣಿಗಳು ಬರದೇ ಇರೋ ತರ ಮಾಡ್ತೀನಿ. ಯಾರೂ ನಿಮ್ಮ ವಿರುದ್ಧ ಯುದ್ಧಕ್ಕೆ ಬರಲ್ಲ. 7 ನೀವು ಶತ್ರುಗಳನ್ನ ಸೋಲಿಸಿ ಅಟ್ಟಿಸ್ಕೊಂಡು ಹೋಗ್ತೀರ, ಅವ್ರನ್ನ ಕತ್ತಿಯಿಂದ ಸಾಯಿಸ್ತೀರ. 8 ನಿಮ್ಮಲ್ಲಿ ಐದು ಜನ 100 ಶತ್ರುಗಳನ್ನ, 100 ಜನ 10,000 ಶತ್ರುಗಳನ್ನ ಅಟ್ಟಿಸ್ಕೊಂಡು ಹೋಗ್ತೀರ. ನಿಮ್ಮ ಶತ್ರುಗಳನ್ನ ಕತ್ತಿಯಿಂದ ಸಾಯಿಸ್ತೀರ.+
9 “‘ನಾನು ನಿಮ್ಮನ್ನ ಆಶೀರ್ವದಿಸ್ತೀನಿ. ನಿಮಗೆ ಮಕ್ಕಳು ಹುಟ್ಟಿ ನಿಮ್ಮ ವಂಶ ದೊಡ್ಡದಾಗೋ ತರ ಮಾಡ್ತೀನಿ.+ ನಾನು ನಿಮ್ಮ ಜೊತೆ ಮಾಡ್ಕೊಂಡಿರೋ ಒಪ್ಪಂದದ ಪ್ರಕಾರ ನಡಿತೀನಿ.+ 10 ನಿಮ್ಮ ಹೊಲದಲ್ಲಿ ಹೊಸ ಬೆಳೆ ಬಂದಿದ್ರೂ ನಿಮ್ಮ ಹಿಂದಿನ ವರ್ಷದ ಬೆಳೆ ಮುಗಿದಿರಲ್ಲ. ಆ ಹೊಸ ಬೆಳೆನ ಕೂಡಿಸಿ ಇಡೋಕೆ ಹಿಂದಿನ ವರ್ಷದ ಬೆಳೆನ ಖಾಲಿ ಮಾಡಬೇಕಾಗುತ್ತೆ. 11 ನನ್ನ ಪವಿತ್ರ ಡೇರೆನ ನಿಮ್ಮ ಮಧ್ಯ ಇಡ್ತೀನಿ.+ ನಾನು ನಿಮ್ಮ ಕೈಬಿಡಲ್ಲ. 12 ನಾನು ನಿಮ್ಮ ಮಧ್ಯ ನಡೆದಾಡ್ತೀನಿ. ನಾನು ನಿಮ್ಮ ದೇವರಾಗಿ ಇರ್ತಿನಿ.+ ನೀವು ನನ್ನ ಜನರಾಗಿ ಇರ್ತಿರ.+ 13 ನಾನು ನಿಮ್ಮ ದೇವರಾದ ಯೆಹೋವ. ನೀವು ಇನ್ಮುಂದೆ ಈಜಿಪ್ಟಿನವರಿಗೆ ಗುಲಾಮರಾಗಿ ಇರಬಾರದು ಅಂತ ಆ ದೇಶದಿಂದ ನಿಮ್ಮನ್ನ ಕರ್ಕೊಂಡು ಬಂದೆ. ಅವರು ನಿಮ್ಮ ಹೆಗಲ ಮೇಲೆ ಹಾಕಿರೋ ನೊಗನ ಮುರಿದು ನೀವು ತಲೆಯೆತ್ತಿ ನಡಿಯೋ ತರ ಮಾಡ್ದೆ.
14 “‘ಆದ್ರೆ ನೀವು ನನ್ನ ಮಾತನ್ನ ಕೇಳದಿದ್ರೆ, ನಾನು ಕೊಡೋ ಆಜ್ಞೆಗಳ ಪ್ರಕಾರ ನಡೀದೆ ಇದ್ರೆ,+ 15 ನನ್ನ ನಿಯಮಗಳನ್ನ ಮೀರಿದ್ರೆ,+ ನನ್ನ ತೀರ್ಪುಗಳನ್ನ ಕೇಳದೇ ನನ್ನ ಆಜ್ಞೆಗಳನ್ನ ಬಿಟ್ಟು ನಡೆದ್ರೆ ನನ್ನ ಒಪ್ಪಂದವನ್ನ ಮುರಿದ್ರೆ+ 16 ನಾನು ನಿಮಗೆ ಈ ಶಿಕ್ಷೆಗಳನ್ನ ಕೊಡ್ತೀನಿ: ನೀವು ಗಾಬರಿಯಿಂದ ಕಂಗಾಲಾಗೋ ತರ ಮಾಡ್ತೀನಿ. ನಿಮಗೆ ಕ್ಷಯರೋಗ, ವಿಪರೀತ ಜ್ವರ ಬರೋ ತರ ಮಾಡ್ತೀನಿ. ಆಗ ನಿಮ್ಮ ದೃಷ್ಟಿ ಮಂದವಾಗುತ್ತೆ. ನೀವು ಸೊರಗಿ ಹೋಗ್ತೀರ. ನೀವು ಬೀಜ ಬಿತ್ತಿದ್ರೂ ಅದ್ರ ಫಲ ತಿನ್ನಲ್ಲ, ನಿಮ್ಮ ಶತ್ರುಗಳು ತಿಂತಾರೆ.+ 17 ನಾನು ನಿಮ್ಮ ಕೈಬಿಡ್ತೀನಿ, ನಿಮ್ಮ ಶತ್ರುಗಳು ನಿಮ್ಮನ್ನ ಸೋಲಿಸಿಬಿಡ್ತಾರೆ.+ ನಿಮ್ಮನ್ನ ದ್ವೇಷಿಸೋರು ನಿಮ್ಮ ಮೇಲೆ ದಬ್ಬಾಳಿಕೆ ಮಾಡ್ತಾರೆ.+ ನಿಮ್ಮನ್ನ ಯಾರೂ ಅಟ್ಟಿಸ್ಕೊಂಡು ಬರದೇ ಇದ್ರೂ ನೀವು ಭಯದಿಂದ ಓಡ್ತೀರ.+
18 “‘ಇಷ್ಟೆಲ್ಲ ಆದ್ರೂ ನೀವು ನನ್ನ ಮಾತನ್ನ ಕೇಳದಿದ್ರೆ ನಾನು ನಿಮ್ಮ ಪಾಪಗಳಿಗಾಗಿ ಮುಂಚೆಗಿಂತ ಏಳು ಪಟ್ಟು ಜಾಸ್ತಿ ಶಿಕ್ಷೆ ಕೊಡಬೇಕಾಗುತ್ತೆ. 19 ನೀವು ಮೊಂಡುತನದಿಂದ ತೋರಿಸೋ ಅಹಂಕಾರನ ಅಡಗಿಸಿಬಿಡ್ತೀನಿ. ನಿಮ್ಮ ಮೇಲಿರೋ ಆಕಾಶನ ಕಬ್ಬಿಣದ ತರ*+ ಭೂಮಿನ ತಾಮ್ರದ ತರ* ಮಾಡ್ತೀನಿ. 20 ನೀವು ಎಷ್ಟೇ ಬೆವರು ಸುರಿಸಿ ದುಡಿದ್ರೂ ಹೊಲದಲ್ಲಿ ಬೆಳೆ ಬೆಳೆಯಲ್ಲ,+ ಮರಗಳು ಹಣ್ಣು ಕೊಡಲ್ಲ. ನೀವು ಪಟ್ಟ ಕಷ್ಟ ಎಲ್ಲ ವ್ಯರ್ಥ ಆಗುತ್ತೆ.
21 “‘ಹೀಗೆಲ್ಲ ಆದ ಮೇಲೂ ನೀವು ನನ್ನ ಮಾತನ್ನ ಕೇಳೋಕೆ ಒಪ್ಪದೆ ನನ್ನ ವಿರುದ್ಧ ನಡೀತಾ ಇದ್ರೆ ನಿಮ್ಮ ಪಾಪಗಳಿಗಾಗಿ ನಾನು ನಿಮಗೆ ಮುಂಚೆಗಿಂತ ಇನ್ನೂ ಏಳು ಪಟ್ಟು ಜಾಸ್ತಿ ಶಿಕ್ಷೆ ಕೊಡಬೇಕಾಗುತ್ತೆ. 22 ಆಗ ಕಾಡುಪ್ರಾಣಿಗಳು ನಿಮ್ಮ ಮಧ್ಯ ಬರೋ ತರ ಮಾಡ್ತೀನಿ.+ ಅವು ನಿಮ್ಮ ಮಕ್ಕಳನ್ನ ಹಿಡ್ಕೊಂಡು ಹೋಗುತ್ತೆ,+ ಸಾಕುಪ್ರಾಣಿಗಳನ್ನ ತಿಂದುಬಿಡುತ್ತೆ. ಆಗ ನಿಮ್ಮ ಸಂಖ್ಯೆ ಕಮ್ಮಿ ಆಗಿ ರಸ್ತೆಗಳೆಲ್ಲ ಬಿಕೋ ಅನ್ನುತ್ತೆ.+
23 “‘ಇಷ್ಟಾದ್ರೂ ನೀವು ನಿಮ್ಮನ್ನ ತಿದ್ಕೊಳ್ಳದೆ+ ಹಠದಿಂದ ನನ್ನ ವಿರುದ್ಧನೇ ನಡೀತಿದ್ರೆ 24 ನಾನೂ ನಿಮ್ಮನ್ನ ವಿರೋಧಿಸ್ತೀನಿ, ನಿಮ್ಮ ಪಾಪಗಳಿಗಾಗಿ ನಿಮಗೆ ಇನ್ನೂ ಏಳು ಪಟ್ಟು ಶಿಕ್ಷೆ ಕೊಡ್ತೀನಿ. 25 ನೀವು ನನ್ನ ಒಪ್ಪಂದನ ಮುರಿದಿದ್ದಕ್ಕೆ ನಿಮ್ಮ ಶತ್ರುಗಳು ಕತ್ತಿ ಹಿಡಿದು ನಿಮ್ಮನ್ನ ದಾಳಿ ಮಾಡೋ ಹಾಗೆ ಮಾಡ್ತೀನಿ.+ ನೀವು ತಪ್ಪಿಸ್ಕೊಂಡು ಪಟ್ಟಣಕ್ಕೆ ಓಡಿಹೋಗಿ ಬಚ್ಚಿಟ್ಕೊಂಡ್ರೆ ನಿಮಗೆ ಕಾಯಿಲೆ ಬರೋ ತರ ಮಾಡ್ತೀನಿ.+ ನಿಮ್ಮನ್ನ ಶತ್ರುಗಳ ವಶಮಾಡ್ತೀನಿ.+ 26 ನೀವು ಕೂಡಿಸಿಟ್ಟ ಆಹಾರ* ನಾಶಮಾಡ್ತೀನಿ.+ ನಿಮಗೆ ಊಟ ಎಷ್ಟು ಕಮ್ಮಿ ಇರುತ್ತೆ ಅಂದ್ರೆ ಹತ್ತು ಸ್ತ್ರೀಯರಿಗೆ ರೊಟ್ಟಿ ಸುಡೋಕೆ ಒಂದೇ ಒಂದು ಒಲೆ ಸಾಕಾಗುತ್ತೆ. ಅವರು ನಿಮಗೆ ಆ ರೊಟ್ಟಿನ ತುಂಡುಮಾಡಿ ತೂಕಮಾಡಿ ಕೊಡ್ತಾರೆ.+ ನೀವು ಊಟ ಮಾಡಿದ್ರೂ ಹೊಟ್ಟೆ ತುಂಬಲ್ಲ.+
27 “‘ಇಷ್ಟೆಲ್ಲ ಆದ್ಮೇಲೂ ನೀವು ನನ್ನ ಮಾತನ್ನ ಕೇಳದೆ ಹಠದಿಂದ ನನ್ನ ವಿರುದ್ಧ ನಡೀತಾ ಇದ್ರೆ 28 ನಾನು ನಿಮ್ಮನ್ನ ಇನ್ನೂ ವಿರೋಧಿಸ್ತೀನಿ,+ ನಿಮ್ಮ ಪಾಪಗಳಿಗಾಗಿ ನಿಮಗೆ ಇನ್ನೂ ಏಳು ಪಟ್ಟು ಶಿಕ್ಷೆ ಕೊಡ್ತೀನಿ. 29 ಆಗ ನಿಮ್ಗೆ ಎಂಥಾ ಗತಿ ಬರುತ್ತೆ ಅಂದ್ರೆ ನೀವು ನಿಮ್ಮ ಮಕ್ಕಳ ಮಾಂಸನೇ ತಿನ್ನಬೇಕಾಗುತ್ತೆ.+ 30 ನೀವು ಸುಳ್ಳು ದೇವರುಗಳನ್ನ ಆರಾಧಿಸೋ ಜಾಗಗಳನ್ನ* ನಾಶ ಮಾಡ್ತೀನಿ,+ ಧೂಪಸ್ತಂಭಗಳನ್ನ ಉರುಳಿಸಿಬಿಡ್ತೀನಿ. ನಿಮ್ಮ ಅಸಹ್ಯ ಮೂರ್ತಿಗಳ* ಪುಡಿ ಮೇಲೆ ನಿಮ್ಮ ಹೆಣಗಳನ್ನ ಗುಡ್ಡೆ ಹಾಕ್ತೀನಿ.+ ನಿಮ್ಮನ್ನ ನೋಡಿ ಅಸಹ್ಯಪಟ್ಟು ಮುಖ ತಿರಿಗಿಸ್ಕೊಳ್ತೀನಿ.+ 31 ನಾನು ನಿಮ್ಮ ಪಟ್ಟಣಗಳನ್ನ ಮತ್ತು ನಿಮ್ಮ ದೇವರುಗಳನ್ನ ಆರಾಧಿಸೋ ಜಾಗಗಳನ್ನ ನಾಶಮಾಡ್ತೀನಿ.+ ನೀವು ಕೊಡೋ ಬಲಿಗಳ ಸುವಾಸನೆ ಮೇಲೆ ಹೋಗುವಾಗ ಮೂಗು ಮುಚ್ಕೊಳ್ತೀನಿ. 32 ನಿಮ್ಮ ದೇಶ ನಿರ್ಜನ ಆಗೋ ತರ ಮಾಡ್ತೀನಿ.+ ಆಗ ನಿಮ್ಮ ಶತ್ರುಗಳು ಬಂದು ಅಲ್ಲಿ ಇರ್ತಾರೆ, ನಿಮ್ಮ ದೇಶದ ಸ್ಥಿತಿ ನೋಡಿ ಆಶ್ಚರ್ಯ ಪಡ್ತಾರೆ.+ 33 ನಾನು ನಿಮ್ಮನ್ನ ಬೇರೆ ದೇಶಗಳಿಗೆ ಚೆಲ್ಲಾಪಿಲ್ಲಿ ಮಾಡ್ತೀನಿ.+ ಶತ್ರುಗಳು ನಿಮ್ಮ ವಿರುದ್ಧ ಯುದ್ಧಕ್ಕೆ ಬರೋ ತರ ಮಾಡ್ತೀನಿ.+ ನಿಮ್ಮ ದೇಶದಲ್ಲಿ ಯಾರೂ ಇರಲ್ಲ.+ ನಿಮ್ಮ ಪಟ್ಟಣಗಳು ಹಾಳುಬೀಳುತ್ತೆ.
34 “‘ನೀವು ಶತ್ರುಗಳ ದೇಶದಲ್ಲಿ ಇರೋಷ್ಟು ದಿನ ನೀವಿದ್ದ ನೆಲ ಜನರಿಲ್ಲದೆ ವಿಶ್ರಾಂತಿ ತಗೊಳ್ಳುತ್ತೆ. ಅದಕ್ಕೇ ಅಲ್ಲಿ ತನಕ ಸಬ್ಬತ್ತಲ್ಲಿ ಸಿಗದಿದ್ದ ವಿಶ್ರಾಂತಿ ಆಗ ಸಿಗುತ್ತೆ.+ 35 ನೀವು ಆ ನೆಲದಲ್ಲಿ ಇದ್ದಾಗ ಸಬ್ಬತ್‌ಗಳಲ್ಲಿ ಅದಕ್ಕೆ ವಿಶ್ರಾಂತಿ ಕೊಡಲಿಲ್ಲ. ಹಾಗಾಗಿ ಅದ್ರಲ್ಲಿ ಜನ್ರೇ ಇಲ್ಲದಿರೋ ದಿನಗಳೆಲ್ಲ ಅದು ವಿಶ್ರಾಂತಿ ಪಡಿಯುತ್ತೆ.
36 “‘ನಿಮ್ಮಲ್ಲಿ ಯಾರು ಬದುಕುಳಿದು+ ಶತ್ರುಗಳ ದೇಶದಲ್ಲಿ ಇರ್ತಿರೋ ಅವರಿಗೆ ನಿರಾಸೆ ಆಗೋ ತರ ಮಾಡ್ತೀನಿ. ಗಾಳಿಗೆ ಹಾರೋ ಒಣ ಎಲೆಯ ಸದ್ದಿಗೂ ಅವರು ಭಯಪಡ್ತಾರೆ. ಯಾರೂ ಅವ್ರನ್ನ ಅಟ್ಟಿಸ್ಕೊಂಡು ಬರದಿದ್ರೂ ಯಾರೋ ಕತ್ತಿ ಹಿಡಿದು ಹಿಂದೆ ಬರ್ತಿದ್ದಾರೆ ಅನ್ಕೊಂಡು ಓಡಿ ಓಡಿ ಬೀಳ್ತಾರೆ.+ 37 ಅವರು ಒಬ್ಬರಿಗೊಬ್ರು ಡಿಕ್ಕಿ ಹೊಡಿದು ಒಬ್ರ ಮೇಲೆ ಒಬ್ರು ಬಿಳ್ತಾರೆ. ಹಿಂದೆ ಯಾರೂ ಇಲ್ಲದಿದ್ರೂ ಯಾರೋ ಕತ್ತಿ ಹಿಡಿದು ಹಿಂದೆ ಬರ್ತಿದ್ದಾರೆ ಅಂತ ಅವರಿಗೆ ಅನ್ಸುತ್ತೆ. ನಿಮ್ಮ ಶತ್ರುಗಳನ್ನ ಎದುರಿಸೋಕೆ ನಿಮ್ಮ ಕೈಯಿಂದ ಆಗಲ್ಲ.+ 38 ನಿಮ್ಮಲ್ಲಿ ಎಷ್ಟೋ ಜನ ಬೇರೆ ದೇಶದಲ್ಲಿ ಸಾಯ್ತೀರ,+ ಶತ್ರುಗಳ ದೇಶದಲ್ಲಿ ಅಳಿದು ಹೋಗ್ತೀರ. 39 ಉಳಿದವರು ತಮ್ಮ ಪಾಪಗಳಿಂದ, ತಮ್ಮ ಪೂರ್ವಜರು ಮಾಡಿದ ಪಾಪಗಳಿಂದ ಶತ್ರುಗಳ ದೇಶದಲ್ಲೇ ಕೊಳೀತಾರೆ.+ 40 ಆಗ ಅವರೂ ಅವ್ರ ಪೂರ್ವಜರೂ ಪಾಪ ಮಾಡಿದ್ದಾರೆ, ನನಗೆ ದ್ರೋಹ ಮಾಡಿದ್ದಾರೆ+ ಅಂತ ಒಪ್ಕೊಳ್ತಾರೆ.+ 41 ಅದಕ್ಕೆ ನಾನು ಅವ್ರನ್ನ ವಿರೋಧಿಸಿ+ ಶತ್ರುಗಳ ದೇಶಕ್ಕೆ ಕೈದಿಗಳಾಗಿ ಹೋಗೋಕೆ ಬಿಟ್ಟೆ+ ಅಂತಾನೂ ಒಪ್ಕೊಳ್ತಾರೆ.
“‘ಆಗ್ಲಾದ್ರೂ ಅವರು ತಮ್ಮ ಹಠ* ಬಿಟ್ಟು ತಗ್ಗಿಸ್ಕೊಳ್ಳಬಹುದು.+ ತಮ್ಮ ಪಾಪಗಳಿಗೆ ದೇವರು ತಕ್ಕ ಶಿಕ್ಷೆ ಕೊಟ್ಟಿದ್ದಾನೆ ಅಂತ ತಿಳ್ಕೊಬಹುದು. 42 ಆಗ ನಾನು ಯಾಕೋಬ,+ ಇಸಾಕ+ ಮತ್ತು ಅಬ್ರಹಾಮನ+ ಜೊತೆ ಮಾಡ್ಕೊಂಡ ಒಪ್ಪಂದವನ್ನ ಮತ್ತು ನಾನು ನಿಮಗೆ ಕೊಟ್ಟ ದೇಶವನ್ನ ನೆನಪಿಸ್ಕೊಳ್ತೀನಿ. 43 ಇಸ್ರಾಯೇಲ್ಯರು ಆ ದೇಶದಲ್ಲಿ ಇಲ್ಲದಿದ್ದಾಗ ಅದು ಸಬ್ಬತ್‌ಗಳ ವಿಶ್ರಾಂತಿ ಪಡಿಯುತ್ತೆ.+ ಅಲ್ಲಿ ಜನ್ರೇ ಇರಲ್ಲ. ಅವರು ನನ್ನ ತೀರ್ಪುಗಳನ್ನ ತಾತ್ಸಾರಮಾಡಿ ನನ್ನ ನಿಯಮಗಳನ್ನ ತಿರಸ್ಕರಿಸಿದ ಕಾರಣ ಆ ಪಾಪಕ್ಕೆ ಶಿಕ್ಷೆ ಅನುಭವಿಸ್ತಾರೆ.+ 44 ಆದ್ರೂ ಅವರು ಶತ್ರುಗಳ ದೇಶದಲ್ಲಿ ಇರುವಾಗ ನಾನು ಯಾವತ್ತೂ ಅವ್ರ ಕೈಯನ್ನ ಪೂರ್ತಿಯಾಗಿ ಬಿಡಲ್ಲ,+ ಪೂರ್ತಿ ನಾಶ ಆಗೋಕೆ ಬಿಡಲ್ಲ. ನಾನು ಅವ್ರನ್ನ ಹಾಗೆ ಬಿಟ್ಟುಬಿಟ್ರೆ ಅವ್ರ ಜೊತೆ ಮಾಡ್ಕೊಂಡ ಒಪ್ಪಂದನ ಮುರಿದ ಹಾಗಾಗುತ್ತೆ.+ ಆದ್ರೆ ನಾನು ಹಾಗೆ ಮಾಡಲ್ಲ. ಯಾಕಂದ್ರೆ ನಾನು ಅವ್ರ ದೇವರಾದ ಯೆಹೋವ. 45 ಅವರಿಗಾಗಿ ನಾನು ಅವ್ರ ಪೂರ್ವಜರ ಜೊತೆ ಮಾಡ್ಕೊಂಡ ಒಪ್ಪಂದನ ನೆನಪಿಸ್ಕೊಳ್ತೀನಿ.+ ನಾನು ಅವ್ರ ಪೂರ್ವಜರನ್ನ ಬೇರೆ ದೇಶದ ಜನ್ರ ಕಣ್ಮುಂದೆನೇ ಈಜಿಪ್ಟ್ ದೇಶದಿಂದ ಬಿಡಿಸ್ಕೊಂಡು ಬಂದೆ.+ ನಾನು ಅವ್ರ ದೇವರು ಅಂತ ತೋರಿಸ್ಕೊಡೋಕೆ ಹಾಗೆ ಮಾಡ್ದೆ. ನಾನು ಯೆಹೋವ.’”
46 ಸಿನಾಯಿ ಬೆಟ್ಟದ ಮೇಲೆ ಯೆಹೋವ ಮೋಶೆ ಮೂಲಕ ಇಸ್ರಾಯೇಲ್ಯರಿಗೆ ಈ ಎಲ್ಲ ಆಜ್ಞೆಗಳನ್ನ ತೀರ್ಪುಗಳನ್ನ ನಿಯಮಗಳನ್ನ ಕೊಟ್ಟನು.+
27 ಯೆಹೋವ ಮೋಶೆಗೆ ಇನ್ನೂ ಹೇಳೋದು ಏನಂದ್ರೆ 2 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಯಾರಾದ್ರೂ ವಿಶೇಷ ಹರಕೆ+ ಮಾಡ್ಕೊಂಡ್ರೆ ಅಂದ್ರೆ ಒಬ್ಬ ವ್ಯಕ್ತಿಗೆ ನಿರ್ಧರಿಸಿದ ಹಣವನ್ನ ಯೆಹೋವನಿಗೆ ಕೊಡ್ತೀನಿ ಅಂತ ಮಾತು ಕೊಟ್ರೆ ಅದನ್ನ ಕೊಡಬೇಕು. 3 ಆ ಬೆಲೆ ಎಷ್ಟಂದ್ರೆ, 20 ರಿಂದ 60 ವರ್ಷದ ಪುರುಷರಿಗೆ 50 ಬೆಳ್ಳಿ ಶೆಕೆಲ್.* ಅದನ್ನ ಆರಾಧನಾ ಸ್ಥಳದ ತೂಕದ ಪ್ರಕಾರ* ಕೊಡಬೇಕು. 4 ಅದೇ ವಯಸ್ಸಿನ ಸ್ತ್ರೀಯರಿಗೆ 30 ಶೆಕೆಲ್. 5 5 ರಿಂದ 20 ವರ್ಷದ ಹುಡುಗರಿಗೆ 20 ಶೆಕೆಲ್, ಅದೇ ವಯಸ್ಸಿನ ಹುಡುಗಿಯರಿಗೆ 10 ಶೆಕೆಲ್. 6 ಒಂದು ತಿಂಗಳಿಂದ ಐದು ವರ್ಷದ ತನಕ ಇರೋ ಗಂಡು ಮಕ್ಕಳ ಬೆಲೆ ಐದು ಬೆಳ್ಳಿ ಶೆಕೆಲ್. ಅದೇ ವಯಸ್ಸಿನ ಹೆಣ್ಣು ಮಕ್ಕಳ ಬೆಲೆ ಮೂರು ಬೆಳ್ಳಿ ಶೆಕೆಲ್.
7 60 ವರ್ಷ ಅಥವಾ ಅದಕ್ಕಿಂತ ಜಾಸ್ತಿ ವಯಸ್ಸಿನ ಗಂಡಸರಿಗೆ ಇರೋ ಬೆಲೆ 15 ಶೆಕೆಲ್, ಸ್ತ್ರೀಯರಿಗೆ 10 ಶೆಕೆಲ್. 8 ವಿಶೇಷ ಹರಕೆ ಮಾಡಿದವನು ತುಂಬ ಬಡವನಾಗಿ ಇರೋದ್ರಿಂದ ಆ ಬೆಲೆ ಕೊಡೋಕೆ ಆಗದಿದ್ರೆ+ ಅವನು ಆ ವ್ಯಕ್ತಿಯನ್ನ ಪುರೋಹಿತನ ಮುಂದೆ ನಿಲ್ಲಿಸಬೇಕು. ಹರಕೆ ಹೊತ್ತವನಿಂದ ಎಷ್ಟು ಬೆಲೆ ಕೊಡೋಕೆ ಆಗುತ್ತೆ+ ಅಂತ ನೋಡಿ ಪುರೋಹಿತ ಆ ವ್ಯಕ್ತಿ ಬೆಲೆನ ತೀರ್ಮಾನಿಸ್ತಾನೆ.
9 ಯಾರಾದ್ರೂ ಬಲಿಗೆ ಯೋಗ್ಯವಾಗಿರೋ ಒಂದು ಪ್ರಾಣಿನ ಯೆಹೋವನಿಗೆ ಕೊಡ್ತೀನಿ ಅಂತ ಹರಕೆ ಹೊತ್ಕೊಂಡ್ರೆ ಆ ಪ್ರಾಣಿ ಯೆಹೋವನಿಗೆ ಸೇರಿದ್ದು. 10 ಅವನು ಒಂದು ಪ್ರಾಣಿನ ಕೊಡ್ತೀನಿ ಅಂತ ಹೇಳಿ ಆಮೇಲೆ ಅದ್ರ ಬದ್ಲು ಅಂಥದ್ದೇ ಇನ್ನೊಂದು ಪ್ರಾಣಿನ ಕೊಡೋ ಹಾಗಿಲ್ಲ. ಅದಕ್ಕಿಂತ ಒಳ್ಳೇ ಅಥವಾ ಕೀಳ್ಮಟ್ಟದ ಬೇರೆ ಪ್ರಾಣಿನ ಕೊಡೋ ಹಾಗಿಲ್ಲ. ಅವನು ಆ ಪ್ರಾಣಿ ಬದ್ಲು ಬೇರೆ ಪ್ರಾಣಿನ ಕೊಟ್ರೆ ಮೊದ್ಲು ಕೊಡ್ತೀನಿ ಅಂತ ಹೇಳಿದ ಪ್ರಾಣಿ, ಈಗ ಕೊಟ್ಟಿರೋ ಪ್ರಾಣಿ ಎರಡೂ ದೇವರಿಗೆ ಸೇರುತ್ತೆ. 11 ಒಬ್ಬನು ಯೆಹೋವನಿಗೆ ಕೊಡ್ತೀನಿ ಅಂತ ಹೇಳಿದ ಪ್ರಾಣಿ ಬಲಿಗೆ ಯೋಗ್ಯವಲ್ಲದ ಅಶುದ್ಧ ಪ್ರಾಣಿ+ ಆಗಿದ್ರೆ ಅದನ್ನ ಪುರೋಹಿತನ ಮುಂದೆ ನಿಲ್ಲಿಸಬೇಕು. 12 ಆಗ ಪುರೋಹಿತ ಆ ಪ್ರಾಣಿ ಹೇಗಿದೆ ಅಂತ ನೋಡಿ ಅದ್ರ ಬೆಲೆನ ಹೇಳಬೇಕು. ಅವನು ಎಷ್ಟು ಹೇಳ್ತಾನೋ ಅದೇ ಆ ಪ್ರಾಣಿ ಬೆಲೆ. 13 ಹರಕೆ ಮಾಡಿದವನು ಮುಂದೆ ಯಾವತ್ತಾದ್ರು ಆ ಪ್ರಾಣಿನ ವಾಪಸ್ ಖರೀದಿಸೋಕೆ ಇಷ್ಟಪಟ್ರೆ ಅವನು ಅದ್ರ ಬೆಲೆ ಎಷ್ಟಿದೆಯೋ ಅದ್ರ ಜೊತೆ ಆ ಬೆಲೆಯ ಐದರ ಒಂದು ಭಾಗ ಸೇರಿಸಿ ಕೊಡ್ಬೇಕು.+
14 ಯಾರಾದ್ರೂ ತನ್ನ ಮನೆನ ಯೆಹೋವನಿಗೆ ಕೊಡ್ತೀನಿ ಅಂತ ಹರಕೆ ಮಾಡಿದ್ರೆ ಪುರೋಹಿತ ಆ ಮನೆಯ ಗುಣಮಟ್ಟ ನೋಡಿ ಅದ್ರ ಬೆಲೆ ತೀರ್ಮಾನಿಸಬೇಕು. ಪುರೋಹಿತ ಎಷ್ಟು ಹೇಳ್ತಾನೋ ಅದೇ ಆ ಮನೆ ಬೆಲೆ.+ 15 ಹರಕೆ ಮಾಡಿದವನು ಮುಂದೆ ಯಾವತ್ತಾದ್ರೂ ಆ ಮನೆನ ವಾಪಸ್ ತಗೊಳ್ಳೋಕೆ ಬಯಸಿದ್ರೆ ಅದ್ರ ಬೆಲೆ ಎಷ್ಟಿದೆಯೋ ಅದ್ರ ಜೊತೆಗೆ ಆ ಬೆಲೆಯ ಐದರ ಒಂದು ಭಾಗ ಸೇರಿಸಿ ಕೊಡಬೇಕು. ಆಗ ಆ ಮನೆ ಅವನದ್ದಾಗುತ್ತೆ.
16 ಯಾರಾದ್ರೂ ಹೊಲದ ಒಂದು ಭಾಗನ ಯೆಹೋವನಿಗೆ ಕೊಡ್ತೀನಿ ಅಂತ ಹರಕೆ ಮಾಡಿದ್ರೆ ಅದ್ರಲ್ಲಿ ಎಷ್ಟು ಬೀಜ ಬಿತ್ತೋಕೆ ಆಗುತ್ತೆ ಅಂತ ನೋಡಿ ಅದ್ರ ಬೆಲೆನ ತೀರ್ಮಾನಿಸಲಾಗುತ್ತೆ. ಒಂದು ಹೋಮೆರ್* ಅಳತೆಯಷ್ಟು ಜವೆಗೋದಿನ* ಬಿತ್ತೋಕೆ ಆಗೋವಷ್ಟು ಹೊಲದ ಬೆಲೆ 50 ಬೆಳ್ಳಿ ಶೆಕೆಲ್. 17 ಅವನು ಬಿಡುಗಡೆ ವರ್ಷದಿಂದ+ ಹೊಲನ ಕೊಡ್ತೀನಿ ಅಂತ ಹರಕೆ ಹೊತ್ಕೊಂಡ್ರೆ ಈ ಲೆಕ್ಕದ ಪ್ರಕಾರನೇ ಬೆಲೆ ತೀರ್ಮಾನಿಸಬೇಕು. 18 ಅವನು ಬಿಡುಗಡೆ ವರ್ಷ ಮುಗಿದ ಮೇಲೆ ಹೊಲ ಕೊಡ್ತೀನಿ ಅಂತ ಹರಕೆ ಹೊತ್ಕೊಂಡ್ರೆ ಮುಂದಿನ ಬಿಡುಗಡೆ ವರ್ಷಕ್ಕೆ ಇನ್ನೆಷ್ಟು ವರ್ಷ ಉಳಿದಿದೆ ಅಂತ ಪುರೋಹಿತ ಲೆಕ್ಕ ಮಾಡಿ ಅದ್ರ ಪ್ರಕಾರ ಬೆಲೆ ಕಮ್ಮಿ ಮಾಡಬೇಕು.+ 19 ಹರಕೆ ಮಾಡಿದವನು ಮುಂದೆ ಯಾವತ್ತಾದ್ರೂ ಆ ಹೊಲನ ವಾಪಸ್ ತಗೋಬೇಕು ಅಂತಿದ್ರೆ ಅದ್ರ ಬೆಲೆ ಎಷ್ಟಿದ್ಯೋ ಅದ್ರ ಜೊತೆ ಐದ್ರಲ್ಲಿ ಒಂದು ಭಾಗನ ಸೇರಿಸಿ ಕೊಡಬೇಕು. ಆಗ ಆ ಹೊಲ ಅವನದ್ದಾಗುತ್ತೆ. 20 ಅವನು ಆ ಹೊಲನ ವಾಪಸ್ ತಗೊಳ್ಳದೆ ಇದ್ದಾಗ ಅದನ್ನ ಬೇರೆಯವರಿಗೆ ಮಾರಿಬಿಟ್ರೆ ಮತ್ತೆ ಅದನ್ನ ವಾಪಸ್ ತಗೊಳ್ಳೋಕೆ ಆಗಲ್ಲ. 21 ಬಿಡುಗಡೆ ವರ್ಷದಲ್ಲಿ ಮತ್ತೆ ಆ ಹೊಲ ಯೆಹೋವನಿಗೆ ಸೇರುತ್ತೆ. ಅದು ಪವಿತ್ರವಾಗಿದೆ. ಅದು ಆತನ ಸೇವೆಯಲ್ಲಿ ಬಳಸೋಕೆ ಅಂತಾನೇ ಇರುತ್ತೆ. ಹಾಗಾಗಿ ಅದು ಪುರೋಹಿತರ ಆಸ್ತಿ ಆಗುತ್ತೆ.+
22 ಯಾರಾದ್ರೂ ತಾನು ತಗೊಂಡ ಹೊಲವನ್ನ ಅಂದ್ರೆ ಪಿತ್ರಾರ್ಜಿತ ಆಸ್ತಿಯಾಗಿ+ ಪಡ್ಕೊಳ್ಳದ ಹೊಲವನ್ನ ಯೆಹೋವನಿಗೆ ಕೊಡ್ತೀನಿ ಅಂತ ಹರಕೆ ಮಾಡಿದ್ರೆ, 23 ಪುರೋಹಿತ ಬಿಡುಗಡೆ ವರ್ಷಕ್ಕೆ ಇನ್ನೆಷ್ಟು ವರ್ಷ ಉಳಿದಿದೆ ಅಂತ ಲೆಕ್ಕಮಾಡಿ ಆ ಹೊಲದ ಬೆಲೆ ತೀರ್ಮಾನಿಸ್ತಾನೆ. ಅಷ್ಟು ಬೆಲೆನ ಅದೇ ದಿನ ಅವನು ಕೊಡಬೇಕು.+ ಆ ಹಣ ಯೆಹೋವನಿಗೆ ಸೇರಿದ್ದು. 24 ಆದ್ರೆ ಬಿಡುಗಡೆ ವರ್ಷದಲ್ಲಿ ಆ ಹೊಲನ ಅವನು ಯಾರಿಂದ ತಗೊಂಡಿದ್ದನೋ ಆ ವ್ಯಕ್ತಿಗೆ ವಾಪಸ್ ಕೊಡಬೇಕು. ಯಾಕಂದ್ರೆ ಆ ಹೊಲ ಆ ವ್ಯಕ್ತಿಗೆ ಸೇರಿದ್ದು.+
25 ಇದೆಲ್ಲದ್ರ ಬೆಲೆನ ಆರಾಧನಾ ಸ್ಥಳದ ತೂಕಕ್ಕೆ ತಕ್ಕಂತೆ ತೀರ್ಮಾನಿಸಬೇಕು. ಅದ್ರ ಪ್ರಕಾರ ಒಂದು ಶೆಕೆಲಿನ ತೂಕ 20 ಗೇರಾ* ಆಗಿರಬೇಕು.
26 ಆದ್ರೆ ಪ್ರಾಣಿಗಳ ಮೊದಲ ಮರಿಗಳನ್ನ ದೇವರಿಗೆ ಕೊಡ್ತೀನಿ ಅಂತ ಹರಕೆ ಮಾಡಬಾರದು. ಯಾಕಂದ್ರೆ ಮೊದಲ ಮರಿಗಳು ಹುಟ್ಟುವಾಗ್ಲೇ ಯೆಹೋವನಿಗೆ ಸೇರಿದ್ದು.+ ಅದು ಕರು ಆಗ್ಲಿ, ಕುರಿ ಆಗ್ಲಿ ಹುಟ್ಟುವಾಗ್ಲೇ ಯೆಹೋವನಿಗೆ ಸೇರಿದ್ದು.+ 27 ಆದ್ರೆ ಅಶುದ್ಧ ಪ್ರಾಣಿಗಳ ಮೊದಲ ಮರಿಗಳನ್ನ ಬಿಡಿಸ್ಕೊಬಹುದು. ತೀರ್ಮಾನಿಸಿದ ಬೆಲೆನ, ಜೊತೆಗೆ ಆ ಬೆಲೆಯ ಐದರ ಒಂದನೇ ಭಾಗನ ಸೇರಿಸಿ ಕೊಟ್ಟು ಆ ಮರಿನ ಬಿಡಿಸ್ಕೊಬೇಕು.+ ಹೀಗೆ ಅದನ್ನ ಬಿಡಿಸದೆ ಹೋದ್ರೆ ಪುರೋಹಿತ ತೀರ್ಮಾನಿಸಿದ ಬೆಲೆಗೆ ಮಾರಬೇಕು.
28 ಯಾರಾದ್ರೂ ತನಗೆ ಸೇರಿದ ವ್ಯಕ್ತಿ, ಪ್ರಾಣಿ ಅಥವಾ ಹೊಲವನ್ನ ಶಾಶ್ವತಕ್ಕೂ ಯೆಹೋವನಿಗೆ ಅಂತ ಕೊಟ್ರೆ ಅವನು ಅದನ್ನ ಮಾರೋ ಹಾಗಿಲ್ಲ. ವಾಪಸ್ ತಗೊಳ್ಳೋ ಹಾಗಿಲ್ಲ. ಹೀಗೆ ಯೆಹೋವನಿಗೆ ಅಂತ ಏನೇ ಕೊಟ್ರೂ ಅದು ಆತನ ದೃಷ್ಟಿಯಲ್ಲಿ ಅತಿ ಪವಿತ್ರ.+ 29 ಆದ್ರೆ ಮರಣಶಿಕ್ಷೆ ಆಗಿ ನಾಶಕ್ಕೆ ಅಂತಾನೇ ಇಟ್ಟಿರೋ ವ್ಯಕ್ತಿನ ಬಿಡಿಸ್ಕೊಬಾರದು.+ ಅವನನ್ನ ಸಾಯಿಸ್ಲೇಬೇಕು.+
30 ಹೊಲದ ಬೆಳೆಯಲ್ಲಿ ಮರದ ಹಣ್ಣುಗಳಲ್ಲಿ ಹತ್ತನೇ ಒಂದು ಭಾಗ*+ ಯೆಹೋವನಿಗೆ ಸೇರಿದ್ದು. ಅದು ಯೆಹೋವನ ದೃಷ್ಟಿಯಲ್ಲಿ ಪವಿತ್ರ. 31 ಯಾರಾದ್ರೂ ದೇವರಿಗೆ ಕೊಡೋ ಆ ಹತ್ತನೇ ಒಂದು ಭಾಗನ ವಾಪಸ್ ತಗೊಳ್ಳೋಕೆ ಇಷ್ಟಪಟ್ರೆ ಅದ್ರ ಬೆಲೆ ಜೊತೆಗೆ ಆ ಬೆಲೆಯ ಐದರ ಒಂದು ಭಾಗ ಸೇರಿಸಿ ಕೊಡಬೇಕು. 32 ಹಸು, ಆಡು, ಕುರಿಗಳಲ್ಲಿ ಹತ್ತನೇ ಒಂದು ಭಾಗನ ಯೆಹೋವನಿಗೆ ಕೊಡಬೇಕು. ಪ್ರತಿ ಹತ್ತನೆ ಪ್ರಾಣಿ ಪವಿತ್ರ. ಕುರುಬ ತನ್ನ ಪ್ರಾಣಿಗಳನ್ನ ಕೋಲಿನ ಕೆಳಗಿಂದ ಹೋಗೋ ತರ ಮಾಡಿ ಹತ್ತತ್ತರಂತೆ ಲೆಕ್ಕ ಮಾಡುವಾಗ ಹತ್ತನೇದನ್ನ ದೇವರಿಗೆ ಅಂತಾನೇ ಪಕ್ಕಕ್ಕೆ ಇಡಬೇಕು. 33 ಅವನು ಆ ಹತ್ತನೆ ಪ್ರಾಣಿನ ಚೆನ್ನಾಗಿದ್ಯಾ ಇಲ್ವಾ ಅಂತ ನೋಡಬಾರದು. ಅದ್ರ ಬದ್ಲು ಬೇರೊಂದನ್ನ ಕೊಡಬಾರದು. ಅದನ್ನ ಬದಲಾಯಿಸಿ ಬೇರೆದನ್ನ ಕೊಡೋಕೆ ಪ್ರಯತ್ನಿಸಿದ್ರೆ ಆ ಪ್ರಾಣಿ, ಮೊದ್ಲು ಲೆಕ್ಕ ಮಾಡಿದ ಪ್ರಾಣಿ ಎರಡೂ ದೇವರಿಗೆ ಸೇರುತ್ತೆ.+ ಅವುಗಳನ್ನ ವಾಪಸ್ ತಗೊಳ್ಳೋ ಹಾಗಿಲ್ಲ.’”
34 ಸಿನಾಯಿ ಬೆಟ್ಟದ+ ಮೇಲೆ ಯೆಹೋವ ಮೋಶೆ ಮೂಲಕ ಇಸ್ರಾಯೇಲ್ಯರಿಗೆ ಈ ಆಜ್ಞೆಗಳನ್ನ ಕೊಟ್ಟನು.
ಅಕ್ಷ. “ಯಾಜಕರಾದ.”
ಅಥವಾ “ಮೂತ್ರಪಿಂಡಗಳ ಸುತ್ತ ಇರೋ ಕೊಬ್ಬು.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಮೂತ್ರಪಿಂಡಗಳ ಸುತ್ತ ಇರೋ ಕೊಬ್ಬು.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅದು, ಬಲಿಗಳ ಕೊಬ್ಬಿಂದ ನೆನೆದ ಬೂದಿ.
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಉತ್ತಮ ಗುಣಮಟ್ಟದ ಹಿಟ್ಟು.”
ಅಥವಾ “ವಂಶದವರ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಕ್ಷ. “ಜೇನುತುಪ್ಪ.” ಇದು ಅಂಜೂರ ಅಥವಾ ಬೇರೆ ಹಣ್ಣುಗಳ ರಸ ಇರಬೇಕು.
ಅಥವಾ “ಒಡಂಬಡಿಕೆಯನ್ನ.”
ಅಥವಾ “ಹಸಿರು ತೆನೆಗಳನ್ನ.”
ಅಥವಾ “ಸಹಭೋಜನ ಬಲಿ.” ಪದವಿವರಣೆಯಲ್ಲಿ “ಸಮಾಧಾನ ಬಲಿ” ನೋಡಿ.
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಬೈಬಲಲ್ಲಿ ತಿಳಿಸಿರೋ ಪ್ರದೇಶಗಳಲ್ಲಿದ್ದ ಕುರಿಯ ಬಾಲ ತುಂಬ ದಪ್ಪ ಇರ್ತಿತ್ತು. ಅದ್ರಲ್ಲಿ ತುಂಬ ಕೊಬ್ಬು ಇರ್ತಿತ್ತು. ಆ ಬಾಲದ ತೂಕ ಕಡಿಮೆಪಕ್ಷ 5 ಕೆ.ಜಿ. ಇರ್ತಿತ್ತು.
ಅಥವಾ “ಆಹಾರ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಆಹಾರ.”
ಅಕ್ಷ. “ಅಭಿಷೇಕ ಆದ ಪುರೋಹಿತ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಈ ಪ್ರಕಟಣೆಯಲ್ಲಿ ತಪ್ಪು ಮಾಡಿದವರಿಗೆ ಅಥವಾ ಸಾಕ್ಷಿ ಹೇಳದವರಿಗೆ ತಗಲೋ ಶಾಪವನ್ನ ತಿಳಿಸೋದೂ ಸೇರಿರಬಹುದು.
ಅಥವಾ “ಗುಂಪುಗುಂಪಾಗಿರೋ ಜೀವಿಗಳು.” ಈ ಪದ ಕೀಟಗಳು, ಸರೀಸೃಪಗಳು, ಬೇರೆ ಚಿಕ್ಕ ಚಿಕ್ಕ ಜೀವಿಗಳನ್ನ ಸೂಚಿಸಬಹುದು.
ಇದು, ಅವನು ಕೊಟ್ಟ ಮಾತಿನ ಪ್ರಕಾರ ನಡ್ಕೊಂಡಿಲ್ಲ ಅಂತ ಸೂಚಿಸಬಹುದು.
ಅಂದ್ರೆ, 2.2 ಲೀ. ಪರಿಶಿಷ್ಟ ಬಿ14 ನೋಡಿ.
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಥವಾ “ಪವಿತ್ರ ಶೆಕೆಲಿನ ಪ್ರಕಾರ.”
ಅಥವಾ “ಒಳಉಡುಪನ್ನ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಂದ್ರೆ, 2.2 ಲೀ. ಪರಿಶಿಷ್ಟ ಬಿ14 ನೋಡಿ.
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಬಹುಶಃ ಪವಿತ್ರ ಡೇರೆಯ ಅಂಗಳದಲ್ಲಿ.
ಬಹುಶಃ ಪವಿತ್ರ ಡೇರೆಯ ಅಂಗಳದಲ್ಲಿ.
ಪದವಿವರಣೆ ನೋಡಿ.
ಅಥವಾ “ಸೊಂಟಪಟ್ಟಿಯನ್ನ.”
ಪದವಿವರಣೆ ನೋಡಿ.
ಅಥವಾ “ಪವಿತ್ರ ಮುಕುಟ.” ಈ ಚಿಹ್ನೆ ಆರೋನ ದೇವರಿಗೆ ಸಮರ್ಪಿತನಾಗಿದ್ದಾನೆ ಅಂತ ಸೂಚಿಸುತ್ತೆ.
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಕಿವಿಯ ಹಾಲೆಗೆ.”
ಅಥವಾ “ಕಿವಿಯ ಹಾಲೆಗೆ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಬಹುಶಃ ಪವಿತ್ರ ಡೇರೆಯ ಅಂಗಳದಲ್ಲಿ.
ಅಂದ್ರೆ, ಪೆಲಿಕನ್.
ಅಥವಾ “ಸೂರ್ಯ ಮುಳುಗೋ ತನಕ.”
ಅಥವಾ “ನ್ಯೂಟ್ ಹಲ್ಲಿ.”
ಅಥವಾ “ಐಗುಪ್ತದಿಂದ.”
ಪದವಿವರಣೆ ನೋಡಿ.
ಅಂದ್ರೆ, ಹಕ್ಕಳೆ.
“ಕುಷ್ಠರೋಗ” ಅನ್ನೋದಕ್ಕೆ ಇರೋ ಹೀಬ್ರು ಪದಕ್ಕೆ ತುಂಬ ಅರ್ಥ ಇದೆ. ಆ ಪದ, ಒಬ್ರಿಂದ ಒಬ್ರಿಗೆ ಹರಡೋ ಬೇರೆ ಬೇರೆ ರೀತಿಯ ಚರ್ಮರೋಗಗಳಿಗೆ, ಬಟ್ಟೆ ಮತ್ತು ಮನೆಗಳ ಮೇಲೆ ಕಾಣಿಸೋ ಕೆಲವು ಸೋಂಕುಗಳಿಗೆ ಸೂಚಿಸುತ್ತೆ. ಪದವಿವರಣೆಯಲ್ಲಿ “ಕುಷ್ಠರೋಗ” ನೋಡಿ.
ಅಥವಾ “ಈ ವ್ಯಕ್ತಿ ಶುದ್ಧ ಅಂತ.”
ಅಥವಾ “ಮೀಸೆ.”
ಪದವಿವರಣೆ ನೋಡಿ.
ಅಂದ್ರೆ, ಏಫಾ ಅಳತೆಯ ಹತ್ತನೇ ಮೂರು ಭಾಗ. 6.6 ಲೀ. ಪರಿಶಿಷ್ಟ ಬಿ14 ನೋಡಿ.
ಅಕ್ಷ. “ಒಂದು ಲೋಗ್.” ಅಂದ್ರೆ 310 ಮಿಲಿ ಲೀಟರ್. ಪರಿಶಿಷ್ಟ ಬಿ14 ನೋಡಿ.
ಅಥವಾ “ಕಿವಿಯ ಹಾಲೆಗೆ.”
ಅಂದ್ರೆ, 2.2 ಲೀ. ಪರಿಶಿಷ್ಟ ಬಿ14 ನೋಡಿ.
ಅಥವಾ “ಸೂರ್ಯ ಮುಳುಗೋ ತನಕ.”
ಅಕ್ಷ. “ಮಂಜೂಷದ ಮುಚ್ಚಳದ.”
ಅಥವಾ “ಒಳಉಡುಪು.”
ಅಕ್ಷ. “ಅಜಾಜೇಲಗಾಗಿ.” ಪದವಿವರಣೆಯಲ್ಲಿ “ಅಜಾಜೇಲ” ನೋಡಿ.
ಅಕ್ಷ. “ಅಜಾಜೇಲಗಾಗಿರೋ.”
ಅಕ್ಷ. “ಅಜಾಜೇಲಗಾಗಿ.” ಪದವಿವರಣೆಯಲ್ಲಿ “ಅಜಾಜೇಲ” ನೋಡಿ.
ಬಹುಶಃ ಪವಿತ್ರ ಡೇರೆಯ ಅಂಗಳದಲ್ಲಿ.
ಇದು ಸಾಮಾನ್ಯವಾಗಿ, ಉಪವಾಸ ಇರೋದನ್ನ, ಬೇರೆ ತುಂಬ ವಿಷ್ಯ ಮಾಡದೇ ಇರೋದನ್ನ ಸೂಚಿಸುತ್ತೆ.
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಕ್ಷ. “ಆಡುಗಳಿಗೆ.”
ಅಂದ್ರೆ, ತಂದೆಯ ಅಕ್ಕ ಅಥವಾ ತಂಗಿ.
ಅಂದ್ರೆ, ದೊಡ್ಡಮ್ಮ ಅಥವಾ ಚಿಕ್ಕಮ್ಮ.
ಅಥವಾ “ನಾಚಿಕೆಗೆಟ್ಟ ನಡತೆ; ಕಾಮುಕತೆ.”
ಅಥವಾ “ಮೋಲೆಕನ ಸೇವೆಗೆ ಅರ್ಪಿಸಬಾರದು, ಬೆಂಕಿಯಲ್ಲಿ ಅರ್ಪಿಸಬಾರದು.”
ಅಥವಾ “ಹಕ್ಕಲಾಯಬಾರದು.” ಪದವಿವರಣೆ ನೋಡಿ.
ಅಥವಾ “ಕಷ್ಟದಲ್ಲಿ ಇರೋರಿಗೆ.”
ಇದು ಇನ್ನೊಬ್ಬನಿಗೆ ಸೇರಿದ್ದನ್ನ ಕೊಡದೇ ಇರೋದನ್ನೂ ಸೂಚಿಸುತ್ತೆ.
ಅಥವಾ “ಕೇಡಾಗಲಿ ಅಂತ ಬೈಬಾರದು.”
ಬಹುಶಃ, “ಇನ್ನೊಬ್ಬನ ಜೀವ ಅಪಾಯದಲ್ಲಿ ಇರುವಾಗ ಸುಮ್ನೆ ನೋಡ್ತಾ ನಿಲ್ಲಬಾರದು.”
ಅಥವಾ “ಕತ್ತರಿಸಬಾರದು.”
ಅಕ್ಷ. “ಭಯಭಕ್ತಿಯಿಂದ.”
ಇದರಲ್ಲಿ ದ್ರವ ಪದಾರ್ಥಗಳನ್ನೂ ಅಳತೆ ಮಾಡೋದು ಸೇರಿದೆ.
ಪರಿಶಿಷ್ಟ ಬಿ14 ನೋಡಿ.
ಅಥವಾ “ಮೋಲೆಕನ ಸೇವೆಗೆ ಕೊಟ್ರೆ; ಬಲಿ ಕೊಟ್ರೆ.”
ಅಥವಾ “ವೇಶ್ಯೆ ತರ ನಡ್ಕೊಂಡ್ರೆ.”
ಅಥವಾ “ಕೇಡಾಗಲಿ ಅಂತ ಬೈಯೋರನ್ನ.”
ಅಕ್ಷ. “ಕೂಡಿದ್ರೆ.”
ಅಥವಾ “ಅಶ್ಲೀಲ ಕೃತ್ಯ.”
ಅಥವಾ “ಅದೃಷ್ಟ.”
ಪದವಿವರಣೆಯಲ್ಲಿ “ಪ್ರಾಣ” ನೋಡಿ.
ಬಹುಶಃ, “ಬಡಕಲಾಗಿದ್ರೆ.”
ಅಥವಾ “ವೃಷಣಕ್ಕೆ.”
ಅಕ್ಷ. “ಪವಿತ್ರ ಅಧಿವೇಶನಗಳು.”
ಅಕ್ಷ. “ಎರಡು ಸಂಜೆಗಳ ಮಧ್ಯ.” ಇದು, ಸೂರ್ಯ ಮುಳುಗಿದ ಮೇಲೆ ಪೂರ್ತಿ ಕತ್ತಲಾಗೋ ಮುಂಚೆ ಇರಬೇಕು.
ಇದರ ಅರ್ಥ “ದಾಟಿ ಹೋಗು.” ಪದವಿವರಣೆ ನೋಡಿ.
ಅಂದ್ರೆ, 4.4 ಲೀ. ಪರಿಶಿಷ್ಟ ಬಿ14 ನೋಡಿ.
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಒಂದು ಹಿನ್ ಅಂದ್ರೆ 3.67 ಲೀ. ಪರಿಶಿಷ್ಟ ಬಿ14 ನೋಡಿ.
ಅಂದ್ರೆ, 4.4 ಲೀ. ಪರಿಶಿಷ್ಟ ಬಿ14 ನೋಡಿ.
ಅಥವಾ “ಸಮಾಧಾನ ಆಗುತ್ತೆ.” ಅಕ್ಷ. “ನೆಮ್ಮದಿ ಕೊಡುತ್ತೆ.”
ಅಥವಾ “ಕಷ್ಟದಲ್ಲಿ ಇರೋರಿಗೆ.”
ಇದು ಸಾಮಾನ್ಯವಾಗಿ, ಉಪವಾಸ ಇರೋದನ್ನ ಮತ್ತು ಸ್ವಲ್ಪ ವಿಷಯಗಳನ್ನ ತ್ಯಾಗ ಮಾಡೋದನ್ನ ಸೂಚಿಸುತ್ತೆ.
ಬಹುಶಃ, “ಉಪವಾಸ ಮಾಡದಿದ್ರೆ.”
ಅಥವಾ “ತಾತ್ಕಾಲಿಕ ವಸತಿ.”
ಅಥವಾ “ಪರ್ಣಶಾಲೆಗಳ ಹಬ್ಬ.” ಪದವಿವರಣೆ ನೋಡಿ.
ಅಥವಾ “ಪಾಪ್ಲರ್.”
ಅಂದ್ರೆ, 4.4 ಲೀ. ಪರಿಶಿಷ್ಟ ಬಿ14 ನೋಡಿ.
ಬಹುಶಃ ಪವಿತ್ರ ಡೇರೆ ಅಂಗಳದಲ್ಲಿ.
ವಚನ 15, 16 ಸೂಚಿಸುವಂತೆ ಅವನು ಯೆಹೋವನ ಹೆಸರನ್ನ ದೂಷಿಸಿದನು.
ಅಥವಾ “ಕೇಡಾಗಲಿ ಅಂತ ಬೈಯೋಕೆ.”
ಕೊಯ್ಲು ಮಾಡಬಾರದಿತ್ತು. ಆದ್ರೆ ಯಾರ ಹತ್ರ ಆಹಾರ ಇಲ್ವೊ ಅವರು ಹೋಗಿ ತಮಗೆ ಬೇಕಾಗಿರೋದನ್ನ ತಗೊಬಹುದಿತ್ತು.
ಅಥವಾ “ಜೂಬಿಲಿ ವರ್ಷ.” ಪದವಿವರಣೆ ನೋಡಿ.
ಕೊಯ್ಲು ಮಾಡಬಾರದಿತ್ತು. ಆದ್ರೆ ಯಾರ ಹತ್ರ ಆಹಾರ ಇಲ್ವೊ ಅವರು ಹೋಗಿ ತಮಗೆ ಬೇಕಾಗಿರೋದನ್ನ ತಗೊಬಹುದಿತ್ತು.
ಅಥವಾ “ದುಬಾರಿ ಬಡ್ಡಿ.”
ಅಥವಾ “ರಕ್ತ ಸಂಬಂಧಿಕರಿಗೆ.”
ಅಕ್ಷ. “ಭಯದಿಂದ.”
ಅರ್ಥ, ಮಳೆ ಬರದ ತರ.
ಅರ್ಥ, ಬರಡಾಗೋ ತರ.
ಅಕ್ಷ. “ಕೋಲು.” ಬಹುಶಃ ರೊಟ್ಟಿ ಇಡೋಕೆ ಬಳಸ್ತಿದ್ದ ಕೋಲನ್ನ ಸೂಚಿಸುತ್ತೆ.
ಅಕ್ಷ. “ಎತ್ತರ ಸ್ಥಳಗಳನ್ನ.”
ಇದಕ್ಕೆ ಹೀಬ್ರು ಭಾಷೆಯಲ್ಲಿ ಬಳಸಿರೋ ಪದ “ಸಗಣಿ” ಅನ್ನೋದಕ್ಕೆ ಬಳಸಿರೋ ಪದಕ್ಕೆ ಸಂಬಂಧಿಸಿದೆ. ತುಂಬ ಅಸಹ್ಯ ಅಂತ ತೋರಿಸೋಕೆ ಈ ಪದ ಬಳಸಲಾಗಿದೆ.
ಅಕ್ಷ. “ಸುನ್ನತಿಯಾಗದ ಹೃದಯ.”
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಥವಾ “ಪವಿತ್ರ ಶೆಕೆಲಿನ ಪ್ರಕಾರ.”
ಒಂದು ಹೋಮೆರ್ ಜವೆಗೋದಿ ಅಂದ್ರೆ ಸುಮಾರು 130 ಕೆಜಿ ಇದ್ದಿರಬಹುದು. ಪರಿಶಿಷ್ಟ ಬಿ14 ನೋಡಿ.
ಅಥವಾ “ಬಾರ್ಲಿ.”
ಒಂದು ಗೇರಾದ ತೂಕ 0.57 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಥವಾ “ದಶಮಾಂಶ.”